ಉಡುಪಿ: ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ನಿನ್ನೆ ಸಂಜೆ 7ರ ಸುಮಾರಿಗೆ ಆಗಸದಲ್ಲಿ ಬೆಳಕಿನ ಸರಮಾಲೆ ಗೋಚರಿಸಿದೆ. ಫಳಫಳ ಹೊಳೆಯುವ ಈ ಬೆಳ್ಳಿಚುಕ್ಕಿಗಳು ಸರದಿ ಸಾಲಿನಲ್ಲಿ ಸಾಗುತ್ತಿದ್ದುದನ್ನು ಜನರು ಕೌತುಕದಿಂದ ವೀಕ್ಷಿಸಿದರು.
ಏನಿದು ಬೆಳಕಿನ ಸರಮಾಲೆ.?
ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ‘ಸ್ಪೇಸ್ ಎಕ್ಸ್’ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ‘ಸ್ಟಾರ್ ಲಿಂಕ್’ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ.
2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಜಿಲ್ಲೆಯ ಆಗಸದಲ್ಲಿ ಸೋಮವಾರ ಗೋಚರಗೊಂಡಿದೆ.
ಫಳಫಳ ಹೊಳೆಯುತ್ತಾ ನಿಶ್ಶಬ್ದವಾಗಿ ಸಾಗಿದ ಉಪಗ್ರಹಗಳ ದೃಶ್ಯವನ್ನು ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದ ಜನ ಅಚ್ಚರಿ ವ್ಯಕ್ತಪಡಿಸಿದರು. ಉಪಗ್ರಹಗಳ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂದು (ಡಿ.21) ಸಂಜೆ 7.15 ರ ಸುಮಾರಿಗೆ ಆಗಸದಲ್ಲಿ ಸರಣಿ ಉಪಗ್ರಹಗಳ ಮಾಲೆ ಗೋಚರವಾಗಲಿದೆ ಎಂದು ತಿಳಿದುಬಂದಿದೆ.
ಕೋಟ ಚಾರಿತ್ರಿಕ ಗೆಲುವಿಗೆ ಜಿಲ್ಲಾ ಬಿಜೆಪಿ ಅಭಿನಂದನೆ

ಉಡುಪಿ: ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆ ಇದೀಗ ಕುಬೇರರ ಮನೆಯಾಗಿದೆ ಎಂಬ ಅಪವಾದದ ನಡುವೆ ಮತದಾರರಿಗೆ ಯಾವುದೇ ಆಮಿಷಗಳನ್ನು ಒಡ್ಡದೇ ನಯಾ ಪೈಸೆ ಖರ್ಚು ಇಲ್ಲದೇ ಬಿಜೆಪಿ ಬೆಂಬಲಿತ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಎಲ್ಲಾ ಮತಗಳ ಸಹಿತ ಹೆಚ್ಚುವರಿ ಮತವನ್ನು ಪಡೆದು ಸತತ ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಚಾರಿತ್ರಿಕ ಗೆಲುವಿಗೆ ಜಿಲ್ಲಾ ಬಿಜೆಪಿ ಹಾರ್ದಿಕ ಅಭಿನಂದನೆ ಸಲ್ಲಿಸಿದೆ.
