Design a site like this with WordPress.com
Get started

ಜ.21ರಿಂದ 29: ಬಿಜೆಪಿ ‘ವಿಜಯ ಸಂಕಲ್ಪ ಅಭಿಯಾನ’ವನ್ನು ಯಶಸ್ವಿಗೊಳಿಸಲು ಕುಯಿಲಾಡಿ ಕರೆ

News by: ಜನತಾಲೋಕವಾಣಿನ್ಯೂಸ್

ಉಡುಪಿ: ಜಿಲ್ಲೆಯಾದ್ಯಂತ ಜ.2ರಿಂದ ಜ.12ರ ವರೆಗೆ ನಡೆದ ‘ಬೂತ್ ವಿಜಯ ಅಭಿಯಾನ’ವು 100% ಪ್ರಗತಿಯೊಂದಿಗೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಇದೀಗ ಎರಡನೇ ಹಂತದಲ್ಲಿ ಜ.21ರಿಂದ ಜ.29ರ ವರೆಗೆ ನಡೆಯಲಿರುವ ‘ವಿಜಯ ಸಂಕಲ್ಪ ಅಭಿಯಾನ’ವನ್ನು ಕೂಡಾ ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ಜ.17ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ‘ಡಬಲ್ ಇಂಜಿನ್ ಸರಕಾರ’ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಿದೆ. ಶೋಷಿತ, ಬಡವ, ದಲಿತ, ರೈತ, ಮಹಿಳೆ, ಯುವಕರ ಸಹಿತ ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸದೃಢ ಪಕ್ಷ ಸಂಘಟನೆಯಲ್ಲಿ ಪಕ್ಷದ ಮುಖಂಡರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಯುವ ಜನತೆ ಸ್ವಯಂ ಪ್ರೇರಿತರಾಗಿ ಬಿಜೆಪಿ ಕಾರ್ಯಕರ್ತರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಜ.21ರಿಂದ ಜ.29ರ ವರೆಗೆ ಜಿಲ್ಲೆಯಾದ್ಯಂತ ‘ವಿಜಯ ಸಂಕಲ್ಪ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ಸಮಸ್ತ ಕಾರ್ಯಕರ್ತರು ಈ ಬೃಹತ್ ಅಭಿಯಾನದಲ್ಲಿ ಕೈಜೋಡಿಸಿ, ಪ್ರತಿ ಮನೆಯನ್ನು ಸಂಪರ್ಕಿಸುವ ಮೂಲಕ ಸರಕಾರದ ಸಾಧನೆಗಳನ್ನು ಮನೆ ಮನಗಳಿಗೆ ತಲುಪಿಸುವ ಜೊತೆಗೆ ಈ ಕೆಳಗಿನ ಪ್ರಮುಖ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

* ಬೂತ್ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳ ಸಂಪರ್ಕ
* ಪ್ರತೀ ಮನೆಗೆ ಸರಕಾರದ ಸಾಧನೆಗಳ ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ
* 80000 90009 ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸುವುದು
* ಫಲಾನುಭವಿಗಳ ಸಂಪರ್ಕ
*ಪ್ರತೀ ಬೂತ್ ವ್ಯಾಪ್ತಿಯಲ್ಲಿ 10 ನಿಗದಿತ ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಬರಹವನ್ನು ಮಾಡುವುದು.

‘ವಿಜಯ ಸಂಕಲ್ಪ ಅಭಿಯಾನ’ದ ರಾಜ್ಯ ತಂಡದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಉಡುಪಿ ಜಿಲ್ಲಾ ಸಂಚಾಲಕರಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಸಹ ಸಂಚಾಲಕರಾಗಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈಗಾಗಲೇ ಜಿಲ್ಲೆಯ ಪ್ರತಿ ಮಂಡಲಗಳಲ್ಲಿ ತಂಡಗಳನ್ನು ರಚಿಸಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಜ.16ರಂದು ಪ್ರಾರಂಭಗೊಂಡಿರುವ ಜಿಲ್ಲೆಯ ಪ್ರತೀ ಶಕ್ತಿಕೇಂದ್ರಗಳ ಸಭೆ ಜ.18ರ ವರೆಗೆ ನಡೆಯಲಿದೆ.

