ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನ ವ್ಯವಸ್ಥೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ದಿನಾಂಕ 8-6-2020 ರಿಂದ ಮಾಡಿಕೊಡಲಾಗುವುದೆಂದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿರುತ್ತಾರೆ.

ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದಲ್ಲಿ, ಅನ್ನಪೂರ್ಣ ಭೋಜನ ಮಂದಿರದಲ್ಲಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದ ಒಳ ಪ್ರವೇಶ ಮಾಡುವವರು ತೆಗೆದುಕೊಳ್ಳಬೇಕಾದ ಕ್ರಮಗಳು ಇಂತಿವೆ. ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು.
ಅರ್ಚಕ ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು, ಸ್ವಯಂ ಸೇವಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಮರ್ಶಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವರೇ ಕೋರಿದೆ. ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ.
ಭಕ್ತಾದಿಗಳು ದೇವಸ್ಥಾನದ ಆಡಳಿತದ ಜೊತೆಯಲ್ಲಿ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಜೂನ್ 05, ವಿಶ್ವ ಪರಿಸರ ದಿನಾಚರಣೆ

ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನಾಚರಣೆ. ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ ನಂತರ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹ ಘನೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ.

ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಪರಿಸರದ ಶಿಶುಗಳೆನಿಸಿದ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು , ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು , ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ‌ ಮಾಲಿನ್ಯ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ , ಅರಣ್ಯ ನಾಶ ಹೀಗೆ ಒಂದೇ, ಎರಡೇ ಪರಿಸರದಲ್ಲಿ ಇಂದು ಉಂಟಾಗಿರುವ ಏರುಪೇರುಗಳು. ಈ ಏರುಪೇರುಗಳಿಗೆ ಕಾರಣ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದ ಫಲವಾಗಿದ್ದು, ಅದರ ಪರಿಣಾಮವಾಗಿ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮ ನಾವು ಎದುರಿಸುತ್ತಿದ್ದೇವೆ.

ಈ ಎಲ್ಲದಕ್ಕೂ ಕಾರಣ ಪರಿಸರದ ಬಗ್ಗೆ , ಅದರ ಪ್ರಾಮುಖ್ಯತೆ ಬಗ್ಗೆ ನಮಗೆ ಸರಿಯಾದ ಅರಿವು ಇಲ್ಲದಿರುವುದೇ ಆಗಿದೆ. ಆದ್ದರಿಂದಲೇ ನಮ್ಮೆಲ್ಲರಲ್ಲೂ ಜಾಗೃತಿ ಮೂಡಿಸಲು, ಪರಿಸರದ ಪರ ನಮ್ಮ ಕರ್ತವ್ಯ ಪಾಲಿಸಲು, ನಮ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ‌ ಮುಂದಿನ ಪೀಳಿಗೆಯ ಉಜ್ಜವವಾದ ನಾಳೆಗಳಿಗಾಗಿ ನಾವು ಇಂದು ಇಂದಿನ ಮಕ್ಕಳಿಗೆ, ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಲು ಆಚರಿಸುವ ದಿನವೇ ವಿಶ್ವ ಪರಿಸರ ದಿನ. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ.

ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು‌ ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ.

ರೋಗ ನಿರೋಧಕ ಶಕ್ತಿ ತುಂಬುವ ರಾಗಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು.

ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ ನೀರಿನಲ್ಲಿ ನೆನೆಸಿ. 1 ಕಪ್ ರಾಗಿಗೆ 2 ಕಪ್ ನಷ್ಟು ನೀರು ಬೇಕು. ಇದನ್ನು ನಾಲ್ಕು ಜನ ಕುಡಿಯಬಹುದು

ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ರುಬ್ಬಿ ಮತ್ತೆ ಸೋಸಿ. ಒಂದು ಮುಷ್ಟಿ ಕಡಲೆಕಾಯಿ ಬೀಜವನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟು ತುಸು ತೆಂಗಿನ ತುರಿ ಬೆರೆಸಿ ರುಬ್ಬಿ. ರಾಗಿ ಹಾಲನ್ನು ಐದರಿಂದ ಹತ್ತು ನಿಮಿಷಗಳ ಕಾಲ ಬಿಸಿ ಮಾಡಿ ಗಂಟು ಬರದ ರೀತಿ ನೋಡಿಕೊಳ್ಳಿ.

