ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ

ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐವರ ಹೆಸರನ್ನು ಶಿಫಾರಸು ಮಾಡಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನೆರವಾಗಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ ಮತ್ತು ತಳವಾರ್ ಸಾಬಣ್ಣ ಅವರ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ ಕಳುಹಿಸಿದ್ದ ಹೆಸರುಗಳ ಬದಲಿಗೆ ಅಭ್ಯರ್ಥಿಗಳನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಹಠಹಿಡಿದು ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಈಗ ಸಿ.ಪಿ. ಯೋಗೇಶ್ವರ್ ಮತ್ತು ಭಾರತಿ ಶೆಟ್ಟಿ ಹಾಗೂ ಹೆಚ್. ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ವಿಶ್ವನಾಥ್ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದರೂ ಪರಾಭವಗೊಂಡಿದ್ದಾರೆ. ಈಗಾಗಲೇ ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್, ಆರ್. ಶಂಕರ್ ಅವರಿಗೆ ಅವಕಾಶ ನೀಡಿದ್ದು, ಮತ್ತೆ ಕುರುಬ ಸಮುದಾಯಕ್ಕೆ ಅವಕಾಶ ನೀಡುವ ಬಗ್ಗೆ ವರಿಷ್ಠರು ಆಕ್ಷೇಪವೆತ್ತಿದ್ದು, ಇದಕ್ಕೆ ಒಪ್ಪದ ಸಿಎಂ ಮಾತು ಕೊಟ್ಟಂತೆ ವಿಶ್ವನಾಥ್ ಅವರಿಗೆ ಅವಕಾಶ ಕೊಡಿಸಿದ್ದಾರೆ.

ಅದೇ ರೀತಿ ಭಾರತಿ ಶೆಟ್ಟಿ ಅವರಿಗೆ ಈ ಹಿಂದೆಯೇ ಅವಕಾಶ ನೀಡಲಾಗಿದೆ. ಅವರ ಬದಲಿಗೆ ಬೇರೆ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ವರಿಷ್ಠರು ಸೂಚಿಸಿದ್ದರೆನ್ನಲಾಗಿದೆ. ಆದರೆ, ಯಡಿಯೂರಪ್ಪ ಪಟ್ಟುಹಿಡಿದು ಸಿ.ಪಿ. ಯೋಗೇಶ್ವರ್, ಭಾರತಿ ಶೆಟ್ಟಿ ಮತ್ತು ಹೆಚ್. ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸ್ಥಾನ ಕೊಡಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ವರಿಷ್ಠರು ಆಯ್ಕೆ ಬಗ್ಗೆ ಆಕ್ಷೇಪಿಸಿದ್ದರೂ ಪಟ್ಟು ಹಿಡಿದು ಸರ್ಕಾರ ರಚಿಸುವಲ್ಲಿ ನೆರವಾದವರಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ

Leave a comment

Design a site like this with WordPress.com
Get started