ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ತೆರವು ರಾಜ್ಯ ಕಾಂಗ್ರೆಸ್ ಸರಕಾರದ ಕೀಳು ಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ: ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಸ್ಪತ್ರೆಗಳ ಆವರಣದಿಂದ ತೆರವುಗೊಳಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮ ಕೀಳುಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ದೊರಕಬೇಕು, ಯಾವುದೇ ಔಷಧಿಗಳ ಕೊರತೆಯಿಂದ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂಬ ಸದುದ್ಧೇಶದಿಂದ ಕೇಂದ್ರ ಸರಕಾರ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯುವ ಮೂಲಕ ಬಡ ಜನತೆಯ ಆರೋಗ್ಯ ಸಂರಕ್ಷಣೆಗೆ ವಿಶೇಷ ಕೊಡುಗೆಯನ್ನು ನೀಡಿದೆ. ಆದರೆ ಜನೌಷಧಿ ಕೇಂದ್ರದ ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದನ್ನು ಸಹಿಸದ ರಾಜ್ಯ ಸರಕಾರ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಔಷಧಿಗಳ ಸಮರ್ಪಕ ವ್ಯವಸ್ಥೆಯನ್ನೂ ಮಾಡದೆ ಕೇವಲ ದ್ವೇಷ ರಾಜಕಾರಣಕ್ಕಾಗಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ಖಂಡನೀಯ.

ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲಾ ಔಷದಿಗಳು ಉಚಿತವಾಗಿ ದೊರೆಯುತ್ತದೆ ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನಾಧರಿಸಿ ಸುದ್ದಿ ಮಾಧ್ಯಮವೊಂದು ಕೆಲವು ಪ್ರಮುಖ ಜಿಲ್ಲಾಸ್ಪತ್ರೆಗಳಿಗೆ ಬೇಟಿ ನೀಡಿ ಉಚಿತ ಔಷದಿಗಳ ಲಭ್ಯತೆಯ ಕುರಿತು ರಿಯಾಲಿಟಿ ಚೆಕ್ ನಡೆಸಿದಾಗ ಯಾವುದೇ ಅಗತ್ಯ ಔಷದಿಗಳು, ಮಾತ್ರೆಗಳು ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಬಡವರು ಜಿಲ್ಲಾಸ್ಪತ್ರೆಗಳಲ್ಲಿ ಔಷದಿಗಾಗಿ ಪರದಾಟ ನಡೆಸುವ ದಯನೀಯ ಸ್ಥಿತಿ ರಾಜ್ಯ ಸರಕಾರದ ಬೇಜವಾಬ್ದಾರಿತನವನ್ನು ಜಗಜ್ಜಾಹೀರುಗೊಳಿಸಿದೆ.

ರಾಜ್ಯ ಸರಕಾರ ಜನರ ಸಂಕಷ್ಟವನ್ನು ಅರ್ಥೈಸಿಕೊಂಡು ಆರೋಗ್ಯ ಸಂರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕದೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಅರೋಗ್ಯ ಸೇವೆಯನ್ನು ನೀಡುವ ಜೊತೆಗೆ ಎಲ್ಲಾ ರೀತಿಯ ಅಗತ್ಯ ಔಷದಿಗಳ ಪೂರೈಕೆಗೆ ತುರ್ತು ಕ್ರಮ ವಹಿಸಬೇಕು ತಪ್ಪಿದಲ್ಲಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮರುಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಸರಕಾರವನ್ನು ಅಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಪಾಲಿಗೆ ಮರಣ ಶಾಸನ ಬರೆದಿರುವ ಜೊತೆಗೆ ವಿಪರೀತ ಬೆಲೆ ಏರಿಕೆ, ಹಾಲು ಉತ್ಪಾದಕರ ಸಬ್ಸಿಡಿ ಕಡಿತ ಸಹಿತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್ ವಿತರಣೆ ಮುಂತಾದ ಬಿಜೆಪಿ ಆಡಳಿತಾವಧಿಯ ಜನಪರ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನವನ್ನು ನೀಡದೆ ಎಳ್ಳು ನೀರು ಬಿಟ್ಟಿರುವ ಭ್ರಷ್ಟ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ರೋಸಿಹೋಗಿದ್ದು ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಂಧೂರ ಅಳಿಸಿದ ಉಗ್ರರಿಗೆ ‘ಆಪರೇಷನ್ ಸಿಂಧೂರ’ ಮೂಲಕ ದಿಟ್ಟ ಉತ್ತರ ನೀಡಿದ ಭಾರತ: ಜಿಲ್ಲಾ ಬಿಜೆಪಿ ಸಂಭ್ರಮಾಚಾರಣೆ




ಏ.22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಅಮಾಯಕ ಭಾರತೀಯ ಪ್ರವಾಸಿಗರ ಧರ್ಮ ಕೇಳಿ ಹತ್ಯಾಕಾಂಡ ನಡೆಸಿರುವ ಪಾಕಿಸ್ತಾನ ಪ್ರಯೋಜಿತ ಉಗ್ರರಿಗೆ ಹಾಗೂ ಬೆಂಬಲಿಗರಿಗೆ ಭಾರತ ತಕ್ಕ ಶಾಸ್ತಿಯನ್ನು ಮಾಡಿದೆ. ‘ಸಿಂಧೂರ’ ಅಳಿಸಿದವರಿಗೆ ‘ಆಪರೇಷನ್ ಸಿಂಧೂರ’ ಮೂಲಕ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಭಾರತೀಯರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸಂಭ್ರಮಿಸುವ ಅತ್ಯಂತ ಸಂತಸದ ಕ್ಷಣ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ‘ಆಪರೇಷನ್ ಸಿಂಧೂರ’ ಮೂಲಕ ಭಾರತ ಕೈಗೊಂಡಿರುವ ಐತಿಹಾಸಿಕ ಕ್ರಮವನ್ನು ಅಭಿನಂದಿಸಿ ಮಾತನಾಡಿದರು.

