ಉಡುಪಿಯ ಬೂಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ತಂಡಕ್ಕೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ

ಕರ್ನಾಟಕ ಸ್ಟೇಟ್ ಕರಾಟೆ ಅಸೋಸಿಯೇಶನ್(ರಿ.), ಮೌಲೆ ಶೋಟೋಕಾನ್ ಕರಾಟೆ ದೊ ಅಸೋಸಿಯೇಶನ್ ಇಂಡಿಯಾ, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್(ರಿ.) ಇವರ ಜಂಟಿ ಆಶ್ರಯದಲ್ಲಿ ಸೆ.1ರಂದು ಶಿವಮೊಗ್ಗ ಸ್ಕೌಟ್ಸ್ ಭವನದಲ್ಲಿ ನಡೆದ ಮಲ್ನಾಡ್ ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ 2021 ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೆಂಷಿ ವಾಮನ್‌ ಪಾಲನ್ ಇವರಿಂದ ತರಬೇತಿ ಪಡೆದ ಕರಾಟೆ ಪಟುಗಳಾದ ಅರ್ಮಾನ್ ಶೆಟ್ಟಿ, ಯಶ್ ಶೆಟ್ಟಿ, ಪವನ್ ಕುಮಾರ್, ಮೊಹಮ್ಮದ್ ರಾಹಿಲ್, ನಿಶಾಂತ್, ಆಯುಷ್ ಆರ್.ಪಿ.,‌ ಓಂ ಸಾಗರ್, ಪ್ರೀತಮ್ ಇವರು ಭಾಗವಹಿಸಿ 6 ಚಿನ್ನದ ಪದಕ, 2 ಬೆಳ್ಳಿಯ ಪದಕ ಹಾಗೂ 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ಟೀಮ್ ಚಾಂಪಿಯನ್ಶಿಪ್ ಟ್ರೋಫಿಯನ್ನು ಪಡೆದಿರುತ್ತಾರೆ.

ಉಡುಪಿಯಲ್ಲಿ ವಾರಾಂತ್ಯ ಕರ್ಫ್ಯೂ : ಯಾವುದಕ್ಕೆಲ್ಲಾ ಅನುಮತಿ ಇದೆ ಗಮನಿಸಿ

ಉಡುಪಿ:ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಉಡುಪಿಯಲ್ಲಿ ಎರಡು ದಿನಗಳ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ.

ಇಂದಿನ ಆದೇಶಗಳ ಪ್ರಕಾರ, ರಾತ್ರಿ ಕರ್ಫ್ಯೂ ಎಲ್ಲಾ ದಿನಗಳಲ್ಲೂ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ವಾರಾಂತ್ಯ ಕರ್ಫ್ಯೂಗಳು ಶುಕ್ರವಾರದಂದು ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಇರುತ್ತದೆ.


ಪಬ್‌ಗಳು ಮುಚ್ಚಿರುತ್ತವೆ.

ಕೋವಿಡ್ ಪ್ರೋಟೋಕಾಲ್ ಹೊಂದಿರುವ ಕ್ರೀಡಾಪಟುಗಳಿಗೆ ಕ್ರೀಡಾಂಗಣಗಳು ಮತ್ತು ಈಜುಕೊಳಗಳನ್ನು ತೆರೆಯಲು ಅನುಮತಿಸಲಾಗುತ್ತದೆ ಆದರೆ ಪ್ರೇಕ್ಷಕರನ್ನು ಅನುಮತಿಸಲಾಗುವುದಿಲ್ಲ.


100% ಆಸನ ಸಾಮರ್ಥ್ಯದೊಂದಿಗೆ ಸಾರಿಗೆ ಸೌಲಭ್ಯಗಳನ್ನು ಅನುಮತಿಸಲಾಗಿದೆ.

ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮೂಹಿಕ ಕೂಟಗಳನ್ನು ನಿಷೇಧಿಸಲಾಗುವುದು.

ಮದುವೆಗಳು 400 ಜನರನ್ನು ಹೊಂದಿರಬಹುದು ಮತ್ತು ಶವಸಂಸ್ಕಾರ/ಅಂತ್ಯಕ್ರಿಯೆಗಳಿಗೆ 20 ಜನರು ಹಾಜರಾಗಬಹುದು.

ಮದುವೆ ಆಯೋಜಕರು ತಹಶೀಲ್ದಾರ್‌ಗೆ ಆಹ್ವಾನ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು, ಅವರು 400 ಜನ ಪಾಲ್ಗೊಳ್ಳುವವರಿಗೆ ಪಾಸ್‌ಗಳನ್ನು ನೀಡುತ್ತಾರೆ.

