ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು ನಿಧನ



ಉಡುಪಿ: ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಹಿರಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು (81 ವರ್ಷ) ಅವರು ಇಂದು ಸೆ.8ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಹಾಬಲ ಪೂಜಾರಿ ಅವರು ಬಸ್ ಮಾಲಕರಾಗಿದ್ದು, ಉಡುಪಿಯ ಹಿರಿಯ ಬಸ್ ಏಜೆಂಟರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಬಂಧು ವರ್ಗ ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರವು ನಾಳೆ ಸೆ.9ರಂದು ಬೆಳಿಗ್ಗೆ 10.00 ಗಂಟೆಗೆ ಅವರ ಪಂದುಬೆಟ್ಟು ನಿವಾಸದಲ್ಲಿ ನಡೆಯಲಿದೆ.

ಪ್ರೀತಿಯ ಹೆಸರಲ್ಲಿ ಮತಾಂತರ ಯತ್ನ ಖಂಡನೀಯ : ಗೀತಾಂಜಲಿ ಎಮ್. ಸುವರ್ಣ



ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ ಖಂಡನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರೆ ಹಾಗೂ ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಮ್. ಸುವರ್ಣ ತಿಳಿಸಿದ್ದಾರೆ.

ಮಾದ್ಯಮ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಇಸ್ಲಾಮಿಗೆ ಮತಾಂತರವಾಗುವಂತೆ ಸಹಪಾಠಿ ವೈದ್ಯ ಕಿರುಕುಳ ನೀಡಿರುವ ಪ್ರಕರಣವನ್ನು ಎನ್.ಐ.ಎಗೆ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ಹೊರ ರಾಜ್ಯದ ಹಿಂದೂ ವಿದ್ಯಾರ್ಥಿನಿಗೆ, ಅದೇ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವೈದ್ಯ ಮಹಮ್ಮದ್ ಡ್ಯಾನಿಶ್ ಖಾನ್, ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾನೆ ಎಂದು ಯುವತಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರ ಕೃತ್ಯ ಶ್ಲಾಘನೀಯ.

ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ರೀತಿ ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗೆ ಬಳಸಿರುವುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿಯೂ ಇದೇ ರೀತಿಯ ಸಂಚು, ರಾಷ್ಟ್ರ ವಿರೋಧಿ ಸಂಘಟನೆಯ ಕೈವಾಡ ಇರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಕ್ಕೆ ವಹಿಸಬೇಕೆಂದು ಗೀತಾಂಜಲಿ ಸುವರ್ಣ ಆಗ್ರಹಿಸಿದ್ದಾರೆ.

ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಜನರ ಸಮಸ್ಯೆ, ಅಭಿವೃದ್ಧಿಯನ್ನು ಮರೆತ ರಾಜ್ಯ ಸರಕಾರ : ರೇಷ್ಮಾ ಉದಯ್‌ ಶೆಟ್ಟಿ




ಉಡುಪಿ: ಉಡುಪಿಯಲ್ಲಿ ಈ ಬಾರಿ ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲಾದ್ಯಂತ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಹೆದ್ದಾರಿಗಳು ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬಹುತೇಕ ರಸ್ತೆಗಳು ಹಾಳಾಗಿವೆ. ಅಂಗನವಾಡಿ ಶಾಲಾ ಕಟ್ಟಡಗಳು, ಕಾಲುಸಂಕ, ತಡೆಗೋಡೆ, ವಿದ್ಯುತ್ ಕಂಬಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಸುಮಾರು 234 ಕೋಟಿ ರೂಪಾಯಿ ಮೌಲ್ಯದಷ್ಟು ಹಾನಿಯಾಗಿರುವ ವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರೂ, ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆಯಾಗದೇ ಇರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್‌ ಶೆಟ್ಟಿ ತಿಳಿಸಿದ್ದಾರೆ.

