ಬೆಂಗಳೂರು ಜನತೆಯಿಂದ  ತಿರಸ್ಕೃತ ಸೌಮ್ಯ ರೆಡ್ಡಿ ಬಿಟ್ಟಿ ಉಪದೇಶ ಉಡುಪಿ ಜನತೆಗೆ ಅನಗತ್ಯ : ಸಂಧ್ಯಾ ರಮೇಶ್





ಉಡುಪಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯನಗರ ಕ್ಷೇತ್ರದಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡು ಜನತೆಯಿಂದ ತಿರಸ್ಕೃತರಾದ ಸೌಮ್ಯ ರೆಡ್ಡಿ ಅವರಿಂದ ಉಡುಪಿಯ ಜನತೆಗೆ ಕೋಮು ಸಾಮರಸ್ಯ ಮತ್ತು ಅಭಿವೃದ್ಧಿಯ ಕುರಿತು ಬಿಟ್ಟಿ ಉಪದೇಶ ಅಗತ್ಯವಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್   ವ್ಯಂಗ್ಯವಾಡಿದ್ದಾರೆ.

ಉಚಿತ ಗ್ಯಾರಂಟಿ ಭರವಸೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಉಡುಪಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಮಣಿಯದೆ ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಯಾವುದೇ ನೆಲೆಯಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿರುವುದನ್ನು ಸೌಮ್ಯ ರೆಡ್ಡಿ ಮೊದಲು ತಿಳಿದುಕೊಳ್ಳಲಿ.

ರಾಜ್ಯ ಸರ್ಕಾರ ಗೃಹಲಕ್ಮೀ ಯೋಜನೆಯ ಕಂತುಗಳನ್ನು ರಾಜ್ಯದ ಮಹಿಳೆಯರಿಗೆ ಸರಿಯಾಗಿ ನೀಡಲಾಗುತ್ತಿಲ್ಲ. ತಮ್ಮ ತಂದೆ ಸಚಿವರಾಗಿರುವ ಸಾರಿಗೆ ಇಲಾಖೆಯ ಉಚಿತ ಬಸ್ ಪ್ರಯಾಣ ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಲು ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳೇ ಓಡುತ್ತಿಲ್ಲ. ನರ್ಮ್ ಬಸ್ ವ್ಯವಸ್ಥೆ ಇದ್ದೂ ಇಲ್ಲದಂತಾಗಿದ್ದು, ಬಸ್ ಇದ್ದರೆ ಡೀಸೆಲ್ ಇಲ್ಲ, ಡ್ರೈವರ್ ಇಲ್ಲ, ಡ್ರೈವರ್ ಇದ್ದರೆ ಬಸ್ಸೇ ಇಲ್ಲ ಎಂಬ ದುಸ್ಥಿತಿ ಜಿಲ್ಲೆಯಲ್ಲಿದೆ.

ತಮ್ಮ ತಂದೆ ರಾಮಲಿಂಗ ರೆಡ್ಡಿಯವರು ಸಚಿವರಾಗಿರುವ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಕರಾವಳಿ ಸಹಿತ ರಾಜ್ಯದ ಯಾವುದೇ ಜಿಲ್ಲೆಗಳ ದೇವಸ್ಥಾನಗಳ ಅಭಿವೃದ್ಧಿಗೆ ಚಿಕ್ಕಾಸು ಅನುದಾನ ನೀಡಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹಂಚಿಕೆ ಮಾಡಿದ ಅನುದಾನದ 10% ಅನುದಾನವೂ ಇದುವರೆಗೆ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಜ್ಞಾವಂತ ಜನತೆಗೆ ಬಿಟ್ಟಿ ಉಪದೇಶ ನೀಡುವ ಬದಲು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ವಿವರಗಳನ್ನು ನೀಡಲಿ ಹಾಗೂ ರಾಜ್ಯ ಸರಕಾರದ ಮಲತಾಯಿ ಧೋರಣೆಯ ನೀತಿಯನ್ನು ಸೌಮ್ಯ ರೆಡ್ಡಿ ಪ್ರಶ್ನಿಸಲಿ ಎಂದು ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಜ್ಯೋತಿ ಹೆಬ್ಬಾರ್ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮರೆಮಾಚಲು ಬಿಜೆಪಿ ನಾಯಕರನ್ನು ಟೀಕಿಸುವ ಮುನ್ನ ಉಡುಪಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡದ ತಮ್ಮದೇ ಸರ್ಕಾರದ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಿ. ಸ್ವತಃ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿರುವ ಹೆಬ್ಬಾರ್ ಅವರು ನಿತ್ಯ ನೂರಾರು ಮಂದಿ ಕಚೇರಿಗೆ ಅಲೆದಾಡುತ್ತಿದ್ದರೂ ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ನಿರಂತರ ಅಲೆದಾಡಿಸುತ್ತಿದ್ದರೂ ಯಾಕೆ ಮೂಕ ಪ್ರೇಕ್ಷಕರಾಗಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ಬಡನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ನಿರ್ಮಾಣದ  ಬಗ್ಗೆ ಅನುಮತಿ ನೀಡಿದ ಪ್ರಾಧಿಕಾರದ ಹಿಂದಿನ ಕಮಿಷನರ್ ಅಮಾನತುಗೊಂಡಿದ್ದರೂ ಪ್ರಾಧಿಕಾರದ ಸದಸ್ಯರಾಗಿ ನಿಮ್ಮ ಜಾಣ ಮೌನ ಸಂಶಯ ಮೂಡಿಸುತ್ತಿದೆ.

