ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಯಶಸ್ವಿಗೊಳಿಸೋಣ: ಮಹೇಶ್ ಠಾಕೂರ್

ಉಡುಪಿ:ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ.17ರಿಂದ ಮೊದಲ್ಗೊಂಡು ಅವರು ಚುನಾಯಿತ ಸರಕಾರದ ನೇತೃತ್ವ ವಹಿಸಿ 20 ವರ್ಷಗಳನ್ನು ಪೂರೈಸುವ ದಿನವಾದ ಅ.7ರ ವರೆಗೆ ಜಿಲ್ಲಾ ಬಿಜೆಪಿಯಿಂದ ಉಡುಪಿ ಜಿಲ್ಲೆಯಾದ್ಯಂತ 20 ದಿನಗಳ ಪರ್ಯಂತ ನಡೆಯುವ ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸೇರಿ ಯಶಸ್ವಿಗೊಳಿಸೋಣ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಕರೆ ನೀಡಿದರು.

ಅವರು ಬಿಜೆಪಿ ಉಡುಪಿ ನಗರ ಮಂಡಲದ ಆಶ್ರಯದಲ್ಲಿ ಸೆ.21ರಂದು ಉಡುಪಿ ನಗರ ಕಚೇರಿಯಲ್ಲಿ ನಡೆದ ನಗರ ಮಂಡಲ ಪದಾಧಿಕಾರಿಗಳು ಮತ್ತು ಉಡುಪಿ ನಗರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕರ್ತರು ಮತ್ತು ತತ್ವ ಸಿದ್ಧಾಂತಗಳೇ ಬಿಜೆಪಿಯ ಜೀವಾಳ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರ ನಾಮ ಫಲಕ ಅಳವಡಿಕೆ ಅಭಿಯಾನಗಳು ನಡೆಯುತ್ತಿವೆ. ಪಕ್ಷದ ಎಲ್ಲಾ ಸಂಘಟನಾತ್ಮಕ ಹಾಗೂ ಸೇವಾ ಚಟುವಟಿಕೆಗಳು ಜಿಲ್ಲೆಯಿಂದ ಮಂಡಲಗಳ ಮೂಲಕ ಬೂತ್ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುವಲ್ಲಿ ಮಹಾ ಶಕ್ತಿ ಕೇಂದ್ರಗಳು ಮತ್ತು ಶಕ್ತಿ ಕೇಂದ್ರಗಳ ಪಾತ್ರ ಮಹತ್ವಪೂರ್ಣವಾಗಿದೆ. ಈ ನೆಲೆಯಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಬೂತ್ ಮಟ್ಟಕ್ಕೆ ತಲುಪಿಸಿ, ಬದ್ಧತೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸುವ ಜೊತೆಗೆ ಸದೃಢ ಪಕ್ಷ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂಬರಲಿರುವ ಜಿ.ಪಂ., ತಾ.ಪಂ. ಚುನಾವಣೆಗೆ ಸಜ್ಜಾಗೋಣ ಎಂದು ಠಾಕೂರ್ ಹೇಳಿದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಸೇವೆ ಮತ್ತು ಸಮರ್ಪಣ ಅಭಿಯಾನದ ಜಿಲ್ಲಾ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಸೇವೆ ಮತ್ತು ಸಮರ್ಪಣ ಅಭಿಯಾನದಡಿ 9 ವಿವಿಧ ವಿಭಾಗಗಳಲ್ಲಿ ಕೈಗೊಳ್ಳಬೇಕಾದ ಸೇವಾ ಕಾರ್ಯಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಸಭೆಯಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಬಿಜೆಪಿ ಉಡುಪಿ ನಗರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗುವ ವಿಶೇಷ ಸೇವಾ ಕಾರ್ಯಕ್ರಮಗಳ ಬಗ್ಗೆ ಯೋಜನೆಗಳನ್ನು ಸಿದ್ದಪಡಿಸಲಾಯಿತು.

ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ್ ನಾಯಕ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್ ಮತ್ತು ದಿನೇಶ್ ಅಮೀನ್ ಹಾಗೂ ಬಿಜೆಪಿ ಉಡುಪಿ ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರಗಳ ಸಂಚಾಲಕರು ಉಪಸ್ಥಿತರಿದ್ದರು.

ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರಶಕ್ತಿಕೇಂದ್ರ ಹಾಗೂ ಮಹಾಶಕ್ತಿಕೇಂದ್ರ ಸಭೆ

ಕಾಪು ಬಿಜೆಪಿ ಕಚೇರಿಯಲ್ಲಿ ಇಂದು ಶಕ್ತಿಕೇಂದ್ರ ಹಾಗೂ ಮಹಾಶಕ್ತಿಕೇಂದ್ರ ಪ್ರಮುಖರ ಸಭೆ ನಡೆಯಿತು. ಮೋದೀಜಿ ಜನ್ಮದಿನದಿಂದ ಅ.07 ರ ವರೆಗಿನ *ಸೇವೆ ಮತ್ತು ಸಮರ್ಪಣೆ* ಕಾರ್ಯಕ್ರಮದ ಕುರಿತಂತೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿಸ್ತ್ರತವಾಗಿ ಮಾಹಿತಿ ನೀಡಿದರು. ಎಲ್ಲ ಶಕ್ತಿಕೇಂದ್ರ ಪ್ರಮುಖರು ಮಹಾಶಕ್ತಿಕೇಂದ್ರ ಪ್ರಮುಖರೊಡನೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿಯೊಂದು ಕಾರ್ಯಕ್ರಮವನ್ನೂ ಬೂತ್ ಮಟ್ಟದಲ್ಲಿಯೂ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು. ಗಾಂಧಿ ಜಯಂತಿಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷರೂ ಕಾರ್ಯಕ್ರಮದ ಜಿಲ್ಲಾ ಸಂಚಾಲಕರೂ ಆದ ಸುಪ್ರಸಾದ್ ಶೆಟ್ಟಿ ವಿವರಿಸಿದರು. ಪರಿಸರ ಸಂಬಂಧಿತ ವಿಷಯದ ಜಿಲ್ಲಾ ಸಂಚಾಲಕರೂ ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಪ್ರವಿಣ್ ಗುರ್ಮೆ ಇವರೂ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ನಯನ ಗಣೇಶ್, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ, ಚಂದ್ರಶೇಖರ ಕೋಟ್ಯನ್ ಉಪಸ್ಥಿತರಿದ್ದರು. ಶಕ್ತಿಕೇಂದ್ರ ಪ್ರಮುಖರು, ಮಹಾಶಕ್ತಿಕೇಂದ್ರ ಪ್ರಮುಖರು, ಮಂಡಲ ಪದಾಧಿಕಾರಿಗಳು ವಿವಿಧ ವಿಷಯಗಳ ಸಂಚಾಲಕರು ಉಪಸ್ಥಿತರಿದ್ದರು.

ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ: ಸೇವೆ ಮತ್ತು ಸಮರ್ಪಣ ಅಭಿಯಾನ

ಕಾರ್ಕಳ :ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಲುವಾಗಿ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಕುಕ್ಕುಂದೂರು ಮಹಾ ಶಕ್ತಿ ಕೇಂದ್ರದ ವತಿಯಿಂದ ಕೌಡೂರು ಗ್ರಾಮದ ವಿಕಲಚೇತನ ಮಕ್ಕಳಾದ ಅಕ್ಷಯ್ ಹಾಗೂ ಆದಿತ್ಯರವರ ನಿವಾಸಕ್ಕೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಜೊತೆಗೆ ಆರ್ಥಿಕ ನೆರವು ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ, ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಪ್ರಮುಖರಾದ ದೀಕ್ಷಿತಾ ಶೆಟ್ಟಿ, ಶ್ವೇತಾ ಶೆಟ್ಟಿ, ಮಲ್ಲಿಕಾ ರಾವ್, ಪಲ್ಲವಿ ಪ್ರವೀಣ್, ನಾಗವೇಣಿ, ಜ್ಯೋತಿ ರಮೇಶ್, ಸುಮಾ ರವಿಕಾಂತ್, ವಿನಯ ಡಿ. ಬಂಗೇರ, ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.

