ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ

ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಏಪ್ರಿಲ್ 13ಕ್ಕೆ ಹೊಸ ಸಂವತ್ಸರ ಅಂದ್ರೆ ಶ್ರೀ ಪ್ಲವ ನಾಮ ಸಂವತ್ಸರದ ಆರಂಭ. ಭಾರತದಲ್ಲಿ ಹಿಂದೂಗಳಿಗೆ ಹೊಸ ವರ್ಷ ಎಂದ್ರೆ ಅದು ಯುಗಾದಿ. ಹಿಂದೂ ಪಂಚಾಂಗದಲ್ಲಿ ಹೊಸ ವರ್ಷ ಪ್ರಾರಂಭವಾಗುವುದೇ ಯುಗಾದಿಯಿಂದ. ವೈದಿಕ ಶಾಸ್ತ್ರದಲ್ಲಿ ಹೊಸ ವರ್ಷ ನಮ್ಮ ರಾಶಿಯ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗುವುದು, ನಮ್ಮ ನಕ್ಷತ್ರದ ಪ್ರಕಾರ ಈ ವರ್ಷ ನಮ್ಮ ಆದಾಯ ಹೇಗಿರಲಿದೆ ಎಂದು ಹೇಳಲಾಗಿದೆ.

ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಈ ಪ್ಲವ ನಾಮ ಸಂವತ್ಸರದಲ್ಲಿ ನಿಮ್ಮ ಆದಾಯ ಹೇಗಿರಲಿದೆ ಎಂದು ನಕ್ಷತ್ರಗಳ ಪ್ರಕಾರ ಹೇಳಲಾಗಿದೆ. ಜ್ಯೋತಿಷ್ಯದಲ್ಲಿ ಒಂದು ವರ್ಷದ ಆದಾಯವನ್ನು 3 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದನ್ನು ಕಂದಾಯ ಎಂದು ಕರೆಯಲಾಗುವುದು. ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷದ ಆದಾಯ ಸ್ಥಿತಿ ಹೇಗಿರಲಿದೆ ನೋಡಿ:

ಅಶ್ವನಿ ನಕ್ಷತ್ರ (0-2-4)

ನಿಮಗೆ ಮೊದಲ 4 ತಿಂಗಳು ಆರ್ಥಿಕವಾಗಿ ಶೂನ್ಯ. ಅಂದ್ರೆ ಆರ್ಥಿಕ ಸಂಕಷ್ಟ ಎದುರಾಗುವುದು, ನಂತರದ ನಾಲ್ಕು ತಿಂಗಳು ಸಾಮಾನ್ಯವಾಗಿದೆ, ಆರ್ಥಿಕವಾಗಿ ಹೆಚ್ಚಿನ ತೊಂದರೆಯಿಲ್ಲ, ಆದರೆ ಹಣ ಉಳಿತಾಯ ಕಷ್ವವಾಗುವುದು. ಕೊನೆಯ ನಾಲ್ಕು ತಿಂಗಳು ಉತ್ತಮವಾಗಿದೆ. ಈ ಅವಧಿಯಲ್ಲಿ ಅಧಿಕ ಆರ್ಥಿಕ ಲಾಭ ಗಳಿಸುವಿರಿ.

ಭರಣಿ ನಕ್ಷತ್ರ (3-0-2)

ನಿಮಗೆ ವರ್ಷದ ಪ್ರಾರಂಭ ಆರ್ಥಿಕವಾಗಿ ಚೆನ್ನಾಗಿದೆ. ಮೊದಲ ನಾಲ್ಕು ತಿಂಗಳು ಆರ್ಥಿಕವಾಗಿ ತೊಂದರೆಯಿಲ್ಲ, ಮಧ್ಯದ ನಾಲ್ಕು ತಿಂಗಳಿನಲ್ಲಿ ಖರ್ಚು ಹೆಚ್ಚುವುದರಿಂದ ಆರ್ಥಿಕ ಸಂಕಷ್ಟ ಎದುರುರಾಗುವುದು, ಕೊನೆಯ ನಾಲ್ಕು ತಿಂಗಳು ಸಾಮಾನ್ಯವಾಗಿರುತ್ತದೆ.

ಕೃತಿಕಾ ನಕ್ಷತ್ರ (6-1-0)

ನಮಗೆ ಮೊದಲ ನಾಲ್ಕು ತಿಂಗಳು ಬಂಪರ್‌ ಎನ್ನಬಹುದು, ಈ ಅವಧಿಯಲ್ಲಿ ಒಳ್ಳೇ ಸಂಪಾದನೆ ಮಾಡುವಿರಿ, ಈ ಸಮಯದಲ್ಲಿ ಉಳಿಯದತ್ತ ಗಮನ ನೀಡುವುದು ಮುಂದಿನ ಆರ್ಥಿಕ ಭದ್ರತೆ ದೃಷ್ಟಿಯಿಂದ ಒಳ್ಳೆಯದು. ಮಧ್ಯದ ನಾಲ್ಕು ತಿಂಗಳು ಆದಾಯ ತುಂಬಾ ಕಡಿಮೆಯಾದರೆ ಕೊನೆಯ ನಾಲ್ಕು ತಿಂಗಳು ಶೂನ್ಯ. ಮೊದಲಿಗೆ ಉತ್ತಮ ಆರ್ಥಿಕ ಸ್ಥಿತಿ ಇರುವುದರಿಂದ ಬ್ಯಾಲೆನ್ಸ್ ಮಾಡುವುದು ಒಳ್ಳೆಯದು.

ರೋಹಿಣಿ ನಕ್ಷತ್ರ (1-2-3)

ಈ ವರ್ಷ ನಿಮ್ಮ ಆದಾಯ ಏರಿಕೆಯಾಗುತ್ತಲೇ ಹೋಗುತ್ತದೆ. ಮೊದಲಿಗೆ ಅಷ್ಟೇನು ಲಾಭಕರ ಅನಿಸದಿದ್ದರೂ ಮಧ್ಯದ ನಾಲ್ಕು ತಿಂಗಳಿಗೆ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ, ಕೊನೆಯ ನಾಲ್ಕು ತಿಂಗಳಿನಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಏರಿಕೆಯಾಗುವುದು.

ಮೃಗಶಿರ ನಕ್ಷತ್ರ (4- 0 -1)

ಮೃಗಶಿರ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಉತ್ತಮವಾಗಿರುತ್ತದೆ, ಮಧ್ಯದಲ್ಲಿ ಆದಾಯ ಕಡಿಮೆಯಾಗುವುದು, ನಂತರದ ಅವಧಿಯಲ್ಲಿ ಸ್ವಲ್ಪ ಸುಧಾರಿಸುವುದು. ಮೊದಲಿಗೆ ಆರ್ಥಿಕವಾಗಿ ಉತ್ತಮವಾಗಿರುವುದರಿಂದ ಈ ಸಮಯದಲ್ಲಿ ಉಳಿದಾಯತ್ತ ಗಮನ ನೀಡಿದರೆ ಮುಂದೆ ಆರ್ಥಿಕ ತೊಂದರೆ ಎದುರಾಗಲ್ಲ.

ಆರ್ಧ್ರ ನಕ್ಷತ್ರ (7-1-4)

ಈ ನಕ್ಷತ್ರದವರು ಈ ವರ್ಷ ತುಂಬಾನೇ ಅದೃಷ್ಟವಂತರು. ಮೊದಲ ನಾಲ್ಕು ತಿಂಗಳಿನಲ್ಲಿ ನೀವು ತುಂಬಾನೇ ಸಂಪಾದನೆ

ಮಾಡುವಿರಿ, ಮಧ್ಯದಲ್ಲಿ ಆದಾಯ ಇಳಿಮುಖವಾದರೂ ನಂತರ ಮತ್ತೆ ಸುಧಾರಿಸುವುದು.ಆದ್ದರಿಂದ ಈ ವರ್ಷ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ.

ಪುನರ್ವಸು ನಕ್ಷತ್ರ (2-2-2)

ನಿಮಗೆ ವರ್ಷಪೂರ್ತಿ ಆದಾಯದಲ್ಲಿ ಏರಳಿತ ಇರುವುದಿಲ್ಲ. ದೊಡ್ಡ ಲಾಭವೂ ಇಲ್ಲ, ನಷ್ಟವೂ ಇಲ್ಲ.

