ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ ನಡೆಸುವ ಯಾವುದೇ ನೈತಿಕತೆ ಇಲ್ಲ : ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಗ್ಯಾರಂಟಿಗಳ ಆಸೆ ತೋರಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಯದ್ವಾತದ್ವಾ ಏರಿಸಿ ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಗೆ ಅಂತಿಮ ಹಂತ ತಲುಪಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಅಣಕಿಸಿ ಏಪ್ರಿಲ್ ಫೂಲ್ ದಿನವನ್ನು ಆಚರಿಸುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕ್ರಿಯಾಶೀಲ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಸಹಿತ ಉಡುಪಿ ಜಿಲ್ಲೆಯಾದ್ಯoತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ತೊಡಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಕೆಲವು ಕಾಮಗಾರಿಗಳ ವಿಳಂಬದ ನೈಜ ಕಾರಣ ಹಾಗೂ ಪ್ರಸಕ್ತ ಪ್ರಗತಿಯ ಕುರಿತು ಅಗತ್ಯ ಮಾಹಿತಿಯನ್ನು ಪ್ರಚುರಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಸಂಸದರೊಂದಿಗೆ ಕೈಜೋಡಿಸಿದ್ದರೂ, ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವೆ ಈ ಕುರಿತು ಏನು ಜವಾಬ್ದಾರಿ ನಿರ್ವಹಿಸಿದ್ದಾರೆ ಎಂಬುದನ್ನು ಪ್ರಶ್ನಿಸದೆ ಜಿಲ್ಲೆಯಾದ್ಯoತ ದಾಖಲೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಕಾಂಗ್ರೆಸಿಗರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಅಂತಿಮ ಹಂತದಲ್ಲಿ ಎಪ್ರಿಲ್ ಫೂಲ್ ಎಂಬ ಪ್ರತಿಭಟನೆಯ ಪ್ರಹಸನದಲ್ಲಿ ತಮ್ಮ ಮೂರ್ಖತನವನ್ನು ಜಗಜ್ಜಾಹೀರುಪಡಿಸಿರುವುದು ಹಾಸ್ಯಾಸ್ಪದವಾಗಿದೆ.

ಪ್ರತಿಭಟನೆಯ ಹೆಸರಿನಲ್ಲಿ ಪ್ರಧಾನಿ ಸಹಿತ ಸಂಸದರ, ಮಾಜಿ ಸಂಸದರ ಮುಖವಾಡವನ್ನು ಧರಿಸಿ ಅಣಕಿಸಿರುವುದು ಹಾಗೂ ರೈಲ್ವೆ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅನಾಗರಿಕ ಬರಹಗಳನ್ನು ಬರೆದಿರುವುದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನವನ್ನು ಸಾಬೀತುಪಡಿಸಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನವನ್ನು ರೂಪಿಸಿದೆ. ವಿಪರೀತ ಬೆಲೆ ಏರಿಕೆ, ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯನ್ನು ಕಡೆಗಣಿಸಿರುವುದು, ಸಾರ್ವಜನಿಕ ಗುತ್ತಿಗೆಯಲ್ಲಿ ಸಂವಿಧಾನ ಬಾಹಿರವಾಗಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಿರುವುದು, ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣದ ದುರುಪಯೋಗ, ಸ್ಮಾರ್ಟ್ ಮೀಟರ್ ದಂಧೆ ಸಹಿತ ರಾಜ್ಯ ಸರಕಾರದ ಹಲವಾರು ಹಗರಣಗಳ ವಿರುದ್ಧ ಕಾಂಗ್ರೆಸಿಗರು ಸ್ವಯಂ ಪ್ರತಿಭಟನೆಯನ್ನು ನಡೆಸಿ ತಮ್ಮ ನೈತಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದು ಉತ್ತಮ.