ಪಡಿತರ ಚೀಟಿಗೆ ಹೆಸರು ಸೇರ್ಪಡೆ,ತಿದ್ದುಪಡಿ ಈಗ ಮೊಬೈಲ್‌ನಲ್ಲೇ ಮಾಡಬಹುದು

ಪಡಿತರ ಚೀಟಿಗೆ ಹೆಸರು ಸೇರ್ಪಡೆ,ತಿದ್ದುಪಡಿ ಈಗ ಮೊಬೈಲ್‌ನಲ್ಲೇ ಮಾಡಬಹುದು | ಹೀಗಿದೆ ಪ್ರಕ್ರಿಯೆ
ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಅಥವಾ ಹೆಸರು ತಿದ್ದುಪಡಿಯನ್ನು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಮೂಲಕವೇ ಈ ಎರಡೂ ಕಾರ್ಯಗಳನ್ನು ಸುಲಭವಾಗಿ ಮಾಡಬಹುದಾಗಿದೆ.
ಯಾವುದೇ ಕಚೇರಿಗಳಿಗೆ ಅಲೆದಾಡದೇ ಆನ್‌ಲೈನ್ ಸಹಾಯದಿಂದ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು ಹಾಗೂ ಹೆಸರು ತಿದ್ದುಪಡಿ ಮಾಡಬಹುದು.
ಪಡಿತರ ಚೀಟಿ ಇಲ್ಲದಿದ್ದರೆ ಆಗುವಂತಹ ಸಮಸ್ಯೆಗಳು ಹೆಚ್ಚು ಎಂದೇ ಹೇಳಬಹುದು. ಸರ್ಕಾರದಿಂದ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲದೇ, ಗುರುತಿನ ಪತ್ರವಾಗಿ, ಸರ್ಕಾರದ ಯೋಜನೆಗಳಿಗಾಗಿ, ವಿಮೆ ಸೌಲಭ್ಯಗಳಿಗಾಗಿ ಪಡಿತರ ಚೀಟಿ ಅತ್ಯಗತ್ಯವಾಗಿದೆ.ಪಡಿತರ ಚೀಟಿಯಲ್ಲಿ ಕೆಲವೊಮ್ಮೆ ಹೆಸರು ತಪ್ಪಾಗಿ ಈ ಸೇವೆಗಳಿಗೆ ಅಲಭ್ಯವಾಗಿರಬಹುದು ಹಾಗೂ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸದೇ ದಾಖಲಾತಿ ಇಲ್ಲದಂತಾಗಿ ಹಲವು ಯೋಜನೆಗಳಿಂದ ವಂಚಿತವಾಗಬಹುದು.ಈ ಎರಡೂ ಕಾರ್ಯಗಳು ಅತ್ಯಗತ್ಯವಾಗಿರುವುದರಿಂದ ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಈ ರೀತಿ ಸೇರ್ಪಡೆ ಮಾಡಬಹುದು,ಅಥವಾ ತಿದ್ದುಪಡಿ ಮಾಡಬಹುದು.ಮಕ್ಕಳನ್ನು ರೇಷನ್ ಕಾರ್ಡ್‌ಗೆ ಸೇರಿಸಲು ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್‌ ಅನ್ನು ಹೊಂದಿರಬೇಕಾಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.ಈ ಎರಡು ದಾಖಲೆಗಳು ಇದ್ದರೆ ನೀವು ಆನ್‌ಲೈನ್ ಮುಖಾಂತರ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು. ಇದಕ್ಕಾಗಿ ಇಲ್ಲಿ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಮಾಡಿ, https://ahara.kar.nic.in/home

ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಬೇಕು.

ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಹೊಸ ಪೇಜ್ ತೆರೆಯುತ್ತದೆ. ಅಲ್ಲಿನ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.
ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿದ ನಂತರ ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮೀಟ್ ಮಾಡಿ. ತಡೆಯಿರಿ. ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ. ನೀವು ಫಾರ್ಮ್ ಅನ್ನು ಸಬ್‌ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ. ಆ ನೋಂದಣಿ ಸಂಖ್ಯೆ ಮೂಲಕ ವೆಬ್‌ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು. ಅರ್ಜಿ ಸಲ್ಲಿಸುವ ವೇಳೆ ನೀಡಿದ ದಾಖಲೆಗಳು ಕ್ರಮಬದ್ಧವಾಗಿದ್ದರೆ ನಿಮ್ಮ ಮನೆಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

