ಉಡುಪಿ ಶ್ರೀಕೃಷ್ಣ ದೇವರಿಗೆ ಕಾಶೀ ಮಠಾಧೀಶರಿಂದ ಪಚ್ಚೆ ಕಲ್ಲಿನ ಸ್ವರ್ಣ ಹಾರ

ಉಡುಪಿ: ಉಡುಪಿ ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಕಾಶೀ ಮಠ ಸಂಸ್ಥಾನದ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಕೊಡಮಾಡಿದ ಪಚ್ಚೆ ಕಲ್ಲಿನ ಸ್ವರ್ಣ ಹಾರವನ್ನು ಶುಕ್ರವಾರ ಗೌಡ ಸಾರಸ್ವತ ಸಮಾಜದ ದೇವಸ್ಥಾನಗಳ ಪ್ರಮುಖರು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.

ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚಿಸಿ ಪ್ರಪಂಚದ ಎಲ್ಲಾ ವಸ್ತುಗಳೂ ಭಗವಂತನ ಕೊಡುಗೆಗಳಾಗಿವೆ ಎಂಬ ಅನುಸಂಧಾನದ ಮೂಲಕ ದೇವರಿಗೆ ವಸ್ತುಗಳ ಸಮರ್ಪಣೆಯಾಗಬೇಕು. ಶ್ರೀಕೃಷ್ಣನ ವಿಗ್ರಹದಲ್ಲಿ ದೇವರನ್ನು ನೋಡಿ ಈ ಹಾರವನ್ನು ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಸಮರ್ಪಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಶ್ರೀಕೃಷ್ಣನ ಅಂತರಂಗದ ಭಕ್ತನಾಗಿದ್ದ ಉದ್ದವನಿಗೆ ಶ್ರೀಕೃಷ್ಣನ ಅಗಲುವಿಕೆ ತಾಳಲಾರದೆ ಹೋಯಿತು. ಆಗ ಶ್ರೀಕೃಷ್ಣ ತಾನು ಗ್ರಂಥದಲ್ಲಿ (ಶ್ರೀಮದ್ಭಾಗವತ) ಮತ್ತು ಜ್ಞಾನಿಗಳಲ್ಲಿರುವುದಾಗಿ ತಿಳಿಸಿದ. ಜ್ಞಾನವೆಂದರೆ ಯಾವುದನ್ನು ತಿಳಿದುಕೊಂಡರೆ ಭಗವಂತನನ್ನು ತಿಳಿಯಲಾಗುತ್ತದೋ ಅದು. ಮಧ್ವಾಚಾರ್ಯರು ಸ್ವತಂತ್ರ ತತ್ವ ಮತ್ತು ಅಸ್ವತಂತ್ರ ತತ್ವ ಎಂಬೆರಡು ಚಿಂತನೆಗಳನ್ನು ತಿಳಿಸಿದ್ದಾರೆ. ಸ್ವತಂತ್ರ ತತ್ವವೆಂದರೆ ಭಗವಂತನ ಅರಿವು. ಉಳಿದೆಲ್ಲವೂ ಭಗವಂತನ ಅಧೀನವಾದ ಅಸ್ವತಂತ್ರ ತತ್ವ. ಮಧ್ವಾಚಾರ್ಯರು ಭಗವಂತನ ವಿಶೇಷ ಸನ್ನಿಧಾನವಿರುವ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಸಾಧಕರಿಗೆ ಅನುವು ಮಾಡಿಕೊಟ್ಟರು ಎಂದು ಶ್ರೀಪಾದರು ನುಡಿದರು.

ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಇತ್ತೀಚಿಗೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ದ್ಯೋತಕವಾಗಿ ಈ ಹಾರವನ್ನು ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಕೊಟ್ಟಿದ್ದಾರೆಂದು ಜಿ.ಎಸ್‌.ಬಿ ದೇವಸ್ಥಾನಗಳ ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಕಾಮತ್ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕಿಣಿ, ಕೋಟೇಶ್ವರ ಪಟ್ಟಾಾಭಿರಾಮಚಂದ್ರ ದೇವಸ್ಥಾನದ ಆಡಳಿತೆ ಮೊಕ್ತೇಸರ ಶ್ರೀಧರ ಕಾಮತ್, ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರ ದಿನೇಶ್ ಕಾಮತ್, ಮಂಗಳೂರಿನ ನರೇಶ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ರಾಘವೇಂದ್ರ ಭಕ್ತ, ಮಾಧವ ಕಾಮತ್, ಉಡುಪಿ ವೆಂಕಟರಮಣ ದೇವಸ್ಥಾನದ ಆಡಳಿತೆ ಮೊಕ್ತೇಸರ ಪಿ.ವಿಟ್ಠಲದಾಸ ಶೆಣೈ, ಮೊಕ್ತೇಸರ ಎಂ. ವಿಶ್ವನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವರ್ಷದ ಪ್ರಾರಂಭದಲ್ಲೇ ಕೇಂದ್ರ ಸರಕಾರದ ಕೊಡುಗೆ ಸ್ವಾಗತಾರ್ಹ: ಜಿಲ್ಲಾ ಬಿಜೆಪಿ


ವರ್ಷದ ಪ್ರಥಮ ದಿನದಂದೇ ನಾಡಿನ ರೈತಾಪಿ ವರ್ಗಕ್ಕೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 10ನೇ ಕಂತು ಬಿಡುಗಡೆಯ ಪ್ರಧಾನಿ ನರೇಂದ್ರ ಮೋದಿ ನಡೆ ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

*ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶೋಭಾ ಕರಂದ್ಲಾಜೆಗೆ ಅಭಿನಂದನೆ:*

ಉಡುಪಿ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಉಡುಪಿ ನಗರವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 169ಎ ಇದರ 2 ಪ್ರಮುಖ ಕೊಂಡಿಗಳಾಗಿರುವ ಹೆಬ್ರಿ-ಪರ್ಕಳ ಮತ್ತು ಆದಿವುಡುಪಿ ಕರಾವಳಿ ಜಂಕ್ಷನ್-ಮಲ್ಪೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರ ರೂ.355.72 ಕೋಟಿ ಅನುದಾನವನ್ನು ಮಂಜೂರು ಮಾಡಿರುವುದು ಪ್ರಶಂಸನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ಈ ಬಹು ನಿರೀಕ್ಷಿತ ಯೋಜನೆಗೆ ಮಂಜೂರಾತಿಯನ್ನು ನೀಡಿ, ಸದ್ರಿ ವಿಚಾರವನ್ನು ಡಿ.30ರಂದು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಹಾಗೂ ವಿವಿಧ ಜನಪರ ಯೋಜನೆಗಳ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆಯಿಂದ ಶ್ರಮಿಸುತ್ತಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಜಿಲ್ಲೆಯ ನಾಗರಿಕರ ಪರವಾಗಿ ಉಡುಪಿ ಜಿಲ್ಲಾ ಬಿಜೆಪಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಪುರಸಭೆ ಚುನಾವಣೆ ಬಿಜೆಪಿ ಗೆಲುವು ಐತಿಹಾಸಿಕ: ಕುಯಿಲಾಡಿ ಸುರೇಶ್ ನಾಯಕ್


ಉಡುಪಿ: ಕಾಪು ಪುರಸಭೆ ಚುನಾವಣೆಯ 23 ಸ್ಥಾನಗಳಲ್ಲಿ 12 ಅಭ್ಯರ್ಥಿಗಳು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿರುವ ಬಿಜೆಪಿ ಗೆಲುವು ಐತಿಹಾಸಿಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹರ್ಷ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿಗೆ ಬಹುಮತ ನೀಡಿದ ಕಾಪು ಪುರಸಭಾ ವ್ಯಾಪ್ತಿಯ ಮತದಾರರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವ ಜೊತೆಗೆ ಚುನಾವಣಾ ಗೆಲುವಿಗೆ ಹಗಲಿರುಳು ಶ್ರಮಿಸಿರುವ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಾಪುವನ್ನು ಮಾದರಿ ಪುರಸಭೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆ, ದಾರಿದೀಪ, ಮೀನು ಮಾರುಕಟ್ಟೆ ಮುಂತಾದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಒತ್ತು ನೀಡಿ ಮುಂದಿನ 5 ವರ್ಷಗಳಲ್ಲಿ ನವ ಕಾಪು ನಿರ್ಮಾಣದ ಸಂಕಲ್ಪದೊಂದಿಗೆ ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕುಯಿಲಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರಗ ಸಮುದಾಯದ ಮದುವೆ ಮನೆಗೆ ಪೊಲೀಸರ ದಾಳಿ ಖಂಡನೀಯ, ಎಸ್.ಐ. ಮೇಲೆ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಒತ್ತಾಯ: ಜಿಲ್ಲಾ ಬಿಜೆಪಿ


