ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ






ಬಿಜೆಪಿ ಕೇವಲ ಪ್ರಚಾರಕ್ಕಾಗಿ ಅಥವಾ ವರದಿಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ತತ್ವ ಸಿದ್ಧಾಂತಗಳಡಿ ಶೃದ್ದೆ ಮತ್ತು ಬದ್ಧತೆಯಿಂದ ಅಭಿಯಾನಗಳನ್ನು ಯಶಸ್ವಿಗೊಳಿಸುತ್ತದೆ. ವಿರಮಿಸದೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನದ ಅಂಗವಾಗಿ ಜಿಲ್ಲಾ ಬಿಜೆಪಿ ನೇತೃತ್ವ ಹಾಗೂ ಜಿಲ್ಲಾ ರೈತ ಮೋರ್ಚಾ ಸಹಯೋಗದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಅಭಿಯಾನಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಹೊಸ ತಂಡ ರಚನೆಯಾಗಿದೆ. ಟೀಕೆಗಳಿಗೆ ಉತ್ತಮ ಕೆಲಸದ ಮೂಲಕ ಉತ್ತರ ನೀಡೋಣ. ಸಂಪರ್ಕ, ಪ್ರವಾಸ ಮತ್ತು ಸಭೆಗಳಿಗೆ ಒತ್ತು ನೀಡಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ನಡೆಯಬೇಕು. ಎಲ್ಲರೂ ಒಟ್ಟಾಗಿ ಒಂದಾಗಿ ಪಕ್ಷದ ಸಂಕಲ್ಪ, ಉದ್ದೇಶವನ್ನು ಕಣ್ಣ ಮುಂದೆ ಇಟ್ಟುಕೊಂಡು ಜಿಲ್ಲೆಯಲ್ಲಿ ಬಿಜೆಪಿಯನ್ನು ಇನ್ನಷ್ಟು ಸದೃಢಗೊಳಿಸೋಣ. ಸಂಘಟಿತ ಪರಿಶ್ರಮದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ 2014ರ ಮೊದಲು ದೇಶದಲ್ಲಿ ಯಾವ ರೀತಿಯ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇತ್ತು ಎಂಬ ಅರಿವು ಎಲ್ಲರಿಗೂ ಇದೆ. ಆ ಬಳಿಕ ಜನತೆಯ ಆಶಾಕಿರಣವಾಗಿ ಮೂಡಿಬಂದ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ, ಐತಿಹಾಸಿಕ ಸಾಧನೆಗಳ ಜೊತೆಗೆ ಆರ್ಥಿಕತೆಯಲ್ಲಿ ದೇಶವನ್ನು 3ನೇ ಸ್ಥಾನದತ್ತ ಕೊಂಡೊಯ್ದು ಪ್ರಸಕ್ತ ಜೂ.10ರಂದು ದೇಶದ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಸಂಭ್ರಮಾಚರಣೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕರೆಯಂತೆ ನಡೆಯುತ್ತಿರುವ ಅರ್ಥಪೂರ್ಣ ಅಭಿಯಾನವನ್ನು ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಂಡು ಯಶಸ್ವಿಗೊಳಿಸೋಣ. ಒಗ್ಗಟ್ಟು ಮತ್ತು ಸಂಘಟಿತ ಪ್ರಯತ್ನದ ಮೂಲಕಯಾವುದೇ ಸವಾಲುಗಳನ್ನು ಮೆಟ್ಟಿ ನಿಂತು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಗದೊಮ್ಮೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸೋಣ ಎಂದರು.

ಗೋಪೂಜೆಯೊಂದಿಗೆ ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ’ ಹಾಗೂ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗ್ರಾಮಾಂತರ ಮಂಡಲ ವ್ಯಾಪ್ತಿಯ 12 ಮಂದಿ ಕೃಷಿಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ ಕುಲಾಲ್, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ, ಸಹ ಸಂಚಾಲಕರಾದ ಶಿವಕುಮಾರ್ ಅಂಬಲಪಾಡಿ, ಅನಿತಾ ಶ್ರೀಧರ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹಾಗೂ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕಮಲಾಕ್ಷ ಹೆಬ್ಬಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು.

ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮೋಹನ್ ಚಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು.

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ




ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳು ಮತ್ತು ಸಹ ಸಂಚಾಲಕರುಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ನಗರಾಡಳಿತ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಕಡ ರಾಜು ಪೂಜಾರಿ, ಸಹ ಸಂಚಾಲಕರಾಗಿ ಸಂತೋಷ್ ಜತ್ತನ್ ನಿಟ್ಟೂರು, ಮೀನುಗಾರ ಪ್ರಕೋಷ್ಠದ ಸಂಚಾಲಕರಾಗಿ ಶರತ್ ಕುಮಾರ್ ಬೈಲಕೆರೆ,  ಸಹ ಸಂಚಾಲಕರಾಗಿ ಸಂದೀಪ್ ಅಮೀನ್ ಕೂರಾಡಿ, ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಡಾ! ವಿದ್ಯಾದರ ಶೆಟ್ಟಿ, ಸಹ ಸಂಚಾಲಕರಾಗಿ ಡಾ! ರಾಮಚಂದ್ರ ಕಾಮತ್, ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕರಾಗಿ ಮಧ್ವನಗರ ಶಂಕರ ಪೂಜಾರಿ, ಸಹ ಸಂಚಾಲಕರಾಗಿ ಕೃಷ್ಣಪ್ಪ ಜತ್ತನ್, ಪ್ರಕಾಶನ ಪ್ರಕೋಷ್ಠದ ಸಂಚಾಲಕರಾಗಿ ದುರ್ಗಾಪ್ರಸಾದ್ ಸಿ.ಹೆಚ್., ಸಹ ಸಂಚಾಲಕರಾಗಿ ಸತೀಶ್ ಎಸ್., ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾಗಿ ವಸಂತ ಕಿಣಿ, ಸಹ ಸಂಚಾಲಕರಾಗಿ ಯೋಗೀಶ್ ಗುಡ್ರಿ, ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕರಾಗಿ ಅಕ್ಷಯ್ ಪಿ. ಶೆಟ್ಟಿ, ಸಹ ಸಂಚಾಲಕರಾಗಿ ನರಸಿಂಹ ಗಾoಸ್ಕರ್, ಮಾಧ್ಯಮ ವಿಭಾಗದ ಸಹ ಸಂಚಾಲಕರಾಗಿ ಮಂಜುನಾಥ್ ಮಣಿಪಾಲ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ




ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳು ಮತ್ತು ಸಹ ಸಂಚಾಲಕರುಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಸುದೀಪ್ ಶೆಟ್ಟಿ ನಿಟ್ಟೆ, ಸಹ ಸಂಚಾಲಕರಾಗಿ ಅಜಿತ್ ಜೋಗಿ ಯಡ್ತಾಡಿ, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕರಾಗಿ ಗೋಪಾಲ್ ಕೋಟ್ಯಾನ್ ತೆಂಕನಿಡಿಯೂರು,  ಸಹ ಸಂಚಾಲಕರಾಗಿ ಕೃಷ್ಣ ಕುಲಾಲ್ ವರ್ವಾಡಿ, ನೇಕಾರರ ಪ್ರಕೋಷ್ಠದ ಸಂಚಾಲಕರಾಗಿ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಸಹ ಸಂಚಾಲಕರಾಗಿ ರಾಜಕೇಸರಿ ಶೆಟ್ಟಿಗಾರ್, ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕರಾಗಿ ಅಶೋಕ್ ರಾವ್ ಕಟಪಾಡಿ, ಸಹ ಸಂಚಾಲಕರಾಗಿ ರಂಜಿತಾ ಶೆಟ್ಟಿ ಕೆಮ್ತೂರು, ಕೈಗಾರಿಕಾ ಪ್ರಕೋಷ್ಠದ ಸಂಚಾಲಕರಾಗಿ ಸದಾನಂದ ಪ್ರಭು ಪೆರ್ಣoಕಿಲ, ಸಹ ಸಂಚಾಲಕರಾಗಿ ರವಿ ಆರ್. ಆಚಾರ್ಯ, ಆರ್ಥಿಕ ಪ್ರಕೋಷ್ಠದ ಸಂಚಾಲಕರಾಗಿ ರಾಜ ಎಮ್. ಸಾಲ್ಯಾನ್, ಸಹ ಸಂಚಾಲಕರಾಗಿ ಸುಧೀರ್ ಭಟ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ




ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ ಚಿರಂಜೀವಿ ಜೈನ್, ಮೈಕಲ್ ಡಿಸೋಜ, ಜೆರಾಲ್ಡ್  ಡಿಸೋಜ, ಬಿ.ಹೈದರ್, ಇಜಾಜ್ ಶರೀಫ್, ಪ್ರಧಾನ ಕಾರ್ಯದರ್ಶಿಗಳಾಗಿ ಮಹಮ್ಮದ್ ಅಫ್ಸರ್, ಶೇಕ್ ಆಸಿಫ್ ಕಟಪಾಡಿ, ಕಾರ್ಯದರ್ಶಿಗಳಾಗಿ ನೋಯೆಲ್ ಜೋಸೆಫ್ ವಾಜ್, ಡಾಲ್ಫಿ ವಿಕ್ಟರ್ ಲೂಯಿಸ್, ಅನಿಟಾ ಬೆಲಿಂಡ ಡಿಸೋಜ, ಖೈರುನ್ನೀಸಾ, ಜೋನ್ಸನ್ ಪೌಲ್ ಡಿಸೋಜ, ಕೋಶಾಧಿಕಾರಿಯಾಗಿ ಗ್ಲೇನ್ ಮೋನಿಸ್, ಕಾರ್ಯಕಾರಿಣಿ ಸದಸ್ಯರುಗಳಾಗಿ ಮೆಲ್ವಿನ್ ಪೀಟರ್ ಕ್ರಾಸ್ತ, ರಾಕೇಶ್ ಕ್ರಾಸ್ತ, ಐಸನ್ ಡೈರಿಕ್ ಪಿರೇರಾ, ಉಪ್ಪನ್ ಬೆಟ್ಟು ನಾಗರಾಜ್, ಫಯಾಜ್ ಮೂಡುಬೆಟ್ಟು, ನವೀನ್ ಡಿಸೋಜಾ, ರಿಂಟೋ ತೆನಕರ, ಬ್ಲಾoಚಾ ಕಾರ್ನಲಿಯೋ, ಜೈಸನ್ ಎಂ. ಡಿ., ಒವಿನ್ ಅನಿಲ್ ಡಿಸೋಜ, ಜೆರಾಲ್ಡ್ ಡಿಸಿಲ್ವಾ, ಸುನೀತಾ ಡಿಸೋಜ, ನಾಜೀರ ಬೇಗಂ, ಅನಿತಾ ಮೋನಿಸ್, ಜೆಸಿಂತಾ ಮಾರ್ಗರೇಟ್ ಡಿಸೋಜ, ಸರೀನಾ ನಾನ್ಸಿ ಡಿ’ಅಲ್ಮೇಡಾ, ನೂರ್ ಜಹಾನ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿ ಅವರ ದೂರದರ್ಶಿತ್ವದ ರಾಷ್ಟ್ರೀಯ ಕರೆ ಸ್ವಾಗತಾರ್ಹ : ಶಶಾಂಕ್ ಶಿವತ್ತಾಯ




ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಮಾಡಿದ ಮನವಿ — ಅಗತ್ಯವಿಲ್ಲದ ಚಿನ್ನದ ಖರೀದಿಯನ್ನು ಕೆಲಕಾಲ ಮುಂದೂಡುವುದು, ಅನಗತ್ಯ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡುವುದು, ಸಾಧ್ಯವಾದಲ್ಲಿ ವರ್ಕ್ ಫ್ರಮ್ ಹೋಮ್ ಅನುಸರಿಸುವುದು ಹಾಗೂ ಇಂಧನ ಉಳಿತಾಯಕ್ಕೆ ಒತ್ತು ನೀಡುವುದು — ಇವೆಲ್ಲವೂ ದೇಶದ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಜವಾಬ್ದಾರಿಯುತ ಹಾಗೂ ದೂರದರ್ಶಿತ್ವದ ಸಲಹೆಗಳಾಗಿವೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶಶಾಂಕ್ ಶಿವತ್ತಾಯ ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕಚ್ಚಾ ತೈಲದ ಬೆಲೆ ಏರಿಕೆ, ಸಾಗಾಟ ವೆಚ್ಚ ಹೆಚ್ಚಳ, ವಿದೇಶಿ ವಿನಿಮಯದ ಮೇಲಿನ ಒತ್ತಡ ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸಿದೆ.

ಭಾರತ ತನ್ನ ಒಟ್ಟು ಕಚ್ಚಾ ತೈಲ ಅವಶ್ಯಕತೆಯ ಸುಮಾರು 85% ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪ್ರತಿದಿನ ಭಾರತವು ಸುಮಾರು 5 ಮಿಲಿಯನ್ ಬ್ಯಾರೆಲ್ ತೈಲವನ್ನು ಬಳಸುತ್ತದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಕಚ್ಚಾ ತೈಲದ ಬೆಲೆ ಕೇವಲ 10 ಡಾಲರ್ ಏರಿದರೂ ಭಾರತಕ್ಕೆ ವರ್ಷಕ್ಕೆ ಸುಮಾರು ರೂ.1.5 ಲಕ್ಷ ಕೋಟಿ ಹೆಚ್ಚುವರಿ ಹೊರೆ ಬೀಳಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಇದೇ ವೇಳೆ ಭಾರತವು ಜಗತ್ತಿನ ಅತಿ ದೊಡ್ಡ ಚಿನ್ನ ಖರೀದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ವರ್ಷಕ್ಕೆ ಸುಮಾರು 800ರಿಂದ 900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ಸುಮಾರು 45 ರಿಂದ 60 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಅನಗತ್ಯ ಚಿನ್ನ ಖರೀದಿ ಮತ್ತು ವಿದೇಶಿ ವೆಚ್ಚಗಳನ್ನು ಕಡಿಮೆ ಮಾಡುವುದರಿಂದ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ರೂಪಾಯಿ ಮೌಲ್ಯ ಬಲವಾಗುತ್ತದೆ ಮತ್ತು ದೇಶದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ.

ಕೋವಿಡ್ ಸಮಯದಲ್ಲಿ ಭಾರತವು ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯ ಮೂಲಕ ಇಂಧನ ಬಳಕೆ ಮತ್ತು ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಬಹುದು ಎಂಬುದನ್ನು ಈಗಾಗಲೇ ತೋರಿಸಿತ್ತು. ಕೋವಿಡ್ ಅವಧಿಯಲ್ಲಿ ನಗರಗಳಲ್ಲಿ ವಾಹನ ಸಂಚಾರವು ಸುಮಾರು 25% ರಿಂದ 40% ರವರೆಗೆ ಕಡಿಮೆಯಾಗಿತ್ತು. ಇದರ ಪರಿಣಾಮವಾಗಿ ಇಂಧನ ಬಳಕೆ ಮತ್ತು ಮಾಲಿನ್ಯ ಎರಡೂ ಇಳಿಕೆಯಾಗಿದ್ದವು. ಮತ್ತೆ ಕೆಲವು ಕ್ಷೇತ್ರಗಳಲ್ಲಿ ವರ್ಕ್ ಫ್ರಮ್ ಹೋಮ್ ಅನುಸರಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇದರಿಂದ ದೇಶದ ತೈಲ ಆಮದು ವೆಚ್ಚವೂ ಇಳಿಯುತ್ತದೆ.

