ಅಂಬಲಪಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ‌ಮತ್ತು ಕನ್ನಡಕ ವಿತರಣೆ ಹಾಗೂ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ, ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ನೊಂದಾವಣೆ

ಉಡುಪಿ: ಜು.10 : ಬಿಜೆಪಿ ಉಡುಪಿ ನಗರ, ಬಿಜೆಪಿ ಮಹಾ ಶಕ್ತಿಕೇಂದ್ರ ಅಂಬಲಪಾಡಿ-ಕಡೆಕಾರು ಮತ್ತು ಬಿಜೆಪಿ ಅಂಬಲಪಾಡಿ ಇದರ ಆಶ್ರಯದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಹಾಗೂ ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 8 ವರ್ಷಗಳ ಆಡಳಿತದ ಸಂಭ್ರಮಾಚರಣೆ’ಯ ಪ್ರಯುಕ್ತ ‘ಮೋದಿ ಆಡಳಿತದಲ್ಲಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ‌ ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ಜಿಲ್ಲಾ ಎನ್.ಸಿ.ಡಿ. ಘಟಕ ಇದರ ಸಹಯೋಗದೊಂದಿಗೆ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ‘ಉಚಿತ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ’, ಉಚಿತ ‘ಆಯುಷ್ಮಾನ್ ಕಾರ್ಡ್’ ಮತ್ತು ‘ಈ-ಶ್ರಮ್ ಕಾರ್ಡ್ ನೊಂದಾವಣೆ’ ಹಾಗೂ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ‌ ಚಾರಿಟೇಬಲ್ ಟ್ರಸ್ಟ್(ರಿ.) ಮತ್ತು ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ‌ ಇದರ ಸಹಯೋಗದೊಂದಿಗೆ ‘ಉಚಿತ ನೇತ್ರ ತಪಾಸಣಾ ಶಿಬಿರ’ ಮತ್ತು ‘ಉಚಿತ ಕನ್ನಡಕ ವಿತರಣೆ’ ಕಾರ್ಯಕ್ರಮವು ಜು.10 ರವಿವಾರ ಅಂಬಲಪಾಡಿ (ಯೂನಿಯನ್ ಬ್ಯಾಂಕ್ ಹಿಂಬದಿ) ‘ವಸಂತ ಮಂಟಪ’ದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ‘ಬಿಜೆಪಿ ಅಂಬಲಪಾಡಿ ಕಾರ್ಯಕರ್ತರ ಸಮಾವೇಶ’ ಮತ್ತು ‘ಪ್ರತಿಭಾ ಪುರಸ್ಕಾರ’ ನಡೆಯಲಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಉಡುಪಿ ನಗರ ಸಭೆ‌ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರ ಸಭಾ ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ್ ಬಿ.ಕೆ. ಭಾಗವಹಿಸಲಿದ್ದಾರೆ.

ಬಿಜೆಪಿ ಮಹಾ ಶಕ್ತಿಕೇಂದ್ರ ಅಂಬಲಪಾಡಿ-ಕಡೆಕಾರು ಸಂಚಾಲಕ ರಾಜೇಂದ್ರ ಪಂದುಬೆಟ್ಟು, ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ‌ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ್, ನಗರ ಕಾರ್ಯದರ್ಶಿ ದಯಾಶಿನಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಯೋಗೀಶ್ ಶೆಟ್ಟಿ ಅಂಬಲಪಾಡಿ, ರಾಮರಾಜ್ ಕಿದಿಯೂರು, ಅಂಬಲಪಾಡಿ ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ ಕಿದಿಯೂರು, ವಿಜಯ ಶೆಟ್ಟಿ ಕಪ್ಪೆಟ್ಟು ಉಪಸ್ಥಿತರಿರುವರು.

ಸಮಾವೇಶದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಬೂತ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳ ಸಹಿತ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಪ್ರಕಟಣೆ ತಿಳಿಸಿದೆ.

ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಮಾಜಿ ಅಧ್ಯಕ್ಷರಾದ ಜಬ್ಬ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ ನಿಧನ

ಉಡುಪಿ: ‘ಭಜನೆ ಜಬ್ಬಣ್ಣ’ರೆಂದೇ ಪ್ರಖ್ಯಾತರಾಗಿದ್ದ ಜಬ್ಬ ಪೂಜಾರಿ (90 ವರ್ಷ) ಬಂಕೇರಕಟ್ಟ, ಅಂಬಲಪಾಡಿ ಇವರು ಜು.6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಪದಾಧಿಕಾರಿಯಾಗಿ, ಭಜನಾ ನಿರ್ವಾಹಕರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಜಬ್ಬ ಪೂಜಾರಿಯವರು ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಭಜನಾಸಕ್ತರಾಗಿದ್ದ ಜಬ್ಬ ಪೂಜಾರಿಯವರು ಸ್ವತಃ ತಮ್ಮ ಮನೆಯಲ್ಲಿ ನಿತ್ಯ ಭಜನೆ ನೆರವೇರಿಸುವ ಜೊತೆಗೆ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಭಜನಾ ಸೇವೆಯ ನೇತೃತ್ವವನ್ನು ವಹಿಸಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರು, ಮೂವರು ಪುತ್ರಿಯರು, ಬಂಧುಗಳು ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹಿತ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ


ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹಿತ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.

ಸಾಮಾಜಿಕ ಕ್ಷೇತ್ರದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ , ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಕೇರಳದ ಮಾಜಿ ಅಥ್ಲೀಟ್‌ ಪಿಟಿ ಉಷಾ , ಸಿನಿಮಾ ಕ್ಷೇತ್ರದಿಂದ ಆಂಧ್ರಪ್ರದೇಶದ ವಿ.ವಿಜಯೇಂದ್ರ ಪ್ರಸಾದ್‌ , ಸಂಗೀತ ಕ್ಷೇತ್ರದಿಂದ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ಡಾ! ಶ್ಯಾಮಪ್ರಸಾದ್ ಮುಖರ್ಜಿ ಪ್ರೇರಣೆ;‌ ಡಾ! ವಿ. ಎಸ್. ಆಚಾರ್ಯ ಮಾರ್ಗದರ್ಶನ ಕಾರ್ಯಕರ್ತರಿಗೆ ಸದಾ ಸ್ಪೂರ್ತಿದಾಯಕ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಪ್ರೇರಣೆ ಹಾಗೂ ನವ ಉಡುಪಿಯ ನಿರ್ಮಾತೃ ಡಾ! ವಿ.ಎಸ್. ಆಚಾರ್ಯರವರ ಮಾರ್ಗದರ್ಶನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸದಾ ಸ್ಪೂರ್ತಿದಾಯಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜು.6ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ
ಡಾ! ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಡಾ! ವಿ.ಎಸ್. ಆಚಾರ್ಯ ರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪುಷ್ಪಾರ್ಚನೆಗೈದು ಮಾತನಾಡಿದರು.

ಜವಾಹರಲಾಲ್ ನೆಹರು ಸಂಪುಟದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರು ನೆಹರುರವರ ತುಷ್ಠೀಕರಣ ನೀತಿ, ಪಾಶ್ಚಾತ್ಯ ವಿಚಾರಧಾರೆ ಹಾಗೂ ಜಮ್ಮು ಕಾಶ್ಮೀರ ವಿಚಾರದ ನಿಲುವನ್ನು ವಿರೋಧಿಸಿ ಸಂಪುಟಕ್ಕೆ ರಾಜೀನಾಮೆ ನೀಡಿದರು. ನೆಹರು ಮತ್ತು ಕಾಂಗ್ರೆಸ್ ಧೋರಣೆಯಿಂದ ದೇಶದ ಅಖಂಡತೆ, ಸುಭಿಕ್ಷೆ ಮತ್ತು ಸಂಸ್ಕೃತಿಯ ವಿಚಾರಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು.

