ಪಕ್ಷದ ಶಾಸಕರ ಅವಹೇಳನ ಸಹಿಸಲಾಗದು – ಜನ ಸಾಮಾನ್ಯರ ಸಮಸ್ಯೆಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಪಂದಿಸಲಿ : ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ




ಉಡುಪಿ: ‘ವ್ಯಕ್ತಿಗಿಂತ ಪಕ್ಷ ಮೇಲು, ಪಕ್ಷಕ್ಕಿಂತ ದೇಶ ಮೇಲು’ ಎಂಬ ಉದಾತ್ತ ಚಿಂತನೆಯುಳ್ಳ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಓರ್ವ ಸಾಮಾನ್ಯ ಕಾರ್ಯಕರ್ತನೂ ಪಕ್ಷ ನಿಷ್ಠೆ ಹಾಗೂ ಬದ್ಧತೆಯಿಂದ ಹಂತ ಹಂತವಾಗಿ ಎತ್ತರಕ್ಕೇರುವ ಅವಕಾಶಗಳು ಪಕ್ಷದ ಚೌಕಟ್ಟಿನಲ್ಲಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಚಲಿತ ವಿದ್ಯಮಾನಗಳಲ್ಲಿ ನಡೆಯುತ್ತಿರುವ ನಮ್ಮ ಪಕ್ಷದ ಶಾಸಕರ ಅವಹೇಳನವನ್ನು ಸಹಿಸಲಾಗದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಶಾಸಕರುಗಳ ಬಗ್ಗೆ ಪಕ್ಷ ಹಾಗೂ ಕಾರ್ಯಕರ್ತರಿಗೆ ಅಪಾರ ಗೌರವವಿದೆ. ಯಾವುದೋ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ಶಾಸಕರನ್ನು ನಿಕೃಷ್ಟ ಪದಗಳಿಂದ ಅವಮಾನಿಸುವ ಮಾಜಿ ಶಾಸಕರ ವರ್ತನೆ ಖಂಡನೀಯ. ಇಂತಹ ನಡೆಗಳಿಂದ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಎಂದೂ ವಿಚಲಿತಗೊಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ತತ್ವ ಸಿದ್ಧಾಂತ ಮತ್ತು ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಂಡು ಪಕ್ಷದ ಹಿರಿಯರಿಂದ ಪಡೆದ ಮಾರ್ಗದರ್ಶನದಿಂದ ನಾಯಕರಾಗಿ ಬೆಳೆದವರು ಇತರ ಕಾರ್ಯಕರ್ತರನ್ನೂ ಬೆಳೆಸುವುದು ಪಕ್ಷದ ಸಂಪ್ರದಾಯ. ಈ ಭವ್ಯ ಪರಂಪರೆಯೊಂದಿಗೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಐದು ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಿತ ಎಲ್ಲಾ ಸ್ತರಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಸಮೃದ್ಧವಾಗಿ ಬೆಳೆದಿದೆ. ಪಕ್ಷದ ಕಾರ್ಯಕರ್ತರಲ್ಲಿ ಅಥವಾ ಮತದಾರರಲ್ಲಿ ಯಾವುದೇ ವಿಚಾರದಲ್ಲಿ ಗೊಂದಲವಿಲ್ಲ. ಕೇವಲ ವ್ಯಕ್ತಿ ವ್ಯಾಮೋಹ ಇರುವವರಿಗೆ ಮಾತ್ರ ತುಸು ಗೊಂದಲವೆನಿಸಬಹುದು. ರಾಷ್ಟ್ರೀಯತೆ ಮತ್ತು ಪಕ್ಷ ನಿಷ್ಠೆಯನ್ನು ನೆಚ್ಚಿಕೊಂಡಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇಂತಹ ಕ್ಷುಲ್ಲಕ ವಿಚಾರಗಳಲ್ಲಿ ಎಂದೂ ಧೃತಿಗೆಡುವುದಿಲ್ಲ.

ಈ ನಿಟ್ಟಿನಲ್ಲಿ ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಅಧಿಕಾರವನ್ನು ಅನುಭವಿಸಿ, ಪ್ರಸಕ್ತ ಪಕ್ಷ ವಿರೋಧಿ ಚಟುವಟಿಕೆಗಳಿಂದ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕರು ಪಕ್ಷದ ಶಾಸಕರ ವೈಯಕ್ತಿಕ ನಿಂದನೆ ಹಾಗೂ ಗತ ವಿಚಾರಗಳ ಉತ್ಪ್ರೇಕ್ಷೆಯ ವ್ಯರ್ಥ ಯತ್ನವನ್ನು ಕೈಬಿಟ್ಟು ಪ್ರಬುದ್ಧ ನಡೆಯನ್ನು ಅನುಸರಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಗೊಂದಲದ ಗೂಡಾಗಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಏಕ ವಿನ್ಯಾಸದ ಅನುಮೋದನೆಗೆ ಧರಣಿ ನಡೆಸಿದ ಮಾಜಿ ಶಾಸಕರಿಗೆ ತುರ್ತಾಗಿ ಸ್ಪಂದಿಸಿದ ರೀತಿಯಲ್ಲೇ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಾವಿರಾರು ಕಡತಗಳ ವಿಲೇವಾರಿಗೆ ತುರ್ತು ಕ್ರಮ ವಹಿಸಿ ಜನ ಸಾಮಾನ್ಯರ ಸಂಕಷ್ಟವನ್ನೂ ಪರಿಹರಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಅಗ್ರಹಿಸಿದ್ದಾರೆ.

ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡೆ ಅಭಿನಂದನೀಯ: ಕುತ್ಯಾರು ನವೀನ್ ಶೆಟ್ಟಿ




ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ಇಂಧನ ದರಗಳು ವಿಪರೀತ ಏರದಂತೆ ತಡೆಯಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಭಾರಿ ಕಡಿತವನ್ನು ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆ ಪ್ರಶಂಸನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ. ದೂರದರ್ಶಿತ್ವದ ಚಿಂತನೆಯಿಂದ ಇಂಧನ ದರ ಇಳಿಕೆ ಮೂಲಕ ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಇಂಧನ ಖಾತೆ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಪೆಟ್ರೋಲ್ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ರೂ.10 ರಷ್ಟು ಕಡಿತಗೊಳಿಸಿ ರೂ.13 ರಿಂದ ರೂ.3ಕ್ಕೆ ಇಳಿಸಲಾಗಿದೆ. ಡೀಸೆಲ್ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ರೂ.10 ರಷ್ಟು ಕಡಿತಗೊಳಿಸಿ ಶೂನ್ಯಕ್ಕೆ ಇಳಿಸಲಾಗಿದೆ. ತೈಲ ಕಂಪನಿಗಳು ಆಮದು ಮಾಡಿಕೊಳ್ಳುವ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಮತ್ತು ಆ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುವುದನ್ನು ತಪ್ಪಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದ ಕಡಿತವನ್ನು ಮಾಡಿರುವುದು ಎಲ್ಲ ವರ್ಗದ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ




ಉಡುಪಿ: ಪರಿಶಿಷ್ಟ ಪಂಗಡದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಹಿತ ಎಸ್.ಟಿ. ಸಮುದಾಯಕ್ಕೆ ಸರಕಾರದಿಂದ ದೊರಕಬಹುದಾದ ಸೌಲಭ್ಯಗಳನ್ನು ಪರಿಚಯಿಸುವ ಜೊತೆಗೆ ಮರಾಠ ಸಮುದಾಯಕ್ಕೆ ಸೇರಿದ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ನೇತೃತ್ವದಲ್ಲಿ ಮಾ.15 ರವಿವಾರ ಸಂಜೆ ಗಂಟೆ 4.30ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಶಿವಾಜಿ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಲತ ತಿಳಿಸಿದ್ದಾರೆ.

ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಮಾ.15 ರವಿವಾರ ಸಂಜೆ ಗಂಟೆ 4.30ಕ್ಕೆ ಸುಮಾರು 10 ತಂಡಗಳಿಂದ ಮರಾಠಿ ಸಮುದಾಯದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ನೃತ್ಯ ವೈಭವ ನಡೆಯಲಿದೆ.

ಸಂಜೆ ಗಂಟೆ 5.30ಕ್ಕೆ ನಡೆಯಲಿರುವ ಶಿವಾಜಿ ಸಂಗಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ವಹಿಸಲಿದ್ದಾರೆ. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್.ಟಿ. ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಮರಾಠಿ ಸಮುದಾಯದ ಹತ್ತು ಸಮಸ್ತರ ಕಟ್ಟೆಯ 18 ಗುರಿಕಾರರಿಗೆ ಗೌರವಾರ್ಪಣೆ ನಡೆಯಲಿದೆ. ಎಸ್.ಟಿ. ಸಮುದಾಯಕ್ಕೆ ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಪುಸ್ತಕ ಬಿಡುಗಡೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎ.ಉಮೇಶ್ ನಾಯ್ಕ್, ಮಾಜಿ ನಗರಸಭಾ ಸದಸ್ಯ ಅಶೋಕ್ ನಾಯ್ಕ್ ಮತ್ತು ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರಾತ್ರಿ ಗಂಟೆ 7.30ರಿಂದ ಡಾ! ವಿಜಯ ಕುಮಾರ್ ಕೋಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ ಖ್ಯಾತ ತುಳು ನಾಟಕ ಛತ್ರಪತಿ ಶಿವಾಜಿ ಪ್ರದರ್ಶನಗೊಳ್ಳಲಿದೆ. ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸುಮಲತ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಗುಣಾ ಡಿ. ನಾಯ್ಕ್, ವಿನಯ್, ಉಪಾಧ್ಯಕ್ಷರುಗಳಾದ ನವೀನ್ ನಾಯ್ಕ್, ಶರತ್ ನಾಯ್ಕ್ ಹಾಗೂ ರಾಹುಲ್ ಉಪಸ್ಥಿತರಿದ್ದರು.

ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ




ಉಡುಪಿ: ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ  ನೀತಾ ಪ್ರಭು ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕುಂಜಿಬೆಟ್ಟು ಮಾಂಡವಿ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾದ ಡಾ! ರಾಜಲಕ್ಷ್ಮಿ ಅವರು ಗಣ್ಯರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಶಕುಂತಲಾ ಶೆಟ್ಟಿ – ಹೈನುಗಾರಿಕೆ, ವಿಮಲ – ಸಂಜೀವಿನಿ ಗ್ರೂಪ್, ಅನುಷಾ – ವಕೀಲರು, ಸುಶೀಲ ಸಾಲಿಯಾನ್ – ಮಹಿಳಾ ಹೋಮ್ ಗಾರ್ಡ್, ಗೀತಾ ಕೃಷ್ಣರಾಜ್ –  ಆಟೋ ಚಾಲಕಿ, ಲಲಿತ – ಪೌರ ಕಾರ್ಮಿಕರು ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಸತೀಶ್ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.

ವಿಶೇಷವಾಗಿ ಪರ್ಕಳದ ಮನೆ ಊಟ ಹೋಟೆಲ್ ನ ಹಿರಿಯ ದಂಪತಿಗಳಾದ ಗೋಪಾಲಕೃಷ್ಣ ಮತ್ತು ವಸಂತಿ ಅವರನ್ನು ಗೌರವಿಸಲಾಯಿತು.

ಸಂತೆಕಟ್ಟೆ ವಾತ್ಸಲ್ಯ ಕ್ಲಿನಿಕ್ ನ ಡಾ! ರಾಜಲಕ್ಷ್ಮಿ ಅವರಿಂದ ಮಹಿಳೆಯರಿಗಾಗಿ ಉಪಯುಕ್ತ ವಿಶೇಷ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ನೀತಾ ಪ್ರಭು ಸಂಯೋಜನೆಯಲ್ಲಿ ಮೋರ್ಚಾದ ಪದಾಧಿಕಾರಿಗಳು ಮತ್ತು ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಲ್ಲಿ ನಡೆದ ವಿವಿಧ ವಿನೋದಾವಳಿಗಳ ಸಹಿತ ‘ನಾರೀ ಶಕ್ತಿ’ ಎಂಬ ವಿಶೇಷ ಕಾರ್ಯಕ್ರಮವು ಆಕರ್ಷಕವಾಗಿ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರ ಮಂಡಲಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಉಡುಪಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತಿ ಮನೋಜ್ ಸಹಿತ ಮಹಿಳಾ ಮೋರ್ಚಾ ಮತ್ತು ವಿವಿಧ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಲದ ಹೊರೆಯೊಂದಿಗೆ ಗಾಯದ ಮೇಲೆ ಬರೆ ಎಳೆದ ಅಭಿವೃದ್ಧಿ ಶೂನ್ಯ ರಾಜ್ಯ ಬಜೆಟ್ : ಕುತ್ಯಾರು ನವೀನ್ ಶೆಟ್ಟಿ




ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ರಾಜ್ಯವನ್ನು ಸಾಲದ
ಶೂಲಕ್ಕೇರಿಸಿರುವ ಜೊತೆಗೆ ಈಗಾಗಲೇ ವಿಧಿಸಿರುವ ದುಬಾರಿ ತೆರಿಗೆಗಳ ಮೂಲಕ ಗಾಯದ ಮೇಲೆ ಬರೆ ಎಳೆದ ಅಭಿವೃದ್ಧಿ ಶೂನ್ಯ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಜಾರಿಗೊಳಿಸಿದ್ದ ಗ್ಯಾರಂಟಿಗಳ ನಿರ್ವಹಣೆಗೆ ಪರದಾಡುತ್ತಿರುವ ರಾಜ್ಯ ಸರಕಾರ ಯುವ ನಿಧಿ ಗ್ಯಾರಂಟಿಗೆ ಎಳ್ಳು ನೀರು ಬಿಟ್ಟಂತಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಯಾವುದೇ ದೃಢ ಯೋಜನೆಗಳನ್ನು ರೂಪಿಸಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಚಿತ ಯೋಜನೆಗಳಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ತೋರಿದ ಜೊತೆಗೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ದಿವ್ಯ ನಿರ್ಲಕ್ಷ್ಯ ಧೋರಣೆ ತಳೆದ ರಾಜಕೀಯ ಪ್ರೇರಿತ ಬಜೆಟ್ ಇದಾಗಿದೆ.

ರಸ್ತೆ ಗುಂಡಿ ಮುಚ್ಚಲೂ ಹಣವಿಲ್ಲದ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದಂತಿದೆ. ರಾಜ್ಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆಯುತ್ತಿರುವ ಪ್ರತಿಭಟನೆಗಳು ಅರಣ್ಯರೋಧನವಾಗಿದೆ. ಒಟ್ಟಾರೆಯಾಗಿ ರಾಜ್ಯದ ಹಿತವನ್ನು ಬಲಿಗೊಟ್ಟು ಯಾವುದೇ ಹೊಸತನವಿಲ್ಲದ, ಕೇವಲ ಸಾಲದ ಪ್ರಮಾಣ ಹೆಚ್ಚಿಸುವಲ್ಲಿ ದಾಖಲೆಗೈದ ನಿಷ್ಪ್ರಯೋಜಕ ಬಜೆಟ್ ಇದಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್





17 ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಎಲ್ಲೋ ಸಾಲ ಮಾಡಿಯಾದ್ರೂ ಅಧಿಕಾರಕ್ಕೆ ಅಂಟಿಕೊಳ್ಳುವ ಕಸರತ್ತು ಮಾಡಿದಂತೆ ತೋರುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ರಾಜ್ಯದ ಒಟ್ಟು ಸಾಲ ರೂ.8,24,389 ಕೋಟಿಗೆ ಏರಿದೆ. ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ ಮಾತ್ರ. ಈ ಸಾಲಿನ ಬಹಿರಂಗ ಮಾರುಕಟ್ಟೆ ಸಾಲದ ಗಾತ್ರವೇ ರೂ.1,22,340 ಕೋಟಿ. ರಾಜ್ಯವನ್ನು ಎತ್ತ ತೆಗೆದುಕೊಂಡು ಹೋಗುತ್ತಿದ್ದೀರಿ ಸ್ವಾಮಿ?

ಕೇಂದ್ರದ ಬಜೆಟ್ ಬಂದ ಕೂಡಲೇ ಕರ್ನಾಟಕಕ್ಕೆ ಅನ್ಯಾಯ ಎಂದು ಸುಳ್ಳು ಲೆಕ್ಕ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ನಿಮಗೆ ರಾಜ್ಯದ ಒಂದು ಸಮುದಾಯ ಮಾತ್ರ ಪ್ರಾಮುಖ್ಯವಾಯಿತೇ?

ಓಲೈಕೆ ರಾಜಕಾರಣವನ್ನೇ ಪಕ್ಷದ ಸಿದ್ಧಾಂತವನ್ನಾಗಿಸಿದ ಇಂದಿರಾ ಕಾಂಗ್ರೆಸ್ ನ ಕರ್ನಾಟಕ ಸರಕಾರದ 17 ಬಜೆಟ್ ಮಂಡಿಸಿದ ಖ್ಯಾತಿಯ ಬಜೆಟ್ ಶೂರ ಮುಖ್ಯಮಂತ್ರಿ ಸಿದ್ದರಾಮಯ್ಯ “ಬ್ರದರ್ಸ್ ಬಜೆಟ್” ಮಂಡಿಸಿ ರಾಜ್ಯದ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ.

ವಕ್ಫ್ ಆಸ್ತಿ ಅಭಿವೃದ್ಧಿ, ಅಲ್ಪಸಂಖ್ಯಾತರ ಮಕ್ಕಳಿಗೆ ಲ್ಯಾಪ್ ಟಾಪ್ ಗೆ ಹಣ, ಅಲ್ಪಸಂಖ್ಯಾತ ಖಾಲಿ ಹುದ್ದೆ ತುಂಬಲು ಕ್ರಮ, ಅಲ್ಪಸಂಖ್ಯಾತ ಉದ್ಯೋಗಸ್ಥ  ಮಹಿಳೆಯರಿಗೆ 4 ವಸತಿ ನಿಲಯ, ಅಲ್ಪಸಂಖ್ಯಾತ ನಿಗಮದ ಸಾಲ ಬಡ್ಡಿ ಮನ್ನಾ, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಸೊಸೈಟಿ ಸ್ಥಾಪನೆ, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ರೂ.3 ಲಕ್ಷದ ವರೆಗೆ ಸಹಾಯ ಧನ, ಅಲ್ಪಸಂಖ್ಯಾತ ನಿರ್ಗತಿಕರಿಗೆ ವ್ರದ್ಧಾಶ್ರಮ, ಅಲ್ಪಸಂಖ್ಯಾತ ಕಾಲೋನಿಗಳಿಗೆ ನೂರಾರು ಕೋಟಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಅಲ್ಪಸಂಖ್ಯಾತರಿಗಾಗಿ ವಸತಿ ಶಾಲೆ, ಅಲ್ಪಸಂಖ್ಯಾತರ ಶಾಲೆಗಳ ಅಭಿವೃದ್ಧಿಗಾಗಿ 1,000 ಕೋಟಿ ರೂಪಾಯಿ. ಹೇಳಿ ಮುಖ್ಯಮಂತ್ರಿಗಳೇ ಬಹುಸಂಖ್ಯಾತರು ಈ ರಾಜ್ಯದ ಪ್ರಜೆಗಳಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಕರಾವಳಿ ಕರ್ನಾಟಕವನ್ನು ಪೂರ್ತಿ ಕಡೆಗಣಿಸಿದ್ದು ಕೇವಲ 2 ಪೊಲೀಸ್ ಸ್ಟೇಷನ್ ಗಳನ್ನು ನೀಡಿದ್ದೆ ಈ ಬಜೆಟ್ ನ ಹೆಗ್ಗಳಿಕೆ.

ರಾಜ್ಯದ ರೈತರು, ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಯುವಕರು, ಬಡ ಜನತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಜನರನ್ನು ನಿರ್ಲಕ್ಷಿಸಿದ  ಮತ್ತು ಕೇವಲ ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿದ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ನಿರ್ಮಾಣದ ಅವಧಿಯೊಳಗೆ ಅಗಲ ಕಿರಿದಾದ ಸರ್ವಿಸ್ ರಸ್ತೆ, ಸಂಪರ್ಕ ರಸ್ತೆ ಹಾಗೂ ಇತರ ಪೂರಕ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ತುರ್ತಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ಯೋಜನಾ ನಿರ್ದೇಶಕರು ಮತ್ತು ಅನುಷ್ಠಾನ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಇವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ




ಉಡುಪಿ, ಫೆ.17 : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಯೋಜನಾ ನಿರ್ದೇಶಕ ಮತ್ತು ಅನುಷ್ಠಾನ ಅಧಿಕಾರಿ, ಮಂಗಳೂರು ಅಬ್ದುಲ್ ಜಾವೆದ್ ಆಜ್ಮಿ ಹಾಗೂ ಇತರ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ಕಾಮಗಾರಿಯ ಸ್ಥಳಕ್ಕೆ ಫೆ.16ರಂದು ಸಂಜೆ ಬೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು ಅವರ ನೇತೃತ್ವದಲ್ಲಿ ವೇದಿಕೆಯ ‌ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರೊಂದಿಗೆ ಕಾಮಗಾರಿಯನ್ನು ವೀಕ್ಷಿಸಿದರು.

ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯು ಅಂಬಲಪಾಡಿ ಜಂಕ್ಷನ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ತುರ್ತಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಜ.30ರಂದು ಸಲ್ಲಿಸಿರುವ ಮನವಿಗೆ ಸ್ಪಂದಿಸಿದ ಸಂಸದ ಕೋಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ನಿರ್ದೇಶಕರ ಸಹಿತ ಇತರ ಅಧಿಕಾರಿಗಳೊಂದಿಗೆ ಅಂಬಲಪಾಡಿ ಜಂಕ್ಷನ್ ನಲ್ಲಿ ಅಭಿವೃದ್ಧಿ ಪಡಿಸಬೇಕಾದ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು.

ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯು ಈ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದಿರುವ ಪ್ರಮುಖ ಬೇಡಿಕೆಗಳಾದ ಅಗಲ ಕಿರಿದಾದ ಸರ್ವಿಸ್ ರಸ್ತೆಯನ್ನು ಕುತ್ಪಾಡಿ ಬಲಾಯಿಪಾದೆಯಿಂದ  ಕರಾವಳಿ ಬೈಪಾಸ್ ರಸ್ತೆಯ ವರೆಗೆ ವಿಸ್ತರಿಸಿ ನಿರ್ಮಾಣ ಮಾಡುವುದು, ಅಂಬಲಪಾಡಿ-ಬ್ರಹ್ಮಗಿರಿ ನಗರಸಭೆ ಸಂಪರ್ಕ ರಸ್ತೆಯನ್ನು ವಿಸ್ತರಿಸಿ  ಅಭಿವೃದ್ಧಿಪಡಿಸುವುದು, ಫೂಟ್ ಪಾತ್ ನಿರ್ಮಾಣ ಸಹಿತ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳ್ಳುವ ಮೊದಲು ತುರ್ತಾಗಿ ಕೈಗೊಳ್ಳಲು ವೇದಿಕೆಯ ಸಂಚಾಲಕರ ಸಹಿತ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹಾಗೂ ಪ್ರಮುಖರು ಸಂಸದರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು.

ಇದರ ಜೊತೆಗೆ ಅಂಡರ್ ಪಾಸ್ ನ  ಮೇಲೆ ಓವರ್ ಪಾಸ್ ನಲ್ಲಿ ಸಂಚರಿಸುವ ಹೆದ್ದಾರಿ ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಉತ್ತರ  ಮತ್ತು ದಕ್ಷಿಣದಲ್ಲಿ ಸಮಾನ ಅಂತರದ ವರೆಗೆ ಇಳಿಜಾರು ಹೆದ್ದಾರಿ ನಿರ್ಮಾಣವನ್ನು ಪುನರ್ ಪರಿಶೀಲಿಸಿ ನಿರ್ಮಾಣ ಮಾಡುವಂತೆ ವೇದಿಕೆಯು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಂಸದರನ್ನು  ಒತ್ತಾಯಿಸಿದೆ.

ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡಿರುವ ಜಾಗದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ವಿಷಯಾಧಾರಿತ ಒತ್ತಾಯಕ್ಕೆ ಸ್ಪಂದಿಸಿದ ಸಂಸದರು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯನ್ನು ಒಂದು ವಾರದೊಳಗೆ ಕರೆದು ಮನವಿಯಲ್ಲಿ ತಿಳಿಸಿರುವ ಎಲ್ಲಾ ವಿಷಯಗಳನ್ನು ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದು ಅಧಿಕಾರಿಗಳಿಗೆ ಸಭೆ ಕರೆಯಲು ಸೂಚಿಸಿದರು.

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ವೇದಿಕೆಯ ಪ್ರತಿನಿಧಿಗಳು ಭಾಗವಹಿಸುವ ಮೊದಲು ವೇದಿಕೆಯ ಸಂಚಾಲಕರು ವೈಯುಕ್ತಿಕ ಹೆಸರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೋರಿರುವ ಎಲ್ಲಾ ದಾಖಲೆಗಳನ್ನು ನೀಡಿ ಪಾರದರ್ಶಕತೆಗೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸಂಸದರು ಸೂಚ್ಯವಾಗಿ ತಿಳಿಸಿದರು.