ರಾಜ್ಯ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರು, ಸಭಾಪತಿಗಳು ಹಾಗೂ ಮೇಲ್ಮನೆ ಸದಸ್ಯರು ಕೋಟ ಶ್ರೀನಿವಾಸ ಪೂಜಾರಿಯವರ ಪ್ರಾಮಾಣಿಕ ಗೆಲುವು ಅನುಕರಣೀಯ ಹಾಗೂ ರಾಜ್ಯಕ್ಕೇ ಮಾದರಿ ಎಂದು ಬಣ್ಣಿಸಿ ಅಭಿನಂದನೆ ಸಲ್ಲಿಸಿರುವುದು ಪ್ರಶಂಸನೀಯ. ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯ ಪ್ರತೀಕದಂತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಈ ಐತಿಹಾಸಿಕ ಗೆಲುವು ಉಡುಪಿ ಜಿಲ್ಲೆಗೆ ಹಿರಿಮೆ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಜನತೆಯ ಆಶೋತ್ತರಗಳನ್ನು ಈಡೇರಿಸುವ ಜೊತೆಗೆ ಮೇಲ್ಮನೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕೆಲಸ ಕಾರ್ಯಗಳನ್ನು ಕೋಟರವರು ಮುಂದುವರಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ರಾಜ್ಯ ವಿಧಾನ ಪರಿಷತ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಬಹುಮತದತ್ತ ಸಾಗಿರುವ ಬೆಳವಣಿಗೆಯು ಕೆಳಮನೆಯಲ್ಲಿ ಮಂಜೂರಾಗಿ ಬರುವ ಎಲ್ಲಾ ಕಾಯ್ದೆಗಳನ್ನು ಮೇಲ್ಮನೆಯಲ್ಲಿ ಸಮರ್ಪಕವಾಗಿ ಅಂಗೀಕರಿಸಲು ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ವಿಧಾನ ಪರಿಷತ್ ಚುನಾವಣೆಯನ್ನು ಸಂಘಟಿತ ಪ್ರಯತ್ನದ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಎದುರಿಸಲು ಕೈ ಜೋಡಿಸಿರುವ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಹಾಗೂ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು ಮತ್ತು ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಡಿ.15 ಉಡುಪಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಪಸ್ಥಿತಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ

ಉಡುಪಿ: ಪಕ್ಷದ ಸಂಘಟನಾತ್ಮಕ ದೃಷ್ಠಿಯಿಂದ ಬಿಜೆಪಿ ಜಿಲ್ಲಾ ಮಟ್ಟದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವು ಡಿ.15 ಬುಧವಾರ ಬೆಳಿಗ್ಗೆ ಗಂಟೆ 10.00ರಿಂದ ಉಡುಪಿ ಪುರ ಭವನದಲ್ಲಿ ನಡೆಯಲಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರವರ ಉಪಸ್ಥಿತಿಯಲ್ಲಿ ಜಿಲ್ಲೆಯ ಶಾಸಕರು ಮತ್ತು ಪಕ್ಷದ ವಿವಿಧ ಸ್ತರದ ಮುಖಂಡರ ಸಮಾಗಮದೊಂದಿಗೆ ನಡೆಯಲಿರುವ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರು, ಮಂಡಲಗಳ ಪದಾಧಿಕಾರಿಗಳು, ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.00 ರಿಂದ 10.30 ಉಪಹಾರ ಮತ್ತು ನೋಂದಣಿ; 10.30ಕ್ಕೆ ಸಮಾವೇಶದ ಉದ್ಘಾಟನೆ; 11.00ಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಜೀ ಯವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಶೀ ನಗರಿಯ ಪುನರುತ್ಥಾನ ಸನಾತನ ಹಿಂದೂ ಪರಂಪರೆಯ ಪುನಶ್ಚೇತನಕ್ಕೆ ನಾಂದಿ: ಶಿವಾನಂದ ಸರಸ್ವತಿ ಸ್ವಾಮೀಜಿ