ಕೇವಲ ಅಧಿಕಾರದ ಲಾಲಸೆಯಿಂದ ಗ್ಯಾರಂಟಿಗಳ ಮಂಕು ಬೂದಿ ಎರಚಿ ಜನರನ್ನು ಫೂಲ್ ಮಾಡಿರುವ ಕಾಂಗ್ರೆಸ್ ಸರಕಾರ ದಿನನಿತ್ಯ ಬೆಲೆ ಏರಿಕೆಯ ಶಾಕ್ ನೀಡುತ್ತಾ ವಿವಿಧ ರೀತಿಯ ಸುಲಿಗೆಯಲ್ಲಿ ತೊಡಗಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಜನ ವಿರೋಧಿ ಭ್ರಷ್ಟ ಕಾಂಗ್ರೆಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ಜನರನ್ನು ಏಪ್ರಿಲ್ ಫೂಲ್ ಮಾಡುವ ದೊಂಬರಾಟ – ಶ್ರೀಕಾಂತ ನಾಯಕ್


ಉಡುಪಿ:ನಿನ್ನೆಯಷ್ಟೇ ಕಾಂಗ್ರೆಸ್ ಪುಢಾರಿಗಳ ಒಕ್ಕೂಟ ಇಂದ್ರಾಳಿ ಸೇತುವೆ ಬಗ್ಗೆ ಪ್ರತಿಭಟನಾ ದೊಂಬರಾಟ ನಡೆಸಿದ್ದನ್ನು ಕಂಡಿದ್ದೇವೆ. ನಿನ್ನೆಯ ದಿನದ ಮಂಗಳವಾರ, ನಮ್ಮಲ್ಲಿರುವ ಪಧ್ಧತಿ, ನಂಬಿಕೆಯಂತೆ ಯಂತೆ ಕೂದಲು ಕತ್ತರಿಸುವುದು ನಿಷಿಧ್ಧ ಮತ್ತು ಅಶುಭ. ಅದರಲ್ಲೂ ತಲೆಯನ್ನೇ ಬೋಳಿಸಿ ಭಂಡತನ ಮೆರೆದ ಇವರಿಗೆ ಏನು ಹೇಳಬೇಕೋ ತಿಳಿಯದು. ಅದಿರಲಿ ಅಲ್ಲಿ ಸೇತುವೆ ಶೀಘ್ರದಲ್ಲಿ ಆಗಬೇಕು, ವಿಳಂಬವಾದುದಕ್ಕೆ ಪ್ರತಿಯೊಬ್ಬರೂ ಅಸಮಧಾನ ವ್ಯಕ್ತಪಡಿಸೋದು ಸಹಜ. ಇದರ ಬಗ್ಗೆ ಎರಡು ಮಾತಿಲ್ಲ.‌ಇನ್ನು ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ ಪ್ರತಿಭಟನೆ ಎನ್ನುವುದೂ ಸಹಜ ಪ್ರಕ್ರಿಯೆ. ಆದರೆ ಇವರು ನಿಜವಾಗಿ ಪ್ರತಿಭಟಿಸಬೇಕಾದುದು ಯಾರ ವಿರುಧ್ಧ? ಸಂಸದರ ವಿರುಧ್ಧವೋ ಅಥವಾ ಇವರದ್ದೇ ಆಡಳಿತದ ಜಿಲ್ಲಾಡಳಿತದ ವಿರುಧ್ಧವೋ? ಯಾವುದಾದರೂ‌ ಕಾಮಗಾರಿಗಳು, ಜನೋಪಯೋಗಿ ಕೆಲಸಗಳಿಗೆ ಬೇಕಾಗುವ ಸಂಪನ್ಮೂಲದ ವ್ವವಸ್ಥೆ ಹಾಗೂ ಅದಕ್ಕಿರುವ ಅಡೆತಡೆಗಳನ್ನು ನಿವಾರಿಸುವ ಕೆಲಸ ಜನಪ್ರತಿನಿಧಿಯದ್ದು.‌ ಅದನ್ನು ನಮ್ಮ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯನವರು ಪ್ರಾಮಾಣಿಕವಾಗಿ ಮಾಡಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.