ಉಡುಪಿ:ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆಯನ್ನು ಭಜನಾ ಸೇವೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರು ಸಂಘದ ವತಿಯಿಂದ ಮತ್ತು ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ರವರ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಸಂಘದ ವ್ಯಾಪ್ತಿಯ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಪ್ರತಿಭಾ ಪುರಸ್ಕಾರ ಮತ್ತು ವಿಧ್ಯಾರ್ಥಿ ವೇತನವನ್ನು ವಿತರಿಸಿದರು.
ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಮಹಿಳಾ ಘಟಕದ ಸಂಚಾಲಕಿ ವಿಜಯಾ ಜಿ. ಬಂಗೇರ ಹಾಗೂ ಸಂಘದ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಭಜನಾ ಸಂಚಾಲಕರು, ಸಂಘದ ಸದಸ್ಯರು, ಶ್ರೀಗುರು ಮಹಿಳಾ ಕುಣಿತ ಭಜನಾ ಮಂಡಳಿಯ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಉಡುಪಿ: ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷ ತನ್ನದೇ ಸಾಧನೆ ಎಂಬಂತೆ ಬಿಂಬಿಸುವ ಪ್ರಯತ್ನದ ಮೂಲಕ ಸ್ವಾತಂತ್ರ್ಯ ಯೋಧರನ್ನು ಅವಮಾನಿಸುವುದು ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರಗೈಯುವುದು ಕಾಂಗ್ರೆಸ್ ನ ‘ಭಾರತ್ ಜೋಡೋ’ ಯಾತ್ರೆಯ ಮೂಲ ಉದ್ದೇಶವಾಗಿದೆ. ಕಾಂಗ್ರೆಸ್ ನ ಅನೇಕ ಹಿರಿಯ ಮುಖಂಡರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ವೈಫಲ್ಯದ ಗುಣಗಾನಗೈದು ಕಾಂಗ್ರೆಸ್ಸನ್ನು ಅವ್ಯಾಹತವಾಗಿ ತೊರೆಯುತ್ತಿರುವ ಸಂದಿಗ್ಧ ಸನ್ನಿವೇಶದಲ್ಲಿ ಗೊಂದಲದ ಗೂಡಾಗಿರುವ ಕಾಂಗ್ರೆಸ್ ಇದೀಗ ನಡೆಸುತ್ತಿರುವುದು ದೇಶ ವಿಭಜನೆಗೈದ ಪಾಪದ ‘ಪ್ರಾಯಶ್ಚಿತ್ತ ಯಾತ್ರೆ’ ವಿನಹ ಭಾರತವನ್ನು ಜೋಡಿಸುವ ಯಾತ್ರೆಯಲ್ಲ. ಕಾಂಗ್ರೆಸ್ ನ ‘ಭಾರತ್ ಜೋಡೋ’ ಯಾತ್ರೆಯಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲದೇ ಇದ್ದರೂ ಕಾಂಗ್ರೆಸ್ ಮುಖಂಡರ ‘ಕಾಂಗ್ರೆಸ್ ಚೋಡೋ’ ಅಭಿಯಾನಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಕಾಂಗ್ರೆಸ್ ಕೇವಲ ಒಂದೇ ಕುಟುಂಬದ ಹಿತವನ್ನು ಬಯಸಿ, ವಿಭಜನೆ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದು ಇತಿಹಾಸ. ನೆಹರೂ ಅಧಿಕಾರದ ಹಪಾಹಪಿಯ ಫಲವಾಗಿ 1947ರಲ್ಲಿ ಅಖಂಡ ಭಾರತ ವಿಭಜನೆಗೊಂಡಿತು. ಅಂದು ನಡೆದ ಅಸಂಖ್ಯಾತ ಹಿಂದೂಗಳ ಮಾರಣಹೋಮ, ಅತ್ಯಾಚಾರ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದಿಂದ ಕಾಶ್ಮೀರಿ ಪಂಡಿತರ ನರಮೇಧ, ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿಗೆ ಕಾಂಗ್ರೆಸ್ ನ ದುರಾಡಳಿತ, ಬ್ರಹ್ಮಾಂಡ ಬ್ರಷ್ಟಾಚಾರ, ಒಂದೇ ವರ್ಗದ ಓಲೈಕೆ ಇವೆಲ್ಲವನ್ನೂ ಕಾಂಗ್ರೆಸ್ ವರಿಷ್ಠರು ಮತ್ತು ಕಾಂಗ್ರೆಸ್ ಮುಖಂಡರು ಮೆಲುಕು ಹಾಕಲು ಇದು ಸಕಾಲವಾಗಿದೆ.