ಇಂತಹ ದಿಟ್ಟ ನಡೆಗಳಿಂದಲೇ ನರೇಂದ್ರ ಮೋದಿ ಅವರು ಇಡೀ ಜಗತ್ತೇ ಮೆಚ್ಚುವಂತಹ ಪ್ರಧಾನಿ ಎಂದೆನಿಸಿಕೊಂಡಿದ್ದಾರೆ. ದೇಶವಾಸಿಗಳ ಮೇಲಿನ ಪ್ರೀತಿ, ಗೌರವ ಹಾಗೂ ಬದ್ಧತೆಯಿಂದ ಇಂತಹ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಶತ್ರು ರಾಷ್ಟ್ರ ಪಾಕಿಸ್ತಾನ ಇಂತಹ ದುಷ್ಟ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಿ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ತಪ್ಪಿದಲ್ಲಿ ಇದಕ್ಕಿಂತಲೂ ಘೋರ ಪರಿಸ್ಥಿತಿಯನ್ನು ಎದುರಿಸುವ ಕಾಲ ಬಂದೊದಗಬಹುದು.

ದೇಶದ ಸುರಕ್ಷತೆ, ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹಾಗೂ ಉಗ್ರರ ವಿರುದ್ಧ ದೇಶವಾಸಿಗಳ ಆಕ್ರೋಶ ತಣಿಸುವ ನಿಟ್ಟಿನಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ಯಶಸ್ವಿಗೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಕೆಚ್ಚೆದೆಯ ಭಾರತೀಯ ಸೇನಾ ಪಡೆಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ದೇಶದ ಭದ್ರತೆ ಮತ್ತು ಸುರಕ್ಷತೆಗೆ ಕಟಿಬದ್ಧರಾಗಿ ಹೋರಾಡುವ ವೀರ ಯೋಧರಿಗೆ 140 ಕೋಟಿ ಭಾರತೀಯರ ಪ್ರಾರ್ಥನೆ, ಶುಭ ಹಾರೈಕೆ ಸದಾ ಶ್ರೀರಕ್ಷೆಯಾಗಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,  ಜಿಲ್ಲಾ ಉಪಾಧ್ಯರಾದ ಕಿರಣ್ ಕುಮಾರ್ ಬೈಲೂರು, ಪೆರಣoಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್ ರಾವ್, ಅಭಿರಾಜ್ ಸುವರ್ಣ, ರುಡಾಲ್ಫ್ ಡಿಸೋಜ, ಕರುಣಾಕರ ಶೆಟ್ಟಿ, ವಿವೇಕ್ ಪೈ, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ರಾಜೀವ್ ಕುಲಾಲ್, ರಶ್ಮಿತಾ ಬಿ. ಶೆಟ್ಟಿ, ಸಚಿನ್ ಪೂಜಾರಿ, ಗೋಪಾಲಕೃಷ್ಣ ರಾವ್ ಮಟ್ಟು, ಶರಣ್ ಕುಮಾರ್ ಮಟ್ಟು, ಸತೀಶ್ ಪೂಜಾರಿ ಕುಂದಾಪುರ, ಸುಧೀರ್ ಕೆ.ಎಸ್. ಕುಂದಾಪುರ, ನಾರಾಯಣಮೂರ್ತಿ, ಕೆ.ದಿವಾಕರ ಶೆಟ್ಟಿ ಕಾಪು, ಪ್ರವೀಣ್ ಕುಮಾರ್ ಗುರ್ಮೆ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ 6 ಮಂಡಲ ಕೇಂದ್ರಗಳಲ್ಲಿ ಸಿಹಿ ಹಂಚಿ ‘ಆಪರೇಷನ್ ಸಿಂಧೂರ್’ನ ಯಶಸ್ವೀ ಕಾರ್ಯಾಚರಣೆಯ ಸಂಭ್ರಮಾಚರಣೆ ನಡೆಸಲಾಯಿತು.

ಅಕ್ರಮ ಪಾಕಿಸ್ತಾನಿ ನುಸುಳುಕೋರರ ಗಡಿಪಾರಿಗೆ ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಮನವಿ ಸಲ್ಲಿಕೆ