‌ ಎಲ್ಲ ವ್ವವಸ್ಥೆಗಳಾದ ಮೇಲೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಯಾರದ್ದು? ಅದಕ್ಕೆ ಅಂತಲೇ ಕಾರ್ಯಾಂಗ ವ್ಯವಸ್ಥೆ ಇರುವುದಲ್ಲವೇ? ಅನುಷ್ಠಾನವನ್ನೂ ಜನಪ್ರತಿನಿಧಿಗಳೇ ಮಾಡಬೇಕಾದರೆ ಕಾರ್ಯಾಂಗ ವ್ಯವಸ್ಥೆ ಇರುವುದು ಯಾಕೆ? ಇಂತಹ ಒಂದು ಸಣ್ಣ ಪ್ರಶ್ನೆಯೂ ಪ್ರತಿಭಟನಾಕಾರರಿಗೆ ಅರ್ಥವಾಗುವುದಿಲ್ಲವೆಂದಾರೆ ಅವರು ಏಪ್ರಿಲ್ ಫುಲ್ ದಿನಾಚರಣೆ ಮಾಡುವ ಮೂರ್ಖರೇ ಎನ್ನಬಹುದಲ್ಲವೇ? ಸಾಧ್ಯವಾದರೆ ನಿಮ್ಮ ಅಪರೂಪದ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಬ್ಬಾಳ್ಕರ್ ರವರನ್ನು ನಿನ್ನೆ ತಂದ ಡೋಳ್ಳು, ನಾಸಿಕ್ ಬ್ಯಾಂಡ್  ಇತ್ಯಾದಿಗಳನ್ನು ಬಾರಿಸಿ ಸ್ವಾಗತಿಸಿ ಕುಳ್ಳಿರಿಸಿ ಅವರ ಮೇಲೆ ಒತ್ತಡ ಹೇರಿ. ಆ ಮೂಲಕ ಸರಸತ್ತಂತಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ. ಸೇತುವೆ ಆಗಿದ್ದರೆ ಜಿಲ್ಲಾಧಿಕಾರಿಗಳನ್ನು ನೇರ ಹೊಣೆ ಮಾಡಿ. ಅದಕ್ಕೆ ಏನಾದರೂ ಅಡೆ ತಡೆ ಅಥವಾ ಹಣದ ಕೊರತೆ ಇದ್ದರೆ ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಂದಲೇ ಹೇಳಿಕೆ ನೀಡಿಸಿ. ಹಾಗೇನಾದರೂ ಇದ್ದರೆ ಅದನ್ನು ನಿವಾರಿಸುವ ಕೆಲಸವನ್ನು ಖಂಡಿತಾ ನಮ್ಮ ಸಂಸದರು ಮಾಡುವರು. ಅದು ಬಿಟ್ಟು ಜನರನ್ನು ಮರುಳು ಮಾಡಲು ಈ ರೀತಿಯ ನಾಟಕವಾಡಿದರೆ ನೀವು ನಿಮ್ಮನ್ನು ಬುದ್ಧಿವಂತರೆಂದು ಕೊಂಡರೂ ಜನ ಅಸಹ್ಯಪಡುವರು. ನಿಮ್ಮದೇ ಪಕ್ಷದ ಆಡಳಿತದ ಸರಕಾರ ಇಂದು ಎಲ್ಲದಕ್ಕೂ ದರ ಏರಿಸಿ ಬಡವರ ರಕ್ತ ಹೀರಿ ಉಸಿರಾಡುತ್ತಿದೆ. ಹಾಲಿನ ದರ ಏರಿ ನಾಲ್ಕು ದಿನ ಆಗಿಲ್ಲ ನಿನ್ನೆಯಷ್ಟೇ ಪುನಃ ಡೀಸೆಲ್ ದರ ಹೆಚ್ಚಿಸಿದೆ. ದಿನ ಬೆಳಗ್ಗೆದ್ದು ಮೊದಲು ಪತ್ರಿಕೆ ನೋಡಿ ಯಾವದಕ್ಕೆ ದರ ಹೆಚ್ಚಿಸಿದ್ದಾರೆ ಅಂತ ದುಗುಡದಿಂದ ಪತ್ರಿಕೆ ಬಿಡಿಸುವ ಭಯಾನಕ ಪರಿಸ್ಥಿತಿ ಇದೆ. ಅದರ ಬಗ್ಗೆ ಸಾಧ್ಯವಾದರೆ ಮಾತನಾಡಿ. ಭಾಗ್ಯಗಳನ್ನು‌ಕೊಟ್ಟ ಕೂಡಲೇ ನೀವು ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದರೆ ಜನ ಪಾಠ ಕಲಿಸುವ ತನಕ ಹಾಗೇ ಇರಿ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ, ಕಾಪು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ  ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ? : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ




ಉಡುಪಿ: ಇತ್ತೀಚಿಗೆ ನಡೆದ ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನದೇ ಧರ್ಮದ ಯುವತಿಯನ್ನು ಅಪಹರಿಸಿ ಬ್ಲಾಕ್ ಮೇಲ್ ಮಾಡಿ ಲವ್ ಜಿಹಾದ್ ಮಾಡಲು ಹೊರಟಿರುವ ಅಕ್ರಮ್ ಎಂಬ ರೌಡಿ ಶೀಟರ್ ನನ್ನು ಬಂಧಿಸಲು ಮೀನ ಮೇಷ ಎಣಿಸುತ್ತಾ ಕಾಲ ಹರಣ ಮಾಡುತ್ತಿರುವ ಉಡುಪಿ ನಗರ ಪೊಲೀಸ್ ಠಾಣೆಯ ವರ್ತನೆಯನ್ನು ಖಂಡಿಸದೇ ದಿವ್ಯ ಮೌನ ವಹಿಸಿರುವ ಪ್ರಶಾಂತ್ ಜತ್ತನ್ ನಡೆಯನ್ನು ಅವಲೋಕಿಸಿದರೆ ಪರೋಕ್ಷವಾಗಿ ಅವರು ಲವ್ ಜಿಹಾದ್ ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ರುಡಾಲ್ಪ್ ಡಿಸೋಜ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಪರ – ಕ್ರೈಸ್ತರ ಪರ ಎಂದು ವಾದಿಸುವ ಸರಕಾರವಿದ್ದರೂ, ಅಪಹರಣಗೊಂಡ ಯುವತಿಯ ಹೆತ್ತವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಅವರಿಗೆ ಯಾವುದೇ ಸಹಾಯ ಮಾಡದೇ ಒಂದೇ ಕೋಮಿನ ಒಲೈಕೆಯಲ್ಲಿ ನಿರತರಾಗಿರುವ ಪ್ರಶಾಂತ್ ಜತ್ತನ್ ವರ್ತನೆಯನ್ನು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕೂಡಲೇ ಆರೋಪಿಯನ್ನು ಬಂಧಿಸಿ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ಗೆ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರ ಖಂಡನೆ



ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ಬ್ಲಾಕ್ ಮೇಲ್ ತಂತ್ರದ ಮೂಲಕ ಹುಡುಗಿಯ ಅಪಹರಣ ನಡೆದಿರುವ ಕುರಿತು ಸ್ವತಃ ಹುಡುಗಿಯ ಹೆತ್ತವರು ಪ್ರಕರಣ ದಾಖಲಿಸಿದ್ದರೂ ಆರೋಪಿಯನ್ನು ಬಂಧಿಸಲು ಮೀನ ಮೇಷ ಎಣಿಸುತ್ತಾ ವಿಳಂಬ ಧೋರಣೆ ಅನುಸರಿಸುತ್ತಿರುವ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರ ವರ್ತನೆಗೆ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ತೊಂದರೆ ಸಂಭವಿಸಿದಾಗ ಅದನ್ನು ಧರ್ಮಾತೀತವಾಗಿ ತೀವ್ರವಾಗಿ ಖಂಡಿಸಿರುವುದನ್ನು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಸ್ವಾಗತಿಸಿದೆ.

ಪೊಲೀಸ್ ಇಲಾಖೆ ವೃಥಾ ಕಾಲಹರಣ ಮಾಡದೆ ಸದ್ರಿ ಪ್ರಕರಣದ ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಸತ್ಯಾಸತ್ಯತೆಯನ್ನು ಅರಿತುಕೊಂಡು  ಆರೋಪಿ ಮತ್ತು ಇದರ ಹಿಂದೆ ಇರುವ ಕಾಣದ ಕೈಗಳ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಬೇಕು ಹಾಗೂ ಅಪರಾಧಿಗೆ ಕಾನೂನಾತ್ಮಕ ಸೂಕ್ತ ಶಿಕ್ಷೆಯನ್ನು ವಿಧಿಸಬೇಕು ಎಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಪ್ ಡಿಸೋಜ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

BSW ಪದವಿ ಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ಕು.ಶ್ರೀನಿಧಿ ಯವರಿಗೆ ಹುಟ್ಟೂರ ಸನ್ಮಾನ

