ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ : ಮಟಪಾಡಿ ವಿಜಯ ಬಾಲನಿಕೇತನದಲ್ಲಿ ಪ್ರಧಾನಿ ಮೋದಿ ಜನ್ಮ ದಿನಾಚರಣೆ

ಉಡುಪಿ: ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 74ನೇ ಹುಟ್ಟು ಹಬ್ಬವನ್ನು ಬ್ರಹ್ಮಾವರ ಮಟಪಾಡಿಯ ವಿಜಯ ಬಾಲನಿಕೇತನದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಸೆಲ್ ಡಿಸೋಜ, ಮೋರ್ಚಾದ ಮಾಜಿ ರಾಜ್ಯ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಜಿಲ್ಲಾ ಉಪಾಧ್ಯಕ್ಷೆ ಸುನಿತಾ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಶೇಕ್ ಆಸೀಫ್, ಮೋರ್ಚಾದ ಬೈಂದೂರು ಮಂಡಲ ಅಧ್ಯಕ್ಷ ಅಂತೋನಿ ಡಿಸೋಜ, ವಿಜಯ ಬಾಲ ನಿಕೇತನದ ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಮಟಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಪೂಜಾರಿ ಉಪಸ್ಥಿತರಿದ್ದರು.

ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ : ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ, ರಾಜ್ಯ ಮಹಿಳಾ ನಿಲಯಕ್ಕೆ ಕೊಡುಗೆ




ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾದ ವತಿಯಿಂದ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಡುಪಿ – ನಿಟ್ಟೂರು ರಾಜ್ಯ ಮಹಿಳಾ ನಿಲಯಕ್ಕೆ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಮ್ಮ ಪೋಷಕರ ಸ್ಮರಣಾರ್ಥ ಮಹಿಳಾ ನಿಲಯಕ್ಕೆ ವಾಶಿಂಗ್ ಮೆಷೀನ್ ಹಸ್ತಾಂತರಿಸಿದರು.

ಬಳಿಕ ಉಡುಪಿ ಮೂಡುಸಗ್ರಿಯ ಅಂಗನವಾಡಿ ಕೇಂದ್ರ ಮತ್ತು ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಉಪಾಧ್ಯಕ್ಷೆ ದಯಾಶಿನಿ, ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ನಗರಸಭಾ ಸದಸ್ಯೆ ಭಾರತಿ ಪ್ರಶಾಂತ್, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸರೋಜಾ ಶೆಣೈ, ಕಾರ್ಯದರ್ಶಿ ಶಾಂತಿ ಮನೋಜ್, ಪ್ರಮುಖರಾದ ಮಾಯಾ ಕಾಮತ್,ಕಿಶೋರ್ ಕರಂಬಳ್ಳಿ,  ಸುಜಾಲ ಸತೀಶ್, ಸುಧಾ ಪೈ, ಪೂರ್ಣಿಮಾ ರತ್ನಾಕರ್, ಸುಮಾ ನಾಯ್ಕ್, ದೀಪಾ ಪೈ, ಪ್ರೀತಿ,  ಪ್ರಭಾ ರಾವ್, ಆಶಾ ಹೆಗಡೆ, ಸುಗುಣ ನಾಯ್ಕ್, ಚಂದ್ರಿಕಾ, ಪ್ರಜ್ಞಾ ಶೆಟ್ಟಿ, ಯಶೋಧ, ಗೀತಾ ರವಿ ಶೇಟ್ ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಹಿಳಾ ಮೋರ್ಚಾದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ : ಭಜನಾ ಮಂಡಳಿಗಳಿಂದ ‘ಸಾಧಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನ



ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರ್ಷದಂತೆ ಈ ಬಾರಿ ಸೆ.22ರಿಂದ 29ರ ವರೆಗೆ ‘ರಾಜ್ಯ ಮಟ್ಟದ ಭಜನಾ ಕಮ್ಮಟ’ ನಡೆಯಲಿದೆ. ಸೆ.29ರಂದು ನಡೆಯಲಿರುವ ‘ಭಜನೋತ್ಸವ’ ಹಾಗೂ ‘ಭಜನಾ ಕಮ್ಮಟದ ಸಮಾರೋಪ’ ಸಮಾರಂಭದಲ್ಲಿ ತಾಲೂಕಿನ ಆಯ್ದ ಒಂದು ಉತ್ತಮ ಭಜನಾ ಮಂಡಳಿಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಂದ ‘ಸಾಧಕ ಪ್ರಶಸ್ತಿ’ಯನ್ನು ಸ್ವೀಕರಿಸುವ ಸದವಕಾಶವಿದೆ.