ಜ.21ರಂದು ಸ್ಥಳೀಯ ಸಚಿವರು, ಶಾಸಕರು ಹಾಗೂ ಜಿಲ್ಲಾ ಮತ್ತು ಮಂಡಲ ತಂಡ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಾವಧಿ ವಿಸ್ತಾರಕರನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಈ ನಿಟ್ಟಿನಲ್ಲಿ ಜ.21ರಂದು ಜಿಲ್ಲೆಯಾದ್ಯಂತ ಚಾಲನೆಗೊಳ್ಳಲಿರುವ ‘ವಿಜಯ ಸಂಕಲ್ಪ ಅಭಿಯಾನ’ದಲ್ಲಿ ಎಲ್ಲ ಸ್ತರದ ಕಾರ್ಯಕರ್ತರು ಬದ್ಧತೆ ಮತ್ತು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಜೊತೆಗೆ ಜ.29ರಂದು ಬೆಳಿಗ್ಗೆ 11.00 ಗಂಟೆಗೆ ಪ್ರತಿ ಬೂತ್ ನಲ್ಲಿ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿ ನಿಗದಿತ ಲಿಂಕ್ ನಲ್ಲಿ ಕಾರ್ಯಕ್ರಮದ ಫೋಟೋ ಅಪ್ಲೋಡ್ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಸತತ 70 ವರ್ಷಗಳ ಕಾಲ ದೇಶ ಲೂಟಿಗೈದಿರುವ ಕಾಂಗ್ರೆಸ್ಸಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸುಳ್ಳಿನ ಫ್ಯಾಕ್ಟರಿಯಂತಿರುವ ಕಾಂಗ್ರೆಸ್ ನಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಳು ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕತ್ತಲೆಯಲ್ಲಿ ಟಾರ್ಚ್ ಹಿಡಿದು ಬಜೆಟ್ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ತಿಂಗಳು ಯುವ ಜನತೆಗೆ 6,000 ಮಾಶಾಸನ ನೀಡುವ ವಾಗ್ದಾನಗೈದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಇಂತವರ ಪೊಳ್ಳು ಭರವಸೆಯನ್ನು ರಾಜ್ಯದ ಜನತೆ ಸಾಕಷ್ಟು ಕಂಡಿದ್ದಾರೆ. ಇದೀಗ ‘ನಾ ನಾಯಕಿ’; ಅಂದರೆ ‘ನಾಯಕಿ ಇಲ್ಲ’ ಎಂದು ಪ್ರದರ್ಶನ ನೀಡುತ್ತಿರುವ ಪ್ರಿಯಾಂಕಾ ಗಾಂಧಿ ತನ್ನ ಪೊಳ್ಳು ಭರವಸೆಗೆ ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಬಿಜೆಪಿ ಸರಕಾರ ಕೊಟ್ಟು ಮಾತನಾಡುವ ಪರಿ ಪಾಠ ಹೊಂದಿದೆ; ಆದರೆ ಕಾಂಗ್ರೆಸ್ ಕೇವಲ ಪೊಳ್ಳು ಭರವಸೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸದಾ ಜಾಗೃತರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಜೊತೆಗೆ ವಿರೋಧ ಪಕ್ಷಗಳ ಅಪಪ್ರಚಾರ, ಸುಳ್ಳು ಭರಸೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ, ಅಭಿವೃದ್ಧಿ ಮತ್ತು ಸಂಘಟನಾ ಸಾಮರ್ಥ್ಯದ ಮೂಲಕ ಬಿಜೆಪಿ ಮಗದೊಮ್ಮೆ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರದಲ್ಲಿ ಜಯಭೇರಿ ಗಳಿಸಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಕುಯಿಲಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಪ್ರತಾಪ್ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು.

ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ

News by: ಜನತಾಲೋಕವಾಣಿನ್ಯೂಸ್

ಕಾಪು: ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ ಕಾಪು ವೀರಭದ್ರ ಸಭಾ ಭವನದಲ್ಲಿ ನಡೆಯಿತು. ಕಳೆದ ಹತ್ತು ದಿನಗಳ ಕಾಲ ನಡೆದ ಬೂತ್ ವಿಜಯ ಅಭಿಯಾನದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು. ಮುಂದೆ ಜ.21 ರಿಂದ ಜ.29 ರವರೆಗೆ ನಡೆಯುವ ವಿಜಯ ಸಂಕಲ್ಪ ಅಭಿಯಾನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಕ್ಷದ ವಿವಿಧ ಪದಾಧಿಕಾರಿಗಳು ಅಪೇಕ್ಷಿತರು ಉಪಸ್ಥಿತರಿದ್ದರು.

ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ ಹೆಚ್ಚುವರಿ 2,500 ಕೆಎಲ್ (25 ಲಕ್ಷ ಲೀಟರ್) ಸೀಮೆ ಎಣ್ಣೆ ಬಿಡುಗಡೆ ಮತ್ತು 2022-23ನೇ ಸಾಲಿನ ಹಂಚಿಕೆಗಿಂತಲೂ ಹೆಚ್ಚುವರಿ ಸೌಲಭ್ಯ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ: ಶೋಭಾ ಕರಂದ್ಲಾಜೆ

News by: ಜನತಾಲೋಕವಾಣಿನ್ಯೂಸ್



2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮಿನುಗಾರರಿಗೆ ಒಟ್ಟು 5,472 ಕೆಎಲ್ ಸೀಮೆ ಎಣ್ಣೆಯನ್ನು ಹಂಚಿಕೆ ಮಾಡಿತ್ತು. ಅದರಂತೆ ಹಂತ ಹಂತವಾಗಿ ರಾಜ್ಯದ ಮೀನುಗಾರರ ಸೌಲಭ್ಯಕ್ಕಾಗಿ 2,472 ಕೆಎಲ್ + 3,000 ಕೆಎಲ್ ಸೀಮೆ ಎಣ್ಣೆಯನ್ನು ಬಿಡುಗೊಡೆಗೊಳಿಸಿತ್ತು. ಇಂದು ದಿನಾಂಕ 12.1.2023ರಂದು ಪೆಟ್ರೋಲಿಯಂ ಸಚಿವಾಲಯ ಹಂಚಿಕೆಗಿಂತಲೂ ಹೆಚ್ಚುವರಿಯಾಗಿ 2,500 ಕೆಎಲ್ ಸೀಮೆ ಎಣ್ಣೆಯನ್ನು ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸೌಲಭ್ಯಕ್ಕಾಗಿ ಬಿಡುಗಡೆಗೊಳಿಸಿ ಆದೇಶ ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2022-23ರ ಸಾಲಿನ ಅವಧಿಯ ಹಂಚಿಕೆಗಿಂತಲೂ ಹೆಚ್ಚಿನ ಪ್ರಮಾಣದ ಸೀಮೆ ಎಣ್ಣೆಯನ್ನು ರಾಜ್ಯದ ಮೀನುಗಾರರಿಗೆ ಬಿಡುಗಡೆಗೊಳಿಸಿದೆ. ಒಟ್ಟಾರೆಯಾಗಿ 7,972 ಕೆಎಲ್ (5,472 ಕೆಎಲ್ + 2,500 ಕೆಎಲ್) ಸೀಮೆ ಎಣ್ಣೆ ಹಂಚಿಕೆಯನ್ನು 2022-23ನೇ ಸಾಲಿನಲ್ಲಿ ರಾಜ್ಯದ ಕರಾವಳಿ ಮೀನುಗಾರರು ಕೇಂದ್ರದಿಂದ ಪಡೆದುಕೊಂಡಿದ್ದಾರೆ.

ಕರಾವಳಿ ಪ್ರದೇಶದ ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಪಂದನೆಯನ್ನು ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಕರಾವಳಿ ಪ್ರದೇಶದ ಜೀವನಾಧಾರ ಮೀನುಗಾರಿಕೆ. ಮೀನುಗಾರಿಕೆಯನ್ನೇ ಬಹುಪಾಲು ಜನರು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರ ಮನವಿಯನ್ನು ಪರಿಗಣಿಸಬೇಕೆಂದು ಒತ್ತಾಯಪೂರ್ವಕವಾಗಿ ಶೋಭಾ ಕರಂದ್ಲಾಜೆಯವರು ಮನವಿ ಮಾಡಿದ್ದರು. ಅದರಂತೆ ಕೇಂದ್ರದ ಪೆಟ್ರೋಲಿಯಂ ಸಚಿವ ಹರದೀಪ ಸಿಂಗ್ ಪುರಿಯವರು ಮನವಿಗೆ ಸ್ಪಂದಿಸಿ, ಮೀನುಗಾರರ ಬೇಡಿಕೆಯನ್ನು ಈಡೇರಿಸಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ ಸಿಂಗ್ ಪುರಿಯವರಿಗೆ ಮತ್ತು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಕರಾವಳಿ ಪ್ರದೇಶದ ಸಮಸ್ತ ಮೀನುಗಾರರ ಪರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ನಾಡಿನ ಸಮಸ್ತ ಮೀನುಗಾರರ ಪರ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದಾ ತಮ್ಮೊಂದಿಗೆ ಇದೆ. ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮೀನುಗಾರರಲ್ಲಿ ಮನವಿ ಮಾಡಿದ್ದಾರೆ.