ಎಲ್ಲಾ ಪೂಜಾ ಸ್ಥಳಗಳು ತೆರೆದಿರಬಹುದು . ಆದರೆ ಕೋವಿಡ್ -19 ಮುನ್ನೆಚ್ಚರಿಕೆಯ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

50% ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಅಮ್ಯೂಸ್‌ಮೆಂಟ್ ಪಾರ್ಕ್‌ಗಳು (ವಾಟರ್ ಪಾರ್ಕ್‌ಗಳನ್ನು ಹೊರತುಪಡಿಸಿ) ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್‌ನೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ರಾತ್ರಿ ಕರ್ಫ್ಯೂ ಮಾರ್ಗಸೂಚಿಗಳು:

ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಿಗೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಚಲನೆಯನ್ನು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಚಲನೆಗೆ ಅನುಕೂಲವಾಗುವಂತೆ ಅನುಮತಿಸಲಾಗಿದೆ, ಆದರೆ ಚಲನೆಯನ್ನು ಮಾನ್ಯ ಪ್ರಯಾಣ ದಾಖಲೆಗಳು ಮತ್ತು ಟಿಕೆಟ್‌ಗಳನ್ನು ಪ್ರದರ್ಶಿಸಿದಾಗ ಮಾತ್ರ ಅನುಮತಿಸಲಾಗುತ್ತದೆ ಮತ್ತು ಕೋವಿಡ್‌ಗೆ ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ತುರ್ತುಸ್ಥಿತಿ ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಸಂಸ್ಥೆಗಳ ನೌಕರರ ಚಲನೆಯನ್ನು ಆಯಾ ಸಂಸ್ಥೆ ಅಥವಾ ಸಂಸ್ಥೆಯಿಂದ ನೀಡಲಾದ ಮಾನ್ಯ ಗುರುತಿನ ಚೀಟಿಗಳನ್ನು ನೋಡಿ ಅನುಮತಿಸಲಾಗುತ್ತದೆ.

ಸೇವೆಯೇ ಸಂಘಟನೆ’ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣ: ಸಚಿವ ಕೋಟ

ಉಡುಪಿ :ಅತ್ಯಂತ ಸಂಕಷ್ಟದ ಪರಿಸ್ಥಿತಿಯ ನಡುವೆ ಇಂದು ದೇಶ ಕೊರೋನಾವನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ‘ಸೇವೆಯೇ ಸಂಘಟನೆ’ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾಗಿ ಏನೇನು ಸೇವಾ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಆಲೋಚಿಸಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ‘ಸೇವೆಯೇ ಸಂಘಟನೆ’ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂಸೇವಕರ ಅಭಿಯಾನವನ್ನು ನೀಡಿದೆ. ಆಶಾ ಕಾರ್ಯಕರ್ತೆಯರು ತೊಡಗಿಸಿಕೊಂಡಿರುವ ರೀತಿಯ ಕೆಲವೊಂದು ಸೇವಾ ಚಟುವಟಿಕೆಗಳನ್ನು ಪಕ್ಷದ ಕಾರ್ಯಕರ್ತರು ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಯಾವ ಯಾವ ರೀತಿಯಲ್ಲಿ ನಿರ್ವಹಿಸಬಹುದು ಎಂಬ ಬಗ್ಗೆ ಯೋಚನೆ ಮಾಡಬೇಕಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರಂತರ ಅಪಪ್ರಚಾರ, ಟೀಕೆಗಳನ್ನು ಎದುರಿಸಿ ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇಂದು ದೇಶದಾದ್ಯಂತ ಯಶಸ್ವಿ ಲಸಿಕಾ ಅಭಿಯಾನಗಳು ದಾಖಲೆ ಮಟ್ಟದಲ್ಲಿ ನಡೆಯುತ್ತಿವೆ. ಈ ಕಾಲಘಟ್ಟದಲ್ಲಿ ಆರೋಗ್ಯದ ಅನಿವಾರ್ಯತೆ, ಅವಶ್ಯಕತೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಸಂಬಂಧಿತ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆಗೆ ನೆರವು ನೀಡಿರುವುದನ್ನು ಮರೆಯಲು ಅಸಾಧ್ಯ. ಕೊರೋನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಕಾರ್ಯಪಡೆ, ವಿವಿಧ ಸ್ತರದ ಸಿಬ್ಬಂದಿ ವರ್ಗ ಹಾಗೂ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣ. ವೈದ್ಯರು, ಆರೋಗ್ಯ ಸಹಾಯಕರು ಮತ್ತು ಜನಪ್ರತಿನಿಧಿಗಳ ಅವಿರತ ಸೇವೆ ಶ್ಲಾಘನೀಯ ಎಂದರು.

