ಕೇಂದ್ರ ಸರಕಾರದ 5 ಕೆ.ಜಿ. ಉಚಿತ ಅಕ್ಕಿಯ ಜೊತೆಗೆ ಕಾಂಗ್ರೆಸ್ ತನ್ನ ಗ್ಯಾರಂಟಿಯ 10 ಕೆ.ಜಿ. ಅಕ್ಕಿ ವಿತರಿಸಿ ಪೌರುಷ ತೋರಿಸಲಿ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಚುನಾವಣೆಯ ಸಂದರ್ಭದಲ್ಲಿ ಪೂರ್ವಾಪರ ಆಲೋಚಿಸದೆ ಬೇಕಾಬಿಟ್ಟಿಯಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ತಮ್ಮ ವಾಗ್ದಾನದಂತೆ 24 ಗಂಟೆಗಳಲ್ಲಿ ಜಾರಿಗೊಳಿಸದೆ ರಾಜ್ಯದ ಜನತೆಯನ್ನು ಯಾಮಾರಿಸಿರುವ ಕಾಂಗ್ರೆಸ್ ಇದೀಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನದ ಬದಲು ಕೇಂದ್ರ ಸರಕಾರ ರಾಜ್ಯಕ್ಕೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ, ತಮ್ಮ ಗ್ಯಾರಂಟಿಯ 10 ಕೆ.ಜಿ. ಅಕ್ಕಿಯನ್ನು ಖರೀದಿಸಿ ಪ್ರತ್ಯೇಕವಾಗಿ ವಿತರಿಸಿ ಪೌರುಷ ತೋರಿಸಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕದ ಸಹಿತ ಎಲ್ಲಾ ರಾಜ್ಯಗಳ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಮಾಸಿಕ 5 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿದೆ. ಕೊರೋನ ಸಂದರ್ಭದಲ್ಲಿಯೂ ದೇಶದ 80 ಕೋಟಿ ಜನತೆಗೆ ಉಚಿತ ಅಕ್ಕಿಯನ್ನು ವಿತರಿಸುವ ಮೂಲಕ ಕೇಂದ್ರ ಸರಕಾರ ಬಡ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದೆ.

ದೇಶದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಕ್ಕಿಯ ದಾಸ್ತಾನು ಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ನೆಲೆಯಲ್ಲಿ ಭಾರತೀಯ ಆಹಾರ ನಿಗಮ (ಎಫ್ ಸಿ ಐ) ತನ್ನ ನಿಯಮಾವಳಿಯನ್ನು ಪರಿಷ್ಕರಿಸಿ, ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಇತರ ಯಾವುದೇ ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿ ಸರಬರಾಜು ಮಾಡುವ ಪ್ರಕ್ರಿಯೆಗೆ ನಿರ್ಬಂಧ ಹೇರಿದೆ. ಆದರೂ ಕೇಂದ್ರ ಸರಕಾರ ರಾಜ್ಯಕ್ಕೆ ಉಚಿತ 5 ಕೆ.ಜಿ. ಅಕ್ಕಿಯ ಪೂರೈಕೆಯನ್ನು ಯಥಾ ಪ್ರಕಾರ ಮುಂದುವರಿಸಿಕೊಂಡು ಬಂದಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಈ ಎಲ್ಲಾ ವಿಚಾರಗಳನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರೂ ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಲಂಗು ಲಗಾಮಿಲ್ಲದೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಗ್ಯಾರಂಟಿಯ ವೈಫಲ್ಯದಲ್ಲಿ ಸೊರಗಿರುವ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಗೋಜಿಗೂ ಹೋಗದೆ, ಜನರಲ್ಲಿ ಗೊಂದಲ ಮೂಡಿಸಿ, ರಾಜ್ಯದಲ್ಲಿ ಅರಾಜಕತೆ ಸೃಷ್ಠಿಗೆ ನಾಂದಿ ಹಾಡಿದೆ.