ಪುಷ್ಯಾ ನಕ್ಷತ್ರ (5-0-0)

ನೀವು ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ಮೊದಲ ನಾಲ್ಕು ತಿಂಗಳು ಸಂಪಾದನೆ ತುಂಬಾ ಚೆನ್ನಾಗಿರುತ್ತದೆ, ನಂತರ ಆದಾಯ ಶೂನ್ಯವಾಗುವುದು. ಆದ್ದರಿಂದ ಮೊದಲಿಗೆ ಉಳಿದಾಯದತ್ತ ಗಮನ ಹರಿಸಿ.

ಅಶ್ಲೇಷ ನಕ್ಷತ್ರ 0-1-3

ನಿಮಗೆ ವರ್ಷದ ಪ್ರಾರಂಭದ ನಾಲ್ಕು ತಿಂಗಳು ಆದಾಯ ಶೂನ್ಯವಾಗಿದೆ, ಇದರಿಂದ ಆರ್ಥಿಕ ತೊಂದರೆ ಎದುರಾಗಬಹುದು, ಆದರೆ ನಂತರ ನಿಧಾನಕ್ಕೆ ಆದಾಯ ಬರಲಾರಂಭಿಸುತ್ತದೆ. ಕೊನೆಯ ನಾಲ್ಕು ತಿಂಗಳು ಆರ್ಥಿಕ ಸ್ಥಿತಿ ಉತ್ತಮವಾಗುವುದು.

ಮಘಾ ನಕ್ಷತ್ರ ( 3-2-1)

ನಿಮಗೆ ಆರ್ಥಿಕವಾಗಿ ದೊಡ್ಡ ತೊಂದರೆಯಿಲ್ಲದಿದ್ದರೂ ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು. ಮೊದಲ ನಾಲ್ಕು ತಿಂಗಳು ಆದಾಯ ಪರ್ವಾಗಿಲ್ಲ, ನಂತರ ಸ್ವಲ್ಪ ಕಡಿಮೆಯಾಗುವುದರಿಂದ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು.

ಪೂರ್ವ ಪಲ್ಗುಣಿ ನಕ್ಷತ್ರ 6-0-4

ನಿಮಗೆ ಮೊದಲ ನಾಲ್ಕು ತಿಂಗಳು ಆದಾಯದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದರೆ ಕೊನೆಯ ನಾಲ್ಕು ತಿಂಗಲು ಉತ್ತಮವಾಗಿದೆ, ಮಧ್ಯದ ನಾಲ್ಕು ತಿಂಗಳು ಆದಾಯ ಶೂನ್ಯವಾಗಿದೆ. ಮೊದಲಿಗೆ ಉಳಿದಾಯದತ್ತ ಗಮನ ಹರಿಸಿದರೆ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.

ಉತ್ತರ ಪಲ್ಗುಣಿ ನಕ್ಷತ್ರ (1-1-2)

ನಿಮಗೆ ಆದಾಯ ಈ ವರ್ಷ ಸಾಮಾನ್ಯವಾಗಿರಲಿದೆ…. ಮೊದಲ ಎಂಟು ತಿಂಗಳು ಆದಾಯ ಒಂದೇ ರೀತಿ ಇದ್ದು, ನಂತರ ಸ್ವಲ್ಪ ಸುಧಾರಿಸುವುದು.

ಹಸ್ತಾ ನಕ್ಷತ್ರ (4-2-0)

ಹಸ್ತಾ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಆದಾಯ ಉತ್ತಮವಾಗಿರುತ್ತದೆ, ನಂತರದ ನಾಲ್ಕು ತಿಂಗಳು ಸಾಮಾನ್ಯವಾಗಿರುತ್ತದೆ, ಕೊನೆಯ ನಾಲ್ಕು ತಿಂಗಳು ಶೂನ್ಯವಾಗುವುದು. ಆದ್ದರಿಂದ ಮೊದಲಿನಿಂದಲೇ ಉತ್ತಮ ಆರ್ಥಿಕ ಯೋಜನೆಯಿಂದಿಗೆ ಹಣವನ್ನು ಕೂಡಿಡುವುದು ಒಳ್ಳೆಯದು.

ಚಿತ್ರ ನಕ್ಷತ್ರ (7-0-3)

ನಿಮಗೆ ಈ ವರ್ಷದ ಆದಾಯದ ದೃಷ್ಟಿಯಿಂದ ಅತ್ಯತ್ತಮವಾಗಿದೆ ಎಂದೇ ಹೇಳಬಹುದು. ಮೊದಲ ನಾಲ್ಕು ತಿಂಗಳಂತೂ ಅದೃಷ್ಟ ಲಕ್ಷ್ಮಿಯೇ ನಿಮ್ಮನ್ನು ಹುಡುಕಿ ಬರುವಳು. ಈ ಅವಧಿಯಲ್ಲಿ ಸಾಕಷ್ಟು ಗಳಿಸಲು ಸಾಧ್ಯವಾಗುವುದು, ನಂತರದ ನಾಲ್ಕು ತಿಂಗಳು ಆದಾಯ ಶೂನ್ಯವಾಗಿರುತ್ತದೆ, ಆದರೆ ಚಿಂತಿಸಬೇಕಾಗಿಲ್ಲ, ಕೊನೆಯ ನಾಲ್ಕು ತಿಂಗಳು ಮತ್ತೆ ನಿಮ್ಮ ಆದಾಯ ಸ್ಥಿತಿ ಉತ್ತಮವಾಗುವುದು.

ಸ್ವಾತಿ ನಕ್ಷತ್ರ (2-1-1)

ಸ್ವಾತಿ ನಕ್ಷತ್ರದವರ ಆದಾಯ ಸ್ಥಿತಿ ಈ ವರ್ಷ ಸಾಮಾನ್ಯವಾಗಿರಲಿದೆ. ಈ ವರ್ಷ ಹಣವನ್ನು ನೋಡಿಕೊಂಡು ಖರ್ಚು ಮಾಡಿ.

ವಿಶಾಖ ನಕ್ಷತ್ರ (5-2-4)

ನಿಮಗೂ ಈ ವರ್ಷದ ಆದಾಯದ ದೃಷ್ಟಿಯಿಂದ ಯಾವುದೇ ಮೋಸವಿಲ್ಲ, ಮೊದಲ ನಾಲ್ಕು ತಿಂಗಳು ಒಳ್ಳೆಯ ಆದಾಯ ಗಳಿಸುವಿರಿ, ನಂತರ ಸಾಮಾನ್ಯವಾಗಿರುತ್ತದೆ, ವರ್ಷದ ಕೊನೆಯಲ್ಲಿ ಮತ್ತೆ ನೀವು ಉತ್ತಮವಾಗಿ ಗಳಿಸುವಿರಿ.

ಅನುರಾಧ ನಕ್ಷತ್ರ (0-0-2)

ನಿಮಗೆ ಮೊದಲ ಎಂಟು ತಿಂಗಳು ಆದಾಯ ಶೂನ್ಯವಾಗಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗುವುದು, ನಂತರ ನಾಲ್ಕು ತಿಂಗಳು ಆದಾಯ ಸಾಮಾನ್ಯವಾಗಿರುತ್ತದೆ.

ಜ್ಯೇಷ್ಠ ನಕ್ಷತ್ರ (3-1-0)

ನಿಮಗೂ ಈ ವರ್ಷ ಆದಾಯದ ದೃಷ್ಟಿಯಿಂದ ಸರಾಸರಿಯಾಗಿದೆ. ಮೊದಲಿಗೆ ಆದಾಯ ಸ್ಥಿತಿ ಉತ್ತಮವಾಗಿರುತ್ತದೆ, ನಂತರ ಕಡಿಮೆಯತಾಗುವುದು, ಕೊನೆಯ ನಾಲ್ಕು ತಿಂಗಳು ಆದಾಯ ಶೂನ್ಯವಾಗಿದೆ. ಆದ್ದರಿಂದ ಮೊದಲಿಗೆ ಸ್ವಲ್ಪ ಉಳಿತಾಯ ಮಾಡಿದರೆ ಒಳ್ಳೆಯದು.