ಉಡುಪಿ: ಏ.22ರಂದು ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ನೆರವಿನಿಂದ 26 ಅಮಾಯಕ ಭಾರತೀಯ ಪ್ರಜೆಗಳನ್ನು ಉಗ್ರರು ಧರ್ಮವನ್ನು ಕೇಳಿ ತಿಳಿದು ಗುಂಡಿಕ್ಕಿ ಹತ್ಯೆಗೈದಿರುವ ದಾರುಣ ಘಟನೆಯ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರಕಾರ ಈಗಾಗಲೇ ಆದೇಶ ಹೊರಡಿಸಿರುವಂತೆ ಜಿಲ್ಲೆಯಲ್ಲಿ ಆಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಶ್ರೀಘ್ರವಾಗಿ ಪತ್ತೆ ಹಚ್ಚಿ ಅವರನ್ನು ಕೂಡಲೇ ಅವರ ದೇಶಕ್ಕೆ ಗಡಿಪಾರು ಮಾಡುವ ಬಗ್ಗೆ ಆದ್ಯತೆ ಮೇರೆಗೆ ತುರ್ತು ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ.ಎಸ್.ಐ. ನೆರವಿನಿಂದ ಪಾಕಿಸ್ತಾನ ಸೇನೆ ಇಡೀ ದಾಳಿಯ ಯೋಜನೆಯನ್ನು ರೂಪಿಸಿ ಇಂತಹ ಬರ್ಬರ ಹತ್ಯಾಕಾಂಡವನ್ನು ನಡೆಸಿರುವುದನ್ನು ಅರಗಿಸಿಕೊಳ್ಳಲಾಗದೆ ಇಡೀ ದೇಶ ಅತ್ಯಂತ ದೊಡ್ಡ ಆಘಾತಕ್ಕೊಳಗಾಗಿದೆ ಹಾಗೂ ಜಗತ್ತಿನ ಎಲ್ಲಾ ಶಕ್ತಿಶಾಲಿ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುಕೃತ್ಯಕ್ಕೆ ಕಾರಣರಾದವರು ಹಾಗೂ ಅವರಿಗೆ ಪ್ರೇರಣೆ ನೀಡಿದವರನ್ನು ನಾಶಗೊಳಿಸುವ ಮತ್ತು ಭಯೋತ್ಪಾದನೆಯ ಮುಲೋತ್ಪಾಟನೆಯ ಪ್ರತಿಜ್ಞೆಗೈದು ಭಾರತೀಯ ಸೇನಾ ಪಡೆಗಳಿಗೆ ಸ್ವತಂತ್ರ ಕಾರ್ಯನಿರ್ವಹಣೆಗೆ ಸಂಪೂರ್ಣ ಅಧಿಕಾರ ನೀಡಿರುವ ಸನ್ನಿವೇಶದಲ್ಲಿ ಇಡೀ ದೇಶ ಉಗ್ರ ಧಮನ ಕಾರ್ಯಕ್ಕೆ ಬೆಂಬಲ ನೀಡಿದೆ.

ಈ ದುರ್ಘಟನೆಯ ಪರಿಣಾಮವಾಗಿ ಕೇಂದ್ರ ಸರ್ಕಾರ ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಇತಿಶ್ರೀ ಹಾಡುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿರುವುದು ಮಾತ್ರವಲ್ಲದೆ ಪಾಕಿಸ್ತಾನದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ, ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವ ವೀಸಾವನ್ನು ನಿಲ್ಲಿಸಿದೆ ಹಾಗೂ ನಿಯಮಿತ ಸಮಯದಲ್ಲಿ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಹಿಂತಿರುಗುವಂತೆ ಕಟ್ಟಾಜ್ಞೆಯನ್ನು ಹೊರಡಿಸಿದೆ. ಗೃಹ ಸಚಿವಾಲಯದ ಆಜ್ಞಾ ಪತ್ರ ಸಂಖ್ಯೆ : 25022/28/2025/F.1, 25.4.2025ರ ಅನ್ವಯ ಹಾಗೂ ಸೆಕ್ಷನ್ 3(1) 1946ರ ವಿದೇಶಿಗರ ಕಾಯ್ದೆಗೆ ವಿಶೇಷ ಅಧಿಕಾರ ನೀಡಿ (ದೀರ್ಘಾವದಿ ಹಾಗೂ ರಾಜತಾಂತ್ರಿಕ ಮತ್ತು ಅಧೀಕೃತ ವೀಸಾಗಳನ್ನು ಹೊರತುಪಡಿಸಿ) ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ವೀಸಾ ವಿತರಣೆಯನ್ನು ಅಮಾನತ್ತಿನಲ್ಲಿಡಲಾಗಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಆಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿಗಳು, ಅಧಿಕೃತ ದಾಖಲಾತಿಗಳಿಲ್ಲದೇ ರದ್ದಾಗಿರುವ ವೀಸಾಗಳು ಹಾಗೂ ಅಮಾನತಿನಲ್ಲಿರುವ ವೀಸಾಗಳನ್ನು ಹೊಂದಿಕೊಂಡು ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅಂತಹ ವ್ಯಕ್ತಿಗಳನ್ನು ಪಟ್ಟಿಮಾಡಿ ಯಾವುದೇ ವಿಳಂಬವಿಲ್ಲದೇ ಕೂಡಲೇ ಎಲ್ಲಾ ಕಾನೂನುಬದ್ಧವಾದ ಕ್ರಮಗಳನ್ನು ಕೈಗೊಂಡು ಸ್ಥಳೀಯಾಡಳಿತ ವ್ಯವಸ್ಥೆಯು ಶೀಘ್ರ ಹಾಗೂ ನಿರ್ಣಾಯಕ ಕಾರ್ಯನಿರ್ವಹಿಸುವ ಜೊತೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸಿ, ಜನರ ವಿಶ್ವಾಸವನ್ನು ಬಲಗೊಳಿಸಿ, ಸಮಯಾನುಸಾರ ದಕ್ಷ ಸುರಕ್ಷತಾ ವ್ಯವಸ್ಥೆಯನ್ನು ನಿರ್ವಹಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪೆರಣoಕಿಲ ಶ್ರೀಶ ನಾಯಕ್, ಜಯರಾಮ್ ಸಾಲ್ಯಾನ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ರಾಘವೇಂದ್ರ ಕುಂದರ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ, ಜಿಲ್ಲಾ ರೈತ ಮೋರ್ಚಾ ಕೋಶಾಧಿಕಾರಿ ಕರುಣಾಕರ ಶೆಟ್ಟಿ, ವ್ಯಾಪಾರಿ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ವಿವೇಕ್ ಪೈ, ಮಂಡಲ ಅಧ್ಯಕ್ಷರಾದ ದಿನೇಶ್ ಅಮೀನ್ ಉಡುಪಿ ನಗರ, ಜಿತೇಂದ್ರ ಶೆಟ್ಟಿ ಕಾಪು, ರಾಜೀವ್ ಕುಲಾಲ್ ಉಡುಪಿ ಗ್ರಾಮಾಂತರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಶೆಟ್ಟಿ ಉಡುಪಿ, ಸಚಿನ್ ಪೂಜಾರಿ ಬ್ರಹ್ಮಾವರ, ಗೋಪಾಲಕೃಷ್ಣ ರಾವ್ ಮಟ್ಟು, ಶರಣ್ ಕುಮಾರ್ ಮಟ್ಟು, ಸತೀಶ್ ಪೂಜಾರಿ ಕುಂದಾಪುರ, ಸುಧೀರ್ ಕೆ.ಎಸ್. ಕುಂದಾಪುರ, ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಮೂರ್ತಿ, ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಕೆ.ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಪ್ರಬುದ್ಧರ ಪ್ರಕೋಷ್ಠದ ಸಂಚಾಲಕ ಪ್ರವೀಣ್ ಕುಮಾರ್ ಗುರ್ಮೆ ಸಹಿತ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಮೇ 6 : ಜಿಲ್ಲಾ ವ್ಯಾಪ್ತಿಯಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಕ್ರಮ ಕೈಗೊಳ್ಳಲು ಜಿಲ್ಲಾ ಬಿಜೆಪಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ




ಉಡುಪಿ: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪೆಹಲ್ಗಾಂವ್ ನಲ್ಲಿ 26 ಹಿಂದೂಗಳನ್ನು ಬಲಿ ಪಡೆದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು ತಕ್ಷಣ ಭಾರತದಿಂದ ತಮ್ಮ ದೇಶಕ್ಕೆ ತೆರಳುವಂತೆ ಕೇಂದ್ರ ಸರಕಾರ ಈಗಾಗಲೇ ಸೂಚನೆಯನ್ನು ನೀಡಿ ಕಾಲಮಿತಿಯ ಗಡುವನ್ನು ವಿಧಿಸಿದೆ. ಇನ್ನೂ ಕೂಡಾ ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ಉಳಿದಿದ್ದಲ್ಲಿ ಅವರನ್ನು ಶೀಘ್ರ ಪತ್ತೆ ಹಚ್ಚಿ ತಕ್ಷಣ ದೇಶ ಬಿಟ್ಟು ಹೊರಡುವಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯಾದ್ಯoತ ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮನವಿ ಸಲ್ಲಿಸಲಿದೆ. ಈ ನೆಲೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಪ್ರಜೆಗಳು ನೆಲೆಸಿದ್ದಲ್ಲಿ ತಕ್ಷಣ ಪತ್ತೆ ಹಚ್ಚಿ ಅವರನ್ನು ಶೀಘ್ರ ಗಡಿಪಾರು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮೇ 6ರಂದು ಬೆಳಿಗ್ಗೆ ಗಂಟೆ 11.30ಕ್ಕೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಮುಸ್ಲಿಂ ಓಲೈಕೆಯಿಂದ ಸಮಾಜದಲ್ಲಿ ದುಶ್ಶ್ಕೃತ್ಯಕ್ಕೆ ಪರೋಕ್ಷ ಬೆಂಬಲ: ಕಿಶೋರ್ ಕುಮಾರ್ ಕುಂದಾಪುರಹಿಂದೂ ಸಂಘಟನೆಯ ಮುಂದಾಳು ಸುಹಾಸ್ ಶೆಟ್ಟಿ ಹತ್ಯೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಖಂಡನೆ ಮತ್ತು ಸಂತಾಪ





ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾಮಾನ್ಯ ಜನರ ಬದುಕು ಸರಿಗೆ ಮೇಲಿನ ನಡಿಗೆಯಂತಾಗಿದೆ. ಪ್ರತೀ ಹೆಜ್ಜೆಯನ್ನೂ ಆತಂಕ ಮತ್ತು ಭಯದಿಂದ ಇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಅತಿಯಾದ ಓಲೈಕೆಯ ಮೂಲಕ ಸಮಾಜದಲ್ಲಿ ಇಂತಹ ದುಶ್ಶ್ಕೃತ್ಯ ನಡೆಯಲು ಸರಕಾರವೇ ಪರೋಕ್ಷ ಬೆಂಬಲ ನೀಡಿದಂತೆ ಕಂಡು ಬರುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳೂರಿನ ಬಜಪೆಯಲ್ಲಿ ನಡೆದ ಹಿಂದೂ ಸಂಘಟನೆಯ ಮುಂದಾಳು ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ಕಛೇರಿಯ ಬಳಿ ಹಮ್ಮಿಕೊಂಡ ಖಂಡನಾ ಮತ್ತು ಸಂತಾಪ ಸಭೆಯನ್ನು ಉದ್ದೇಶಿಸಿ  ಮಾತನಾಡಿದರು.