ಉಡುಪಿ: ಭರತ ಖಂಡವು ಪುಣ್ಯ ಕ್ಷೇತ್ರಗಳ ನೆಲೆವೀಡು. ಪ್ರಾಚೀನ ದೇವಳಗಳ ಅಭಿವೃದ್ಧಿಯಿಂದ ದೇಶದ ಭವ್ಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಗತ ವೈಭವ ಮರುಕಳಿಸಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ದಿಟ್ಟತನದ ನಿರ್ಧಾರದಿಂದ ಲೋಕಾರ್ಪಣೆಗೊಂಡಿರುವ ಪ್ರಾಚೀನ ಕಾಶೀ ನಗರದ ಪುನರುತ್ಥಾನ ಸನಾತನ ಹಿಂದೂ ಪರಂಪರೆಯ ಪುನಶ್ಚೇತನಕ್ಕೆ ನಾಂದಿ ಹಾಡಿದೆ ಎಂದು ಕೈವಲ್ಯ ಮಠಾದೀಶರಾದ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಅವರು ಡಿ.13ರಂದು ಭವ್ಯ ಕಾಶೀ ದಿವ್ಯ ಕಾಶೀ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಕಾಪು ಮಂಡಲ ವತಿಯಿಂದ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯರ ದಿವ್ಯ ಸನ್ನಿದಿಯ ಆತ್ರಾಡಿ ಶಾಖಾ ಮಠದಲ್ಲಿ ನಡೆದ ಕಾಶೀ ಕಾರಿಡಾರ್ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆಯನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಯ ಜೊತೆಗೆ ದೇಶದ ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಣ ತೊಟ್ಟು ಶ್ರಮಿಸುತ್ತಿದ್ದಾರೆ. ಈ ಪುಣ್ಯ ಕಾಯಕದಲ್ಲಿ ಸಮಸ್ತ ದೇಶವಾಸಿಗಳು ಅವರೊಂದಿಗೆ ಕೈಜೋಡಿಸಬೇಕಾಗಿದೆ. ಅಯೋಧ್ಯೆ ಮತ್ತು ಕಾಶಿ ಮಾದರಿಯಲ್ಲಿ ಮಥುರಾ ಸಹಿತ ಇನ್ನೂ ಹಲವಾರು ಪುಣ್ಯ ಕ್ಷೇತ್ರಗಳ ಪುನರುಜ್ಜೀವನ ನಡೆಯಬೇಕಿದೆ. ಇದು ವಿಶ್ವವಂದ್ಯರೆನಿಸಿರುವ ಮೋದಿಜೀಯವರಿಂದ ಮಾತ್ರ ಸಾಧ್ಯ. ಅವರ ನೇತೃತ್ವದಲ್ಲಿ ಇಂತಹ ಸತ್ಕಾರ್ಯಗಳು ಶೀಘ್ರವಾಗಿ ನೆರವೇರಲಿ ಎಂದು ಹಾರೈಸುತ್ತಾ ಅವರಿಗೆ ಭಗವಂತನು ದೀರ್ಘಾಯುಷ್ಯ, ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಬಂಟಕಲ್ಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜಯರಾಮ್ ಪ್ರಭು, ನರಸಿಂಗೆ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕರ್, ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯದರ್ಶಿ ನಿತ್ಯಾನಂದ ನಾಯಕ್ ನರಸಿಂಗೆ, ಬಿಜೆಪಿ ಕಾಪು ಮಂಡಲ ಉಪಾಧ್ಯಕ್ಷ ಸುಭಾಸ್ ನಾಯ್ಕ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುರೇಶ್ ಸೆರ್ವೆಗಾರ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಭವ್ಯ ಕಾಶಿ ದಿವ್ಯ ಕಾಶಿ ಭಾರತೀಯ ಸಂಸ್ಕ್ರತಿಯ ಗತವೈಭವದ ಪುನರಾವರ್ತನೆಯ ಮಹತ್ವದ ಮೈಲಿಗಲ್ಲು: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಉಡುಪಿಯಲ್ಲಿ ಕಾಶಿ ವಿಶ್ವನಾಥ ಧಾಮದ ಪುನರುತ್ಥಾನ ಲೋಕಾರ್ಪಣೆಯ ನೇರ ಪ್ರಸಾರ ವೀಕ್ಷಣೆಯ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯ ಸಂಸದರಾಗಿ ಹಾಗೂ ಪ್ರಧಾನಿಯಾಗಿ ಕಂಡ ಕನಸು ಮತ್ತು ಜನತೆಗೆ ನೀಡಿದ ವಾಗ್ದಾನದಂತೆ ಇಂದು ಅವರ ಕಲ್ಪನೆಯ ಭವ್ಯ ವಾರಣಾಸಿ ರೂಪಾಂತರಗೊಳ್ಳುತ್ತಿದೆ. ಕಾಶಿ ವಿಶ್ವನಾಥಧಾಮ ಲೋಕಾರ್ಪಣೆ ಭಾರತೀಯ ಐತಿಹಾಸಿಕ ಮತ್ತು ಸಾಂಸ್ಕ್ರತಿಕ ಪರಂಪರೆಯ ಗತ ವೈಭವವನ್ನು ಮತ್ತೆ ಸಾದರಪಡಿಸುವಲ್ಲಿ ಹೊಸ ಮೈಲಿಗಲ್ಲಾಗಲಿದೆ. ನವ ಭಾರತ ನಿರ್ಮಾಣದ ಪರಿಕಲ್ಪನೆಯ ಪ್ರಮುಖ ಘಟ್ಟ ಇದಾಗಿದ್ದು ಪ್ರತಿಯೊಬ್ಬ ಭಾರತೀಯನ ಮನಸಲ್ಲಿ ಭಾರತೀಯತೆಯ ನೈಜ ರೂಪದ ಅನಾವರಣದ ಬಗ್ಗೆ ಹೊಸ ಆತ್ಮವಿಶ್ವಾಸ ಮತ್ತು ಆಶಾದಾಯಕ ಭಾವನೆ ಮೂಡಿಸುವಲ್ಲಿ ಈ ಸಂದರ್ಭ ಸಾಕ್ಷಿಭೂತವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅಭಿಮತ ವ್ಯಕ್ತ ಪಡಿಸಿದರು.