ಇಂದು ಬಿಜೆಪಿ ಎಲ್ಲಾ ಸ್ತರಗಳಲ್ಲಿ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕೊರೋನಾ ಪೀಡಿತರ ಮನೆಗೆ ಭೇಟಿ ನೀಡಿ ತುರ್ತುಸೇವೆ ನೀಡಿರುವ ಬಗ್ಗೆ ಜನತೆಗೆ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತುರ್ತು ಸಹಾಯದ ಬಗ್ಗೆ ಸಹಾಯ ಹಸ್ತ ಚಾಚುವ ಪ್ರಧಾನಿ ಮೋದಿ ಕಲ್ಪನೆಯ ಆರೋಗ್ಯ ಸ್ವಯಂ ಸೇವಕರ ತಂಡದ ಜವಾಬ್ದಾರಿ ಮಹತ್ವಪೂರ್ಣ. ಅತ್ಯಂತ ಆತ್ಮವಿಶ್ವಾಸದಿಂದ ಪರಿಣಾಮಕಾರಿಯಾಗಿ ಆರೋಗ್ಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ತಂಡ ಕೊರೋನಾ ಮುಕ್ತ ಸಮಾಜ ನಿರ್ಮಾಣದತ್ತ ಅಮೂಲ್ಯ ಕೊಡುಗೆ ನೀಡುವಂತಾಗಲಿ ಎಂದು ಕೋಟ ಹಾರೈಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸೇವೆಯೇ ಸಂಘಟನೆ’ ತತ್ವದಡಿ ಸಾಮಾಜಿಕ ಕಳಕಳಿಯಿಂದ ಸೇವೆಗೈಯುವ ಮಹಾಶಕ್ತಿ ಕೇಂದ್ರ ಶಹ ಮೂರು ಮಂದಿ ಕಾರ್ಯಕರ್ತರನ್ನು ಗುರುತಿಸಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದಲ್ಲಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಪಕ್ಷದಿಂದ ಮುಂದಿನ ದಿನಗಳಲ್ಲಿ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಆಗಲಿದೆ. ಬಿಜೆಪಿ ಕಾರ್ಯಕರ್ತರು ಮೂಲತಃ ಪಕ್ಷ ಸಂಘಟನೆಯ ಜೊತೆಗೆ ಸೇವಾ ಮನೋಭಾವ ಹೊಂದಿರುವವರು. ಮುಂದಿನ ಕಾರ್ಯ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಸ್ವಯಂ ಸೇವಕರು ಸಾರ್ಥಕ ಸೇವೆ ಸಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಈ ನೆಲೆಯಲ್ಲಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರು ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಗೊಳಿಸಿ, ಸಮರ್ಪಣಾಭಾವದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಮಿತಿ ಸದಸ್ಯ ಡಾ! ವಿಜಯೇಂದ್ರ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ರಾಮಚಂದ್ರ ಕಾಮತ್ ಹಾಗೂ ಬಿಜೆಪಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದ ಜಿಲ್ಲಾ ಸಂಚಾಲಕ ಶರತ್ ಶೆಟ್ಟಿ ಉಪ್ಪುಂದ ಸ್ವಾಗತಿಸಿದರು. ಜಿಲ್ಲಾ ಸಂಚಾಲಕಿ ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿ, ಬೈಂದೂರು ಮಂಡಲ ಸಂಚಾಲಕ ಹರ್ಷ ಸಿದ್ಧಾಪುರ ವಂದಿಸಿದರು.

ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನದಡಿ ಕರ್ವಾಲು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮದಡಿ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ

ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನದಡಿ ನಮ್ಮ ಸಂಸ್ಥೆಯ ಕರ್ವಾಲು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮದಡಿ ಮಕ್ಕಳಿಗೆ ಬ್ಯಾಗ್ ಕೊಡುವ ಕಾರ್ಯಕ್ರಮ ಇಂದು‌ ನಡೆಯಿತು. ಮುಖ್ಯ ಅಭ್ಯಾಗತರಾಗಿ‌ ಡಾ.ಸುದರ್ಶನ್ ಭಟ್, ರಘುರಾಮ ಭಟ್, ಹಾಗೂ ನೀತಾ ಪ್ರಭು ಉಪಸ್ಥಿತರಿದ್ದರು. ಶಾಲಾ ಅಭಿವ್ರಧ್ಧಿಗೆ ಹಾಗೂ ಮಕ್ಕಳಿಗೆ ಬೇಕಾಗುವ ಸಕಲ ಸಹಕಾರ ನೀಡಲು ನಾವೆಲ್ಲ ಸದಾ ಸಿಧ್ಧ ಎಂದು ಆಗಮಿಸಿದ ಗಣ್ಯರು ಹೇಳಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನಾಗರಾಜ್ ಆಚಾರ್ಯ, ಮುಖ್ಯೋಪಾಧ್ಯಾಯರಾದ ಸವಿತ, ವಿಷ್ಣು ಸ್ನೇಹ ಬಳಗದ ಸದಸ್ಯರುಗಳಾದ ರಾಘವೇಂದ್ರ ಆಚಾರ್ಯ, ದಿನೇಶ್ ನಾಯಕ್, ಪೋಷಕರು, ಕೆಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 49 ಬ್ಯಾಗ್ ಹಸ್ತಾಂತರಿಸಿ ಇದಕ್ಕಾಗಿ ಧನ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಲಾಯಿತು

ಬೂತ್ ಸಶಕ್ತೀಕರಣದ ಮೂಲಕ ವಿಸ್ತಾರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ವಿ.ಸುನೀಲ್ ಕುಮಾರ್