ಇಂದು ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಸಂಘಟಿತವಾಗಿ ಸುಭದ್ರವಾಗಿ ಸಮೃದ್ಧವಾಗಿದೆ. ಆದರೂ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಯಾವ ಪುರುಷಾರ್ಥ ಸಾಧನೆಗಾಗಿ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದೇಶದೆಲ್ಲೆಡೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣದಲ್ಲಿ ಇ.ಡಿ. ವಿಚಾರಣೆಯನ್ನು ಎದುರಿಸಿರುವುದು ಜಗಜ್ಜಾಹೀರಾಗಿದೆ. ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಬೆರಳ ತುದಿಯಲ್ಲೇ ಕಾಂಗ್ರೆಸ್ ನ ಹಗರಣಗಳ ಸರಮಾಲೆಯನ್ನು ಸುಲಲಿತವಾಗಿ ಅರಿತುಕೊಂಡಿದ್ದಾರೆ. ವಿಶ್ವ ನಾಯಕರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರ ಶ್ರೇಷ್ಠ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ. ಇವೆಲ್ಲವನ್ನೂ ಅರಗಿಸಿಕೊಳ್ಳಲಾಗದ ಭ್ರಷ್ಟ ಕಾಂಗ್ರೆಸ್ ದೇಶವಾಸಿಗಳ ಗಮನವನ್ನು ಬೇರೆಡೆಗೆ ಒಯ್ಯಲು ನಿಷ್ರಯೋಜಕ ಭಾರತ್ ಜೋಡೋ ಯಾತ್ರೆ ಎಂಬ ಹೊಸ ನಾಟಕವನ್ನಾಡುತ್ತಿರುವುದು ಜನಜನಿತವಾಗಿದೆ.
ರಾಷ್ಟ್ರ ಧ್ವಜವನ್ನು ಮರೆತ ಕಾಂಗ್ರೆಸಿಗರಿಗೆ ಪ್ರಧಾನಿ ಮೋದಿ ‘ಹರ್ ಘರ್ ತಿರಂಗಾ’ ಎಂಬ ಕರೆ ನೀಡಿದಾಗ ರಾಷ್ಟ್ರ ಧ್ವಜದ ನೆನಪಾಗುತ್ತದೆ. ದೇಶದೆಲ್ಲೆಡೆ ಅಶಾಂತಿಯ ವಾತಾವರಣ ಸೃಷ್ಟಿಸುತ್ತಾ ದೇಶ ವಿರೋಧಿ ಕೃರ್ತ್ಯಗಳಿಗೆ ಬೆಂಬಲಿಸುವ ಕಾಂಗ್ರೆಸಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ದೇಶವನ್ನು ಜೋಡಿಸುವ ಕನಸು ಕಾಣುತ್ತಾರೆ. ದೇಶವಾಸಿಗಳು ಪ್ರಬುದ್ಧರಾಗಿದ್ದು ಕಾಂಗ್ರೆಸ್ ನ ಸಮಯಸಾಧಕ ಕೃತ್ಯಗಳನ್ನು ಸೂಕ್ಮವಾಗಿ ಗಮನಿಸುತ್ತಿದ್ದಾರೆ. ಅಖಂಡ ಭಾರತವನ್ನು ತುಂಡರಿಸಿದ ಕಾಂಗ್ರೆಸ್ಸಿಗೆ ಭಾರತವನ್ನು ಜೋಡಿಸುವ ಬಗ್ಗೆ ಸೊಲ್ಲೆತ್ತುವ ನೈತಿಕತೆಯೂ ಇಲ್ಲ, ಸಂಘಟಿತ ಭಾರತವನ್ನು ಪುನರ್ ಜೋಡಿಸಲು ಸಾಧ್ಯವೂ ಇಲ್ಲ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ರಾಜ್ಯ ಬಿಜೆಪಿ ಸೂಚನೆಯಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಒಂಬತ್ತು ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಿಂದ ಬೂತ್ ಹಾಗೂ ಪೇಜ್ ಪ್ರಮುಖರ ವರೆಗಿನ ವಿವಿಧ ಮಜಲುಗಳಲ್ಲಿ ಪಕ್ಷ ಸಂಘಟನೆಯ ಕಾರ್ಯ ವಿಸ್ತಾರದ ಪರಿಶೀಲನೆಯನ್ನು ನಡೆಸಿ ವಿವಿಧ ಮೋರ್ಚಾಗಳು ಮತ್ತು ಪ್ರಕೋಷ್ಠಗಳ ಎಲ್ಲಾ ಹಂತಗಳ ಸಂಘಟನಾ ಸಮಿತಿಯನ್ನು ಸಕ್ರಿಯಗೊಳಿಸಿ ಚುನಾವಣಾ ಪೂರ್ವಸಿದ್ಧತೆಗಳೊಂದಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ವೇಗ ನೀಡಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ರಾಜ್ಯ ಸಂಘಟನಾತ್ಮಕ ತಂಡದ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಸಂಘಟನಾತ್ಮಕ ತಂಡದ ಸಭೆಯನ್ನುದ್ದೇಶಿಸಿ ಮಾತನಾಡಿ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಿದರು.