ಅಂದು ಉಡುಪಿ ರೇವ್ ಪಾರ್ಟಿ, ಸಿ.ಡಿ., ಪದ್ಮಪ್ರಿಯಾ ಪ್ರಕರಣ ಸಂದರ್ಭದಲ್ಲಿ ಬೀದಿ ಬೀದಿಯಲ್ಲಿ ಅಬ್ಬರದ ಭಾಷಣ ಮಾಡಿದ್ದ ನೀವು ಅದೇ ವ್ಯಕ್ತಿಯ ಅಕ್ರಮ ರೆಸಾರ್ಟ್ ನಿರ್ಮಾಣಕ್ಕೆ ಪರೋಕ್ಷ ಸಹಕಾರ ನೀಡುವ ಮೂಲಕ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಇನ್ನಾದರೂ ಕ್ಷುಲ್ಲಕ ರಾಜಕೀಯ ಪ್ರಚಾರಕ್ಕಾಗಿ ಇಂತಹ ಅಪ್ರಬುದ್ಧ ಹೇಳಿಕೆ ನೀಡುವ ಬದಲು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೀತಮ್ ನಾಯಕ್ ಅವರಿಗೆ ‘ಕನ್ನಡ ಸಿರಿ’ ಪ್ರಶಸ್ತಿ




ಉಡುಪಿ: ಕನ್ನಡ ಮತ್ತು ತುಳು ನಾಟಕ ರಂಗದಲ್ಲಿ ಅಭಿನಯಿಸಿ, ಬಳಿಕ ತುಳು, ಕನ್ನಡ ಚಲನ ಚಿತ್ರಗಳ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ್ ಅವರಿಗೆ ಮುಂಬೈಯ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಆಡಿಟೋರಿಯಂನಲ್ಲಿ ಕಲಾ ಜಗತ್ತು ಮುಂಬೈ ಇದರ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಕನ್ನಡ ಸಿರಿ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಾ ಜಗತ್ತು ಮುಂಬೈ ಕಾರ್ಯಾಧ್ಯಕ್ಷ ಡಾ! ಸುರೇಂದ್ರ ಕುಮಾರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಕೋಶಾಧಿಕಾರಿ ಉತ್ತಮ ಶೆಟ್ಟಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರೀತಮ್ ನಾಯಕ್ ಅವರು ‘ಅಮೋಘ ಹಿರಿಯಡ್ಕ’ ಇದರ ಸಕ್ರಿಯ ಸದಸ್ಯರಾಗಿದ್ದು ಸಂಸ್ಥೆಯ ನೇತೃತ್ವದಲ್ಲಿ ನಡೆದ ಹಲವಾರು ನಾಟಕಗಳಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವುಗಳಲ್ಲಿ ಉಡುಪಿ, ಕುಂದಾಪುರ, ಮಂಡ್ಯ, ಮತ್ತು ‘ಮೈಸೂರು ದಸರಾ’ ಮುಂತಾದ ಕಡೆಗಳಲ್ಲಿ ಸತತ 14 ಪ್ರದರ್ಶನಗಳನ್ನು ಕಂಡಿರುವ ‘ರೈಲು ಭೂತ’ ನಾಟಕದಲ್ಲಿ ನಟಿಸಿ ಜನಮನ್ನಣೆ ಗಳಿಸಿರುತ್ತಾರೆ. ಸಂಗೀತ ಕ್ಷೇತ್ರದಲ್ಲೂ ಪ್ರೌಡಿಮೆಯನ್ನು ಹೊಂದಿರುವ ಅವರು ನಿಸ್ವಾರ್ಥ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಕಳೆದ ಪರ್ಯಾಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದ 10 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಯತ್ನಿಸಿ ಪ್ರಸಾದ್ ಕಾಂಚನ್ ಶ್ರೀ ಕೃಷ್ಣನ ಕೃಪೆಗೆ  ಪಾತ್ರರಾಗಲಿ : ದಿನೇಶ್ ಅಮೀನ್




