ಜಿಲ್ಲೆಯ ಐದೂ ಸ್ಥಾನಗಳನ್ನು ಜಯಿಸಿರುವ ಉಡುಪಿ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ



ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿಗಳಾದ ಆಲ್ವಿನ್ ಡಿಸೋಜ, ಆಸಿಫ್ ಕಟಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕುಮಾರ್ ಉದ್ಯಾವರ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಪ್ರಮುಖರಾದ ಮಹೇಂದ್ರ ಕುಮಾರ್ ನೀಲಾವರ, ರವೀಂದ್ರ ಪಾಟ್ಕರ್ ಶಿರ್ವ, ಲಕ್ಷ್ಮೀಶ ಬಂಗೇರ ಮಲ್ಪೆ ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆದ್ದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಜಿಲ್ಲೆಯಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಂಘಟಿತ ಹೋರಾಟ ಹಾಗೂ ಕಾರ್ನರ್ ಮೀಟಿಂಗ್ ಗಳ ಮೂಲಕ ಜನತೆ ಕಾಂಗ್ರೆಸ್ಸಿನ ನಕಲಿ ಗ್ಯಾರಂಟಿ ಕಾರ್ಡ್ ಜಾಲದಿಂದ ಮೋಸ ಹೋಗದಂತೆ ಜಾಗೃತಿ ಮೂಡಿಸಿದ ಪರಿಣಾಮವಾಗಿ ದಾಖಲೆಯ ಅಂತರದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದ ಇತರ ಎಲ್ಲಾ ಜಿಲ್ಲೆಗಳಿಗೆ ತುಲನೆ ಮಾಡಿದಾಗ, ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸಿ, ಮಗದೊಮ್ಮೆ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವನ್ನಾಗಿಸಿದೆ.

ರಾಜ್ಯದಲ್ಲೇ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಉಡುಪಿ ಜಿಲ್ಲೆ ಹಿಂದುತ್ವದ ಭದ್ರ ಕೋಟೆ ಎಂಬುದನ್ನು ಸಾಬೀತುಪಡಿಸಿದೆ. ಈ ಯಶಸ್ಸಿಗೆ ಕಾರಣೀಭೂತರಾಗಿರುವ ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಹಾಗೂ ಮತದಾರ ಬಾಂಧವರಿಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರ ಬಾಂಧವರಿಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಕೃತಜ್ಞತೆ ಸಮರ್ಪಣೆ



ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಾಗರಿಕ ಸಮಾಜದ ಅತ್ಯಮೂಲ್ಯ ಹಕ್ಕು. ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ 75.00%ಕ್ಕೂ ಮಿಕ್ಕಿ ಗರಿಷ್ಠ ಪ್ರಮಾಣದಲ್ಲಿ ಮತದಾನಗೈದಿರುವ ಜಿಲ್ಲೆಯ ಸಮಸ್ತ ಮತದಾರ ಬಾಂಧವರಿಗೆ ಉಡುಪಿ ಜಿಲ್ಲಾ ಬಿಜೆಪಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಎಲೆಕ್ಷನ್ 2023: ಬಿಜೆಪಿಯಿಂದ ಪ್ರಜಾ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಬಿಜೆಪಿ ತನ್ನ ಪ್ರಜಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ನಗರದ ಶಾಂಗ್ರಿಲಾ ಹೊಟೇಲ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ ಅವರೊಂದಿಗೆ ಸಚಿವ ಡಾ ಕೆ ಸುಧಾಕರ್ (Dr K Sudhakar) ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಪ್ರಣಾಳಿಕೆ ಪ್ರಮುಖ ಅಂಶಗಳು:

🪷ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ ೩ ಅಡುಗೆ ಅನಿಲ ಸಿಲಿಂಡರ್ ಉಚಿತ ವಿತರಣೆ.

🪷ಪೋಷಣೆ ಯೋಜನೆ ಅಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ೫ ಕೆ.ಜಿ. ಅಕ್ಕಿ ಮತ್ತು ೫ ಕೆ ಜಿ. ಶ್ರೀ ಅನ್ನ ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್ ನೀಡಲಾಗುವುದು.

🪷ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವಾರ್ಡ್‌ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ.

🪷ರಾಜ್ಯದಾದ್ಯಂತ ನಿವೇಶನ ರಹಿತ/ ವಸತಿ ರಹಿತ ನಿವಾಸಿಗಳಿಗೆ ೧೦ ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ.

🪷ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆ ಆರಂಭಿಸಲಾಗುವುದು. ಈ ಯೋಜನೆಯಡಿ ಎಸ್‌ಸಿ ಎಸ್‌ಟಿ ಸಮುದಾಯದ ಮಹಿಳೆಯರು ೫ ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿ ಗಳ ಮೇಲೆ ₹೧೦ ಸಾವಿರ ಹೊಂದಿಕೆಯಾಗುವ ಠೇವಣಿ ನೀಡಲಾಗುವುದು.