ಜಿಲ್ಲೆಯಾದ್ಯಂತ ನಡೆಯುವ ಎಲ್ಲಾ ಸಂಘಟನಾತ್ಮಕ ಕೆಲಸ ಕಾರ್ಯಗಳಿಗೆ ಜಿಲ್ಲಾ ಮತ್ತು ಮಂಡಲಗಳ ಸಂಘಟನಾತ್ಮಕ ತಂಡಗಳು ಪೂರಕವಾಗಿ ಸ್ಪಂದಿಸಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸೆ.17ರಿಂದ ಅ.2ರ ವರೆಗೆ ಪಕ್ಷದ ವತಿಯಿಂದ ಜಿಲ್ಲೆಯಾದ್ಯಂತ ‘ಸೇವಾ ಪಾಕ್ಷಿಕ’ವನ್ನು ಆಚರಿಸಲಾಗುವುದು. ಸೆ.17 ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ, ಸೆ.25 ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ದಿನ, ಅ.2 ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನ. ಈ ಎಲ್ಲಾ ಕಾರ್ಯಕ್ರಮಗಳನ್ನು ವಿವಿಧ ಸೇವಾ ಚಟುವಟಿಕೆಗಳ ಮೂಲಕ ಶಕ್ತಿ ಕೇಂದ್ರ ಮಟ್ಟದಲ್ಲಿ ವ್ಯವಸ್ಥಿತವಾಗಿ ಆಚರಿಸಬೇಕು. ಈ ಪ್ರಯುಕ್ತ ನಡೆಯುವ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳು, ಕೆರೆ ಬಾವಿ ನದಿಗಳ ಸ್ವಚ್ಛತಾ ಅಭಿಯಾನ, ಮಳೆ ನೀರನ್ನು ಸಂಗ್ರಹಿಸಿ ‘ಅಮೃತ ಸರೋವರ’ ನಿರ್ಮಾಣದಂತಹ ಉದಾತ್ತ ಸೇವಾ ಚಟುವಟಕೆಗಳಲ್ಲಿ ಪಕ್ಷದ ಪ್ರಮುಖರು ಹಾಗೂ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ತೊಡಗಿಸಿಕೊಂಡು ‘ಸೇವಾ ಪಾಕ್ಷಿಕ’ವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ರವಿ ಅಮೀನ್, ಜಿಲ್ಲಾ ಕಾರ್ಯದರ್ಶಿಗಳಾದ ನಳಿನಿ ಪ್ರದೀಪ್ ರಾವ್, ಗುರು ಪ್ರಸಾದ್ ಶೆಟ್ಟಿ ಕಟಪಾಡಿ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಕುಂದಾಪುರ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಅರುಣ ಬಾಣ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಸಹಕಾರಿ ಪ್ರಕೋಷ್ಠ ಸಂಚಾಲಕ ಮುರಳೀಧರ ಪೈ, ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷೆ ವೀಣಾ ವಿ. ನಾಯ್ಕ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು ಹಾಗೂ ಜಿಲ್ಲಾ ಮತ್ತು ಮಂಡಲಗಳ ಸಂಘಟನಾತ್ಮಕ ತಂಡದ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ವಂದಿಸಿದರು.
ಉಡುಪಿ: ಕರ್ನಾಟಕ ಸರಕಾರದ ಮಾನ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀ ವಿ. ಸುನೀಲ್ ಕುಮಾರ್ ರವರು ಅಂಬಲಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 45ನೇ ವರ್ಷದ ಗಣೇಶೋತ್ಸವದ 4ನೇ ದಿನದ ಮಹಾಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕುಮಾರ್ ಕಪ್ಪೆಟ್ಟು, ಉಪಾಧ್ಯಕ್ಷ ರವೀಶ್ ಪೂಜಾರಿ ಕಪ್ಪೆಟ್ಟು, ಕೋಶಾಧಿಕಾರಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಕೇಂದ್ರ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ, ಗಣೇಶೋತ್ಸವ ಕಾರ್ಯಕಾರಿ ಸಮಿತಿ ಸದಸ್ಯರಾದ ಸೂರ್ಯಕಾಂತ್ ಅಂಬಲಪಾಡಿ, ಶ್ರೇಯಸ್ ಸಿ. ಶೆಣೈ, ಪ್ರಶಾಂತ್, ಭರತ್, ನಾಗೇಶ್, ದಯಾನಂದ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ ರವರ ತಂದೆ ಆನಂದ ಎನ್. ಪುತ್ರನ್ ರವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಯಶ್ಪಾಲ್ ಎ. ಸುವರ್ಣ ಮತ್ತು ಅವರ ಕುಟುಂಬ ವರ್ಗ, ಬಂಧು-ಮಿತ್ರರು ಹಾಗೂ ಅಭಿಮಾನಿಗಳಿಗೆ ಹಿರಿಯರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಸೆ.2ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ 1.00 ಗಂಟೆಗೆ ಮಂಗಳೂರಿನ ಬಂಗ್ರಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸುವ ಈ ಸಮಾವೇಶವನ್ನು ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸೇರಿ ಸಂಘಟಿತ ಪ್ರಯತ್ನದಿಂದ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಹೇಳಿದರು.