ಮೂಲ ನಕ್ಷತ್ರ (6-2-3)

ಮೂಲ ನಕ್ಷತ್ರದವರಿಗೆ ಈ ವರ್ಷ ಬಂಪರ್ ಎಂದೇ ಹೇಳಬಹುದು, ಅಂದ್ರೆ ಈ ವರ್ಷ ನಿಮ್ಮ ಆದಾಯ ಅತ್ಯುತ್ತಮವಾಗಿದೆ. ಮೊದಲ ನಾಲ್ಕು ತಿಂಗಳಂತೂ ತುಂಬಾ ಗಳಿಸುವಿರಿ, ನಂತರ ಸಾಮಾನ್ಯವಾಗಿರುತ್ತದೆ, ಕೊನೆಯ ನಾಲ್ಕು ತಿಂಗಳಿನಲ್ಲಿ ಆದಾಯ ಸ್ಥಿತಿ ಮತ್ತಷ್ಟು ಸುದಾರಿಸುವುದು.

ಪೂರ್ವ ಆಷಾಢ ನಕ್ಷತ್ರ (1-0-1)

ಪೂರ್ವ ಆ‍ಷಾಢ ನಕ್ಷತ್ರದವರಿಗೆ ಈ ವರ್ಷ ಆದಾಯ ಕಡಿಮೆ ಇದೆ, ಮೊದಲಿಗೆ ಸ್ವಲ್ಪ ಇದ್ದರೆ ಮಧ್ಯದ ಅವಧಿಯಲ್ಲಿ ಶೂನ್ಯವಾಗುವುದು, ನಂತರದ ಅವಧಿಯಲ್ಲಿ ಸ್ವಲ್ಪ ಆದಾಯ ಗಳಿಸಬಹುದು.

ಉತ್ತರ ಆಷಾಢ ನಕ್ಷತ್ರ (4-1-4)

ನಿಮಗೆ ಈ ವರ್ಷ ಆದಾಯ ತುಂಬಾನೇ ಚೆನ್ನಾಗಿದೆ. ಹಣದಲ್ಲಿ ಕೊರತೆಯಾಗುವುದಿಲ್ಲ, ಮಧ್ಯದ ಅವಧಿಯಲ್ಲಿ ಸ್ವಲ್ಪ ಕಡಿಮೆಯಾದರೂ ಆರ್ಥಿಕತೆಗೆ ಯಾವುದೇ ತೊಂದರೆಯಾಗುವುದಿಲ್ಲ.

ಶ್ರವಣ ನಕ್ಷತ್ರ (7-2-2)

ಆದಾಯದ ದೃಷ್ಟಿಯಿಂದ ಶ್ರವಣ ನಕ್ಷತ್ರದವರಿಗೆ ಈ ವರ್ಷ ಸೂಪರ್ ಆಗಿದೆ. ನೀವು ಈ ಅವಧಿಯಲ್ಲಿ ಸಾಕಷ್ಟು ಗಳಿಸಲು ಸಾಧ್ಯವಾಗುವುದು, ಅದರಲ್ಲೂ ಮೊದಲ ನಾಲ್ಕು ತಿಂಗಳು ನಿಮ್ಮ ಆದಾಯ ಅತ್ಯುತ್ತಮವಾಗಿದೆ.

ಧನಿಷ್ಠ ನಕ್ಷತ್ರ (2-0-0)

ನಿಮಗೆ ಮೊದಲ ನಾಲ್ಕು ತಿಂಗಳು ಆದಾಯದ ದೃಷ್ಟಿಯಿಂದ ತೊಂದರೆಯಿಲ್ಲ, ನಂತರ ಆರ್ಥಿಕ ಸಂಕಷ್ಟ ಎದುರಾಗಬಹುದು, ನೋಡಿಕೊಂಡು ಹಣ ಖರ್ಚು ಮಾಡಿ.

ಶತಾಭಿಷ್ಠ ನಕ್ಷತ್ರ 5-1-3

ನಿಮಗೆ ಈ ವರ್ಷ ಆದಾಯ ಅತ್ಯುತ್ತಮವಾಗಿದೆ. ಮಧ್ಯದಲ್ಲಿ ಆದಾಯ ಸ್ವಲ್ಪ ಕಡಿಮೆಯಾದರೂ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಪೂರ್ವ ಬಾದ್ರಪದ ನಕ್ಷತ್ರ 0-2-1

ನಿಮಗೆ ವರ್ಷದ ಆರಂಭ ಆರ್ಥಿಕ ದೃಷ್ಟಿಯಿಂದ ಕಷ್ಟವಾಗಬಹುದು, ನಂತರ ಅವಧಿ ಸುಧಾರಿಸಿಕೊಂಡು ಹೋಗುವಷ್ಟು ಆದಾಯ ಲಭಿಸುವುದು.

ಉತ್ತರ ಬಾದ್ರಪದ ನಕ್ಷತ್ರ (3-0-4)

ಆದಾಯದ ದೃಷ್ಟಿಯಿಂದ ನಿಮಗೆ ಈ ವರ್ಷ ತೊಂದರೆಯಿಲ್ಲ ಎಂದೇ ಹೇಳಬಹುದು, ಮಧ್ಯದ ಅವಧಿಯಲ್ಲಿ ಆದಾಯ ಶೂನ್ಯವಾದರೂ ಉಳಿದ ಎರಡು ಅವಧಿಯಲ್ಲಿ ಗಳಿಕೆ ಉತ್ತಮವಾಗಿರುವುದರಿಂದ ಯಾವುದೇ ತೊಂದರೆಯಿಲ್ಲ.

ರೇವತಿ ನಕ್ಷತ್ರ (6-1-2)

ರೇವತಿ ನಕ್ಷತ್ರವರಿಗೆ ಆದಾಯ ದೃಷ್ಟಿಯಿಂದ ಈ ವರ್ಷ ಸೂಪರ್ ಆಗಿದೆ. ಅದರಲ್ಲೂ ಮೊದಲ ನಾಲ್ಕು ತಿಂಗಳು ಚೆನ್ನಾಗಿ ಗಳಿಸುವಿರಿ, ನಂತರದ ಅವಧಿಗಳಲ್ಲಿ ಆದಾಯ ಸಾಮಾನ್ಯವಾಗಿರುತ್ತದೆ. ಒಟ್ಟಿನಲ್ಲಿ ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ಎಪ್ರಿಲ್ 12, ಸೋಮವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 29 ಸಲುವ ಫಾಲ್ಗುಣ ಬಹುಳ ಅಮಾವಾಸ್ಯೆ 4| ಗಳಿಗೆದಿನ ವಿಶೇಷ :ಸೋಮವತೀ ಅಮಾವಾಸ್ಯೆ ನಿತ್ಯ ನಕ್ಷತ್ರ :ರೇವತಿ 13 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ : 7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.21 ಗಂಟೆ

ಮೇಷ

ಕೃಷಿ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಮನೆಯವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಯಂತ್ರೋಪಕರಣಗಳ ಸುಸ್ಥಿತಿಯಿಂದಾಗಿ ಕೆಲಸಗಳು ಸುಗಮ. ಮಹಿಳೆಯರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ.

ವೃಷಭ

ಸಮಾಜಮುಖಿಯಾದ ಉತ್ತಮ ಕೆಲಸಗಳನ್ನು ಮಾಡಲಿದ್ದೀರಿ. ಸಂಗಾತಿಯಿಂದ ಸಹಕಾರ ದೊರೆಯುವುದರ ಜೊತೆಗೆ ಸಾಮಾಜಿಕ ಗೌರವಾದರಗಳು ಪ್ರಾಪ್ತವಾಗಲಿವೆ.

ಮಿಥುನ

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗುವವು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕಾದುದು ಅನಿವಾರ್ಯ.

ಕಟಕ

ಕೆಲಸ ಕಾರ್ಯಗಳಲ್ಲಿ ಸಹೋದರರಿಂದ ಸಹಕಾರ. ಸಂಸಾರದಲ್ಲಿ ಕಿರಿಕಿರಿಯ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ವಸ್ತ್ರಾಭರಣ ಖರೀದಿ.