ಒಂದು ದೇಶದಲ್ಲಿ ಒಂದೇ ಪ್ರಧಾನಿ, ಒಂದೇ ಸಂವಿಧಾನ ಮತ್ತು ಒಂದೇ ಧ್ವಜ ಇರಬೇಕು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾತ್ರವಲ್ಲದೆ ಭಾರತದ ಸಂವಿಧಾನವೇ ಪೂರ್ಣವಾಗಿ ಅಲ್ಲಿಗೂ ಅನ್ವಯವಾಗಬೇಕು ಎಂಬ ತತ್ವ ಸಿದ್ದಾಂತದೊಂದಿಗೆ ಡಾ! ಮುಖರ್ಜಿಯವರು ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ಹಾಗೂ ವಿಶೇಷ ಸ್ಥಾನಮಾನ ರದ್ದು ಮಾಡುವಂತೆ ಹೋರಾಟ ರೂಪಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕೆಂಬ ಅವರ ಮಹಾತ್ವಾಕಾಂಕ್ಷೆಯ ಹೋರಾಟದಲ್ಲಿ ಕಾಶ್ಮೀರ ಪ್ತವೇಶಿಸಿದ ಸಂದರ್ಭದಲ್ಲಿ ಅವರ ಬಂಧನವಾಗುತ್ತದೆ. ಶ್ರೀನಗರದಲ್ಲಿ ನಡೆದ ಅವರ ನಿಗೂಢ ಸಾವಿನ ಬಗ್ಗೆ ದೇಶದ ಜನತೆಗೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ.

ಡಾ! ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪನೆ ಮೂಲಕ ಸರಕಾರ ಮತ್ತು ಪಕ್ಷ ಹೇಗಿರಬೇಕು ಎಂಬ ಚಿಂತನೆ ಮತ್ತು ಮಾರ್ಗದರ್ಶನ ನೀಡಿದರು. ಅವರ ಉದಾತ್ತ ಚಿಂತನೆಯಂತೆ ಇಂದು ಪಕ್ಷವು ಸದೃಢವಾಗಿ ಬೆಳೆದಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ 370ನೇ ವಿಧಿ ರದ್ದುಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ನೇತೃತ್ವದಲ್ಲಿ ಸಾರ್ಥಕ ಜನಪರ ಆಡಳಿತ ನೀಡುವ ಮೂಲಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ದೂರದರ್ಶಿತ್ವದ ಚಿಂತನೆಗಳನ್ನು ಸಾಕಾರಗೊಳಿಸುತ್ತಿವೆ ಎಂದು ಕುಯಿಲಾಡಿ ಹೇಳಿದರು.

ಪ್ರಭಾವಿ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಡಾ! ವಿ.ಎಸ್. ಆಚಾರ್ಯರವರು ಉತ್ತಮ ಆಡಳಿತಗಾರರಾಗಿ ಸ್ಟೇಟ್ ಮೆನ್ ಎನಿಸಿಕೊಂಡಿದ್ದರು. ರಾಜ್ಯ ಸರಕಾರದ ಕ್ಲಿಷ್ಟಕರ ವಿಚಾರಗಳಲ್ಲಿ ಎಲ್ಲರೂ ಒಪ್ಪುವಂತಹ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು‌. ಉಡುಪಿ ನಗರಸಭೆಯ ಅಧ್ಯಕ್ಷರಾಗಿ, ವಿಧಾನಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಗೃಹ ಸಚಿವರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಡಾ! ವಿ.ಎಸ್. ಆಚಾರ್ಯರ ಸಚ್ಚಾರಿತ್ರ್ಯವಂತ ವ್ಯಕ್ತಿತ್ವ ಮತ್ತು ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಕುಯಿಲಾಡಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ, ಜಿಲ್ಲಾ ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಕಾರ್ಯಕ್ರಮದ ಸಹ ಸಂಚಾಲಕ ಗಿರೀಶ್ ಎಮ್. ಅಂಚನ್ ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಂದಿಸಿದರು.