ಅವರು ಡಿ.13ರಂದು ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಉಡುಪಿ ರಥಬೀದಿ ಪೇಜಾವರ ಮಠದ ಪ್ರಾಂಗಣದಲ್ಲಿ ನಡೆದ, ನವೀಕೃತ ಕಾಶಿ ವಿಶ್ವನಾಥಧಾಮ ‘ಭವ್ಯ ಕಾಶಿ ದಿವ್ಯ ಕಾಶಿ’ ಇದರ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯನಿಗೂ ಕಾಶಿ ಒಂದು ಪವಿತ್ರ ಸ್ಥಳವಾಗಿದ್ದು ಮುಂದೆ ಆ ಕ್ಷೇತ್ರ ಸಂದರ್ಶನ ಮಾಡಿದಾಗ ಹೊಸ ಅನುಭವ ಮತ್ತು ಕೃತಾರ್ಥತೆ ಮೂಡಲಿದೆ ಎಂದು ಅವರು ಹೇಳಿದರು.
ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯರಾದ ಮಾನಸ ಸಿ. ಪೈ, ರಜನಿ ಹೆಬ್ಬಾರ್, ಸುಂದರ್ ಕಲ್ಮಾಡಿ, ಜಯಂತಿ ಪೂಜಾರಿ, ರಶ್ಮಿ ಆರ್. ಭಟ್, ಅಶೋಕ್ ನಾಯ್ಕ್, ಗಿರಿಧರ್ ಆಚಾರ್ಯ, ಹರೀಶ್ ಶೆಟ್ಟಿ, ಚಂದ್ರಶೇಖರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಪೆರಂಪಳ್ಳಿ ವಾಸುದೇವ ಭಟ್, ಉಡುಪಿ ನಗರ ಬಿಜೆಪಿ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
ಭವ್ಯ ಕಾಶಿ ದಿವ್ಯ ಕಾಶಿ ಕಾರ್ಯಕ್ರಮದ ಉಡುಪಿ ನಗರ ಸಂಚಾಲಕ ಬಾಲಕೃಷ್ಣ ಶೆಟ್ಟಿ ಸಂಯೋಜಿಸಿದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್ ಸ್ವಾಗತಿಸಿ, ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಡಿ.13ರಂದು ಬಿಜೆಪಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ “ಭವ್ಯ ಕಾಶೀ ದಿವ್ಯ ಕಾಶೀ” ಅಭಿಯಾನ

ಉಡುಪಿ :ಕಾಶಿ ಅತ್ಯಂತ ಪ್ರಾಚೀನ ಮತ್ತು ಪೌರಾಣಿಕ ನಗರವಾಗಿದ್ದು, ಗಂಗಾ ಮಾತೆಯ ದಡದಲ್ಲಿದೆ. ಇದು ಭಗವಾನ್ ಶಿವನ ಶಿರದಿಂದ ಹುಟ್ಟಿಕೊಂಡಿದೆ ಎಂಬ ಪ್ರತೀತಿ ಇದೆ. ಕಾಶಿಯನ್ನು ಪವಿತ್ರ ಸಪ್ತ ಪುರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಮಹಾನ್ ನಗರದ ಬಗ್ಗೆ ಖುಗ್ವೇದ, ಸ್ಕಂದ ಪುರಾಣ, ರಾಮಾಯಣ ಮತ್ತು ಮಹಾ ಭಾರತ ಹಾಗೂ ಮತ್ಸ್ಯ ಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಉಲ್ಲೇಖ ಕಂಡುಬರುತ್ತದೆ.
ವಿಶ್ವದ ಅತ್ಯಂತ ಜನಪ್ರಿಯ ಜನನಾಯಕರೆನಿಸಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕನಸು ಕಂಡವರು. ಈ ನಿಟ್ಟಿನಲ್ಲಿ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣದ ಅದ್ಭುತ ಕೆಲಸಗಳು ನಡೆದಿದ್ದು, ಈ ನವೀಕೃತ ಧಾರ್ಮಿಕ ನಗರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 13ರಂದು ಉದ್ಘಾಟಿಸಲಿದ್ದಾರೆ.
