ಕಾಪು: ಬಿಜೆಪಿ ಕಾಪು ಮಂಡಲದ ಕಟಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 81 ರಲ್ಲಿ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಬಿಜೆಪಿಯ ಇತಿಹಾಸದ ಬಗ್ಗೆ, ಪ್ರಸ್ತುತ ಬಿಜೆಪಿ ಆಡಳಿತದ ಬಗ್ಗೆ ಹಾಗೂ ಮುಂದೆ ಬಿಜೆಪಿ ಚುನಾವಣೆ ಗೆಲ್ಲುವ ಅನಿವಾರ್ಯತೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಪಕ್ಷದ ಗೆಲುವಿಗೆ ಶ್ರಮಿಸಲು ಕರೆ ನೀಡಿದರು. ಬೂತ್ ಅಧ್ಯಕ್ಷರಾದ ರಂಜಿತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಗುರುಕ್ರಪಾ ರಾವ್, ಪಂಚಾಯತ್ ಸದಸ್ಯರಾದ ಕವಿತಾ , ಪಕ್ಷದ ಪ್ರಮುಖರಾದ ಗಂಗಾಧರ್ ಸುವರ್ಣ, ಮುರಳೀಧರ ಪೈ, ಇಂದುಶೇಖರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಕ್ತಿ ಕೇಂದ್ರ ಪ್ರಮುಖ್ ಸಂತೋಷ್ ಸ್ವಾಗತಿಸಿ ಕಾರ್ಯಕ್ರಮ ನಡೆಸಿದರು.
ಬೆಂಗಳೂರು: ಅರಶಿನ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಕಾರಣ ಮಾರುಕಟ್ಟೆ ಮದ್ಯಸ್ಥಿಕೆ ಯೋಜನೆಯಡಿಯಲ್ಲಿ ಅರಶಿನ ಬೆಳೆಯನ್ನು ಖರೀದಿಸಬೇಕೆಂದು ರಾಜ್ಯದ ಅರಶಿನ ಬೆಳೆಗಾರರ ನಿಯೋಗ ಕಳೆದ ವಾರವಷ್ಟೆ ನನಗೆ ಮನವಿ ಸಲ್ಲಿಸಿ, ಅರಶಿನ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿ ಮಾಡಿದ್ದರು.
ಕರ್ನಾಟಕ ರಾಜ್ಯ ಸರ್ಕಾರವು ಸಹ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿತ್ರು.
ಮನವಿಗೆ ಸ್ಪಂದಿಸಿ ನಾನು ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಆದೇಶಿಸಿದ್ದೆ. ಶೀಘೃವಾಗಿ ಕೇಂದ್ರದಿಂದ ಆದೇಶ ಹೊರಡಿಸಿ, ಅರಿಸಿಣ ಬೆಳೆಯ ರೈತರ ಕಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ.
2022-23 ನೆ, ಸಾಲಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅರಿಸಿಣ ಖರೀದಿಗೆ ಪ್ರತಿ ಕ್ವಿಂಟಲ್ ಗೆ ರೂ.6,694/- ರಂತೆ ಅನುಮೋದನೆಯನ್ನು ದಿನಾಂಕ 22 ಮಾರ್ಚ್ 2023=ರಂದು ನೀಡಲಾಗಿದೆ.
ತ್ವರಿತವಾಗಿ ರಾಜ್ಯ ಸರ್ಕಾರ ಅರಶಿನದ ಖರೀದಿ ಪ್ರಕ್ರಿಯೆ ಕೈಗೊಳ್ಳಲಿದೆ.
ಅರಶಿನ ಬೆಳೆಗೆ ಪ್ರಚಲಿತ ಮಾರುಕಟ್ಟೆ ದರ ರೂ. 5200 (ಪ್ರತಿ ಕ್ವಿಂಟಲ್ ಗೆ) ಇರುತ್ತದೆ, ಪ್ರಸ್ತುತ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ರೂ. 6694/- (ಪ್ರತಿ ಕ್ವಿಂಟಲ್ ಗೆ) ಇರುತ್ತದೆ. ಆದುದರಿಂದ ರೈತರಿಗೆ ಮಾರುಕಟ್ಟೆ ಮದ್ಯ ಪ್ರವೇಶ ಯೋಜನೆಯಿಂದ ಪ್ರತಿ ಕ್ವಿಂಟಲ್ ಗೆ, ಅಂದಾಜು ರು. 1400 ರಿಂದ ರೂ.1500 ಗಳಷ್ಟು ಲಾಭವಾಗುತ್ತದೆ.
ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ಕೇಂದ್ರ ಸರ್ಕಾರದ ಈ ಆದೇಶದಿಂದ ಅನುಕೂಲವಾಗಲಿದೆ.
ದೇಶದ ರೈತರ ಹಿತ ಕಾಯುವಲ್ಲಿ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿದ್ದು, ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದೆ ರಾಜ್ಯದ ಅರಿಸಿಣ ಬೆಳೆಗಾರರ ಕಷ್ಟಕ್ಕೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸ್ಪಂದಿಸಿದೆ.