ಇದೀಗ ರಸ್ತೆಗಳ ತುರ್ತು ಮರು ದುರಸ್ತಿ ಕಾಮಗಾರಿಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳು, ರೈತರೂ ಸೇರಿದಂತೆ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಶೋಚನೀಯ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗರಣಗಳ ಸರಮಾಲೆಯ ನಡುವೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿಯೇ ಮಗ್ನರಾಗಿದ್ದು, ಇನ್ನಿತರ ಸಚಿವರು ರಾಜ್ಯದ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮುಖ್ಯಮಂತ್ರಿಗಳಿಂದ ತೆರವಾಗಬಹುದಾದ ಕುರ್ಚಿಗೆ ಟವೆಲ್ ಹಾಕಲು ಕಾಯುತ್ತಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಇದೇ ರೀತಿ ಮಳೆಯ ಅತಿವೃಷ್ಟಿಯಿಂದ ರಾಜ್ಯಾದ್ಯoತ ಹಾನಿಯಾದಾಗ ಸಾಕಾಲಿಕ ನ್ಯಾಯಯುತ ಪರಿಹಾರ ದೊರೆತಿರುವುದನ್ನು ರಾಜ್ಯದ ಜನತೆ ಇಂದು ಸ್ಮರಿಸುತ್ತಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿಯ ಶಕೆಯೇ ಪ್ರಾರಂಭವಾಗಿಲ್ಲ. ಇಡೀ ಸರಕಾರವೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ನಿಷ್ಕ್ರಿಯತೆಯಿಂದ ನಲುಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಳೆ ಹಾನಿ ಪರಿಹಾರ ಹಾಗೂ ಸ್ಥಳೀಯ ಅಭಿವೃದ್ಧಿಗೆ ಹಣ ಬಿಡುಗಡೆಗಾಗಿ ಜನತೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ವಿಷಮ ಸ್ಥಿತಿ ಉದ್ಭವಿಸುವುದು ನಿಶ್ಚಿತ ಎಂದು ರೇಷ್ಮಾ ಉದಯ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರಿಗೆ ಜಿಲ್ಲಾ ಬಿಜೆಪಿ ಅಭಿನಂದನೆ



ಉಡುಪಿ ನಗರಸಭೆಗೆ ನೂತನವಾಗಿ ಆಯ್ಕೆಗೊಂಡಿರುವ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಶಾಲು ಹೊದೆಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ದೆ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಸ್ಕಾರದ ಸ್ಪರ್ಶ ನೀಡುವಲ್ಲಿ ಭಜನೆಯ ಪಾತ್ರ ಮಹತ್ವಪೂರ್ಣ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ




ಉಡುಪಿ: ನವ ವಿಧ ಭಕ್ತಿಗಳಲ್ಲಿ ಭಜನೆಗೆ ವಿಶಿಷ್ಟ ಸ್ಥಾನವಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಏಕಾಗ್ರತೆಯ ಜೊತೆಗೆ ಸಂಸ್ಕಾರದ ಸ್ಪರ್ಶ ನೀಡುವಲ್ಲಿ ಭಜನೆಯ ಪಾತ್ರ ಮಹತ್ವಪೂರ್ಣ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು, ಹಿರಿಯಡ್ಕ ವಲಯ ಇದರ ನೇತೃತ್ವದಲ್ಲಿ ಮಹಾತೋಭಾರ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲೂಕು ಮತ್ತು  ಎಸ್.ವಿ.ಟಿ ಕರಸೇವಕರು ಹಿರಿಯಡ್ಕ ಇವರ ಜಂಟಿ ಆಶ್ರಯದಲ್ಲಿ ಜು.28ರಿಂದ ಆ.25ರ ವರೆಗೆ ಪ್ರತೀ ರವಿವಾರ ಶ್ರೀ ದೇವಳದ ಸಭಾಂಗಣದಲ್ಲಿ ನಡೆದ ಉಚಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂತರು, ದಾಸವರೇಣ್ಯರು ನಡೆದಾಡಿದ ಭೂಮಿ ನಮ್ಮದು. ಸುಸಂಸ್ಕೃತ ಹಾಗೂ ಭಾವನಾತ್ಮಕ ಬದುಕನ್ನು ಕಟ್ಟಿಕೊಟ್ಟ ನಾಡು ನಮ್ಮದು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕ್ರಾಂತಿಯ ಮೂಲಕ ಸಂಸ್ಕಾರಯುತ ಬದುಕಿಗೆ ಪುಷ್ಠಿ ನೀಡುವ ಸತ್ಕಾರ್ಯದಲ್ಲಿ ತೊಡಗಿರುವುದು ಪ್ರಶಂಸನೀಯ ಎಂದರು.