ಉಡುಪಿ: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟ ಕೊರಗ ಸಮುದಾಯದ ಮದುವೆ ಮನೆಗೆ ಮೆಹಂದಿ ಸಂದರ್ಭದಲ್ಲಿ ನುಗ್ಗಿ ಮದುಮಗನೂ ಸೇರಿದಂತೆ ಹಲವರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಅಮಾನವೀಯ ಕ್ರಮವನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಮೆಹಂದಿ ಕಾರ್ಯಕ್ರಮದಲ್ಲಿ ಡಿ.ಜೆ. ಹಾಕಿರುವ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸಿ ಅನಗತ್ಯ ಲಾಠಿ ಚಾರ್ಜ್ ಮಾಡಿರುವ ಪೊಲೀಸರು ಮತ್ತು ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವರನ್ನು ಒತ್ತಾಯಿಸುವುದಾಗಿ ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಪುರಸಭೆ ಚುನಾವಣೆ: ಬಿಜೆಪಿ ಭರ್ಜರಿ ಮತ ಬೇಟೆ

ಉಡುಪಿ: ಕಾಪು ಪುರಸಭಾ ಚುನಾವಣಾ ಪ್ರಚಾರದ ಅಂಗವಾಗಿ ಭರತ್ ನಗರ ವಾರ್ಡಿನ ಅಭ್ಯರ್ಥಿ ಅರುಣ್ ಶೆಟ್ಟಿ ಪಾದೂರು ಪರವಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಬಿಜೆಪಿ ಕಾಪು ಮಂಡಲ ಉಪಾಧ್ಯಕ್ಷ ನವೀನ್ ಎಸ್.ಕೆ., ಪ್ರಮುಖರಾದ ಪ್ರದೀಪ್ ಯು., ನಾಗೇಶ್ ಭಂಡಾರಿ, ಸಮಾಜ ಸೇವಕಿ ನೀತಾ ಪ್ರಭು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಸಹ ಸಂಚಾಲಕ ದಿನೇಶ್ ಶೆಟ್ಟಿ, ಕುಂದಾಪುರ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ರೂಪ ಪೈ, ಸೌರಬಿ ಪೈ, ರೋಹಿಣಿ ಪೈ, ಅನಿತಾ ಶ್ರೀಧರ್, ವಿದ್ಯಾ ಪೈ, ಆಶಾಲತಾ ನಾಯಕ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಗಾಯತ್ರಿ ಪ್ರಭು ಹಾಗೂ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಪು ಪುರಸಭೆ ಚುನಾವಣೆ – ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾ ಗೋಷ್ಠಿ


ಉಡುಪಿ: ಕಾಪು ಪುರಸಭೆ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಮಾನ್ಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರು ಡಿ.23ರಂದು ಕಾಪು ಕೆ.ಒನ್. ಸಭಾಂಗಣದಲ್ಲಿ ಬಿಡುಗಡೆಗೊಳಿಸಿ, ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಪು ಪುರಸಭೆ ಚುನಾವಣಾ ಸಂಚಾಲಕ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಚುನಾವಣಾ ಸಹ ಸಂಚಾಲಕ ಹಾಗೂ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಬಿಜೆಪಿ ಮುಖಂಡ ಗಂಗಾಧರ ಸುವರ್ಣ, ಕಾಪು ಪುರಸಭಾ ವ್ಯಾಪ್ತಿಯ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಶೆಟ್ಟಿ ಕಲ್ಯಾ ಮುಂತಾದವರು ಉಪಸ್ಥಿತರಿದ್ದರು.

ಬೆಳೆಹಾನಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಚಾರಿತ್ರಿಕ ನಿರ್ಣಯದಿಂದ ಸರಕಾರ ರೈತಪರವೆಂದು ಮತ್ತೊಮ್ಮೆ ಸಾಬೀತು: ಉಡುಪಿ ಜಿಲ್ಲಾ ಬಿಜೆಪಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ರೈತರಿಗಾಗಿ ಅತ್ಯಂತ ಮಹತ್ವಪೂರ್ಣ, ಚಾರಿತ್ರಿಕ ನಿರ್ಧಾರಗಳನ್ನು ಪ್ರಕಟಿಸಿದೆ. ಈ ಬೆಳವಣಿಗೆಯಿಂದ ಕರ್ನಾಟಕ ಕಂಡಿರುವ ಧೀಮಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರೈತಪರ ಎಂಬುದು ಮತ್ತೆ ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಹಿಂದಿನ ಬಿಜೆಪಿಯೇತರ ಸರಕಾರಗಳು ಕೇವಲ ಘೋಷಣೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿದ್ದವು. “ಆಡದೇ ಮಾಡುವವ ರೂಢಿಯೊಳಗುತ್ತಮನು” ಎಂಬ ಮಾತಿನಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ರೈತಪರ ಎಂಬುದೀಗ ಜನರ ಅರಿವಿಗೂ ಬರುವಂತಾಗಿದೆ.

ರಾಜ್ಯದಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂಪಾಯಿ ಪರಿಹಾರ ವಿತರಣೆಗೆ ಸರಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೈಗೊಂಡಿರುವ ಐತಿಹಾಸಿಕ ನಿರ್ಧಾರ ಇದಾಗಿದೆ. ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕ ಹೆಜ್ಜೆ ಇಡಲಾಗಿದೆ.

ಒಣಬೇಸಾಯ – ದ್ವಿಗುಣ ಮೊತ್ತ: ಒಂದು ಹೆಕ್ಟೇರ್ ಒಣ ಬೇಸಾಯ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ (ಎನ್.ಡಿ.ಆರ್.ಎಫ್) ನಿಯಮದ ಪ್ರಕಾರ ನಿಗದಿಯಾಗಿರುವ ಪರಿಹಾರದ ಮೊತ್ತ 6,800 ರೂಪಾಯಿ ಮಾತ್ರ ಇದೆ. ಈ ಪರಿಹಾರ ಮೊತ್ತ ಕಡಿಮೆಯಾಗುತ್ತದೆ ಹಾಗೂ ಇದನ್ನು ಹೆಚ್ವಿಸಬೇಕೆಂಬ ತಮ್ಮ ಆಶಯವನ್ನು ಬಸವರಾಜ ಬೊಮ್ಮಾಯಿ ಜಾರಿಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈ ಮೊತ್ತಕ್ಕೆ ಅಧಿಕವಾಗಿ ತನ್ನ ಬೊಕ್ಕಸದಿಂದ 6,800 ರೂಪಾಯಿ ಕೊಡಲು ನಿರ್ಧಾರ ಮಾಡಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿವೃಷ್ಟಿ ಹಾಗೂ ಬೆಳೆಹಾನಿ ಮೇಲಿನ ಚರ್ಚೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಇದೊಂದು ಮಹತ್ವಪೂರ್ಣ ನಿರ್ಣಯವಾಗಿದ್ದು, ಕೇವಲ ಬಾಯಿ ಮಾತಿನ ನಿರ್ಧಾರ ಇದಲ್ಲ ಎಂಬುದಕ್ಕೆ ಹಣಕಾಸು ಮೀಸಲಿಟ್ಟಿರುವುದೇ ಸಾಕ್ಷಿಯಾಗಿದೆ. ಇದರಿಂದಾಗಿ ಒಟ್ಟು 1 ಹೆಕ್ಟೇರ್ ಒಣಬೇಸಾಯದಲ್ಲಿನ ಬೆಳೆಹಾನಿಗೆ 13,600 ರೂಪಾಯಿ ಬೆಳೆ ಪರಿಹಾರ ಲಭಿಸಲಿದೆ.

ನೀರಾವರಿ ಪ್ರದೇಶ – ಹೆಚ್ಚುವರಿ 11,500 ರೂಪಾಯಿ: ಅದೇ ರೀತಿ ನೀರಾವರಿ ಪ್ರದೇಶದ ಒಂದು ಹೆಕ್ಟೇರ್ ಬೆಳೆ ಹಾನಿಗೆ 13,500 ರೂಪಾಯಿ ನಿಗದಿಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 11,500 ರೂಪಾಯಿ ಸೇರಿಸಿ ಒಟ್ಟು 25,000 ಬೆಳೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಒಟ್ಟು 12.69 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.