ಈ ನಿಟ್ಟಿನಲ್ಲಿ ಉಡುಪಿ ತಾಲೂಕಿನ ಆಸಕ್ತ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ನಿಗದಿತ ನಮೂನೆಯಲ್ಲಿ ತಮ್ಮ ಭಜನಾ ಮಂಡಳಿಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸೆ.14ರ ಸಂಜೆಯೊಳಗೆ ತಲುಪುವಂತೆ ಭಜನಾ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಅಥವಾ ವಲಯಗಳ ಸಂಯೋಜಕರು/ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿಗಳು/ವಲಯ ಮೇಲ್ವಿಚಾರಕರಲ್ಲಿ ನೀಡಬೇಕಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳೆ ತೊಡುವುದು ದೌರ್ಬಲ್ಯದ ಸಂಕೇತವೆಂಬಂತೆ ಬಿಂಬಿಸಿ ಹಿಂದೂ ಮಹಿಳೆಯರನ್ನು ಅವಮಾನಿಸಿರುವ ವೆರೋನಿಕಾ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ



ಅತ್ತ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಸ್ವದೇಶವನ್ನು ತೆಗಳುತ್ತಾ ಭಾರತದಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲ ಎಂದು ಬೊಬ್ಬಿರಿದರೆ, ಉಡುಪಿಯಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ‘ಬಿಜೆಪಿ ಪುಂಡಾಟ ಕಣ್ಣು ಮುಚ್ಚಿ ಒಪ್ಪಲು ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ತೊಟ್ಟು ಕುಳಿತಿಲ್ಲ’ ಎನ್ನುವ ಮೂಲಕ ಬಳೆ ತೊಡುವುದನ್ನು ದೌರ್ಬಲ್ಯದ ಸಂಕೇತವೆಂಬಂತೆ ಬಿಂಬಿಸಿ ಹಿಂದೂ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಪ್ರಾಂಶುಪಾಲರಿಗೆ ಒಲಿದು ಬಂದಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಓಲೈಕೆ ರಾಜಕಾರಣಕ್ಕಾಗಿ ತಡೆ ಹಿಡಿದಿರುವುದು ನಾಚಿಕೆಗೇಡು. ಈ ಅನ್ಯಾಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ.

ರಾಜ್ಯಪಾಲರು ಕುರಿತು ಅವಹೇಳನಕಾರಿ ದೇಶ ವಿರೋಧಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಪ್ರತಿಭಟನೆಯ ನೆಪದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ತರಾತುರಿಯಲ್ಲಿ ಎಫ್ಐಆರ್ ದಾಖಲಿಸಿರುವ ಮರ್ಮವೇನು? ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಏಕ ವಚನದಲ್ಲಿ ಸಂಭೋಧಿಸಿ ವ್ಯಂಗ್ಯವಾಡಿರುವುದು ಅವಮಾನವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಗೊಂದಲದ ಗೂಡಾಗಿರುವ ಕಾಂಗ್ರೆಸ್ಸಿನ ದಾರುಣ ಸ್ಥಿತಿಯಿಂದ ಹತಾಶರಾಗಿರುವ ವೆರೋನಿಕಾ ಪಕ್ಷದಲ್ಲಿ ಮೂಲೆಗುಂಪಾಗುವ ಭಯದಿಂದ ಕೇವಲ ಪ್ರಚಾರದ ತೆವಲಿಗಾಗಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ಈ ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿಯ ಕೆಲವು ಕಾಂಗ್ರೆಸ್ ಮುಖಂಡರು ಬಲವಂತದ ಬಂದ್ ನಡೆಸುವ ನಿಟ್ಟಿನಲ್ಲಿ ಪುಂಡಾಟಿಕೆ ತೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಲಾಠಿ ಏಟಿನ ರುಚಿ ಅನುಭವಿಸಿರುವುದನ್ನು ಮೊದಲು ನೆನಪಿಸಿಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.