ಕಾಪು: ಅಲೆವೂರು ರಾಮಪುರದ ಶ್ರೀಪತಿ‌ ಆಚಾರ್ಯ ಮತ್ತು ಇಂದಿರಾ ಇವರ ಪುತ್ರಿ ಕು. ಶ್ರೀನಿಧಿ ಬಿ ಎಸ್ ರವರು ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ ಡಬ್ಲ್ಯೂ ಪದವಿ ಪರೀಕ್ಷೆಯಲ್ಲಿ ಪ್ರಥಮ   ರ‍್ಯಾಂಕ್ ಪಡೆದಿದ್ದು‌ ಅವರನ್ನು ಅವರ ಸ್ವಗ್ರಹದಲ್ಲಿ ಬೂತ್ ಅಧ್ಯಕ್ಷರಾದ ನಾರಾಯಣ ಆಚಾರ್ಯ‌ ಇವರ ನೇತ್ರತ್ವದಲ್ಲಿ ಸನ್ಮಾನ ಮಾಡಿ ಗೌರವಿಸಿ  ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ‌ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ  ಶ್ರೀಕಾಂತ್ ನಾಯಕ್,ಹಿರಿಯರಾದ ಅಶೋಕ್ ಶೆಟ್ಟಿಗಾರ್, ಪಕ್ಷದ ಪ್ರಮುಖರಾದ ಅರುಣ್ ಆಚಾರ್ಯ, ಹರೀಶ್ ಶೆಟ್ಟಿಗಾರ್, ಸುಧಾಮ ರಾಮಪುರ, ಉಮೇಶ್ ಸೇರಿಗಾರ್, ಸಂದೀಪ್ ಕೊರಂಗ್ರಪಾಡಿ, ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಮಾ.15: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಬೇಟಿ





ಉಡುಪಿ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಮಾ.15 ಶನಿವಾರ ಮಧ್ಯಾಹ್ನ ಗಂಟೆ 3.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಬೇಟಿ ನೀಡಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾ.15ರ ಬೆಳಿಗ್ಗೆ ಗಂಟೆ 9.30ಕ್ಕೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹಾಗೂ ಬೆಳಿಗ್ಗೆ ಗಂಟೆ 11.00ಕ್ಕೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬೇಟಿ ನೀಡಲಿದ್ದಾರೆ. ಸಂಜೆ ಗಂಟೆ 4.45ಕ್ಕೆ ಬಿಜೆಪಿ ಹಿರಿಯ ನಾಯಕ ದಿ! ಸೋಮಶೇಖರ್ ಭಟ್ ಅವರ ನಿವಾಸಕ್ಕೆ ಬೇಟಿ ನೀಡಿ, ಸಂಜೆ ಗಂಟೆ 6.30ಕ್ಕೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಮಿಯ್ಯಾರು ಲವ-ಕುಶ ಬಯಲು ಕಂಬಳವನ್ನು ವೀಕ್ಷಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.8 : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ‘ವಿಶ್ವ ಮಹಿಳಾ ದಿನಾಚರಣೆ’, ಮಹಿಳೆಯರಿಗಾಗಿ ‘ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ’




ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಎನ್.ಸಿ.ಡಿ. ವಿಭಾಗ, ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ, ಸಮುದಾಯ ವೈದ್ಯಕೀಯ ವಿಭಾಗ ಕೆ.ಎಮ್.ಸಿ. ದಂತ ವೈದ್ಯಕೀಯ ವಿಭಾಗ ಮಣಿಪಾಲ ಹಾಗೂ ಅಪ್ಪು ಅಭಿಮಾನಿಗಳ ಬಳಗ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ‘ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ’ವು ಮಾ.8 ಶನಿವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 12.30ರ ವರೆಗೆ ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ತಿಳಿಸಿದ್ದಾರೆ.

ಈ ಉಚಿತ ‘ಆರೋಗ್ಯ ತಪಾಸಣಾ ಶಿಬಿರ’ದಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ತಪಾಸಣೆಯ ಸಹಿತ ಗರ್ಭಕೋಶದ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಮೂಳೆ ಸಾಂದ್ರತೆ, ಜನರಲ್ ಮೆಡಿಸಿನ್, ಸ್ಕಿನ್, ಇ.ಎನ್.ಟಿ, ಕಣ್ಣು ಹಾಗೂ ಹಲ್ಲಿನ ತಪಾಸಣೆಯ ಸೇವೆಗಳು ಲಭ್ಯವಿದೆ.