ಕರ್ನಾಟಕ ರಾಜ್ಯದ ಅರಶಿನ ಬೆಳೆಗಾರರ ಸಮಸ್ಯೆಗೆ ತ್ವರಿತವಾಗಿ ಪರಿಹಾರವನ್ನು ಒದಗಿಸಿದ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರಸಿಂಗ್ ತೋಮರ್ ಅವರಿಗೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರಿಗೆ ಅನಂತ ಧನ್ಯವಾದಗಳನ್ನು ತಿಳಿಸುತ್ತೇನೆ.
*(ಶೋಭಾ ಕರಂದ್ಲಾಜೆ-ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆಯ ಸಚಿವರು)*
ಬೆಂಗಳೂರು: ಕಾಂಗ್ರೆಸ್‍ನವರು ಜನರನ್ನು ಮರುಳು ಮಾಡಲು, ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು! ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನೀವು 2013ರಿಂದ 2018ರವರೆಗೆ ಅಧಿಕಾರ ನಡೆಸಿದ್ದೀರಿ. ಆಗ ನೀವು ಒಂದು ಸಮುದಾಯದ ಓಲೈಕೆಗಾಗಿ ಮಾತ್ರ ಯೋಜನೆ ಕೊಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನ ಸುಳ್ಳು ಭರವಸೆ ನಂಬಲು ಕರ್ನಾಟಕದ ಜನರು ಮೂರ್ಖರಲ್ಲ. ಕರ್ನಾಟಕದ ಜನರು ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಅವರೆಲ್ಲರೂ ಮಾಧ್ಯಮ ನೋಡುತ್ತಾರೆ; ಸೋಷಿಯಲ್ ಮೀಡಿಯ ಗಮನಿಸುತ್ತಾರೆ; ಯಾವ ರಾಜ್ಯದಲ್ಲಿ ನೀವು ಮೋಸ ಮಾಡಿದ್ದೀರೆಂಬ ಅರಿವು ಅವರಿಗೆ ಇದೆ ಎಂದು ತಿಳಿಸಿದರು.
2001ರ ಗ್ಯಾರಂಟಿ ಕಾರ್ಡ್, 2013ರ ಗ್ಯಾರಂಟಿ ಕಾರ್ಡ್ ಏನಾಗಿದೆ ಎಂದು ಕಾಂಗ್ರೆಸ್‍ನ್ನು ಜನತೆ ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.
ಯಾವ ಹಣದಿಂದ ಕೊಡುತ್ತೀರಿ? ಮಹಿಳೆಯರಿಗೆ 2 ಸಾವಿರ, 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 3,000 -1,500 ರೂಪಾಯಿಯನ್ನು ಯಾವ ಹಣದಿಂದ ಕೊಡುತ್ತೀರಿ? ಯಾರಾದರೂ ಜಾರ್ಜ್ ಸೊರೊಸ್ ಅಂಥವರು ನಿಮಗೆ ಹಣ ಕೊಡ್ತಾರಾ? ಎಂದು ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಕರ್ನಾಟಕದ ಬಜೆಟ್‍ನಲ್ಲಿ ಇದನ್ನು ಕೊಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಈ ವರ್ಷ ನಮ್ಮ ಸರಕಾರ 3 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದೆ. ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗುವ ಮಾಹಿತಿ ಇದೆ. ಅಥವಾ 3 ಲಕ್ಷ ಕೋಟಿಯೇ ಸಂಗ್ರಹ ಆಗಲಿ; ಈಗ ಕಾಂಗ್ರೆಸ್‍ನವರು ಕೊಟ್ಟ ಭರವಸೆಗಳನ್ನು ಈಡೇರಿಸಲು 70-75 ಸಾವಿರ ಕೋಟಿ ಬೇಕು. ಸನ್ಮಾನ್ಯ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಘೋಷಣೆಯಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಅಜ್ಜ, ಅಜ್ಜಿಗೆ ತಲಾ 1,200 ಸೇರಿ 2,400 ರೂಪಾಯಿ ನಾವು ಕೊಡುತ್ತಿದ್ದೇವೆ. ನಿಮ್ಮದು ಭರವಸೆ ಮಾತ್ರ. ನಾವು ನಿಜವಾಗಲೂ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಇದೇ ರೀತಿ ರಾಜಸ್ಥಾನದಲ್ಲೂ ಗ್ಯಾರಂಟಿ ಕಾರ್ಡ್ ಹಂಚಿದ್ದರು. 2018ರ ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರಿಗೆ 3,500 ರೂಪಾಯಿ ಭತ್ಯೆ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಕೊಟ್ಟು ತಿಳಿಸಿದ್ದಿರಿ. ಆದರೆ, ಇವತ್ತಿನ ತನಕ ಅದನ್ನು ಈಡೇರಿಸಿಲ್ಲ. ಛತ್ತೀಸ್‍ಗಡದಲ್ಲೂ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ. ನಿಮ್ಮ ಅಧಿಕಾರ ಇದ್ದರೂ ಅದನ್ನು ಈಡೇರಿಸಿಲ್ಲ ಎಂದು ಟೀಕಿಸಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಈ ಕುರಿತು ಉತ್ತರಿಸಲಿ ಎಂದು ಆಗ್ರಹಿಸಿದರು.
ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿ ಆದಾಗ ಭರವಸೆ, ಗ್ಯಾರಂಟಿ ಕಾರ್ಡ್ ಕೊಡಲಿಲ್ಲ. ಬಿಜಾಪುರದಲ್ಲಿ ಅಜ್ಜಿ ಒಬ್ಬರು ಕಾಲಿಗೆ ಬಿದ್ದು, ‘ನನಗೆ ಗಂಡ ಇದ್ದಾರೆ, ಮಕ್ಕಳಿದ್ದಾರೆ, ಊಟ ಮಾಡಲು ಹಣ ಇಲ್ಲ’ ಎಂದಾಗ ‘ತಾಯಿ ನಿನಗೂ ಏನಾದ್ರೂ ಮಾಡುತ್ತೇನೆ’ ಎಂದು ತಿಳಿಸಿ ವಾಪಸ್ ಬಂದರು. ನಂತರದ ಕ್ಯಾಬಿನೆಟ್ ಸಭೆಯಲ್ಲಿ ಸಂಧ್ಯಾ ಸುರಕ್ಷಾ ಜಾರಿಗೊಳಿಸಿ ಅಜ್ಜ- ಅಜ್ಜಿಗೆ ಒಂದು ಮನೆಗೆ 2,400 ಸಿಗುವಂತೆ ಮಾಡಿದವರು ಯಡಿಯೂರಪ್ಪನವರು ಎಂದು ವಿವರಿಸಿದರು.
ರಾಮಕೃಷ್ಣ ಹೆಗಡೆಯವರ ಕಾಲದಿಂದ ವಿಧವಾ ವೇತನ 75 ರೂಪಾಯಿಯಿಂದ ಆರಂಭವಾಗಿತ್ತು. ನೀವು ಹಲವು ವರ್ಷಗಳ ಆಡಳಿತ ನಡೆಸಿದ ಬಳಿಕ ಅದು 200 ರೂಪಾಯಿಗೆ ಬಂದು ನಿಂತಿತ್ತು. ವಿಧವಾ ವೇತನ ಹೆಚ್ಚಿಸಿ 1 ಸಾವಿರ ನೀಡುತ್ತಿರುವುದು ನಮ್ಮ ಸರಕಾರ ಎಂದ ಅವರು, ಕಾಂಗ್ರೆಸ್‍ನವರು ಯಾವ ಹೆಣ್ಮಕ್ಕಳಿಗೆ 2 ಸಾವಿರ ಕೊಡುತ್ತಾರೆ? ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಕೊಡುತ್ತಾರಾ? ಎಲ್ಲರಿಗೂ ಕೊಡುತ್ತಾರಾ? ಅಥವಾ ವಿಧವೆಯರಿಗೆ ಮಾತ್ರ ಕೊಡಲಿದ್ದಾರಾ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಜನರಿಗೆ ಸುಳ್ಳು ಹೇಳುತ್ತಿದ್ದಾರೆ. 2000-2001ರಲ್ಲಿ ನಿರುದ್ಯೋಗಿ ಯುವಕರಿಗೆ 5 ಸಾವಿರ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿತ್ತು. ಅದಕ್ಕಾಗಿ ನಾವು ಹೋರಾಟವನ್ನೂ ಮಾಡಿದ್ದೆವು. ಆದರೆ, ಅದು ಈಡೇರಲಿಲ್ಲ ಎಂದು ಟೀಕಿಸಿದರು. ಸುಳ್ಳು ಹೇಳುವುದಕ್ಕೂ, ಮೋಸ ಮಾಡುವುದಕ್ಕೂ ಒಂದು ಮಿತಿ ಇರಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿಗರಿಗೆ ಚುನಾವಣೆ ಬಂದಾಗ ಬಡವರ, ಹೆಣ್ಮಕ್ಕಳ, ನಿರುದ್ಯೋಗಿ ಯುವಕರ ನೆನಪಾಗುತ್ತದೆ ಎಂದು ಆರೋಪಿಸಿದ ಅವರು, ಪ್ರಧಾನಿಯವರು ಖಾಲಿ ಹುದ್ದೆ ಭರ್ತಿ ಮಾಡುವ ಮೂಲಕ ಕ್ರಾಂತಿ ಮಾಡುತ್ತಿದ್ದಾರೆ. ಇದು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ರೈಲ್ವೆಯಲ್ಲಿ ಉದ್ಯೋಗ ಪತ್ರ ಹಂಚುವ ಕೆಲಸ ನಡೆದಿದ್ದು, ನಾನು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪ್ರಧಾನಿಯವರು 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, ಅದನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ಸಿಗರು ಈಗ ಇರುವ ಯೋಜನೆಗಳನ್ನು ನಿಲ್ಲಿಸಿ ಹೊಸ ಯೋಜನೆ ಜಾರಿಗೊಳಿಸಲಿದ್ದಾರೆಯೇ ಎಂದು ಕೇಳಿದರು.