ಸಿಂಹ

ಹೆಚ್ಚಿನ ಕೆಲಸದ ಒತ್ತಡದಿಂದಾಗಿ ಮಾನಸಿಕ ಹಿಡಿತ ತಪ್ಪದಂತೆ ತಾಳ್ಮೆ ವಹಿಸುವುದು ಅಗತ್ಯ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ.

ಕನ್ಯಾ

ವೃತ್ತಿಯಲ್ಲಿ ಅಮಿತವಾದ ಒತ್ತಡ ಉಂಟಾಗಲಿದ್ದು ತಾಳ್ಮೆಯಿಂದ ವ್ಯವಹರಿಸುವುದು ಅವಶ್ಯಕ. ಆಸ್ತಿ ಖರೀದಿ ವ್ಯವಹಾರವನ್ನು ಮುಂದೂಡುವುದು ಸೂಕ್ತ.

ತುಲಾ

ಸಹೋದ್ಯೋಗಿಗಳೊಂದಿಗೆ ವಿನಾಕಾರಣ ಮನಸ್ತಾಪ. ಮಹಿಳೆಯರಿಂದ ಸಂಪೂರ್ಣ ಸಹಕಾರ. ವಿಶೇಷ ವಸ್ತುಗಳ ಖರೀದಿಯ ಸಾಧ್ಯತೆ.

ವೃಶ್ಚಿಕ

ಸ್ವಂತ ಉದ್ಯಮದಲ್ಲಿರುವವರಿಗೆ ಸ್ಪರ್ಧೆಗಳು ಎದುರಾದರೂ ಅನುಕೂಲ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ದುಡುಕಿನಿಂದಾಗಿ ವಿನಾ ಕಾರಣ ಸಹವರ್ತಿಗಳೊಂದಿಗೆ ಮನಸ್ತಾಪ.

ಧನು

ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯಲಿದೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳು. ಬರವಣಿಗೆಯಿಂದ ಕೀರ್ತಿಲಾಭ.

ಮಕರ

ಸಾಮಾಜಿಕ ಸೇವೆಯಿಂದಾಗಿ ಜನಪ್ರಿಯತೆ. ವ್ಯವಹಾರದಲ್ಲಿ ಸೋದರರಿಂದ ಸಹಕಾರ. ದಾಂಪತ್ಯ ಜೀವನವು ಸುಖಮಯ. ಆಕಸ್ಮಿಕ ಪ್ರಯಾಣ. ಮನೆಯಲ್ಲಿ ಸಂತಸ.

ಕುಂಭ

ಶ್ರದ್ಧೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಬಂಧುಗಳೊಂದಿಗಿನ ಸಂಬಂಧ ಗಟ್ಟಿಗೊಳ್ಳಲಿದೆ. ಬಹುಕಾಲದ ಬಯಕೆಗಳು ಈಡೇರುವ ಸಾಧ್ಯತೆ. ದೂರದ ಪ್ರಯಾಣವೊಂದಕ್ಕೆ ಸಂಕಲ್ಪ.

ಮೀನ

ಮಹಿಳೆಯರ ಇಷ್ಟಾರ್ಥಗಳು ನೆರವೇರಲಿವೆ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಅನಿರೀಕ್ಷಿತ ಧನಾಗಮನ ಸಾಧ್ಯತೆ. ಕುಟುಂಬದವರೊಂದಿಗೆ ಧಾರ್ಮಿಕ ಕ್ಷೇತ್ರ ದರ್ಶನ.

ಎಪ್ರಿಲ್ 11, ಭಾನುವಾರ,2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 28 ಸಲುವ ಫಾಲ್ಗುಣ ಬಹುಳ ಅಮಾವಾಸ್ಯೆ 60 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಭಾದ್ರಾ 6|| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.22 ಗಂಟೆ

ಮೇಷ

ಬಿಡುವಿಲ್ಲದ ಕೆಲಸ–ಕಾರ್ಯಗಳ ನಡುವೆಯೂ ಪ್ರಯಾಣದಲ್ಲಿ ಸುಖಾನುಭವ. ಆರೋಗ್ಯದ ಬಗ್ಗೆ ಗಮನ ಅಗತ್ಯ. ಸ್ವಂತ ಉದ್ಯಮದಲ್ಲಿ ತೊಡಗಿರುವವರಿಗೆ ಕೆಲಸ-ಕಾರ್ಯಗಳಲ್ಲಿ ಹಿನ್ನಡೆ. ಹಿತೈಷಿಗಳ ಸಹಕಾರ ಲಭ್ಯವಾಗಲಿದೆ.

ವೃಷಭ

ನಿರೀಕ್ಷಿಸಿದಂತೆ ಕೆಲಸ-ಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಒತ್ತಡ ಉಂಟಾಗಲಿದೆ. ಕ್ರೀಡಾಪಟುಗಳಿಗೆ ಗೌರವಾದರಗಳು ಲಭ್ಯವಾಗಲಿವೆ. ಅಮೂಲ್ಯ ವಸ್ತುಗಳ ಶೋಧನೆಗಾಗಿ ಕಾಲ ವ್ಯಯ.

ಮಿಥುನ

ವಾಹನ ಯಂತ್ರೋಪಕರಣಗಳಿಂದ ಅನುಕೂಲಕರ ವಾತಾವರಣ. ವಿದ್ಯಾರ್ಥಿಗಳಿಗೆ ಆಟ, ಪಾಠಗಳಲ್ಲಿ ಹೆಚ್ಚಿನ ಪ್ರಗತಿ. ಕುಟುಂಬದಲ್ಲಿ ಒಮ್ಮತದ ನಿರ್ಣಯದಿಂದಾಗಿ ನೆಮ್ಮದಿ. ಸಂತಸ ತರುವ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ಕಟಕ

ಕೌಟುಂಬಿಕ ಸಾಮರಸ್ಯದೊಂದಿಗೆ ಶಾಂತಿಯುತ ಬದುಕು. ಸಾಮಾಜಿಕ ಹಾಗೂ ಬಂಧುಗಳ ಗೌರವಾದರಗಳಿಗೆ ಪಾತ್ರರಾಗಲಿದ್ದೀರಿ. ವಿಪರೀತ ಕೆಲಸ–ಕಾರ್ಯಗಳಿಂದಾಗಿ ಹಾಗೂ ಓಡಾಟಗಳಿಂದಾಗಿ ದೇಹಾಲಸ್ಯ.

ಸಿಂಹ

ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮನೆಯಲ್ಲಿ ಸಮಾಧಾನಕರ ವಾತಾವರಣ. ವಂಚನೆಯಿಂದ ಪಾರಾಗಲು ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವುದು ಅವಶ್ಯ. ಹಿರಿಯರಿಂದ ಉತ್ತಮ ಸಲಹೆ.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಉಂಟಾಗುವ ಸಾಧ್ಯತೆ. ಲೇವಾದೇವಿ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದಾಗಿ ಮುಂದಿನ ಕೆಲಸಗಳು ಸುಗಮವಾಗಲಿವೆ.

ತುಲಾ

ಕೆಲಸ–ಕಾರ್ಯಗಳು ನಿರ್ವಿಘ್ನದಾಯಕವಾಗಿ ನಡೆಯಲಿವೆ. ವ್ಯಾಪಾರ, ವೃತ್ತಿಗಳಲ್ಲಿ ಲಾಭ. ಬಂಧು–ಬಾಂಧವರ ಹೊಗಳಿಕೆಗೆ ಪಾತ್ರರಾಗುವ ಅವಕಾಶಗಳು ಕಂಡುಬರುತ್ತಿದೆ. ಭೂ ವ್ಯವಹಾರದಲ್ಲಿ ಪ್ರಗತಿ.

ವೃಶ್ಚಿಕ

ಕಾರ್ಯಕಲಾಪಗಳು ಸುಗಮವಾಗಿ ಸಾಗಲಿವೆ. ವಾದ, ವಿವಾದ ಕಟ್ಟಲೆಗಳಲ್ಲಿ ನಿಮ್ಮ ಪರವಾಗಿ ನ್ಯಾಯ ದೊರಕಲಿದೆ. ಕಟ್ಟಡ ಖರೀದಿ ಮಾಡುವ ಸಾಧ್ಯತೆ. ಸಮಾಧಾನ ಚಿತ್ತದಿಂದ ಮನಸ್ತಾಪ ದೂರವಾಗಲಿದೆ.