ಅವರು ಮಂಗಳವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವಿಭಜಿತ ದ.ಕ. ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರು, ಎಲ್ಲಾ ಶಾಸಕರು ಹಾಗೂ ಇನ್ನಿತರ ಪ್ರಮುಖರು ಪ್ರಧಾನಿಯವರ ಈ ಸರಕಾರಿ ಕಾರ್ಯಕ್ರಮದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಉಡುಪಿ ಜಿಲ್ಲೆಯಿಂದ ಸುಮಾರು 20 ಸಾವಿರ ಮಂದಿ ಸಮಾವೇಶದಲ್ಲಿ ಭಾಗವಹಿಸಲು ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಮಂಡಲವಾರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಫಲಾನುಭವಿಗಳ ಸಹಿತ ಎಲ್ಲಾ ಅಪೇಕ್ಷಿತರು ಬೆಳಿಗ್ಗೆ 12.00 ಗಂಟೆಯೊಳಗೆ ಸಭಾಂಗಣದಲ್ಲಿ ಉಪಸ್ಥಿತರಿರುವಂತೆ ಪೂರ್ವಸಿದ್ಧತೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಂತೆ ವಿನಂತಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಸಾವರ್ಕರ್ ಹೋರಾಟ, ಜೀವನಾದರ್ಶಗಳ ಮಾಹಿತಿಯನ್ನೊಳಗೊಂಡಿರು ಪುಸ್ತಕಗಳ ಮಾರಾಟ ಮಳಿಗೆ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಉಡುಪಿಯ ಜಿಲ್ಲಾ ಖಜಾನೆ ಕಛೇರಿಯ ಬಳಿ ವೀರ ಸಾವರ್ಕರ್ ವೃತ್ತ ನಿರ್ಮಾಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಯುವ ಸಮುದಾಯಕ್ಕೆ ಸಾವರ್ಕರ್ ದೇಶ ಪ್ರೇಮ, ಚಿಂತನೆ, ಹೋರಾಟ, ತ್ಯಾಗ, ಬಲಿದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜುಗಳಲ್ಲಿ ವಿಚಾರ ಸಂಕಿರಣ ನಡೆಸಲು ಚಿಂತನೆ ನಡೆಸಲಾಗಿದೆ. ವಿರೋಧ ಪಕ್ಷಗಳು ವೀರ ಸಾವರ್ಕರ್ ರವರ ಸ್ವಾತಂತ್ರ್ಯ ಹೋರಾಟದ ನೈಜ ವಿಚಾರವನ್ನು ಅರಿತುಕೊಂಡು, ಸಾವರ್ಕರ್ ಕುರಿತು ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
ಭಾರತವನ್ನು ತುಂಡು ಮಾಡಿರುವ ಕಾಂಗ್ರೆಸ್ ಪಕ್ಷ ಇದೀಗ ಭಾರತ್ ಜೋಡೋ ಪಾದಯಾತ್ರೆಯನ್ನು ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸಿಗರಿಗೆ ಭಾರತವನ್ನು ಜೋಡಿಸಲು ಎಂದಿಗೂ ಸಾಧ್ಯವಾಗದು. ಭಾರತ್ ಜೋಡೋ ಅಭಿಯಾನದ ಮೊದಲು ಕಾಂಗ್ರೆಸ್ ಪಕ್ಷವನ್ನು ತೊರೆದು ತಂಡೋಪತಂಡವಾಗಿ ಹೊರ ಹೋಗುತ್ತಿರುವ ಕಾಂಗ್ರೆಸ್ ಮುಖಂಡರನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ಜೋಡೋ ಅಭಿಯಾನ ನಡೆಸುವುದು ಉತ್ತಮ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಉಪಸ್ಥಿತರಿದ್ದರು.