ಉಡುಪಿ: ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ಉಡುಪಿ ಶಾಸಕರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಪಾಲಿಗೆ ಶ್ರೀ ಕೃಷ್ಣನ ಕೃಪೆ ಇದೆ ಎಂಬ ಬಾಲಿಶ ಹೇಳಿಕೆ ನೀಡುವ ಬದಲು 2024ರ ಉಡುಪಿ ಪರ್ಯಾಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಘೋಷಣೆ ಮಾಡಿದ್ದ 10 ಕೋಟಿ ರೂಪಾಯಿ ಅನುದಾನವನ್ನು ತಮ್ಮದೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಮೂಲಕ ಬಿಡುಗಡೆಗೊಳಿಸಿ ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗಲಿ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 30 ಸಾವಿರ ಮತಗಳಿಂದ ಸೋತು ಹತಾಶರಾಗಿರುವ ಪ್ರಸಾದ್ ಕಾಂಚನ್ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ಭಯದಿಂದ ತನ್ನ ಅಸ್ತಿತ್ವವನ್ನು ಉಳಿಸಲು ಶಾಸಕರ ವಿರುದ್ಧ ಇಂತಹ ಹತಾಶ ಹೇಳಿಕೆ ನೀಡುತ್ತಿರುವುದು ಕನಿಕರ ಮೂಡಿಸುತ್ತಿದೆ.

ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಅಸ್ಕರ್ ಫೆರ್ನಾಂಡೀಸ್ ಅವರ ಕೃಪಾಕಟಾಕ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಕಳೆದ ಚುನಾವಣೆಯಲ್ಲಿ ಲಕ್ಕಿಡಿಪ್ ಅಭ್ಯರ್ಥಿಯಾಗಿ ಉಡುಪಿಯಲ್ಲಿ  ಚುನಾವಣೆಗೆ ಸ್ಪರ್ಧಿಸಿ, ಉಡುಪಿಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಸಾದ ಕಾಂಚನ್ ಮೊನ್ನೆ ತನ್ನದೇ ಪಕ್ಷದ ಬ್ಲಾಕ್ ಕಾಂಗ್ರೆಸ್ ಮುಖಂಡನ ಜೊತೆ ನೂತನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲೇ ಎಳೆದಾಡಿಕೊಂಡು ಕಾಂಗ್ರೆಸ್ ಪಕ್ಷದ ಘನತೆಗೆ ಧಕ್ಕೆ ತಂದಿರುವುದು ಉಡುಪಿ ಜನತೆಗೆ ತಿಳಿಯದ ವಿಚಾರವಲ್ಲ.

ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿ ವಿಚಾರದಲ್ಲಿ ತಮ್ಮ ಬದ್ಧತೆ ಹಾಗೂ ಸಿದ್ಧಾಂತದ ಮೂಲಕ ಚುನಾವಣೆ ಎದುರಿಸಿದ ಉಡುಪಿ ಶಾಸಕರಿಗೆ ಉಡುಪಿಯ ಪ್ರಬುದ್ಧ ಜನತೆ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಪ್ರಸಾದ್ ಕಾಂಚನ್ ರಾಜಕೀಯ ಅಪ್ರಬುದ್ಧತೆಗೆ ಉತ್ತರ ನೀಡಿದ್ದಾರೆ. ಈ ಗೆಲುವಿನ ಮೂಲಕ ಉಡುಪಿ ಶಾಸಕರಿಗೆ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪಾಶೀರ್ವಾದ ಸದಾ ಇದೆ ಎಂಬುದು ಸಾಬೀತಾಗಿದೆ.