ಕುಣಿತ ಭಜನಾ ತರಬೇತುದಾರರಾದ ಪೂರ್ಣಿಮಾ ಪೆರ್ಡೂರು, ಪ್ರಕಾಶ್ ಮಂದಾರ್ತಿ, ನಿತ್ಯಾನಂದ ಕಬ್ಯಾಡಿ ಮತ್ತು ರೋಹಿತ್ ಕಬ್ಯಾಡಿ ಇವರನ್ನು ಸಂಘಟಕರ ಪರವಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿದರು.

ವಿದ್ಯಾರ್ಥಿಗಳು ಮತ್ತು ಭಜನಾಸಕ್ತರಿಗೆ ಉಚಿತ ಕುಣಿತದ ಭಜನಾ ತರಬೇತಿಯ ಅವಕಾಶವನ್ನು ಕಲ್ಪಿಸಿಕೊಟ್ಟ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರನ್ನು ವಲಯದ ಸ್ಥಳೀಯ ಭಜನಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಉದ್ಯಮಿ ಹಾಗೂ ಶ್ರೀ ಕ್ಷೇತ್ರ ಹಿರಿಯಡ್ಕದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಟರಾಜ್ ಹೆಗ್ದೆ ಮಾತನಾಡಿ ಕುಣಿತದ ಭಜನೆಯ ಮೂಲಕ ಯುವ ಜನತೆ ಭಜನೆಯ ಕಡೆಗೆ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯಕ್ರಮಗಳು ಅನುಕರಣೀಯ ಎಂದರು.

ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಪಿ. ಮಾತನಾಡಿ, ಸೆ.22ರಿಂದ ಸೆ.28ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯಡ್ಕದ ಖ್ಯಾತ ಪುರೋಹಿತ ಸುಬ್ರಹ್ಮಣ್ಯ ಆಚಾರ್ಯ ಮಾತನಾಡಿ ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ವಿಧಾನ. ಭಜನೆ ಭಕ್ತ ಮತ್ತು ದೇವರ ನಡುವಿನ ಕೊಂಡಿಯಾಗಿದೆ. ಭಗವಂತನಿಗೆ ಅತಿ ಪ್ರಿಯವಾದ ಕುಣಿತದ ಭಜನೆಯ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ತಾಲೂಕು ಭಜನಾ ಪರಿಷತ್ ಸಾಧನೆ ಅಭಿನಂದನೀಯ ಎಂದರು.

ಸಮಾರೋಪದ ಪೂರ್ವದಲ್ಲಿ ಶಿಬಿರಾರ್ಥಿಗಳಿಂದ ನಡೆದ ಕುಣಿತ ಭಜನಾ ಪ್ರಾತ್ಯಕ್ಷಿಕೆಗೆ ಶ್ರೀ ದೇವಳದ ಹಿರಿಯ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ತಂತ್ರಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹರೀಶ್ ಭಟ್,  ಮಾಣೈ ಮಠ  ಶ್ರೀ ಮುಖ್ಯಪ್ರಾಣ ದೇವಸ್ಥಾನದ ಮುಖ್ಯಸ್ಥ ಮಾಧವ ಉಪಾಧ್ಯಾಯ, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ತಾಲೂಕು ಭಜನಾ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ, ಯೋಜನೆಯ ತರಬೇತಿ ಕೇಂದ್ರದ ಪ್ರಾಂಶುಪಾಲ ಉಲ್ಲಾಸ್ ಮೇಸ್ತ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ಸುಮಿತ್ರಾ ನಾಯ್ಕ್, ಎಸ್.ವಿ.ಟಿ ಕರಸೇವಕರ ಪ್ರಮುಖರಾದ ಶ್ರೀನಿವಾಸ್ ರಾವ್ ಹಿರಿಯಡ್ಕ, ರಮೇಶ್ ದೇವಾಡಿಗ, ಮಹೇಶ್ ಹಿರಿಯಡ್ಕ, ಉದ್ಯಮಿ ಉಮೇಶ್ ಶೆಟ್ಟಿ, ಅಶೋಕ್ ಜೋಗಿ, ವಿಶ್ವ ಹಿಂದೂ ಪರಿಷತ್ತಿನ ದಿನೇಶ್ ಮೆಂಡನ್, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ಘಟಕದ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಎಸ್.ವಿ. ಟಿ ಕರಸೇವಕರು, ಶಿಬಿರಾರ್ಥಿಗಳು ಮತ್ತು ಭಜನಾಸಕ್ತರು ಉಪಸ್ಥಿತರಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮತ್ತು ಕುಣಿತ ಭಜನಾ ತರಬೇತಿಯ ಔಚಿತ್ಯದ ಕುರಿತು ಮಾಹಿತಿ ನೀಡಿದರು.

ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಎಮ್.ಆರ್. ಕಾರ್ಯಕ್ರಮ ನಿರೂಪಿಸಿದರು.

ಐದು ದಿನಗಳ ಕುಣಿತ ಭಜನಾ ಶಿಬಿರದಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಮಾಣಪತ್ರ ಹಾಗೂ ಶಾಲು ವಿತರಿಸಲಾಯಿತು.

ಸಮಾರೋಪ ಸಮಾರಂಭದ ಬಳಿಕ ಶ್ರೀ ವೀರಭದ್ರ ದೇವಸ್ಥಾನದ ಪ್ರಾಂಗಣದ ಸುತ್ತ ಶಿಬಿರಾರ್ಥಿಗಳಿಂದ ಕುಣಿತದ ಭಜನಾ ಸೇವೆ ಹಾಗೂ ಕ್ಷೇತ್ರದ ಶ್ರೀ ದೇವರಿಗೆ ಎಸ್.ವಿ.ಟಿ. ಕರಸೇವಕರ ವತಿಯಿಂದ ಹೂವಿನ ಪೂಜೆ ಸೇವೆ ನಡೆಯಿತು.

ಕಾರ್ಕಳ ಗ್ಯಾಂಗ್ ರೇಪ್ ಅಮಾನುಷ ಘಟನೆ ಅತ್ಯಂತ ಖಂಡನೀಯ, ಕಾಮಾಂಧರಿಗೆ ಕಠಿಣ ಶಿಕ್ಷೆಯಾಗಲಿ : ನಯನಾ ಗಣೇಶ್



ಉಡುಪಿ: ಕಾರ್ಕಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜಘಾತುಕರು ಹಿಂದೂ ಯುವತಿಯೋರ್ವಳನ್ನು ಅಪಹರಿಸಿ, ಬಲವಂತಾಗಿ ಅಮಲು ಪದಾರ್ಥವನ್ನು ಕುಡಿಸಿ ಗ್ಯಾಂಗ್ ರೇಪ್ ನಡೆಸಿರುವ ಅಮಾನುಷ ಕೃತ್ಯ ಅತ್ಯಂತ ಖಂಡನೀಯ ಎಂದು ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ತಿಳಿಸಿದ್ದಾರೆ.

ಸುಶೀಕ್ಷಿತ ಕರಾವಳಿ ಜಿಲ್ಲೆಯಲ್ಲಿ ಇಂತಹ ಹೇಯ ಘಟನೆ ನಡೆದಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಶಿಕ್ಷಣ ಮತ್ತು ವೃತ್ತಿಗಾಗಿ ಯುವತಿಯರು ಜಿಲ್ಲೆಗೆ ಅಗಮಿಸುತ್ತಿರುವುದು ಸ್ವಭಾವಿಕ. ಕೆಲವು ಮತಾಂಧ ದುಷ್ಟ ಶಕ್ತಿಗಳು ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಎಂಬಂತಾಗಿದೆ.

ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಆರೋಪಿಗಳನ್ನು ಬಂಧಿಸಿ, ಅಪರಾಧಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಯನಾ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಾರ್ಕಳದಲ್ಲಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿದ ಕಾಮಾಂಧರ ಅಟ್ಟಹಾಸ ಖಂಡನೀಯ : ರೇಷ್ಮಾ ಉದಯ ಶೆಟ್ಟಿ