ತುಸು ಬೆಲ್ಲ ಸೇರಿಸಿ ಕುದಿಸಿ. ತೆಂಗಿನಕಾಯಿ ಮಿಶ್ರಣ, ಏಲಕ್ಕಿ ಪುಡಿ ಹಾಕಿ. ಕೊನೆಗೆ ಕೊಂಚ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಈ ಆರೋಗ್ಯಕರ ಪಾನೀಯನ್ನು ಬೆಳಿಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆಯ ಮುಂಚೆ ಕುಡಿಯಬೇಕು. ರುಚಿ ಚೆನ್ನಾಗಿರುವುದರಿಂದ ಮಕ್ಕಳು ಸಹ ಇಷ್ಟಪಟ್ಟು ಕುಡಿಯುತ್ತಾರೆ. ಇದರಿಂದ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.

ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಆಘಾತ : ಮುಖ್ಯಮಂತ್ರಿಗಳಿಂದ ಎಚ್ಚರಿಕೆ

ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಹಾಗೂ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅನರ್ಹರು ಪಡೆದುಕೊಂಡಿರುವ ಪಡಿತರ ಚೀಟಿ ಮತ್ತು ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ. ಕೆಲವು ಸರ್ಕಾರಿ ನೌಕರರು, ಶ್ರೀಮಂತರು, ಟ್ರ್ಯಾಕ್ಟರ್ ಸೇರಿ ಇತರೆ ವಾಹನ ಹೊಂದಿದವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಕೂಡಲೇ ಹಿಂತಿರುಗಿಸಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿ ಅಂತಹ ಕಾರ್ಡ್ಗಳನ್ನು ರದ್ದುಪಡಿಸಬೇಕು. ಇಲ್ಲವಾದರೆ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ಪೂರೈಸುವ ನಿಟ್ಟಿನಲ್ಲಿ ಹಾಗೂ ಅನರ್ಹರು ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಕೊರೊನಾ ಸೋಂಕು ಹರಡುವುದು ಆರಂಭವಾಗುವ ಮೊದಲು ಸುಮಾರು 63 ಸಾವಿರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ಕಾರ್ಯಾಚರಣೆ ಮುಂದುವರೆಸಿ ನಕಲಿ ಮತ್ತು ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆಹಾರ ಇಲಾಖೆಯಿಂದ ಅಭಿಯಾನ ಕೈಗೊಳ್ಳುವಂತೆ ಸೂಚಿಸಿದ್ದು, ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.

ಜೂನ್ 05, 2020 ಶುಕ್ರವಾರ ಇಂದಿನ ರಾಶಿ ಫಲ

ಮೇಷ

ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ. ಆರ್ಥಿಕ ಬೆಳವಣಿಗೆಯನ್ನು ಕಾಣಬಹುದು. ಪ್ರಮುಖ ವಿಚಾರಗಳ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಉತ್ತಮ ಗೆಳೆತನ ದೊರಕುವ ಸಾಧ್ಯತೆ ಇದ್ದು ನೆಮ್ಮದಿ ಉಂಟಾಗಲಿದೆ.

ವೃಷಭ

ಸಣ್ಣ ಪುಟ್ಟ ಪ್ರಯಾಣ ಯೋಗ ಕಂಡುಬರುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಮರ್ಥ್ಯವನ್ನರಿತು ಕೆಲಸ ನಿರ್ವಹಿಸುವುದು ಉತ್ತಮ. ಮಿತ್ರವೃಂದದಿಂದ ಉಪಯುಕ್ತ ಸಲಹೆ ದೊರೆತು ವೃತ್ತಿಯಲ್ಲಿ ಯಶಸ್ಸು.