ಸಕಾಲಿಕವಾಗಿ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಉಪಸ್ಥಿತರಿದ್ದ ವೇದಿಕೆಯ ಸರ್ವ ಸದಸ್ಯರು ಸಂಸದರು ಹಾಗೂ ಒಪ್ಪಿಗೆ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮತ್ತು ಅನುಷ್ಠಾನ ನಿರ್ದೇಶಕರ ಸಹಿತ ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಇದರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಸದರ ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು, ಗೌರವ ತಾಂತ್ರಿಕ ಸಲಹೆಗಾರ ಶಾಂತರಾಜ್ ಐತಾಳ್ ಅಂಬಲಪಾಡಿ, ಕೋಶಾಧಿಕಾರಿ ಮನೋಹರ ಶೆಟ್ಟಿ ಅಂಬಲಪಾಡಿ, ಸಂಪರ್ಕ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರಾದ ಯೋಗೀಶ್ ಶೆಟ್ಟಿ ಅಂಬಲಪಾಡಿ, ಶಿವಕುಮಾರ್ ಅಂಬಲಪಾಡಿ, ಕೀರ್ತಿ ಶೆಟ್ಟಿ ಅಂಬಲಪಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಜಿತ್ ಶೆಟ್ಟಿಗಾರ್ ಕಪ್ಪೆಟ್ಟು, ಸುನಿಲ್ ಕುಮಾರ್ ಕಪ್ಪೆಟ್ಟು, ಜಗದೀಶ್ ಆಚಾರ್ಯ ಕಪ್ಪೆಟ್ಟು, ಸೋಮನಾಥ್ ಬಿ.ಕೆ. ಅಂಬಲಪಾಡಿ, ಹರೀಶ್ ಆಚಾರ್ಯ ಅಂಬಲಪಾಡಿ, ಹರೀಶ್ ಪಾಲನ್ ಕಪ್ಪೆಟ್ಟು, ದೀಪಕ್ ಪುತ್ರನ್ ಕಡೆಕಾರು, ರಂಜಿತ್ ಶೆಟ್ಟಿ ಅಂಬಲಪಾಡಿ, ಸಂದೇಶ್ ಉಚ್ಚಿಲ್, ಲಕ್ಷ್ಮಣ ಪೂಜಾರಿ, ಅಜಿತ್ ಅಂದ್ರಾದೆ, ಕೃಷ್ಣ ಅಂಬಲಪಾಡಿ , ಗಣೇಶ್ ಪೂಜಾರಿ ಕಪ್ಪೆಟ್ಟು, ಲವ ಕುಮಾರ್, ಎಡ್ರಿಚ್ ಅಂದ್ರಾದೆ ಮುಂತಾದವರು ಉಪಸ್ಥಿತರಿದ್ದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಅಂಬಲಪಾಡಿ ವಸತಿ : ಹಿಂದೂ ಸಂಗಮ, ಶೋಭಾಯಾತ್ರೆ


ಉಡುಪಿ:ಫೆ.15 ರವಿವಾರ ಸಂಜೆ ಅಂಬಲಪಾಡಿ ದೇವಸ್ಥಾನದ ಬಳಿ ನೂರಾರು ಹಿಂದೂ ಭಾಂದವರ ಸಮಾಗಮದೊಂದಿಗೆ ನಡೆದ ಬೃಹತ್ ಶೋಭಾಯಾತ್ರೆಗೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಚಾಲನೆ ನೀಡಿದರು.

ಶೋಭಾಯಾತ್ರೆಯು ಅಂಬಲಪಾಡಿ  ಮಹಾಕಾಳಿ ಮಾರ್ಗ, ಬೀಡು ಮಾರ್ಗ, ಆನಂದ ರಾವ್ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಸಾಗಿ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಸಮಾಪನಗೊಂಡಿತು.

ಅಂಬಲಪಾಡಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಹಿಂದೂ ಸಂಗಮದ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಸಮಾಜ ಸೇವಕ ವಿಶುಕುಮಾರ್ ಶೆಟ್ಟಿ ಅಂಬಲಪಾಡಿ ಅವರು ವಹಿಸಿದ್ದರು.

ರಾಷ್ಟೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ್ ಅರೆಶೀರೂರು ಅವರು ಬೌದ್ಧಿಕ್ ನಡೆಸಿಕೊಟ್ಟರು.

ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಶೇಖರ ಶೆಟ್ಟಿಗಾರ್ ಅಂಬಲಪಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಯಂ ಸೇವಕ ಜಯ ಭಂಡಾರಿ ಅವರು ಸ್ವಾಗತಿಸಿ, ಪರಿಚಯಿಸಿದರು. ರಮೇಶ್ ಸಾಲ್ಯಾನ್ ಅಂಬಲಪಾಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಗಣೇಶ್ ಶೆಣೈ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಆಚಾರ್ಯ ಅಂಬಲಪಾಡಿ ವಂದಿಸಿದರು.

ವಿಜಯ ಭಟ್ ಕಡೆಕಾರು ವಂದೇ ಮಾತರಂ ಹಾಡಿದರು. ಶಂಕರ ಅಂಬಲಪಾಡಿ ಮತ್ತು ಪದ್ಮನಾಭ ಅಂಬಲಪಾಡಿ ಅವರು ವೈಯಕ್ತಿಕ ಗೀತೆ ಹಾಡಿದರು. ಹಿರಿಯ ಸ್ವಯಂ ಸೇವಕ ಉಮೇಶ್ ಶೆಟ್ಟಿಗಾರ್ ಅಂಬಲಪಾಡಿ ಮತ್ತು ಸುಧಾಕರ್ ಶೆಟ್ಟಿ ಅಂಬಲಪಾಡಿ ಅತಿಥಿಗಳನ್ನು ಗೌರವಿಸಿದರು.