ಮುಂಬರಲಿರುವ ಜಿ.ಪಂ., ತಾ.ಪಂ. ಚುನಾವಣೆಗಳ ಜೊತೆಗೆ ಪಕ್ಷ ಸಂಘಟನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಜಿಲ್ಲೆಯಾದ್ಯಂತ ಬೂತ್ ಸಶಕ್ತೀಕರಣದ ಮೂಲಕ ಹೊಸ ಆಲೋಚನೆಗಳೊಂದಿಗೆ ವಿಸ್ತಾರವಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ಜನಪ್ರತಿನಿಧಿಗಳು ಮತ್ತು ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್ ಸಹಿತ ಪಕ್ಷದ ವಿವಿಧ ಸ್ತರದ ಸಂಘಟನಾತ್ಮಕ ತಂಡಗಳ ನಡುವಿನ ಸಂಬಂಧವನ್ನು ಸದೃಢಗೊಳಿಸುವ ಜೊತೆಗೆ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಸಕ್ರಿಯಗೊಳಿಸುವ ಪ್ರಕ್ರಿಯೆ ನಡೆಯಬೇಕು. ಪಾರಂಪರಿಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಮುಂದಿನ ಎಲ್ಲಾ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಯಲ್ಲಿ ಬಿಜೆಪಿ ವಿಕ್ರಮ ವಿಜಯದ ದಾಖಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಬಿಜೆಪಿ ಸೂಚನೆಯಂತೆ ಬೂತ್ ಅಧ್ಯಕ್ಷರ ನಾಮಫಲಕ ಅಭಿಯಾನ ಮತ್ತು ಗ್ರಾಮ ಪಂಚಾಯತ್ ಮಟ್ಟದ ಸಮಾವೇಶವನ್ನು ನಿಗದಿತ ಸಮಯದ ಮಿತಿಯೊಳಗೆ ಆಯೋಜಿಸಬೇಕು. ಸರಕಾರದ ವಿವಿಧ ಯೋಜನೆಗಳನ್ನು ಜನತೆಗೆ ತಲುಪಿಸುವ ಜೊತೆಗೆ ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆಗೆ ವೇಗ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪಕ್ಷದ ನಿಗದಿತ ಕಾರ್ಯಕ್ರಮಗಳ ಅನುಷ್ಠಾನದ ಸಹಿತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜಿ.ಪಂ., ತಾ.ಪಂ. ಚುನಾವಣೆಗೆ ಸರ್ವ ಸನ್ನದ್ಧರಾಗಿ ಮಗದೊಮ್ಮೆ ಜಿಲ್ಲೆಯಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಎಲ್ಲರ ಸಂಘಟಿತ ಪ್ರಯತ್ನ ಅಗತ್ಯ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉಡುಪಿ ಡಿಸಿ ಜಗದೀಶ್‌ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾವ್‌ ನೇಮಕ

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ ಜಗದೀಶ್‌ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಭಾನುವಾರ ಆದೇಶ ಹೊರಡಿಸಿದೆ


ಉಡುಪಿಗೆ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮ ರಾವ್‌ ಅವರನ್ನು ನೇಮಕ ಮಾಡಲಾಗಿದ್ದು, ಜಿ ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ

2019 ರ ಅಗಸ್ಟ್‌ 20 ರಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿರ್ಗಮನ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರಿಂದ ಅಧಿಕಾರ ವಹಿಸಿ ಕೊಂಡ ಜಿ ಜಗದೀಶ್‌ ಆರಂಭದಿಂದಲ್ಲೆ ಜಿಲ್ಲೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಆರಂಭದಿಂದಲೂ ಸವಾಲುಗಳನ್ನೇ ಎದುರಿಸಿದ ಅವರು ವ್ಯವಸ್ಥಿತವಾಗಿ ನಿರ್ವಹಿಸಿದ ಕೀರ್ತೀ ಅವರದ್ದಾಗಿದೆ.

ಮಹಾಮಾರಿ ಕೊರೋನಾ ಸಮಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಧಿಕಾರಿ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಂಡರು. ಕೊರೋನಾ ಸಮಯದಲ್ಲಿ ಇಡೀ ರಾಜ್ಯ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಸಮಸ್ಯೆಯಿಂದ ಬಳಲುತ್ತಿದ್ದಾಗ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೊರತೆಯಾಗದಂತೆ ನಿರ್ವಹಣೆ ಮಾಡಿದರು.

ಜಿಲ್ಲೆಯಲ್ಲಿ ಖಾಸಗಿಯವರ ಸಹಭಾಗಿತ್ವವನ್ನು ಬಳಸಿಕೊಂಡು ಕೋವಿಡ್‌ ಕಿಟ್‌ ಗಳನ್ನು ಒದಗಿಸಿದ್ದಲ್ಲದೆ, ಸರಕಾರಿ ಆಸ್ಪತ್ರೆಗೆಳಿಗೆ ಅಂಬುಲೆನ್ಸ್‌ ಗಳನ್ನು ದಾನವಾಗಿ ನೀಡುವಂತೆ ಸಾರ್ವಜನಿಕರನ್ನು ಉತ್ತೇಜಿಸಿದರು. ಲಾಕ್‌ ಡೌನ್‌ ಸಮಯದಲ್ಲಿ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ನೇರವಾಗಿ ಅಲ್ಲದೆ ಹೋದರೂ ದಾನಿಗಳಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ, ಕಿಟ್‌ ವ್ಯವಸ್ಥೆ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ರೂಪಿಸಿದರು.

ಕೊರೊನಾ ತಡೆಗಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಜಗದೀಶ್‌ ಅವರು ಒಂದು ಹಂತದಲ್ಲಿ ವೀಪರೀತ ಹಂತಕ್ಕೆ ತಲುಪಿದ್ದ ವೇಳೆ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ತೋರಿಸಿದ ಕಾಳಜಿ ವರ್ಣನಾತೀತವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಅತೀ ಹೆಚ್ಚು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮೂಲಕ ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವತ್ತ ಶ್ರಮಿಸಿದ ಕೀರ್ತಿ ಅವರದ್ದಾಗಿದೆ.