ತೋಟಗಾರಿಕೆ ಬೆಳೆ – 28,000 ರೂಪಾಯಿ: ತೋಟಗಾರಿಕೆಯ ಒಂದು ಹೆಕ್ಟೇರ್ ಬೆಳೆ ಹಾನಿಗೆ 18,000 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 10,000 ರೂಪಾಯಿ ನೀಡಲು ನಿರ್ಧಾರ ಮಾಡಿದ್ದು, ಇದರಿಂದ ಪ್ರತಿ ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಗೆ ಒಟ್ಟು 28,000 ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ.

1,200 ಕೋಟಿ ರೂಪಾಯಿ ಹೆಚ್ಚುವರಿ ಹೊರೆ: ರಾಜ್ಯ ಸರ್ಕಾರ ಕೋವಿಡ್ ಮತ್ತು ಆರ್ಥಿಕ ತೊಂದರೆ ನಡುವೆಯೂ ಈ ನಿರ್ಧಾರ ಕೈಗೊಂಡಿದೆ. ನಾಡಿನ ಬೆನ್ನೆಲುಬಾದ ರೈತರ ನೆರವಿಗೆ ನಿಲ್ಲುವ ಪ್ರಮುಖ ನಿರ್ಧಾರ ಇದಾಗಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ರೈತಪರ ಎಂಬುದು ಮತ್ತೆ ಜಗಜ್ಜಾಹೀರಾಗಿದೆ. ಈ ಹೆಚ್ಚುವರಿ ಮೊತ್ತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟು 1,200 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರೈತರ ಮಕ್ಕಳಿಗೆ ಶಿಷ್ಯವೇತನ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ ರೈತರ ಮಕ್ಕಳಿಗೆ ಒಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತಂದಿದೆ.

ಇದರಡಿ ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವ ಬಾಲಕರಿಗೆ 2,500 ಮತ್ತು ಬಾಲಕಿಯರಿಗೆ ತಲಾ 3,000 ರೂಪಾಯಿ ಶಿಷ್ಯವೇತನ ದೊರಕಲಿದೆ. ಪದವಿ, ಎಂಬಿಬಿಎಸ್, ಎಂಜಿನಿಯರಿಂಗ್ ಪದವಿ ಹಾಗೂ ಪದವಿಗೆ ಸಮನಾದ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ತಲಾ 5,000 ಮತ್ತು ವಿದ್ಯಾರ್ಥಿನಿಯರಿಗೆ ತಲಾ 5,500 ರೂಪಾಯಿ ಶಿಷ್ಯವೇತನ ಪ್ರಕಟಿಸಲಾಗಿದೆ. ಅಲ್ಲದೆ, ಕಾನೂನು ಪದವಿ, ಅರೆ ವೈದ್ಯಕೀಯ, ಬಿ.ಫಾರ್ಮಾ, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 7,500 ಮತ್ತು ವಿದ್ಯಾರ್ಥಿನಿಯರಿಗೆ 8,000 ಶಿಷ್ಯವೇತನ ನೀಡಲಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 10,000, ವಿದ್ಯಾರ್ಥಿನಿಯರಿಗೆ 11,000 ಶಿಷ್ಯವೇತನ ಘೋಷಿಸಲಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳು, ನಾಡಿನ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನದ ಜೊತೆಗೆ ಅನ್ನದಾತನ ಮತ್ತು ಅನ್ನದಾತನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಶಯವನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಈಡೇರಿಸಲು ಕಟಿಬದ್ಧ ಎಂಬುದನ್ನು ತಿಳಿಸುವಂತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಎಲ್ಲಾ ರೈತಪರ ಯೋಜನೆಗಳನ್ನು ಘೋಷಿಸುವ ಮೂಲಕ ಬಿಜೆಪಿ ಆಡಳಿತ ರೈತಪರ, ಜನಪರ, ಅಭಿವೃದ್ಧಿ ಪರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ ನಿಶ್ಚಿತ : ಗುರುಪ್ರಸಾದ್ ಶೆಟ್ಟಿ ಕಟಪಾಡಿ