ಕಾಶ್ಮೀರದದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತುತ್ತಾದ ಕುಟುಂಬಗಳಿಗೆ ಸಾಂತ್ವನ ಹೇಳುವ ಬದಲು ಕೇಂದ್ರ ಸರಕಾರದ ಭದ್ರತಾ ವೈಫಲ್ಯ, ಪಾಕಿಸ್ತಾನದೊಂದಿಗೆ ಯುದ್ಧದ ಅಗತ್ಯವಿಲ್ಲ ಎನ್ನುತ್ತಾ ಸಾವಿನ ಮನೆಯಲ್ಲೂ ನೀಚ ಮಟ್ಟದ ರಾಜಕಾರಣ ಮಾಡುವ ಕಾಂಗ್ರೆಸ್ ದೇಶದಲ್ಲಿ ನಡೆದ ಅನೇಕ ದೇಶದ್ರೋಹದ ಘಟನೆಗಳಲ್ಲಿಯೂ ಅವರೆಲ್ಲ ಅಮಾಯಕರು, ನಮ್ಮ ಬ್ರದರ್ಸ್ ಎನ್ನುತ್ತಾ ದಾರಿ ತಪ್ಪಿಸುವ ಕುಕೃತ್ಯವನ್ನು ಮಾಡಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾನೂನು ಕಟ್ಟಳೆ ನಿಯಮಗಳಿಂದ ಪರಿಹಾರ ಸಿಗುವುದು ಮರೀಚಿಕೆಯಂತಾಗಿದೆ. ಪೊಲೀಸ್ ಇಲಾಖೆಯಲ್ಲಿ ಹುಬ್ಬಳ್ಳಿಯ ಅನ್ನಪೂರ್ಣ ಅವರಂತಹ ದಕ್ಷ ಪೊಲೀಸ್ ಅಧಿಕಾರಿಗಳು ಹೆಚ್ಚಿದಂತೆ ಸಮಾಜದಲ್ಲಿ ಇಂತಹ ದುಶ್ಶ್ಕೃತ್ಯಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದೂಗಳಿಗೆ ಯಾವುದೇ ರಕ್ಷಣೆ ಇಲ್ಲದ ದುಸ್ಥಿತಿ ನಿರ್ಮಾಣವಾಗಿದೆ. ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಚ್ಚು ಬೀಸಿ ಹತ್ಯೆಗೈಯುವ ಇಂದಿನ ವಿಷಮ ಕಾಲಘಟ್ಟದಲ್ಲಿ ಜನತೆ ತಮ್ಮ ಸ್ವಯಂ ರಕ್ಷಣೆಗೆ ತಾವೇ ಮುಂದಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ಪೆರಣoಕಿಲ ಶ್ರೀಶ ನಾಯಕ್, ಮಹಾವೀರ ಹೆಗ್ಡೆ, ಜಿಲ್ಲಾ ಪ್ರಧಾನ ಕಾಯದರ್ಶಿ ರೇಷ್ಮಾ ಉದಯ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಮಂಡಲ ಅಧ್ಯಕ್ಷರುಗಳಾದ ದಿನೇಶ್ ಅಮೀನ್ ಉಡುಪಿ ನಗರ, ಜಿತೇಂದ್ರ ಶೆಟ್ಟಿ ಕಾಪು, ರಾಜೀವ ಕುಲಾಲ್ ಉಡುಪಿ ಗ್ರಾಮಾಂತರ, ಸುರೇಶ್ ಶೆಟ್ಟಿ ಗೋಪಾಡಿ ಕುಂದಾಪುರ, ಪ್ರಮುಖರಾದ ನಯನಾ ಗಣೇಶ್, ಕುತ್ಯಾರು ನವೀನ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಶೈಲೇoದ್ರ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ಸತೀಶ್ ಪೂಜಾರಿ, ಧೀರಜ್ ಕೆ.ಎಸ್., ಮಹೇಂದ್ರ ಕುಮಾರ್, ಮಧುಕರ ಮುದ್ರಾಡಿ, ಕುತ್ಯಾರು ಪ್ರಸಾದ್ ಸಹಿತ ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧ, ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಸಾಬೀತುಪಡಿಸಿದೆ : ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ಕೇವಲ ಧರ್ಮ ಕೇಳಿ ರಕ್ತದೋಕುಳಿ ಹರಿಸಿರುವುದು ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಉಗ್ರರ ನಿರ್ಲಜ್ಜ, ಹೇಡಿತನದ ಪೈಶಾಚಿಕ ಕೃತ್ಯ ಸರ್ವತೃ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಪಾಕ್ ಬೆಂಬಲಿತ ಟಿಆರ್ಎಫ್ ಉಗ್ರರ ದಾಳಿಯಲ್ಲಿ ಮೃತರಾಗಿರುವ ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಸಹಿತ 28 ಅಮಾಯಕ ಪ್ರವಾಸಿಗರ ಕಗ್ಗೊಲೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೀಭತ್ಸ್ಯ ಘಟನೆಗೆ ದೇಶಾದ್ಯoತ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದ್ದು ಕೇಂದ್ರ ಸರಕಾರ, ಅಟ್ಟಹಾಸ ಮೆರೆದ ಉಗ್ರರನ್ನು ಬೇಟೆಯಾಡಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ.

ಸಮಾಜದಲ್ಲಿ ತುಷ್ಟೀಕರಣ, ವಿಭಜಕ ನೀತಿ ತಾಂಡವವಾಡುತ್ತಿರುವ ಕಾಲಘಟ್ಟದಲ್ಲಿ ವಿಚಲಿತರಾಗಿರುವ ಹಿಂದೂ ಧರ್ಮೀಯರಿಗೆ ಇಂತಹ ಪೈಶಾಚಿಕ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ರಾಜ್ಯ ಸರಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರಕಾರದತ್ತ ಬೊಟ್ಟು ಮಾಡದೆ ದೇಶದ ಏಕತೆ ಮತ್ತು ದೇಶವಾಸಿಗಳ ಸುರಕ್ಷತೆಗಾಗಿ ಎಲ್ಲ ಸ್ತರಗಳಲ್ಲಿ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವುದು ಇಂದಿನ ಅಗತ್ಯತೆಯಾಗಿದೆ.

