ಛತ್ತೀಸ್ ಘಡದಲ್ಲಿ ಬಂಧಿಸಿರುವ ಸಿಸ್ಟರ್ ಗಳ ಬಿಡುಗಡೆಗೆ ಒತ್ತಾಯ, ಕ್ರೈಸ್ತ ಸಂಘಟನೆಯ ಸಮಯ ಸಾಧಕ ನಡೆ ಖಂಡನೀಯ : ರುಡಾಲ್ಪ್ ಡಿ’ಸೋಜ


ಉಡುಪಿ: ಇತ್ತೀಚಿಗೆ ಛತ್ತೀಸ್ಗಡದಲ್ಲಿ ನಡೆದ ಎರಡು ಸಿಸ್ಟರ್ ಗಳ ಬಂಧನಕ್ಕೆ ಸಂಬಂಧಿಸಿದಂತೆ ಸರಕಾರ ಕೂಡಲೇ ತನಿಖೆಯನ್ನು ತೀವ್ರಗೊಳಿಸಿ ಬಂಧಿತರಾಗಿರುವ ಸಿಸ್ಟರ್ ಗಳನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ’ಸೋಜ ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಪ್ರತಿಭಟನೆಯ ಪ್ರಹಸನಕ್ಕೆ ಮುoದಾಗಿರುವ ಭಾರತೀಯ ಕ್ರೈಸ್ತ ಒಕ್ಕೂಟ ಉಡುಪಿ ಮತ್ತು ಕಥೋಲಿಕ್ ಸಭಾ ಉಡುಪಿ ಇದರ ನಡೆ ಖಂಡನೀಯ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಶಿವಮೊಗ್ಗದ ರೋಮನ್ ಕ್ಯಾಥೋಲಿಕ್ ಚರ್ಚಿನ ಧರ್ಮ ಗುರುಗಳನ್ನು ವಿನಾಕಾರಣ ಬಂಧಿಸಿ ಮೂರು ತಿಂಗಳಿಗಿಂತಲೂ ಅಧಿಕ ಸಮಯ ಬಂಧನದಲ್ಲಿ ಇರಿಸಲಾಗಿದೆ. ಆ ಧರ್ಮ ಗುರುವಿನ ನರಕ ಯಾತನೆಯ ಬಗ್ಗೆ ಬಾಯಿ ಬಿಡದ, ಘಟನೆಯನ್ನು ಖಂಡಿಸದ ಹಾಗೂ ಮೇಣದ ಬತ್ತಿ ಹಿಡಿದುಕೊಂಡು ಮೆರವಣಿಗೆ ಮಾಡದ ಈ ಸಂಘಟನೆಗಳ ಸಮಯ ಸಾಧಕ ನಡೆಯನ್ನು ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದಾಗ ಕ್ರೈಸ್ತ ಧರ್ಮದ ಗುರುಗಳನ್ನು ಬಂಧಿಸಿ ತಿಂಗಳುಗಳ ಕಾಲ ಜೈಲಿನಲ್ಲಿ ಇಟ್ಟಿರುವ ಯಾವುದೇ ಉದಾಹರಣೆ ಇಲ್ಲ.

ಈ ಎರಡೂ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುವ ಬದಲು, ಉಡುಪಿ ಜಿಲ್ಲೆಯಲ್ಲಿರುವ ಬಡ ಕ್ರೈಸ್ತರ ನೆರವಿಗಾಗಿ ಕೆಲಸ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ರುಡಾಲ್ಪ್ ಡಿಸೋ’ಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಅಸಹಾಯಕರಿಗೆ ಮಾಸಾಶನದ ನೆರವು




ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ ಮಾಡಲಾಗಿದೆ.

ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ಆರೈಕೆ ಮಾಡುವವರು ಯಾರೂ ಇಲ್ಲದೆ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳನ್ನು ಗಮನಿಸಬಹುದು. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು, ದುಡಿಯಲು ಸಾಧ್ಯವಾಗದೇ, ಜೀವನ ನಿರ್ವಹಣೆ ಹಾಗೂ ಒಪ್ಪತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆ ಸಮಸ್ಯೆಯೊಂದಿಗೆ ವಯೋ ಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ಕಾಣುತ್ತೇವೆ. ಇಂತವರಿಗಾಗಿಯೇ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರು ‘ಮಾಸಾಶನ’ ಕಾರ್ಯಕ್ರಮವನ್ನು ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತೀ ತಿಂಗಳು ಸಂಸ್ಥೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ.

ವಿವಿಧ ಗಂಭೀರ ಕಾಯಿಲೆಯಿಂದ ಬಳಲುತ್ತಾ, ತೀರ ಸಂಕಷ್ಟದಲ್ಲಿರುವ ಅಂಗವಿಕಲರಿಗೆ ಹಾಗೂ ಅಸಹಾಯಕ ವಯೋವೃದ್ಧರಿಗೆ ಈ ಮಾಸಾಶನವನ್ನು ನೀಡಲಾಗುತ್ತಿದೆ. ಇಂತಹ ಅಶಕ್ತರಿಗೆ ಪ್ರತೀ ತಿಂಗಳು ರೂ.1,000 ದಿಂದ ರೂ.3,000ದ ವರೆಗೆ ಮಾಸಾಶನವನ್ನು ಯೋಜನೆಯ ಮೂಲಕ ತಲುಪಿಸಲಾಗುತ್ತಿದೆ. ಇದರಂತೆ ಜಿಲ್ಲೆಯ 868 ಅಸಹಾಯಕ ವ್ಯಕ್ತಿಗಳಿಗೆ ಪ್ರತೀ ತಿಂಗಳು ಈ ಮಾಸಾಶನವನ್ನು ತಲುಪಿಸಿ ಅವರ ಜೀವನ ನಿರ್ವಹಣೆಗೆ ನೆರವನ್ನು ನೀಡಲಾಗುತ್ತಿದೆ.

*ವಿಶೇಷ ಚೇತನರಿಗೆ ಸಲಕರಣೆಗಳ ವ್ಯವಸ್ಥೆ :*

ಹಲವರು ಹುಟ್ಟಿನಿಂದ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಎಲ್ಲರಂತೆ ಬದುಕುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾರೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ, ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದನ್ನು ಸಂಪೂರ್ಣವಾಗಿ ಸರಿಪಡಿಸಲು ಆಗದೇ ಇದ್ದಲ್ಲಿ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಸಮಸ್ಯೆಗಳನ್ನು ಮನಗಂಡು ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಇಂತಹ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ‘ಜನಮಂಗಲ’ ಎನ್ನುವ ಉದಾತ್ತ ಯೋಜನೆಯನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ಗಾಲಿ ಕುರ್ಚಿ, ಶೌಚಾಲಯದ ಬಳಕೆಗಾಗಿ ಗಾಲಿ ಕುರ್ಚಿ, ನೀರು ಹಾಸಿಗೆ, ನಡೆಗೋಲು ಮೊಣಕೈ ಊರುಗೋಲು ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಕಲ ಚೇತನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಸಲಕರಣೆಗಳ ಬಳಕೆಯ ಕುರಿತಂತೆ ಫಲಾನುಭವಿಗಳಿಗೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.