ತಂದೆ-ತಾಯಿಯಷ್ಟೇ ಗೌರವಕ್ಕೆ ಪಾತ್ರರಾಗಿರುವ ಶಿಕ್ಷಕರಿಗೆ ಅಪಮಾನ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯನ್ನು ಪುಂಡಾಟ ಎನ್ನುವ ಮೂಲಕ ವೆರೋನಿಕಾ ಅವರ ಪ್ರಜಾಪ್ರಭುತ್ವ ವಿರೋಧಿ ಮಾನಸಿಕತೆ ಬಟ್ಟಾಬಯಲಾಗಿದೆ. ಹಿಂದೂ ಧರ್ಮದಲ್ಲಿ ಮಹಿಳೆಯರ ಪಾಲಿಗೆ ತಿಲಕ ಮತ್ತು ಬಳೆಗೆ ವಿಶಿಷ್ಟ ಗೌರವವಿದ್ದು, ರಾಜಕೀಯ ಹೇಳಿಕೆಗಳಿಗೆ ಬಳೆಯನ್ನು ದೌರ್ಬಲ್ಯದ ಸಂಕೇತವೆಂದು ಬಿಂಬಿಸಿ ಮಹಿಳೆಯರಿಗೆ ಅಪಮಾನ ಮಾಡಿರುವ ವೆರೋನಿಕಾ ಉಡುಪಿ ಶಾಸಕರ ವಿರುದ್ಧ ಹೇಳಿಕೆ ನೀಡುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪೇಚಾಟ ನಡೆಸುತ್ತಿರುವುದು ಶೋಚನೀಯ.

ಹಿಂದುತ್ವ, ಅಭಿವೃದ್ದಿ, ರಾಷ್ಟ್ರೀಯತೆ ವಿಚಾರದಲ್ಲಿ ಎಂದಿಗೂ ರಾಜಿಯಾಗದ ವ್ಯಕ್ತಿತ್ವದೊಂದಿಗೆ ಹೊಂದಾಣಿಕೆ ರಾಜಕೀಯಕ್ಕೆ ಮಾರುಹೋಗದೆ ಮತಾಂತರ ಚಟುವಟಿಕೆಗಳ ವಿರುದ್ಧ ಗಟ್ಟಿ ನಿಲುವು ಹೊಂದಿರುವ ಉಡುಪಿ ಶಾಸಕರ ಕಾರ್ಯವೈಖರಿ ವೆರೋನಿಕಾ ಅವರಂತಹ ಹಲವಾರು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ವೆರೋನಿಕಾ ಅವರು ಇಂತಹ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡುವ ಮೊದಲು ನೂರು ಬಾರಿ ಯೋಚಿಸುವುದು ಉತ್ತಮ.

ರಾಜ್ಯ ಸರಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನೊಂದ ಶಿಕ್ಷಕರಿಗೆ ನ್ಯಾಯ ಒದಗಿಸುವ ಜೊತೆಗೆ ಉಡುಪಿ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂಪಡೆದು ಆಗಿರುವ ಪ್ರಮಾದವನ್ನು ಸರಿಪಡಿಸಬೇಕು. ತಪ್ಪಿದಲ್ಲಿ ಕಾಂಗ್ರೆಸ್ಸಿನ ದಮನ ನೀತಿಯನ್ನು ಖಂಡಿಸಿ ಬಿಜೆಪಿಯ ಹೋರಾಟದ ಜೊತೆಗೆ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಕೈಗೊಂಬೆಯಾಗಿದೆ, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ : ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ



ಉಡುಪಿ: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರ ಕಛೇರಿಗೆ ನುಗ್ಗುತ್ತೇವೆ’ ಎಂಬ ಪ್ರಚೋದನಕಾರಿ, ದೇಶ ವಿರೋಧಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಸಿದ್ದರೂ ಪೊಲೀಸ್ ಇಲಾಖೆ ಐವನ್ ಡಿಸೋಜ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸದೇ ಇರುವುದು ಓಲೈಕೆ ರಾಜಕಾರಣದ ಪರಮಾವಧಿಯಾಗಿದೆ. ಜಿಲ್ಲೆಯ ಶಿಕ್ಷಕರಿಗಾದ ಅನ್ಯಾಯವನ್ನು ವಿರೋಧಿಸಿ ನ್ಯಾಯಯುತ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿರುವುದು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಧೋರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಕೈಗೊಂಬೆಯಾಗಿದೆ, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿರುವ ಕಾಂಗ್ರೆಸ್ ನಾಯಕರು ಸಂವಿಧಾನ ದತ್ತವಾದ ಹುದ್ದೆಯಲ್ಲಿರುವ ರಾಜ್ಯಪಾಲರು ಹಾಗೂ ದೇಶದ ಪ್ರಧಾನಿಯವರಿಗೆ ತುಚ್ಚ ಹೇಳಿಕೆಗಳ ಮೂಲಕ ಅವಮಾನಿಸಿರುವುದು ಸಂವಿಧಾನಕ್ಕೆ ಗೈದ ಘೋರ ಅಪಚಾರವಲ್ಲವೇ? ಹಗರಣಗಳ ಕೂಪದಲ್ಲಿ ಸಿಲುಕಿರುವ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಬಿಜೆಪಿ ವಿರುದ್ಧ ಇಂತಹ ಷಡ್ಯಂತ್ರಗಳಲ್ಲಿ ತೊಡಗಿರುವುದು ಖಂಡನೀಯ.

ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಬೇಲ್ ಪಡೆದು ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ದೇಶಭಕ್ತ ಸಮಾಜ ಸೇವಾ ಸಂಘಟನೆ ಆರ್.ಎಸ್.ಎಸ್ ಮತ್ತು ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯನ್ನು ಮೂದಲಿಸುವ ಜೊತೆಗೆ ಶತ್ರು ರಾಷ್ಟ್ರವನ್ನು ಹೊಗಳುತ್ತಾ ಭಾರತವನ್ನು ತೆಗಳುವ ಕೀಳು ಮಟ್ಟಕ್ಕೆ ಇಳಿದಿರುವುದು ದೇಶದ ಬಗ್ಗೆ ಕಾಂಗ್ರೆಸಿಗರಿಗೆ ಇರುವ ಕೀಳರಿಮೆಯನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ರಸ್ತೆಗಳಿಗೆ ತೇಪೆ ಹಾಕಲಿಕ್ಕೂ ಹಣವಿಲ್ಲದ ದುಸ್ಥಿತಿಯಲ್ಲಿರುವ ರಾಜ್ಯ ಸರಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೂ ಚಿಕ್ಕಾಸು ಬಿಡುಗಡೆ ಮಾಡದೆ ಕೇವಲ ಓಲೈಕೆ ರಾಜಕಾರಣದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಅಭಿವೃದ್ಧಿಗೆ ತಿಲಾಂಜಲಿ ನೀಡಿರುವ ರಾಜ್ಯ ಸರಕಾರದ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ನಡೆಸುತ್ತಾ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡರ ದಯನೀಯ ಸ್ಥಿತಿ ಹಾಸ್ಯಾಸ್ಪದವೆನಿಸಿದೆ.

ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಖ್ಯಾತಿಗೆ ಮಸಿ ಬಳಿಯುವ ದುರುದ್ದೇಶದಿಂದ ಹಿಜಾಬ್ ಪ್ರಕರಣದ ನೆಪವನ್ನು ಮುಂದಿಟ್ಟುಕೊಂಡು, ಕುಂದಾಪುರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಣೆಯಾಗಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದಿರುವ ಸರಕಾರ ಆಗಿರುವ ಪ್ರಮಾದವನ್ನು ತಕ್ಷಣ ಸರಿಪಡಿಸಬೇಕು. ಅನ್ಯಾಯದ ವಿರುದ್ಧ ಬಿಜೆಪಿಯ ಜನ ಪರ ಹೋರಾಟ ಎಂದಿಗೂ ನಿಲ್ಲದು. ಜನತೆ ಕಾಂಗ್ರೆಸ್ಸಿನ ಜನವಿರೋಧಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಶಿಕ್ಷಕ ವಿರೋಧಿ ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ಘೋಷಣೆಯಾದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ತಡೆಹಿಡಿದ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಉಡುಪಿ ಶಾಸಕರ ವಿರುದ್ಧ ಪ್ರಕರಣ ದಾಖಲು..! :ಉಡುಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಖಂಡನೆ

*”ಬಾಂಗ್ಲಾ ಪ್ರಧಾನಿಗೆ ಬಂದ ಪರಿಸ್ಥಿತಿ ರಾಜ್ಯಪಾಲರಿಗೂ ಬರಬಹುದು”ಎಂದ ಐವನ್ ಡಿ’ಸೋಜಾ ವಿರುದ್ಧ ಯಾವುದೇ ಕ್ರಮವಿಲ್ಲ…! ಘೋಷಣೆಯಾದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ತಡೆಹಿಡಿದ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಉಡುಪಿ ಶಾಸಕರ ವಿರುದ್ಧ ಪ್ರಕರಣ ದಾಖಲು..! ಪೋಲೀಸ್ ಇಲಾಖೆ ಒಂದು ಪಕ್ಷದ ಕೈಗೊಂಬೆಯಾಗಿದೆ!! – ಶಶಾಂಕ್ ಶಿವತ್ತಾಯ ಉಡುಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಖಂಡನೆ*

ಕುಂದಾಪುರದ ಪ್ರಥಮ ದರ್ಜೆ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ  ಬಿ.ಜಿ. ರಾಮಕೃಷ್ಣ ಅವರಿಗೆ ಘೋಷಿಸಲಾಗಿದ್ದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಕಾಣದ ಕೈಗಳ ಒತ್ತಡಕ್ಕೆ ಮಣಿದ ಸರ್ಕಾರ ಘೋಷಿಸಿರುವ ಪ್ರಶಸ್ತಿ ತಡೆಹಿಡಿದ ಸರ್ಕಾರದ ಧೋರಣೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಣಿಪಾಲದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಸಹಿತ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹಾಗೂ ಇತರ‌ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಡುಪಿ ಜಿಲ್ಲಾ ಯುವ ಮೋರ್ಚಾ ಬಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3 ವಾರಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ರಾಜ್ಯಪಾಲರು ಹೊರಡಿಸಿರುವ ಪ್ರಾಸಿಕ್ಯೂಷನ್ ಆದೇಶವನ್ನು ವಿರೋಧಿಸುವ ಸಂಧರ್ಭದಲ್ಲಿ ರಾಜ್ಯಪಾಲರು ತಮ್ಮ ಆದೇಶ ಹಿಂಪಡೆಯದೆ ಇದ್ದಲ್ಲಿ ಬಾಂಗ್ಲಾ ದೇಶದಲ್ಲಿ ಬಾಂಗ್ಲಾ ಪ್ರಧಾನಿಗೆ ಬಂದ ಪರಿಸ್ಥಿತಿ ರಾಜ್ಯಪಾಲರಿಗೂ ಬರಬಹುದು ಎನ್ನುವಂತಹ ದೇಶದ ಆಂತರಿಕ ಭದ್ರತೆಯನ್ನು ದುರ್ಭಲಗೊಳಿಸುವಂತಹ ಹಾಗೂ ದೇಶವಿರೋಧಿ ಮಾನಸಿಕತೆಯ ಜನರನ್ನು ಉದ್ರೇಕಿಸುವಂತಹ ತುಚ್ಚ ಹೇಳಿಕೆ ನೀಡಿದ್ದರು. ಈ ಬಗ್ಗೆ ಉಡುಪಿ ಜಿಲ್ಲಾ ಯುವಮೋರ್ಚಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಉಡುಪಿ ಜಿಲ್ಲೆಯಾದ್ಯಂತ ಹಲವಾರು ದೂರುಗಳು ದಾಖಲುಗೊಂಡರೂ ಈವರೆಗೆ ಅವರ ವಿರುದ್ಧ ಯಾವುದೇ ಠಾಣೆಯಲ್ಲಿಯೂ ಒಂದೇ ಒಂದು FIR ದಾಖಲಾಗಿಲ್ಲ. ಹಾಗಾದರೆ ರಾಜ್ಯದ ಪೊಲೀಸ್ ಇಲಾಖೆ ಒಂದು ಪಕ್ಷದ ಕೈಗೊಂಬೆಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಈ ಹಿಂದೆ ರಾಜ್ಯದಾದ್ಯಂತ ಸುದ್ದಿ ಮಾಡಿದ್ದ ಹಿಜಾಬ್ ಗೊಂದಲದ ಸಮಯದಲ್ಲಿ ಕಾಲೇಜಿನಲ್ಲಿ ಸರ್ಕಾರದ ಆದೇಶದಂತೆ ಕಾನೂನು ಪಾಲನೆ ಮಾಡಿದ್ದರು ಎನ್ನುವ ಕಾರಣಕ್ಕೆ ಘೋಷಿಸಿದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ತಡೆ ಹಿಡಿದಿರುವುದು ಅತ್ಯಂತ ಖೇದಕರ. ಈ ಬಗ್ಗೆ ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸಿದವರ ಮೇಲೆಯೇ ಕೇಸು ದಾಖಲಿಸಿರುವುದು ನಿಜವಾದ ಸಂವಿಧಾನದ ಕಗ್ಗೊಲೆಯಾಗಿದೆ. ಎಷ್ಟೇ ಕೇಸುಗಳನ್ನು ದಾಖಲಿಸಿದರೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಶಿಕ್ಷಕರ ಪರ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ಸಿನ ಶಿಕ್ಷಕ ವಿರೋಧಿ ಮಾನಸಿಕತೆ ಬಯಲಾಗಿದೆ : ದಿನೇಶ್ ಅಮೀನ್

