ಅಲೆವೂರಿನಲ್ಲಿ ಗ್ರಾಮ ಒನ್ ಕೇಂದ್ರ ಕಚೇರಿ ಉದ್ಘಾಟನೆ, ಜಿಲ್ಲೆಗೆ ಮೊದಲ ಇ ಸ್ಟ್ಯಾಂಪ್ ಗ್ರಾಮ ಒನ್ ಅಲೆವೂರು

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಗ್ರಾಮ ಒನ್ ಕಚೇರಿ ಅಲೆವೂರಿನ ರಾಮಪುರದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರಿಂದ ಉದ್ಘಾಟನೆಗೊಂಡಿತು. ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಗ್ರಾಮ ಒನ್ ನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತ ಗ್ರಾಮೀಣ ಭಾಗದ ಜನರು ನಾಡಕಚೇರಿ ಹಾಗೂ ಬೇರೆ ಕಡೆ ತೆರಳಿದೆ ಗ್ರಾಮದಲ್ಲಿಯೆ ಎಲ್ಲ ಸರಕಾರಿ ಸವಲತ್ತು ನೀಡುವ ಯೋಚನೆಯಿಂದ ಈ ಯೋಜನೆ ಮಾಡಲಾಗಿದ್ದು ಮುಂದೆ ಎಲ್ಲ ಸೇವೆಗಳೂ ಇದರಲ್ಲಿಯೇ ಲಭ್ಯವಾಗಲಿದ್ದು ಜನ ಇದರ ಸದುಪಯೋಗ ಪಡೆಯಬೇಕೆಂದರು. ಕ್ಷೇತ್ರ ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಇ ಸ್ಟ್ಯಾಂಪ್ ಬಿಡುಗಡೆಗೊಳಿಸಿದರು. ಜಿಲ್ಲಾ ಗ್ರಾಮ ಒನ್ ಉಸ್ತುವಾರಿ ನವೀಶ್, ಉದ್ಯಮಿಗಳಾದ ಗಂಗಾಧರ್ ಸುವರ್ಣ, ಶಶಿಧರ್ ವಾಗ್ಳೆ, ಯಶ್ ಪಾಲ್ ಸುವರ್ಣ, ಕಾರ್ತಿಕ್ ಶೆಟ್ಟಿ, ಮೋಹನ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ನಯನ ಗಣೇಶ್, ಶಿಲ್ಪಾ ಜಿ ಸುವರ್ಣ,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬೇಬಿ ರಾಜೇಶ್ ಉಪಸ್ಥಿತರಿದ್ದರು. ಸ್ಥಳೀಯರಾದ ರಾಘವ ನಾಯ್ಕ್, ಅಪ್ಪು ಸೇರಿಗಾರ್, ನಾರಾಯಣ್ ಶೆಟ್ಟಿಗಾರ್ ಆಶೋಕ್ ಶೆಟ್ಟಿಗಾರ್, ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಆಚಾರ್ಯ, ಪುಷ್ಪಲತಾ ಮಾರ್ಪಳ್ಳಿ, ಶಶಿಕಲಾ ಕೆ ಶೆಟ್ಟಿ, ಗೀತಾ ಕೇಶವ ಶೆಟ್ಟಿಗಾರ್, ಮಮತಾ ಅಶೋಕ್ ಶೆಟ್ಟಿಗಾರ್, ಸುರೇಶ್ ನಾಯಕ್ ಕರ್ವಾಲು, ಪುರುಶೋತ್ತಮ ನಾಯಕ್, ರಾಘವೇಂದ್ರ ಆಚಾರ್ಯ, ರಮೇಶ್ ಕಾಮತ್, ರಾಜೇಶ್ ಸೇರಿಗಾರ್, ಪ್ರಭಾಕರ ಅಂಚನ್, ಹರೀಶ್ ಸೇರಿಗಾರ್, ಅಶೋಕ್ ಕುಮಾರ್ ಅಲೆವೂರು, ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ದಿನಕರ್ ಬಾಬು ಆಗಮಿಸಿ ಶುಭಹಾರೈಸಿದರು. ಮಾಲಕರಾದ ಶ್ರೀಕಾಂತ ನಾಯಕ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.