ಈ ಯೋಜನೆಯನ್ವಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಅವರ ನಿರ್ದೇಶನದಂತೆ, ಇದುವರೆಗೆ ಜಿಲ್ಲೆಯಲ್ಲಿ 779 ಫಲಾನುಭವಿಗಳಿಗೆ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಈ ಕಾರ್ಯಕ್ರಮ ವಿಶೇಷ ಚೇತನರ ಅತ್ಮಸ್ಥೆರ್ಯವನ್ನು ಹೆಚ್ಚಿಸಿ ಅವರ ದೈನಂದಿನ ಬದುಕಿಗೆ ನೆರವಾಗಿದೆ ಎಂದು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹಾಗೂ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ




ಉಡುಪಿ: ಜಿಲ್ಲೆಯಾದ್ಯಂತ 9/11 ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಸರಕಾರದ ವಿಳಂಬ ಧೋರಣೆಯಿಂದ ಜನಸಾಮಾನ್ಯರು ಅತೀವ ತೊಂದರೆಗೀಡಾಗಿದ್ದು, ಈ ಜ್ವಲoತ ಸಮಸ್ಯೆಯ ಪರಿಹಾರಕ್ಕೆ ಅಗ್ರಹಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಎಲ್ಲಾ ಮೋರ್ಚಾಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಜು.28ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ 25 ಸೆಂಟ್ಸ್ ಸ್ಥಿರಾಸ್ತಿಯ ಏಕ ವಿನ್ಯಾಸ ನಕ್ಷೆಗೆ ಗ್ರಾಮ ಪಂಚಾಯತ್ ನಲ್ಲಿಯೇ ಅನುಮೋದನೆ ಹಾಗೂ 1 ಎಕ್ರೆಯವರೆಗೆ ಆಯಾ ತಾಲೂಕು ಪಂಚಾಯತ್ ಪಂಚಾಯತ್ ಗಳಲ್ಲಿಯೇ ಅನುಮೋದನೆ ದೊರೆಯುವ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಆದರೆ ಪ್ರಸಕ್ತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆದೇಶದ ಮೇರೆಗೆ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಎಲ್ಲಾ ಕಡತಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ಗ್ರಾಮಾಂತರ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಬೇಕಾದ ಅವ್ಯವಸ್ಥೆ ಜಾರಿಗೆ ಬಂದಿದೆ. ಈ ಅವೈಜ್ಞಾನಿಕ ಆದೇಶದಿಂದ ಜಿಲ್ಲೆಯಾದ್ಯಂತ ಜನತೆ ಗ್ರಾಮಾಂತರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಗೆ ಅದೆಷ್ಟು ಬಾರಿ ಅಲೆದಾಡಿದರೂ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ.

ಕಳೆದ ವರ್ಷ ಗ್ರಾಮಾಂತರ ಪ್ರಾಧಿಕಾರದಲ್ಲಿ ಸುಮಾರು ಹತ್ತು ಸಾವಿರದಷ್ಟು ಅರ್ಜಿಗಳು ವಿಲೇವಾರಿಗೊಂಡರೆ ಚಾಲ್ತಿ ವರ್ಷದಲ್ಲಿ ಕೇವಲ ಒಂದು ಸಾವಿರದಷ್ಟು ಅರ್ಜಿಗಳು ಮಾತ್ರ ವಿಲೇವಾರಿಗೊಂಡಿವೆ ಎಂಬ ಮಾಹಿತಿ ಇದೆ. ಗ್ರಾಮಾoತರ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.  ತಮ್ಮ ಸ್ವಂತ ಸ್ಥಿರಾಸ್ತಿಯಲ್ಲಿ ತಮ್ಮದೇ ಹಣದಲ್ಲಿ ಮನೆ ಕಟ್ಟಲು ಜನತೆ ವರ್ಷಗಳಷ್ಟು ಸಮಯ ಕಾಯಬೇಕಾದ ಅನಿವಾರ್ಯತೆಗೆ ಈ ಜನ ವಿರೋಧಿ ಸರಕಾರದಿಂದ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸದ್ರಿ ಅವ್ಯವಸ್ಥೆಯನ್ನು ಸರಿಪಡಿಸಲು ಪುನಃ ಏಕ ವಿನ್ಯಾಸ ನಕ್ಷೆ ಅನುಮೋದನೆಯ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತ್ ಗಳಿಗೆ ಮತ್ತು ತಾಲೂಕು ಪಂಚಾಯತ್ ಗಳಿಗೆ ವಹಿಸಿ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಎಲ್ಲ ಬಾಕಿ ಅರ್ಜಿಗಳನ್ನು ಕೂಡಲೇ ವಿಲೇವಾರಿಗೊಳಿಸಬೇಕೆಂಬ ಆಗ್ರಹದೊಂದಿಗೆ ಈ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜೂನ್ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಹಾಗೂ ಫೋಟೋ, ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನವನ್ನು ಗಳಿಸಲು ಶ್ರಮಿಸಿರುವ ಎಲ್ಲರನ್ನೂ ಅಭಿನಂದಿಸಿದರು ಹಾಗೂ ಜು.27ರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮತ್ತು ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನಿಯಾಗುವಂತೆ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಮಂಡಲ, ಮೋರ್ಚಾ ಸಮಿತಿ ರಚನೆಯ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಾ ಶಕ್ತಿ ಕೇಂದ್ರಗಳ ಸಮಿತಿ ಪುನರ್ ರಚನೆಯ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಮನ್ ಕೀ ಬಾತ್ ವೀಕ್ಷಣೆ ಪ್ರಗತಿಯ ಕುರಿತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮತ್ತು ಜು.28ರ ಪ್ರತಿಭಟನೆಯ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು ಮಾಹಿತಿ ನೀಡಿದರು.

ಪಕ್ಷದ ಪ್ರಮುಖರಾದ ರವಿ ಅಮೀನ್ ಬನ್ನಂಜೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಕಿರಣ್ ಕುಮಾರ್ ಬೈಲೂರು, ಪೆರಣಂಕಿಲ ಶ್ರೀಶ ನಾಯಕ್, ಸುರೇಶ್ ಶೆಟ್ಟಿ ಕಾಡೂರು, ಜಯರಾಮ ಸಾಲ್ಯಾನ್, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ವಂದಿಸಿದರು.