ಇದಲ್ಲದೆ ಒರ್ವ ಜಿಲ್ಲಾಧಿಕಾರಿಯಾಗಿ ನೇರವಾಗಿ ಲಭಿಸುವ ಮೂಲಕ ಜಿಲ್ಲಾಡಳಿತವನ್ನು ಜನರ ಬಳಿ ಕೊಂಡೊಯ್ದರು. ಜಿಲ್ಲಾಧಿಕಾರಿಯಾಗಿ ಕೇವಲ ಕಚೇರಿಗೆ ಸೀಮಿತವಾಗದೆ ಇಡೀ ಜಿಲ್ಲೆಯ ಪ್ರವಾಸ ಮಾಡಿದ್ದಲ್ಲದೆ ಸಮಸ್ಯೆಗಳು ಬಂದಾಗ ವ್ಯವಸ್ಥಿತವಾಗಿ ಅವುಗಳನ್ನು ಪರಿಹಾರ ಮಾಡುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಆಗುಹೋಗುಗಳನ್ನು ಜನರಿಗೆ ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಪ್ರತಿನಿತ್ಯ ನಡೆಸುತ್ತಿದ್ದರು. ಸ್ವತಃ ಕೃಷಿಕರಾಗಿ ಮನೆಯಲ್ಲಿ ಕೃಷಿ ಮಾಡುವುದರೊಂದಿಗೆ ಹಡಿಲು ಭೂಮಿಯಲ್ಲಿ ಕೃಷಿಯನ್ನು ಮಾಡುವುದರ ಮೂಲಕ ಜನರಿಗೆ ಕೃಷಿಯನ್ನು ಉತ್ತೇಜಿಸುವ ಕೆಲಸ ಮಾಡಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಉಡುಪಿ ನಗರದಲ್ಲಿ ಏಕಾಏಕಿ ನೆರೆ ಏರಿ ನಷ್ಟಗಳು ಸಂಭವಿಸಿದಾಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಜನರ ಶ್ಲಾಘನೆಗೆ ಪಾತ್ರವಾಗಿದ್ದರು. ಅವರ ಅವಧಿಯಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಕಾಲ ಯೋಜನೆಯಲ್ಲಿ ಪ್ರಥಮ ಸ್ಥಾನ, ಕೋವಿಡ್‌ ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆಯಲು ಕಾರಣವಾಗಿದೆ.

ಇಷ್ಟೆಲ್ಲಾ ಉತ್ತಮ ಕೆಲಸಗಳನ್ನು ಮಾಡಿದ ಜಿಲ್ಲಾಧಿಕಾರಿ ಜಗದೀಶ್‌ ಅವರಿಗೆ ಟೀಕೆಗಳೇನು ಬಿಟ್ಟು ಹೋಗಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಕೊರೋನಾ ಸಮಯದಲ್ಲಿ ಮಾಸ್ಕ್‌ ಧಾರಣೆ ಮತ್ತು ಕೋವಿಡ್‌ ನಿಯಮಗಳ ವಿಚಾರದಲ್ಲಿ ಅನಗತ್ಯ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದ್ದರು. ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ವಿರೋಧ ಪಕ್ಷದ ಟೀಕೆಗೆ ಕೂಡ ಗುರಿಯಾಗಿದ್ದರು. ಎಲ್ಲದರ ನಡುವೆ ಪ್ರಶಂಸೆ ಮತ್ತು ಟೀಕೆಗಳ ನಡುವೆ ಎರಡು ವರ್ಷಗಳ ಕಾಲ ಜಿಲ್ಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

ಮಣಿಪುರ ಗ್ರಾಮ ಕುಂತಳ ನಗರದ ಧಾರ್ಮಿಕ ಕ್ಷೇತ್ರ ಮೋಕ್ಷಗಿರಿಯಲ್ಲಿ ಡಂಪಿಂಗ್ ಯಾರ್ಡ್ ಮತ್ತು ಸ್ಮಶಾನ ನಿರ್ಮಾಣ: ಗ್ರಾಮಸ್ಥರ ಆಕ್ರೋಶ

ಮಣಿಪುರ ಗ್ರಾಮದ ಕುಂತಳ ನಗರ ಮೋಕ್ಷಗಿರಿ ಪುಣ್ಯ ಕೇತ್ರ ಮತ್ತು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಡಂಪಿಂಗ್ ಯಾರ್ಡ್ ಮತ್ತು ಸ್ಮಶಾನ ನಿರ್ಮಾಣಕ್ಕೆ ಹುನ್ನಾರ – ಸ್ಥಳೀಯ ಜನರಿಂದ ಬಾರಿ ವಿರೋಧ

ಮಣಿಪುರ ಗ್ರಾಮದ ಕುಂತಳ ನಗರದ ಮೋಕ್ಷ ಗಿರಿ ಪುಣ್ಯ ಕೇತ್ರದಲ್ಲಿ ದೇವಸ್ಥಾನ ನಿರ್ಮಾಣ, ಪಿಲಿ ಪಂಜರವನ್ನು ದೇಶದ ಒಂದು ಟೂರಿಸಮ್ಮ್ ಕೇತ್ರ ಮಾಡುವ ಉದ್ದೇಶದಿಂದ ಹಲವಾರು ವರ್ಷಗಳ ಹಿಂದೆ 30ಎಕ್ರೆ ಜಾಗದಲ್ಲಿ ಕಾರ್ಯಕ್ರಮ ರೂಪಿಸಿ ಕಾಮಗಾರಿ ನಡೆದಿತ್ತು. ಆದರೆ ಜಗನ್ನಾಥ ಶೆಟ್ಟಿ ಯವರ ನಿಧನದಿಂದ ಈ ಕೆಲಸ ನಿಂತಿತ್ತು.

ಈ ಜಾಗದ ಹತ್ತಿರ ಸುಪ್ರಸಿದ್ದ ಕೋಡಂಗಳ ವಿಷ್ಣು ಮೂರ್ತಿ ದೇವಸ್ಥಾನ ಇದೆ. ಇಲ್ಲಿ ದಿನಾ ಪೂಜೆ ಪೂರಸ್ಕಾರ, ಜಾತ್ರೆ ನಡೆಯುತಿದ್ದು ಬಹು ದೊಡ್ಡ ಪುಣ್ಯ ಕೇತ್ರ ವಾಗಿ ಜನ ಆಕರ್ಷಣೆಗೆ ಕಾರಣವಾಗಿದೆ. ಈ ಕ್ಷೇತ್ರವು ಅತೀ ಎತ್ತರವಾದ ಪ್ರದೇಶದಲ್ಲಿದ್ದು ಕುಂಜಾರು ಗಿರಿ, ಮಣಿಪಾಲ, ಕಡಲ ತೀರ ನೋಡಲು ಪ್ರೇಕ್ಷಣಿಯ ಸ್ಥಳವಾಗಿದೆ. ಈ ಪ್ರದೇಶದ ಹತ್ತಿರ, ಹೋಗುವ ರಸ್ತೆಯಲ್ಲೇ ಭಾರತೀ ಹಿರಿಯ ಪ್ರಾಥಮಿಕ ಶಾಲೆ, ಗೋ ಆಸ್ಪತ್ರೆ, ಗೋಚರ ಸ್ಥಳ, ಹಲವಾರು ಮನೆಗಳಿದ್ದು ಇಂತಹ ಸುಂದರ, ಪರಿಸರ ಪ್ರೇಮಿ ಪ್ರದೇಶ, ಹಿಂದೂಗಳ ಭಾವನೆಗೆ ವಿರುದ್ಧವಾಗಿ ಮಣಿಪುರ ಗ್ರಾಮ ಪಂಚಾಯತ್ ಯಾರಿಗೂ ತಿಳಿಸದೇ ಡಂಪಿಂಗ್ ಯಾರ್ಡ್ ನಿರ್ಮಾಣ ಮತ್ತು ಸ್ಮಶಾನ ಕಟ್ಟಲು ಸರ್ವೇ ನಂಬರ್ 242 – 1.6 ಎಕ್ರೆ ಜಗದಲ್ಲಿ ಜೆ ಸಿ ಬಿ ಮೂಲಕ ಕೆಲಸ ಪ್ರಾರಂಸಿರುವುದು ಜನರನ್ನು ರೊಚ್ಚಿಗೇರಿಸಿದೆ. ಜನರ ಬಾರಿ ವಿರೋಧ, ಹಿಂದೂ ಜನರ ಭಾವನೆಗೆ ವಿರುದ್ಧ ಮಾಡುವ ಇಂತಹ ಕಾರ್ಯಕ್ಕೆ ವಿರೋಧ ಬಂದ ನೆಲೆಯಲ್ಲಿ ಮಣಿಪುರ ಪಂಚಾಯತ್ ಕಾಮಗಾರಿ ಕೆಲಸ ಸ್ಥಗಿತ ಗೊಳಿಸಿದೆ.

ಸ್ಥಳೀಯ ನಿವಾಸಿಗಳು ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು, ಜನರ ಭಾವನೆಗೆ ಮನ್ನಣೆ ಕೊಟ್ಟು, ಬೇರೆ ಸ್ಥಳದಲ್ಲಿ ಜನರ ಅಭಿಪ್ರಾಯ ಪಡೆದು ಮಾಡಬೇಕೆಂದು ಮಣಿಪುರ ಗ್ರಾಮ ಪಂಚಾಯತ್ ಗೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ CEO ರವರಿಗೆ ಮನವಿ ಮಾಡಿರುತ್ತಾರೆ. ಯಾವುದೇ ಕಾರಣಕ್ಕೂ ಜನರ ಅಭಿಪ್ರಾಯ ಕೇಳದೆ ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಊರಿನ ಜನತೆ ಬಿಡುವುದಿಲ್ಲ ಎಂದು ಊರ ಮುಖಂಡರು, ಜನ ಪ್ರತಿನಿಧಿಗಳು ತಿಳಿಸಿರುತ್ತಾರೆ