ಜಿಲ್ಲೆಯಾದ್ಯಂತ ಮುಂದುವರಿದ ವ್ಯಾಪಕ ಮಳೆ: ನಾಳೆ(ಜುಲೈ 06) ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ ಜುಲೈ 05 : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ (ಜು.06) ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವಡೆ ಕೃತಕ ನೆರೆ ಉಂಟಾಗಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲವಡೆ ಹೆದ್ದಾರಿಗಳು, ರಸ್ತೆಗಳು ಜಲಾವೃತಗೊಂಡಿದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಜುಲೈ 07 ರ ವರಿಗೆ ಈಗಾಗಲೇ ಆರೆಂಜ್ ಅಲರ್ಟ್‌ ಘೋಷಿಸಿ ಹವಮಾನ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಕರ್ನಾಟಕ ಕರಾವಳಿಯಲ್ಲಿ ಮುಂದಿನ 5 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್‌ ಬರ್ಬರ ಕೊಲೆ : ಹಂತಕರು ಪರಾರಿ

ಹುಬ್ಬಳ್ಳಿ: ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಮಾರಾಕಾಸ್ತ್ರಗಳಿಂದ ಇರಿದು ಕೊಲೆಗೈಯ್ಯಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರ ರಿಸೆಪ್ಷನ್ ನಲ್ಲಿ ಕೊಲೆ ನಡೆದಿದ್ದು, ಹಂತಕರು ಪರಾರಿಯಾಗಿದ್ದಾರೆ.

ಭಕ್ತರ ಸೋಗಿನಲ್ಲಿ ಬಂದಿದ್ದ ಹಂತಕರು ಗುರೂಜಿ ಜೊತೆ ಮಾತನಾಡುತ್ತಲೇ ಮಾರಾಕಾಸ್ತ್ರಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಗುರೂಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಜಮಾಡಿ ವಿಠ್ಠಲ್ ಭಟ್ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ

ಉಡುಪಿ: ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರು ಹಾಗೂ ಸಮಾಜ ಸೇವಕ ವೇದಮೂರ್ತಿ ವಿಠ್ಠಲ ಭಟ್ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿ, ಹೆಜಮಾಡಿ ಮಲ್ಯರ ಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚರಾಗಿ ಸೇವೆ ಸಲ್ಲಿಸಿರುವ ವೇದಮೂರ್ತಿ ವಿಠಲ್ ಭಟ್ ರವರು ಜು.1ರಂದು ನಿಧನರಾದರು.

ಅವಿವಾಹಿತರಾಗಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೆಜಮಾಡಿ ಗ್ರಾಮವೂ ಸೇರಿದಂತೆ ಕಾಪು ತಾಲೂಕಿನಲ್ಲಿ ಸಂಘದ ಶಾಖೆಗಳೂ ಸೇರಿದಂತೆ ಹಿಂದು ಸಂಘಟನೆಯ ಕೆಲಸ ಕಾರ್ಯಗಳಿಗೆ ಅಡಿಪಾಯ ಹಾಕುವಲ್ಲಿ ಅವರ ಪಾತ್ರ ಅನನ್ಯವಾದುದು. ಅಯೋಧ್ಯಾ‌ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಕರಸೇವೆಯಲ್ಲಿಯೂ‌ ಪಾಲ್ಗೊಂಡಿದ್ದರು. ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಠ್ಠಲ್ ಭಟ್ ರವರು ಡಾ! ವಿ.ಎಸ್. ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಉಡುಪಿ ಸೋಮಶೇಖರ ಭಟ್ ಮುಂತಾದವರ ಒಡನಾಡಿಯಾಗಿದ್ದರು.