ಹತಾಶ ಮನಸ್ಥಿತಿಯ ಪ್ರಸಾದ್ ಕಾಂಚನ್ ಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ




ಉಡುಪಿ: ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಾ ಶಾಸಕರ ಮನೆಗೆ, ಕಛೇರಿಗೆ ಮುತ್ತಿಗೆ ಹಾಕುತ್ತೇನೆ ಎಂಬ ಬಾಲಿಶ ಹೇಳಿಕೆ ನೀಡುತ್ತಿರುವ, ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೊಲೆಗುಂಪಾಗಿರುವ ಪ್ರಸಾದ್ ಕಾಂಚನ್ ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ಕಾಂಚನ್ ರನ್ನು ಉಡುಪಿಯ ಜನತೆ ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಿದರೂ ಆ ಸೋಲಿನ ಹತಾಶೆಯಿಂದ ಇನ್ನೂ ಹೊರಬರಲಾಗದ ಪ್ರಸಾದ್ ಕಾಂಚನ್ ಕೇವಲ ತನ್ನ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಶಾಸಕರನ್ನು ಟೀಕಿಸುವುದನ್ನೇ ದಿನಚರಿ ಮಾಡಿಕೊಂಡಿರುವುದು ವಿಷಾದನೀಯ.

ತಾಯಿ ಸರಳಾ ಕಾಂಚನ್ ಜಿಲ್ಲಾ ಪರಿಷತ್ ಸದಸ್ಯೆಯಾಗಿದ್ದರೂ ಅವರ ಪುತ್ರರಾಗಿ ಒಂದು ಬಾರಿಯೂ ಜನಪ್ರತಿನಿಧಿಯಾಗಿ ಸೇವೆ ಮಾಡಿದ ಅನುಭವವೇ ಇಲ್ಲದ ಪ್ರಸಾದ್ ಕಾಂಚನ್ ಗೆ ಜನಪ್ರತಿನಿಧಿಯಾಗಿರುವ ಶಾಸಕರನ್ನು ಏಕ ವಚನದಲ್ಲಿ ಟೀಕಿಸಬಾರದು ಎಂಬ ಕನಿಷ್ಠ ಜ್ಞಾನ ಇಲ್ಲದೇ ಇರುವುದು ದುರ್ದೈವದ ಸಂಗತಿಯಾಗಿದೆ. ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುತ್ತಿರುವ ಪ್ರಸಾದ್ ಕಾಂಚನ್ ಗೆ ಅವರ ತಾಯಿಯೇ ಸ್ವಲ್ಪ ಬುದ್ಧಿ ಹೇಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.

ನಿಟ್ಟೂರು ಪ್ರದೇಶದಲ್ಲಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿ, ನಗರಸಭೆಯ ನಿಯಮಾವಳಿಯನ್ನು ಮೀರಿ ನಿರ್ಮಿಸಿರುವ ತಮ್ಮ ವ್ಯವಹಾರದ ಕಛೇರಿಯ ಅಕ್ರಮ ಕಟ್ಟಡವನ್ನು ತಾವೇ ತಕ್ಷಣ ತೆರವು ಮಾಡಿ ಪ್ರಸಾದ್ ಕಾಂಚನ್ ಇತರರಿಗೆ ಮಾದರಿಯಾಗಲಿ ಎಂದು ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡೀಸ್, ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಗೋಪಾಲ ಭಂಡಾರಿಯವರಂತಹ ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಸಿದ್ಧಾಂತ, ವಿಚಾರಗಳಲ್ಲಿ ರಾಜೀಯಾಗದೇ ತಮ್ಮ ರಾಜಕೀಯ ವಿರೋಧಿಗಳಿಗೆ ಪ್ರಬುದ್ಧವಾಗಿ ಟೀಕೆ ಟಿಪ್ಪಣಿ ಮಾಡುವ ಮೂಲಕ ತಮ್ಮ ಘನತೆ ಮೆರೆಯುತ್ತಿದ್ದರು. ಆದರೆ ಪ್ರಸಾದ್ ಕಾಂಚನ್ ಮಾತ್ರ ತಮ್ಮ ಹೇಳಿಕೆಗಳ ಮೂಲಕ ತಮ್ಮದೇ ಪಕ್ಷಕ್ಕೆ ಮುಜುಗರ ತರುತ್ತಿರುವುದು ಹಾಸ್ಯಾಸ್ಪದವಾಗಿದೆ.

ಪ್ರಸಾದ್ ಕಾಂಚನ್ ಅವರ ತಂದೆ, ತಾಯಿ ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಮೀನು ಮಾರಾಟ ಫೆಡರೇಶನ್ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿರುವುದನ್ನು ಇಂದಿಗೂ ಮರೆಯದೆ ಶಾಸಕರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರೂ ಅವರ ಪುತ್ರರಾಗಿ ಪ್ರಸಾದ್ ಕಾಂಚನ್ ಮಾತ್ರ ಬೇಜವಾಬ್ದಾರಿಯುತ ಮಾತುಗಳನ್ನಾಡುತ್ತಿರುವುದು ವಿಪರ್ಯಾಸವೇ ಸರಿ.

ಪ್ರಸಾದ್ ಕಾಂಚನ್ ಗೆ ಮನೆಗೆ ಮುತ್ತಿಗೆ ಹಾಕಲು ಉತ್ಸಾಹವಿದ್ದರೆ ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಪರೂಪದ ಅತಿಥಿಯಂತೆ ಆಗಮಿಸಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಲಿ.

ಉಡುಪಿಯ ಜನತೆಯ ಸಮಸ್ಯೆಗಳ ಬಗ್ಗೆ ಪ್ರಸಾದ್ ಕಾಂಚನ್ ಅವರಿಗೆ ನೈಜ ಕಾಳಜಿ ಇದ್ದಲ್ಲಿ ತಮ್ಮದೇ ರಾಜ್ಯ ಸರಕಾರದ ಸಚಿವರಿಗೆ ತಿಳಿಸಿ, ಪರಿಹಾರ ರೂಪಿಸಲು ಮುಂದಾಗುವುದು ಉತ್ತಮ. ಕೇವಲ ಪ್ರಚಾರದ ತೆವಲಿಗೆ ಇಂತಹ ಹತಾಶ ವೈಯುಕ್ತಿಕ ಟೀಕೆಗಳನ್ನು ಮಾಡುವುದರಿಂದ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ ಎಂದು ಪ್ರಭಾಕರ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್




ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಶಾಸಕ ವಿ.ಸುನಿಲ್ ಕುಮಾರ್ ಅವರ ಕನಸಿನ ಕೂಸು ಪರಶುರಾಮ ಥೀಮ್ ಪಾರ್ಕ್ ಯೋಜನೆಯ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವ ಕಾರ್ಕಳ ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ತನಿಖೆಯ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ನ ಅಪಪ್ರಚಾರವೆಲ್ಲವೂ ಸುಳ್ಳಾಗಿದೆ. ಫೈಬರ್ ಫೈಬರ್ ಎಂದು ಗೋಗರೆಯುತ್ತಾ ಕಳೆದ ಎರಡೂವರೆ ವರ್ಷದಿಂದ ಪ್ರವಾಸೋದ್ಯಮವನ್ನು ಹಾಳುಗೆಡಹಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅಗ್ರಹಿಸಿದ್ದಾರೆ.

ಶಾಸಕ ವಿ.ಸುನಿಲ್ ಕುಮಾರ್ ಅವರ ವಿಶೇಷ ಪ್ರಯತ್ನದಿಂದ ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ್ದ ಪರಶುರಾಮ ಮೂರ್ತಿ ಫೈಬರ್ ನಿಂದ ಮಾಡಿಲ್ಲ ಎಂಬ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿರುವುದು ಕಾಂಗ್ರೆಸ್ ನ ಅಪಪ್ರಚಾರಕ್ಕಾಗಿರುವ ದೊಡ್ಡ ಸೋಲಾಗಿದೆ. ಆದರೂ ‘ಜಟ್ಟಿ ಜಾರಿ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ’ ಎಂಬಂತೆ ಪೊಳ್ಳು ವಾದದಲ್ಲಿ ತೊಡಗಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಹಿತ ಕಾಂಗ್ರೆಸ್ ಮುಖಂಡರ ಕ್ಷುಲ್ಲಕ ಮನಸ್ಥಿತಿಯ ಬಗ್ಗೆ ಅನುಕಂಪ ಮೂಡುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಕ್ಷೇತ್ರದಾದ್ಯoತ ಕೈಗೊಂಡಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಸಹಿಸದ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಪಾಳಯ ಒಂದಲ್ಲ ಒಂದು ನೆಪವನ್ನು ಮುಂದಿಡುತ್ತಾ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿರುವುದು ಜಗಜ್ಜಾಹೀರಾಗಿದೆ. ಪರಶುರಾಮ ಮೂರ್ತಿ ಹಿತ್ತಾಳೆಯದ್ದಾಗಿದೆ ಎಂದು ಪೋಲಿಸ್ ತನಿಖೆಯಲ್ಲಿ ಸಾಬೀತಾಗಿರುವುದರಿಂದ ಕಾರ್ಕಳದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ಪೈಬರ್ ನದ್ದು ಎಂಬ ಕಾಂಗ್ರೆಸಿಗರ ವಾದ ಶುದ್ಧ ಸುಳ್ಳಾಗಿದೆ.

ಆರೋಪಿಗಳಾದ ಶಿಲ್ಪಿ, ಉಡುಪಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಹಾಗೂ ಇಂಜಿನಿಯರ್ ವಿರುದ್ದ 1,231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಕಾರ್ಕಳದ ನ್ಯಾಯಾಲಯಕ್ಕೆ ನಿವೇದಿಸಲಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಳ್ಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಾಂಗ್ರೆಸ್ಸಿನ ನೈಜ ಬಣ್ಣ ರಾಜ್ಯದ ದೈನಂದಿನ ವಿದ್ಯಮಾನಗಳಿಂದ ಬಟ್ಟಾಬಯಲಾಗಿದೆ. ಭ್ರಷ್ಟಾಚಾರ ಹಾಗೂ ಗ್ಯಾರಂಟಿಗಳ ಅಸಮರ್ಪಕ ನಿರ್ವಹಣೆಯ ಜೊತೆಗೆ ವಿಪರೀತ ಬೆಲೆ ಏರಿಕೆಯಿಂದ ಜನತೆಯ ನೆಮ್ಮದಿ ಹಾಳು ಮಾಡಿರುವ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ಸಿನ ಸುಳ್ಳುಗಳನ್ನು ನಂಬುವಷ್ಟು ಜನತೆ ದಡ್ಡರಲ್ಲ. ಕೇವಲ ವಿರೋಧಕ್ಕಾಗಿ ವಿರೋಧಿಸುವವರು ಇನ್ನಾದರೂ ವೃಥಾ ಆರೋಪ ಮಾಡುವುದನ್ನು ಬಿಟ್ಟು ನೈಜ ರಾಜಕಾರಣದತ್ತ ಗಮನ ಹರಿಸುವುದು ಉತ್ತಮ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಗರ ಯುವ ಮೋರ್ಚಾ: ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ





ಉಡುಪಿ: ಶ್ರೀ ಗುರು ಪೂರ್ಣಿಮಾ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಯಕ್ಷ ಗುರು, ಉಡುಪಿಯ ‘ಯಕ್ಷ ಸಂಜೀವ ಯಕ್ಷಗಾನ ಕೇಂದ್ರ’ದ ಮುಖ್ಯಸ್ಥರಾದ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಅವರ ನಿವಾಸದಲ್ಲಿ ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು.

ಸಂಜೀವ ಸುವರ್ಣ ಅವರು ಯಕ್ಷಗಾನದ ಹಲವಾರು ಪ್ರಕಾರಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದು ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿಯನ್ನು ನೀಡಿರುತ್ತಾರೆ. ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವೀ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಜೀವ ಸುವರ್ಣರು ಯಕ್ಷಗಾನದ ಗುರು-ಶಿಷ್ಯ ಪರಂಪರೆಯನ್ನು ಎತ್ತಿಹಿಡಿಯುತ್ತಲೇ ಯಕ್ಷಗಾನದ ಆಧುನಿಕ ರೂಪಾoತರಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗೂ ಯಕ್ಷಗಾನ ಕಲಿಸಿರುವುದು ಅವರ ಯಕ್ಷ ಕಲಾ ನೈಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ಪ್ರಜ್ವಲ್ ಪೂಜಾರಿ, ಸಂದರ್ಶ ಆಚಾರ್ಯ, ಪ್ರಣವ್ ಕಾಮತ್, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ಕಾರ್ಯದರ್ಶಿಗಳಾದ ದೀಕ್ಷಿತ್ ಶೆಟ್ಟಿ, ನಿಕಿಲ್ ಮಡಿವಾಳ, ಹರ್ಷ ಆಚಾರ್ಯ, ಭೂಷಣ್ ಕುಮಾರ್ ಉಪಸ್ಥಿತರಿದ್ದರು.