ಮೋದೀಜೀ ಜನ್ಮದಿನಾಚರಣೆ ಯಂದು ಸಾರ್ವಜನಿಕರಿಗೆ ಉಚಿತ ಆಟೋ ಸೇವೆ

ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಚಂದ್ರ ಮಲ್ಲಾರ್ ಇವರು ಮೋದೀಜಿ ಜನ್ಮದಿನದಂದು ಪ್ರತೀ ವರ್ಷ 5 ಕಿಮೀ ವ್ಯಾಪ್ತಿಯಲ್ಲಿ ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದು ನಿನ್ನೆಯ ದಿನ ಬೆಳಿಗ್ಗೆ ಅದರ ಚಾಲನಾ ಕಾರ್ಯಕ್ರಮ‌ನಡೆಸಲಾಯಿತು. ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿಯ ಆದರ್ಶ ವ್ಯಕ್ತಿತ್ವ ಕೊಂಡಾಡಿ ಚಂದ್ರ ಮಲ್ಲಾರ್ ನೀಡುತ್ತಿರುವ ಉಚಿತ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿದ್ದು ನಾವೆಲ್ಲರೂ ಯಾವುದಾದರೊಂದು ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿ ಮೋದೀಜಿಗೆ ಶುಭಕೋರಬೇಕು ಎಂದರು.

ಈ ಸಂದರ್ಭದಲ್ಲಿ ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಪಕ್ಷದ ಪ್ರಮುಖರಾದ ಗಂಗಾಧರ ಸುವರ್ಣ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ, ಆರೋಗ್ಯ ಮಾಹಿತಿ ಶಿಬಿರ

ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಎಮ್ ಸಿ ಮಣಿಪಾಲ ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ ಹಾಗೂ ಆರೋಗ್ಯ ಮಾಹಿತಿ ಶಿಬಿರದಲ್ಲಿ ಕೆ ಎಮ್ ಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ಉಚಿತವಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವಾ ಕಾರ್ಯ ಶ್ಲಾಘನೀಯ.

ಆರೋಗ್ಯ ಕ್ಷೇತ್ರದಲ್ಲಿ ಇವರು ನೀಡುತ್ತಿರುವ ಕೊಡುಗೆ ಅಪಾರ. ಇಂದು ಸರಕಾದ ಎಲ್ಲ ಸವಲತ್ತುಗಳನ್ನು, ಯೋಜನೆಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒದಗಿಸುವಲ್ಲಿ ಮತ್ತು ಮಕ್ಕಳಿಗೆ ಪ್ರಾರಂಭದಲ್ಲಿ ಉತ್ತಮ ಸಂಸ್ಕಾರವನ್ನು ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಸಮ್ಮಾನಿಸಿ ಗೌರವ ಸಲ್ಲಿಸಿರುವುದು ಬಹಳ ಉತ್ತಮವಾದುದು ಎಂದು ಕಾಪು ಬಿಜೆಪಿ ಕಾರ್ಯ ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಅಖಿಲಾ, ಪುರಸಭಾ ಮಾಜಿ ಸದಸ್ಯರಾದ ಗುಲಾಬಿ ಪಾಲನ್, ಡಾ.ವರ್ಷ, ಉದ್ಯಮಿ ಸಮಾಜಸೇವಕರಾದ ಪ್ರಸಾದ್ ಕಾಮತ್ ಕಾಪು, ರೊಟೇರಿಯನ್ ಜೇಮ್ಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ನೀಲಾವತಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಆರೋಗ್ಯ ಮಾಹಿತಿ ನೀಡಲಾಯಿತು.

ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಜನ್ಮದಿನಾಚರಣೆ

ಕಾಪು: ಇನ್ನಂಜೆ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ, ಮೋದಿಜಿ ಜನ್ಮದಿನಾಚರಣೆಯಿಂದ ಅಕ್ಟೋಬರ್ 7ರವರೆಗೆ ನಡೆಯುವ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ನಂಜೆ ಪೇಟೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಆರಂಭ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ರವರು ಕಾರ್ಯಕ್ರಮದ ಬಗ್ಗೆ ಮತ್ತು ಮೋದಿಜಿ ಅವರ ಸಾಧನೆಯ ಬಗ್ಗೆ ವಿವರವಾಗಿ ಪ್ರಾಸ್ತಾವಿಕ ಮಾತನಾಡಿ ಮೋದಿಜಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಧನ್ಯವಾದಗೈದರು. ನಂತರ ಇನ್ನಂಜೆ ಪಂಚಾಯತ್ ನಲ್ಲಿ ಎಸ್ ಆರ್ ಎಲ್ ಎಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿರ ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಸಮರ್ಪಣಾ ಕಾರ್ಯಕ್ರಮ ನಡೆಸಲಾಯಿತು. ಪೋಸ್ಟ್ ಕಾರ್ಡ್ ಅಭಿಯಾನದ ಅಂಗವಾಗಿ ಸುಮಾರು 75 ಪೋಸ್ಟ್ ಕಾರ್ಡ್ ಗಳನ್ನು ಜನರಿಗೆ ಹಂಚಿ ಮೋದಿ ಅವರಿಗೆ ಧನ್ಯವಾದ ಬರೆದು ಪೋಸ್ಟ್ ಮಾಡಲಾಯಿತು. ನಂತರ ಬ್ಯಾನರ್ ನಲ್ಲಿ ಮೋದಿಜಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಹಿ ಸಂಗ್ರಹಣಾ ಅಭಿಯಾನ ನಡೆಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶಿಲ್ಪಾ ಜಿ ಸುವರ್ಣ, ಇನ್ನಂಜೆ ಪಂಚಾಯತ್ ಅಧ್ಯಕ್ಷರು ಆದ ಶ್ರೀಮತಿ ಮಲ್ಲಿಕಾ ಆಚಾರ್ಯ, ಉಪಾಧ್ಯಕ್ಷರು ಆದ ಸುರೇಶ್ ಶೆಟ್ಟಿ, ಕುರ್ಕಾಲು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಗುರುಕೃಪಾ, ಮಂಡಲ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗೋಪಾಲಕೃಷ್ಣ ರಾವ್, ಇನ್ನಂಜೆ ಶಕ್ತಿಕೇಂದ್ರ ಅಧ್ಯಕ್ಷರು ಆದ ಶ್ರೀ ಪ್ರವೀಣ್ ಶೆಟ್ಟಿ ಪಾಂಗಾಳ, ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಪವಿತ್ರ ಶೆಟ್ಟಿ, ಚಂದ್ರಶೇಖರ್ ಕೋಟ್ಯಾನ್, ಕಾರ್ಯದರ್ಶಿ ಮಾಲಿನಿ ಇನ್ನಂಜೆ, ಕಾಪು ಪ್ರಕೋಷ್ಟ ಸಂಚಾಲಕರು ಆದ ನಾಗೇಶ್ ಭಂಡಾರಿ, ಕಾಪು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ. ಪ್ರಮುಖರು ಆದ ಶ್ರೀ ಮುರಳೀಧರ ಪೈ, ರತ್ನಕರ ಶೆಟ್ಟಿ ಕಾಪು, ಪಂಚಾಯತ್ ಸದಸ್ಯರಾದ ಸುರೇಖಾ ಶೆಟ್ಟಿ, ದಿವೇಶ್ ಶೆಟ್ಟಿ, ವಾರ್ಡ್ ಅಧ್ಯಕ್ಷರುಗಳಾದ, ಶೈಲೇಶ್ ಶೆಟ್ಟಿ, ಮಧುಸೂಧನ್ ಆಚಾರ್ಯ, ಗಣೇಶ್ ಆಚಾರ್ಯ, ಮತ್ತು ಪಕ್ಷದ ಅನನ್ಯ ಜವಾಬ್ದಾರಿ ಇರುವ ಸದಸ್ಯರು ಮತ್ತು ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಪು ಕ್ಷೇತ್ರದ ಕಾಜರಗುತ್ತಿನ ಸುಬ್ರಹ್ಮಣ್ಯ ಕಾಮತ್ ಮತ್ತು ಸುಪ್ರೀತ ಕಾಮತ್ ಇವರಿಗೆ ಕಾಪು ಬಿಜೆಪಿ ವತಿಯಿಂದ ಸನ್ಮಾನ