ವಿಶೇಷವಾಗಿ ಅಂಗಾಗ ದಾನದ ಕುರಿತು ಮಾಹಿತಿ ಹಾಗೂ ನೊಂದಾವಣೆ ನಡೆಯಲಿದೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.2 : ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಉಡುಪಿಗೆ




ಉಡುಪಿ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಮಾ.2 ರವಿವಾರ ಉಡುಪಿಗೆ ಬೇಟಿ ನೀಡಲಿದ್ದು, ಮಧ್ಯಾಹ್ನ ಗಂಟೆ 3.00ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಆಗಮಿಸಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ. ಹಣ ದುರ್ಬಳಕೆ ಮಾಡಿದ ದಲಿತ ದ್ರೋಹಿ’ ರಾಜ್ಯ ಸರಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ : ಕಿಶೋರ್ ಕುಮಾರ್ ಕುಂದಾಪುರ




ಉಡುಪಿ:ಅನುಸೂಚಿತ ಜಾತಿ ಮತ್ತು ಗಿರಿಜನ ಉಪಯೋಜನೆಯ (ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ.) ಸುಮಾರು ರೂ 25,000 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿರುವ ದಲಿತ ದ್ರೋಹಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಫೆ.28ರಂದು ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಅವರು ಸೋಮವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಾಂದೋಲನವನ್ನು ರೂಪಿಸಿರುವ ರಾಜ್ಯ ಬಿಜೆಪಿ ಈಗಾಗಲೇ 14 ತಂಡಗಳನ್ನು ರಚಿಸಿದ್ದು, ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಮಣಿಪಾಲದ ರಜತಾದ್ರಿಯ ಬಳಿ ನಡೆಯುವ ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಆಗ್ರಹಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯ ತಂಡದ ಪ್ರಮುಖರಾದ ಸಂಸದ ರಮೇಶ್ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರು ಭಾಗವಹಿಸಲಿದ್ದಾರೆ.

ಫೆ.25ರಂದು ಉಡುಪಿ ಜಿಲ್ಲಾ ವ್ಯಾಪ್ತಿಯ ಕಾರ್ಕಳ, ಕಾಪು, ಉಡುಪಿ ನಗರ, ಉಡುಪಿ ಗ್ರಾಮಾಂತರ, ಕುಂದಾಪುರ ಮತ್ತು ಬೈಂದೂರು ಮಂಡಲಗಳಲ್ಲಿ ಪೂರ್ವಭಾವಿ ಸಭೆಗಳು ನಡೆಯಲಿದ್ದು, ಫೆ.28ರಂದು ನಡೆಯುವ ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಪೆರಣoಕಿಲ ಶ್ರೀಶ ನಾಯಕ್, ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸದಾನಂದ ಉಪ್ಪಿನಕುದ್ರು, ಸುರೇಶ್ ಶೆಟ್ಟಿ ಕಾಡೂರು, ಜಯರಾಮ ಸಾಲ್ಯಾನ್, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಸದಾನಂದ ಬಳ್ಕೂರ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಮೋರ್ಚಾಗಳ ಅಧ್ಯಕ್ಷರುಗಳಾದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ವಿಜಯ ಕೊಡವೂರು, ರುಡಾಲ್ಫ್ ಡಿಸೋಜ, ಪ್ರಧಾನ ಕಾರ್ಯದರ್ಶಿಗಳಾದ ಶಶಾಂಕ್ ಶಿವತ್ತಾಯ, ಶ್ರೀಕಾಂತ್ ಕಾಮತ್, ನಳಿನಿ ಪ್ರದೀಪ್ ರಾವ್, ಅನಿತಾ ಆರ್.ಕೆ., ಮಂಡಲ ಅಧ್ಯಕ್ಷರುಗಳಾದ ದಿನೇಶ್ ಅಮೀನ್, ರಾಜೀವ ಕುಲಾಲ್, ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಿ. ಶೆಟ್ಟಿ, ಸಚಿನ್ ಪೂಜಾರಿ, ಗೋಪಾಲಕೃಷ್ಣ ರಾವ್, ಸತೀಶ್ ಪೂಜಾರಿ ಬೋಳ, ಮಹೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ತಾಲೂಕು ಭಜನಾ ಪರಿಷತ್ತನ್ನು ವಲಯ ಮಟ್ಟದಿಂದ ಸದೃಢಗೊಳಿಸಲು ರಾಜೇಂದ್ರ ಕುಮಾರ್ ಬಸ್ರೂರು ಕರೆ