🪷ಬೆಂಗಳೂರಿನ ಅಪಾರ್ಟ್‌ಮೆಂಟ್ ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಿಕತ್ವ ಕಾಯಿದೆಗೆ ತಿದ್ದುಪಡಿ ತಂದು ಕುಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆ ಜಾರಿ.

🪷ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸರ್ಕಾರಿ ಉದ್ಯೋಗಾಂಕಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ವೃತ್ತಿ ಬೆಂಬಲ ಒದಗಿಸಲಾಗುವುದು.

🪷ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು₹೩೦ ಸಾವಿರ ಕೋಟಿ ಮೊತ್ತದ ಕೆ-ಅಗ್ರಿಫಂಡ್ ಸ್ಥಾಪನೆ.

🪷ಕನ್ನಡ ಚಿತ್ರೋದ್ಯಮಕ್ಕೆ ಉದ್ಯಮ ಸ್ಥಾನಮಾನ, ಅಂತರರಾಷ್ಟ್ರೀಯ ಮಟ್ಟದ ಪುನೀತ್ ರಾಜ್ ಕುಮಾರ್ ಫಿಲ್ಮ್ ಸಿಟಿ ಸ್ಥಾಪನೆ.

ಮೇ 3ರ ಮೂಲ್ಕಿ ಕೋಲ್ನಾಡ್ ಮೋದಿ ಚುನಾವಣಾ ಪ್ರಚಾರ ಸಭೆಯ ಸ್ಥಳದಲ್ಲಿ ಪೂರ್ವಸಿದ್ಧತಾ ಪರಿಶೀಲನೆ ನಡೆಸಿದ ಮೋದಿ ಪ್ರಚಾರ ಸಭೆಯ ರಾಜ್ಯ ಸಂಚಾಲಕ ಕೆ.ಉದಯಕುಮಾರ್ ಶೆಟ್ಟಿ

ಉಡುಪಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇ 3ರಂದು ಮೂಲ್ಕಿ ಕೋಲ್ನಾಡ್ ನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಭೆಯ ಸ್ಥಳದಲ್ಲಿ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಚಾರ ಸಭೆಗಳ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಯವರು ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಮ್., ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜಾ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಮೂಲ್ಕಿ ಮೂಡಬಿದ್ರೆ ಮಂಡಲಾಧ್ಯಕ್ಷ ಸುಧೀರ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಗೋವಿಂದ ಬಾಬು ಪೂಜಾರಿ ಬೈಂದೂರು ನೇಮಕ



ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡುವ ಜೊತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೈಂದೂರು ಇವರನ್ನು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ನೆಲ ನರೇಂದ್ರಬಾಬು ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲ ವರ್ಗಗಳ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ: ಯಶ್ಪಾಲ್ ಸುವರ್ಣ


ಉಡುಪಿ: ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಕೇವಲ ಮತ ಬ್ಯಾಂಕಿಗಾಗಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯವನ್ನು ಬಳಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ‘ಸಬ್ಕೇ ಸಾಥ್ ಸಬ್ಕಾ ವಿಕಾಸ್’ ಮೂಲ ಮಂತ್ರದೊಂದಿಗೆ ಎಲ್ಲ ವರ್ಗಗಳ ಜನತೆಯ ಕಲ್ಯಾಣಕ್ಕೆ ನಾಂದಿ ಹಾಡಿ ಜನರ ಮನಸ್ಸನ್ನು ಗೆದ್ದಿದೆ. ಎಲ್ಲ ವರ್ಗಗಳ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಕುತ್ಪಾಡಿಯ ನವಚೇತನ ಯುವಕ ಮಂಡಲದ ಸಭಾಭವನದಲ್ಲಿ ನಡೆದ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ದಾಖಲೆಯ ಅಭಿವೃದ್ಧಿ ಮತ್ತು ವಿನೂತನ ಯೋಜನೆಗಳ ಮೂಲಕ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ತಮ್ಮ ಆಡಳಿತಾವಧಿಯಲ್ಲಿ ಜನಹಿತವನ್ನು ಮರೆತ ಕಾಂಗ್ರೆಸ್ ಇತರ ರಾಜ್ಯಗಳಲ್ಲಿ ನೀಡಿದ ಭರವಸೆಯನ್ನು ಪೂರೈಸಲು ವಿಫಲವಾಗಿ ಇದೀಗ ಕರ್ನಾಟಕದಲ್ಲೂ ನಕಲಿ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಜನರ ದಾರಿತಪ್ಪಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬಂತೆ ನೂರಾರು ಜನಪರ ಯೋಜನೆಗಳ ಮೂಲಕ ಮನೆ ಮನೆ ತಲುಪಿರುವ ಬಿಜೆಪಿ ಗೆಲುವು ಶತಸಿದ್ಧ ಎಂದು ಯಶ್ಪಾಲ್ ಸುವರ್ಣ ಹೇಳಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ ರಾಜ್ಯದ ಡಬಲ್ ಎಂಜಿನ್ ಸರಕಾರದ ಸಾಧನೆಗಳು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಯಶ್ಪಾಲ್ ಸುವರ್ಣರವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ನವ ಉಡುಪಿ ನಿರ್ಮಾಣದ ಕೈಂಕರ್ಯವನ್ನು ಇನ್ನಷ್ಟು ಎತ್ತರಕ್ಕೇರಿಸಲು ಜನತೆ ಯಶ್ಪಾಲ್ ಸುವರ್ಣರವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟು, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಸಂಚಾಲಕ ರಾಜೇಂದ್ರ ಪಂದುಬೆಟ್ಟು, ಮಾಜಿ ತಾ.ಪಂ. ಸದಸ್ಯೆ ಶಿಲ್ಪಾ ರವೀಂದ್ರ ಕೋಟ್ಯಾನ್, ಶಕ್ತಿ ಕೇಂದ್ರ ಅಧ್ಯಕ್ಷ ಅಶೋಕ್ ಬಂಡಾರಿ, ಬೂತ್ ಅಧ್ಯಕ್ಷರು, ಕಡೆಕಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆ : ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗಿ


ಉಡುಪಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರವರು ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ದೆಹಲಿಯ ವಿರೋಧ ಪಕ್ಷದ ನಾಯಕ ವಿಜಯೇಂದ್ರ ಗುಪ್ತಾ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜ್ಯೋತಿ ಶೇಥ್, ರಾಜ್ಯ ಮಹಿಳಾ ಕಾರ್ಯ ಸಹ ಸಂಚಾಲಕಿ ಶ್ಯಾಮಲಾ ಎಸ್. ಕುಂದರ್, ಪಕ್ಷದ ಪ್ರಮುಖರು, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಉದ್ಯಾವರ ಯುವ ನಾಯಕ, ಪಂಚಾಯತ್ ಸದಸ್ಯರಾದ ಮಿತೇಶ್ ಸುವರ್ಣ ಕಾಪುವಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆ

ಕಾಪು: ಉದ್ಯಾವರ ಗ್ರಾಮ‌ಪಂಚಾಯತ್ ನ ಯುವ ನಾಯಕ, ಎರಡು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ *ಮಿತೇಶ್ ಸುವರ್ಣ* ಇಂದು ಕಾಪು ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಗಪಡೆಗೊಂಡರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಇವರ ನೇತ್ರತ್ವದಲ್ಲಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಅಭ್ಯರ್ಥಿಯಾದ ಗುರ್ಮೆ ಸುರೇಶದ ಶೆಟ್ಟಿ ಇವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರು ಮಿತೇಶ್ ಸುವರ್ಣ ಇವರ ಸೇರ್ಪಡೆಯಿಂದ ಉದ್ಯಾವರದಲ್ಲಿ ನಮ್ಮ‌ ಪಕ್ಷಕ್ಲೆ ಮತ್ತಷ್ಟು ಶಕ್ತಿ ಬಂದಿದ್ದು ಮುಂದೆ ಶಾಸಕರಾಗುವ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಇವರಿಗೆ ಕಾಪು ಕ್ಷೇತ್ರದಲ್ಲಿ ಅತೀ ಹೆಚ್ಚು ಅಂತರವನ್ನು ನೀಡಬೇಕು ಎಂದರು. ಶಾಸಕರಾದ ಲಾಲಾಜಿ ಆರ್ ಮೆಂಡನ್, ಅಭ್ಯರ್ಥಿಯಾದ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವಿ ಅಮೀನ್, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರಾದ ವಿಜಯ ಕುಮಾರ್ ಉದ್ಯಾವರ, ಶಕ್ತಿಕೇಂದ್ರ ಪ್ರಮುಖ್ ಗಣೇಶ್ ಕುಮಾರ್ ಉದ್ಯಾವರ, ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ರವಿ ಕೋಟ್ಯನ್ ಪಂಚಾಯತ್ ಅಧ್ಯಕ್ಷರಾದ ರಾಧಾಕ್ರಷ್ಣ, ಪಕ್ಷದ ಪ್ರಮುಖರಾದ ಸಚಿನ್ ಸುವರ್ಣ, ಜಿತೇಂದ್ರ ಶೆಟ್ಟಿ ಉಷಾ, ಸಚಿನ್ ಬೊಲ್ಜೆ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಸುಳ್ಳೇ ಸೊರಕೆ ಬಂಡವಾಳ : ಕುಯಿಲಾಡಿ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿಯವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸೇರಿದ ಜನಸ್ತೋಮವನ್ನು ಕಂಡು ಕಂಗೆಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ತಲೆಬುಡವಿಲ್ಲದ ಆರೋಪಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ. ಸುಳ್ಳೇ ಸೊರಕೆ ಬಂಡವಾಳ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಅವರು ಬಿಜೆಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆಯ ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ಸಿನ ಎಲ್ಲಾ ಅಪಪ್ರಚಾರಗಳು ಯಾವುದೇ ಫಲ ನೀಡದೇ ಇರುವ ಸನ್ನಿವೇಶದಲ್ಲಿ, ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಯವರು ಕಾಪುವಿಗೆ ಬಂದಾಗ ಹಣದ ಗಂಟು ತಂದಿದ್ದಾರೆ ಎಂದು ಸೊರಕೆಯವರು ಆದಾರ ರಹಿತವಾಗಿ ಆರೋಪಿಸಿರುವುದು ಅಪಪ್ರಚಾರವೇ ಕಾಂಗ್ರೆಸ್ಸಿನ ಜೀವಾಳ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಬಿಜೆಪಿ ವಿರುದ್ಧ ಬೆರಳು ತೋರಿಸುವ ಮೊದಲು ಸೊರಕೆಯವರು 2 ಕೋಟಿ ರೂಪಾಯಿಯನ್ನು ನೀಡಿ ಕಾಂಗ್ರೆಸ್ಸಿನ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಹಾಗೂ ಸೊರಕೆಯವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದಿರುವ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರು ಆರೋಪಕ್ಕೆ ಸೊರಕೆ ಪ್ರಾಮಾಣಿಕವಾಗಿ ಉತ್ತರಿಸಲಿ ಎಂದರು.