ಯಾವುದೇ ಮೂಲಭೂತ ಸೌಕರ್ಯಗಳ ಪೂರ್ವಸಿದ್ಧತೆ ಇಲ್ಲದೇ ಕೇವಲ ರಾಜಕೀಯ ಲಾಭದ ಲೆಕ್ಕಾಚಾರದಿಂದ ಕಾಪು ಪುರಸಭೆಯನ್ನು ಸೃಷ್ಠಿಸಿ 100 ಕೋಟಿ ರೂಪಾಯಿ ಅನುದಾನ ತರುತ್ತೇನೆಂದು ಎಲ್ಲೆಡೆ ಪುಕ್ಕಟೆ ಪ್ರಚಾರಗಿಟ್ಟಿಸಿಕೊಂಡು, ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳದ ಮಾಜಿ ಸಚಿವ ಹಾಗೂ ಕಾಪು ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು ಕಾಪು ಪುರಸಭಾ ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಅವ್ಯವಸ್ಥೆಗೆ ಮೂಲ ಕಾರಣರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.

ಇಂದು ಗ್ರಾಮ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಹಿತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಜನಪರ ಮತ್ತು ಅಭಿವೃದ್ಧಿಪರ ಆಡಳಿತವಿರುವ ಕಾಲಘಟ್ಟದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿ ಬಿಜೆಪಿ ಆಡಳಿತದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಕಾಪು ಪುರಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಚಿವರು, ಸಂಸದರು, ಶಾಸಕರು, ಪಕ್ಷದ ರಾಷ್ಟ್ರೀಯ, ಅಂತರ್ ರಾಜ್ಯ, ರಾಜ್ಯ, ಜಿಲ್ಲಾ ಮುಖಂಡರ ಸಹಿತ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಯಾವುದೇ ಅಪಪ್ರಚಾರಗಳ ಗಿಮಿಕ್ ಪ್ರಯೋಜನಕ್ಕೆ ಬಾರದು.

ಅಭಿವೃದ್ಧಿಯ ಮೂಲ ಮಂತ್ರದೊಂದಿಗೆ ನಿರ್ದಿಷ್ಟ ಯೋಜನೆಗಳ ಅನುಷ್ಠಾನದ ಜೊತೆಗೆ ನವ ಕಾಪು ನಿರ್ಮಾಣದ ದೃಢ ಸಂಕಲ್ಪ ಹೊಂದಿರುವ ಬಿಜೆಪಿ ಈ ಚುನಾವಣೆಯಲ್ಲಿ ಪ್ರಬುದ್ಧ ಮತದಾರರ ಆಶೀರ್ವಾದದಿಂದ ಕಾಪು ಪುರಸಭೆಯ ಆಡಳಿತವನ್ನು ಬಹುಮತದಿಂದ ತನ್ನ ತೆಕ್ಕೆಗೆ ವಹಿಸಿಕೊಳ್ಳುವುದು ನಿಶ್ಚಿತ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರದಿಂದ ಮತಾಂತರ ನಿಷೇಧ ಕಾಯ್ದೆ ಮಂಡನೆ ಐತಿಹಾಸಿಕ : ಜಿಲ್ಲಾ ಬಿಜೆಪಿ ಸ್ವಾಗತ



ಉಡುಪಿ: ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ನ್ನು ರಾಜ್ಯ ವಿಧಾನ ಸಭೆಯಲ್ಲಿ ಮಂಡಿಸಿರುವ ನಡೆ ಐತಿಹಾಸಿಕ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಮಂಡಿಸಿರುವ ಈ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ನ್ನು ರಾಜ್ಯ ವಿಧಾನ ಸಭೆಯಲ್ಲಿ ಮಂಡಿಸಿರುವುದು ಸ್ವಾಗತಾರ್ಹ. ಈ ಮೂಲಕ ಬಿಜೆಪಿ ನುಡಿದಂತೆ ನಡೆದಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಶ್ರೀ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ ಈ ಎಲ್ಲಾ ಅಂಶಗಳನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದೀಗ ಹೇಳಿದ್ದನ್ನೇ ಮಾಡಿದೆ. ಇತ್ತೀಚೆಗೆ ಸಮಾಜದ ಮಧ್ಯೆ ಅಪರಿಮಿತ ಬಲವಂತದ ಮತಾಂತರವಾಗುತ್ತಿದ್ದರೂ ಕಾಂಗ್ರೆಸ್ ಮಾತ್ರ ಏನೇನೂ ನಡೆದಿಲ್ಲ ಎಂಬಂತೆ ಆಷಾಡಬೂತಿತನ ಪ್ರದರ್ಶಿಸುತ್ತಿರುವುದು ವಿಪರ್ಯಾಸ.