ಹಿಜಾಬ್ ವಿವಾದವನ್ನು ಸಮರ್ಥಿಸುವ ಸಿದ್ದು ವರ್ತನೆಯಿಂದ ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿ ಅನಾವರಣ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇವಲ ಹಿಜಾಬ್ ವಿವಾದ ಮತ್ತು ಮುಸ್ಲಿಂ ಧರ್ಮಕ್ಕೆ ಸಂಬಂಧಪಟ್ಟ ವಿಚಾರಗಳು ಮಾತ್ರ ಆಲೋಚನೆಗೆ ಬರುತ್ತವೆ. ಕಾಣದ ಕೈಗಳ ಕುಮ್ಮಕ್ಕಿನಿಂದ ಉಡುಪಿಯಲ್ಲಿ ಕೇವಲ ಆರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಂದ ಉದ್ದೇಶಪೂರ್ವಕವಾಗಿ ಪ್ರಾರಂಭಗೊಂಡ ಹಿಜಾಬ್ ವಿವಾದ ಇಂದು ಇತರ ಜಿಲ್ಲೆಗಳಿಗೂ ಹಬ್ಬಿದೆ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಪೂರ್ವಾಪರ ಆಲೋಚಿಸದೆ, ವಿಧ್ಯಾರ್ಥಿನಿಯರು ಮುಸ್ಲಿಂ ಧರ್ಮದವರು ಎಂಬ ಒಂದೇ ಕಾರಣಕ್ಕೆ ಹಠಾತ್ ಎಚ್ಚೆತ್ತುಕೊಂಡು ಹಿಜಾಬ್ ವಿವಾದವನ್ನು ಇನ್ನಷ್ಟು ಕೆದಕುವ ನಿಟ್ಟಿನಲ್ಲಿ ಬಾಲಿಶ ಹೇಳಿಕೆ ನೀಡಿರುವ ಸಿದ್ದು ವರ್ತನೆಯಿಂದ ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣ ನೀತಿ ಮಗದೊಮ್ಮೆ ಅನಾವರಣಗೊಂಡಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಬಾಯ್ತೆರೆದರೆ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದು ಕೇರಳ ಮತ್ತು ಮಹಾರಾಷ್ಟ್ರದ ಉಚ್ಛ ನ್ಯಾಯಾಲಯಗಳು ಹಿಜಾಬ್ ಪ್ರಕರಣದ ಬಗ್ಗೆ ಏನು ಹೇಳಿವೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯನವರಿಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಎಳ್ಳಷ್ಟೂ ತಿಳಿದಿಲ್ಲವೇ? ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರಿಗೆ ಶಾಲಾ ಕಾಲೇಜುಗಳಲ್ಲಿ ಸಮಾನತೆಗಾಗಿ ಸಮವಸ್ತ್ರ ಧರಿಸಬೇಕು ಮತ್ತು ಧಾರ್ಮಿಕ ಹಕ್ಕನ್ನು ಎಲ್ಲಿ ಕೇಳಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲವೇ? ತನ್ನ ಆಡಳಿತಾವಧಿಯಲ್ಲಿಯೂ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಪದ್ಧತಿ ರೂಡಿಯಲ್ಲಿ ಇದ್ದುದನ್ನು ಸಿದ್ದು ಮರೆತಂತಿದೆ.