ಬೂತ್ ವಿಜಯ ಅಭಿಯಾನ – ಭೈರಂಪಳ್ಳಿ ಗ್ರಾಮ‌ಪಂಚಾಯತ್ ಶಕ್ತಿಕೇಂದ್ರ ಸಭೆ

News by: ಜನತಾಲೋಕವಾಣಿನ್ಯೂಸ್

ಕಾಪು:ಭೈರಂಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಶಕ್ತಿಕೇಂದ್ರ ಸಭೆ ಇಂದು ನಡೆಯಿತು. ಆಧ್ಯಕ್ಷತೆಯನ್ನು ಶಕ್ತಿಕೇಂದ್ರ ಪ್ರಮುಖ್ ಪ್ರಸಾದ್ ಮಲ್ಯ ವಹಿಸಿದ್ದರು. ಪಂಚಾಯತ್ ಅಧ್ಯಕ್ಷರೂ ಮಹಾಶಕ್ತಿಕೇಂದ್ರ ಅಧ್ಯಕ್ಷರೂ ಆದ ಜಿಯಾನಂದ ಹೆಗ್ಡೆ, ಜಿಲ್ಲಾ ಉಸ್ತುವಾರಿ ದಿಲ್ಲೇಶ್ ಶೆಟ್ಟಿ, ಅವಿನಾಶ್ ಶೆಟ್ಟಿಗಾರ್, ಆರು ಬೂತ್ ಅಧ್ಯಕ್ಷರುಗಳು, ಸತೀಶ್ ಶೆಟ್ಟಿ, ಪದ್ಮರಾಜ್ ಭಟ್ ಮತ್ತಿತರರು ವೇದಿಕೆಯನ್ನು ಉಪಸ್ಥಿತರಿದ್ದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪಕ್ಷ ಬೆಳೆದು ಬಂದ ಹಾದಿ, ಮೋದೀಜಿ ಸರಕಾರದ ಸಾಧನೆಗಳು, ರಾಜ್ಯ ಸರಕಾರದ ಸಾಧನೆಗಳು ಹಾಗೂ *ಬೂತ್ ವಿಜಯ ಅಭಿಯಾನದ* ಬಗ್ಗೆ ಮಾಹಿತಿ ನೀಡಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾದ ಅನಿವಾರ್ಯತೆಗಳ ಬಗ್ಗೆ ವಿಶ್ಲೇಶಿಸಿ ಎಲ್ಲ ಕಾರ್ಯಕರ್ತರು ಚುನಾವಣೆ ತನಕ ಯುಧ್ಧೋಪಾದಿಯಲ್ಲಿ ತಯಾರಾಗಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ಎಲ್ಲರೂ ಶ್ರಮಿಸಲು ಕರೆ ನೀಡಿದರು.

ಪಡುಬಿದ್ರೆ ಪಂಚಾಯತ್ ಬೂತ್ ಸಭೆ

NEWS By: ಜನತಾಲೋಕವಾಣಿನ್ಯೂಸ್

ಕಾಪು: ಪಡುಬಿದ್ರಿ ಪಂಚಾಯತ್ ನ‌ 181 & 182 ನೇ ಬೂತ್ ಪ್ರಮುಖರ ಸಭೆಯು ಶಕ್ತಿಕೇಂದ್ರ ಅಧ್ಯಕ್ಷರಾದ ರವಿಶೆಟ್ಟಿ ಅವರ ಮನೆಯಲ್ಲಿ ನಡೆಯಿತು. *ಬೂತ್ ವಿಜಯ ಅಭಿಯಾನದ* ಬಗ್ಗೆ ಸಭೆಯಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಪಕ್ಷ ನೀಡಿದ ಐದು ಅಂಶಗಳ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು ಜಿಲ್ಲಾ ಉಸ್ತುವಾರಿಗಳಾದ ಕೇಸರಿ ಯುವರಾಜ್ ಹಾಗೂ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಹಿರಿಯರಾದ ರಮಾಕಾಂತ್ ದೇವಾಡಿಗ, ಬಾಲಕ್ರಷ್ಣ ದೇವಾಡಿಗ, ಪಂಚಾಯತ್ ಸದಸ್ಯರುಗಳು ಕಾರ್ಯಕರ್ತರು ಪಕ್ಷದ ಪ್ರಮುಖರು ಹಾಜರಿದ್ದರು.