ವಿಶ್ವದಾದ್ಯoತ ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವ ಮಹಾನ್ ರಾಷ್ಟ್ರಗಳು ಇಂದು ಈ ಪಿಡುಗಿನ ಮೂಲೋತ್ಪಾಟನೆಗೆ ಭಾರತದ ಜೊತೆ ಕೈಜೋಡಿಸಿರುವ ಸನ್ನಿವೇಶದಲ್ಲಿ ರಾಜ್ಯ ಸರಕಾರ ಭಯೋತ್ಪಾದಕ ದಾಳಿಯಲ್ಲಿ ಮೃತರಾಗಿರುವ ಈರ್ವರು ಕನ್ನಡಿಗರ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಅಗ್ರಹಿಸಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು   ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಜೆಟ್ ನಲ್ಲಿ ಒಂದೇ ಕೋಮಿನ ಅತಿಯಾದ ಓಲೈಕೆಗೆ ನೀಡಿರುವ ಪ್ರಾಶಸ್ತ್ಯ, ಜಾತಿ ಗಣತಿಯ ಗುಮ್ಮ, ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಕತ್ತರಿ ಪ್ರಯೋಗ ಸಹಿತ ಅಲ್ಲಲ್ಲಿ ನಡೆಯುತ್ತಿರುವ ವಿಛಿದ್ರಕಾರಿ ಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಮರೆಮಾಚಲು ರೂಪಿಸಿರುವ ಹಿಡನ್ ಅಜೆಂಡಾಗಳೆ? ಎಂಬ ಅನುಮಾನ ದಟ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಇಟಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ ಜನಿವಾರವನ್ನು ತೆಗೆದಿರಿಸಬೇಕು ಎಂಬ ಲಿಖಿತ ನಿಯಮ ಇಲ್ಲದಿದ್ದರೂ ಬೀದರ್, ಸಾಗರ, ಶಿವಮೊಗ್ಗ ಮತ್ತು ಧಾರವಾಡದಲ್ಲಿ ಜನಿವಾರ ಧಾರಣೆಯನ್ನು ವಿರೋಧಿಸಿ, ಕೆಲವೆಡೆ ಜನಿವಾರವನ್ನು ಕತ್ತರಿಸಿ ಕೈಗೆ ನೀಡಿದ ಅಮಾನವೀಯ ಘಟನೆ ನಡೆದಿರುವುದು ಅತ್ಯಂತ ಖಂಡನೀಯ.

ಈ ನೆಲದ ಸಂಸ್ಕೃತಿ, ಸಂಸ್ಕಾರದ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಹಾಗೂ ಶಾಶ್ವತ ಪರಿಹಾರಕ್ಕೆ ತಜ್ಞರ ಸಮಿತಿ ರಚನೆಗೆ ಸರಕಾರ ಬದ್ದ ಎಂಬ ಮಾತುಗಳನ್ನಾಡಿದ್ದರೂ ಘಟನೆಯ ಮೂಲದ ಜಾಡು ಹಿಡಿಯುವ ನಿಟ್ಟಿನಲ್ಲಿ ಆಮೂಲಾಗ್ರ ತನಿಖೆ ಅತ್ಯಗತ್ಯ.

ಯಾವುದೇ ವ್ಯಕ್ತಿಯ ಮೌಖಿಕ ಆದೇಶವಿಲ್ಲದೆ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಇಂತಹ ವಿಲಕ್ಷಣ ಘಟನೆ ನಡೆಯಲು ಕಾರಣವೇನು ಎಂಬ ಕುರಿತು ಕೂಲಂಕುಷ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.

2 ಕೋಟಿ 17 ಲಕ್ಷ ಅನುದಾನದಲ್ಲಿ ಹರಿಖಂಡಿಕೆ – ಎಳ್ಳಾರೆ – ಚಟ್ಕಲ್ ಪಾದೆ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಹರಿಖಂಡಿಕೆ – ಎಳ್ಳಾರೆ – ಚಟ್ಕಲ್ ಪಾದೆ (ಪೆರ್ಡೂರು ನಿಂದ ಕುಂಟಾಲ್ ಕಟ್ಟೆ ರಸ್ತೆ) ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ 17 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 15-04-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.*

*ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಜಿಯಾನಂದ ಹೆಗಡೆ, ಸುಚೇತ ರಾವ್, ಸುಜಾತಾ, ಅನಂತು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.*

ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ: ಬಿಜೆಪಿ ಮುಖಂಡ ಸಲೀಂ ಅಂಬಾಗಿಲು





ಉಡುಪಿ:ಈಗಾಗಲೇ ರಾಷ್ಟ್ರ ವ್ಯಾಪಿ ಕುತೂಹಲಕ್ಕೆ ಒಳಗಾಗಿ, ಚರ್ಚೆಯಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಹಜ್ಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ತಿಳಿಸಿದ್ದಾರೆ.