ಗೋ ಹತ್ಯೆ ವಿಚಾರಗಳಲ್ಲಿ ಎಂದಿಗೂ ರಾಜಿ ಮಾಡದ ಶಾಸಕರು ಮೊನ್ನೆ ಕುಂಜಾಲಿನಲ್ಲಿ ನಡೆದ ಘಟನೆಯಲ್ಲಿಯೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋ ಹತ್ಯೆಯನ್ನು ಹಿಂದೂ, ಮುಸ್ಲಿಂ ಅಥವಾ ಯಾರೇ ಮಾಡಿದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ, ಹಾಗೂ ಹಿಂದುತ್ವ, ಗೋ ರಕ್ಷಣೆ, ಅಭಿವೃದ್ಧಿಯ ಬಗ್ಗೆ ಶಾಸಕರ ಬದ್ಧತೆಯನ್ನು ಪ್ರಶ್ನಿಸುವ ಯೋಗ್ಯತೆ ಪ್ರಸಾದ್ ಕಾಂಚನ್ ಗೆ ಇಲ್ಲ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾರ್ಥಕ್ಕಾಗಿ ಇಂದಿರಾ ಗಾಂಧಿಯಿಂದ ಸಂವಿಧಾನದ ದುರುಪಯೋಗ : ಕೋಟ




ಉಡುಪಿ: ತುರ್ತು ಪರಿಸ್ಥಿತಿಯಲ್ಲಿ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ‘ಭೋಲೋ ಭಾರತ್ ಮಾತಾಕಿ ಜೈ’ ಅಂದಿದ್ದಕ್ಕೆ ಡಾ! ವಿ.ಎಸ್. ಆಚಾರ್ಯ ಅವರನ್ನು ಜೈಲಿಗೆ ಹಾಕಲಾಗಿತ್ತು. ಅವರ ಪತ್ನಿ ಗರ್ಭಿಣಿ ಆಗಿದ್ದರೂ ಅವರ ಜೊತೆ ಮಾತನಾಡಲು ಬಿಟ್ಟಿರಲಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ‘ಸಂವಿಧಾನ ಹತ್ಯಾ ದಿನ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 50 ವರ್ಷದ ಕೆಳಗೆ ಜೂ.25ರಂದು ಇಂದಿರಾ ಗಾಂಧಿ ಅವರು ಪ್ರಧಾನಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಏಕೈಕ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದರು. ದೇಶಕ್ಕೆ ಅನಾಹುತ ಆಗುವ ಸಂದರ್ಭದಲ್ಲಿ ಮಾತ್ರ ತುರ್ತು ಪರಿಸ್ಥಿತಿಯನ್ನು ಹೇರಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿತ್ತು. ಅದನ್ನು ಇಂದಿರಾ ಗಾಂಧಿ ಸಂಪೂರ್ಣ ದುರುಪಯೋಗ ಪಡಿಸಿಕೊಂಡಿದ್ದರು. ಪ್ರತಿಪಕ್ಷ, ಪತ್ರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಯಿತು ಎಂದರು.

ಸರ್ವೋದಯ ಆಂದೋಲನದಲ್ಲಿ ತೊಡಗಿದ್ದ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪಾಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫೆರ್ನಾಂಡೀಸ್, ಡಿ.ಹೆಚ್. ಶಂಕರಮೂರ್ತಿ ಸೇರಿ ಹಲವಾರು ಸ್ಥಳೀಯ ಹೋರಾಟಗಾರರನ್ನು ಜೈಲಿಗೆ ಅಟ್ಟಲಾಗಿತ್ತು ಎಂದರು.

ತುರ್ತು ಪರಿಸ್ಥಿತಿಯಲ್ಲಿ  ಜೈಲಿನಲ್ಲಿ 5 ಜನರ ಹತ್ಯೆ ಆಯಿತು. ಮಂಗಳೂರಿನ ಮಧುಕರ್ ಎಂಬವರು ತುರ್ತು ಪರಿಸ್ಥಿತಿ ವೇಳೆ ಹೋರಾಟ ನಡೆಸಿದ್ದರು. ಈ ವೇಳೆ ಅವರ ಕಾಲು ಸ್ವಾಧೀನ ಕಳೆದುಕೊಂಡಿತ್ತು. ಅಂದಿನ ಕರಾಳತೆಯನ್ನು ಅವರು ಇಂದು ಕೂಡ ನೆನೆಯುತ್ತಾರೆ ಎಂದರು. ಒಟ್ಟು 38,000 ನಾಯಕರನ್ನು ಜೈಲಿಗಟ್ಟಲಾಗಿತ್ತು. ಇಲ್ಲಿನ ಮಾಧ್ಯಮಗಳನ್ನು ಸಂಪೂರ್ಣ ನಿಯಂತ್ರಿಸಲಾಗಿತ್ತು. ಆದರೆ ಬಿಬಿಸಿ ಮಾಧ್ಯಮ 2,000 ಜನ ಸತ್ತಿರುವ ಬಗ್ಗೆ ವರದಿ ನೀಡಿತ್ತು.