ಧನು

ಆರೋಗ್ಯದಲ್ಲಿ ವೃದ್ಧಿ. ಬರಬೇಕಾದ ಬಾಕಿ ಹಣ ಸಕಾಲದಲ್ಲಿ ಹಿಂದಿರುಗಿ ಅನುಕೂಲ ತರಲಿದೆ. ಕೆಲಸ–ಕಾರ್ಯಗಳಲ್ಲಿ ಸಾಮಾನ್ಯ ಪ್ರಗತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಪ್ರಿಯ ವ್ಯಕ್ತಿಗಳ ಆಗಮನ ಸಾಧ್ಯತೆ.

ಮಕರ

ಲೇವಾದೇವಿ ವ್ಯವಹಾರಸ್ಥರಿಗೆ ಹೆಚ್ಚಿನ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಂಭವ. ಮಹಿಳೆಯರಿಗೆ ಸಂತಸ ತರುವ ದಿನ. ಶತ್ರುಗಳ ಭೀತಿಯಿಂದ ಮುಕ್ತರಾಗಲಿದ್ದೀರಿ. ಹಿತಕರ ಸುದ್ದಿ ಆಲಿಸಲಿದ್ದೀರಿ.

ಕುಂಭ

ಮಾನಸಿಕ ಬೇಸರ. ವಾಹನಗಳ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ವ್ಯಾಪಾರಸ್ಥರಿಗೆ ಧನ ಹಾನಿಯುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಉದ್ಯೋಗ ಅಥವಾ ವೃತ್ತಿಯಲ್ಲಿ ಒತ್ತಡದ ಕೆಲಸಗಳು ಎದುರಾದೀತು. ಹಣಕಾಸು ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಹಿರಿಯರೊಂದಿಗೆ ವ್ಯವಹಾರದ ಕುರಿತಾದ ಸಮಾಲೋಚನೆ ನಡೆಸಲಿದ್ದೀರಿ.

ಎಪ್ರಿಲ್ 09, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ

9-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ‌ ದಿನ 26 ಸಲುವ ಫಾಲ್ಗುಣ ಬಹುಳ ತ್ರಯೋದಶಿ 55| ಗಳಿಗೆ ದಿನ ವಿಶೇಷ :ಪ್ರದೋಷನಿತ್ಯ ನಕ್ಷತ್ರ :ಪೂರ್ವಾಭಾದ್ರಾ 60 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.23 ಗಂಟೆ

ಮೇಷ

ಸರ್ಕಾರಿ ನೌಕರಿಯಲ್ಲಿರುವವರು ಕಾರ್ಯ ನೈಪುಣ್ಯತೆಯಿಂದ ಪ್ರಶಂಸೆಗೆ ಭಾಜನರಾಗುವಿರಿ. ಒಪ್ಪಿಕೊಂಡ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿ. ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಿ. ದೇವತಾ ಆರಾಧನೆ ಶ್ರೇಯಸ್ಕರ.

ವೃಷಭ

ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸಿ. ಸಹೋದ್ಯೋಗಿಗಳಿಂದ ಸಕಾಲಿಕ ಸಲಹೆಗಳು ದೊರೆಯುವವು. ಬೇರೆಯವರ ಒತ್ತಡಕ್ಕೆ ದುಂದು ವೆಚ್ಚ ಮಾಡುವ ಸಾಧ್ಯತೆ.

ಮಿಥುನ

ಆಕಸ್ಮಿಕ ಧನ ಪ್ರಾಪ್ತಿ. ಕಳೆದು ಹೋದ ವಸ್ತುವನ್ನು ಮರಳಿ ಪಡೆಯಲಿದ್ದೀರಿ. ಮಹಿಳೆಯರಿಗೆ ಸಾಮಾಜಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿಖರತೆ ದೊರಕಲಿದೆ.

ಕಟಕ

ವ್ಯವಹಾರದಲ್ಲಿ ಮಿತವ್ಯಯ ಸಾಧಿಸಲಿದ್ದೀರಿ. ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನೈಪುಣ್ಯತೆ ಕಾಯ್ದುಕೊಳ್ಳುವಿರಿ. ಕಾರ್ಯನಿಮಿತ್ತ ದೂರ ಪ್ರಯಾಣ.

ಸಿಂಹ

ಅಡ್ಡಿ ಆತಂಕಗಳಿಲ್ಲದೆ ಕಾರ್ಯಗಳು ನೆರವೇರುವವು. ಮಧ್ಯವರ್ತಿಗಳ ಸಹಾಯದಿಂದ ವಿವಾಹಾದಿ ಕಾರ್ಯಗಳು ಸುಸೂತ್ರವಾಗಿ ನೆರವೇರುವವು. ಸಂಗಾತಿಯ ಮಾತುಗಳನ್ನು ಗೌರವಿಸಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.

ಕನ್ಯಾ

ವಿಶೇಷ ಸಮಾರಂಭವೊಂದರಲ್ಲಿ ಭಾಗಿ. ವರ್ತಮಾನದ ವಿಷಯಗಳನ್ನು ಅವಲೋಕಿಸಿ ಕಾರ್ಯ ಮಗ್ನರಾಗುವುದು ಉಚಿತ. ಆರ್ಥಿಕ ಸಮೃದ್ಧಿಯ ದಿನ. ಪರರಿಂದ ಸಹಾಯ ಸಹಕಾರಗಳು ಧಾರಾಳವಾಗಿ ದೊರಕುವುದು.

ತುಲಾ

ಸೌಜನ್ಯದಿಂದ ಘನತೆ ಗೌರವಗಳನ್ನು ಪಡೆಯುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು. ಕಳೆದುಹೋದುದನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಬಂಧುವರ್ಗದವರಿಂದ ಪ್ರಶಂಸೆ.

ವೃಶ್ಚಿಕ

ನೈತಿಕ ಬಲದಿಂದಾಗಿ ಸುತ್ತಮುತ್ತಲೂ ಉತ್ತಮ ವಾತಾವರಣ ಸೃಷ್ಟಿ ಮಾಡುವಿರಿ. ಸಾರ್ವಜನಿಕವಾಗಿ ಪ್ರಶಂಸೆಗಳು ಕೇಳಿಬರಲಿವೆ. ಹಿತ ಶತ್ರುಗಳಿಂದ ತೊಂದರೆ ಎದುರಿಸಬೇಕಾದೀತು.

ಧನು

ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಇಕ್ಕಟ್ಟಿಕೆ ಸಿಲುಕುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ. ಆರೋಗ್ಯದಲ್ಲಿ ಸುಧಾರಣೆ. ಸಹೋದ್ಯೋಗಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆ.

ಮಕರ

ತೊಗರಿ, ಕಡಲೆ ಮುಂತಾದ ಹಳದಿ ಕಾಳುಗಳ ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ಪ್ರಶಂಸೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಿ ನಷ್ಟ ಅನುಭವಿಸುವ ಸಾಧ್ಯತೆ.

ಕುಂಭ

ಕ್ರೀಡಾಪಟುಗಳಿಗೆ ವಿಶೇಷ ಸಾಧನೆ ಮಾಡುವ ಅವಕಾಶ. ಅನುಭವಿಕರಿಂದ ಸಹಾಯ ದೊರಕಲಿದೆ. ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅನೇಕ ಮಾರ್ಗಗಳು ಕಂಡುಬರಲಿವೆ.

ಮೀನ

ಯಾಂತ್ರಿಕ ಸಲಕರಣೆಗಳ ಮಾರಾಟ ವ್ಯವಹಾರದಿಂದಾಗಿ ಉತ್ತಮ ಲಾಭ. ದಕ್ಷತೆಯಿಂದಾಗಿ ವ್ಯವಹಾರದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕಾರ್ಯಬಾಹುಳ್ಯದಿಂದಾಗಿ ಅತಿಯಾದ ಆಯಾಸ.

