
ಬೆಂಗಳೂರು : ಯುಕೆ ಕೋವಿಡ್ ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ, ಇಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಕ್ಕೆ ಬರಲಾಗಿದ್ದು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವಂತ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ, ರಾಜ್ಯದಲ್ಲಿ ಕೋವಿಡ್ ರೂಪಾಂತರದ ಎಫೆಕ್ಟ್ ಇಲ್ಲ. ಯಾರೂ ಹೆದರುವುದು ಬೇಡ. ಮುಂಜಾಗ್ರತಾ ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸುವ ಅಗತ್ಯವಿಲ್ಲವೆಂಬುದಾಗಿಯೂ ಸ್ಪಷ್ಟ ಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆಯಿತು.
ಇಂದಿನ ಸಭೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸೋದು ಸೇರಿದಂತೆ, ಕೋವಿಡ್ ಹೊಸ ರೂಪಾಂತರದ ವೈರಸ್ ಬಗ್ಗೆ ಕೈಗೊಳ್ಳಬಹುದಾದಂತ ತುರ್ತು ಕ್ರಮಗಳ ಕುರಿತೂ ಚರ್ಚೆ ನಡೆಸಲಾಯಿತು. ಸಭೆ ಅಂತ್ಯಗೊಂಡ ನಂತ್ರ ಸಮಿತಿಯ ಶಿಫಾರಸ್ಸುಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳಿರುವಂತ ಆರೋಗ್ಯ, ವೈದ್ಯಕೀಯ ಸಚಿವರು, ನೈಟ್ ಕರ್ಪ್ಯೂ ಕೂಡ ಜಾರಿಯ ಶಿಫಾರಸ್ಸು ಮಾಡಲಿದ್ದಾರೆ ಎನ್ನಲಾಗಿದೆ. ಇಂತಹ ತಾಂತ್ರಿಕ ಸಮಿತಿಯ ಸಲಹೆಯನ್ನು ಸಿಎಂ ಒಪ್ಪುತ್ತಾರಾ..? ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎನ್ನುವ ಬಗ್ಗೆ ಕಾದುನೋಡಬೇಕಿದೆ.