ಮಣಿಪುರ ಗ್ರಾಮ ಪಂಚಾಯತ್ ಬೂತ್ ಸಂಖ್ಯೆ 54 ರ ಬೂತ್ ಸಭೆ

News by: ಜನತಾಲೋಕವಾಣಿನ್ಯೂಸ್

ಕಾಪು: ಮಣಿಪುರ ಗ್ರಾಮ ಪಂಚಾಯತ್ ಬೂತ್ ಸಂಖ್ಯೆ 54 ರ ಬೂತ್ ಸಭೆ ಇಂದು ನಡೆಯಿತು. ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ವಹಿಸಿದ್ದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಬಿಜೆಪಿ ಬೆಳೆದು ಬಂದ ಹಾದಿ, ಪ್ರಸ್ತುತ‌ ದೇಶದ ವಿಚಾರಗಳು ಹಾಗೂ ಬೂತ್ ವಿಜಯ ಅಭಿಯಾನದ ಬಗ್ಗೆ ವಿವರಿಸಿದರು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಪಕ್ಷದ ಬಲವರ್ಧನೆ ಮಾಡಲು ವಿನಂತಿಸಿದರು. ಪಂಚಾಯತ್ ಸದಸ್ಯರುಗಳಾದ ಆಶಾ, ಪದ್ಮಾನಾಭ ನಾಯಕ್, ಶಕ್ತಿಕೇಂದ್ರ ಪ್ರಮುಖ್ ಪ್ರಜ್ವಲ್ ಹೆಗ್ಡೆ ಹಾಗೂ ರಾಜೇಶ್, ವಿಸ್ತಾರಕ್ ದಿನಕರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

ಜಲ ಜೀವನ್ ಮಿಷನ್ ಅಲೆವೂರು ಪಂಚಾಯತ್ ಗೆ ರೂ.10 ಕೋಟಿ ಅನುದಾನ – ಶ್ರೀಕಾಂತ ನಾಯಕ್

News by: ಜನತಾಲೋಕವಾಣಿನ್ಯೂಸ್

ಕಾಪು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯಡಿ ಅಲೆವೂರು ಗ್ರಾಮ ಪಂಚಾಯತ್ ಗೆ ಸುಮಾರು 10 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಪ್ರಕ್ರಿಯ ಅಂತಿಮ ಹಂತದಲ್ಲಿರುತ್ತದೆ. ಈ ಯೋಜನೆಯ ಪ್ರಕಾರ ಮುಂದಿನ ಮೂವತ್ತು ವರ್ಷಗಳ ಕಾಲ ಎಲ್ಲಾ ಮನೆ ಮನೆ ಗಳಿಗೆ ಶುಧ್ದ ನೀರನ್ನು ಪ್ರತೀ ವ್ಯಕ್ತಿಗೆ ಕನಿಷ್ಠ 55 ಲೀಟರ್ ನಷ್ಟು ನೀರು ಒದಗಿಸುವ ಯೋಜನೆ. ಈ ಯೋಜನೆಗೆ ಕೇಂದ್ರ ಸರಕಾರ ಶೇ.45, ರಾಜ್ಯ ಸರಕಾರ ಶೇ.45 ರಷ್ಟು ಅನುದಾನ ನೀಡುತ್ತಿದ್ದು ಶೇ.10 ರಷ್ಟನ್ನು ಬಳಕೆದಾರರು ಭರಿಸಬೇಕಾಗಿದೆ.