ಪ್ರಕೃತಿ ಪ್ರೇಮಿಯಾಗಿದ್ದ ವಿಠ್ಠಲ್ ಭಟ್ ರವರು ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಮರಗಳನ್ನು ನೆಟ್ಟಿದ್ದರು. ಜೀವನಪೂರ್ತಿ ಹಿಂದು ಸಂಘಟನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವಿಠ್ಠಲ್ ಭಟ್ ರವರು ಅನೇಕರಿಗೆ ಪ್ರೇರಣಾಶಕ್ತಿಯಾಗಿದ್ದರು. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಬಂಧುಗಳು ಮತ್ತು‌ ಹಿತೈಷಿಗಳಿಗೆ ಅವರ ಅಗಲುವಿಕೆಯ ದುಖ:ವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಲು ಎನ್. ರವಿಕುಮಾರ್ ಆಗ್ರಹ

ಬೆಂಗಳೂರು: ನೂಪುರ್ ಶರ್ಮರ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಭಯಾನಕ, ಭೀಭತ್ಸ, ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕುರಿ, ಕೋಳಿ ಹತ್ಯೆಗಿಂತ ಭೀಕರವಾಗಿ ಹತ್ಯೆ ನಡೆದಿದೆ. ಇದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು.

ಬೆಂಗಳೂರಿನ ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಡಿಯೋ ಮಾಡಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಬಂಧಿಸಲಾಗಿದೆ. ಇದು ಈ ದೇಶದಲ್ಲಿ ಈಚೆಗೆ ನಡೆದ ಅತ್ಯಂತ ಭೀಕರ ಘಟನೆ. ಅಲ್ಲಿನ ಮುಖ್ಯಮಂತ್ರಿಯವರು ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರನ್ನು ಖಂಡಿಸಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.

ಕನ್ಹಯ್ಯಲಾಲ್ 15 ದಿನ ಮೊದಲೇ ಜೀವ ಬೆದರಿಕೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಅಲ್ಲಿನ ಪೊಲೀಸರು ರಾಜಿ ಮಾಡಿಸಿದ್ದರು. ಆದ್ದರಿಂದ ಈ ದುರ್ಘಟನೆಗೆ ಕಾಂಗ್ರೆಸ್ ಸರಕಾರವೇ ಕಾರಣ ಎಂದ ಅವರು, ಪ್ರತಿಭಟನೆ ಮಾಡುವ ಸಿದ್ದರಾಮಯ್ಯ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು. ಆದ್ದರಿಂದ ಹತ್ಯೆಗೆ ನೇರ ಕಾರಣವಾದ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಬೇಕೆಂದು ಅವರು ರಾಷ್ಟ್ರಪತಿಗಳು ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಕುರಿ, ಮೇಕೆಗಳಂತೆ ಕಾಶ್ಮೀರಿ ಪಂಡಿತರ ಹತ್ಯೆ:

ಕಾಶ್ಮೀರಿ ಪಂಡಿತರನ್ನು ಇದೇ ರೀತಿ ಕುರಿ, ಮೇಕೆಗಳಂತೆ ಹತ್ಯೆ ಮಾಡಿದ್ದರು. ಉಟ್ಟ ಬಟ್ಟೆಯಲ್ಲಿ ಓಡುವಂತೆ ಮಾಡಿದ್ದರು. ಅವತ್ತೇ ಇದನ್ನು ನಿಯಂತ್ರಿಸಿದ್ದರೆ ಈ ರೀತಿ ಅಟ್ಟಹಾಸ, ಅಹಂಕಾರ ಮೆರೆಯಲು ಅವಕಾಶ ಇರುತ್ತಿರಲಿಲ್ಲ. ಪರಿಣಾಮವಾಗಿ ಕರ್ನಾಟಕದಲ್ಲೂ ಹರ್ಷನ ಕೊಲೆ ನಡೆಯಿತು. ಅದೇ ಕತ್ತಿಗಳೇ ಕನ್ಹಯ್ಯ ಲಾಲ್ ಹತ್ಯೆ ಮಾಡಿವೆ ಎಂದು ಆರೋಪಿಸಿದರು. ಅವರನ್ನು ಕಂಡರೆ ಪ್ರೀತಿ, ತಿಲಕ ಕಂಡರೆ ಭೀತಿ ಎಂಬುದು ಕಾಂಗ್ರೆಸ್ ನೀತಿಯೇ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ನ್ಯಾಷನಲ್ ಹೆರಾಲ್ಡ್ ಕುರಿತು ವಾರಗಟ್ಟಲೆ ಪ್ರತಿಭಟನೆ ಮಾಡಿದ ಕಾಂಗ್ರೆಸ್ಸಿಗರಿಗೆ ನಮ್ಮ ದೇಶದ ಬಗ್ಗೆ ನಿಜಕ್ಕೂ ಪ್ರೀತಿ ಇದ್ದರೆ, ಸೆಕ್ಯುಲರಿಸಂ ನೀತಿ ಬಗ್ಗೆ, ರಾಷ್ಟ್ರೀಯತೆ ಬಗ್ಗೆ ಪ್ರೀತಿ ಇದ್ದರೆ ಕನ್ಹಯ್ಯ ಲಾಲ್ ಘಟನೆ ವಿರುದ್ಧ ದೇಶದಲ್ಲಿ ಕಾಂಗ್ರೆಸ್‍ನಿಂದ ಎಷ್ಟು ಪ್ರತಿಭಟನೆ ನಡೆದಿದೆ ಎಂದು ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು. ಅವರು ಮಾತ್ರ ನಿಮಗೆ ಮತ ಚಲಾಯಿಸುತ್ತಾರೆಯೇ? ಉಳಿದವರು ಮತ ನೀಡುವುದಿಲ್ಲವೇ? ಕತ್ತಿ ಕಂಡರೆ ಪ್ರೀತಿ ನಿಮ್ಮ ರಾಷ್ಟ್ರೀಯತೆಯೇ ಎಂದು ಕೇಳಿದರು.

ವಿಪರೀತ ತುಷ್ಟೀಕರಣವೇ ಇದೆಲ್ಲದಕ್ಕೂ ಕಾರಣ ಎಂದ ಅವರು, ಧಾರವಾಡದಲ್ಲಿ ಕಲ್ಲಂಗಡಿ ಹಣ್ಣನ್ನು ಕೊಯ್ದು ಬಿಸಾಡಿದಾಗ ಸಿದ್ದರಾಮಯ್ಯ ಎಷ್ಟು ಪೌರುಷದಿಂದ ಮಾತನಾಡಿದ್ದರು? ಎಷ್ಟು ಠೇಂಕಾರದಿಂದ ಖಂಡಿಸಿದ್ದರು? ಕನ್ಹಯ್ಯ ಲಾಲ್ ಹತ್ಯೆ ವೇಳೆ ರಕ್ತದ ಹೊಳೆ ಹರಿಸಿದರು; ಚೀತ್ಕರಿಸಿದರೂ ಬಿಡಲಿಲ್ಲ. ನರೇಂದ್ರ ಮೋದಿಯವರಿಗೆ ಎಚ್ಚರಿಕೆ ಕೊಟ್ಟರು. ಆದರೆ, ರಾಜಸ್ಥಾನದ ಕಾಂಗ್ರೆಸ್ ಸರಕಾರ ಮೌನವಾಗಿತ್ತು. ಈ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಉದಯಪುರ ವಿಚಾರದಲ್ಲಿ ಕಾಂಗ್ರೆಸ್‍ನ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪ್ರಿಯಾಂಕ ಗಾಂಧಿ ಅವರು ಒಂದು ಗಟ್ಟಿಧ್ವನಿಯ ಹೇಳಿಕೆಯನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಇಡೀ ದೇಶದ ಜನರು ಇದನ್ನು ಖಂಡಿಸುತ್ತಿದ್ದಾರೆ ಎಂದರು.

ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ? ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ? ಸೆಕ್ಯುಲರ್ ನ ಪರಮೋಚ್ಛ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ನಿಮ್ಮ ಸೆಕ್ಯುಲರಿಸಂ, ನ್ಯಾಷನಾಲಿಟಿ ಎಲ್ಲಿ ಹೋಗಿದೆ. ಅದನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಡವಿಟ್ಟಿದ್ದೀರಾ? ಎಂದು ಕೇಳಿದರು.

ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಆಡಳಿತವಿದ್ದಾಗ ಕೆಎಫ್‍ಡಿ, ಎಸ್‍ಡಿಪಿಐ, ಪಿಎಫ್‍ಐನ 1,600 ಜನರ ಮೇಲಿದ್ದ 175 ಪ್ರಕರಣಗಳನ್ನು ರದ್ದುಪಡಿಸಿದ್ದರು. ನಿನ್ನೆ ಕತ್ತಿಯಿಂದ ಹತ್ಯೆ ಆದರೂ ಒಂದು ಗಟ್ಟಿಧ್ವನಿಯ ಹೇಳಿಕೆಯನ್ನು ಕೂಡಲೇ ಕೊಡಲಿಲ್ಲ. ಮುಸಲ್ಮಾನನ ಹತ್ಯೆ ಆಗುತ್ತಿದ್ದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಬೀದಿಗೆ ಇಳಿದು ಪ್ರತಿಭಟಿಸುತ್ತಿತ್ತು ಎಂದು ಟೀಕಿಸಿದರು.

ಐಸಿಸ್ (ಐಎಸ್‍ಐಎಸ್) ಸಿರಿಯಕ್ಕೆ ಮಾತ್ರ ಸೀಮಿತವಾಗಿತ್ತು. ಇವತ್ತು ರಾಜಸ್ಥಾನಕ್ಕೆ ಬಂದಿದೆ. ಕಾಶ್ಮೀರಕ್ಕೆ ಈ ಹಿಂದೆಯೇ ಬಂದಿದೆ. ನಾಳೆ ನಮ್ಮ ಮನೆ ಬಾಗಿಲಿಗೆ ಬರಬಹುದು. ಇದಕ್ಕೆ ಕಾಂಗ್ರೆಸ್ಸೇ ಕಾರಣ. ಐಸಿಸ್ ಮತ್ತು ಕಾಂಗ್ರೆಸ್ ಸಹೋದರರಂತಿವೆ. ಐಸಿಸ್, ಕಾಂಗ್ರೆಸ್ ಕೆಎಫ್‍ಡಿ, ಎಸ್‍ಡಿಪಿಐ ಮತ್ತು ಪಿಎಫ್‍ಐ ಇವೆಲ್ಲವೂ ಒಂದು ಪರಿವಾರದಂತಿವೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರಿಗೆ ಪ್ರಶ್ನೆಗಳು:

1. ನೀವು ರಾಷ್ಟ್ರೀಯ ಕಾಂಗ್ರೆಸ್ ಎನ್ನುತ್ತೀರಿ. ನೀವು ಕೆಎಫ್‍ಡಿ, ಎಸ್‍ಡಿಪಿಐ ಮತ್ತು ಪಿಎಫ್‍ಐಯ 1,600 ಜನರ ಮೇಲಿದ್ದ 175 ಪ್ರಕರಣಗಳನ್ನು ಯಾಕೆ ರದ್ದುಪಡಿಸಿದಿರಿ?

2. ಹರ್ಷನ ಹತ್ಯೆ ಮಾಡಿದ ಕತ್ತಿ, ಕಾಶ್ಮೀರಿ ಪಂಡಿತರÀನ್ನು ಹತ್ಯೆ ಮಾಡಿದ ಕತ್ತಿ, ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಮಾಡಿದ ಕತ್ತಿ- ಈ ಮೂರೂ ಒಂದೇ ಅಲ್ಲವೇ? ಈ ಕತ್ತಿಯ ಕೊಡುಗೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಕಾಂಗ್ರೆಸ್‍ನದಲ್ಲವೇ? (ಯಾಕೆಂದರೆ ಕಾಶ್ಮೀರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಉದಯಪುರದಲ್ಲೂ ಕಾಂಗ್ರೆಸ್ ಆಡಳಿತದಲ್ಲಿದೆ. ಹರ್ಷನ ಹತ್ಯೆ ನೀವು ಬೆಂಬಲಿಸಿದವರ ಕೊಡುಗೆಯಾಗಿದೆ)