ಪ್ರತೀ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಗೋಹತ್ಯೆ ನಿಷೇಧ ಕಾನೂನಿಗೆ ಪೂರಕವಾಗಿ ಪ್ರತೀ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ಒತ್ತು ನೀಡಿ ಅನುದಾನವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪಿಸಲು ಅಕ್ಟೋಬರ್ 2, 2021ರ ಗಡುವನ್ನು ವಿಧಿಸಿರುವ ರಾಜ್ಯ ಸರಕಾರ ಪ್ರತೀ ಜಿಲ್ಲೆಗೆ ರೂ.24 ಲಕ್ಷಗಳ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಗೋಶಾಲೆಗಳಿಗೆ ಜೈವಿಕ ಬೇಲಿ ನಿರ್ಮಾಣ, ದನದ ಕೊಟ್ಟಿಗೆ ರಚನೆ, ಕೃಷಿ ಹೊಂಡಗಳನ್ನು ನಿರ್ಮಿಸುವುದು ಮತ್ತು ಮೇವು ಬೆಳೆಯಲು ಈ ಅನುದಾನವನ್ನು ಬಳಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವ ರಾಜ್ಯ ಸರಕಾರ ಸ್ಥಳೀಯ ಖಾಸಗಿ ಟ್ರಸ್ಟ್ ಗಳೊಂದಿಗೆ ಸಂಬಂಧ ಹೊಂದುವ ಅವಕಾಶದ ಬಗ್ಗೆಯೂ ಸೂಕ್ತ ನಿರ್ದೇಶನ ನೀಡಿರುವುದು ರಾಜ್ಯದಾದ್ಯಂತ ಗೋಶಾಲೆಗಳ ಉನ್ನತೀಕರಣಕ್ಕೆ ನಾಂದಿ ಹಾಡಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಮೀನು ಪಡೆದು ತಿರುಗುತ್ತಿರುವ ವರಿಷ್ಠ ನಾಯಕರ ಪಕ್ಷ ಕಾಂಗ್ರೆಸ್‍ನಿಂದ ಬಿಜೆಪಿಗೆ ನೈತಿಕತೆಯ ಪಾಠ ಅನಗತ್ಯ – ಉಡುಪಿ ಜಿಲ್ಲಾ ಬಿಜೆಪಿ

ದೇಶ ವಿಭಜನೆಗೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ನಾಯಕರ ಸಹಿತ ಒಂದೇ ಕುಟುಂಬದ ವೈಭವೀಕರಣ ಮತ್ತು ನಿರಂತರ ಭ್ರಷ್ಟಾಚಾರದ ಮೂಲಕ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶದ ಅಸ್ಮಿತೆಯನ್ನು ಪ್ರಪಾತಕ್ಕೆ ತಳ್ಳಿರುವ ಕುಖ್ಯಾತಿಗೆ ಪಾತ್ರವಾಗಿರುವ, ಜಾಮೀನು ಪಡೆದು ತಿರುಗುತ್ತಿರುವ ವರಿಷ್ಠ ನಾಯಕರ ಪಕ್ಷ ಕಾಂಗ್ರೆಸ್‍ನಿಂದ ಬಿಜೆಪಿಗೆ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ.

ಭ್ರಷ್ಟಾಚಾರದ ಮೂಲಕ ಬಿಜೆಪಿಗೆ ಅಧಿಕಾರ ಎಂಬ ಶೀರ್ಷಿಕೆಯಡಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ವಿಚಾರ ಕಾಂಗ್ರೆಸ್‍ನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ದೇಶದ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂಬ ಮಹಾತ್ಮಾ ಗಾಂಧಿ ಮಾತನ್ನೇ ನಡೆಸಿಕೊಡದ ಕಾಂಗ್ರೆಸ್ ಸಾಚಾತನದ ಮಾತನ್ನಾಡುತ್ತಿರುವುದು ವಿಪರ್ಯಾಸ. ಕಾಂಗ್ರೆಸ್ ರಾಷ್ಟ್ರೀಯ ಸಮಿತಿಯ ನಿರ್ಣಯದಂತೆ ಅಂದು ನಡೆದ ದೇಶದ ಪ್ರಥಮ ಪ್ರಧಾನಿ ಅಭ್ಯರ್ಥಿ ಚುನಾವಣೆಯಲ್ಲಿ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಾಭಾಯಿ ಪಠೇಲ್ ಅತಿ ಹೆಚ್ಚು ಮತಗಳನ್ನು ಪಡೆದು ಬಹುಮತ ಪಡೆದಿದ್ದರೂ, ಕನಿಷ್ಠ ಮತ ಪಡೆದ ಜವಾಹರಲಾಲ್ ನೆಹರೂ ಹಿಂಬಾಗಿಲಿನಿಂದ ಪ್ರಧಾನಿಯಾಗಿರುವುದು ದೇಶದ ಕರಾಳ ಇತಿಹಾಸವಾಗಿದೆ. ದೇಶದ ಸನಾತನ ಸಂಸ್ಕೃತಿ ವೈಭವಗಳನ್ನು ಮರೆಮಾಚುವ ಪ್ರಯತ್ನದ ಜೊತೆಗೆ ಹಿಂದೂ ವಿರೋಧಿ ನೀತಿ, ನೈಜ ಸ್ವಾತಂತ್ರ್ಯ ಹೋರಾಟಗಾರ ಅಪಮಾನ, ಸರಣಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿರುವುದು ಇವೆಲ್ಲವೂ ಕಾಂಗ್ರೆಸ್ ಸಾಧನೆಯಾಗಿದೆ. ನಕಲಿ ಗಾಂಧಿ ಕುಟುಂಬಕ್ಕೆ ಬಹುಪರಾಕ್ ಹೇಳುವ ಮೂಲಕ ಗುಲಾಮಿ ಮನಸ್ಥಿತಿಯನ್ನು ಮೇಳೈಸುತ್ತಿರುವ ಕಾಂಗ್ರೆಸ್‍ನಿಂದ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವೆನಿಸಿದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.