ರಾ.ಹೆ. 66 ಅಂಬಲಪಾಡಿ ಪ್ರಗತಿ ಪರಿಶೀಲನೆ, ಸರ್ವಿಸ್ ರಸ್ತೆ ಅಗಲೀಕರಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ರಾ.ಹೆ.66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯಿಂದ ಸಂಸದರಿಗೆ ಮನವಿ




ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಇದರ ಸರ್ವಿಸ್ ರಸ್ತೆಯ ಅಗಲೀಕರಣ ಮತ್ತು ವಿವಿಧ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಭೂಸ್ವಾದೀನ ಮಾಡಿರುವ ದಾಖಲೆಗಳ ಸಹಿತ ಅಧಿಕಾರಿಗಳೊಂದಿಗೆ ನಿಗದಿತ ಕಾಲ ಮಿತಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಮಾರ್ಕಿಂಗ್ ಮಾಡುವ ಮೂಲಕ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾ.ಹೆ.66 ಅಂಬಲಪಾಡಿ ಇದರ ಸರ್ವಿಸ್ ರಸ್ತೆಗೆ ಭೂಸ್ವಾದೀನ ಮಾಡಿರುವ ಸ್ಥಳದಲ್ಲಿ ರಸ್ತೆ ಅಗಲೀಕರಣ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರವನ್ನು ಸಂಪರ್ಕಿಸುವ ಉಡುಪಿ ನಗರಸಭೆಯ ರಸ್ತೆಯನ್ನು ಅಂಡರ್ ಪಾಸ್ ದ್ವಾರಕ್ಕೆ ಸಮನಾಗಿ ಅಗಲೀಕರಣಗೊಳಿಸುವುದು, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಜಂಕ್ಷನ್ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್ ಪಾಸ್ ಮಧ್ಯದಿಂದ 30 ಮೀಟರ್ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವುದು ಹಾಗೂ ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ವಿನ್ಯಾಸದಲ್ಲಿರುವಂತೆ ಫೂಟ್ ಪಾತ್ ನಲ್ಲಿ ಸುರಕ್ಷಿತ ಜನ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಮುಂತಾದ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕೋಟ ಅವರು ಶೀಘ್ರ ರಾ.ಹೆ.66 ಅಂಬಲಪಾಡಿ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ತುರ್ತಾಗಿ ನಡೆಯಬೇಕಾಗಿರುವ ಅಗತ್ಯ ಕಾಮಗಾರಿಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡುವ ಜೊತೆಗೆ ಮನವಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಹಾಗೂ ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಮುಂತಾದವರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2047ರ ಮೋದಿ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಧೃಡ ಹೆಜ್ಜೆ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್


ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ರೂ.53.5 ಲಕ್ಷ ಕೋಟಿ ಗಾತ್ರದ 9ನೇ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಇನ್ನೊಂದು ಧೃಡ ಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಅವರು ಕೇಂದ್ರ ಬಜೆಟ್ 2026ರ ಕುರಿತು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಗತ್ತು ಆರ್ಥಿಕ ಅನಿಶ್ಚಿತತೆಯ ತಲ್ಲಣಗಳಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ದೇಶದ ಜನತೆಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬಿರುವ ಸ್ವಾಗತಾರ್ಹ ಬಜೆಟ್ ಇದಾಗಿದೆ. ದೀರ್ಘ ಕಾಲೀನ ಆರ್ಥಿಕ ಗುರಿಯನ್ನು ಮುಟ್ಟಲು ಅಗತ್ಯವಿರುವ ಅಲ್ಪ ಕಾಲೀನ ಯೋಜನೆಗಳೊಂದಿಗೆ ಸಮದೃಷ್ಟಿಯ ಸಂತುಲಿತ ಬಜೆಟ್.

ಯಾವುದೇ ಸಮುದಾಯವನ್ನಾಗಲಿ, ಸಾರ್ವಜನಿಕ ಸಂಸ್ಥೆಯನ್ನಾಗಲಿ, ಸಾಮಾಜಿಕ ವರ್ಗಗಳನ್ನಾಗಲಿ ತುಷ್ಟೀಕರಿಸುವ ಯೋಚನೆಗಳಿಗೆ ವಿರುದ್ಧವಾಗಿ, ಜಾಗತಿಕ ಆರ್ಥಿಕ ತಲ್ಲಣವನ್ನು ಗಮನದಲ್ಲಿರಿಸಿಕೊಂಡು ದೇಶದ ಜನತೆಯ ಭವಿಷ್ಯದ ಹಿತವನ್ನು ಕಾಪಾಡಲು ಅಗತ್ಯವಿರುವ ಯೋಚನೆ ಮತ್ತು ಯೋಜನೆಗಳನ್ನು ಹೊಂದಿರುವ ಬಜೆಟ್ ಇದಾಗಿದೆ. ಜನತೆಯ ಆಶೋತ್ತರಗಳನ್ನು ಸಾಧಿಸಬಲ್ಲ ಯೋಜನೆಗಳು ಮತ್ತು ತುಷ್ಟೀಕರಣದ ಮಾನಸಿಕತೆಯಿಂದ ಹೊರ ಬಂದು ಜನಸಾಮಾನ್ಯರನ್ನು ಕೇಂದ್ರವಾಗಿರಿಸಿರುವ ಜನಪರ ಬಜೆಟ್ ಅಭಿನಂದನೀಯ.

ಮೂಲಭೂತ ಸೌಕರ್ಯಗಳು, ಕೃಷಿ, ಉದ್ಯೋಗ, ಸೆಮಿ ಕಂಡಕ್ಟರ್, ಅಪರೂಪದ ಖನಿಜಗಳು, ಡೇಟಾ ಸೆಂಟರ್ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಯೋಜನೆಗಳ ಅಭಿವೃದ್ಧಿಗೆ ಪೂರಕವಾಗಿರುವ ಉತ್ತಮ ಬಜೆಟ್. ಉತ್ಪಾದನೆ, ಉದ್ಯೋಗ ಮತ್ತು ಸೇವಾ ಕ್ಷೇತ್ರಗಳಿಗೆ ಆದ್ಯತೆ ನೀಡಿದ ಬಜೆಟ್ ಇದಾಗಿದೆ.

ಬಜೆಟ್ ಮಂಡನೆ ಕೇವಲ ವಾರ್ಷಿಕ ಆಯ-ವ್ಯಯದ ಅಂಕೆ ಸಂಖ್ಯೆಗಳನ್ನು ಮೀರಿ ಒಂದು ಆದ್ಯ ಕರ್ತವ್ಯವನ್ನಾಗಿಸಿದ ಬಜೆಟ್. ಸುಸ್ಥಿರ ಆರ್ಥಿಕ ಪ್ರಗತಿಯೊಂದಿಗೆ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವುದು, ಜನತೆಯ ಆಶೋತ್ತರಗಳ ಪೂರೈಕೆ ಹಾಗೂ ಅವರ ಸಾಮರ್ಥ್ಯದಲ್ಲಿ ಹೆಚ್ಚಳದೊಂದಿಗೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ತತ್ವಕ್ಕೆ ಅಗತ್ಯವಿರುವ ಸಂಪನ್ಮೂಲ, ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸಲು ಯೋಜಿಸಿರುವ ಬಜೆಟ್. ಅತೀ ವೇಗದ 7 ರೈಲ್ವೆ ಕಾರಿಡಾರ್ ಗಳ ಮೂಲಕ ವೇಗದ ಆರ್ಥಿಕ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿರುವ ಗತಿ ಶಕ್ತಿಯ ಬಜೆಟ್ ಇದಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿ ದಾಖಲೆಯ ರೂ.7.84 ಲಕ್ಷ ಕೋಟಿ ಅನುದಾನದ ಮೂಲಕ ದೇಶದ ಭದ್ರತೆಯ ದೂರಾಲೋಚನೆಯ ದೂರದರ್ಶಿತ್ವದ ಬಜೆಟ್. ಪ್ರಾದೇಶಿಕ ಮೆಡಿಕಲ್ ಹಬ್ ಗಳ ಮೂಲಕ ಮೆಡಿಕಲ್, ಪ್ರವಾಸೋದ್ಯಮ, ನಿಮ್ಹಾನ್ಸ್ ಆಸ್ಪತ್ರೆಗಳು, ಮೈನಿಂಗ್ ಕಾರಿಡಾರ್, ಬಯೋ ಫಾರ್ಮ, ಎ.ಐ. ಮಿಶನ್ ಮೂಲಕ ಎ.ಐ. ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇನ್ನಿತರ ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಆದ್ಯತೆ ನೀಡಿರುವ ಸ್ವಾಗತಾರ್ಹ ಬಜೆಟ್.

ಪ್ರಧಾನ ಮಂತ್ರಿಗಳು ಹೇಳಿರುವಂತೆ ಈ ಬಜೆಟ್ ದೇಶದ 140+ ಕೋಟಿ ಭಾರತೀಯರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಐತಿಹಾಸಿಕ ಬಜೆಟ್ ಆಗಿದೆ. ಸುಧಾರಣೆಯ ಪಯಣದ ದಿಕ್ಕು ಬದಲಿಸಿದ್ದು 2047ರ ಒಳಗೆ ‘ವಿಕಸಿತ ಭಾರತ’ದ ಕನಸು ಸಾಕಾರಗೊಳಿಸುವ ನೀಲಿ ನಕ್ಷೆಯ ಬಜೆಟ್ ಇದಾಗಿದೆ. ದೇಶಕ್ಕೆ ಹೊಸ ಶಕ್ತಿ ಮತ್ತು ವೇಗ ನೀಡುವ ಬಜೆಟ್ ಇದಾಗಿದೆ. ವಿಶ್ವ ಭೂಪಟದಲ್ಲಿ ಭಾರತದ ಜಾಗತಿಕ ಪಾತ್ರವನ್ನು ಇನ್ನಷ್ಟು ಸ್ಪಷ್ಟಗೊಳಿಸಿದ ಬಜೆಟ್ ಇದಾಗಿದೆ. ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸ್ಪಷ್ಟ ಗುರಿ ಹೊಂದಿರುವ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

Design a site like this with WordPress.com
Get started