ಸೊರಕೆಯವರೇ ಪ್ರತಿಭಟನೆಯ ನಾಟಕ ಬಿಡಿ. ಬಡವರ ಪಿಂಚಣಿ ರದ್ದುಗೊಳಿಸುವ ಹೀನಾಯ ಪರಿಸ್ಥಿತಿಯ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯ ಬಗ್ಗೆ ಗಮನ ಕೊಡಿ



ಕರ್ನಾಟಕ ರಾಜ್ಯ ಸರಕಾರ ಹೀನಾಯ ಪರಿಸ್ಥಿತಿಗೆ ತಲುಪಿದೆ. ಎಲ್ಲದರ ಮೇಲೂ ದರ ಏರಿಕೆಯ ಸವಾರಿ ಮಾಡಿ‌ ಇದೀಗ ಬಡವರ ಪಿಂಚಣಿ ಮೇಲೆ ಕಣ್ಣು ಹಾಕಿ ಇನ್ನು ಬಡವರು ಪಿಂಚಣಿ ಯೋಜನೆಗೆ ಅರ್ಜಿ ಹಾಕದಂತೆ ಯೋಜನೆ ರೂಪಿಸಿರುವರು. ವಯೋವ್ರಧ್ಧರು ದುಡಿಯಲು ಅಸಾಧ್ಯವಾದಾಗ ಅವರಿಗೂ ಗೌರವಯುತ ಜೀವನ ನಡೆಸಲು ಕಿಂಚಿತ್ ರೂಪದ ಸಹಾಯಧನ ನೀಡಲು ಪಿಂಚಣಿ ಯೋಜನೆ ಪ್ರಾರಂಭಗೊಂಡಿತ್ತು. ಅದರಲ್ಲೂ ಯಡಿಯೂರಪ್ಪರವರ ಸರಕಾರ ಇದ್ದಾಗ ಸಂಧ್ಯಾ‌ಸುರಕ್ಷಾ ಎನ್ನುವ ಹೊಸ ಯೋಜ‌ನೆಯನ್ನೇ ಘೋಷಿಸಿ ಅದೆಷ್ಟೋ ಬಡ ಕುಟುಂಬಗಳಿಗೆ ಗೌರವಯುತ ಜೀವನ ನೀಡಿದುದನ್ನು ಇಂದಿಗೂ ಜನ ನೆನೆಯುತ್ತಿರುವರು. ಅಂತಹ ಯೋಜನೆಗೆ ಈಗಿನ ರಾಜ್ಯ ಸರಕಾರ ಸಂಪೂರ್ಣ ಎಳ್ಳು ನೀರು ಬಿಡುವ ಹಂತಕ್ಕೆ ಬಂದಿರುವುದು ಬಹಳ ಶೋಚನೀಯ ಮತ್ತು ಕಾಂಗ್ರೆಸ್ ಪಕ್ಷದ ದಯನೀಯ‌ ಪರಿಸ್ಥಿತಿ‌ ಇದು. ಪಾಪ ಬಡವರು ವಯಸ್ಸಾದ ಮೇಲೆ ಅದೇನೋ ಸರಕಾರದಿಂದ ಸ್ವಲ್ಪವಾದರೂ ಸಹಾಯಧನ ಸಿಗುವುದೆಂದು ಅರ್ಜಿ ರೆಡಿ ಮಾಡಿ, ಅದಕ್ಕೆ ವೈದ್ಯರ ಸಹಿಗಾಗಿ, ಗ್ರಾಮಕರಣಿಕರ ಸಹಿಗಾಗಿ, ಅಫಿದವಿತ್ ಮಾಡಿಸಲು ಹೀಗೆ 400-500 ರೂ ಖರ್ಚು ಮಾಡಿ ವಿ ಎ ವರದಿ ಮಾಡಿಸಿ ನಾಡಕಛೇರಿಯಲ್ಲಿ ಎಂಟ್ರಿ ಮಾಡಿಸಲು ತಂದರೆ, ನೀವು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವಿರಿ, ನಿಮ್ಮ ಆದಾಯ (ಇಂತಹ ಆರ್ ಡಿ‌ ನಂಬರ್ ಪ್ರಕಾರ) 98000/- ಆಗಿರುತ್ತದೆ ಎಂದು ಬರುತ್ತಿದೆ. ಪಾಪ ಸರಕಾರವೇ ಕೊಟ್ಟ ಎರಡು ಮುಕ್ಕಾಲು ಸೆಂಟ್ಸ್ ಜಾಗದಲ್ಲಿ ಬಹಳ‌ಕಷ್ಟದ ಜೀವನ ನಡೆಸುತ್ತಿರುವರೊಬ್ಬರು ಅದು ಹೇಗೆ ಅಂತ ಅವರು ಕೇಳಿದಾಗ ನಿಮ್ಮ ಮನೆಯ ರೇಶನ್ ಕಾರ್ಡ್ ನಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳು ಆದಾಯ ಪ್ರಮಾಣ ಪತ್ರ ಮಾಡಿರಬೇಕು ಅದರ ಆದಾಯ ನಿಮಗೂ ತೋರಿಸುತ್ತದೆ ಎನ್ನುವ ವಿಷಯ ಹೇಳಿದಾಗ ಆ ಅಜ್ಜಿಗೆ ಅರ್ಥವಾಗಲೇ ಇಲ್ಲ.‌ಕಣ್ಣೀರು ಮಾತ್ರ ಉಕ್ಕಿ ಉಕ್ಕಿ ಬರುತ್ತಿತ್ತು. ಅಲ್ಲಿ ಇಲ್ಲಿ ತಿರುಗಾಡಿ ಕೊನೆಗೂ ನಮ್ಮ ಪಾಲಿಗೆ ಯಾರೂ‌ ಇಲ್ಲ. ಸರಕಾರವೂ‌ ಇಲ್ಲ ಅಂತ ಕಣ್ಣೀರು‌ ಒರೆಸುತ್ತಾ ಹೋಗುವಾಗ ನೋಡಿದವರಿಗೂ ಕಣ್ಣಾಲಿ ಒದ್ದೆಯಾಗದೇ? ಸರಕಾರವೊಂದು ಬಡವರಿಗೆ ಪಿಂಚಣಿಯನ್ನೂ ಕೊಡದೆ ಇಂತಹ ದರಿದ್ರ ಪರಿಸ್ಥಿತಿಗೆ ಬರಬಹುದೇ? ಹಾಗಾದರೆ ವಿಎ ವರದಿಗೆ ಬೆಲೆಯೇ ಇಲ್ಲವೇ?

ಇಂದಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಜಾತಿ‌ ಆದಾಯ ಪ್ರಮಾಣಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಹಾಗೆಯೇ ಯಾವುದೇ ಗ್ರಾಮಕರಣಿಕರು ಕುಟುಂಬದ ವಾರ್ಷಿಕ ಆದಾಯ ರೂ. 32000/- ಕ್ಕಿಂತ ಕಡಿಮೆ ಹಾಕುವುದಿಲ್ಲ. ಪಿಂಚಣಿಗೆ ಆದಾಯ ಮಿತಿ ಮೂವತ್ತೆರಡು ಸಾವಿರವಂತೆ. ಹಾಗೆ ಜಾತಿ ಆದಾಯ ಪ್ರಮಾಣ ಪತ್ರ ಮಾಡಿಸಿದವರು ಯಾರೂ ಇನ್ನು ಮೇಲೆ ಪಿಂಚಣಿಗೆ ಅರ್ಜಿ ಹಾಕುವಂತಿಲ್ಲ. ಹಾಕುವಾಗ ಇಂತಹ ಆರ್ ಡಿ‌ ನಂಬರ್ ಪ್ರಕಾರ ನಿಮ್ಮ ಆದಾಯ ಇಷ್ಟು ಅಂತ‌ ಬರ್ತದೆ. ಆ ಆದಾಯ ಪ್ರಮಾಣಪತ್ರ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುವರು. ಹೆಚ್ಚಿನ ಎಲ್ಲರ ಮನೆಯಲ್ಲೂ ಮಕ್ಕಳಿರುತ್ತವೆ. ಮತ್ತು ಅವರಿಗೆ ಜಾತಿ ಆದಾಯವೂ ಮಾಡಿರುತ್ತಾರೆ. ಹಾಗಾದರೆ ಯಾರಾದರೂ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅಂದರೆ ಇದರರ್ಥ ಸರಕಾದ ಬಳಿ ಬಡವರಿಗೆ ನೀಡಲು ಹಣವಿಲ್ಲ. ಪಿಂಚಣಿ ಯೋಜನೆ ಬಂದ್‌. ಈ ಸರಕಾರ ಆರ್ಥಿಕವಾಗಿ ಮಾತ್ರವಲ್ಲದೇ ಬೌಧ್ದಿಕವಾಗಿಯೂ ದಿವಾಳಿಯಾಗಿದೆ.

ಮಾನ್ಯ ಸೊರಕೆಯವರೇ ಎಲ್ಲ ಪಂಚಾಯತ್ ಗಳ‌ ಮುಂದೆ ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆಯ ನಾಟಕ ಆಡುತ್ತಿದ್ದೀರಲ್ವೇ, ಈ ವಿಷಯ ನಿಮಗೆ ಯಾಕೆ ತಿಳಿಯುತ್ತಿಲ್ಲ. ಬಿಜೆಪಿಯವರು ರಾಜ್ಯ ಸರಕಾರದ ವಿರುಧ್ಧ ಸುಳ್ಳು ಆಪಾದನೆ ಮಾಡುತ್ತಿದೆಯೆಂದು ನಾಟಕ ಆಡುತ್ತಿರುವಿರಲ್ಲ. ಇದು ಸುಳ್ಳಾ?  ನಿಮ್ಮ ಸರಕಾರದ ಗತಿಗೆಟ್ಟ ನಿಯಮದಿಂದ ಬಡಜನತೆ ಪಿಂಚಣಿ ಯೋಜನೆಯಿಂದ ವಂಚಿತರಾಗುತ್ತಿದ್ದಾರಲ್ವಾ, ಸಾಧ್ಯವಾದರೆ ಅದನ್ನು ಪರಿಹರಿಸಿ. ಸರಕಾರ ನಿಮ್ಮದೇ ಇದೆ. ನಾಡಕಚೇರಿಯ ಅಪ್ಲಿಕೇಶನ್ ನಲ್ಲಿ ಪಿಂಚಣಿಯ ಆದಾಯ ಮಿತಿ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಹೆಚ್ಚಿಸಿ. ಜನ ನಿಮ್ಮನ್ನು ನೆನೆಸಿಕೊಂಡಾರು.  ಅದು ಬಿಟ್ಟು‌ ಸುಮ್ಮನೆ ಪ್ರತಿಭಟನೆಯ ನಾಟಕ ಮಾಡಿ ಚೀಪ್ ರಾಜಕಾರಣ, ವರ್ಗಾವಣೆ ಧಂದೆ, ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಬಿಟ್ಟುಬಿಡಿ. ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತೆ ನಮ್ಮ ಪ್ರತಿಭಟನೆ ಅನಿವಾರ್ಯವಾದೀತು.

ರಾಜ್ಯ ಸರಕಾರ ತನ್ನ ಗ್ಯಾರಂಟಿ ಯೋಜನೆಗಾಗಿ ಜನರನ್ನು ಲೂಟಿಗೈದು ಬಡ ಜನರ ಬದುಕು ಹೈರಾಣಾಗಿಸಿದೆ. ಅರ್ಹ  ವಯೋವ್ರಧ್ಧರ ಶಾಪ ಈ ಸರಕಾರಕ್ಕೆ ತಟ್ಟದೆ ಇರದು. ಅವರ ಗೌರವಯುತ ಬದುಕಿಗೆ ಕೊಳ್ಳಿ ಇಟ್ಟ ಸರಕಾರಕ್ಕೆ ಜನರೇ ಬುಧ್ಧಿ‌ ಕಲಿಸುವ ದಿನ ದೂರವಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ, ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಷರೂ ಆದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿರುವರು.