ಅಲೆವೂರಿನಲ್ಲಿ ಬೇಸಿಗೆಯಲ್ಲಿ ಹಲವು ಕಡೆ ವಿಪರೀತ ನೀರಿನ ಸಮಸ್ಯೆ ಇದೆ. ನೆಹರೂ ನಗರ, ಸೊಸೈಟಿ ಕಾಲನಿ, ರಾಮಪುರ, ದುರ್ಗಾನಗರ, ಪ್ರತಿನಗರ, ಸಿಧ್ದಾರ್ಥನಗರ, ನಡು ಅಲೆವೂರು, ಮಾರ್ಪಳ್ಳಿ, ಕೊರಂಗ್ರಪಾಡಿ ಹಲವೆಡೆ ನೀರಿನ ಸಮರ್ಪಕ ವ್ಯವಸ್ಥೆ ಅಗತ್ಯವಿದೆ. ನೀರಿನ ಮೂಲದ ಕೊರತೆಯಿರುವ ನಮ್ಮ ಪಂಚಾಯತ್ ಗೆ ಉಡುಪಿ ನಗರಸಭೆಯ ವಾರಾಹಿ ಯೋಜನೆಯ ನೀರನ್ನು ನಮ್ಮ ಪಂಚಾಯತ್ ಗೆ ನೀಡುವ ಯೋಜನೆ ಇದಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ. 2024 ರ ಜನವರಿಯ ಒಳಗೆ ಎಲ್ಲ ಮನೆ ಮನೆಗೆ ನೀರನ್ನು ಒದಗಿಸುವ ಯೋಜನೆ ಸಿಧ್ಧಪಡಿಸಲಾಗಿದೆ. ಇಂತಹ ಮೂಲಭೂತ ಬೇಡಿಕೆಗೆ ಸಮರ್ಥ ಯೋಜನೆ ತಂದ ನಮ್ಮ ದೇಶದ ನೆಚ್ಚಿನ ಪ್ರಧಾನಿ ಮೋದೀಜಿಯವರಿಗೆ, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರಿಗೆ, ಅತೀ ಹೆಚ್ಚು ಅನುದಾನ ನೀಡಲು ಶ್ರಮಿಸಿದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರಿಗೆ ಧನ್ಯವಾದಗಳು ಎಂದು ಕಾಪು ಬಿಜೆಪಿ ಅಧ್ಯಕ್ಷರೂ, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆದ ಶ್ರೀಕಾಂತ ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಬೂತ್ ವಿಜಯ ಅಭಿಯಾನ ಜಿಲ್ಲೆಯಾದ್ಯಂತ ಹೊಸ ಸಂಚಲನ ಮೂಡಿಸಿದೆ : ಕುಯಿಲಾಡಿ

News by: ಜನತಾಲೋಕವಾಣಿನ್ಯೂಸ್


ಉಡುಪಿ:ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಪಕ್ಷದ ಸೂಚನೆಯಂತೆ ಜ.2ರಂದು ಪ್ರಾರಂಭಗೊಂಡು ಜ.12ರ ವರೆಗೆ ಜಿಲ್ಲೆಯ ಎಲ್ಲಾ 1,1111 ಮತಗಟ್ಟೆಗಳಲ್ಲಿ ನಡೆಯಲಿರುವ ಬೂತ್ ವಿಜಯ ಅಭಿಯಾನ ಜಿಲ್ಲೆಯಾದ್ಯಂತ ಹೊಸ ಸಂಚಲನ ಮೂಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಜ.6ರಂದು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜ.2ರಂದು ಜಿಲ್ಲೆಯ ಎಲ್ಲ 6 ಮಂಡಲ ಕೇಂದ್ರಗಳಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಸಚಿವೆ ಕು! ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾದ ಎಸ್.ಅಂಗಾರ, ವಿ.ಸುನೀಲ್ ಕುಮಾರ್ ಹಾಗೂ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಬಿ.ಎಮ್. ಸುಕುಮಾರ ಶೆಟ್ಟಿ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ಬೂತ್ ಧ್ವಜಾರೋಹಣಕ್ಕೆ ಚಾಲನೆಯನ್ನು ನೀಡಲಾಗಿದೆ.