ಜಗತ್ತಿನ ಪ್ರಚಲಿತ ವಿದ್ಯಮಾನಗಳ ಎಲ್ಲ ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆರಳ ತುದಿಯಲ್ಲಿ ಲಭ್ಯವಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಭ್ರಷ್ಟಾಚಾರಕ್ಕೆ ಪರ್ಯಾಯ ಪದವೆಂಬಂತಿರುವ ಕಾಂಗ್ರೆಸ್‍ನ ಸಾಚಾತನದ ಹೇಳಿಕೆ ಹಾಸ್ಯಾಸ್ಪದವೆನಿಸಿದೆ. ದೇಶದ ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಜೀಪ್ ಹಗರಣ, 2ಜಿ ಸ್ಪೆಕ್ಟ್ರಮ್, ಬೋಫೋರ್ಸ್, ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್, ನ್ಯಾಷನಲ್ ಹೆರಾಲ್ಡ್, ಸ್ಕೋರ್ಪಿನ್ ಸಬ್ ಮೆರೇನ್, ಶಾರದಾ ಚಿಟ್ ಫಂಡ್, ಸತ್ಯಂ, ಕಾಮನ್ ವೆಲ್ತ್ ಗೇಮ್, ಕಲ್ಲಿದ್ದಲು ಹಗರಣ ಮುಂತಾದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ನೂರಾರು ಹಗರಣಗಳಲ್ಲಿ ಕಾಂಗ್ರೆಸ್‍ನ ಉನ್ನತ ನಾಯಕರು ಸಿಲುಕಿದ್ದು, ಇನ್ನೂ ಹಲವಾರು ಹಗರಣಗಳ ತನಿಖೆ ಪ್ರಗತಿಯಲ್ಲಿರುವುದು ಕಾಂಗ್ರೆಸ್‍ಗೆ ಭೂಷಣವೆನಿಸಿದೆಯೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಹಗರಣ ರಹಿತ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಮತ್ತು ಜನಪರ ಸ್ವಚ್ಛ ಪಾರದರ್ಶಕ ಆಡಳಿತ ನೀಡುತ್ತಿರುವುದು ವಿಶ್ವಕ್ಕೇ ಮಾದರಿ ಎನಿಸಿದೆ. ಇವೆಲ್ಲವನ್ನೂ ಅರಗಿಸಿಕೊಳ್ಳಲಾಗದ ಭ್ರಷ್ಟ ಕಾಂಗ್ರೆಸ್ ದೇಶದೆಲ್ಲೆಡೆ ಜನತೆಯಿಂದ ತಿರಸ್ಕೃತಗೊಂಡಿದ್ದರೂ ಕೇವಲ ಅಸ್ತಿತ್ವಕ್ಕಾಗಿ ಬಿಜೆಪಿ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳ ಜನಪರ ಆಡಳಿತ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿ ಸಂಘಟನಾತ್ಮಕವಾಗಿ ಪಕ್ಷವನ್ನು ರಾಜ್ಯಾದ್ಯಂತ ಸದೃಢಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಶಸ್ಸಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗೆಸ್ ವೃಥಾ ಆರೋಪದಲ್ಲಿ ತೊಡಗಿರುವುದು ಹತಾಶ ಮನೋಭಾವದ ಪ್ರತೀಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರ ಬಗ್ಗೆ ಲಂಗು ಲಗಾಮಿಲ್ಲದೆ ನಾಲಗೆ ಹರಿಯಬಿಡುತ್ತಿರುವ ಮತ್ತು ಹಗರಣಗಳ ದೊರೆಗಳೆನಿಸಿ ಜೈಲುವಾಸ ಅನುಭವಿಸಿರುವ ಕಾಂಗ್ರೆಸ್ ನಾಯಕರ ಸಾಚಾತನದ ಬಗ್ಗೆಯೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಎ. ಸುವರ್ಣರವರಿಗೆ ಮಾತೃ ವಿಯೋಗ: ಜಿಲ್ಲಾ ಬಿಜೆಪಿ ಸಂತಾಪ.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಎ. ಸುವರ್ಣರವರ ಮಾತೃಶ್ರೀಯವರಾದ ಶ್ರೀಮತಿ ಪುಷ್ಪಾವತಿ ಆನಂದ ಪುತ್ರನ್ ರವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜನಾನುರಾಗಿಯಾಗಿದ್ದ ಶ್ರೀಮತಿ ಪುಷ್ಪಾವತಿ ಆನಂದ ಪುತ್ರನ್ ರವರ ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಯಶ್ಪಾಲ್ ಸುವರ್ಣ ಹಾಗೂ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started