ಮಲ್ಪೆಯಿಂದ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಯ ಬಗ್ಗೆ ಸ್ಪಷ್ಟನೆ


ಉಡುಪಿ: ಆದಿಉಡುಪಿ ಭಾಗದಲ್ಲಿ ಸುಮಾರು ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು 135 ಭೂ ಮಾಲೀಕರಿಗೆ ಸುಮಾರು 24.86 ಕೋಟಿ ರೂಪಾಯಿ ಪರಿಹಾರದ ಹಣ ಪಾವತಿಯಾಗಿದೆ. ತಕರಾರು ಇರುವಲ್ಲಿ ನಾನೇ ಅಧಿಕಾರಿಗಳೊಂದಿಗೆ ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗೆ ವಿವಿಧ ಸ್ಥಳಗಳಿಗೆ ಹಲವು ಬಾರಿ ಭೇಟಿಕೊಟ್ಟು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಿದ್ದೆ. ಸುಮಾರು 90ರಷ್ಟು ಸಣ್ಣ ಸಣ್ಣ ಭೂಭಾಗಗಳ ಸರ್ವೆ ಮುಗಿಸಿ ಹಣ ಪಾವತಿಸಲು ವಿವಿಧ ಅಧಿಕಾರಿಗಳ ಸಭೆ ಕರೆದು ಪ್ರಗತಿ ಗಮನಿಸಿದ್ದೆ ಮತ್ತು ಸರ್ವೆ ಅಧಿಕಾರಿಗಳ ಮೂಲಕ ಈ ಬಗ್ಗೆ 3D ವರದಿ ಸಲ್ಲಿಸಲು ಸೂಚಿಸಿದ್ದೆ. ಸ್ವತಃ ನಾನೇ ಬೆಂಗಳೂರಿನ ಆರ್.ಓ. ಕಚೇರಿಗೆ ಭೇಟಿಕೊಟ್ಟು ಭೂಮಾಲಿಕರಿಗೆ ಹಣ ಪಾವತಿ ಮಾಡುವ ಬಗ್ಗೆ ಚರ್ಚಿಸಿದ್ದೆ. ಇಲ್ಲಿಯವರೆಗೆ ದಾಖಲೆಗಳನ್ನೇ ನೀಡದಿರುವ 70 ಭೂ ಮಾಲೀಕರನ್ನು ಸಂಪರ್ಕಿಸಿ ಕೋರ್ಟ್ ಮೂಲಕ ಠೇವಣಿ ಇರಿಸಿ ಕಾಮಗಾರಿ ಮುನ್ನಡೆಸಲು ಪ್ರಯತ್ನಿಸಲಾಗಿದೆ. ಮರಗಳನ್ನು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಒಂದಷ್ಟು ಸಮಯ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಇದೀಗ ಮಲ್ಪೆ ಕರಾವಳಿ ಜಂಕ್ಷನ್ ಕಾಮಗಾರಿ ಮತ್ತು ಭೂ ಪರಿಹಾರದ ಚಟುವಟಿಕೆ ವೇಗವಾಗಿ ನಡೆಯುತ್ತಿದೆ.

ಮುಂದುವರಿದು ಪರ್ಕಳದ ಕಾಮಗಾರಿಯ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿಯೂ ಏಕಮುಖದ ವರದಿ ಪ್ರಕಟವಾದಂತಿದೆ. ವಾಸ್ತವಿಕವಾಗಿ ಪರ್ಕಳದ ತಿರುವು ನೇರಗೊಳಿಸಿ ಕಾಮಗಾರಿ ನಡೆಯುತ್ತಿರುವಾಗ 11 ಮಂದಿ ಭೂ ಮಾಲೀಕರು ರಾಜ್ಯದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಅದಾವ ಕಾರಣಕ್ಕೋ ಏನೋ ಘನತೆವೆತ್ತ ನ್ಯಾಯಾಲಯ ತಡೆಯಾಜ್ಞೆ ನೀಡಿ ಒಂದು ವರ್ಷದ ಅವಧಿಯ ನಂತರ ತನಿಖೆಗೆ ದಿನಾಂಕ ನಿಗದಿಗೊಳಿಸಿತ್ತು. ನನ್ನ ಗಮನಕ್ಕೆ ಬರುತ್ತಲೇ, ಪರ್ಕಳದ ರಸ್ತೆಯ ತಿರುವಿನಿಂದ ಆಗುವ ರಸ್ತೆ ಅಪಘಾತಗಳ ಅಂಕೆ ಸಂಖ್ಯೆಗಳನ್ನು ದಾಖಲೆ ಸಮೇತವಾಗಿ ರಾಷ್ಟ್ರೀಯ ಹೆದ್ದಾರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ, ಹೆದ್ದಾರಿಯ ಕಾಮಗಾರಿಯ ಅಗತ್ಯತೆ ವಿವರಿಸಿದ್ದೆವು. ನ್ಯಾಯಾಲಯ ಸರಕಾರ ಮಂಡಿಸಿದ ವಾದಗಳನ್ನು ಪುರಸ್ಕರಿಸಿ ತಡೆಯಾಜ್ಞೆಯನ್ನು ವರ್ಷದ ಒಳಗೆ ತೆರವುಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ನೀಡಿತ್ತು. ಮತ್ತು 11 ಮಂದಿಗೆ ನ್ಯಾಯಾಲಯದ ಮೂಲಕ ರೂಪಾಯಿ 8 ಕೋಟಿ ಸರಕಾರದ ವತಿಯಿಂದ ಪರಿಹಾರ ಠೇವಣಿಯಾಗಿರಿಸಿದ್ದು ಪುನಃ ಕಾಮಗಾರಿ ಮುಂದುವರಿಸುತ್ತಿರುವಾಗಲೇ ಮತ್ತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಸಂಬಂಧಿತ ಭೂಮಾಲೀಕರು ತಂದಿದ್ದರು. ನಾನೇ ಸ್ವತಃ ರಾಷ್ಟ್ರೀಯ ಹೆದ್ದಾರಿ ಪರವಾಗಿ ವಾದಿಸುವ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಿದ್ದೆ. ಸದ್ಯದಲ್ಲಿ ತೆರವಾಗುತ್ತದೆ ಎಂಬ ನಂಬಿಕೆ ಇದೆ. ನ್ಯಾಯಾಲಯದ ತಡೆಯಾಜ್ಞೆ ಮುಗಿಯುತ್ತಲೇ ಕೆಲಸ ಪ್ರಾರಂಭವಾಗುತ್ತದೆ. ಇವೆಲ್ಲವೂ ಕೆಲವೇ ತಿಂಗಳೀಚೆಗೆ ನಡೆದಿರುವ ಚಟುವಟಿಕೆಗಳು.

ಕಲ್ಯಾಣಪುರದ ಅಂಡರ್ ಪಾಸ್ ಬಗ್ಗೆ ರಾಜಕೀಯ ಕಾರಣಗಳಿಗಾಗಿ ಟೀಕಿಸುವವರು ರಸ್ತೆ ಪ್ರದೇಶದಲ್ಲಿ ನಿಂತ ಬಂಡೆ ಹೊಡೆಯಲು ತಂದಿರುವ ನ್ಯಾಯಾಲಯದ ತಡೆಯಾಜ್ಞೆಯಿಂದ ಸ್ಪೋಟಕದ ಬದಲು ಬಂಡೆ ಕೊರೆದು ತೆಗೆಯಲು ಸಮಯವಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ. ಅದಾಗಿಯೂ ಇದೀಗ ರಸ್ತೆ ಸಂಚಾರಕ್ಕೆ ಸುಗಮವಾಗಿದ್ದು ಎರಡು ಕಡೆಯ ಮೇಲ್ ಸೇತುವೆ ಡಾಂಬರೀಕರಣವಾಗಿ ಸರಾಗ ಸಂಚಾರಕ್ಕೆ ತೆರೆದುಕೊಂಡಿದೆ ಎಂದು ಅರ್ಥೈಸಿಕೊಳ್ಳಬೇಕಾಗಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.