ಈ ಹಿಂದೆಯೇ ನಮ್ಮ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ಸಂಧರ್ಭದಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ರಾಜಕೀಯ ಕುಳಗಳು ಮತ್ತು ಕೆಲವೊಂದು ಸರಕಾರಿ ಸಂಸ್ಥೆಗಳಿಂದ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ಅನಧಿಕೃತ ಪರಭಾರೆಯ ಬಗ್ಗೆ ಮಂಡಿಸಿದ್ದ ಪರಿಣಾಮಕಾರಿ ವರದಿಯನ್ನು ಅಂದಿನ ಬಿಜೆಪಿ ಸರಕಾರ ಸದನದಲ್ಲಿ ಮಂಡಿಸಲು ಮುಂದಾಗಿತ್ತು. ಅದೇ ಸಮಯದಲ್ಲಿ ಸರಕಾರವು ಆಡಳಿತ ವಂಚಿತವಾಗಿ, ಬಳಿಕ ರಾಜ್ಯದ ಅಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರವು ತನ್ನ ಶಾಸಕರು, ಸಚಿವರು ಹಾಗೂ ಮುಖಂಡರುಗಳಿಂದಲೇ ಆಸ್ತಿ ಲೂಟಿಯಾಗಿರುವುದನ್ನು ಮುಚ್ಚಿಡಲು ಕುತಂತ್ರ ನಡೆಸಿ ಸದ್ರಿ ವರದಿಯನ್ನೇ ಕಸದ ಬುಟ್ಟಿಗೆಸೆಯಿತು.

ಈಗಾಗಲೇ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡನೆಯ ಸಮಯದಲ್ಲಿ ಈ ವರದಿಯ ಗಂಭೀರತೆಯ ಬಗ್ಗೆ ಚರ್ಚೆಯಾಗಿರುವುದು ಕೂಡ ಗಮನಾರ್ಹ ಅಂಶವಾಗಿರುತ್ತದೆ. ಈ ಎಲ್ಲ ಬೆಳವಣಿಗೆಗಳ ಬಳಿಕ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿರುವ ವಿರೋಧ ಪಕ್ಷಗಳು ಹಾಗೂ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಈ ಮಸೂದೆ ಮುಸ್ಲಿಂ ವಿರೋದಿ ಎಂದು ಬೊಬ್ಬಿರಿತ್ತಿರುವುದು ಕಂಡುಬರುತ್ತಿದೆ.

ಅನಾದಿ ಕಾಲದಿಂದಲೂ ನಮ್ಮ ಸಮುದಾಯದ ಹಿರಿಯರು, ಶ್ರೀಮಂತ ವರ್ಗದ ಆಸ್ತಿವಂತರು, ತ್ಯಾಗಜೀವಿಗಳು ಬಡವರ ಬಗ್ಗೆ ಕಾಳಜಿ ಹೊಂದಿ ತಮ್ಮ ಒಡೆತನದ ಅಸ್ತಿಗಳನ್ನು ವಕ್ಫ್ ಮಾಡಿ ಪವಿತ್ರವಾದ ಉದ್ದೇಶವನ್ನು ಇರಿಸಿಕೊಂಡು ಅದನ್ನು ಅಲ್ಲಾಹನ ಆಸ್ತಿ ಎಂದು ಘೋಷಿಸಿರುವುದು ಮುಸ್ಲಿಂ ಸಮುದಾಯದ ಒಳಿತಿಗಾಗಿ ಎಂಬುವುದು ನಿಸ್ಸಂದೇಹ ಅಲ್ಲವೆ? ನಮ್ಮ ಸಮುದಾಯದ ಶ್ರೇಯೋಭಿವೃದ್ದಿ ಹಾಗೂ ಬಡ ವರ್ಗದ ಮುಸ್ಲಿಮರ ಕಲ್ಯಾಣಕ್ಕಾಗಿ ದುಡಿಯಬೇಕಾಗಿದ್ದ ಸ್ಥಳೀಯ, ರಾಜ್ಯ, ರಾಷ್ಟ್ರೀಯ ವಕ್ಫ್ ಸಂಸ್ಥೆಗಳು, ಮುಸ್ಲಿಂ ಪರ ಎನ್ನುವ ಸಂಘಟನೆಗಳು, ಅದೆಷ್ಟು ರಾಜಕೀಯ ಪಕ್ಷಗಳು ವಕ್ಫ್ ಆಸ್ತಿಗಳನ್ನು ಉಪಯೋಗಿಸಿ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದೆ ಎನ್ನುವುದು ಇನ್ನು ಕೂಡ ಯಕ್ಷಪ್ರಶ್ನೆಯಾಗಿ ಉಳಿದಿದೆ ಅಲ್ಲವೆ?