ಪೊಲೀಸರು ಹಬ್ಬದ ಸಂದರ್ಭದಲ್ಲಿಯೂ ಸಮವಸ್ತ್ರವನ್ನೇ ಧರಿಸಬೇಕು ಎಂದು ಉಪದೇಶ ನೀಡಿದ ಸಿದ್ದು ಇದೀಗ ಹಿಜಾಬ್ ಪ್ರಕರಣದಲ್ಲಿ ಉಲ್ಟಾ ಹೊಡೆದಿರುವುದು ಹಾಸ್ಯಾಸ್ಪದ. ಮುಸ್ಲಿಂ ಧರ್ಮದ ದಿರಿಸನ್ನು ಅತೀ ಸಂಭ್ರಮದಿಂದ ಸ್ವೀಕರಿಸುವ ಸಿದ್ದು, ಅಭಿಮಾನಿಯೊಬ್ಬ ಕೇಸರಿ ಪೇಟಾ ತೊಡಿಸಿದಾಗ ಮೈ ಮೇಲೆ ಚೇಳು ಹರಿದಂತೆ ವರ್ತಿಸಿ, ಅದನ್ನು ತಕ್ಷಣ ಕಿತ್ತು ಎಸೆದಾದಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ಗೋಸುಂಬೆತನ ಬಣ್ಣ ಬದಲಾಯಿಸುವ ಮಾನಸಿಕತೆಯ ದರ್ಶನವಾಗಿದೆ.

ನನ್ನ ಹೆಸರಲ್ಲೂ ರಾಮನಿದ್ದಾನೆ ಎಂಬ ಬೂಟಾಟಿಕೆಯ ಮಾತನ್ನಾಡುವ ಸಿದ್ದು, ಮೀನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎಂಬ ಉಡಾಫೆಯ ಮಾತನ್ನಾಡಿ, ತಾನು ಕಾಯಾ ವಾಚಾ ಮನಸಾ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ಹಿಂದೂ ಕಾರ್ಯಕರ್ತರ ಕಗ್ಗೊಲೆ ವಿಚಾರದಲ್ಲಿ ಸುಮ್ಮನಿದ್ದ ಸಿದ್ದರಾಮಯ್ಯ ಹಿಂದೂ ವಿರೋಧಿ ನೀತಿಯಿಂದ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುವ ಮತ್ತು ಧಮನಿಸುವ ಕಾರ್ಯದಲ್ಲಿ ನಿರತವಾಗಿದ್ದನ್ನು ಇಡೀ ಕರ್ನಾಟಕ ಕಂಡಿದೆ. ಪಕ್ಷದ ನಾಯಕರ ಆಂತರಿಕ ಕಚ್ಚಾಟದ ಭಾಗವಾಗಿಯೂ ಪ್ರಚಲಿತ ವಿವಾದದ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ನಿಲುವಿಗೂ ಕ್ಯಾರೇ ಎನ್ನದ ಸಿದ್ದು ವರ್ತನೆ ನಗೆಪಾಟಲಿಗೀಡಾಗಿರುವುದು ವಾಸ್ತವ. ತನ್ನ ಹಿಂದೂ ವಿರೋಧಿ ತತ್ವದ ಭಾಗವಾಗಿ ಹಿಜಾಬ್ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕುಕೃತ್ಯದಲ್ಲಿ ಭಾಗಿಯಾಗಿರುವ ಸಿದ್ದು ಮಾನಸಿಕತೆಯನ್ನು ರಾಜ್ಯದ ಸಮಸ್ತ ಹಿಂದೂ ಸಮುದಾಯ ಎಂದಿಗೂ ಕ್ಷಮಿಸದು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಭಜನಾ ಸಪ್ತಾಹಕ್ಕೆ ಚಾಲನೆ; ಫೆ.7ರಂದು ಪ್ರತಿಷ್ಠಾ ವರ್ಧಂತ್ಯುತ್ಸವ, 62ನೇ ಭಜನಾ ಮಂಗಲೋತ್ಸವ

ಉಡುಪಿ: ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ (ರಿ.) ಅಂಬಲಪಾಡಿ ಇದರ ವಾರ್ಷಿಕ ಭಜನಾ ಸಪ್ತಾಹಕ್ಕೆ ಭಜನಾ ಮಂದಿರದ ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಭಜನಾ ಸಹ ಸಂಚಾಲಕರಾದ ಎ.ಮಾಧವ ಪೂಜಾರಿ, ಶಂಕರ ಪೂಜಾರಿ, ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಸಂಘದ ಆಡಳಿತ ಸಮಿತಿ ಸದಸ್ಯರಾದ ಶಿವದಾಸ್ ಪಿ., ರಮೇಶ್ ಕೋಟ್ಯಾನ್, ವಿನಯ್ ಕುಮಾರ್, ನಿತಿನ್ ಕುಮಾರ್, ಭಾಸ್ಕರ ಕೋಟ್ಯಾನ್, ವಿನೋದ್ ಪೂಜಾರಿ, ಪ್ರಮುಖರಾದ ಕುಶಲ್ ಕುಮಾರ್, ಸುಧಾಕರ ಪೂಜಾರಿ, ವಿಘ್ನೇಶ್, ಪ್ರಭಾ ದಯಾನಂದ್, ವಿಜಯಲಕ್ಷ್ಮಿ, ರಾಜು ಪೂಜಾರಿ, ಅರ್ಚಕರಾದ ಜೀವನ್, ಅದಿತ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಫೆ.7ರಂದು ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಬೆಳಿಗ್ಗೆ ಗಂಟೆ 8.00ರಿಂದ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.00ಕ್ಕೆ 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ, ಮಹಾ ಪೂಜೆ ಮತ್ತು ಅನ್ನ ಸಂತರ್ಪಣೆ ಜರಗಲಿದೆ. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ನಗರ ಭಜನೆ, ಕುಣಿತ ಭಜನೆಯೊಂದಿಗೆ ರಾತ್ರಿ ಗಂಟೆ 12.00ಕ್ಕೆ ಮಹಾ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಸರಕಾರ ಸಮಾನ ವಸ್ತ್ರ ಸಂಹಿತೆ ನೀತಿ ರೂಪಿಸಿ ಹಿಜಾಬ್ ವಿವಾದಕ್ಕೆ ಇತಿಶ್ರೀ ಹಾಡಲಿ; ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಪಾಠ ಅನಗತ್ಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಆರು ಮಂದಿ ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ಏಕಾಏಕಿ ಸೃಷ್ಟಿಸಿರುವ ಹಿಜಾಬ್ ವಿವಾದದ ಕಿಡಿ ಇಂದು ಜಿಲ್ಲೆಯಾದ್ಯಂತ ಪಸರಿಸಿರುವ ವಿಚಾರ ಇತರ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅತ್ಯಂತ ಆತಂಕಕಾರಿ ಎನಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ, ಶಿಕ್ಷಣ ಇಲಾಖೆಯ ಮುಖಾಂತರ ಪದವಿ ಪೂರ್ವ ಕಾಲೇಜುಗಳಲ್ಲಿ ಸಮಾನ ವಸ್ತ್ರ ಸಂಹಿತೆ ನೀತಿಯನ್ನು ಜಾರಿಗೊಳಿಸುವ ಮೂಲಕ ಕೆಲವೇ ಮಂದಿ ವಿದ್ಯಾರ್ಥಿನಿಯರು ಪೂರ್ವಾಗ್ರಹಪೀಡಿತರಾಗಿ ಸೃಷ್ಟಿಸಿರುವ ಕ್ಷುಲ್ಲಕ ಹಿಜಾಬ್ ವಿವಾದಕ್ಕೆ ಇತಿಶ್ರೀ ಹಾಡುವ ಅನಿವಾರ್ಯತೆ ಇದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಮಧ್ಯೆ ‘ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು’ ಎಂದು ಪ್ರಶ್ನಿಸಿರುವ ಮಾಜಿ ಸಿ.ಎಂ. ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಕ್ಷೇತ್ರದ ಜನತೆಯ ಸಮಸ್ಯೆಗೆ ಅಗತ್ಯ ಪರಿಹಾರ ಕಲ್ಪಿಸುವುದು ಶಾಸಕನ ಜವಾಬ್ದಾರಿ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ಇರುವುದರಿಂದಲೇ ಪ್ರಾಯಶಃ ಸಿದ್ಧರಾಮಯ್ಯ ತನ್ನ ಸ್ವಕ್ಷೇತ್ರದ ಜನತೆಯಿಂದ ತಿರಸ್ಕೃತಗೊಂಡಿದ್ದಾರೆ. ತನ್ನ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯ ಸಂದರ್ಭದಲ್ಲಿ ಗಾಢ ಮೌನ ವಹಿಸಿದ್ದ ಸಿದ್ದರಾಮಯ್ಯ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ರಾಜ್ಯದ ಜನತೆ ಮರೆತಿಲ್ಲ.