3. ನೀವೇ ಬೆಳೆಸಿದ ತುಷ್ಟೀಕರಣದ ನೀತಿ ಭಯೋತ್ಪಾದನಾ ಕುಕೃತ್ಯಕ್ಕೆ ಕಾರಣವಾಗಿದೆ. ಐಸಿಸ್ ನಮ್ಮ ದೇಶದಲ್ಲೂ ಬೆಳೆಯಲು ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬ್ರದರ್‍ ಗೆ ಕತ್ತಿ ಕಂಡರೆ ಪ್ರೀತಿ ಮತ್ತು ತಿಲಕ ಕಂಡರೆ ಭಯವೇ? ತಿಲಕ ಹಾಕಿದವರು ನಿಮಗೆ ಬ್ರದರ್ ಅಲ್ಲವೇ?

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಒಂದು ವಾರ ಕಾಲ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್‍ನ ಧೋರಣೆಯನ್ನು ನಾವು ಖಂಡಿಸಲಿದ್ದೇವೆ ಎಂದರು. ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನ ಪ್ರಕರಣಗಳು!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮತ್ತಷ್ಟು ಏರಿಕೆ ಕಂಡಿದೆ. ಇಂದು ಒಟ್ಟು 1,249 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಮೂಡಿಸಿದ್ದು, 2 ಮರಣ ಪ್ರಕರಣ ಕೂಡ ಇಂದು ವರದಿಯಾಗಿದೆ.

ಇಂದು ಬೆಂಗಳೂರು ನಗರದಲ್ಲಿ 1,109 ಕೇಸ್ ಜೊತೆಗೆ ಏಕೈಕ ಮರಣ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 5,393ಕ್ಕೆ ಏರಿಕೆ ಕಂಡಿದೆ.



ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ 31 ಮತ್ತು ದಕ್ಷಿಣ ಕನ್ನಡದಲ್ಲಿ 29 ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ಕೊರೊನಾ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಕಂಡುಬಂದಿದೆ. ಇದೀಗ ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,707ಕ್ಕೆ ತಲುಪಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 4.84 ಏರಿಕೆ ಕಂಡಿದೆ.



ರಾಜ್ಯದಲ್ಲಿ ಇಂದು ಒಟ್ಟು 2,33,965 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 25,753 ಸ್ಯಾಂಪಲ್ (ಆರ್ಟಿಪಿಸಿಆರ್ 18,753 + 7,000 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಹುಮತ ಸಾಬೀತಿಗೂ ಮುನ್ನ ರಾಜಿನಾಮೆ ನೀಡಿದ “ಮಹಾ” ಸಿಎಂ!

ಮುಂಬಯಿ : ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು ವಿಶ್ವಾಸ ಮತಯಾಚನೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನಾಳೆ ನಡೆಯಬೇಕಿದ್ದ ವಿಶ್ವಾಸ ಮತ ಯಾಚನೆಗೆ ತಡೆ ನೀಡಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಫೇಸ್ಬುಕ್ ಲೈವ್ ನಲ್ಲಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಸಲ್ಲಿಸಿದ ರಾಜೀನಾಮೆ ಪತ್ರಕ್ಕೆ ರಾಜ್ಯಪಾಲರಿಂದ ಅಂಗೀಕಾರ ದೊರೆತಿದ್ದು ಶರದ್ ಪವಾರ್, ಸೋನಿಯಾ ಗಾಂಧಿ ಸೇರಿ ಹಲವರಿಗೆ ಉದ್ಧವ್ ಠಾಕ್ರೆ ಧನ್ಯವಾದವನ್ನು ತಿಳಿಸಿದ್ದಾರೆ.

Design a site like this with WordPress.com
Get started