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮದ ಆ.28ರ ನೇರ ಪ್ರಸಾರವನ್ನು ದೂರದರ್ಶನದ ಸಹಯೋಗದೊಂದಿಗೆ ಕೇಂದ್ರ ಸರಕಾರದ ಎನ್.ಆರ್.ಎಲ್.ಎಂ. ಯೋಜನೆಯ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ವೀಕ್ಷಿಸುವ ಕಾರ್ಯಕ್ರಮವು ದೇಶದ 12 ಅಧಿಕೃತ ವೀಕ್ಷಣಾ ಕೇಂದ್ರಗಳಲ್ಲಿ ಒಂದಾದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರೋಟೀನುಯುಕ್ತ ದ್ವಿದಳ ಧಾನ್ಯಗಳ ಉತ್ಪಾದನೆ, ಪೋಷಣ್ ಅಭಿಯಾನ, ಡಿಜಿಟಲ್ ಉದ್ಯಮ, ಅಮೃತ ಸರೋವರ ತತ್ವದಡಿ ಜಲ ಮೂಲಗಳ ಅಭಿವೃದ್ಧಿಗೆ ಒತ್ತು ನೀಡುವುದು ಮುಂತಾದ ಮಹತ್ವದ ವಿಚಾರಗಳ ಬಗ್ಗೆ ಉಲ್ಲೇಖಿಸಿರುವುದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿಯವರು ಉಲ್ಲೇಖಿಸಿದ ವಿಷಯಗಳ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ನೇರ ಪ್ರಸಾರದಲ್ಲಿ ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ’ಸಿಲ್ವಾ, ಮನ್ ಕೀ ಬಾತ್ ವೀಕ್ಷಣೆ ಕಾರ್ಯಕ್ರಮದ ಸಂಯೋಜಕ ಗ್ರಾಂ.ಪಂ. ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ಪಿ.ಡಿ.ಒ. ವಸಂತಿ, ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಜಿಲ್ಲಾ ವ್ಯವಸ್ಥಾಪಕಿ ನವ್ಯಾ, ತಾಲೂಕು ವ್ಯವಸ್ಥಾಪಕ ಕೃಷ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ದೂರದರ್ಶನದ ಡಿಡಿ ನ್ಯೂಸ್ ನ್ಯಾಷನಲ್ ಮುಖ್ಯ ಪ್ರತಿನಿಧಿ ಆಯೇಷಾ ಖಾನುಮ್, ಉಡುಪಿ ಪ್ರತಿನಿಧಿ ಉದಯ್ ಪಡಿಯಾರ್, ಕೆಮರಾ ಮ್ಯಾನ್ ಅಪ್ಪಾಜಿ ರಾವ್, ಅಭಿಯಂತರ ರಮೇಶ್, ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಅಶೋಕ್, ಕಾರ್ಯದರ್ಶಿ ಸುಕನ್ಯಾ ಶೆಟ್ಟಿ, ಅಂಬಲಪಾಡಿ ಎಂ.ಬಿ.ಕೆ. ಪ್ರಮೀಳಾ, ಗ್ರಾಮ ಪಂಚಾಯತ್ ಸದಸ್ಯರಾದ ಶಕುಂತಳಾ ಶೆಟ್ಟಿ, ಉಷಾ ಕಿದಿಯೂರು, ಉಷಾ ಶೆಟ್ಟಿ, ಸಬಿತಾ ಮೆಂಡನ್, ಶಶಿಧರ್ ಸುವರ್ಣ, ಸುಂದರ ಪೂಜಾರಿ, ರಾಜೇಶ್ ಸುವರ್ಣ, ಪ್ರಮೋದ್ ಸಾಲಿಯಾನ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಮಾಣಿಕ್ಯ ಒಕ್ಕೂಟ ಕಡೆಕಾರು ಇದರ ಮಹಿಳಾ ಸದಸ್ಯರು ಚಂಡೆ ವಾದನದಿಂದ ಸ್ವಾಗತಿಸಿದರು. ಅಂಬಲಪಾಡಿ, ಕಡೆಕಾರು, ಉದ್ಯಾವರ ತೆಂಕನಿಡಿಯೂರು, ಬಡಾನಿಡಿಯೂರು, ಕಲ್ಯಾಣಪುರ, ಕೆಮ್ಮಣ್ಣು, ಪೆರ್ಡೂರು ಮತ್ತಿತರ ಗ್ರಾ.ಪಂ. ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಮನ್ ಕೀ ಬಾತ್ ವೀಕ್ಷಣೆಯಲ್ಲಿ ಭಾಗವಹಿಸಿದರು. ಸಂಜೀವಿನಿ ವಿಶೇಷ ಸಂತೆಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಂದ ಉತ್ಪಾದಿಸಲ್ಪಟ್ಟ ವಿವಿಧ ಸಾಮಗ್ರಿಗಳ ಮಾರಾಟ ಪ್ರಕ್ರಿಯೆ ನಡೆಯಿತು.
ಉಡುಪಿ: ಆಗಸ್ಟ್ 28 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ಅಂಬಲಪಾಡಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಂದ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಆಗಸ್ಟ್ ತಿಂಗಳ ‘ಮನ್ ಕೀ ಬಾತ್ ನೇರ ಪ್ರಸಾರ ವೀಕ್ಷಣೆ’ ಮತ್ತು ‘ಸಂಜೀವಿನಿ ಒಕ್ಕೂಟದ ವಿಶೇಷ ಸಂತೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ. ಮಾತನಾಡಿ, ಜಿಲ್ಲೆಯಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಹಿಳಾ ಸಬಲೀಕರಣದ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎನ್.ಆರ್.ಎಲ್.ಎಂ. ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಾದ್ಯಂತ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರು ಗುಡಿ ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳನ್ನು ‘ಸಂಜೀವಿನಿ ಸಂತೆ’ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಮಹಿಳೆಯರಲ್ಲಿ ಸ್ವಾವಲಂಬನೆಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಸಾರ್ವಜನಿಕರು ಸಂಜೀವಿನಿ ಸಂತೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದರು.