ಯಡಿಯೂರಪ್ಪನವರ ‘ಸುವರ್ಣ ಭೂಮಿ’ ಯೋಜನೆಯನ್ನು ಸಿದ್ದರಾಮಯ್ಯನವರು 2013ರಲ್ಲಿ ಸ್ಥಗಿತಗೊಳಿಸಿ, ಶಾದಿ ಭಾಗ್ಯ ಜಾರಿಗೊಳಿಸಿದರು. ಸಿದ್ದರಾಮಯ್ಯನವರು ಆಡಳಿತ ಅವಧಿಯ ನಾಲ್ಕೂವರೆ ವರ್ಷಗಳ ಕಾಲ 5 ಕೆಜಿ ಅಕ್ಕಿಯನ್ನಷ್ಟೇ ಕೊಟ್ಟಿದ್ದರು. ಕೊನೆಯ ಮೂರ್ನಾಲ್ಕು ತಿಂಗಳು 7 ಕೆಜಿ ಅಕ್ಕಿ ಕೊಡಲಾಗಿತ್ತು ಎಂದು ನೆನಪಿಸಿದರು. ಆಗಲೂ ಕೇಂದ್ರ ಸರಕಾರವು ಪ್ರತಿ ಕೆಜಿಗೆ 32 ರೂಪಾಯಿಯಂತೆ ಅಕ್ಕಿ ಖರೀದಿಸಿ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ 3 ರೂಪಾಯಿಗೆ ಕೊಡುತ್ತಿತ್ತು. ಕೇಂದ್ರವು ಗೋಧಿ ಪ್ರತಿ ಕೆಜಿಗೆ 22 ರೂಪಾಯಿಗೆ ಖರೀದಿಸಿ ರಾಜ್ಯ ಸರಕಾರಗಳಿಗೆ 2 ರೂಪಾಯಿಗೆ ಕೊಡುತ್ತಿದೆ. ಕೇಂದ್ರ ಸರಕಾರ ನಾವು ಪಡೆಯುವ ರೇಷನ್‍ಗಾಗಿ 1 ಲಕ್ಷ 80 ಸಾವಿರ ಕೋಟಿಯನ್ನು ಪ್ರತಿ ವರ್ಷ ಅಕ್ಕಿ ಮತ್ತು ಗೋಧಿ ಖರೀದಿಗೆ ಬಳಸುತ್ತಿದೆ. ಸಿದ್ದರಾಮಯ್ಯನವರು ಆವತ್ತೂ ಬೋರ್ಡ್ ಹಾಕಿಕೊಂಡರು; ಅನ್ನ ಭಾಗ್ಯ ಯೋಜನೆಯ ಸಿದ್ದರಾಮಯ್ಯನವರು ಎಂದು ಬೋರ್ಡ್ ಇತ್ತು. ಆದರೆ, ಮೋದಿಯವರು ಅಕ್ಕಿಗೆ 29 ರೂಪಾಯಿ, ಗೋಧಿಗೆ 20 ರೂಪಾಯಿ ಕೊಡುತ್ತಿದ್ದು ಅವರ ಹೆಸರನ್ನು ಹಾಕಿಕೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.
ಮೋದಿಯವರಿಗೆ ನಿಮ್ಮ ಪ್ರಚಾರದ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿನ ಮಾನಸಿಕತೆ ಬಗ್ಗೆ ನಾವು ಹೇಳುತ್ತಿದ್ದೇವೆ. ಇವತ್ತಿಗೂ ಎಲ್ಲ ರಾಜ್ಯ ಸರಕಾರಗಳಿಗೆ ಅದೇ ಮೊತ್ತದಷ್ಟು ಕೇಂದ್ರವು ಖರ್ಚು ಮಾಡಿ ಅಕ್ಕಿ, ಗೋಧಿ ಕೊಡುತ್ತಿದೆ ಎಂದರು.
ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಉಚಿತ ಅಕ್ಕಿ, ಗೋಧಿ ನೀಡಲು 2 ಲಕ್ಷ 80 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರವು ಖರ್ಚು ಮಾಡಿದೆ ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರು ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವಂಥ, ಅವರಿಗೆ ಮಾಸಾಶನ ಮತ್ತು ಮಹಿಳೆಯರಿಗೂ ಹಣ ಕೊಡುವ, ಯುವತಿಯರಿಗೆ ದ್ವಿಚಕ್ರ ವಾಹನ ಕೊಡುವ ಭರವಸೆ ಕೊಟ್ಟಿದ್ದರು. ಆದರೆ, ಅದು ಕೂಡ ಈಡೇರಲಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಈಗ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಚೀಟಿ ಅಂಟಿಸಿ 2 ಸಾವಿರ ಸಿಗುತ್ತದೆ ಎಂದು ನಂಬಿಸಲು ಯತ್ನಿಸುತ್ತಿದ್ದಾರೆ. ಚುನಾವಣೆ ಘೋಷಣೆಯೇ ಆಗಿಲ್ಲ; ಇವರಿನ್ನೂ ಅಧಿಕಾರಕ್ಕೆ ಬಂದಿಲ್ಲ, ಅಧಿಕಾರ ಪಡೆದ ರಾಜ್ಯಗಳಲ್ಲಿ ಕೊಟ್ಟಿಲ್ಲ, ಆದರೆ, ಕರ್ನಾಟಕದಲ್ಲಿ 2 ಸಾವಿರ ಕೊಡುವ ಗ್ಯಾರಂಟಿ ಕಾರ್ಡ್ ಮತ್ತು ಅರ್ಜಿ ನೀಡುವುದನ್ನು ನೋಡಿದ್ದೇವೆ ಎಂದು ಆಕ್ಷೇಪಿಸಿದರು.
ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡ್ತೀವಿ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ, ಪದವಿ ಪಡೆದವರಿಗೆ 3,500 ರೂಪಾಯಿ ಮತ್ತು ಡಿಪ್ಲೊಮಾ ಪಡೆದ ಯುವಕರಿಗೆ 1,500 ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್‍ನವರು ಗ್ಯಾರಂಟಿ ಕೊಟ್ಟಿದ್ದಾರೆ. ದೇಶವನ್ನು 60 ವರ್ಷದಷ್ಟು ಕಾಲ ಆಳ್ವಿಕೆ ಮಾಡಿದ ಪಕ್ಷ ಇವರದು ಎಂದು ನಾವು ಅಂದುಕೊಂಡಿದ್ದೇವೆ. ಕರ್ನಾಟಕದಲ್ಲೂ ಸುಮಾರು 60 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ದೆಹಲಿ, ಬೆಂಗಳೂರಿನಿಂದ ಹಳ್ಳಿಯಿಂದ ದಿಲ್ಲಿ ತನಕ ಕಾಂಗ್ರೆಸ್ ಆಡಳಿತ ಇಂದಿರಾ ದಶಕದಲ್ಲಿ ಇತ್ತು ಎಂದು ನೆನಪಿಸಿದರು.
ಕಾಂಗ್ರೆಸ್‍ನ ಟಿಕೆಟ್ ಅನ್ನು ಲೈಟ್ ಕಂಬಕ್ಕೆ ಕೊಟ್ಟರೂ ಅದು ಗೆದ್ದು ಬರುತ್ತದೆ ಎಂದು ನಾವು ತಮಾಷೆಗೆ ಹೇಳುತ್ತಿದ್ದೆವು. ಅಂಥ ಸ್ಥಿತಿಯಲ್ಲಿದ್ದ ಕಾಂಗ್ರೆಸ್, ದೇಶದ ಎಲ್ಲ ಕಡೆ ಸುಳ್ಳು ಭರವಸೆಗಳನ್ನು ಕೊಟ್ಟು ಇವತ್ತು ಅವರು ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಜಾಗದಲ್ಲೂ ಇಲ್ಲ ಎಂಬಂತಾಗಿದೆ. ಹಿಂದೆ ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿತ್ತು. ಆದರೆ, ಅವರು ಇವತ್ತು ಕೆಲವೇ ಕೆಲವು ಸೀಮಿತ ರಾಜ್ಯಗಳಲ್ಲಿ ಆಡಳಿತ ಮಾಡುವ ಪರಿಸ್ಥಿತಿಗೆ ಇಳಿದಿದ್ದಾರೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಕಾಪು: ಬಿಜೆಪಿ ಕಾಪು ಮಂಡಲದ ಕಟಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 85 ರಲ್ಲಿ ಕಾರ್ಯಕರ್ತರು ಮತ್ತು ಮತದಾರರ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಬಿಜೆಪಿಯ ಇತಿಹಾಸದ ಬಗ್ಗೆ, ಪ್ರಸ್ತುತ ಬಿಜೆಪಿ ಆಡಳಿತದ ಬಗ್ಗೆ ಹಾಗೂ ಮುಂದೆ ಬಿಜೆಪಿ ಚುನಾವಣೆ ಗೆಲ್ಲುವ ಅನಿವಾರ್ಯತೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಪಕ್ಷದ ಗೆಲುವಿಗೆ ಶ್ರಮಿಸಲು ಕರೆ ನೀಡಿದರು. ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಭಿವೃದ್ಧಿ ಕುರಿತಾಗಿ ಮಾತನಾಡಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಲುಕರೆ ನೀಡಿದರು. ಬೂತ್ ಪ್ರಧಾನಕಾರ್ಯದರ್ಶಿ ಕವಿತಾ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಂಡಲ ಮಹಿಳಾ ಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಗುರುಕ್ರಪಾ ರಾವ್, ಪಂಚಾಯತ್ ಸದಸ್ಯರಾದ ಸುಮತಿ ಸೇರಿಗಾರ್, ಆಸಿಫ್ ಕಟಪಾಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ: ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಇದೀಗ ಸೋಲಿನ ಖಾತರಿಯಿಂದ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಮತದಾರರನ್ನು ಯಾಮಾರಿಸುವ ಸುಳ್ಳಿನ ಕಂತೆಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
‘ಗರೀಭೀ ಹಠಾವೋ’ ಎಂಬ ಪೊಳ್ಳು ಘೋಷಣೆಯೊಂದಿಗೆ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶ ಲೂಟಿಗೈದ ಕಾಂಗ್ರೆಸ್ಸಿನ ಸ್ವತಃ ಪರಮೋಚ್ಚ ನಾಯಕರು ಭ್ರಷ್ಟಾಚಾರ ಹಗರಣಗಳಲ್ಲಿ ತನಿಖೆ ಎದುರಿಸುತ್ತಾ ಬೇಲ್ ಮೇಲೆ ಹೊರಗಿರುವುದು ಕಾಂಗ್ರೆಸ್ಸಿನ ನೈತಿಕತೆಗೆ ಒಡ್ಡಿರುವ ಜ್ವಲಂತ ಸವಾಲಾಗಿದೆ.
ಅನ್ನಭಾಗ್ಯ ಕೇಂದ್ರ ಸರಕಾರದ ಯೋಜನೆಯಾಗಿದೆ. ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚ ಭರಿಸಿ ರಾಜ್ಯಕ್ಕೆ ನೀಡುತ್ತಿದ್ದು, ರಾಜ್ಯದ ಪಾಲು ಕೇವಲ ರೂ.3 ಮಾತ್ರ. ಕೇಂದ್ರದ ಯೋಜನೆಯನ್ನು ತನ್ನದೆಂದು ಬಿಂಬಿಸಿ, ಕಾಂಗ್ರೆಸ್ ಕೇವಲ ಸುಳ್ಳು ಭರವಸೆ ನೀಡುತ್ತಿದೆ.
ಈಗಾಗಲೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ. ಸಮುದಾಯಗಳಿಗೆ ಸರಾಸರಿ ಬಳಕೆಯಾಗುವ 75 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ವಿದ್ಯುತ್ ಸರಬರಾಜು ಆತ್ಯುತ್ತಮ ಸ್ಥಿತಿಯಲ್ಲಿದೆ. ಆದರೆ ತನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಮೇಣದ ಬತ್ತಿ ಉರಿಸಿ, ಟಾರ್ಚ್ ಬೆಳಕಿನಲ್ಲಿ ಬಜೆಟ್ ಮಂಡಿಸಿರುವುದನ್ನು ಮರೆತ ಕಾಂಗ್ರೆಸ್ ಉಚಿತ ವಿದ್ಯುತ್ ಎಂದು ಬೊಗಳೆ ಬಿಟ್ಟಿರುವುದು ಸುಳ್ಳು ಗ್ಯಾರಂಟಿ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಇನ್ನಿತರ ಸುಳ್ಳು ಗ್ಯಾರಂಟಿಗಳನ್ನು ಊಹಿಸಲೂ ಅಸಾಧ್ಯ ಎಂಬುದನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂದರೆ ಕಾಂಗ್ರೆಸ್ ಆಡಳಿತದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆಯ ದಾರಿ ತಪ್ಪಿಸುವ, ರಾಜ್ಯವನ್ನು ಸಾಲದ ಶೂಲಕ್ಕೇರಿಸುವ ಕಾಂಗ್ರೆಸ್ಸಿನ ಸುಳ್ಳು ಭರವಸೆಗಳ ಪೊಳ್ಳು ಗ್ಯಾರಂಟಿ ಕಾರ್ಡ್ ಎಂಬ ಪ್ರಹಸನಕ್ಕೆ ಮತದಾರರು ಮನ್ನಣೆ ನೀಡಲಾರರು. ಕಾಂಗ್ರೆಸ್ಸಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಮಾತ್ರ ನೈಜ ಗ್ಯಾರಂಟಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ ನಡೆಯಿತು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಸ್ತಾವನೆಗೈದು ಚುನಾವಣಾ ತಯಾರಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್ ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚದ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮಾತನಾಡಿ ಚುನಾವಣೆಯನ್ನು ಎದುರಿಸುವ ಕುರಿತು ಮಾಹಿತಿ ನೀಡಿದರು. ಶಕ್ತಿ ಕೇಂದ್ರ ಪ್ರಮುಖರಾದ ವಿನಯ್ ಪೂಜಾರಿ, ದಯಾನಂದ ಪೂಜಾರಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಹಿರಿಯರಾದ ಶ್ಯಾಮಲಾ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ರವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಪ್ರಬುದ್ಧರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಪಾಂಡುರಂಗ ಲಾಗ್ವನಕರ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ದೇಶ ವಿರೋಧಿ ಮಾನಸಿಕತೆಯ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಸ್ಡಿಪಿಐ ಜೊತೆಗೆ ಕಾಂಗ್ರೆಸ್ಸಿನ ಅಪವಿತ್ರ ಮೈತ್ರಿ, ಒಳ ಒಪ್ಪಂದ ಸಾಕ್ಷಿ ಸಮೇತ ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಪ್ರಬುದ್ಧ ಜನತೆ ಕಾಂಗ್ರೆಸ್ಸಿನ ಷಡ್ಯಂತ್ರ ಮತ್ತು ಆಮಿಷಗಳಿಗೆ ಬಲಿಯಾಗಬಾರದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಈ ಹಿಂದೆ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಸ್ಡಿಪಿಐ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡುವಂತೆ ಕಾಂಗ್ರೆಸ್ಸಿನ ರಾಜ್ಯ ಮುಖಂಡರು ಒಳ ಒಪ್ಪಂದಕ್ಕಾಗಿ ಅಂಗಲಾಚಿರುವುದನ್ನು ಸ್ವತಃ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮೊಹಮ್ಮದ್ ತುಂಬೆ ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗಪಡಿಸಿರುವುದು ಗೋಮುಖ ವ್ಯಾಘ್ರ ಕಾಂಗ್ರೆಸ್ಸಿನ ಮುಖವಾಡವನ್ನು ಕಳಚಿ ಹಾಕಿದೆ. ಎಸ್ಡಿಪಿಐ ಸಹಿತ ಎಲ್ಲ ದೇಶ ವಿರೋಧಿ ಮತಾಂಧ ಜಿಹಾದಿ ಸಂಘಟನೆಗಳನ್ನು ಬೆಳೆಸಿದ್ದೇ ಕಾಂಗ್ರೆಸ್ ಎಂದು ಅವರು ತಿಳಿಸಿದ್ದಾರೆ.
ಈ ಕಾರಣಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಅಧಿಕಾರಾವಧಿಯಲ್ಲಿ ಸುಮಾರು 1,600ಕ್ಕೂ ಹೆಚ್ಚು ಪಿಎಫ್ಐ, ಎಸ್ಡಿಪಿಐ, ಕೆಎಫ್ಡಿ ಕಾರ್ಯಕರ್ತರನ್ನು ಬಂಧನದಿಂದ ಮುಕ್ತಗೊಳಿಸಿ, ಅವರ 175 ಪ್ರಕರಣಗಳನ್ನು ವಜಾಗೊಳಿಸಿದ್ದು, ಆ ಬಳಿಕ ರಾಜ್ಯದಾದ್ಯಂತ ನಡೆದ ಸರಣಿ ಗಲಭೆಗಳು, ಹಿಂದೂ ಕಾರ್ಯಕರ್ತರ ಮಾರಣಹೋಮ ಕಾಂಗ್ರೆಸ್ಸಿನ ಕುಟಿಲ ನೀತಿಗೆ ಜ್ವಲಂತ ಉದಾಹರಣೆಯಾಗಿದೆ.
ಎಸ್ಡಿಪಿಐ ಜೊತೆಗಿನ ಮೈತ್ರಿಯನ್ನು ಹಲವಾರು ಕಾಂಗ್ರೆಸ್ ಮುಖಂಡರು ಸಮರ್ಥಿಸುತ್ತಿರುವುದು ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಸಮಾನ ನಾಗರಿಕ ಸಂಹಿತೆ ಜಾರಿ ವಿರುದ್ದ ಎಸ್ಡಿಪಿಐನಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಭಾಗಿಯಾಗಿರುವುದು ಕಾಂಗ್ರೆಸ್ಸಿನ ದ್ವಂದ್ವ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ.
ಅಧಿಕಾರಕ್ಕಾಗಿ ಯಾರೊಂದಿಗೂ ಕೈಜೋಡಿಸಲು ಹಾಗೂ ಯಾವ ಹೇಯ ಕೃತ್ಯಕ್ಕೂ ಹೇಸದ ಕಾಂಗ್ರೆಸ್ಸಿಗೆ ಜನಹಿತ, ದೇಶದ ಹಿತ ಮುಖ್ಯವಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಭ್ರಷ್ಟಾಚಾರ, ದೇಶ ವಿರೋಧಿ ನೀತಿ, ಸುಳ್ಳು ಭರವಸೆಗಳ ವರಸೆಯಿಂದ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ ದೇಶದಾದ್ಯಂತ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತಗೊಂಡಿರುವುದು ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದನ್ನು ರುಜುವಾತುಪಡಿಸಿದೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿರುವ ದೇಶ ವಿರೋಧಿ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಉಡುಪಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ಇವರ ಅಧ್ಯಕ್ಷತೆಯಲ್ಲಿ ಉಡುಪಿಯ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು.