ಬೂತ್ ವಿಜಯ ಅಭಿಯಾನದ ಅಂಗವಾಗಿ ಬೂತ್ ಸಮಿತಿಗಳ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಬೂತ್ ವಾರು ವಾಟ್ಸಾಪ್ ಗ್ರೂಪ್ ಗಳ ರಚನೆ, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ಹಾಗೂ ಪ್ರತೀ ತಿಂಗಳ ಕೊನೆಯ ರವಿವಾರ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ 978 ಬೂತ್ ಗಳ ಅಧ್ಯಕ್ಷರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣದ ಜೊತೆಗೆ ಪ್ರತೀ ಬೂತ್ ವ್ಯಾಪ್ತಿಯ ಕನಿಷ್ಠ 25 ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜವನ್ನು ಹಾರಿಸಲಾಗಿದೆ. 860 ಬೂತ್ ಸಮಿತಿಗಳ ಪರಿಶೀಲನೆ ಹಾಗೂ 858 ಪೇಜ್ ಪ್ರಮುಖರ ನಿಯೋಜನೆ ನಡೆದಿದೆ. ಜ.12ರ ಮೊದಲು ಇನ್ನುಳಿದಿರುವ ಎಲ್ಲಾ ಬೂತ್ ಗಳಲ್ಲಿ ನಿಗದಿತ ಚಟುವಟಿಕೆಗಳು ನಡೆಯಲಿವೆ. ಜಿಲ್ಲೆಯ ಎಲ್ಲ 1,111 ಬೂತ್ ಗಳಲ್ಲಿ ವಾಟ್ಸಾಪ್ ಗ್ರೂಪ್ ಗಳ ಪುನರ್ ರಚನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರ ನೀಡಿದರು.

ಪ್ರತೀ ತಿಂಗಳ ಕೊನೆಯ ರವಿವಾರ ಸಹಿತ ಜ.29ರಂದು ಬೆಳಿಗ್ಗೆ 11.00 ಗಂಟೆಗೆ ಪಕ್ಷದ ಪ್ರಮುಖರು ಹಾಗೂ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸುವ ಜೊತೆಗೆ ಜಿಲ್ಲೆಯ 1,111 ಬೂತ್ ಗಳಲ್ಲಿ ಮನ್ ಕೀ ಬಾತ್ ವೀಕ್ಷಣೆ ಹಾಗೂ ಕಾರ್ಯಕ್ರಮದ ವರದಿ ಮತ್ತು ಫೋಟೋವನ್ನು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡುವ ಪ್ರಕ್ರಿಯೆ ನಡೆಯಲಿದೆ.

ಬೂತ್ ವಿಜಯ ಅಭಿಯಾನದ ಬಳಿಕ 2ನೇ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನವು ಜ.21ರಿಂದ 29ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತದಲ್ಲಿ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯ ಚಟುವಟಿಕೆಗಳ ರಿಪೋರ್ಟ್ ಕಾರ್ಡ್ ಕರಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಪಕ್ಷದ ಸದಸ್ಯತನದ ಮರು ನೋಂದಾವಣೆಗಾಗಿ ಮಿಸ್ ಕಾಲ್ ಅಭಿಯಾನವೂ ನಡೆಯಲಿದೆ ಎಂದು ತಿಳಿಸಿದರು.

ಚುನಾವಣಾ ಪೂರ್ವ ಸಿದ್ಧತಾ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ಎಲ್ಲಾ 265 ಶಕ್ತಿಕೇಂದ್ರ ಗಳಿಗೆ ಅಲ್ಪಾವಧಿ ವಿಸ್ತಾರಕರು ನೇಮಕಗೊಂಡಿದ್ದು, ಈಗಾಗಲೇ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿಯವರು ಬೂತ್ ವಿಜಯ ಅಭಿಯಾನದ ಜಿಲ್ಲಾ ಸಂಚಾಲಕರಾಗಿ, ಸದಾನಂದ ಉಪ್ಪಿನಕುದ್ರುರವರು ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ನಿಯೋಜನೆಗೊಂಡಿದ್ದಾರೆ.

ಪಕ್ಷದ ಸಂಘಟನಾ ಸಾಮರ್ಥ್ಯ, ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಸಂಘಟಿತ ಪ್ರಯತ್ನದ ಮೂಲಕ ಮಗದೊಮ್ಮೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗರಿಷ್ಠ ಅಂತರದ ಗೆಲುವು ಸಾಧಿಸುವ ಮೂಲಕ ರಾಜ್ಯದ 150 ಸ್ಥಾನಗಳನ್ನು ಗೆಲ್ಲುವ ಗುರಿಗೆ ಕೊಡುಗೆ ನೀಡಲಿದೆ ಎಂದು ಕುಯಿಲಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಾಗೂ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು.

