
“ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ” ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಈ ಕುರಿತು ವೀಡಿಯೊವೊಂದರಲ್ಲಿ ಮಾಹಿತಿ ನೀಡಿದ ಅವರು “ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ” ಎಂದರು.
ಇನ್ನು “ಈ ಸಮಯದಲ್ಲಿ ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು ಯಾವುದೇ ವಿಶೇಷ ಕೊಡುಗೆಗಳನ್ನು ಸಾರ್ವಜನಿಕರಿಗೆ ನೀಡಲು ಅನುಮತಿಸಲಾಗುವುದಿಲ್ಲ. ಇತರ ದಿನಗಳಲ್ಲಿ ಹೇಗೆ ಸೇವೆ ಸಲ್ಲಿಸುತ್ತಾರೋ ಹಾಗೆ ಮಾತ್ರ ಅವರಿಗೆ ಸೇವೆ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷವನ್ನು ಆಚರಿಸುವುದನ್ನು ಕೂಡ ಈ ಸಮಯದಲ್ಲಿ ನಿಷೇಢಿಸಲಾಗಿದೆ. ಹೊಸ ವರ್ಷದ ಆಚರಣೆಯನ್ನು ಸಾರ್ವಜನಿಕರು ತಮ್ಮ ಮನೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಯಾರಾದರೂ ಪಟಾಕಿಗಳನ್ನು ಬಳಸಲು ಬಯಸಿದರೆ ಅವರು ಹಸಿರು ಪಟಾಕಿಗಳನ್ನು ಮಾತ್ರ ಬಳಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಆಚರಣೆಯ ಸಮಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವು ಬಹಳ ಮುಖ್ಯವಾಗಿದೆ” ಎಂದು ಹೇಳಿದ್ದಾರೆ.