ಇಂತಹ ಸಂಧರ್ಭದಲ್ಲಿ ಈ ಎಲ್ಲಾ ಒಳಿತು ಕೆಡುಕುಗಳ ಬಗ್ಗೆ ಚಿಂತಿಸಿ ಕೇಂದ್ರದಲ್ಲಿ ಬಿಜೆಪಿ ಸರಕಾರವು ವಕ್ಫ್ ನೂತನ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವ ಬಗ್ಗೆ ಸತ್ಯಾಸತ್ಯತೆಯನ್ನು ಅರಿತುಕೊಂಡು ಇನ್ನಾದರು ಅದರಿಂದಾಗಿ ಯಾವುದೇ ಸ್ಥಳೀಯ ರಾಜ್ಯ, ರಾಷ್ಟ್ರೀಯ ವಕ್ಫ್ ಸಂಸ್ಥೆ ಗಳು, ಆಡಳಿತಾತ್ಮಕ ಸಂಸ್ಥೆಗಳು ಅಥವಾ ಇನ್ನಿತರ ಸರಕಾರಗಳು ಎಚ್ಚೆತ್ತುಕೊಂಡು ಆ ಪವಿತ್ರಾತ್ಮರ, ತ್ಯಾಗಜೀವಿಗಳ ಪವಿತ್ರವಾದ ಕೊಡುಗೆಯನ್ನು ತಮ್ಮ ಸ್ವಯಂ ಸ್ವಾರ್ಥದ ಬಯಕೆಗಳಿಗೆ ಬಳಸಿ ದುರುಪಯೋಗಪಡಿಸಿ ಶಾಪಕ್ಕೆ ಒಳಗಾಗುವುದರ ಬದಲಿಗೆ ಮುಸ್ಲಿಂ ಸಮುದಾಯದ ಬಡವರ ಏಳಿಗೆಗಾಗಿ ಉಪಯೋಗಿಸುವ ಪುಣ್ಯ ಕೆಲಸಕ್ಕೆ ಮುಂದಾಗಲಿ ಎಂಬುವುದೇ ಸಮುದಾಯದ ಪಾಲಿನ ಬಡವರ ಹಕ್ಕಿನ ಕೂಗಾಗಿರುತ್ತದೆ ಎಂದು ಎಂ.ಸಲೀಂ ಅಂಬಾಗಿಲು ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ ನಡೆಸುವ ಯಾವುದೇ ನೈತಿಕತೆ ಇಲ್ಲ : ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಗ್ಯಾರಂಟಿಗಳ ಆಸೆ ತೋರಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಯದ್ವಾತದ್ವಾ ಏರಿಸಿ ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಗೆ ಅಂತಿಮ ಹಂತ ತಲುಪಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಅಣಕಿಸಿ ಏಪ್ರಿಲ್ ಫೂಲ್ ದಿನವನ್ನು ಆಚರಿಸುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕ್ರಿಯಾಶೀಲ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಸಹಿತ ಉಡುಪಿ ಜಿಲ್ಲೆಯಾದ್ಯoತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ತೊಡಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಕೆಲವು ಕಾಮಗಾರಿಗಳ ವಿಳಂಬದ ನೈಜ ಕಾರಣ ಹಾಗೂ ಪ್ರಸಕ್ತ ಪ್ರಗತಿಯ ಕುರಿತು ಅಗತ್ಯ ಮಾಹಿತಿಯನ್ನು ಪ್ರಚುರಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಸಂಸದರೊಂದಿಗೆ ಕೈಜೋಡಿಸಿದ್ದರೂ, ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವೆ ಈ ಕುರಿತು ಏನು ಜವಾಬ್ದಾರಿ ನಿರ್ವಹಿಸಿದ್ದಾರೆ ಎಂಬುದನ್ನು ಪ್ರಶ್ನಿಸದೆ ಜಿಲ್ಲೆಯಾದ್ಯoತ ದಾಖಲೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಕಾಂಗ್ರೆಸಿಗರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಅಂತಿಮ ಹಂತದಲ್ಲಿ ಎಪ್ರಿಲ್ ಫೂಲ್ ಎಂಬ ಪ್ರತಿಭಟನೆಯ ಪ್ರಹಸನದಲ್ಲಿ ತಮ್ಮ ಮೂರ್ಖತನವನ್ನು ಜಗಜ್ಜಾಹೀರುಪಡಿಸಿರುವುದು ಹಾಸ್ಯಾಸ್ಪದವಾಗಿದೆ.

ಪ್ರತಿಭಟನೆಯ ಹೆಸರಿನಲ್ಲಿ ಪ್ರಧಾನಿ ಸಹಿತ ಸಂಸದರ, ಮಾಜಿ ಸಂಸದರ ಮುಖವಾಡವನ್ನು ಧರಿಸಿ ಅಣಕಿಸಿರುವುದು ಹಾಗೂ ರೈಲ್ವೆ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅನಾಗರಿಕ ಬರಹಗಳನ್ನು ಬರೆದಿರುವುದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನವನ್ನು ಸಾಬೀತುಪಡಿಸಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನವನ್ನು ರೂಪಿಸಿದೆ. ವಿಪರೀತ ಬೆಲೆ ಏರಿಕೆ, ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯನ್ನು ಕಡೆಗಣಿಸಿರುವುದು, ಸಾರ್ವಜನಿಕ ಗುತ್ತಿಗೆಯಲ್ಲಿ ಸಂವಿಧಾನ ಬಾಹಿರವಾಗಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಿರುವುದು, ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣದ ದುರುಪಯೋಗ, ಸ್ಮಾರ್ಟ್ ಮೀಟರ್ ದಂಧೆ ಸಹಿತ ರಾಜ್ಯ ಸರಕಾರದ ಹಲವಾರು ಹಗರಣಗಳ ವಿರುದ್ಧ ಕಾಂಗ್ರೆಸಿಗರು ಸ್ವಯಂ ಪ್ರತಿಭಟನೆಯನ್ನು ನಡೆಸಿ ತಮ್ಮ ನೈತಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದು ಉತ್ತಮ.

ಕೇವಲ ಅಧಿಕಾರದ ಲಾಲಸೆಯಿಂದ ಗ್ಯಾರಂಟಿಗಳ ಮಂಕು ಬೂದಿ ಎರಚಿ ಜನರನ್ನು ಫೂಲ್ ಮಾಡಿರುವ ಕಾಂಗ್ರೆಸ್ ಸರಕಾರ ದಿನನಿತ್ಯ ಬೆಲೆ ಏರಿಕೆಯ ಶಾಕ್ ನೀಡುತ್ತಾ ವಿವಿಧ ರೀತಿಯ ಸುಲಿಗೆಯಲ್ಲಿ ತೊಡಗಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಜನ ವಿರೋಧಿ ಭ್ರಷ್ಟ ಕಾಂಗ್ರೆಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started