ಸಮಾಜಮುಖಿ ಸತ್ಕಾರ್ಯಗಳ ಮೂಲಕ ಕಾಪು ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಸ್ವತಃ ಸ್ಥಳೀಯರೇ ಆಗಿರುವ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲಿದ್ದು, ಪುತ್ತೂರಿನ ಸೊರಕೆಗೆ ಸೋಲು ನಿಶ್ಚಿತ. ಬಿಜೆಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದರು.

ದೇಶದ ಭದ್ರತೆ ಹಾಗೂ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಯಲ್ಲಿ ನಂಬಿಕೆ ಇರಿಸಿಕೊಂಡಿರುವ ಪ್ರಬುದ್ಧ ಜನತೆ ಕಾಂಗ್ರೆಸ್ಸಿನ ಸುಳ್ಳಿನ ಕಂತೆಯನ್ನು ಎಂದಿಗೂ ನಂಬುವುದಿಲ್ಲ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು ಹಾಗೂ ಪಿಎಫ್ಐ ಮತ್ತು ಸಿಎಫ್ಐ ನಿಷೇಧದ ಬಗ್ಗೆ ತನ್ನ ನಿಲುವೇನು ಎಂಬುದನ್ನು ಸೊರಕೆಯವರು ಕಾಪು ಕ್ಷೇತ್ರದ ಜನತೆಗೆ ಮೊದಲು ಸ್ಪಷ್ಟಪಡಿಸಿ, ನಂತರ ಚುನಾವಣಾ ಪ್ರಚಾರಕ್ಕೆ ಮುಂದಡಿ ಇಡುವುದು ಸೂಕ್ತ ಎಂದರು.

ಮೊಸಳೆ ಕಣ್ಣೀರಿನ ಮೂಲಕ ಕ್ಷೇತ್ರದ ಜನತೆಯನ್ನು ಮರುಳು ಮಾಡಲು ಹೊರಟಿರುವ ಸೊರಕೆ, ರಮಾನಾಥ ರೈ, ಗೋಪಾಲ ಪೂಜಾರಿ, ಸಿದ್ಧರಾಮಯ್ಯ, ದೇಶಪಾಂಡೆ ಮುಂತಾದ ಹಲವಾರು ಕಾಂಗ್ರೆಸ್ ಅಭ್ಯರ್ಥಿಗಳು ಸೇರಿ ಇದು ತಮ್ಮ ಕೊನೆಯ ಚುನಾವಣೆ ಎಂದು ಗೋಗರೆಯತ್ತಿರುವುದು ನೋಡಿದರೆ ಪ್ರಾಯಶಃ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಇದು ಕೊನೆಯ ಚುನಾವಣೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಪಕ್ಷದ ಪ್ರಮುಖರು ಹಾಗೂ ಜಿಲ್ಲೆ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Design a site like this with WordPress.com
Get started