ಕರ್ನಾಟಕ ಸರಕಾರದ ಉದ್ಯಮ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ‘ಸಂಜೀವಿನಿ ಸಂತೆ’ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಕೇಂದ್ರ ಸರಕಾರದ ಎನ್.ಆರ್.ಎಲ್.ಎಂ. ಯೋಜನೆಯು ‘ಆತ್ಮ ನಿರ್ಬರ ಭಾರತ’ ಪರಿಕಲ್ಪನೆಗೆ ಪೂರಕವಾಗಿದೆ. ಪ್ರಧಾನಿ ಮೋದಿ ಆಶಯದಂತೆ ‘ವೋಕಲ್ ಫಾರ್ ಲೋಕಲ್’ ತತ್ವವು ಸಂಜೀವಿನಿ ಒಕ್ಕೂಟದ ಸದಸ್ಯರ ಸ್ಥಳೀಯ ಉತ್ಪಾದನಾ ಕ್ರಾಂತಿಯ ಮೂಲಕ ಪ್ರಚಲಿತವಾಗುತ್ತಿದೆ. ಇಂದು ಉತ್ತಮ ಗುಣಮಟ್ಟದ ಉತ್ಪನ್ನಗಳು ಸ್ಥಳೀಯರಿಂದಲೇ ಉತ್ಪಾದನೆಗೊಂಡು ಸ್ಥಳೀಯರ ಬೇಡಿಕೆಯನ್ನು ಪೂರೈಸುವ ಪ್ರಕ್ರಿಯೆಯಿಂದ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳೆಯರು ಜವಾಬ್ದಾರಿಯನ್ನು ಬದ್ಧತೆ ಮತ್ತು ಪರಿಪೂರ್ಣತೆಯಿಂದ ನಿಭಾಯಿಸುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ಪ್ರಭಾಕರ್ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್.ಆರ್.ಎಲ್.ಎಂ) ಅನ್ವಯ ನಡೆಯುತ್ತಿರುವ ಸಂಜೀವಿನಿ ಒಕ್ಕೂಟಗಳ ಚಟುವಟಿಕೆ, ಕಾರ್ಯ ನಿರ್ವಹಣೆ ಹಾಗೂ ಒಕ್ಕೂಟದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಂದ ಉತ್ಪಾದಿತ ಉತ್ಪನ್ನಗಳ ಮಾರಾಟ ಮಳಿಗೆ ಸಂಜೀವಿನಿ ಸಂತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮನ್ ಕೀ ಬಾತ್ ಕಾರ್ಯಕ್ರಮದ ಆಗಸ್ಟ್ ತಿಂಗಳ ನೇರ ಪ್ರಸಾರ ವೀಕ್ಷಣೆಯು ಪ್ರಧಾನಿ ಕಾರ್ಯಾಲಯದಿಂದ ಅನುಮೋದನೆಗೊಂಡ ರಾಜ್ಯದ ವೀಕ್ಷಣಾ ಕೇಂದ್ರ ಅಂಬಲಪಾಡಿ ಗ್ರಾಮ ಪಂಚಾಯತ್ ನ ಸುವರ್ಣ ಸೌಧ ಸಭಾಂಗಣದಲ್ಲಿ ಆಗಸ್ಟ್ 28 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಯಲಿದ್ದು, ವೀಕ್ಷಣೆಯಲ್ಲಿ ವಿಶೇಷವಾಗಿ ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 9.30ರಿಂದ ಸಂಜೀವಿನಿ ಒಕ್ಕೂಟದ ‘ವಿಶೇಷ ಸಂತೆ’ ನಡೆಯಲಿದೆ. ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ಎನ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಉಷಾ ಕಿದಿಯೂರು, ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಅಶೋಕ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಶಶಿಧರ್ ಸುವರ್ಣ, ಹರೀಶ್ ಪಾಲನ್ ಕಪ್ಪೆಟ್ಟು, ಪ್ರಮೋದ್ ಸಾಲಿಯಾನ್, ಶಕುಂತಲಾ ಶೆಟ್ಟಿ, ಭಾರತಿ ಭಾಸ್ಕರ್, ಉಷಾ ಶೆಟ್ಟಿ, ಕುಸುಮ ಹಾಗೂ ಸಂಜೀವಿನಿ ಒಕ್ಕೂಟದ ಅಂಬಲಪಾಡಿ, ಕಡೇಕಾರು, ಉದ್ಯಾವರ, ತೆಂಕನಿಡಿಯೂರು, ಬಡಾನಿಡಿಯೂರು, ಕೆಮ್ಮಣ್ಣು ಮತ್ತು ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂಬಲಪಾಡಿ ಗ್ರಾಮ ಪಂಚಾಯತ್ ಪಿ.ಡಿ.ಒ. ವಸಂತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಬಲಪಾಡಿ ಸಂಜೀವಿನಿ ಒಕ್ಕೂಟದ ಎಂಬಿಕೆ ಪ್ರಮೀಳಾ ವಂದಿಸಿದರು.
ಉಡುಪಿ: ಉಡುಪಿ ಜಿಲ್ಲೆಯ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಬ್ರಹ್ಮಾವರದ ಸಹಕಾರಿ ಕ್ಷೇತ್ರದ ಮಜಲಿನಲ್ಲಿ ಇನ್ನೊಂದು ಹೊಸ ಪೈರಿನ ತೆನೆ ಅರಳಲು ಸಜ್ಜಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಉಡುಪಿಯನ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ(ನಿ.) ಆಗಸ್ಟ್ 28, ರವಿವಾರ ಬೆಳಿಗ್ಗೆ 10.00 ಗಂಟೆಗೆ ಬ್ರಹ್ಮಾವರದ ಎಸ್.ಎಮ್.ಎಸ್. ಚರ್ಚ್ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಚಿನ್ ಪೂಜಾರಿ ತಿಳಿಸಿದ್ದಾರೆ.