ಮಣಿಪುರ ಗ್ರಾಮದ ದೆಂದೂರುಕಟ್ಟೆಯಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ:ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗಿ

News by: ಜನತಾಲೋಕವಾಣಿನ್ಯೂಸ್

ಕಾಪು: ಬೂತ್ ವಿಜಯ ಅಭಿಯಾನದ ರಾಜ್ಯ ಸಂಚಾಲಕರು, ರಾಜ್ಯ ಸರಕಾರದ ಹಿಂದುಳಿದ ವರ್ಗ ಹಾಗೂ ಸಮಾಜ‌ಕಲ್ಯಾಣ ಖಾತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಕ್ತಿಕೇಂದ್ರ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ‌ ಮಾಡಿದರು. ಹಾಗೂ ಬೂತ್ ಸಂಖ್ಯೆ 54 ರಲ್ಲಿ ಅಶೋಕ್ ಶೆಟ್ಟಿಯವರ ಮನೆಯಲ್ಲಿ ಪಕ್ಷದ ಧ್ವಜ ಹಾರಿಸಿದರು. ಕಾರ್ಯಕರ್ತರಿಗೆ ಕಾರ್ಯಕ್ರಮಗಳ‌ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಜಿಲ್ಲಾ ಪ್ರಧಾನ‌ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕ್ರಷ್ಣ ರಾವ್ ಶಕ್ತಿಕೇಂದ್ರ ಪ್ರಮುಖರಾದ ಪ್ರಜ್ವಲ್ ಹೆಗ್ಡೆ ಹಾಗೂ ರಾಜೇಶ್ ಉಪಸ್ಥಿತರಿದ್ದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಮಹಿಳಾ ಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ, ಪಂಚಾಯತ್ ಸದಸ್ಯರುಗಳು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ಘೋಷಣೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ

NEWS By : ಜನತಾಲೋಕವಾಣಿನ್ಯೂಸ್


ಉಡುಪಿ:ಈಡಿಗ, ಬಿಲ್ಲವ, ನಾಮದಾರಿ ಸಹಿತ 26 ಉಪ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತ್ಯೇಕ ಕೋಶ ಹಾಗೂ ಸಪರೇಟ್ ಕಾರ್ಪಸ್ ಫಂಡ್ ಮೂಲಕ ಸ್ಥಾಪಿಸಲಾದ ‘ಶ್ರೀ ನಾರಾಯಣಗುರು ಅಭಿವೃದ್ಧಿ ಕೋಶ’ವನ್ನು ಪರಿವರ್ತಿಸಿ ಪ್ರಸಕ್ತ ‘ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ’ವನ್ನಾಗಿ ಘೋಷಿಸಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಹಿಂದುಳಿದ ವರ್ಗಗಳಿಗೆ ಸೇರಿದ ಸದ್ರಿ ಸಮುದಾಯಗಳ ಹಲವಾರು ವರ್ಷಗಳ ಬೇಡಿಕೆಯನ್ನು ಪರಿಗಣಿಸಿ ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನು ಘೋಷಿಸುವ ಜೊತೆಗೆ ಮುಂದಿನ ಬಜೆಟ್ ನಲ್ಲಿ ಸೂಕ್ತ ಅನುದಾನವನ್ನು ಘೋಷಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸರಕಾರದ ಗಮನವನ್ನು ಸೆಳೆದು ‘ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ’ ಸ್ಥಾಪನೆ’ಗೆ ಒತ್ತು ನೀಡಿ ತೊಡಗಿಸಿಕೊಂಡ ಸದ್ರಿ ಸಮುದಾಯದ ಸಂಘಟಿತ ಪ್ರಯತ್ನ ಪ್ರಶಂಸನೀಯ.

ಸಮುದಾಯದ ಪ್ರಯತ್ನದ ಜೊತೆಗೆ ಕೈ ಜೋಡಿಸಿ ಸರಕಾರ ಮತ್ತು ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ‘ಶ್ರೀ ನಾರಾಯಣಗುರು ಅಭಿವೃದ್ಧಿ’ ನಿಗಮ’ ಘೋಷಣೆಗೆ ಸಹಕರಿಸಿರುವ ಸಮುದಾಯದ ಸಚಿವರುಗಳು, ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರು, ಎಲ್ಲಾ ಶಾಸಕರು, ಮುಖಂಡರು ಹಾಗೂ ಸಮುದಾಯದ ಸ್ವಾಮೀಜಿಗಳು ಮತ್ತು ಸಂಘಟನೆಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.