ಕುಂದಾಪುರ-ಬೈಂದೂರು ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಅಪ್ಪಣ್ಣ ಹೆಗ್ಡೆ ಜ್ಯೋತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.
ಸಭೆಯಲ್ಲಿ 2023-24ನೇ ಸಾಲಿನ ಕ್ರಿಯಾ ಯೋಜನೆಯನ್ನು ಸಮಗ್ರ ವಿಚಾರ ವಿನಿಮಯದೊಂದಿಗೆ ಅನುಮೋದಿಸಲಾಯಿತು.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮದ್ಯ ಮಾರಾಟ, ಮಾದಕ ವಸ್ತು ದಂಧೆ ಸಹಿತ ಇನ್ನಿತರ ಕಾನೂನು ಬಾಹೀರ ಚಟುವಟಿಕೆಗಳು ನಡೆಯದಂತೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮೆಹೆಂದಿ ಕಾರ್ಯಕ್ರಮಗಳಲ್ಲಿ ಮದ್ಯಪಾನ ಬಳಕೆಯನ್ನು ನಿಗ್ರಹಿಸಿ, ಕುಣಿತದ ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ನೀಡುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಸಕ್ತ ವರ್ಷದಲ್ಲಿ ಮದ್ಯವರ್ಜನ ಶಿಬಿರ, ಮಾದಕ ವಸ್ತು ವಿರೋಧಿ ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಮಾಹಿತಿ ನೀಡಲಾಯಿತು.
ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಮಿತಿಗೆ ಮುಂದಿನ 2 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕಿನ ನವೀನ್ ಚಂದ್ರ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಕಳ ತಾಲೂಕಿನ ಸುಭಾಷ್‌ಚಂದ್ರ ಚೌಟ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಸ್ವಾಗತಿಸಿದರು. ಕುಂದಾಪುರ(2) ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ವಂದಿಸಿದರು.
ಕಾಪು: ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕರಾವಳಿ ಜಿಲ್ಲೆಗಳನ್ನು ಕೊಲೆಗಡುಕರ ಜಿಲ್ಲೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿ ಕರಾವಳಿ ಜನತೆಗೆ ಅವಮಾನ ಮಾಡಿರುತ್ತಾರೆ. ಕರಾವಳಿ ಜಿಲ್ಲೆಗಳನ್ನು ಎಲ್ಲ ವಿಚಾರಗಳಲ್ಲಿ ದೇಶಕ್ಕೆ ಮಾದರಿ ಎನ್ನುತ್ತಾರೆ. ಸರಕಾರದ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವಾಗ ಬುಧ್ಧಿವಂತರ ಜಿಲ್ಲೆ ಎಂದು ಮೊದಲು ಕರಾವಳಿ ಜಿಲ್ಲೆಯಲ್ಲಿ ಜ್ಯಾರಿಗೆ ತಂದು ಸಾಧಕ ಬಾಧಕ ನೋಡಿ ಆಮೇಲೆ ಇತರ ಕಡೆ ಅನುಷ್ಠಾನಕ್ಕೆ ತರುತ್ತಾರೆ. ಜಾತಿಯ ಅಮಲಿನಲ್ಲಿಲ್ಲದೆ, ಹಣದ ಆಮಿಷಕ್ಕೆ ಒಳಗಾಗದೆ ಸಿಧ್ದಾಂತದ ಮೇಲೆ ಇಲ್ಲಿ ಚುನಾವಣೆ ನಡೆಯುತ್ತದೆ. ಕಳೆದ ಬಾರಿ ಕಾಂಗ್ರೆಸನ್ನು ಕರಾವಳಿಯಿಂದ ಕಿತ್ತು ಬಿಸಾಡಲಾಗಿದ್ದು ಕೇವಲ ಒಂದು ಸೀಟಿಗೆ ತ್ರಪ್ತಿಪಟ್ಟಿದ್ದು ಈ ಬಾರಿ ಅದೂ ಕೈ ತಪ್ಪುವ ಹೆದರಿಕೆಯಿಂದ ಬಾಯಿಗೆ ಬಂದಂತೆ ಮಾತನಾಡಿ ಕರಾವಳಿಗೆ ಅವಮಾನ ಮಾಡಿರುವ ಬಿಕೆ ಹರಿಪ್ರಸಾದ್ ರವರು ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಚುನಾವಣೆಯಲ್ಲಿ ಕೆಲಸ ಮಾಡಲು ನಿಮ್ಮ ಪಕ್ಷದವರೂ ಸಿಗಲಿಕ್ಕಿಲ್ಲ ಎಂದು ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಆಗ್ರಹಿಸಿದ್ದಾರೆ.