ಜಾತಿ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಾ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದಿರುವ ಕಾಂಗ್ರೆಸ್ ತನ್ನ ಚಾಳಿಯನ್ನು ಮುಂದುವರಿಸಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೇರಿ ವೀರಶೈವ ಲಿಂಗಾಯುತ ಮತವನ್ನು ಒಡೆಯುವ ಹುನ್ನಾರ ನಡೆಸಿದ್ದ ಸಚಿವ ಎಂ.ಬಿ. ಪಾಟೀಲ್ ರವರಿಗೆ ಬಿಜೆಪಿಯ ವರಿಷ್ಠ ನಾಯಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಬಿ.ಎಲ್. ಸಂತೋಷ್ ರವರ ಜೀವನ ತತ್ವಗಳ ಬಗ್ಗೆ ವಾಸ್ತವ ವಿಚಾರವನ್ನು ತಿಳಿದುಕೊಂಡು ಮಾತನಾಡುವುದು ಉತ್ತಮ. ಕಾಂಗ್ರೆಸ್ ಸರಕಾರ ತನ್ನ ಕುಟುಂಬದ ಆಸ್ತಿ ಎಂಬಂತೆ ವರ್ತಿಸುತ್ತಾ ನಿರಂತರ ದುರಹಂಕಾರದ ಮಾತನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಕುಟುಂಬದ ಆಸ್ತಿ ಗಳಿಕೆಗಳ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.

ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುವ ಕೋಮು ಗಲಭೆ, ದೇಶ ವಿರೋಧಿ ಕೃತ್ಯಗಳನ್ನು ಅವಗಣಿಸಿ, ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಮಾತ್ರ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಾಪಾಸು ನಿರ್ಣಯ, ಪಠ್ಯ ಪರಿಷ್ಕರಣೆ ನೆಪದಲ್ಲಿ ದೇಶದ ಮಹಾನ್ ಪುರುಷರ ಪಠ್ಯಗಳನ್ನು ಕೈಬಿಟ್ಟಿರುವುದು ಇತ್ಯಾದಿ ಬೆಳವಣಿಗೆಗಳು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಹಿಂದೂ ವಿರೋಧಿ ಎಂಬುದನ್ನು ಮಗದೊಮ್ಮೆ ನಿರೂಪಿಸಿದೆ.

ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಇದೀಗ ಬಿಜೆಪಿ ಸಂಸದರ ಸಹಾಯಕ್ಕಾಗಿ ಗೋಗರೆಯುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ನಾಯಕರು ‘ನನಗೂ ಫ್ರೀ ನಿನಗೂ ಫ್ರೀ’ ಎಂದು ಉಚಿತ ಗ್ಯಾರಂಟಿಗಳನ್ನು ಘೋಷಿಸುವಾಗ ಪ್ರದರ್ಶಿಸಿದ ಅಟ್ಟಹಾಸವನ್ನು ಗ್ಯಾರಂಟಿ ಜಾರಿಯಲ್ಲಿ ತೋರ್ಪಡಿಸದೇ ಇರುವುದು ವಿಪರ್ಯಾಸ. ಕಾಂಗ್ರೆಸಿಗರು ಸ್ವಯಂ ಘೋಷಿಸಿರುವ ಗ್ಯಾರಂಟಿಗಳಿಗೆ ತಾವೇ ಜವಾಬ್ದಾರರಾಗಿದ್ದು ಹೆಚ್ಚುವರಿ 10 ಕೆ.ಜಿ. ಉಚಿತ ಅಕ್ಕಿಯನ್ನು ವಿತರಿಸುವ ಜೊತೆಗೆ ಎಲ್ಲಾ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವುದು ಇಂದಿನ ಅಗತ್ಯತೆ. ಕೊಟ್ಟ ಮಾತಿಗೆ ತಪ್ಪಿದಲ್ಲಿ, ವಚನ ಭ್ರಷ್ಟ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ಯಾರಂಟಿ ಜಾರಿಗೊಳಿಸಲು ವಿಫಲವಾಗಿರುವ ಕಾಂಗ್ರೆಸ್ಸಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಳಿ ಅಕ್ಕಿ ನೀಡುವಂತೆ ಒತ್ತಾಯಿಸಲು ನಾಚಿಕೆಯಾಗುವುದಿಲ್ಲವೆ?: ಮಹೇಶ್ ಠಾಕೂರ್ ಪ್ರಶ್ನೆ