ಉಡುಪಿ ಜಿಲ್ಲೆಯ ಅರ್ಹ ಶಿಕ್ಷಕರಿಗೆ ತಮ್ಮದೇ ಸರಕಾರ ಘೋಷಿಸಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಿಜಾಬ್ ಬೆಂಬಲಿತ ಮತಾಂಧ ಶಕ್ತಿಗಳ ಓಲೈಕೆಗಾಗಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ನಿಲುವನ್ನು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಿಕ್ಷಕ ವಿರೋಧಿ ಮಾನಸಿಕತೆ ಬಯಲಾಗಿದೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಹಿಜಾಬ್ ಸಹಿತ ಹಲವು ವಿವಾದಗಳ ಮುಂದುವರಿದ ಭಾಗವಾಗಿ ಶಿಕ್ಷಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊಸ ಹುನ್ನಾರ ನಡೆಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಶಿಕ್ಷಕರ ಬೆಂಬಲಕ್ಕೆ ನಿಂತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷಕರ ಮೇಲೆ ಎಷ್ಟು ಗೌರವವಿದೆ ಎಂಬುದನ್ನು ಸಾಬೀತುಪಡಿಸಿದೆ.

ಮಲ್ಪೆ, ಆದಿಉಡುಪಿ ಮತ್ತು ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳ ಬಗ್ಗೆ ಶಾಸಕರು ಹಾಗೂ ಸಂಸದರು ನಿರಂತರ ಸಭೆಗಳನ್ನು ನಡೆಸಿ, ಕಾಮಗಾರಿ ಪ್ರಗತಿಯಲ್ಲಿದ್ದು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ವೃಥಾ ಆರೋಪ ಮಾಡುವ ಮುನ್ನ ರಾಜ್ಯವನ್ನು ಆರ್ಥಿಕ ದಿವಾಳಿತನಕ್ಕೆ ದೂಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ತಿಂಗಳ ಸಂಬಳ ಬಾಕಿ ಇಟ್ಟಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಲಿ.

ಕಳೆದ ಸುಮಾರು 15 ತಿಂಗಳಿನಲ್ಲಿ ಉಡುಪಿ ಜಿಲ್ಲೆಗೆ ನೀಡಿದ ಅನುದಾನದ ಬಗ್ಗೆ ಕಾಂಗ್ರೆಸ್ ಪಕ್ಷ ಮಾಹಿತಿಯನ್ನು ಜನರ ಮುಂದಿಡಲಿ. ಕೇವಲ ಒಂದು ಕೆಡಿಪಿ ಸಭೆ ನಡೆಸಿರುವ ತಮ್ಮ ಸಚಿವರನ್ನು ಪ್ರಶ್ನಿಸದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ತಮ್ಮದೇ ಪಕ್ಷದ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗ್ಯಾಂಗ್ ವಾರ್ ರೀತಿ ಹೊಡೆದಾಡಿಕೊಂಡರೂ ಮೌನವಾಗಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಾಸಕರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ.

ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳು ಬಿಜೆಪಿ ಶಾಸಕರನ್ನು ಹೊಂದಿರುವ ಏಕೈಕ ಕಾರಣಕ್ಕಾಗಿ ಜಿಲ್ಲೆಯ ಅಭಿವೃಧ್ದಿಯನ್ನು ಕಾಂಗ್ರೆಸ್ ಸರ್ಕಾರ ನಿರಂತರ ಕಡೆಗಣಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ರಾಷ್ಟೀಯವಾದಿ ಚಿಂತನೆಯ ಮೂಲಕ ಬೆಳೆದು ಬಂದಿದ್ದು ಕಾಂಗ್ರೆಸ್ ಪಕ್ಷ ಇಂತಹ ನೂರು ಕೇಸುಗಳನ್ನು ದಾಖಲಿಸಿದರೂ ನ್ಯಾಯದ ಪರ ಶಿಕ್ಷಕರ ಜೊತೆ ನಿಲ್ಲಲು ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕ ಪ್ರಶಸ್ತಿ ತಡೆ ಪ್ರಕರಣ: ಶಾಸಕರ ಸಹಿತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು ಖಂಡನೀಯ





ಉಡುಪಿ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಡೆಹಿಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಮಣಿಪಾಲದಲ್ಲಿ ನಡೆದ ಪ್ರತಿಭಟನೆ ಸಂಬಂಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಂ. ಸುವರ್ಣ ಖಂಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುವುದು ಹಕ್ಕು. ಸರ್ಕಾರ ಸಂವಿಧಾನ ದತ್ತ ಹಕ್ಕನ್ನು ‌ಮೊಟಕುಗೊಳಿಸಲು ಯತ್ನಿಸುತ್ತಿದೆ. ಸರ್ಕಾರವೇ ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಶಿಕ್ಷಕರಿಗಾದ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಪ್ರತಿಭಟಿಸಿರುವ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ವಾಮ ಮಾರ್ಗದಿಂದ ಪ್ರತಿಭಟನಾಕಾರರನ್ನು ಬೆದರಿಸುವ ಹತಾಶ ಯತ್ನದಲ್ಲಿ ತೊಡಗಿದ್ದು ಅದು ಸಫಲವಾಗದು ಎಂದು ಗೀತಾಂಜಲಿ ಸುವರ್ಣ ಎಚ್ಚರಿಸಿದ್ದಾರೆ.

ಹಗರಣಗಳ ಸರಮಾಲೆ ಹಾಗೂ ದ್ವೇಷ ರಾಜಕಾರಣದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತೀವ್ರ ಮಳೆಯಿಂದಾಗಿ ಆಸ್ತಿಪಾಸ್ತಿ ಕಳಕೊಂಡ ಸಂತ್ರಸ್ತರತ್ತ ಮುಖ ಮಾಡದ ಸರಕಾರ ಮುಲಭೂತ ಆದ್ಯತೆಗಳ ಸಹಿತ ಅಭಿವೃದ್ಧಿಯನ್ನೂ ಕಡೆಗಣಿಸಿದೆ. ರಸ್ತೆ ದುರಸ್ತಿಗೂ ಹಣ ನೀಡದ ಸ್ಥಿತಿ ತಲುಪಿರುವಾಗ ಅನ್ಯಾಯದ ವಿರುದ್ಧ ರಸ್ತೆ ತಡೆ ಮಾಡಿದವರ ವಿರುದ್ಧ ಕೇಸು ದಾಖಲಿಸುವ ಮೂಲಕ ಸರ್ಕಾರ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಗೀತಾಂಜಲಿ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಜ ಪೂಜಾರ್ತಿ, ಬೀಡು ಮಾರ್ಗ, ಅಂಬಲಪಾಡಿ ನಿಧನ



ಅಂಬಲಪಾಡಿ ಗ್ರಾಮದ ಬೀಡು ಮಾರ್ಗ ನಿವಾಸಿ ಶ್ರೀಮತಿ ಜಲಜ ಪೂಜಾರ್ತಿ (74 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಸೆ.9) ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು ನಿಧನ



ಉಡುಪಿ: ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಹಿರಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು (81 ವರ್ಷ) ಅವರು ಇಂದು ಸೆ.8ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಹಾಬಲ ಪೂಜಾರಿ ಅವರು ಬಸ್ ಮಾಲಕರಾಗಿದ್ದು, ಉಡುಪಿಯ ಹಿರಿಯ ಬಸ್ ಏಜೆಂಟರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಬಂಧು ವರ್ಗ ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರವು ನಾಳೆ ಸೆ.9ರಂದು ಬೆಳಿಗ್ಗೆ 10.00 ಗಂಟೆಗೆ ಅವರ ಪಂದುಬೆಟ್ಟು ನಿವಾಸದಲ್ಲಿ ನಡೆಯಲಿದೆ.

Design a site like this with WordPress.com
Get started