ಇದಲ್ಲದೇ ಅದೇ ಅವಧಿಯಲ್ಲಿ ಸಂತಾನ ಹರಣ ಮಾಡುವ ಯೋಜನೆ ಜಾರಿಗೆ ತಂದಿದ್ದ ಇಂದಿರಾ, ಆ ಮೂಲಕ ಗಲ್ಲಿ ಗಲ್ಲಿಗೆ ಹೋಗಿ, ಸಂತಾನ ಹರಣ ಮಾಡಿಸಲಾಯಿತು. ಅದಕ್ಕೆ ಒಪ್ಪಿದವರಿಗೆ 75 ರೂ. ಒಂದು ಪ್ಯಾಕೇಟ್ ತುಪ್ಪ ನೀಡುವ ಆಮಿಷ ಒಡ್ಡಿದ್ದರು ಎಂದರು.

1 ಕೋಟಿ ಗಂಡಸರನ್ನು  ಸಂತಾನ ಹರಣ ಮಾಡಿಸಲಾಗಿತ್ತು. ಈ ಅವಧಿಯಲ್ಲಿ  ಒಂದೇ ಗ್ರಾಮದಲ್ಲಿ 8 ಜನ ಸೇರಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ತುರ್ತು ಪರಿಸ್ಥಿತಿ ವೇಳೆ ಪಾರ್ಲಿಮೆಂಟ್ ಹಾಗೂ ವಿಧಾನ ಸೌಧ ಸರ್ವಾಧಿಕಾರಿಗಳು ಆಡುವ ಅಂಗಳವಾಗಿತ್ತು. ಅಂತಹ 21 ತಿಂಗಳು ಇದ್ದ ತುರ್ತು ಪರಿಸ್ಥಿತಿ ಮತ್ತೆ ಮತ್ತೆ ಬಾರದಿರಲಿ ಎಂದರು.

*ತುರ್ತು ಪರಿಸ್ಥಿತಿ ಹೋರಾಟಗಾರರನ್ನು ನೆನೆಯೋಣ : ಕುತ್ಯಾರು*

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನ ಆದವರ ಅಥವಾ ಹೋರಾಟ ಮಾಡಿದವರ ಪರಿಚಯ ಮಾಡುವ ಸಮಾವೇಶವನ್ನು ಆಯೋಜಿಸಬೇಕಿದೆ. ಹಾಗಾಗಿ ಪ್ರತೀ ಮಂಡಲ ಪ್ರಮುಖರು ಹೋರಾಟಗಾರರ ಪರಿಚಯವನ್ನು ಪಟ್ಟಿ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪೆರಣoಕಿಲ ಶ್ರೀಶ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆರ್ಗ ದಿನಕರ್ ಶೆಟ್ಟಿ ಸ್ವಾಗತಿಸಿ, ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ವಂದಿಸಿದರು.

ನರ್ಮ್ ಬಸ್ ಗಳ ಸಮಸ್ಯೆ ಪರಿಹರಿಸಲು ಬಿಜೆಪಿ ಉಡುಪಿ ನಗರ ಯುವ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ





ಉಡುಪಿ: ಪ್ರಸ್ತುತ ಸ್ಥಗಿತಗೊಂಡಿರುವ ನರ್ಮ್ ಬಸ್ ಗಳನ್ನು ಪುನರಾರಂಭಿಸುವ ಜೊತೆಗೆ ಹಳೆಯ ಬಸ್ ಗಳನ್ನು ಬದಲಾಯಿಸಿ, ಹೆಚ್ಚುವರಿ ಬಸ್ ಗಳ ಸೇವೆಯನ್ನು ಒದಗಿಸುವಂತೆ ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ವತಿಯಿಂದ ಮೋರ್ಚಾ ಅಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ನಗರ ಭಾಗದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಸುಮಾರು 9 ವರ್ಷಗಳ ಹಿಂದೆ ನರ್ಮ್ ಬಸ್ಸುಗಳು ಚಾಲನೆಗೊಂಡಿದ್ದು, ಈ ಬಸ್ಸುಗಳ ಓಡಾಟ ಸಾವರ್ಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ ಪ್ರಸ್ತುತ 13 ನರ್ಮ್ ಬಸ್ಸುಗಳ ಓಡಾಟವನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗಿದೆ. ಸದ್ರಿ ಸ್ಥಗಿತಗೊಳಿಸಲಾಗಿರುವ 13 ರೂಟ್ ಗಳ ಬಸ್ಸುಗಳ ಓಡಾಟವನ್ನು ಪುನರಾರಂಭಿಸುವುದು ತೀರಾ ಅಗತ್ಯವಾಗಿರುತ್ತದೆ. ಅಲ್ಲದೆ ಸದ್ರಿ 45 ಬಸ್ಸುಗಳ ಮಂಜೂರಾತಿಯು 10 ವರ್ಷಗಳ ಹಿಂದಿನ ಸಮೀಕ್ಷೆಯಂತೆ ಆಗಿರುತ್ತದೆ. ಹೊಸ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತು ಪ್ರಸ್ತುತ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸದ್ರಿ ಬಸ್ಸುಗಳ ಸಂಖ್ಯೆಯನ್ನು ಕನಿಷ್ಠ 80 ನರ್ಮ್ ಬಸ್ಸುಗಳಿಗೆ ಹೆಚ್ಚಿಸಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಉಡುಪಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ  32 ನರ್ಮ್ ಬಸ್ಸುಗಳು ತೀರಾ ಹಳೆಯದಾಗಿದ್ದು, ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಘಟನೆಗಳು ಸಂಭವಿಸುತ್ತಿವೆ. ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರ ಕೊರತೆ ಇರುವುದರಿಂದ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಾದ ಅನಿವಾರ್ಯತೆ ಇದೆ. ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು, ಕಾರ್ಮಿಕರು ಮತ್ತು ವಯೋವೃದ್ಧರು ಕಾಲ್ನಡಿಗೆಯಲ್ಲೇ ಓಡಾಡುವ ದುಸ್ಥಿತಿ ಬಂದೊದಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಈ ಎಲ್ಲಾ ಜ್ವಲoತ ಸಮಸ್ಯೆಗಳನ್ನು ವಿವರಿಸಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲು ಆಗ್ರಹಿಸಲಾಗಿದೆ.

ನರ್ಮ್ ಬಸ್ಸು ಗಳ ಸೇವೆಯನ್ನು ಹೆಚ್ಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳುವ ನಿರ್ಧಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂದರ್ಶ್ ಆಚಾರ್ಯ, ಪ್ರಜ್ವಲ್ ಪೂಜಾರಿ, ಧನುಷ್ ಬಿ.ಕೆ,ಮ್., ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ ಮಣಿಪಾಲ, ಶಿವಪ್ರಸಾದ್, ಕಾರ್ಯದರ್ಶಿಗಳಾದ ಧನುಷ್ ಕಡಿಯಾಳಿ, ಹರ್ಷರಾಜ್, ಆಕಾಂಶ್, ಭೂಷಣ್, ದೀಕ್ಷಿತ್ ಶೆಟ್ಟಿ, ರಮಿತ್ ಶೆಟ್ಟಿ, ತರುಣ್ ಉಪಸ್ಥಿತರಿದ್ದರು.

ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಎದುರು ಬೃಹತ್ ಧರಣಿ ಸತ್ಯಾಗ್ರಹ


ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಬಲಪಾಡಿ ಗ್ರಾಮ ಪಂಚಾಯತ್ ಎದುರು ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಯಿತು.