2025–26ರಲ್ಲಿ ಭಾರತವು ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ ಮತ್ತು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತದ ವಿದೇಶಿ ವಿನಿಮಯ ಸಂಗ್ರಹವು ಸುಮಾರು 640 ಬಿಲಿಯನ್ ಡಾಲರ್ ಮಟ್ಟದಲ್ಲಿದ್ದು, ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಅದನ್ನು ರಕ್ಷಿಸುವುದು ದೇಶದ ಆರ್ಥಿಕ ಸ್ಥಿರತೆಗೆ ಅತ್ಯಂತ ಅಗತ್ಯವಾಗಿದೆ.

ಪ್ರಧಾನ ಮಂತ್ರಿ ಅವರ ಈ ಮನವಿ ಕೇವಲ ತಾತ್ಕಾಲಿಕ ಕ್ರಮವಲ್ಲ; ಅದು ದೀರ್ಘಕಾಲೀನ ಆರ್ಥಿಕ ಶಕ್ತಿಗಾಗಿ ಮಾಡಲಾದ ದೂರದೃಷ್ಟಿಯ ಯೋಜನೆಯಾಗಿದೆ. ಇದರ ಮೂಲಕ:

* ವಿದೇಶಿ ವಿನಿಮಯ ಉಳಿಸಬಹುದು.
* ರೂಪಾಯಿ ಮೌಲ್ಯವನ್ನು ಬಲಪಡಿಸಬಹುದು.
* ದೇಶೀಯ ಉತ್ಪಾದನೆಗೆ ಉತ್ತೇಜನ ಸಿಗಬಹುದು.
* “ಮೇಕ್ ಇನ್ ಇಂಡಿಯಾ”ಗೆ ಇನ್ನಷ್ಟು ಬಲ ಸಿಗಬಹುದು. ಆತ್ಮನಿರ್ಭರ ಭಾರತದ ಕನಸು ಇನ್ನಷ್ಟು ಗಟ್ಟಿಯಾಗಬಹುದು.

ಇತಿಹಾಸ ನೋಡಿದರೆ ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಮುಂತಾದ ರಾಷ್ಟ್ರಗಳು ಸಂಕಷ್ಟದ ಸಮಯದಲ್ಲಿ ಜನಸಹಭಾಗಿತ್ವ, ಉಳಿತಾಯ ಮತ್ತು ದೇಶೀಯ ಉತ್ಪಾದನೆಗೆ ಒತ್ತು ನೀಡುವ ಮೂಲಕವೇ ಆರ್ಥಿಕ ಮಹಾ ಶಕ್ತಿಗಳಾಗಿ ಬೆಳೆದಿವೆ. ಭಾರತವೂ ಇಂದು ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಅದೇ ರೀತಿಯ ಜವಾಬ್ದಾರಿಯುತ ಹಾದಿಯಲ್ಲಿ ಸಾಗುತ್ತಿದೆ.

ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಅದರ ಪರಿಣಾಮ ಇಂಧನ ದರ, ವ್ಯಾಪಾರ, ಹಣದುಬ್ಬರ ಮತ್ತು ಜಾಗತಿಕ ಮಾರುಕಟ್ಟೆಗಳ ಮೂಲಕ ಪ್ರಪಂಚದ ಎಲ್ಲಾ ರಾಷ್ಟ್ರಗಳ ಮೇಲೂ ಬೀಳುತ್ತಿದೆ. ಇಂತಹ ಸಮಯದಲ್ಲಿ ಭಾರತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ದೇಶದ ಭವಿಷ್ಯದ ಆರ್ಥಿಕ ಸುರಕ್ಷತಿಗಾಗಿ ಅಗತ್ಯವಾಗಿದೆ.

ಇವು ಯಾವುದೇ ಕಡ್ಡಾಯ ನಿಯಮಗಳಲ್ಲ; ದೇಶದ ಹಿತಕ್ಕಾಗಿ ಜನರಿಗೆ ನೀಡಲಾಗಿರುವ ದೇಶಭಕ್ತಿಯ ಮನವಿಗಳು. ಜನರ ಸಹಕಾರ ಮತ್ತು ಜವಾಬ್ದಾರಿಯುತ ನಡೆ ದೇಶದ ಆರ್ಥಿಕ ಬಲವನ್ನು ಇನ್ನಷ್ಟು ಹೆಚ್ಚಿಸಬಹುದು.

ಇಂದು ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಸರಿಯಾದ ನಾಯಕತ್ವ, ಜನರ ಸಹಕಾರ ಮತ್ತು ದೂರದೃಷ್ಟಿಯ ಆರ್ಥಿಕ ನೀತಿಗಳ ಮೂಲಕ ಭಾರತವು ಈ ಜಾಗತಿಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶವನ್ನು ಕೇವಲ ತಾತ್ಕಾಲಿಕ ಮನವಿಯಾಗಿ ನೋಡಬಾರದು. ಇದು ದೇಶದ ಭವಿಷ್ಯದ ಆರ್ಥಿಕ ಸುರಕ್ಷತೆ, ರೂಪಾಯಿ ಮೌಲ್ಯದ ಬಲ, ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ನೀಡಲಾಗಿರುವ ರಾಷ್ಟ್ರೀಯ ಕರೆ ಎಂದು ಸ್ಪಂದಿಸಬೇಕಾಗಿದೆ ಎಂದು ಶಶಾಂಕ್ ಶಿವತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*lಎಸ್.ಐ. ಆರ್. ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕುತ್ಯಾರು ನವೀನ್ ಶೆಟ್ಟಿ ಕರೆ





ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಘೋಷಣೆಯಾಗಲಿರುವ ಎಸ್.ಐ.ಆರ್. ಅಭಿಯಾನದಲ್ಲಿ ಪಕ್ಷದ ಬಿಎಲ್ಎ2 ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ತಪ್ಪಿ ಹೋಗದಂತೆ ನಿಗಾ ವಹಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವನ್ನು ಅಭಿನಂದಿಸಿದ ಅವರು ಈ ಫಲಿತಾಂಶ ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ರಾಜ್ಯ ಕಂಡ ಧೀಮಂತ ನಾಯಕ, ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ಸಂವತ್ಸರಗಳ ಸಾರ್ಥಕ ಸೇವೆಯ ಸವಿ ನೆನಪಿಗಾಗಿ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುವ ‘ಬಿ.ಎಸ್.ವೈ. ಅಭಿಮಾನೋತ್ಸವ’ದ ಸಂಭ್ರಮದ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮಂಡಲ ಪ್ರಶಿಕ್ಷಣ ವರ್ಗಗಳನ್ನು ಯಶಸ್ವಿಯಾಗಿ ಪೂರೈಸಿರುವ ಮತ್ತು ಮನ್ ಕೀ ಬಾತ್ ವೀಕ್ಷಣೆಯಲ್ಲಿ 100% ಪ್ರಗತಿ ದಾಖಲಿಸಿರುವ ಮಂಡಲಗಳನ್ನು ಅವರು ಅಭಿನಂದಿಸಿದರು.

ಪ್ರಶಿಕ್ಷಣ ವರ್ಗದ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಮೇ 23 ಮತ್ತು 24ರಂದು ನಡೆಯುವ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಎಲ್ಲಾ ಅಪೇಕ್ಷಿತರು ಕಡ್ಡಾಯವಾಗಿ ಭಾಗವಹಿಸಿ ಅಗತ್ಯ ಮಾಹಿತಿ ಮಾರ್ಗದರ್ಶನ ಪಡೆಯಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿ, ಶ್ರೀಕಾಂತ್ ನಾಯಕ್ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ. ವಂದಿಸಿದರು.

ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ರಾಜ್ಯ ಮೋರ್ಚಾ ಮತ್ತು ಪ್ರಕೋಷ್ಠಗಳ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲಿ : ಕುತ್ಯಾರು ನವೀನ್ ಶೆಟ್ಟಿ




ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿ ಚುನಾವಣೆಗಳಲ್ಲಿ ಗೆದ್ದ ಪರಿಣಾಮ ಬಿಜೆಪಿ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಕ್ರಾಂತಿಕಾರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬೀನ್ ಹಾಗೂ ಎಲ್ಲ ಬಿಜೆಪಿ ಕಾರ್ಯಕರ್ತರ ಶ್ರಮ ಕಾರಣ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು .

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಸಾಧನೆ ಶ್ಲಾಘಿಸಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿ ಎದುರು ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಇದು ಧರ್ಮದ ಗೆಲುವು. ನಾವು ರಾಷ್ಟ್ರದ ಹಿತ ಕಾಪಾಡುವ ಸಿದ್ದಾಂತದಡಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಈ ಗೆಲುವು ನಮ್ಮ ಬಲ ಹೆಚ್ಚಿಸಿದೆ.

ಇದೇ ಕರ್ನಾಟಕದ ಚುನಾವಣೆಗೆ ದಿಕ್ಸೂಚಿಯಾಗಬೇಕು. ಹಾಗಾಗಿ ನಾವೆಲ್ಲ ಸಮಯ, ಸಮಭಾವದಿಂದ ಕೆಲಸ ಮಾಡೋಣ. ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸೋಣ ಎಂದರು.

ಬಿಜೆಪಿ ಪ್ರಶಿಕ್ಷಣ ವರ್ಗದ ಮಂಗಳೂರು ವಿಭಾಗ ಪ್ರಮುಖ್ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ನಮ್ಮ ಕುಟುಂಬ. ಶ್ರಮ ವಹಿಸಿದರೆ ಎಲ್ಲಾ ಕಡೆ ಗೆಲ್ಲಬಹುದು ಎಂಬುದಕ್ಕೆ ಬಿಜೆಪಿ ಸಾಕ್ಷಿ. ಇಂದು ಅಧರ್ಮ ಅಳಿದು ಧರ್ಮಕ್ಕೆ ಜಯ ಸಿಕ್ಕಿದೆ. ಅರಾಜಕತೆ ದೂರವಾಗಿದೆ ಎಂದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಬಾಂಗ್ಲಾ ನುಸುಳುಕೋರರಿಗೆ ಬಿಜೆಪಿ ಗೆಲವಿನಿಂದ ತಕ್ಕ ಶಾಸ್ತಿಯಾದಂತಾಗಿದೆ. ಬಿಜೆಪಿ ಸಾಧನೆಯ ಮೂಲಕವೇ ಜನರ ವಿಶ್ವಾಸ ಗಳಿಸಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮುಖಂಡರುಗಳಾದ ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಎಸ್. ಕುಂದರ್, ನಯನಾ ಗಣೇಶ್, ನಳಿನೀ ಪ್ರದೀಪ್ ರಾವ್, ಸರಿತಾ ಶಿವಾನಂದ, ರಾಜೇಶ್ ಕಾವೇರಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಅನಿತಾ ಶ್ರೀಧರ್, ಶೋಭಾ ಭಾಸ್ಕರ್, ಸತ್ಯಾನಂದ ನಾಯಕ್, ದಿವಾಕರ ಶೆಟ್ಟಿ ಕಲ್ಯಾ, ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ದಿಲ್ಲೇಶ್ ಶೆಟ್ಟಿ, ವಿಜಯ ಕೊಡವೂರು, ಪ್ರಭಾಕರ್ ಪೂಜಾರಿ, ಕಮಲಾಕ್ಷ ಹೆಬ್ಬಾರ್, ರುಡಾಲ್ಫ್ ಡಿಸೋಜಾ, ಕೃಷ್ಣಮೂರ್ತಿ ಡಿ.ಬಿ., ಎಸ್.ನಾರಾಯಣ್, ಆಸೀಫ್ ಕಟಪಾಡಿ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿತೇಂದ್ರ ಶೆಟ್ಟಿ, ಶರಣ್ ಮಟ್ಟು, ಸತೀಶ್ ಪೂಜಾರಿ ಬೋಳ,  ಸುರೇಶ್ ಶೆಟ್ಟಿ ಶಿವಪುರ, ರಾಜೀವ ಕುಲಾಲ್, ಮನೋಜ್ ಶೆಟ್ಟಿ, ದೇವಾನಂದ ನಾಯ್ಕ್, ವೀಣಾ ಎಸ್. ಶೆಟ್ಟಿ, ರಾಘವೇಂದ್ರ ಉಪ್ಪೂರು, ಹರಿಮಕ್ಕಿ ರತ್ನಾಕರ ಶೆಟ್ಟಿ, ಕೈಲಾಡಿ ಬಾಲಕೃಷ್ಣ ಶೆಟ್ಟಿ, ಅರುಣ್ ಕುಮಾರ್ ಬಾಣಾ, ಲಕ್ಷ್ಮೀಶ ಬಂಗೇರ, ಕೃಷ್ಣಪ್ಪ ಜತ್ತನ್, ಸಲೀಂ ಅಂಬಾಗಿಲು, ಶ್ರೀವತ್ಸ, ನಿತಿನ್ ಪೈ, ಆನಂದ ಖಾರ್ವಿ, ದೇವೇಂದ್ರ ಪ್ರಭು, ಕಿಶೋರ್ ಕುಮಾರ್ ಕರಂಬಳ್ಳಿ, ಗುರುಪ್ರಸಾದ್, ಆನಂದ ಸುವರ್ಣ, ಅನಿತಾ ಡಿಸೋಜಾ, ದೀಪಾ ಪೈ, ಪ್ರಜ್ಞಾ ಶೆಟ್ಟಿ, ವಿದ್ಯಾ, ಚಂದ್ರಶೇಖರ ಪ್ರಭು, ಶಿವರಾಮ್ ಕಾಡಿಮಾರ್ ಸಹಿತ ಹಲವರು ಉಪಸ್ಥಿತರಿದ್ದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಧುರೀಣ, ಕೊಡುಗೈ ಧಾನಿ ಸಕರಾಮ್ ಶೆಟ್ಟಿ ನಿಧನಕ್ಕೆ ಗಣ್ಯರ ಸಂತಾಪ




ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೊಡುಗೈ ಧಾನಿ ಉಡುಪಿ ದೆಂದೂರುಕಟ್ಟೆ ನಿವಾಸಿ ಸಕರಾಮ್ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಿಕಟಪೂರ್ವ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಎ. ಸುವರ್ಣ, ವಿ.ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಸಹಿತ ಪಕ್ಷದ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿವಿಧ ಉದ್ಯಮಗಳಲ್ಲಿ ಯಶಸ್ಸು ಸಾಧಿಸಿರುವ ಸಕರಾಮ್ ಶೆಟ್ಟಿ ಅವರು ಸಾಮಾಜಿಕ ಕಳಕಳಿಯ ಮೂಲಕ ಜನಾನುರಾಗಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲುವಿಕೆ ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆನಿಸಿದೆ.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನ ಸಾಮಾನ್ಯರ ಗೋಳು ಕೇಳುವವರಿಲ್ಲ : ಕುತ್ಯಾರು ನವೀನ್ ಶೆಟ್ಟಿ




ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿಕ್ಕು ದೆಸೆ ಇಲ್ಲದ ಆಡಳಿತ ವೈಫಲ್ಯದಿಂದ ಜನ ಸಾಮಾನ್ಯರ ಗೋಳು ಕೇಳುವವರಿಲ್ಲದಂತಾಗಿದೆ. ಉಡುಪಿ ಜಿಲ್ಲೆಯ ಅಗತ್ಯ ಮೂಲಭೂತ ಸೌಕರ್ಯಗಳಿಗೆ ತುರ್ತು ಸ್ಪಂದನೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಿ :

ಉಡುಪಿಯ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ 2021ರಲ್ಲಿ ಪ್ರಾರಂಭಿಸಲಾಗಿದ್ದು, ನಿರ್ಮಾಣ ಕಾಮಗಾರಿಯು ಮೂರು ವರ್ಷಗಳ ಹಿಂದೆಯೇ ಶೇ.90ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆಗೊಳಿಸುವ ಮೂಲಕ ಜನರ ಸೇವೆಗೆ ಲಭಿಸುವಂತಾಗಲು ಸರಕಾರ ಇನ್ನೂ ಇಚ್ಛಾಶಕ್ತಿ ತೋರಿಸಿರುವುದಿಲ್ಲ. ಜಿಲ್ಲಾಸ್ಪತ್ರೆ ಕೇವಲ 120 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಇನ್ನೂ ಕಾರ್ಯಾಚರಿಸುತ್ತಿದೆ. ಬಡ ರೋಗಿಗಳು ಹಾಸಿಗೆ, ಐ.ಸಿ.ಯು. ಲಭ್ಯವಾಗದೇ ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ, ಅಲ್ಲಿಯೂ ಸರಿಯಾದ ಬೆಡ್ ವ್ಯವಸ್ಥೆ ದೊರಕದೇ ಚಿಕಿತ್ಸೆಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಬಡ ರೋಗಿಗಳು ಐ.ಸಿ.ಯು. ಬೆಡ್‌ಗಾಗಿ ಹೋರಾಟ ನಡೆಸುವ ಶೋಚನೀಯ ಸ್ಥಿತಿ ಉಂಟಾಗಿದ್ದು, ಆ್ಯಂಬುಲೆನ್ಸ್‌ನಲ್ಲಿಯೇ ಪ್ರಾಣ ಬಿಡುವಂತಹ  ಶೋಚನಿಯ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ಸಾಕಷ್ಟು ಮನವಿಗಳನ್ನು ನೀಡಿ, ಪ್ರತಿಭಟನೆ ಕೈಗೊಂಡರೂ ರಾಜ್ಯ ಸರಕಾರ ಯಾವುದೇ ಕ್ರಮ ವಹಿಸದೆ ನಿಷ್ಕ್ರಿಯವಾಗಿದೆ.

ರಾಜ್ಯ ಸರಕಾರ ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವ ಜೊತೆಗೆ ಆಸ್ಪತ್ರೆಗೆ ಬೇಕಾದ ಉಪಕರಣಗಳಿಗೆ ಸೂಕ್ತ ಅನುದಾನವನ್ನು ಒದಗಿಸಿ, ವೈದ್ಯರು, ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಂಡು ಉಡುಪಿ ಜಿಲ್ಲೆಯ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುವಂತೆ ಜಿಲ್ಲೆಯ ಜನತೆಯ ಪರವಾಗಿ ಆಗ್ರಹಿಸುತ್ತಿದ್ದೇವೆ. ತಪ್ಪಿದ್ದಲ್ಲಿ ಜಿಲ್ಲಾವ್ಯಾಪಿ ಬೃಹತ್ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಬಡವರ ಮಾಸಾಶನ ನಿಲ್ಲಿಸಬೇಡಿ – ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನದ ಆದಾಯ ಮಿತಿ ಹೆಚ್ಚಿಸಲು ಉಡುಪಿ ಜಿಲ್ಲಾ ಬಿ.ಜೆ.ಪಿ. ಆಗ್ರಹ:

ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನಕ್ಕೆ ಕುಟುಂಬದ ವಾರ್ಷಿಕ ಆದಾಯ ಮಿತಿ ಕೇವಲ ರೂ.32,000 ಎಂದು ನಿಗದಿಪಡಿಸಿರುವುದು ಸಂಪೂರ್ಣ ಅವೈಜ್ಞಾನಿಕ ಹಾಗೂ ಬಡವರ ವಿರೋಧಿ ನಿರ್ಧಾರವಾಗಿದ್ದು, ಇದರಿಂದ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಅರ್ಹ ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 50,000 ಜನರು ಮತ್ತು ರಾಜ್ಯದಲ್ಲಿ 24 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪಿಂಚಣಿ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ. ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ದಿನಗೂಲಿ ರೂ.370 ಇರುವ ಪರಿಸ್ಥಿತಿಯಲ್ಲಿ ಈ ಹಳೆಯ ಆದಾಯ ಮಿತಿಯನ್ನು ಮುಂದುವರಿಸುವುದು ಬಡ ವಿಧವೆಯರು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳ ಮೇಲಿನ ಅನ್ಯಾಯವಾಗಿದ್ದು, ತಕ್ಷಣವೇ ಈ ಮಿತಿಯನ್ನು ರೂ.32,000 ದಿಂದ ರೂ.1,20,000ಕ್ಕೆ ಹೆಚ್ಚಿಸಬೇಕು. ಆದಾಯ ಮಿತಿ ಹೆಚ್ಚಿಸುವವರೆಗೆ ನಡೆಯುತ್ತಿರುವ ಪಿಂಚಣಿ ಪರಿಶೀಲನೆ ಮತ್ತು ರದ್ದತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತದೆ. ರಾಜ್ಯ ಸರ್ಕಾರ ಈ ಬೇಡಿಕೆಯನ್ನು ತಕ್ಷಣ ಈಡೇರಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಕಠಿಣ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಕುತ್ಯಾರು ತಿಳಿಸಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಮಸ್ಯೆಗಳು :

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ನೆಪವೊಡ್ಡಿ ಜನ ಸಾಮಾನ್ಯರು ಸೇವೆ ಪಡೆಯಲು ಅಸಹಾಯಕರಾಗಿ ತಿಂಗಳು ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿತ್ಯ ನಿರಂತರವಾಗಿದೆ. ಸರಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಕಂಡು ಬಂದಿಲ್ಲ.