ಮತಾಂತರವನ್ನು ವಿರೋಧಿಸಿದ್ಧ ಗಾಂಧೀಜಿ ಮತಾಂತರ ಎಂದರೆ ದೇಶಾಂತರ ಎಂದು ಪ್ರತಿಪಾದಿಸಿರುವುದನ್ನು ಕಾಂಗ್ರೆಸ್ ಮರೆತಂತಿದೆ. ಮಹಾತ್ಮ ಗಾಂಧೀಜಿಯ ಎಲ್ಲಾ ಮೌಲ್ಯಗಳಿಗೆ ತಿಲಾಂಜಲಿ ನೀಡಿರುವ ಕಾಂಗ್ರೆಸ್ ಇದೀಗ ವಿಧಾನ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕಾಂಗ್ರೆಸ್ ನೆಹರೂ ಕಾಲದಿಂದ ರಾಹುಲ್ ಗಾಂಧಿಯ ತನಕ ಹಿಂದು ಮತ್ತು ಹಿಂದುತ್ವದ ಬಗ್ಗೆ ಯಾವುದೇ ಕಾಳಜಿ ವಹಿಸದೇ ನಿರ್ಲಕ್ಷ ಧೋರಣೆ ಅನುಸರಿಸಿರುವುದರಿಂದ ಕಾಂಗ್ರೆಸ್ಸಿಗೆ ಅಧಃಪತನದ ದುರ್ಗತಿ ಬಂದೊದಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಆಗಸದಲ್ಲಿ ಅಚ್ಚರಿಯ ದೃಶ್ಯ, ಆಕಾಶದಲ್ಲಿಗೋಚರಿಸಿದ ಬೆಳಕಿನ ಸರಮಾಲೆ



ಉಡುಪಿ: ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ನಿನ್ನೆ ಸಂಜೆ 7ರ ಸುಮಾರಿಗೆ ಆಗಸದಲ್ಲಿ ಬೆಳಕಿನ ಸರಮಾಲೆ ಗೋಚರಿಸಿದೆ. ಫಳಫಳ ಹೊಳೆಯುವ ಈ ಬೆಳ್ಳಿಚುಕ್ಕಿಗಳು ಸರದಿ ಸಾಲಿನಲ್ಲಿ ಸಾಗುತ್ತಿದ್ದುದನ್ನು ಜನರು ಕೌತುಕದಿಂದ ವೀಕ್ಷಿಸಿದರು.

ಏನಿದು ಬೆಳಕಿನ ಸರಮಾಲೆ.?
ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ‘ಸ್ಪೇಸ್ ಎಕ್ಸ್’ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ‘ಸ್ಟಾರ್ ಲಿಂಕ್’ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯ‌ಲ್ಲಿ ಭೂಮಿಯನ್ನು ಸುತ್ತುತ್ತಿವೆ.

2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಜಿಲ್ಲೆಯ ಆಗಸದಲ್ಲಿ ಸೋಮವಾರ ಗೋಚರಗೊಂಡಿದೆ.

ಫಳಫಳ ಹೊಳೆಯುತ್ತಾ ನಿಶ್ಶಬ್ದವಾಗಿ ಸಾಗಿದ ಉಪಗ್ರಹಗಳ ದೃಶ್ಯವನ್ನು ಮೊಬೈಲ್‌ ಫೋನ್‌ಗಳಲ್ಲಿ ಸೆರೆ ಹಿಡಿದ ಜನ ಅಚ್ಚರಿ ವ್ಯಕ್ತಪಡಿಸಿದರು. ಉಪಗ್ರಹಗಳ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂದು (ಡಿ.21) ಸಂಜೆ 7.15 ರ ಸುಮಾರಿಗೆ ಆಗಸದಲ್ಲಿ ಸರಣಿ ಉಪಗ್ರಹಗಳ ಮಾಲೆ ಗೋಚರವಾಗಲಿದೆ ಎಂದು ತಿಳಿದುಬಂದಿದೆ.

Design a site like this with WordPress.com
Get started