ದೇಶ ವಿರೋಧಿ ಕೃತ್ಯವನ್ನೇ ಕಾಯಕವನ್ನಾಗಿಸಿಕೊಂಡಿರುವ ವಿರೋಧಿಗಳ ಸಹಿತ ಕೇವಲ ವೋಟ್ ಬ್ಯಾಂಕಿನ ದುರಾಸೆಯಿಂದ ಸದಾ ಒಂದೇ ವರ್ಗವನ್ನು ಓಲೈಸುತ್ತಿರುವ ಸಿದ್ಧರಾಮಯ್ಯನವರಿಂದ ಇಂತಹ ಮತಾಂಧತೆಯ ದುರುದ್ದೇಶಪೂರಿತ ಹಿಜಾಬ್ ವಿವಾದದ ಬಗ್ಗೆ ಉಪದೇಶದ ಪಾಠ ಅನಗತ್ಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿಯಿಂದ ಆತ್ಮನಿರ್ಭರ ಅರ್ಥ ವ್ಯವಸ್ಥೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರ ವೀಕ್ಷಣೆ


ಉಡುಪಿ: ಆತ್ಮನಿರ್ಭರ ಅರ್ಥ ವ್ಯವಸ್ಥೆಯ ಕುರಿತು ಫೆ.2ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರವನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಆಂಡಾರು ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರು ಉಪಸ್ಥಿತರಿದ್ದರು.

ದೂರದರ್ಶಿತ್ವದ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಕೇಂದ್ರ ಬಜೆಟ್ ದೂರದರ್ಶಿತ್ವದ ಚಿಂತನೆಯೊಂದಿಗೆ ಅಭಿವೃದ್ಧಿ ಪರ ಅತ್ಮನಿರ್ಭರ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಉತ್ಪಾದಕತೆ, ಹಣಕಾಸು ಹೂಡಿಕೆ, ಹವಾಮಾನ ಕ್ರಮ ಮತ್ತು ಪಿಎಂ ಗತಿಶಕ್ತಿ ಯೋಜನೆ ಈ ನಾಲ್ಕು ಪ್ರಮುಖ ಆಯಾಮಗಳಲ್ಲಿ ರೂಪಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.