ಇತ್ತೀಚೆಗೆ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಪು ಕ್ಷೇತ್ರದ ಉಡುಪಿ ತಾಲೂಕಿನ ಕಾಜರಗುತ್ತಿನ ರಘುನಾಥ ಕಾಮತ್ ಮತ್ತು ರಾಧಿಕಾ ಕಾಮತ್ ಇವರ ಮಕ್ಕಳಾದ ಸುಬ್ರಹ್ಮಣ್ಯ ಕಾಮತ್ ಮತ್ತು‌ ಸುಪ್ರೀತ ಕಾಮತ್ ಇವರಿಗೆ ಕಾಪು ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ಗೌರವಾರ್ಪಣೆ ಸಲ್ಲಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ ನಿಮ್ಮನ್ನು ಗುರುತಿಸಿ ಗೌರವಾರ್ಪಣೆ ಮಾಡಿರುವುದು ನಿಮ್ಮ ಸಾಧನೆಗೆ ಅಭಿನಂದನೆ ಸಲ್ಲಿಸಲು ಇತರರಿಗೆ ಪ್ರೇರಣೆಯಾಗಿ ಮತ್ತಷ್ಟು ಜನ ಇದೇ ರೀತಿಯ ಸಾಧನೆ ಮಾಡಬೇಕು. ಕಾಪು ಕ್ಷೇತ್ರದ ಜನರ ವತಿಯಿಂದ ನಿಮಗೆ ಈ ಅಭಿನಂದನೆ. ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಿ ಇತರರಿಗೆ ಪ್ರೇರಣಾ ಶಕ್ತಿಯಾಗಿರಿ ಎಂದರು.

ಸದಾನಂದ ಪ್ರಭು ಪೆರ್ಣಂಕಿಲ ಸ್ವಾಗತಿಸಿದರು. ಮಂಡಲ ಉಪಾಯ ಸಂಧ್ಯಾ ಕಾಮತ್, ಸುಭಾಸ್ ನಾಯ್ಕ್ ಪಂಚಾಯತ್ ಸದಸ್ಯರಾದ ಗೀತಾ, ಸ್ಥಳೀಯರಾದ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು

ಪಡುಬಿದ್ರೆ ಬಿಜೆಪಿ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶ ಪಡುಬಿದ್ರೆ ಬಿಜೆಪಿ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶ

ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಸಮಾನ ಗೌರವ – ಶ್ರೀಕಾಂತ ನಾಯಕ್

ಪಡುಬಿದ್ರೆ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶ ಇಂದು ಪಡುಬಿದ್ರೆ ಉದಯಾದ್ರಿಯಲ್ಲಿ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರಿಗೂ ರಾಷ್ಟ್ರೀಯ ಅಧ್ಯಕ್ಷರಿಗೂ ಸಮಾನ ಗೌರವವಿದ್ದು ಅದನ್ನು ಬೂತ್ ಅಧ್ಯಕ್ಷರು ಅರ್ಥ ಮಾಡಿಕೊಂಡು ಪ್ರತೀ ಬೂತ್ ನಲ್ಲಿ ಅಧ್ಯಕ್ಷರುಗಳು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ನಾಮಫಲಕ ಅಳವಡಿಸುವ ಸಂದರ್ಭದಲ್ಲಿ ಪ್ರತೀ ಬೂತ್ ಅಧ್ಯಕ್ಷರ ಮನೆಯಲ್ಲಿ ಕನಿಷ್ಠ 30-40 ಜನ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕು ತನ್ಮೂಲಕ ಪ್ರತೀ ಬೂತ್ ಅಧ್ಯಕ್ಷರು ಸಕ್ರಿಯವಾಗಿ ಪಕ್ಷ ಕೊಟ್ಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸುತ್ತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡಿರಲು ಕರೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿಯವರು ಪಕ್ಷ ಬೆಳೆದು ಬಂದ ರೀತಿ, ಹಿರಿಯರ ತ್ಯಾಗ ಬಲಿದಾನಗಳ ಬಗ್ಗೆ ವಿವರಿಸಿ ಪಕ್ಷ ಬೆಳೆದು ಬಂದ ಹಾದಿ ತಿಳಿದು ಅವರ ಆದರ್ಶದಂತೆ ಪಕ್ಷ ಬೆಳೆಸಬೇಕು ಎಂದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಮಾತನಾಡಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಸರಿಯಾಗಿ ಮಾಡಿ ವ್ಯಕ್ತಿ ಬೆಳೆಯಬೇಕು ತನ್ಮೂಲಕ ಪಕ್ಷವೂ ಬೆಳೆಯುವುದು ಎಂದರು. ಮುಂಬರುವ ಚುನಾವಣೆಗೆ ಸಂಘಟನಾತ್ಮಕವಾಗಿ‌ಈಗಲೇ ಸಿಧ್ದರಾಗುವಂತೆ ಕರೆ ನೀಡಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ನಿಕಟಪೂರ್ವ ತಾಲೂಕು‌ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಪಡುಬಿದ್ರೆ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಹೆಜಮಾಡಿ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಮಂಡಲ ಉಪಾಧ್ಯಕ್ಷರೂ ಮಹಾಶಕ್ತಿಕೇಂದ್ರ ಉಸ್ತುವಾರಿಗಳು‌ ಆದ ಚಂದ್ರಶೇಖರ ಕೋಟ್ಯನ್, ಪಂಚಾಯತ್ ಉಪಾಧ್ಯಕ್ಷರುಗಳಾದ ಪವಿತ್ರ ಗಿರೀಶ್, ಯಶೋಧ, ಸೌಮ್ಯಲತಾ ಶೆಟ್ಟಿ, ಹಿರಿಯರಾದ ರಮಾಕಾಂತ್ ದೇವಾಡಿಗ, ಮಂಡಲ ಕಾರ್ಯದರ್ಶಿಗಳಾದ ಲತಾ ಆಚಾರ್ಯ, ಮಾಲಿನಿ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ಅನಿಲ್ ಶೆಟ್ಟಿ, ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರು, ವಿವಿಧ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ದೇವಾಡಿಗ ಧನ್ಯವಾದ ಸಮರ್ಪಿಸಿದರು. ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಉಡುಪಿ :ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಹಾಗೂ ಕಾಪು ಮಂಡಲ ಅಲ್ಪಸಂಖ್ಯಾತ ಮೋರ್ಚಾ ಇದರ ಜಂಟಿ ಆಶ್ರಯದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರದಿಂದ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರವು ಸೆ.14ರಂದು ಮಹಿಳಾ ಮಂಡಲ ಕಟಪಾಡಿ ಇದರ ಸಭಾಂಗಣದಲ್ಲಿ ಜರಗಿತು.

ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ಹಾಗೂ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಜತೆಯಾಗಿ ಜ್ಯೋತಿ ಬೆಳಗಿಸುವುದರ ಮೂಲಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತನಾಡಿದ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕ್ಕರ್, ಬಿಜೆಪಿ ಯಾವತ್ತಿಗೂ ಅಲ್ಪಸಂಖ್ಯಾತರ ವಿರೋಧಿಯಲ್ಲ. ಇದಕ್ಕೆ ವೇದಿಕೆಯಲ್ಲಿರುವ ನಾವೆಲ್ಲರೂ ಉದಾಹರಣೆಯಾಗಿದ್ದು ಅತ್ಯಂತ ಗೌರವಯುತವಾಗಿ ಪಕ್ಷ ನಮ್ಮನ್ನು ನಡೆಸಿಕೊಂಡು ಮಹತ್ತರ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ‌ ಎಂದರು.

ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ಅಲ್ಪಸಂಖ್ಯಾತರಿಗೆ ಸವಲತ್ತಿಗಾಗಿ ಅತೀ ಹೆಚ್ಚು ಅನುದಾನ ನಿಗದಿಪಡಿಸಲು ಪ್ರಾರಂಭಮಾಡಿದ್ದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ. ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರಿಗೆ ಅತೀ ಹೆಚ್ಚು ಸವಲತ್ತುಗಳನ್ನು ನೀಡುವುದರ ಜೊತೆಗೆ ವಿವಿಧ ಜನಪರ ಯೋಜನೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕಾಗಿ ಬಳಸಿಕೊಂಡು ಬಿಜೆಪಿಯ ಬಗ್ಗೆ ಭಯ ಹುಟ್ಟಿಸುವ ಕೆಲಸ ಮಾಡಿದ್ದು ಬಿಟ್ಟರೆ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡಲೇ ಇಲ್ಲ ಎಂದರು.

ಬಿ.ಕೆ. ಹ್ಯಾರಿಸ್ ಬಂಟ್ವಾಳರವರು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಲ್ಪಸಂಖ್ಯಾತರಿಗೆ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಸ್ತುವಾರಿ ನಯನಾ ಗಣೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಕಾಪು ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಹಮ್ಮದ್ ಆಲಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಆಸಿಫ್ ಕಟಪಾಡಿ, ಆಲ್ವಿನ್ ಡಿಸೋಜ, ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಅಪ್ಸರ್, ಕಾರ್ಯದರ್ಶಿ ಗ್ರೆಟ್ಟಾ ಮಸ್ಕರೇನಸ್ ಉಪಸ್ಥಿತರಿದ್ದರು.

ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಬ್ಲಾಂಚ ಕರ್ನೆಲಿಯೋ ವಂದಿಸಿದರು.

Design a site like this with WordPress.com
Get started