ಮಿಥುನ

ನಿಮ್ಮ ಇಚ್ಛೆಗಳು ಸುಗಮವಾಗಿ ಈಡೇರಲಿವೆ. ಯೋಗ್ಯ ವಯಸ್ಕರಿಗೆ ಬಂಧುಗಳ ಸಹಕಾರದಿಂದ ವೈವಾಹಿಕ ಭಾಗ್ಯ ದೊರಕಲಿದೆ. ಇತರರೊಂದಿಗೆ ಉತ್ತಮ ಸಂಬಂಧವನ್ನು ಸಾಧಿಸಲಿದ್ದೀರಿ. ನೆಮ್ಮದಿಯ ದಿನ.

ಕಟಕ

ಕೆಲಸ–ಕಾರ್ಯಗಳಿಗೆ ವಿಘ್ನಗಳುಂಟಾದರೂ ಎದೆಗುಂದದೆ ಮುಂದುವರಿದು ಯಶಸ್ಸನ್ನು ಸಾಧಿಸಲಿದ್ದೀರಿ. ಸಹೋದ್ಯೋಗಿಗಳ ಸಹಕಾರದಿಂದಾಗಿ ನೆಮ್ಮದಿ. ಹಿರಿಯರ ಸಲಹೆಗಳನ್ನು ಗೌರವಿಸಿ.

ಸಿಂಹ

ನೌಕರ ವರ್ಗದವರಿಗೆ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಮಹಿಳೆಯರು ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದ್ದು ಸಮಾಧಾನ ಚಿತ್ತರಾಗಿ ವ್ಯವಹರಿಸುವುದು ಉತ್ತಮ. ವಾಹನ ಚಾಲನೆಯಲ್ಲಿ ಜಾಗೃತೆ ವಹಿಸಿ.

ಕನ್ಯಾ

ಆದಾಯ ಮತ್ತು ವೆಚ್ಚಗಳೆರಡೂ ಹೆಚ್ಚಾಗುವ ಸಾಧ್ಯತೆ. ನ್ಯಾಯಾಲಯದ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಹೊಸ ಆದಾಯದ ಮೂಲಗಳು ಗೋಚರವಾಗಲಿವೆ. ಸರಿ, ತಪ್ಪುಗಳನ್ನು ಅರಿತು ಮುಂದುವರೆಯಿರಿ.

ತುಲಾ

ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಧೈರ್ಯದಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು. ಕೆಲಸ ಕಾರ್ಯಗಳಿಗೆ ಕಾಲಮಿತಿ ಹಾಕಿಕೊಳ್ಳುವುದು ಉತ್ತಮ. ಸಾಂಸಾರಿಕವಾಗಿ ತೃಪ್ತಿಕರ ಜೀವನ.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಅಭ್ಯಾಸದ ಮೇಲೆ ಏಕಾಗ್ರತೆ ಕಡಿಮೆಯಾದರೂ ಗುರಿ ಸಾಧನೆಗೆ ತೊಡಕಾಗದು. ನಿರುದ್ಯೋಗಿಗಳು ಉತ್ತಮ ಅವಕಾಶಕ್ಕಾಗಿ ಕಾಯಬೇಕಾದೀತು. ಸಣ್ಣಪುಟ್ಟ ವ್ಯಾಪಾರಿ ವರ್ಗದವರಲ್ಲಿ ನಿರೀಕ್ಷಿತ ಲಾಭ.

ಧನು

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚಿನ ಗಮನ ವಹಿಸಬೇಕಾದೀತು. ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ ಸಾಧ್ಯತೆ. ಅನಿರೀಕ್ಷಿತ ಪ್ರಯಾಣ ಎದುರಾಗಬಹುದು.

ಮಕರ

ವಿವಿಧ ಮೂಲಗಳಿಂದ ಧನಾಗಮನದಿಂದಾಗಿ ಕಾರ್ಯಾನುಕೂಲವಾಗಲಿದೆ. ಮಹಿಳಾ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಅಸಹನೆಯ ಮನೋವೃತ್ತಿ ಅನಾವಶ್ಯಕ ತಪ್ಪು ಅಭಿಪ್ರಾಯಕ್ಕೆ ಕಾರಣವಾದೀತು.