ರಸ್ತೆಗಳ ನಿರ್ಮಾಣಕ್ಕೆ ಒತ್ತು, ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ, ಕೈಗಾರಿಕೆ, ಸಾವಯವ ಕೃಷಿ, ಕೌಶಲ್ಯಾಭಿವೃದ್ಧಿ, ಮನೆ ಮನೆಗೆ ನಳ್ಳಿ ನೀರು, ದೇಶದ 5 ನದಿಗಳ ಜೋಡಣೆ, ಹೆಚ್ಚುವರಿ ರೈಲು, ರೈಲ್ವೇ ನಿಲ್ದಾಣದ ಉನ್ನತೀಕರಣ, ಡಿಜಿಟಲ್ ಆರ್ಥಿಕತೆ, ಕನಿಷ್ಠ ಬೆಂಬಲ ಬೆಲೆ, ಡಿಜಿಟಲ್ ಯೂನಿವರ್ಸಿಟಿ, ಒನ್ ನೇಷನ್ ಒನ್ ರಿಜಿಸ್ಟ್ರೇಷನ್, ವಿವಿಧ ಕ್ಷೇತ್ರಗಳ ಡಿಜಿಟಲೀಕರಣ, ಪಿಎಂ ಆವಾಜ್ ಯೋಜನೆಯಡಿ ಮನೆ ನಿರ್ಮಾಣ, ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ, ಇ-ಪಾಸ್ ಪೋರ್ಟ್, ಮಹಿಳಾ ಸಬಲೀಕರಣ, ಅಂಗನವಾಡಿಗಳ ಉನ್ನತೀಕರಣ, ವಿವಿಧ ಇಲಾಖೆಗಳಲ್ಲಿ ಆತ್ಮನಿರ್ಭರತೆ, ಮೇಕ್ ಇನ್ ಇಂಡಿಯಾ, ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ವರೆಗೆ ಬಡ್ಡಿ ರಹಿತ ಸಾಲ, ಅಮೃತ ಸ್ಕೀಂ ಅಡಿಯಲ್ಲಿ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಇವೇ ಮುಂತಾದ ಸಕಾರಾತ್ಮಕ ಅಂಶಗಳು ಈ ಬಾರಿಯ ಕೇಂದ್ರ ಬಜೆಟ್ ನ ವಿಶೇಷತೆಗಳಾಗಿವೆ.

ಹಲವಾರು ಅಗತ್ಯ ವಸ್ತುಗಳ ಬೆಲೆ ಹಾಗೂ ಸುಂಕ ಇಳಿಕೆ ಸ್ವಾಗತಾರ್ಹವಾಗಿದೆ. ವಿವಿಧ 14 ಕ್ಷೇತ್ರಗಳಲ್ಲಿ ಉತ್ಪಾದಕತೆಗೆ ಪೂರಕ ಹೂಡಿಕೆ ಅವಕಾಶವು ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ 30 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊಸ ಉತ್ಪಾದಕತೆಗೆ ಒತ್ತು ನೀಡಲಿದೆ. ಆರೋಗ್ಯ, ಶಿಕ್ಷಣ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿರುವ ಜೊತೆಗೆ ಜಿಡಿಪಿಯ ಶೇ.35ನ್ನು ಮೂಲಸೌಕರ್ಯ ಕ್ಷೇತ್ರಕ್ಕೆ ಮೀಸಲಿರಿಸಿರುವುದು ಅಶಾದಾಯವಾಗಿದೆ.