ಇಂದ್ರಾಳಿಯ ಮೇಲ್ ಸೇತುವೆಯ ಬಗ್ಗೆ ನಿರಂತರ ಪ್ರತಿಭಟನೆ, ಶವದ ಮೆರವಣಿಗೆ, ತಲೆ ಬೋಳಿಸುವಿಕೆ ನಡುವೆಯೂ ಹತ್ತಾರು ಬಾರಿ ಸ್ಥಳದಲ್ಲಿ ನಿಂತು ಕಾಮಗಾರಿಗೆ ವೇಗ ಕೊಟ್ಟಿದ್ದೆ. ನನ್ನನ್ನು ಟೀಕಿಸುವ ಹಿರಿಯ ಮನೋವೈದ್ಯರ ಸಹಿತ ಪ್ರತಿಭಟನಾಕಾರರು ಗಮನಿಸಬೇಕಾದ ವಿಷಯವೇನೆಂದರೆ, ಸಂಬಂಧಿತ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಎಫ್ಐಆರ್ ದಾಖಲಿಸಿ  ಗಾರ್ಡರ್ ಕಾಮಗಾರಿಗೆ ಅವಧಿ ನಿಗದಿಕರಿಸಿದ್ದು ಸರಕಾರಿ ವ್ಯವಸ್ಥೆಯಲ್ಲಿಯೇ ಅಪರೂಪ. ಇದೀಗ ಗಾರ್ಡರ್‌ಗಳ ಜೋಡಣೆಯಾಗಿ ಕ್ರಿಪ್ಸ್ ಗಳನ್ನು ತೆರವುಗೊಳಿಸಿ ಇಂದ್ರಾಳಿ ಮೇಲ್ಸೇತುವೆ ಕಾಂಕ್ರೀಟೀಕರಣಕ್ಕೆ ಅಣಿಗೊಂಡಿದೆ. ಬಹುತೇಕ ದಿನಂಪ್ರತಿ ಕಾಮಗಾರಿಯ ಪ್ರಗತಿಯ ತನಿಖೆಯನ್ನು ಸ್ವತಃ ನಾನೇ ಗಮನಿಸುತ್ತಿದ್ದೇನೆ. ಇಂದೂ ಕೂಡ ಇಂದ್ರಾಳಿಗೆ ಭೇಟಿಕೊಟ್ಟು ಸಂಬಂಧಿಸಿದ ಇಂಜಿನಿಯರ್ ಗಳಿಗೆ ಕಾಂಕ್ರೀಟೀಕರಣ ಬೇಗ ಮುಗಿಸಲು ಆಗ್ರಹಿಸಿದ್ದೆ. ಪ್ರತಿಭಟನೆಯ ಹೆಸರಿನಲ್ಲಿ ಶವದ ಮೆರವಣಿಗೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗೆ ವಿರುದ್ಧವಾಗಿದ್ದರೂ ಕೂಡ ನಾನದನ್ನು ಮೌನವಾಗಿ ಸಹಿಸಿಕೊಂಡಿದ್ದೆ. ಅದಾಗಿಯೂ ಪ್ರಜಾತಂತ್ರ ವ್ಯವಸ್ಥೆಯಡಿ ಮಾಡುವ ಎಲ್ಲಾ ಪ್ರತಿಭಟನೆಯನ್ನು ಗೌರವಿಸುತ್ತೇನೆ ಹಾಗೂ ವಿರೋಧಿಸುವವರು ಮೆಚ್ಚುವಂತೆ ಮೇಲಿನ ಎಲ್ಲಾ ಕಾಮಗಾರಿಗಳನ್ನು ಮುಗಿಸುವುದು ನನ್ನ ಗುರಿ. ಪರ್ಕಳ ರಸ್ತೆಯನ್ನು ತಕ್ಷಣ ಸರಿಪಡಿಸಲು ಇಂಜಿನಿಯರ್ ಗಳನ್ನು ಕರೆದು ನಿರ್ದೇಶಿಸಿದ್ದೇನೆ.
-ಕೋಟ

ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಶೀರೂರು ಮಠದ ಕಟ್ಟಿಗೆ ಮುಹೂರ್ತದ ಆಹ್ವಾನ

ಇದೇ ಬರುವ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಕಟ್ಟಿಗೆ ಮುಹೂರ್ತಕ್ಕೆ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಿತಿಯ ಗೌರವಾಧ್ಯಕ್ಷರಾದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಶ್ರೀಮಠದಿಂದ ಆಹ್ವಾನ ಪತ್ರಿಕೆಯನ್ನು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ನೀಡಿ ಸ್ವಾಗತಿಸಿದರು. ಅವರೊಂದಿಗೆ ಮೋಹನ್ ಭಟ್, ಸಂದೀಪ್ ಮಂಜ ಮತ್ತು ನಂದನ್ ಜೈನ್ ಉಪಸ್ಥಿತರಿದ್ದರು.

ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ



ಇದೇ ಬರುವ ಭಾನುವಾರ, ದಿನಾಂಕ 13-07-25 ರಂದು ಮುಂದಿನ ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ‌ 8.00 ಗಂಟೆಗೆ ಕಲ್ಸಂಕ ಜಂಕ್ಷನ್ ನಿಂದ ಪುರ ಮೆರವಣಿಗೆಯ ಮೂಲಕ ಸಾಗಿಬಂದು 9.15 ಕ್ಕೆ ಸರಿಯಾಗಿ ಕಟ್ಟಿಗೆ ಮುಹೂರ್ತ ಹಾಗೂ 9.30 ಕ್ಕೆ ಪರ್ಯಾಯ ಸ್ವಾಗತ‌ಸಮಿತಿಯ ಕಚೇರಿಯ ಉದ್ಘಾಟನೆ ನಡೆಲಿದೆ. ನಂತರದಲ್ಲಿ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರಿಂದ ಮಾತ್ರಕ್ಷತೆ ಅನುಗ್ರಹ ನೀಡಲಿರುವರು.  ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ  ಪರಮಪೂಜ್ಯ ಡಾ.ಡಿ. ಶ್ರೀ ವೀರೇಂದ್ರ ಹೆಗ್ಗಡೆಯವರು ಭಾಗವಹಿಸಲಿರುವರು.

Design a site like this with WordPress.com
Get started