ಕುಂಭ

ಯಾವುದೇ ವಿಚಾರದಲ್ಲಿ ಆತುರತೆಯ ತೀರ್ಮಾನ ಬೇಡ. ಬಿಡುವಿಲ್ಲದ ಕೆಲಸ–ಕಾರ್ಯಗಳಿಂದಾಗಿ ಒತ್ತಡ ಹೆಚ್ಚಾಗಿ ಆಯಾಸ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದಾಗಿ ಪ್ರತಿಕೂಲ ಪರಿಣಾಮ ಉಂಟಾಗಬಹುದು.

ಮೀನ

ನಿರ್ಧಾರಗಳನ್ನು ಪದೇ ಪದೆ ಬದಲಿಸದಿರಿ. ನಿಮ್ಮ ಅನಿರೀಕ್ಷಿತ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಅಸಹನೆ ಉಂಟಾಗಬಹುದು. ಸ್ನೇಹಿತರಿಂದ ಸಕಾಲಿಕ ಸಹಾಯ ದೊರೆಯಲಿದೆ.

ಫ್ರಾನ್ಸ್‌ನಲ್ಲಿ ಶಾಲೆಗಳು ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು; ಪೋಷಕರಲ್ಲಿ ಹೆಚ್ಚಿದ ಆತಂಕ

ಪ್ಯಾರಿಸ್: ಕೊರೊನಾವೈರಸ್‌ ಲಾಕ್‌ಡೌನ್‌ ಮುಕ್ತಾಯದ ಬಳಿಕ ಪ್ರಾನ್ಸ್‌ನಲ್ಲಿ ಶಾಲೆಗಳು ಪುನರಾರಂಭವಾಗಿ ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಮತ್ತೆ ತೀವ್ರ ಆತಂಕ ಸೃಷ್ಟಿಸಿದೆ.

ಕೆಲವು ಶಾಲೆಗಳು ಕಳೆದ ವಾರ ಕಾರ್ಯಾರಂಭಿಸಿದ್ದವು. ಒಟ್ಟಾರೆ 1,50,000 ಶಾಲಾ ಮಕ್ಕಳು ಸೋಮವಾರ ಮರಳಿ ತರಗತಿಗಳಿಗೆ ಹಾಜರಾಗಿದ್ದರು.ಸರಕಾರ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆಯೇ ಕೊರೊನಾ ಸಾಂಕ್ರಾಮಿಕ ಮತ್ತೆ ವ್ಯಾಪಕವಾಗಿ ಹರಡಲಾರಂಭಿಸಿದೆ.

ಫ್ರಾನ್ಸ್ ಸರಕಾರ ನಿರ್ಬಂಧಗಳನ್ನು ತೆರವುಗೊಳಿಸಿದ್ದನ್ನು ಪ್ರಜೆಗಳು ಆರಂಭಿಕವಾಗಿ ಸ್ವಾಗತಿಸಿದ್ದರು. ವರ್ಕ್‌ ಫ್ರಮ್ ಹೋಮ್ ಮಾಡುತ್ತಿದ್ದ ಪೋಷಕರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೆಂದು ಬೇಗನೆ ಶಾಳೆ ಆರಂಭಿಸುವಂತೆ ಒತ್ತಾಯಿಸಿದ್ದರು. ಆದರೆ ಈಗ ಶಾಲಾ ಮಕ್ಕಳಿಗೂ ಕೊರೊನಾ ಸೋಂಕು ತಗಲುತ್ತಿರುವುದು ಪೋಷಕರಿಗೆ ವ್ಯಾಪಕ ಆತಂಕ ಉಂಟುಮಾಡಿದೆ.