ಬಡ ನಿವೇಶನ ರಹಿತರಿಗೆ ಜಿಲ್ಲಾಧಿಕಾರಿಗಳು ಹಕ್ಕು ಪತ್ರ ನೀಡಿ ನಿವೇಶನ ಒದಗಿಸಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಪರವಾನಿಗೆ ಲಭಿಸುತ್ತಿಲ್ಲ. 94ಸಿಸಿ ಕಾನೂನಿನಡಿ ಸರಕಾರದಿಂದ ಒಂದೆರಡು ಸೆಂಟ್ಸ್ ಭೂಮಿ ಪಡೆದ ಬಡ ಕುಟುಂಬಗಳಿಗೂ ಮನೆ ನಿರ್ಮಾಣದ ಪರವಾನಿಗೆ ಲಭಿಸುತ್ತಿಲ್ಲ.

ಪ್ರಸ್ತುತ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೂರಾರು ಕಡತಗಳು ಬಾಕಿ ಉಳಿದಿರುವುದಲ್ಲದೇ, ಅವೈಜ್ಞಾನಿಕ ಹಾಗೂ ಅವಾಸ್ತವ ಕಾನೂನಿನ ನೆಪವೊಡ್ಡಿ ಸಾವಿರಾರು ಅರ್ಜಿಗಳಿಗೆ ಹಿಂಬರಹ ನೀಡಿ, ಕಡತ ಮುಕ್ತಾಯಗೊಳಿಸುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ.

ಕಂದಾಯ ಇಲಾಖೆಯಿಂದ ಹಕ್ಕು ಪತ್ರಗಳ ಮಂಜೂರಾತಿಗೆ ಯಾವುದೇ ಸ್ಪಂದನೆಯಿಲ್ಲ :

ದಾಖಲೆಗಳ ಕೊರತೆ, ಡೀಮ್ಡ್ ಫಾರೆಸ್ಟ್, ಕುಮ್ಕಿ ಮತ್ತಿತರ ಕಾರಣಗಳನ್ನು ನೀಡಿ ಹಕ್ಕು ಪತ್ರಗಳನ್ನು ನೀಡುವ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿ, ಬಡ ಕುಟುಂಬಗಳನ್ನು ನಡು ನೀರಿನಲ್ಲಿ ಬಿಟ್ಟಂತಾಗಿದೆ.

ಕಳೆದ 3 ವರ್ಷಗಳಿಂದ ಒಂದೇ ಒಂದು ಪಡಿತರ ಕಾರ್ಡು ವಿತರಣೆಯಾಗಿಲ್ಲ. ಯಾವುದೇ ನಿವೇಶನಗಳ ವಿತರಣೆ ಇಲ್ಲ. ಕಾನೂನಿನ ತೊಡಕಿನಿಂದ ಗೃಹ ನಿರ್ಮಾಣಕ್ಕೆ ತಡೆಯಾಗಿದೆ. ವಾಜಪೇಯಿ ವಸತಿ, ಅಂಬೇಡ್ಕರ್ ವಸತಿ, ಬಸವ ವಸತಿ ಯೋಜನೆಗಳಡಿಯಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ವಸತಿ ಸೌಲಭ್ಯ ನೀಡದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನಡೆ ಖಂಡನೀಯ.

ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ತುರ್ತು ಪರಿಹಾರ ದೊರೆಯದೇ ಇದ್ದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಸರಕಾರದ ವಿರುದ್ಧ ತೀವ್ರ ಸಂಘಟಿತ ಹೋರಾಟ ರೂಪಿಸಲಾಗುವುದು ರಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮತ್ತು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಲ್ಯಾ, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ ಮತ್ತು ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

ಹಣ್ಣು ಹಂಪಲು ವಿತರಣೆ ಮೂಲಕ ಮಾತೃಶ್ರೀ ಡಾ|ಹೇಮಾವತಿ ಹೆಗ್ಗಡೆಯವರ ಹುಟ್ಟುಹಬ್ಬ ಆಚರಣೆ


ಶಿರಾ: ಏಪ್ರಿಲ್ 2 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾತೃಶ್ರೀ ಡಾ|ಹೇಮಾವತಿ ಹೆಗ್ಗಡೆಯವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯೋಜನೆಯ ಸಿಬ್ಬಂದಿಗಳು ಯೋಜನೆಯಿಂದ ಮಾಸಾಶನ ಪಡೆಯುತ್ತಿರುವ ಪ್ರತಿಯೊಬ್ಬ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಫಲಾನುಭವಿಗಳ ಆರೋಗ್ಯ ,ಯೋಗ ಕ್ಷೇಮ  ವಿಚಾರಿಸಿ ಹಣ್ಣು ಹಂಪಲುಗಳನ್ನು ಹಂಚುವ ಮೂಲಕ ಮಾನವೀಯ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ರಮೇಶ್ ಎನ್. ಬೆಂಗಳೂರು ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿ  ಶ್ರೀಮತಿ ಸಂಗೀತಾ,ಪ್ರಾದೇಶಿಕ ವಿಭಾಗದ ಲೆಕ್ಕಪರಿಶೋಧನಾ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ,ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ  ಶ್ರೀ ಬಸವರಾಜ್ ಮತ್ತು ಶ್ರೀ ಸಾಯಿ ದರ್ಶನ್,, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ಮೇಲ್ವಿಚಾರಕರಾದ ಮಹಾದೇವಮ್ಮ,ನಗ್ಮಾ,ಸೇವಾ ಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಮತ್ತು ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಈ ವೇಳೆ ಎಲ್ಲರೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

Design a site like this with WordPress.com
Get started