ಉಡುಪಿಯ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ(ನಿ.) ಇದರ ಅಧ್ಯಕ್ಷ ಸಚಿನ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲನೆಗೈಯಲಿದ್ದಾರೆ.
ಉಡುಪಿ ಶಾಸಕ ಕೆ.ರಘುಪತಿ ಭಟ್ ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿರವರು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ; ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಮನೋಹರ್ ಎಸ್. ಕಲ್ಮಾಡಿ, ಅಧ್ಯಕ್ಷರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ; ಶ್ರೀಮತಿ ವೀಣಾ ವಿ. ನಾಯ್ಕ್, ಅಧ್ಯಕ್ಷರು, ಬಿಜೆಪಿ ಉಡುಪಿ ಗ್ರಾಮಾಂತರ; ಶಿರಿಯಾರ ಗಣೇಶ್ ನಾಯಕ್, ಮಾಲಕರು, ದೀಪ್ತಿ ಎಂಟರ್‌ಪ್ರೈಸಸ್; ಬಿರ್ತಿ ರಾಜೇಶ್ ಶೆಟ್ಟಿ, ನಿರ್ದೇಶಕರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.); ಪ್ರತಾಪ್ ಹೆಗ್ಡೆ ಮಾರಾಳಿ, ಮಾಜಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರು; ಬಿ.ಎನ್. ಶಂಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಕೋ-ಆಪರೇಟಿವ್ ಯೂನಿಯನ್; ಸಿ.ಎ. ದೇವ್ ಆನಂದ್, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ (2024-25); ಸಿ.ಎ. ಜೀವನ್ ಶೆಟ್ಟಿ, ಚಾರ್ಟೆಡ್ ಅಕೌಂಟೆಂಟ್, ಉಡುಪಿ; ಉಮೇಶ್ ಎ. ನಾಯ್ಕ್, ಸ್ನೇಹ ಟುಟೋರಿಯಲ್ ಉಡುಪಿ; ಕೆ.ಆರ್. ರೋಹಿತ್, ಪ್ರ.ದ.ಸ. ಸಹಕಾರಿ ಸಂಘಗಳ ಉಪ ನಿಬಂಧಕರ ಕಛೇರಿ ಉಡುಪಿ; ಜೀವನ್ ಶೆಟ್ಟಿ ಬೈಕಾಡಿ, ಉದ್ಯಮಿಗಳು, ಬ್ರಹ್ಮಾವರ; ಶ್ರೀಮತಿ ನಾಗವೇಣಿ, ಅಧ್ಯಕ್ಷರು, ವಾರಂಬಳ್ಳಿ ಗ್ರಾಮ ಪಂಚಾಯತ್; ವೆಂಕಟೇಶ್ ಶೇಟ್, ಉದ್ಯಮಿಗಳು, ಕುಂದಾಪುರ ಇವರು ಭಾಗವಹಿಸಲಿರುವರು.
ಸೊಸೈಟಿಯ ಉಪಾಧ್ಯಕ್ಷ ಮೋಹನ್ ಖಾರ್ವಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಹಾಗೂ ನಿರ್ದೇಶಕರುಗಳಾದ ಧೀರಜ್ ಕುಮಾರ್ ಶೆಟ್ಟಿ, ರಾಜು ಪೂಜಾರಿ, ಸುದರ್ಶನ್, ವಿಶ್ವನಾಥ್ ಕಲ್ಮಾಡಿ, ರಮಾನಾಥ ಖಾರ್ವಿ, ಕೇಶವ ಆಚಾರ್ಯ, ನಂದು ಖಾರ್ವಿ, ವೀಣಾ ವಿ. ನಾಯ್ಕ್, ಗೀತಾ ನಾರಾಯಣ ಪೂಜಾರಿ, ಜ್ಯೋತಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸಂಸ್ಥೆಯ ಪಾಲು ಬಂಡವಾಳದಾರರು ಉಪಸ್ಥಿತರಿರುವರು.