ಫ್ರೆಂಚ್ ಶಿಕ್ಷಣ ಸಚಿವ ಜೀನ್ ಮೈಕೆಲ್ ಬ್ಲಾಂಕರ್‌ ತಮ್ಮ ರೇಡಿಯೋ ಸಂದೇಶದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೋಂಕು ಕಂಡುಬಂದ ಶಾಲೆಗಳನ್ನು ತಕ್ಷಣದಿಂದಲೇ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತರ ಫ್ರಾನ್ಸ್‌ನಲ್ಲಿ ಏಳು ಶಾಲೆಗಳನ್ನು ಕೊರೊನಾ ಸಾಂಕ್ರಾಮಿಕ ಕಂಡು ಬಂದ ಕಾರಣಕ್ಕೆ ಮುಚ್ಚಲಾಗಿದೆ.

ಕಳೆದ ವಾರ 40,000 ಪ್ರಿ-ಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳನ್ನು ಫ್ರಾನ್ಸ್‌ ತೆರೆದಿತ್ತು. ಇನ್ನಷ್ಟು ಶಾಲೆಗಳು ತೆರೆಯಲ್ಪಟ್ಟರೆ ಸಾಂಕ್ರಾಮಿಕ ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ.ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳಲು ಪೋಷಕರಿಗೆ ಫ್ರೆಂಚ್‌ ಸರಕಾರ ಅನುಮತಿ ನೀಡಿದೆ.ಫ್ರಾನ್ಸ್‌ನಲ್ಲಿ ಈ ವರೆಗೆ 1,42,411 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 28,108 ಮಂದಿ ಮೃತಪಟ್ಟಿದ್ದಾರೆ

ಕರುನಾಡಿಗೆ ಇಂದು ಕೊರೋನಾಘಾತ ಬರೋಬ್ಬರಿ 257 ಪ್ರಖರಣಗಳು!!!

ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 257 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಇಬ್ಬರು, ಗದಗದಲ್ಲಿ ಪುರುಷರೊಬ್ಬರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 57ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ 257 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ನಗರ ಜಿಲ್ಲೆಯ 65 ವರ್ಷದ ಮಹಿಳೆಯೊಬ್ಬರು ಜೂ.3 ರಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಮತ್ತೊಬ್ಬರು ಮಹಿಳೆ(65 ವರ್ಷ) ಜ್ವರ, ಮಧುಮೇಹ ಮತ್ತು ಉಸಿರಾಟದ ತೊಂದರೆಯಿಂದ ಮೇ.3 ರಂದು ನಿಗದಿತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ದಾವಣಗೆರೆ ಜಿಲ್ಲೆಯ 83 ವರ್ಷದ ಮಹಿಳೆ ಎದೆನೋವಿನಿಂದ ಮೇ.31 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ. ಅವರ ಕೊರೋನ ವರದಿಯು ಪಾಸಿಟಿವ್ ಬಂದಿದೆ. ಮಧುಮೇಹದಿಂದ ಬಳಲುತ್ತಿದ್ದ ಗದಗ ಜಿಲ್ಲೆಯ 44 ವರ್ಷದ ವ್ಯಕ್ತಿಯೊಬ್ಬರು ಮೇ.2 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವದ ಮಾದರಿಯಲ್ಲಿ ಕೊರೋನ ಪಾಸಿಟಿವ್ ಬಂದಿದೆ.ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಉಡುಪಿ 92, ರಾಯಚೂರು 88, ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 15, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು ನಗರ 9, ದಕ್ಷಿಣ ಕನ್ನಡ 4, ಗದಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 2, ಬಳ್ಳಾರಿ, ಮೈಸೂರು, ವಿಜಯಪುರ, ತುಮಕೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ 4,320 ಕೊರೋನ ಸೋಂಕಿತರ ಪೈಕಿ 1,610 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 106 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 57 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,631 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .

ಎಲ್ಲವೂ ಸರ್ಕಾರದ ಆದೇಶದಂತೆ ನಡೆದದ್ದು.