ಉಡುಪಿ : ಆತ್ಮವಿಶ್ವಾಸದ ವೃದ್ಧಿಯ ಜೊತೆಗೆ ಭಗವಂತನ ಸಾಕ್ಷಾತ್ಕಾರವನ್ನು ಕಂಡುಕೊಳ್ಳಲು ಇರುವ ಸುಲಭ ದಾರಿ ಭಜನೆ. ಇಂದು ಭಜನೆಯತ್ತ ಯುವ ಸಮುದಾಯದ ಸಹಿತ ಎಲ್ಲ ವರ್ಗದ ಜನತೆ ಆಕರ್ಷಿತರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ವಲಯಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಭಜನಾ ಮಂಡಳಿಗಳನ್ನು ಸಂಘಟಿಸುವ ಮೂಲಕ ಭಜನಾ ಪರಿಷತ್ತನ್ನು ಇನ್ನಷ್ಟು ಸದೃಢವಾಗಿ ಬೆಳೆಸಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹೇಳಿದರು.

ಅವರು ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಗತಿ ಸೌಧದಲ್ಲಿ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ದಾಸವರೇಣ್ಯರು ರಚಿಸಿರುವ ಅರ್ಥಗರ್ಭಿತ ಭಜನೆಗಳನ್ನು ಅರ್ಥೈಸಿಕೊಂಡು ಹಾಡಿದಾಗ ಅದರಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳ ಸಾರವನ್ನು ಅರಿಯಲು ಸಾಧ್ಯ ಎಂದ ಅವರು ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಭಜನಾ ಪರಿಷತ್ ಸಹಯೋಗದಲ್ಲಿ ರಾಜಾಂಗಣದಲ್ಲಿ 2 ಬಾರಿ ನಡೆದ ಯಶಸ್ವೀ ಸಹಸ್ರ ಕಂಠ ಗಾಯನದ ತರಬೇತಿಯೊಂದಿಗೆ ನೇತೃತ್ವವನ್ನು ವಹಿಸಿರುವ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಅವರು ಭಜನಾ ಪರಿಷತ್ತಿನ ಕೇಂದ್ರ ಸಮಿತಿಯಿಂದ ಭಜನಾ ತರಬೇತುದಾರರಾಗಿ ನಿಯುಕ್ತಿಗೊಂಡಿರುವ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.

ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಾತನಾಡಿ, ಮುಂದೆ ನಡೆಯಲಿರುವ ವಿಶೇಷ ಕಾರ್ಯಕ್ರಮದ ಪ್ರಯುಕ್ತ ವಲಯಗಳ ಮಟ್ಟದಲ್ಲಿ ಭಜನಾ ತರಬೇತಿ ನಡೆಯಲಿದ್ದು ಭಜಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ತಾಲೂಕು ಭಜನಾ ಪರಿಷತ್ ಸಹಯೋಗದೊಂದಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ವಿಜಯದಾಸರ ಆರಾಧನೆ, ಪುರಂದರದಾಸರ ಆರಾಧನೆ ಪ್ರಯುಕ್ತ ನಡೆದ ಸಹಸ್ರ ಕಂಠ ಗಾಯನ, ಸಪ್ತೋತ್ಸವದ ಅಂಗವಾಗಿ ರಥಬೀದಿಯಲ್ಲಿ ನಡೆದ ವಿಶೇಷ ಕುಣಿತದ ಭಜನೋತ್ಸವ ಸಹಿತ ಇನ್ನಿತರ ವಿಶೇಷ ಕಾರ್ಯಕ್ರಮಗಳ ವಿವರಗಳನ್ನು ನೀಡಿ ಮುಂದೆ ನಡೆಯಲಿರುವ ವಲಯ ಮಟ್ಟದ ಸಭೆ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ಹಾಗೂ ಭಜನಾ ಪರಿಷತ್ ವಲಯಗಳ ಸಂಯೋಜಕರು ಉಪಸ್ಥಿತರಿದ್ದರು.

ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಜನಾ ಪರಿಷತ್ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು.

Design a site like this with WordPress.com
Get started