ಎಪ್ರಿಲ್ 08, ಗುರುವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 25 ಸಲುವ ಫಾಲ್ಗುಣ ಬಹುಳ ದ್ವಾದಶಿ 52| ಗಳಿಗೆದಿನ ವಿಶೇಷ :ಹರಿವಾಸರ ಗಂ. 8.41ನಿತ್ಯ ನಕ್ಷತ್ರ :ಶತಭಿಷಾ 56| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.23 ಗಂಟೆ

ಮೇಷ

ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರ ವಾತಾವರಣ. ಮದುವೆ ಮುಂಜಿ ಸಮಾರಂಭಗಳಲ್ಲಿ ಭಾಗಿ. ಬಂಧು–ಬಾಂಧವರ ಸಮಾಗಮ. ನವ ಚೈತನ್ಯ ಧುಮ್ಮಿಕ್ಕಲಿದೆ.

ವೃಷಭ

ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಿಗೆ ಬಂದೊದಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲಗಳು ಗೋಚರವಾಗಿ ಸಂತೃಪ್ತಿ. ಕುಟುಂಬದವರಿಂದ ಸ್ಥಾನ ಮಾನಗಳು ಲಭ್ಯ.

ಮಿಥುನ

ಭೂ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲಮಯ ಪರಿಸ್ಥಿತಿ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ. ಸಂಗಾತಿಯಿಂದ ಸಿಹಿ ಸುದ್ದಿ.

ಕಟಕ

ಹಿಂದಿನ ತಾಪತ್ರಯಗಳೆಲ್ಲವೂ ನಿವಾರಣೆಯಾಗಿ ನಿರಾಳತೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ. ವಕೀಲ ವೃತ್ತಿಯವರಿಗೆ ಆರ್ಥಿಕಾಭಿವೃದ್ಧಿ. ವಾಹನ ಯೋಗ.

ಸಿಂಹ

ಕಳ್ಳ ಕಾಕರ ಬಗ್ಗೆ ಗಮನ ವಹಿಸುವುದು ಉತ್ತಮ. ಬೆಲೆಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳಿ. ಮಿತ್ರರೊಂದಿಗೆ ಮನಸ್ತಾಪ ಶಮನ. ಸಂಗಾತಿಯಿಂದ ವಿಶೇಷ ಕೊಡುಗೆ. ಬಂಧುಗಳ ಆಗಮನದಿಂದ ಸಂತಸ.

ಕನ್ಯಾ

ಸ್ಥಿರಾಸ್ತಿ ಪ್ರಾಪ್ತವಾಗುವ ಸಾಧ್ಯತೆಯಿದ್ದು, ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆ. ಹೊಸ ಮನೆ, ಸಂತಾನ ಭಾಗ್ಯ ಮುಂತಾದವುಗಳು ದೊರಕಿ ಸಂತಸ.

ತುಲಾ

ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಹೊಸ ಮನೆ, ಜಮೀನು ಪ್ರಾಪ್ತವಾಗುವ ಯೋಗ. ಸಾಂಸಾರಿಕ ಸುಖ. ಕೃಷಿ ಬದುಕಿನವರಿಗೆ ಸ್ವಲ್ಪ ಮಟ್ಟಿನ ಬಿಡುವು. ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ

ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಕೈಗೂಡಲಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ. ರಾಜಕೀಯ ರಂಗದವರಿಗೆ ಉತ್ತಮ ಫಲ.

ಧನು

ಸಂದುನೋವು, ಬೆನ್ನು ನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಬರಲಿರುವ ಅವಘಡವನ್ನು ತಪ್ಪಿಸಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಹಿನ್ನಡೆ.

ಮಕರ

ಭೂ ವ್ಯವಹಾರದಲ್ಲಿ ಅಧಿಕ ಲಾಭ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತಿ. ನೀಡಿದ ಸಾಲಗಳು ಮರುಪಾವತಿಯಾಗುವವು. ವಿದ್ಯಾರ್ಥಿಗಳು ಯಶಸ್ಸಿನ ಉತ್ತುಂಗವನ್ನು ಕಂಡುಕೊಳ್ಳುವ ಅವಕಾಶ.

ಕುಂಭ

ದಿನದ ಮಟ್ಟಿಗೆ ಎಲ್ಲ ವಿಧಗಳಲ್ಲೂ ಕಷ್ಟನಷ್ಟ ಅನುಭವಿಸುವ ಸಾಧ್ಯತೆ. ಅಪಾಯಕಾರಿ ಕೆಲಸ ಮತ್ತು ವಾಹನಗಳಿಂದ ದೂರವಿರುವುದು ಶ್ರೇಯಸ್ಕರ. ಗುರು ಗಣಪತಿಯ ಆರಾಧನೆಯಿಂದ ಉತ್ತಮ ಫಲ.

ಮೀನ

ಸ್ವಯಂ ಉದ್ಯೋಗಿಗಳಿಗೆ ಉತ್ತಮ ಆದಾಯ. ಕೊಡುಕೊಳ್ಳುವಿಕೆಯಲ್ಲಿ ಎಚ್ಚರಿಕೆ ಅಗತ್ಯ. ಮೋಸಹೋಗುವ ಸಾಧ್ಯತೆ. ಸ್ನೇಹಿತ ವರ್ಗದವರಿಂದ ಸಂತಸದ ಸುದ್ದಿ. ಉದ್ಯೋಗದಲ್ಲಿ ಬದಲಾವಣೆಗಳು ಸಂಭವಿಸಬಹುದು.

ಕರಾಟೆ ಕಲೆ ಮಾನಸಿಕ, ದೈಹಿಕ ಕ್ಷಮತೆಗೆ ಪೂರಕ : ಡಾ! ನಿ.ಬೀ. ವಿಜಯ ಬಲ್ಲಾಳ್

ಯಾವುದೇ ಸಂಘ ಸಂಸ್ಥೆಗಳ ಸದಸ್ಯರಲ್ಲಿ ನಮ್ಮದು ಎಂಬ ಅಭಿಮಾನ ಬೆಳೆದಾಗ ಆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯವಾಗುವುದು. ಕರಾಟೆ ಕಲೆ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಆತ್ಮವಿಶ್ವಾಸವನ್ನು ಸದೃಢಗೊಳಿಸುತ್ತದೆ. ವಿದ್ಯಾರ್ಥಿಗಳು ಸಾಧನೆಯ ಉತ್ತುಂಗಕ್ಕೇರಲು ತಂದೆ ತಾಯಿಯ ಪೋತ್ಸಾಹ, ಮಾರ್ಗದರ್ಶನ ಅತೀ ಅಗತ್ಯ. ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಮುಂದಿನ ಸಾಧನೆಗೆ ಸ್ಫೂರ್ತಿ ನೀಡುತ್ತದೆ. ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್ ರವರ ಶಿಸ್ತುಬದ್ಧ ತರಬೇತಿಯಿಂದ ಪಳಗಿರುವ ಕರಾಟೆ ಪಟುಗಳ ಸಾಧನೆ ಅಭಿನಂದನಾರ್ಹ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಬೂಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ನಡೆದ ಪ್ರಶಸ್ತಿ ವಿಜೇತ ಕರಾಟೆ ಪಟುಗಳ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರೆವರೆಂಟ್ ಫಾದರ್ ಜೋಸ್ಲಿ ಡಿ’ಸಿಲ್ವ ಮಾತನಾಡಿ, ಪ್ರತಿಭಾ ವಿಕಸನಕ್ಕೆ ಕರಾಟೆ ಒಂದು ಉತ್ತಮ ಮಾಧ್ಯಮ. ಶಿಕ್ಷಣ ಮತ್ತು ಕರಾಟೆ ಎಂಬುದು, ವೃತ್ತಿ ಮತ್ತು ಪ್ರವೃತ್ತಿ ಇದ್ದಂತೆ. ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಮೂಲಕ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಈ ನಿಟ್ಟಿನಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ತಂಡದ ಕರಾಟೆ ಪಟುಗಳ ಸಾಧನೆ ಪ್ರಶಂಸನೀಯ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ರಾಜ್ ಕಿರಣ್, ಕಿಶನ್, ಅಮಾನುಲ್ಲಾ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ ಪಡೆದ ಕಾರ್ತಿಕ್ ಪಾಲನ್ ಮತ್ತು ಆದಿತ್ಯ ಕೆ. ಹಾಗೂ ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದ 23 ಮಂದಿ ಕರಾಟೆ ಪಟುಗಳನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಬಿ.ಕೆ.ಎಸ್.ಕೆ. ವತಿಯಿಂದ ನಡೆದ ಕರಾಟೆಯ ವಿವಿಧ ಶ್ರೇಣಿಯ ಕಲರ್ ಬೆಲ್ಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ 60 ಮಂದಿ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಾಫಲ್ಯ ಟ್ರಸ್ಟ್(ರಿ.) ಉಡುಪಿ ಪ್ರವರ್ತಕಿ ಕೆ.ನಿರುಪಮಾ ಪ್ರಸಾದ್ ಶೆಟ್ಟಿ, ಶ್ರೀ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯಾ ಗೋಪಾಲ್ ಬಂಗೇರ, ಚೈತನ್ಯ ಸೋಷಿಯಲ್ ವೆಲ್ಫೇರ್ ಫೌಂಡೇಶನ್(ರಿ.) ಆಡಳಿತ ಟ್ರಸ್ಟಿ ಸುನಿಲ್ ಸಾಲ್ಯಾನ್ ಕಡೆಕಾರು, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿರುವೆರ್ ಕುಡ್ಲ ಉಡುಪಿ ಘಟಕ ಅಧ್ಯಕ್ಷ ಕಿಶೋರ್ ಪೂಜಾರಿ, ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಉಪ್ಪೂರು ಕೋಶಾಧಿಕಾರಿ ಕುಶಲ್ ಜತ್ತನ್,
ಕಿರುತೆರೆ ನಟ ಪ್ರದೀಪ್ ಚಂದ್ರ ಕುತ್ಪಾಡಿ, ಸ್ವಸ್ತಿ ಕ್ರಿಕೆಟರ್ಸ್ ಅಧ್ಯಕ್ಷ ಅಜಿತ್ ಕಪ್ಪೆಟ್ಟು ಉಪಸ್ಥಿತರಿದ್ದರು.

ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಕೆ.ಎಸ್.ಕೆ. ಸಂಘಟನಾ ಕಾರ್ಯದರ್ಶಿ ಪವನ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮೇಘ ವಂದಿಸಿದರು.

ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಅಂಬಲಪಾಡಿ ಗ್ರಾಮಾಂತರ ಬೂತ್ ಸಂಖ್ಯೆ 178 ರಲ್ಲಿ ಬೂತ್ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಬೂತಿನ ಹಿರಿಯ ಕಾರ್ಯಕರ್ತ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಪಕ್ಷದ ದ್ವಜಾರೋಹಣವನ್ನು ನೆರವೇರಿಸಿದರು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪಕ್ಷದ ಹುಟ್ಟು, ಬೆಳವಣಿಗೆ, ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ಅನಿಲ್ ರಾಜ್ ಅಂಚನ್, ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಜಿಲ್ಲಾ ಸಮಿತಿ ಸದಸ್ಯ ಹರೀಶ್ ಆಚಾರ್ಯ, ಬಿಜೆಪಿ ಅಂಬಲಪಾಡಿ ಕಡೆಕಾರು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ಪೂಜಾರಿ, ಬೂತ್ ಕಾರ್ಯದರ್ಶಿ ಅಶೋಕ್ ಅಂಚನ್, ಪ್ರವೀಣ್ ಉಪಸ್ಥಿತರಿದ್ದರು.

ಎಪ್ರಿಲ್ 07, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 23 ಸಲುವ ಫಾಲ್ಗುಣ ಬಹುಳ ದಶಮಿ 49|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶ್ರವಣ 50|| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.25 ಗಂಟೆ

ಮೇಷ

ಆರ್ಥಿಕ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ. ಶುಭಕಾರ್ಯಗಳಲ್ಲಿ ಯಶಸ್ಸು. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿಯೂ ಸುಧಾರಣೆ.

ವೃಷಭ

ನೀವು ಕೈಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲಿದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟದ ಚೇತರಿಕೆ. ಸರ್ಕಾರಿ ಕೆಲಸಗಳಲ್ಲಿದ್ದವರಿಗೆ ಹೆಚ್ಚಿನ ತೊಂದರೆ ತಾಪತ್ರಯಗಳು ಕಂಡುಬರುವ ಸಾಧ್ಯತೆ.

ಮಿಥುನ

ಬಂಧು ಮಿತ್ರರ ಸಹಾಯದಿಂದಾಗಿ ಕಾರ್ಯಗಳಲ್ಲಿ ಯಶಸ್ಸು. ಕೌಟುಂಬದಲ್ಲಿ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಧನ ವ್ಯಯವಾಗುವ ಸಂಭವ.

ಕಟಕ

ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಸಜ್ಜನರ ಸಹವಾಸದಿಂದಾಗಿ ನೆಮ್ಮದಿ. ವಸ್ತ್ರ ಒಡವೆಗಳನ್ನು ಪಡೆಯಲಿದ್ದೀರಿ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಕಾರ್ಮಿಕ ವರ್ಗದವರಿಂದ ಅನುಕೂಲ.

ಸಿಂಹ

ಕಾರ್ಯಾನುಕೂಲವು ನಿಧಾನಗತಿಯಲ್ಲಿರುವುದು. ಬಂಧು ಮಿತ್ರರೊಂದಿಗೆ ಹೆಚ್ಚಿನ ಸಂಯಮ ವಹಿಸುವುದು ಉತ್ತಮ. ಸರ್ಕಾರಿ ನೌಕರರಿಗೆ ಅತಿಯಾದ ತೊಂದರೆ ತಾಪತ್ರಯಗಳು ಕಂಡುಬರುತ್ತಿದೆ.

ಕನ್ಯಾ

ನಿವೇಶನ ಅಥವಾ ಗೃಹ ಖರೀದಿ ಸಾಧ್ಯತೆ. ದೂರದ ಪ್ರಯಾಣ ಮಾಡುವ ಸಾಧ್ಯತೆ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ. ಉನ್ನತ ಹುದ್ದೆಯಲ್ಲಿರುವವರಿಗೆ ಹೆಚ್ಚಿನ ಕೆಲಸದಿಂದ ಆಯಾಸ.

ತುಲಾ

ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆರೋಗ್ಯದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭ ಕಾರ್ಯವೊಂದನ್ನು ನಿಶ್ಚಯಿಸಲಿದ್ದೀರಿ.

ವೃಶ್ಚಿಕ

ಸರ್ಕಾರಿ ನೌಕರಿಯಲ್ಲಿರುವವರಿಗೆ ಬಿಡುವಿಲ್ಲದ ತಿರುಗಾಟ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ ಜೊತೆಗೆ ಕಾಳಜಿಯೂ ಅಗತ್ಯ.

ಧನು

ವ್ಯಾಪಾರ ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ. ತಾಳ್ಮೆ ಮತ್ತು ಸಂಯಮವನ್ನು ರೂಪಿಸಿಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಅಹಿತಕರ ಘಟನೆಗಳು ಸಂಭವಿಸಬಹುದು.

ಮಕರ

ಆರೋಗ್ಯ ಸಮಸ್ಯೆಗಳು ಪರಿಹಾರ ಕಾಣಲಿವೆ. ಬಂಧುಮಿತ್ರರ ಸಹಕಾರ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಮಾನಸಿಕ ಕಿರಿಕಿರಿಯುಂಟಾದೀತು.

ಕುಂಭ

ಸಜ್ಜನರ ಸಹಕಾರದಿಂದಾಗಿ ಕಾರ್ಯಗಳಲ್ಲಿ ಯಶಸ್ಸು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವುದು ಉತ್ತಮ. ಉನ್ನತ ಹುದ್ದೆಯಲ್ಲಿರುವವರಿಗೆ ಅತಿಯಾದ ಕಾರ್ಯಬಾಹುಳ್ಯ.

ಮೀನ

ವ್ಯಾಪಾರ ವ್ಯವಹಾರದಲ್ಲಿ ಅಧಿಕ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಯಶಸ್ಸು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಮಾನಸಿಕ ಚಿಂತೆ ದಾಯಾದಿ ಕಲಹಗಳು ದೂರವಾಗುವವು.