ಸಹೃದಯಿ ಸಹಕಾರಿ ಕ್ಷೇತ್ರದ ಬಂಧುಗಳು, ಸಾರ್ವಜನಿಕ ಬಂಧುಗಳು ಹಾಗೂ ಹಿತೈಷಿಗಳು ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಗಳಾಗಿ ನೂತನ ಸಂಸ್ಥೆಗೆ ಪೂರ್ಣ ಪ್ರಮಾಣದ ಸಹಕಾರ ಮತ್ತು ಪ್ರೋತ್ಸಾಹವನ್ನಿತ್ತು ಹರಸಬೇಕು ಎಂದು ಸೊಸೈಟಿಯ ಅಧ್ಯಕ್ಷ ಸಚಿನ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಪ್ರಥಮ ಕಾರ್ಯಕ್ರಮ ಸೆ.2ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯಲಿದೆ. ಚುನಾವಣಾ ಸಂಬಂಧಿತ ಉಭಯ ಜಿಲ್ಲೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದರೂ, ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡುವ ಸರಕಾರಿ ಕಾರ್ಯಕ್ರಮ ಇದಾಗಿದೆ. ದ.ಕ ಜಿಲ್ಲೆಯಿಂದ ಸುಮಾರು 80 ಸಾವಿರ ಮಂದಿ ಹಾಗೂ ಉಡುಪಿ ಜಿಲ್ಲೆಯಿಂದ ಸುಮಾರು 20 ಸಾವಿರ ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪ್ರಧಾನಿ ಮಂಗಳೂರು ಭೇಟಿ ಕಾರ್ಯಕ್ರಮದ ಪೂರ್ವಬಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ಮೋದಿಯವರ ಮೊದಲನೇ ಸರಕಾರಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲು ಯೋಜನೆಯನ್ನು ರೂಪಿಸಲಾಗಿದೆ. ಸೆ.2ರ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಪ್ರಧಾನಿ ಮೋದಿಯವರು ಸಂಜೆ 4.00 ಗಂಟೆಗೆ ಆಗಮಿಸಲಿದ್ದಾರೆ. ಗೋಲ್ಡ್ ಪಿಂಚ್ ಮೈದಾನದಲ್ಲಿ ಸುಮಾರು 1 ಲಕ್ಷ ಮಂದಿ ಸೇರಲಿದ್ದು, ಪ್ರಧಾನಿಯವರು ಆಗಮಿಸುವ ದಾರಿಯಲ್ಲಿ ಸುಮಾರು 2 ಕೀ.ಮೀ ಉದ್ದಕ್ಕೆ ಸುಮಾರು 15 ಸಾವಿರ ಮಂದಿಯನ್ನು ಸೇರಿಸಿ ರೋಡ್ ಶೋ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ.
ಈಗಾಗಲೇ ಸರಕಾರಿ ಅಧಿಕಾರಿಗಳ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇಕಡಾ 50ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದಾದರೊಂದು ಯೋಜನೆಗಳು ತಲುಪಿರುವ ಹಿನ್ನೆಲೆಯಲ್ಲಿ ಅಂತಹ ಫಲಾನುಭವಿಗಳನ್ನು ಕೂಡಾ ಈ ಸಮಾವೇಶದಲ್ಲಿ ಜೋಡಿಸಿಕೊಳ್ಳಲು ಸಿದ್ಧತೆಗಳನ್ನು ನಡೆಸಲಾಗಿದೆ. ಉಭಯ ಜಿಲ್ಲೆಗಳಲ್ಲಿ ಯೋಜನಾಬದ್ಧ ಪೂರ್ವ ಸಿದ್ದತಾ ಸಭೆಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಸೆ.2ರ ಪ್ರಧಾನಿ ಮೋದಿಯವರ ಮಂಗಳೂರು ಐತಿಹಾಸಿಕ ಸಮಾವೇಶದಲ್ಲಿ ಸುಮಾರು 15 ಸಾವಿರ ಮಂದಿ ಮೇಲ್ಪಟ್ಟು ಭಾಗವಹಿಸಲು ಜಿಲ್ಲಾದ್ಯಂತ ಆ.27, 28 ಮತ್ತು 29ರಂದು ಬೈಂದೂರು, ಕುಂದಾಪುರ, ಕಾಪು, ಕಾರ್ಕಳ, ಉಡುಪಿ ಗ್ರಾಮಾಂತರ ಮತ್ತು ಉಡುಪಿ ನಗರ ಮಂಡಲಗಳ ಪೂರ್ವಸಿದ್ಧತಾ ಸಭೆಗಳು ನಡೆಯಲಿವೆ. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಪ್ರತೀ ವಾರ್ಡ್ ಗಳ ವ್ಯಾಪ್ತಿಯಿಂದ ಕನಿಷ್ಠ ನೂರು ಮಂದಿ ಹಾಗೂ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಮತ್ತು ಸರಕಾರದ ಯೋಜನೆಗಳ ಫಲಾನುಭವಿಗಳು ಸಕ್ರಿಯವಾಗಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ ಚುನಾವಣಾ ವರ್ಷದಲ್ಲಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಬೇಟಿ ಕಾರ್ಯಕ್ರಮ ಅತ್ಯಂತ ಮಹತ್ವವನ್ನು ಪಡೆದಿದೆ. ಪಕ್ಷದ ಪ್ರಮುಖರು, ಜವಾಬ್ದಾರಿಯುತ ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು ಮತ್ತು ಎಲ್ಲಾ ಸ್ತರದ ಜನಪ್ರತಿನಿಧಿಗಳು ಒಂದಾಗಿ ಸಂಘಟಿತ ಪ್ರಯತ್ನದ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರ ಮಂಗಳೂರು ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ವಂದಿಸಿದರು.