ಬಿಜೆಪಿ ರಾಜ್ಯಾಧ್ಯಕ್ಷರ ಕರೆಯಂತೆ ರಾಜ್ಯ ಕಾಂಗ್ರೆಸ್ ಸರಕಾರದಿಂದ ಜನತೆ ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಶಾಸಕರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳ ಎದುರು ನಡೆದ ಧರಣಿ ಸತ್ಯಾಗ್ರಹದಲ್ಲಿ 9/11 ನಿವೇಶನಗಳ ಸಮಸ್ಯೆಗಳ ಪರಿಹಾರಕ್ಕೆ ಅಗ್ರಹಿಸಿ, ಆಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ, ಆಶ್ರಯ ಮನೆಗಳ ಮಂಜೂರಾತಿಗೆ ಒತ್ತಾಯಿಸಿ, ವೃದ್ಯಾಪ್ಯ ವೇತನ-ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೊಳಿಸಲು ಅಗ್ರಹಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಎಳೆ ಎಳೆಯಾಗಿ ಬಿಡಿಸಿ ಖಂಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಗದೀಶ್ ಆಚಾರ್ಯ ಕಪ್ಪೆಟ್ಟು, ಗಿರೀಶ್ ಅಮೀನ್ ಕಿದಿಯೂರು, ಯೋಗೀಶ್ ಶೆಟ್ಟಿ ಅಂಬಲಪಾಡಿ, ರಾಮರಾಜ್ ಕಿದಿಯೂರು, ಮಹೇಂದ್ರ ಕೋಟ್ಯಾನ್, ನಾಗರಾಜ್ ಕರ್ಕೇರ, ವಿಜಯ ಶೆಟ್ಟಿ, ಜಗದೀಶ್ ಕೋಟ್ಯಾನ್, ಹರೀಶ್ ಆಚಾರ್ಯ, ವಿನೋದ್ ಪೂಜಾರಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಯೋಗೀಶ್ ಶೆಟ್ಟಿ,‌ ಉಪಾಧ್ಯಕ್ಷೆ ಸುಜಾತಾ ಸುಧಾಕರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸೋಮನಾಥ್ ಬಿ.ಕೆ., ಸುನಿಲ್ ಕುಮಾರ್ ಕಪ್ಪೆಟ್ಟು,‌ಪ್ರಮೋದ್ ಸಾಲ್ಯಾನ್ ,ಕುಸುಮಾ ಕಿಶೋರ್,‌ ಹರೀಶ್ ಪಾಲನ್, ರೋಹಿಣಿ ಎಸ್. ಪೂಜಾರಿ, ಶಕುಂತಳಾ ಶೆಟ್ಟಿ, ಸುಮಂಗಲಾ, ಸುಂದರ ಪೂಜಾರಿ,‌ ಉಷಾ ಶೆಟ್ಟಿ, ಶಶಿಧರ್ ಸುವರ್ಣ, ಸಬಿತಾ ಸಹಿತ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಿದಿಯೂರು ಶ್ಯಾಮಿಲಿ ಪಿ.ಯು. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ




ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ಹಾಗೂ ಶ್ಯಾಮಿಲಿ ಪದವಿ ಪೂರ್ವ ಕಾಲೇಜು ಕಿದಿಯೂರು ಇವರ ಜಂಟಿ ಆಶ್ರಯದಲ್ಲಿ
ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜ್ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಲ್ಪೆ ಆರಕ್ಷಕ ಠಾಣೆಯ ಠಾಣಾಧಿಕಾರಿ ಗಂಗಪ್ಪ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುಂದರ್ ಜೆ. ಕಲ್ಮಾ ಡಿ  ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಜಯಶೀ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಲೂಕು ಕೃಷಿ ಅಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಲಲಿತಾ ವಂದಿಸಿದರು.

ಅತಿ ಉಪಯುಕ್ತ ಮಾಹಿತಿ🎥

ವಿಪರೀತ ಜನಸಂದಣಿಯಲ್ಲಿ ಕಾಲ್ತುಳಿತ ಉಂಟಾದಲ್ಲಿ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಪೋಲೀಸ್ ಇಲಾಖೆಯಿಂದ ಪ್ರಾತ್ಯಕ್ಷಿಕೆ

ಬಿಜೆಪಿ ಉಡುಪಿ ನೂತನ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರಿಗೆ ಸಂಸದ ಕೋಟ ಗೌರವಾರ್ಪಣೆ



ಉಡುಪಿ: ಬಿಜೆಪಿ ಉಡುಪಿ ನೂತನ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರು ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಸಂಸದರ ಕಛೇರಿಯಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ಸಂಸದ ಕೋಟ ಅವರು ಕುತ್ಯಾರು ನವೀನ್ ಶೆಟ್ಟಿ ಅವರನ್ನು ಶಾಲು ಹೊದೆಸಿ ಗೌರವಿಸಿದರು.

ಪಕ್ಷ ಪ್ರಮುಖರಾದ ರವಿ ಅಮೀನ್ ಬನ್ನಂಜೆ, ಪ್ರವೀಣ್ ಕುಮಾರ್ ಶೆಟ್ಟಿ ಕಪೆಟ್ಟು, ಪ್ರಸಾದ್ ಬಿಲ್ಲವ ಕುಂದಾಪುರ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಸತೀಶ್ ಪೂಜಾರಿ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಯ ಬದ್ಧತೆಗೆ ಮೋದಿ ಆಡಳಿತದ 11 ವರ್ಷಗಳೇ ಸಾಕ್ಷಿ: ಕಿಶೋರ್ ಕುಮಾರ್ ಕುಂದಾಪುರ