ದೇಶದ ಭದ್ರತೆಯ ಜೊತೆಗೆ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೂಂಚೂಣಿಗೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲು ಹಾಕುವ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್ ದೂರದರ್ಶಿತ್ವದ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್ ಆಗಿ ಹೊರ ಹೊಮ್ಮಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಂಡ ಬಳಿಕ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಉಡುಪಿಗೆ ಆಗಮಿಸಿದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ರವರನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಉಡುಪಿ ಪ್ರವಾಸೀ ಮಂದಿರದಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಸ್ವಾಭಿಮಾನ ಜಾಥಾಕ್ಕೆ ಅಚ್ಯುತ ಅಮೀನ್ ಕಲ್ಮಾಡಿ ಚಾಲನೆ


ಶ್ರೀ ನಾರಾಯಣ ಗುರು ವಿಚಾರ ವೇದಿಕೆ(ರಿ.) ಕರ್ನಾಟಕ ಇದರ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಭಿಮಾನ ಜಾಥಾದ ವಾಹನಕ್ಕೆ ವೇದಿಕೆಯ ರಾಜ್ಯ ಉಪಾಧ್ಯಕ್ಷ, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ ಇದರ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಶ್ರೀ ಬ್ರಹ್ಮ ಬೈದೇರುಗಳ ಗರೋಡಿಯ ಪರಿಸರದಲ್ಲಿ ಜ.26ರ ಬೆಳಿಗ್ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ(ರಿ.) ಉಡುಪಿ ತಾಲೂಕು ಅಧ್ಯಕ್ಷ, ಕಲ್ಮಾಡಿ ಗರೋಡಿಯ ಉಪಾಧ್ಯಕ್ಷ ಶಶಿಧರ ಎಂ. ಅಮೀನ್ ವಡಬಾಂಡೇಶ್ವರ, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್, ಕೋಶಾಧಿಕಾರಿ ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ ಹಾಗೂ ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಕಲ್ಮಾಡಿ ಗರೋಡಿಯ ಆಡಳಿತ ಸಮಿತಿ ಸದಸ್ಯರಾದ ವಿನಯ್ ಪಡುಕರೆ, ಹರೀಶ್ ಎಂ.ಕೆ., ಶಂಕರ ಪೂಜಾರಿ ಮಧ್ವನಗರ, ಜಯಕರ ಪೂಜಾರಿ ಕೊಡವೂರು, ಕಲ್ಮಾಡಿ ಗರೋಡಿ ಮನೆಯ ನಾರಾಯಣ ಪೂಜಾರಿ, ರಾಘವ ಪೂಜಾರಿ, ಪ್ರಮುಖರಾದ ದಾಮೋದರ ಕಲ್ಮಾಡಿ, ಸಾಧು ಪೂಜಾರಿ, ಶಂಕರ ಪೂಜಾರಿ, ರಜತ್ ವಿನಯ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಸರಿ ಭಯದಿಂದ ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ಅನಾವರಣ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿಮಾನಿಯೊಬ್ಬರು ಕೇಸರಿ ಪೇಟ ತೊಡಿಸಲು ಬಂದ ಅರೆ ಕ್ಷಣದಲ್ಲೇ ವಿಪರೀತ ಭಯಗೊಂಡು ಅದನ್ನು ಕಿತ್ತೊಗೆದ ವಿಲಕ್ಷಣ ಘಟನೆಯೊಂದಿಗೆ ಸಿದ್ದರಾಮಯ್ಯ ತಾನು ಯಾವತ್ತೂ ಹಿಂದೂ ವಿರೋಧಿ ಎಂಬುದನ್ನು ಮಗದೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಕೇಸರಿ ಬಣ್ಣ ತ್ಯಾಗದ ಸಂಕೇತ, ಹಿಂದುತ್ವದ ಸಂಕೇತ. ಕಾಂಗ್ರೆಸಿಗರು ಹಿಂದುತ್ವವನ್ನು ಯಾವ ರೀತಿ ದ್ವೇಷಿಸುತ್ತಾರೆ ಎಂಬುದು ಈ ಘಟನೆಯಿಂದ ಮತ್ತೆ ಮತ್ತೆ ಸಾಬೀತಾಗಿದೆ. ಮಾತ್ರವಲ್ಲದೆ ಕೇಸರಿ ತೊಟ್ಟರೆ ಎಲ್ಲಿ ಮುಸಲ್ಮಾನರ ವೋಟಿಗೆ ತೊಂದರೆಯಾಗುತ್ತದೋ ಎಂಬ ಭಯದಿಂದ ಸಿದ್ಧರಾಮಯ್ಯ ಈ ರೀತಿ ವರ್ತಿಸಿರುತ್ತಾರೆ. ಸಮಸ್ತ ಹಿಂದೂ ಸಮಾಜ ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯ ಹೀನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ವಿರೋಧಿ ನೀತಿ ಅನುಸರಿಸುವ ಕಾಂಗ್ರೆಸ್ ನಿಂದ ಹಿಂದುತ್ವದ ಪಾಠ ಅನಗತ್ಯ; ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆ ಅರ್ಥಹೀನ: ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ: ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಕಮ್ಯೂನಿಸ್ಟ್ ಸರಕಾರದ ಲೋಪದಿಂದಾಗಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ವಿಶ್ವವಂಧ್ಯ ಶ್ರೇಷ್ಠ ಸಂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗದಿರುವುದು ಎಲ್ಲರಿಗೂ ನಿರಾಸೆ ಮೂಡಿಸಿರುವುದು ವಾಸ್ತವ. ಆದರೆ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುವ ಕಾಂಗ್ರೆಸ್ ಕೇವಲ ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ವಿವಾದವನ್ನಾಗಿಸಲು ಹವಣಿಸುತ್ತಿರುವುದು ಶೋಚನೀಯ. ತನ್ನ ಆಡಳಿತಾವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸುತ್ತಿದ್ದ ಹಿಂದೂ ಯುವಕರ ಹತ್ಯೆ ನಡೆದಾಗ ಸುಮ್ಮನಿದ್ದ, ಒಂದೇ ವರ್ಗವನ್ನು ಓಲೈಸುವ ಕಾಂಗ್ರೆಸ್ ನಿಂದ ಹಿಂದುತ್ವದ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಅಮೃತ ವಾಣಿಯನ್ನು ನಾಡಿಗೆ ನೀಡಿರುವ, ಹಿಂದೂ ಧರ್ಮದ ಪ್ರತಿಪಾದಕರು, ಶಿಕ್ಷಣ ಮತ್ತು ಸಂಘಟನೆಯ ಸಾರವನ್ನು ನಾಡಿಗೆ ಪಸರಿಸುವ ಮೂಲಕ ಮತಾಂತರವನ್ನು ವಿರೋಧಿಸಿ, ಶೋಷಿತ ವರ್ಗದ ದೀನ ದಲಿತೋದ್ಧಾರಕರಾಗಿ, ಅಸಮಾನತೆ ಮೂಡನಂಬಿಕೆ ಅಸ್ಪ್ರಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು. ಶ್ರೀ ಗುರುವರ್ಯರ ಗೌರವಾರ್ಥವಾಗಿ ಜ.26ರಂದು ಜಿಲ್ಲೆಯಾದ್ಯಂತ ನಡೆಯುವ ಜಾಥಾವನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಸುದೀರ್ಘ ಆಡಳಿತಾವಧಿಯಲ್ಲಿ ಒಮ್ಮೆಯಾದರೂ ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ದಿವ್ಯ ಚೇತನಗಳಿಗೆ ಗೌರವ ತಂದು ಕೊಡುವಂತಹ ಸತ್ಕಾರ್ಯವನ್ನು ಮಾಡದೇ ಇದ್ದರೂ ಪ್ರಸಕ್ತ ಪರಿಸ್ಥಿತಿಯ ದುರ್ಲಾಭ ಪಡೆಯಲು ಹರಸಾಹಸ ಪಡುತ್ತಿರುವುದು ವಿಷಾದನೀಯ. ಸರಕಾರವನ್ನು ಟೀಕಿಸಲು ಯಾವುದೇ ಅಸ್ತ್ರವಿಲ್ಲದೇ ಸೊರಗಿರುವ ಕಾಂಗ್ರೆಸ್ ಜನತೆಯ ದಾರಿ ತಪ್ಪಿಸುವ ವಿಫಲ ಯತ್ನದಲ್ಲಿ ನಿರತವಾಗಿರುವುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ ಎಂದು ಬಿಂಬಿಸಲು ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು ನೀಡಿದ ಬಾಲಿಶ ಹೇಳಿಕೆಯು ಅರ್ಥಹೀನವಾಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started