ಕಾರ್ಕಳದ ಕುಕ್ಕುಂದೂರಿನಲ್ಲಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿದ ಬೀಬತ್ಸ್ಯ ಘಟನೆ ನಾಗರಿಕ ಸಮಾಜ ಬೆಚ್ಚಿ ಬೀಳುವಂತೆ ಮಾಡಿದೆ. ಸಮಾಜ ವಿದ್ರೋಹಿ ಕಾಮಾಂಧರ ಅಟ್ಟಹಾಸ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಹಿನ್ನೆಲೆ ಹಾಗೂ ಅವರಿಗಿರುವ ಮಾದಕ ವಸ್ತು ಜಾಲದ ನಂಟಿನ ಬಗ್ಗೆಯೂ ಪೊಲೀಸ್ ಇಲಾಖೆ ಕೂಲಂಕುಷ ತನಿಖೆ ನಡೆಸಬೇಕಾಗಿದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹುಬ್ಬಳ್ಳಿಯ ನೇಹಾ ಹತ್ಯೆ, ಬೆಳಗಾವಿ ಪ್ರಕರಣ ಸಹಿತ ರಾಜ್ಯದೆಲ್ಲೆಡೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಿಂದ ರಾಜ್ಯದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ.

ಸುಸಂಸ್ಕೃತರ ನಾಡು ಎನಿಸಿಕೊಂಡಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಜಿಲ್ಲೆಗೆ ಕಳಂಕ ತಂದಿದೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಹೆಡೆಮುರಿ ಕಟ್ಟುವ ಜೊತೆಗೆ ಮಹಿಳೆಯರಿಗೆ ರಕ್ಷಣೆ ನೀಡುವ ಸತ್ಕಾರ್ಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಆಗಬೇಕಿದೆ.

ಪೋಲಿಸ್ ಇಲಾಖೆ ಮಾದಕ ವಸ್ತುಗಳ ನಿಗ್ರಹದ ಜೊತೆಗೆ ಸದ್ರಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ, ಅಪರಾಧಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗೌರವಾರ್ಪಣೆ



ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ವತಿಯಿಂದ ಭಜನಾ ಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಶಾಲು ಹೊದೆಸಿ ಗೌರವಿಸಿ, ಶ್ರೀದೇವರ ಪ್ರಸಾದವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವದಾಸ್ ಪಿ., ಮಾಜಿ ಅಧ್ಯಕ್ಷ ಕೆ.ಮಂಜಪ್ಪ ಸುವರ್ಣ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಕುಮಾರ್, ಸಂಘದ ಆಡಳಿತ ಸಮಿತಿ ಸದಸ್ಯರಾದ ರಾಜೇಂದ್ರ ಪಂದುಬೆಟ್ಟು, ಭಾಸ್ಕರ ಅಂಚನ್, ಮುದ್ದಣ್ಣ ಪೂಜಾರಿ, ಸುಧಾಕರ್ ಎ., ವಿನಯ್ ಕುಮಾರ್, ನಿತಿನ್ ಕುಮಾರ್, ಗುರುರಾಜ್ ಪೂಜಾರಿ, ಸತೀಶ್ ಪೂಜಾರಿ, ಭಾಸ್ಕರ ಕೋಟ್ಯಾನ್, ಜನಾರ್ಧನ ಪೂಜಾರಿ, ಚೆನ್ನಕೇಶವ, ವಿನೋದ್ ಪೂಜಾರಿ ಹಾಗೂ ಕುಶಲ್ ಕುಮಾರ್, ಶಂಕರ ಪೂಜಾರಿ, ರವಿ ಪಾಲನ್, ಸುಧಾಕರ, ಮಹಿಳಾ ಘಟಕದ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್, ಜಯಂತಿ ಹರೀಶ್, ಕಾರ್ಯದರ್ಶಿ ವಾಣಿಶ್ರೀ ಅರುಣ್ ಸಹಿತ ಸಮಿತಿ ಸದಸ್ಯರು ಮತ್ತು ಸಂಘದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಅಂಬಲಪಾಡಿ ಬಿಲ್ಲವ ಸೇವಾ ಸಂಘ : ಶ್ರೀ ಗುರು ಜಯಂತಿ ಆಚರಣೆ, ವಿದ್ಯಾರ್ಥಿ ವೇತನ ವಿತರಣೆ



ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 170ನೇ ಜನ್ಮ ದಿನಾಚರಣೆಯನ್ನು ಆ.20ರಂದು ಭಜನಾ ಸೇವೆ, ಮಹಾ ಪೂಜೆ ಮತ್ತು ಅನ್ನ ಸಂತರ್ಪಣೆಯೊಂದಿಗೆ ಭಜನಾ ಮಂದಿರದಲ್ಲಿ ಆಚರಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ‘ಸಂಘಟನೆಯಿಂದ ಬಲಯುತರಾಗಿರಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ಅಮೃತ ವಾಣಿಯಂತೆ ಶ್ರೀ ಗುರು ಜಯಂತಿಯ ಪ್ರಯುಕ್ತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಉತ್ತಮ ಅಂಕ ಪಡೆದ ಸಂಘದ ವ್ಯಾಪ್ತಿಯ ಬಿಲ್ಲವ ಸಮಾಜದ 19 ಮಂದಿ ವಿದ್ಯಾರ್ಥಿಗಳಿಗೆ ದಾನಿಗಳ ಉದಾರ ನೆರವಿನಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಸಾಮಾಜಿಕ ಮುಖಂಡ ಕೆ.ಉದಯ ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಶಿವದಾಸ್ ಪಿ., ಸಂಘದ ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಮಾಹೆ ಮಣಿಪಾಲದ ಮಾಧ್ಯಮ ಸಹಾಯಕ ನಿರ್ದೇಶಕ ಸುರೇಶ್ ಕೋಟ್ಯಾನ್, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಕುಮಾರ್, ಮಹಿಳಾ ಘಟಕದ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್, ಜಯಂತಿ ಹರೀಶ್, ಕಾರ್ಯದರ್ಶಿ ವಾಣಿಶ್ರೀ ಅರುಣ್, ಭಜನಾ ಸಂಚಾಲಕರಾದ ಕೆ.ಮಂಜಪ್ಪ ಸುವರ್ಣ, ಶಂಕರ ಪೂಜಾರಿ ಸಹಿತ ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ಸಮಿತಿ ಸದಸ್ಯರು, ಸಂಘದ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಿಗೆ ಸ್ವಯಂ ಪ್ರಚಾರದ ತೆವಲು* ಟೋಲ್ ಹೋರಾಟ ಹಾದಿ ತಪ್ಪಿಸಲು ಸೊರಕೆಯರಿಂದ ನಾಟಕ – ಶ್ರೀಕಾಂತ ನಾಯಕ್


ಕಾಪು: ಪಡುಬಿದ್ರೆ ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕದ ಬಳಿ ಟೋಲ್ ನಿರ್ಮಾಣವಾಗುವ ಲಕ್ಷಣದಿಂದ ಸಿಡಿದೆದ್ದ ಕಾಪು ಹಾಗೂ ಕಾರ್ಕಳ ಕ್ಷೇತ್ರದ ಜನತೆ ಶ್ರೀ ಸುಹಾಸ್ ಹೆಗ್ಡೆ ಇವರ ನೇತ್ರತ್ವದಲ್ಲಿ ಸಂಘಟಿತರಾಗಿ‌ ಹೋರಾಟ ಮಾಡಿ ಗ್ರಾಮ ಗ್ರಾಮಗಳಲ್ಲಿ ಜನಬೆಂಬಲ ಪಡೆದು ಕಾರ್ಯೋನ್ಮುಖರಾಗಿದ್ದು ಇದರ ಕಾರ್ಯವೈಖರಿಗೆ ರಾಜ್ಯ ಸರಕಾರವೇ ಬೆಚ್ಚಿಬಿದ್ದಿದ್ದು ಈ ಟೋಲ್ ಬಹುತೇಕ ರದ್ದುಗೊಳ್ಳುವ ಹಂತದಲ್ಲಿರುವಾಗ ಮಾನ್ಯ ಕಾಪುವಿನ ಮಾಜಿ ಸಚಿವರು, ಪಸ್ತುತ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರೂ ಆಗಿರುವ ಎಲ್ಲದರಲ್ಲೂ ರಾಜಕಾರಣ ಬೆಸರಸುವ ಕೆಟ್ಟ ಚಟ ಹೊಂದಿರುವ  ಸೊರಕೆಯವರು  ತಮ್ಮ ರಾಜಕೀಯ ಬೇಳೆ ಬೇಯಿಸಲು  ಪ್ರಾರಂಭಿಸಿ ಇಂದು ಅದರ ವಿರುಧ್ದ ಕಾಂಗ್ರೆಸ್ ನೇತ್ರತ್ವದಲ್ಲಿ ಬ್ರಹತ್ ಪ್ರತಿಭಟನೆ ಎನ್ನುವ ನಾಟಕ ಆರಂಭಿಸಿದ್ದಾರೆ. ಸೊರಕೆಯವರೇ ಯಾರ ವಿರುಧ್ಧ ನಿಮ್ಮ ಪ್ರತಿಭಟನೆ ಎಂದು ಮೊದಲು ಸ್ಪಷ್ಟಪಡಿಸಿ. ಮೊನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ನಿಮಗೆ ಹೇಳದೇ ಟೋಲ್ ನಡೆಸಲು ಉದ್ದೇಶಿಸಿದ ಸ್ಥಳಕ್ಕೆ ಭೇಟಿ‌ನೀಡಿ ಪರಿಶೀಲನೆ ಮಾಡಿದ ಸಿಟ್ಟಿಗೆ ಅವರ ವಿರುಧ್ಧವೋ? ಅದು ರಾಜ್ಯ ಹೆದ್ದಾರಿ, ನಿಮ್ಮದೇ ಪಕ್ಷದ ಸರಕಾರ ಇದೆ, ನಿಮ್ಮ ಪಕ್ಷದ ಸರಕಾರದ ವಿರುಧ್ಧವೋ? ನಿಮ್ಮದೇ ಪಕ್ಷದ ಸಚಿವರ ವಿರುಧ್ದವೋ?