ಉಡುಪಿ: ಕೇವಲ ರಾಜಕಾರಣ, ಅಧಿಕಾರ ಅನುಭವಿಸಲು ಸೀಮಿತವಾಗದ ಬಿಜೆಪಿ ದೇಶದ ಅಭಿವೃದ್ಧಿಯ ಬದ್ಧತೆ ಹೊಂದಿದ್ದು ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ 11 ವರ್ಷಗಳ ಆಡಳಿತವೇ ಸಾಕ್ಷಿ ಎಂದು  ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಅವರು ‘ವಿಕಸಿತ ಭಾರತದ ಅಮೃತ ಕಾಲ’ – ‘ಸೇವೆ, ಸುಶಾಸನ, ಬಡವರ ಕಲ್ಯಾಣ’ದ ‘ಮೋದಿ ಸರಕಾರಕ್ಕೆ 11 ವರ್ಷ’ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿವೃದ್ಧಿ ಜತೆಗೆ ಪಕ್ಷ ಸಂಘಟನೆ ಮುಖ್ಯ. ನೆಹರೂ ಬಳಿಕ ನಿರಂತರ ಮೂರು ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರರಾಗಿದ್ದು ನುಡಿದಂತೆ ನಡೆದಿದ್ದಾರೆ, ಪ್ರಣಾಳಿಕೆಯ ಗರಿಷ್ಠ ಭರವಸೆಗಳನ್ನು ಈಡೇರಿಸಿದ್ದಾರೆ. 2004ರಲ್ಲಿ ಕೇವಲ 7 ರಾಜ್ಯಗಳಲ್ಲಿದ್ದ ಬಿಜೆಪಿ ಅಧಿಕಾರ ಇಂದು 21 ರಾಜ್ಯಗಳಿಗೆ ವಿಸ್ತರಣೆಯಾಗಿದೆ. ದಿನಕ್ಕೆ 38 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ್ದು, ಭಾರತ ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು ಮೊದಲ ಸ್ಥಾನಕ್ಕೆ ಏರಬೇಕನ್ನುವುದು ಬಿಜೆಪಿ ಕಾರ್ಯಕರ್ತರು ಮತ್ತು ದೇಶವಾಸಿಗಳ ಆಶಯವಾಗಿದೆ ಎಂದರು.

ಅಭಿಯಾನದ ಬಿಜೆಪಿ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ, ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದತಿ ಕನಸು ನನಸಾಗಿದೆ. 4 ಕೋಟಿ ವಸತಿ, 12 ಕೋಟಿ ಶೌಚಾಲಯ, 68 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು, ಮುದ್ರಾ ಯೋಜನೆಯಡಿ ಉದ್ಯಮಕ್ಕೆ ಸಾಲದ ನೆರವು ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯಾಗಾರ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ‘ಮೋದಿ ಸರ್ಕಾರಕ್ಕೆ 11 ವರ್ಷ’ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ವಿವಿಧ ಅಭಿಯಾನಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಹಾವೀರ ಹೆಗ್ಡೆ ಸಹಿತ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು, ಅಭಿಯಾನದ ಮಂಡಲ ಸಂಚಾಲಕರು ಉಪಸ್ಥಿತರಿದ್ದರು.

ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಮೂರ್ತಿ ಅವರಿಗೆ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ಆಡಳಿತದ 11 ವರ್ಷವನ್ನು ಸಂಭ್ರಮಿಸಲಾಯಿತು.

ಮೇ 25ರಂದು ನಡೆದ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಮಂಡಲಗಳ 100% ಬೂತ್ ಗಳಲ್ಲಿ ವೀಕ್ಷಣೆ ಮಾಡಿ ವರದಿ, ಫೋಟೋ ಅಪ್ಲೋಡ್ ಮಾಡಿರುವ ಬಗ್ಗೆ ಉಡುಪಿ ನಗರ, ಗ್ರಾಮಾಂತರ ಹಾಗೂ ಬೈಂದೂರು ಮಂಡಲಗಳ ಅಧ್ಯಕ್ಷರುಗಳಾದ ದಿನೇಶ್ ಅಮೀನ್, ರಾಜೀವ್ ಕುಲಾಲ್, ದೀಪಕ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ ರಾವ್ ಉಪ್ಪೂರು ವಂದೇ  ಮಾತರಂ ಹಾಡಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ದಿಲೇಶ್ ಶೆಟ್ಟಿ ವಂದಿಸಿದರು.

Design a site like this with WordPress.com
Get started