ಕೊರೋನಾ ನಿಯಂತ್ರಣದಲ್ಲೂ ಉಡುಪಿ No-1 ಜಿಲ್ಲೆ ಆಗಿತ್ತು …
ಸರ್ಕಾರ ನಿಯಮಗಳನ್ನು ರೂಪಿಸಿದೆ. ಅಧಿಕಾರಿಗಳು ಅದನ್ನು ಪಾಲಿಸಿದ್ದಾರೆ. ಜನ ಸಹಕಾರ ನೀಡಿದ್ದಾರೆ. ಮತ್ತೇನಿದೆ.
ಇಲ್ಲಿ ಒಳ್ಳೆಯದಾದರೆ ಅದು ಅಧಿಕಾರಿಗಳಿಂದ. .
ಸ್ವಲ್ಪ ಸಮಸ್ಯೆ ಆದರೆ ಅದಕ್ಕೆ ಜನ ಪ್ರತಿನಿಧಿಗಳು ಕಾರಣ. . ಯಾಕೀ ಧೋರಣೆ?????

ವರದಿ ಬರುವ ಮೊದಲು ಕ್ವಾರಂಟೈನ್ ನಲ್ಲಿ ಇದ್ದವರನ್ನು ಮನೆಗೆ ಕಳುಹಿಸಲು ಸರ್ಕಾರದ ಆದೇಶ ಅದನ್ನು ಪಾಲನೆ ಮಾಡಿದ್ದಾರೆ.
ಉಡುಪಿ ಜಿಲ್ಲೆ ಗ್ರೀನ್ ಝೋನ್ ಬರಲು ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಅಷ್ಟೇ..

ಇಲ್ಲಿ ಅಧಿಕಾರಿಗಳು ಯಾರೇ ಇರಲಿ. ಪಾಲನೆ ಆಗಿದ್ದು, ಸರ್ಕಾರದ ಆದೇಶ.

ಹೊರ ರಾಜ್ಯ, ಹೊರ ದೇಶದಿಂದ ಬಂದವರು 14 ದಿನ ಕ್ವಾರಂಟೈನ್ ಗೊಳಗಾಗಿ ವರದಿ ಬಂದ ನಂತರ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆ. . . ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್. . . ಎಂದು ಸರ್ಕಾರ ಮೊದಲು ಆದೇಶಿಸಿತ್ತು.

ಕ್ವಾರಂಟೈನ್ ನಲ್ಲಿ ಇದ್ದವರನ್ನು ವರದಿ ಕೈ ಸೇರುವ ಮುನ್ನ ಮನೆಗೆ ಕಳುಹಿಸಿದ್ದು ಯಾರು. ಆನಂತರದ ಆವಾಂತರಕ್ಕೆ ಕಾರಣ ಯಾರು. ಬಂದ ವರದಿಗಳನ್ನು ತಕ್ಷಣದಲ್ಲಿ ವಿಭಾಗಿಸಿ ಆಯಾ ತಾಲೂಕಿಗೆ ಕಳುಹಿಸುವಲ್ಲಿ ವಿಳಂಬ ಮಾಡಿದ್ದು ಯಾರು. ಉತ್ತರ ಜಿಲ್ಲಾಡಳಿತ ನೀಡಬೇಕು.
ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .

ಶಾಲಾ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ:ಈ ಬಗ್ಗೆ ಸಚಿವರ ಹೇಳಿಕೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಆದರೆ, ಕೊರೋನಾ ಸಂದರ್ಭದಲ್ಲಿ ಶಾಲೆ ಆರಂಭಿಸಲು ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ತರಾತುರಿ ಇಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಕ್ಕಳ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಲಿದ್ದು ಪೋಷಕರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ಜೂನ್ 15 ರಂದು ವರದಿ ಕಳುಹಿಸಲಾಗುವುದು. ನಂತರ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆಜುಲೈ 1 ರಿಂದ ಹಂತಹಂತವಾಗಿ ಶಾಲೆಗಳ ಆರಂಭಕ್ಕೆ ಚಿಂತನೆ ನಡೆದಿದೆ. ಈ ಕುರಿತು ಪೋಷಕರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಶಾಲೆಗಳ ಆರಂಭಕ್ಕೆ ಪೋಷಕರು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರದ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ

Design a site like this with WordPress.com
Get started