ಎಪ್ರಿಲ್ 06,ಮಂಗಳವಾರ, 2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ,
ತಿಥಿ : ದಶಮಿ,
ನಕ್ಷತ್ರ : ಶ್ರವಣ,
ರಾಹುಕಾಲ: 3.30 ರಿಂದ 5.02
ಗುಳಿಕಕಾಲ: 12.26 ರಿಂದ 1.58
ಯಮಗಂಡಕಾಲ: 9.22 ರಿಂದ 10.54

ಮೇಷ

ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತಲೂ ಅಧಿವಾದ ಯಶಸ್ಸು. ವಿವಾಹಾಕಾಂಕ್ಷಿಗಳಿಗೆ ಶುಭ ವಾರ್ತೆ. ಆದಾಯದಲ್ಲಿ ತಕ್ಕ ಮಟ್ಟಿನ ಹೆಚ್ಚಳ.

ವೃಷಭ

ಯಾವುದೇ ವಿಷಯದಲ್ಲಿ ದುಗುಡಕ್ಕೆ ಎಡೆ ಮಾಡಿಕೊಡುವುದು ಉತ್ತಮವಲ್ಲ. ತಾಳ್ಮೆ ನಿಮಗೆ ನೆಮ್ಮದಿ ತಂದುಕೊಡುವುದು. ದಿನದ ಮಟ್ಟಿಗೆ ವಿವಾಹಾದಿ ಕಾರ್ಯಗಳಿಗೆ ಹಿನ್ನಡೆ ಉಂಟಾದೀತು.

ಮಿಥುನ

ಸ್ನೇಹಿತರ ಸಹಕಾರದಿಂದ ನಿಮ್ಮ ಕಾರ್ಯಸಾಧನೆ ಅತ್ಯಂತ ಯಶ ಕಾಣುವುದು. ಸಮಸ್ಯೆಗಳು ಎದುರಾದಲ್ಲಿ ನಿಧಾನ ಚಿಂತಿಸಿ ಪರಿಹರಿಸಿಕೊಳ್ಳಿ. ಸಂಗಾತಿಯ ತಾಳ್ಮೆಯಿಂದ ಕೂಡಿದ ವರ್ತನೆಯಿಂದ ನೆಮ್ಮದಿ.

ಕಟಕ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಕಾಣಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಧನ ಹೊಂದಾಣಿಕೆ ಮಾಡಬೇಕಾದೀತು. ಸರ್ಕಾರಿ ನೌಕರಸ್ಥರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾದೀತು.

ಸಿಂಹ

ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುವವು. ಎದುರಾದ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಧನವ್ಯಯ.

ಕನ್ಯಾ

ದೂರಪ್ರಯಾಣದ ಯೋಗ. ಮಹಿಳೆಯರಿಗೆ ಬಂಧು ಬಾಂಧವರೊಂದಿಗೆ ಸಂತಸದ ದಿನವಾಗಿ ಪರಿಣಮಿಸುವುದು. ಹೊಸ ಯೋಜನೆಗೆ ಸಕಾಲವಲ್ಲ.

ತುಲಾ

ದಾಯಾದಿಗಳ ನಡುವಿನ ವೈಮನಸ್ಸು ದೂರ. ಜನ ಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಸರ್ಕಾರಿ ನೌಕರ ವರ್ಗದವರಿಂದಿ ಕಿರಿಕಿರಿ ಅನುಭವಿಸಬೇಕಾದೀತು. ಸಾರ್ವಜನಿಕ ಕ್ಷೇತ್ರದಲ್ಲಿ ನಿಂದನೆಗಳನ್ನು ಎದುರಿಸಬೇಕಾದೀತು.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಗೆ ಅನುಕೂಲ ವಾತಾವರಣ. ವ್ಯವಹಾರಸ್ಥರಿಗೆ ಸಾಧಾರಣ ಲಾಭ. ಉನ್ನತ ಸ್ಥಾನದಲ್ಲಿರುವವರಿಗೆ ಗೌರವಕ್ಕೆ ಕುತ್ತುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಧನು

ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ತಾತ್ಕಾಲಿಕ ನೆಮ್ಮದಿ. ಉದ್ಯೋಗದಲ್ಲಿರುವವರು ಶಿಸ್ತು ಸಂಯಮ ಕಾಪಾಡಿಕೊಳ್ಳುವುದು ಅವಶ್ಯ.

ಮಕರ

ಮದುವೆ ಮುಂಜಿ ಮುಂತಾದ ಮಂಗಳ ಕಾರ್ಯಗಳು ನಿಶ್ಚಯಗೊಂಡು ನಿರ್ವಿಘ್ನವಾಗಿ ಸಾಗುವವು. ಸರ್ಕಾರಿ ನೌಕರಿಯಲ್ಲಿರುವವರಿಗೆ ಅತಿಯಾದ ಕಾರ್ಯ ಬಾಹುಳ್ಯ.

ಕುಂಭ

ಮಹಿಳೆಯರು ಸಂತಸ ಸಂಭ್ರಮದೊಂದಿಗೆ ದಿನವನ್ನು ಕಳೆಯುವಿರಿ. ಕಲಾವಿದರು, ಪತ್ರಕರ್ತರಿಗೆ ಎಲ್ಲಿಲ್ಲದ ತುರುಸು ಕೆಲಸಗಳೊಂದಿಗೆ ವಾದ ವಿವಾದಗಳು ಏರ್ಪಟ್ಟು ಮಾನಸಿಕ ನೆಮ್ಮದಿಗೆ ಕುತ್ತಾದೀತು.

ಮೀನ

ಮಕ್ಕಳೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ. ವಿಶೇಷವಾಗಿ ಮಹಿಳೆಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಹುತಾತ್ಮ ವೀರ ಯೋಧರ ಬಲಿದಾನ ನಿರರ್ಥಕವಾಗದು: ಕುಯಿಲಾಡಿ

ಛತ್ತೀಸ್ ಗಢದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಅಂತಿಮ ನಮನ

ನಕ್ಸಲ್ ಪಿಡುಗನ್ನು ಬೇರು ಸಹಿತ ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರ ತ್ಯಾಗ, ಬಲಿದಾನ ನಿರರ್ಥಕವಾಗದು. ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಗೃಹ ಸಚಿವ ಅಮಿತ್ ಷಾ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಜರಗಿಸುವ ಮೂಲಕ ಸೈನಿಕರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಂಕಲ್ಪಗೈದಿದ್ದಾರೆ. ಇಡೀ ದೇಶ ಇಂದು ಹುತಾತ್ಮ ಸೈನಿಕರ ಕುಟುಂಬದ ಜೊತೆಗಿದೆ. ಕೇಂದ್ರ ಸರ್ಕಾರದ ನಿರ್ದಿಷ್ಟ ಕಠಿಣ ಕ್ರಮಗಳಿಂದ ನಕ್ಸಲ್ ವಾದ ದೇಶದಿಂದ ಮುಕ್ತವಾಗುವ ಭರವಸೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಛತ್ತೀಸ್ ಗಢದ ದಟ್ಟಾರಣ್ಯದಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯ ಸಂದರ್ಭದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ನಡೆದ ಹುತಾತ್ಮ ವೀರ ಯೋಧರಿಗೆ ಅಂತಿಮ ನಮನದಲ್ಲಿ ಪುಷ್ಪಾರ್ಚನೆಗೈದು, ಮೊಂಬತ್ತಿ ಬೆಳಗಿಸಿ, ಮೌನ ಪ್ರಾರ್ಥನೆಯೊಂದಿಗೆ ಅಗಲಿದ ದಿವ್ಯಾತ್ಮಗಳಿಗೆ ಚಿರಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ವಿನೋದ್ ರಾಜ್ ಕುಂದಾಪುರ, ಉಪಾಧ್ಯಕ್ಷರಾದ ಅಕ್ಷಿತ್ ಶೆಟ್ಟಿ ಹೆರ್ಗ, ಸುಮಿತ್ ಮಡಿವಾಳ, ವಿಜೇತ್, ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಸತೀಶ್ ಪೂಜಾರಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಉಪಾಧ್ಯಕ್ಷ ಪ್ರಜೀತ್ ಆಚಾರ್ಯ, ಕಾರ್ಯದರ್ಶಿಗಳಾದ ಶರತ್, ಶ್ರೀವತ್ಸ, ಸಂದೇಶ್ ಪ್ರಭು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೂರಜ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Design a site like this with WordPress.com
Get started