ದೇಶದಾದ್ಯಂತ ಸುಮಾರು 51,000 ಸ್ಥಳಗಳಲ್ಲಿ ಬ್ರಹತ್ ಪ್ರಮಾಣದ ಎಲ್ ಇ ಡಿ ಪರದೆಗಳನ್ನು ಸ್ಥಾಪಿಸಲಾಗಿದ್ದು ಅದರಲ್ಲಿ ಭವ್ಯ ಕಾಶೀ ದಿವ್ಯ ಕಾಶೀ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ನಡೆಯಲಿದೆ. ರಾಜ್ಯ ಬಿಜೆಪಿ ಸೂಚನೆಯಂತೆ ಡಿ.13ರಂದು ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಮಂಡಲಗಳು ಮತ್ತು ಮಹಾ ಶಕ್ತಿಕೇಂದ್ರಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಭವ್ಯ ಕಾಶೀ ದಿವ್ಯ ಕಾಶೀ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಭವ್ಯ ಕಾಶೀ ದಿವ್ಯ ಕಾಶೀ ಅಭಿಯಾನದ ಜಿಲ್ಲಾ ಸಂಚಾಲಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಅವರು ಭವ್ಯ ಕಾಶೀ ದಿವ್ಯ ಕಾಶೀ ಅಭಿಯಾನದ ಪೂರ್ವಭಾವಿಯಾಗಿ ಡಿ.11ರಂದು ಉಡುಪಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರವರ ಸೂಚನೆಯಂತೆ ದೇಶದಾದ್ಯಂತ ಡಿ.13 ರಿಂದ ಜ.14ರ ವರೆಗೆ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಭವ್ಯ ಕಾಶೀ ದಿವ್ಯ ಕಾಶೀ ಅಭಿಯಾನದ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮೀಸಲಾಗಿದೆ.
ಡಿ.13ರಂದು ಜಿಲ್ಲೆಯ ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾಪು, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಮಂಡಲಗಳ ಮತ್ತು ಮಹಾ ಶಕ್ತಿ ಕೇಂದ್ರಗಳ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30ರ ವರೆಗೆ ಭವ್ಯ ಕಾಶೀ ದಿವ್ಯ ಕಾಶೀ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭವ್ಯ ಕಾಶೀ ದಿವ್ಯ ಕಾಶೀ ಅಭಿಯಾನದ ಜಿಲ್ಲಾ ಸಹ ಸಂಚಾಲಕ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.
ಆದಿಉಡುಪಿ – ಮಲ್ಪೆ ರಸ್ತೆ ಚತುಷ್ಪಥ ಅಭಿವೃದ್ಧಿ ಯೋಜನೆಗೆ ಟೆಂಡರ್ ನೋಟಿಫಿಕೇಶನ್: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಅಭಿನಂದನೆ

ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ 169ಎ ಇದನ್ನು ಆದಿಉಡುಪಿಯಿಂದ ಮಲ್ಪೆಯ ವರೆಗೆ ಮತ್ತು ಪರ್ಕಳದಿಂದ ಹೆಬ್ರಿಯ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಟೆಂಡರ್ ನೋಟಿಫಿಕೇಶನ್ ಆಗಿದ್ದು, ಜನವರಿ 25ಕ್ಕೆ ಟೆಂಡರ್ ಬಿಡ್ ತೆರೆದು ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ವಲಯದ ಅಭಿವೃದ್ಧಿಯ ದೃಷ್ಟಿಯಿಂದ ಮಲ್ಪೆಯಿಂದ ಹೆಬ್ರಿಯ ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುವುದು ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಸದ್ರಿ ಯೋಜನೆಗೆ ಅನುಮೋದನೆ ದೊರಕುವ ವರೆಗೆ ನಿರಂತರವಾಗಿ ಪ್ರಯತ್ನಿಸಿ, ಶ್ರಮ ವಹಿಸಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಹಾಗೂ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ರೂ.350.00 ಕೋಟಿ ಮೊತ್ತದ ಈ ಯೋಜನೆಯಲ್ಲಿ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ 169ಎ ಹಾದು ಹೋಗುವ ಆದಿಉಡುಪಿಯಿಂದ ಮಲ್ಪೆಯ ವರೆಗೆ ಹಾಗೂ ಪರ್ಕಳದಿಂದ ಹಿರಿಯಡ್ಕದ ವರೆಗೆ ಚತುಷ್ಪಥ ಮತ್ತು ಹಿರಿಯಡ್ಕದಿಂದ ಹೆಬ್ರಿಯ ವರೆಗೆ ದ್ವಿಪಥವಾಗಿ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರ ಮತದಾನ



ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಒಂದಾಗಿ ಸೇರಿ ಡಿ.10 ಶುಕ್ರವಾರ ಬೆಳಿಗ್ಗೆ 11.00 ಗಂಟೆಯೊಳಗೆ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಗ್ರಾಮ ಪಂಚಾಯತ್ ಸದಸ್ಯರಾದ ಶಕುಂತಳ ಶೆಟ್ಟಿ, ಭಾರತಿ ಭಾಸ್ಕರ್, ಪ್ರಮೋದ್ ಸಾಲ್ಯಾನ್, ಶಶಿಧರ್ ಸುವರ್ಣ, ಸುಂದರ ಪೂಜಾರಿ, ಸುಮಂಗಲ, ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುನಿಲ್ ಕಪ್ಪೆಟ್ಟು ಸುಜಾತ ಶೆಟ್ಟಿ, ಕುಸುಮ, ಸುಭಾಷಿನಿ, ಸಬಿತಾ ಮೆಂಡನ್, ಉಷಾ ಶೆಟ್ಟಿ, ಸುಜಾತ ಸುಧಾಕರ್, ಲಕ್ಷ್ಮಣ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ, ಅಂಬಲಪಾಡಿ ಕಡೆಕಾರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಉಡುಪಿ ನಗರ ಪಂಚಾಯತ್ ರಾಜ್ ಪ್ರಕೋಷ್ಠದ ಸಹ ಸಂಚಾಲಕ ಗಿರೀಶ್ ಅಮೀನ್ ಕಿದಿಯೂರು ಉಪಸ್ಥಿತರಿದ್ದರು.
ಬನ್ನಂಜೆ ಬಾಬು ಅಮೀನ್ ತುಳುನಾಡ ಗರೋಡಿಗಳ ನಿಘ೦ಟು: ಬೈಕಾಡಿ ಸುಪ್ರಸಾದ್ ಶೆಟ್ಟಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರದ್ದು ವಿಶಿಷ್ಟವಾದಂಥ ವ್ಯಕ್ತಿತ್ವ. ತುಳುನಾಡಿನ ಗರೋಡಿ, ದೈವಾರಾಧನೆ, ಜಾನಪದ ಸಂಸ್ಕ್ರತಿಯ ಬಗ್ಗೆ ಅಗಾಧವಾದ ಅಧ್ಯಯನ ಮಾಡಿರುವ ಇವರು ತುಳುನಾಡ ಗರೋಡಿಗಳ ಇತಿಹಾಸದ ನಿಘಂಟು ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಡಿ.9ರಂದು ಬ್ರಹ್ಮಾವರದ ಪರಿಸರದಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಯಕ್ಷಗಾನ ಧಾರ್ಮಿಕ ಕಾರ್ಯಕ್ರಮದಲ್ಲಿ ಬನ್ನಂಜೆ ಬಾಬು ಅಮೀನ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಬ್ರಹ್ಮಾವರದ ಉದ್ಯಮಿ ಸಂತೋಷ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ರಾಜಾರಾಂ ಶೆಟ್ಟಿ, ಡಾ. ಜಗದೀಶ್ ಶೆಟ್ಟಿ, ಬೆಂಗಳೂರಿನ ಉದ್ಯಮಿ ಸತೀಶ್ ಶೆಟ್ಟಿ , ಸ್ಥಳೀಯ ನಾಯಕರಾದ ಶಂಕರ್ ಪೂಜಾರಿ, ಉಮೇಶ್ ಪೂಜಾರಿ ಯಕ್ಷಗಾನ ಸೇವಾಕರ್ತರಾದ ದಿವಂಗತ ವಿಠಲ ಶೆಟ್ಟರ ಕುಟುಂಬಿಕರು ಉಪಸ್ಥಿತರಿದ್ದರು.
ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆ



ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ರಾಜ್ಯದಲ್ಲೇ ವೈಶಿಷ್ಟ್ಯಪೂರ್ಣ: ಕುಯಿಲಾಡಿ ಸುರೇಶ್ ನಾಯಕ್
ಜಿಲ್ಲೆಯ ಎಲ್ಲಾ ಮೋರ್ಚಾಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಿರಂತರ ವೈವಿಧ್ಯಮಯ ಕಾರ್ಯ ಚಟುವಟಿಕೆಗಳಿಂದ ಜಿಲ್ಲೆಯ ಮೋರ್ಚಾಗಳಲ್ಲೇ ಮೂಂಚೂಣಿಯಲ್ಲಿರುವ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಲ್ಪೆ ಕಡಲ ತೀರದ ತುದಿಯಲ್ಲಿರುವ ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಂಡಿರುವುದು ರಾಜ್ಯಕ್ಕೇ ಮಾದರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಉಡುಪಿ-ಮಲ್ಪೆ ಕಡಲ ತೀರದ ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ಡಿ.8ರಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಇಂದು ಸ್ಥಳೀಯಾಡಳಿತ ಸಹಿತ ಹೆಚ್ಚಿನ ಎಲ್ಲಾ ರಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ಇದೆ. ಮಹಿಳಾ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ವಿಶೇಷ ಯೋಜನೆಗಳಿವೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಅತ್ಯಂತ ಮಹತ್ವ ಹೊಂದಿದೆ. ಯಾವುದೇ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಹಿತ ಮಹಿಳಾ ಮೋರ್ಚಾ ಕೂಡಾ ಯಾವ ರೀತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷಕ್ಕೆ ತನ್ನದೇ ಆದ ಅಮೂಲ್ಯ ಕೊಡುಗೆ ನೀಡಬಹುದು ಎಂಬ ಬಗ್ಗೆ ಆಲೋಚಿಸಬೇಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಚಟುವಟಿಕೆಗಳ ಜೊತೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಸಹಕಾರದೊಂದಿಗೆ ಮಹಿಳೆಯರ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜನಸೇವೆಯ ಜೊತೆಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಯಶಸ್ಸು ಹೊಂದಲಿ. ಮೋರ್ಚಾಗಳ ಎಲ್ಲಾ ವಿಶೇಷ ಚಟುವಟಿಕೆಗಳಿಗೆ ಜಿಲ್ಲಾ ಬಿಜೆಪಿಯ ಸಂಪೂರ್ಣ ಸಹಕಾರವಿದೆ ಎಂದು ಕುಯಿಲಾಡಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ಸುನೀತಾ ಜಗದೀಶ್ ಚಿಕ್ಕಮಗಳೂರು, ಮೀನುಗಾರಿಕಾ ನಿಗಮ ಮಂಗಳೂರು ಇದರ ಸದಸ್ಯೆಯಾಗಿ ನೇಮಕಗೊಂಡಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಎಮ್. ಸುವರ್ಣ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈರುವ ಜಿಲ್ಲಾಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಷ್ಟ್ರೀಯ ಈಜು ಪಟು ವಿದ್ಯಾ ಪೈ ಕಾರ್ಕಳ, ಅಕ್ರಮ ಸಕ್ರಮ ಸಮಿತಿ ಹೆಬ್ರಿ ಸದಸ್ಯರಾಗಿ ನೇಮಕಗೊಂಡಿರುವ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್ ಮುನಿಯಾಲು, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯೆಯಾಗಿ ನೇಮಕಗೊಂಡಿರುವ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಅಶ್ವಿನಿ ಶೆಟ್ಟಿ ಪಂದುಬೆಟ್ಟು, ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯೆಯಾಗಿ ನೇಮಕಗೊಂಡಿರುವ ಉಡುಪಿ ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಜಾಲಾ ಸತೀಶ್ ಇಂದ್ರಾಳಿ ಇವರನ್ನು ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಪ್ರಭಾರಿ ಸುನೀತಾ ಜಗದೀಶ್ ಮಾತನಾಡಿ, ಬಿಜೆಪಿ ಎಂದರೆ ಪಾರ್ಟಿ ವಿದ್ ಎ ಡಿಫರೆನ್ಸ್ ಎಂಬ ಮಾತಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಿಗದಿತ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದಾಗ ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡುವ ಪಕ್ಷ ಬಿಜೆಪಿ. ಇಂದು ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತದಲ್ಲಿ ಹೆಣ್ಣು ಮಗುವಿನ ಜನನ ಹಾಗೂ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಉಪಯೋಗವಾಗುವ ಅನೇಕ ಯೋಜನೆಗಳಿವೆ. ಇದರ ಪರಿಣಾಮವಾಗಿ ಲಿಂಗ ಸಮಾನತೆಯಲ್ಲಿ ಮಹಿಳೆಯರ ಅನುಪಾತದ ಬೆಳವಣಿಗೆ ಸಾಧ್ಯವಾಗಿದೆ. ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿಯವರ ಕಾರ್ಯ ಶೈಲಿ ಹಾಗೂ ಜಿಲ್ಲಾ ತಂಡ ಪ್ರಶಂಸೆಗೆ ಪಾತ್ರವಾಗಿದೆ. ಪ್ರವಾಸೀತಾಣದಲ್ಲಿ ವಿನೂತನ ರೀತಿಯಲ್ಲಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಿರುವುದು ರಾಜ್ಯಕ್ಕೇ ಮಾದರಿಯಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಪಕ್ಷ ಸಂಘಟನೆ ಕಾರ್ಯದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಇನ್ನಷ್ಟು ಯಶಸ್ಸನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಕಾರ್ಯಕಾರಿಣಿ ಸಭೆಯು ಹಿಂದಿನ ಕಾರ್ಯ ಚಟುವಟಿಕೆಗಳ ಅವಲೋಕನ ಮತ್ತು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆಗೆ ಪೂರಕವಾಗಿರುತ್ತದೆ. ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಒಂದು ತಂಡವಾಗಿ ಮಾದರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಜಿಲ್ಲಾ ಬಿಜೆಪಿಯ ಕಾರ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಕೈಜೋಡಿಸುತ್ತಿರುವುದು ಅಭಿನಂದನೀಯ. ಪ್ರಾಯಶಃ ರಾಜ್ಯ ಬಿಜೆಪಿಯ ಇತಿಹಾಸದಲ್ಲೇ ಬೋಟ್ ಹೌಸ್ ನಲ್ಲಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸಿರುವುದು ಐತಿಹಾಸಿಕ. ಜಿಲ್ಲಾ ಮಹಿಳಾ ಮೋರ್ಚಾದ ಮುಂದಿನ ವಿಶೇಷ ಕಾರ್ಯ ಚಟುವಟಿಕೆಗಳಿಗೆ ಜಿಲ್ಲಾ ಬಿಜೆಪಿಯ ಮೂಲಕ ಸಂಪೂರ್ಣ ಸಹಕಾರ ನೀಡಲಾಗುವುದು. ಪಕ್ಷ ಸಂಘಟನೆಯ ಜೊತೆಗೆ ಪಕ್ಷದ ವಿವಿಧ ಚುನಾವಣೆಯ ಸಂದರ್ಭದಲ್ಲಿಯೂ ಜಿಲ್ಲಾ ಮಹಿಳಾ ಮೋರ್ಚಾ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಮತ್ತು ಜನಸಾಮಾನ್ಯರ ನಡುವೆ ಪರಿಣಾಮಕಾರಿ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಜನತೆಯ ಹಲವಾರು ವರ್ಷಗಳ ಬೇಡಿಕೆಯಾದ ಕೋಡಿ ಬೆಂಗ್ರೆ ಮತ್ತು ಹಂಗಾರಕಟ್ಟ ಸಂಪರ್ಕ ಸೇತುವೆ ನಿರ್ಮಾಣದ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ವಿನಂತಿಸಲಾಯಿತು.
ಮಹಿಳಾ ಮೋರ್ಚಾ ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾಪು, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಮಂಡಲಗಳ ಅಧ್ಯಕ್ಷರು ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜಿಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಮಹಿಳಾ ಮೋರ್ಚಾದ ವಿವಿಧ ಮಂಡಲಗಳ ಅಧ್ಯಕ್ಷರಾದ ಸರೋಜ ಶೆಟ್ಟಿಗಾರ್ ಉಡುಪಿ ನಗರ, ಸುಮಾ ಶೆಟ್ಟಿ ಕಾಪು, ರೂಪಾ ಪೈ ಕುಂದಾಪುರ, ವಸಂತಿ ಸತೀಶ್ ಪೂಜಾರಿ ಉಡುಪಿ ಗ್ರಾಮಾಂತರ, ಮಾಲಿನಿ ಶೆಟ್ಟಿ ಕಾರ್ಕಳ ಹಾಗೂ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಮೀಳಾ ಹರೀಶ್ ವಂದಿಸಿದರು.