ಟೋಲ್ ವಿರೋಧಿ ಸಂಘಟನೆ ರಚನೆ ಮಾಡುವಾಗ ನಮ್ಮ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯವರು ರಾಜಕಾರಣ ಮರೆತು ಈ ಹೋರಾಟ ಪಕ್ಷಾತೀತವಾಗಿ‌ ನಡೆಯಲಿ ಎಂದು ಸ್ವಪ್ರತಿಷ್ಠೆಗಾಗಿ ಮೇಲಾಟ ಮಾಡದೇ ಜನಹಿತವೇ ಮುಖ್ಯ ಹೊರತು ರಾಜಕಾರಣವಲ್ಲ ಎಂಬುದನ್ನು ಸಾರಿದವರು. ಇನ್ನು ಇದರ ಗೌರವಾಧ್ಯಕ್ಷರುಗಳನ್ನಾಗಿ ಸೊರಕೆಯವರನ್ನೂ ಸೇರಿಸಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ನೇತ್ರತ್ವದಲ್ಲಿ ಕಾಪು ಹಾಗೂ ಕಾರ್ಕಳ ಎರಡೂ ಕ್ಷೇತ್ರಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಪಕ್ಷಾತೀತವಾಗಿ ಸಭೆಗಳನ್ನು ನಡೆಸಿ ಜನಬೆಂಬಲ ಪಡೆಯುತ್ತಿದೆ. ಹೋರಾಟ ಅಂತಿಮ ಘಟ್ಟದಲ್ಲಿದ್ದು ಸರಕಾರ ಈ ಸಮಿತಿಯ ಹೋರಾಟಕ್ಕೆ ಅನಿವಾರ್ಯವಾಗಿ ಮಣಿಯಲೇ ಬೇಕಾದ ಪರಿಸ್ಥಿತಿಗೆ ಬಂದಾಗ ಸೊರಕೆಯವರು ತಾನು ಇದನ್ನು ರದ್ದುಗೊಳಿಸಿದ್ದು ಎನ್ನುವ ನಾಟಕವಾಡಲು ಈ ಪ್ರತಿಭಟನೆ ಹೋರಾಟದ ನಾಟಕ ಆಡುತ್ತಿದ್ದಾರೆ‌ ನಿಜವಾಗಿಯೂ ನಿಮಗೆ ಜನಪರ ಕಾಳಜಿ ಇದ್ದಲ್ಲಿ ಈ ರೀತಿಯ ಕುತಂತ್ರ ರಾಜಕಾರಣ ಮಾಡುತ್ತಿರಲಿಲ್ಲ. ನೇರವಾಗಿ ಹೋರಾಟ ಸಮಿತಿಯವರನ್ನು ಬೆಂಗಳೂರಿಗೆ ಬರಹೇಳಿ ನಿಮ್ಮ ಪಕ್ಷದ ಸರಕಾರದ ಸಂಬಂಧಿತರಲ್ಲಿ ಮಾತುಕತೆ ಮಾಡಿಸಿ ಪರಿಹಾರ ಮಾಡಿಸಬಹುದಿತ್ತು. ನೀವು ನಿಮ್ಮ ಪಕ್ಷದಲ್ಲಿ ಗೌರವಾನ್ವಿತ ಸ್ಥಾನದಲ್ಲಿ ಇರುವವರು? ನಿಮ್ಮ ಮಾತಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ? ಬೆಲೆ ಇದ್ದರೆ ಈ‌ ಪ್ರತಿಭಟನೆ ನಾಟಕ ಯಾಕೆ? ಸಾರ್ವಜನಿಕರಿಗೆ ನಿಮ್ಮ ನಾಟಕ ತಿಳಿದಿದೆ ಸೊರಕೆಯವರೇ. ಈಗಾಗಲೇ ಟೋಲ್ ವಿರುಧ್ಧದ ಹೋರಾಟ ಸಮಿತಿಯ ಅಬ್ಬರಕ್ಕೆ ಟೋಲ್ ರದ್ದಾಗುವ ಅಂತಿಮ ಹಂತಕ್ಕೆ ಬಂದಿದ್ದು ಇಂದು ಹೋರಾಟ ಮಾಡಿ ನಾಳೆ ಬೆಂಗಳೂರಿಗೆ ತೆರಳಿ ಮನವಿ ನೀಡಿ ಸ್ವಲ್ಪದಿನದ ನಂತರ ನಾವೇ ರದ್ದು ಮಾಡಿದ್ದು ಅಂತ ಹೇಳಲಿರುವ ನಿಮ್ಮ ನಾಟಕ ಜನಸಾಮಾನ್ಯರಿಗೆ ಅರ್ಥವಾಗದು ಎಂದು ನೀವು ಭಾವಿಸಿದರೆ ಅದು ಮೂರ್ಖತನ. ಪಕ್ಷಾತೀತವಾಗಿ ಅಷ್ಟೊಂದು ವ್ವವಸ್ಥಿತವಾಗಿ ನಡೆಯುತ್ತಿದ್ದ ಹೋರಾಟಕ್ಕೆ ನಿಮ್ಮ ರಾಜಕೀಯ ಲೇಪದ ಅಗತ್ಯವಿತ್ತೇ? ಬಹಳಷ್ಟು ಜನ ಕಾಂಗ್ರೆಸ್ ಪದಾಧಿಕಾರಿಗಳು ಈ ಸಮಿತಿಯ ಸಭೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವಾಗ ನಿಮಗೆ ಮಾತ್ರ ಏಕೆ ಈ ರಾಜಕೀಯ ತೆವಲು? ಅದರಲ್ಲೂ ಹೋರಾಟ ಸಮಿತಿ 24 ನೇ ತಾರೀಕಿಗೆ ಪ್ರತಿಭಟನೆಗೆ ಕರೆ ಕೊಟ್ಟ ನಂತರ ಅದರ ಮಧ್ಯದಲ್ಲಿ ತುರಾತುರಿಯಲ್ಲಿ ದಿನಾಂಕ ನಿಗದಿ ಮಾಡಿರುವಿರಿ. ದಯವಿಟ್ಟು ನಿಮ್ಮ ಈ ದೊಂಬರಾಟ ನಿಲ್ಲಿಸಿ. ಪ್ರಚಾರ ಸಮಿತಿಯ ಅಧ್ಯಕ್ಷರು ಸ್ವಯಂ ವೇದಿಕೆ ನಿರ್ಮಾಣ ಮಾಡಿ ಪ್ರಚಾರ ಗಿಟ್ಟಿಸುವುದಲ್ಲ.  ಸಾಧ್ಯವಾದರೆ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಸೇರಿಕೊಂಡು ಜನರ ವಿಶ್ವಾಸ ಗಳಿಸಿ ಎಂದು ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಷರೂ ಪ್ರಸ್ತುತ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ಶ್ರೀಕಾಂತ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

Design a site like this with WordPress.com
Get started