ಉಡುಪಿ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಫ್ರೀಯಾಗಿ ನೀಡುತ್ತೇವೆ ಎಂದು ಬೊಗಳೆ ಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡರು ತಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ವಿಫಲಗೊಂಡು, ಇದೀಗ ಅಕ್ಕಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಒತ್ತಾಯಿಸಲು ನಾಚಿಕೆಯಾಗುವುದಿಲ್ಲವೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಮುಖಂಡರು ಉಚಿತ 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಗ್ಯಾರಂಟಿ ಘೋಷಣೆ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ್ದಾರಾ? ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಎಲ್ಲ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸುತ್ತೇವೆ ಎಂದು ಡಂಗುರ ಸಾರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು 1 ತಿಂಗಳು ಕಳೆದರೂ ತಮ್ಮ ಉಚಿತಗಳ ಗ್ಯಾರಂಟಿಯನ್ನು ಜಾರಿಗೊಳಿಸಲಾಗದೆ ಕಂಗೆಟ್ಟು ಮುಖಭಂಗ ಎದುರಿಸುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ಮೇಲೆ ವೃಥಾ ಆರೋಪ ಹೊರಿಸುವುದು ಎಷ್ಟು ಸರಿ? ಇಷ್ಟೆಲ್ಲಾ ಪ್ರಹಸನ ಮಾಡುವ ಬದಲು ಕಾಂಗ್ರೆಸ್ ಸರಕಾರ ರಾಜ್ಯದ ರೈತರಿಂದ ಅಕ್ಕಿಯನ್ನು ಖರೀದಿಸಿ ಕೇಂದ್ರದ ಉಚಿತ 5 ಕೆ.ಜಿ. ಅಕ್ಕಿಯ ಜೊತೆಗೆ ರಾಜ್ಯದ 10 ಕೆ.ಜಿ. ಅಕ್ಕಿಯನ್ನು (ಒಟ್ಟು 15 ಕೆ.ಜಿ.) ಜನತೆಗೆ ವಿತರಿಸಲು ಯಾಕೆ ಮುಂದಾಗುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಸ್ತುತ ಕರ್ನಾಟಕ ರಾಜ್ಯದ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ಅಂತ್ಯೋದಯ ಕಾರ್ಡುದಾರ ಕುಟುಂಬಗಳಿಗೆ 35 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ಉಚಿತವಾಗಿ ವಿತರಿಸುತ್ತಿದೆ. ಈ ಹಿಂದೆಯೂ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚ ಭರಿಸಿ ರಾಜ್ಯಕ್ಕೆ ಉಚಿತವಾಗಿ ನೀಡಿದ್ದು, ಆಗ ರಾಜ್ಯ ಸರಕಾರ ಭರಿಸಿದ ವೆಚ್ಚ ರೂ.3 ಮಾತ್ರ ಆಗಿತ್ತು. ಆ ಸಂದರ್ಭದಲ್ಲಿಯೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೇಂದ್ರ ಸರಕಾರ ನೀಡಿದ ಉಚಿತ ಅಕ್ಕಿಯ ಬಗ್ಗೆ ಯಾವುದೇ ಮಾಹಿತಿ ನೀಡದೆ ತಮ್ಮ ಲೇಬಲನ್ನು ಅಂಟಿಸಿ ಅದನ್ನು ತನ್ನದೇ ಅನ್ನಭಾಗ್ಯ ಯೋಜನೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿ, ಪುಕ್ಕಟೆ ಪ್ರಚಾರಗಳಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.

ಪ್ರಸ್ತುತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಅಕ್ಕಿ ರಾಜಕೀಯದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಪ್ರತೀ ತಿಂಗಳು 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವ ವಿಚಾರ ಜಗಜ್ಜಾಹೀರಾಗಿರುವುದು ವಾಸ್ತವ. ರಾಜ್ಯದ ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ಸಿನ ನಕಲಿ ಗ್ಯಾರಂಟಿಗಳ ಕರ್ಮಕಾಂಡವನ್ನು ಚೆನ್ನಾಗಿಯೇ ಅರಿತಿದ್ದಾರೆ.

ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಿಸಿರುವ 5 ಗ್ಯಾರಂಟಿಗಳಿಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಕಾಂಗ್ರೆಸಿಗರು ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೋದಿಯವರ ಬಳಿ ಅಕ್ಕಿ ನೀಡುವಂತೆ ಒತ್ತಾಯಿಸಲಿ ಎಂದಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ 135 ಕಾಂಗ್ರೆಸ್ ಶಾಸಕರು ಎಲ್ಲಿಂದ ಬೇಕಾದರೂ ಅಕ್ಕಿಯನ್ನು ಖರೀದಿಸಿ ಕೇಂದ್ರದ 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ತಮ್ಮ ಗ್ಯಾರಂಟಿಯ 10 ಕೆ.ಜಿ. ಉಚಿತ ಅಕ್ಕಿಯನ್ನು ಪ್ರತ್ಯೇಕವಾಗಿ ವಿತರಿಸುವ ಎದೆಗಾರಿಕೆ ತೋರಿಸುವುದು ಉತ್ತಮ.

ಕೇವಲ ಅಧಿಕಾರವನ್ನು ಪಡೆಯುವ ಒಂದೇ ಉದ್ದೇಶದಿಂದ ಎಂದೂ ಜಾರಿಗೊಳಿಸಲಾಗದ 5 ಉಚಿತಗಳ ಗ್ಯಾರಂಟಿಯನ್ನು ಘೋಷಿಸಿ ಜನತೆಗೆ ಪಂಗನಾಮ ಹಾಕಿರುವ, ಮಾತು ತಪ್ಪಿದ ವಚನಭೃಷ್ಟ ಕಾಂಗ್ರೆಸ್ಸಿನ ಜನವಿರೋಧಿ ನೀತಿಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ



ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಉಡುಪಿಯ ಶೇಷಶಯನ ಸಭಾಂಗಣದಲ್ಲಿ ಆಚರಿಸಲಾಯಿತು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಯೋಗ ಶಿಕ್ಷಕಿಯರಾದ ಶೋಭಾ ಶೆಟ್ಟಿ ಇಂದ್ರಾಳಿ, ಚೆನ್ನಮ್ಮ ಉಡುಪ, ಯೋಗ ವಿದ್ಯಾರ್ಥಿ ಸ್ವಾತಿ ಭಟ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

ಜೂ.22, ಮಧ್ಯಾಹ್ನ ಗಂಟೆ 3.00ಕ್ಕೆ ಉಡುಪಿಯ ಶೇಷಶಯನ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಸಮಾವೇಶ: ಕುಯಿಲಾಡಿ



ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷಗಳ ಜನಪರ ಆಡಳಿತವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮೋದಿ ಸರಕಾರದ ಸಾಧನೆಗಳನ್ನು ಜನಮಾನಸದಲ್ಲಿ ಪ್ರಚಲಿತಗೊಳಿಸುವ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ 1 ತಿಂಗಳ ಕಾಲ ರಾಜ್ಯಾದ್ಯಂತ ಬಿಜೆಪಿ ಜಿಲ್ಲಾ ಸಮಾವೇಶಗಳು ನಡೆಯಲಿವೆ.

ಬಿಜೆಪಿ ಉಡುಪಿ ಜಿಲ್ಲಾ ಸಮಾವೇಶವು ಜೂ.22, ಗುರುವಾರ ಮಧ್ಯಾಹ್ನ ಗಂಟೆ 3.00ಕ್ಕೆ ಉಡುಪಿಯ ಹೋಟೆಲ್ ಕಿದಿಯೂರ್ ನ ಶೇಷಶಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಸಮಾವೇಶದಲ್ಲಿ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲೆಯ ಶಾಸಕರುಗಳಾದ ವಿ.ಸುನೀಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ ಸಹಿತ ಪಕ್ಷದ ಮುಖಂಡರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.21ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ


ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21 ಬುಧವಾರ ಬೆಳಿಗ್ಗೆ ಗಂಟೆ 7.30ಕ್ಕೆ ಉಡುಪಿಯ ಶೇಷಶಯನ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಯೋಗಾಭ್ಯಾಸ ತರಗತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದ ರಾಜ್ಯ ಸರಕಾರದ ವಿರುದ್ಧ ಜೂ.19ರಂದು ಜಿಲ್ಲಾ ವಿ.ಹಿಂ.ಪ., ಭಜರಂಗ ದಳದ ಪ್ರತಿಭಟನೆ; ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ: ಕುಯಿಲಾಡಿ



ಉಡುಪಿ: ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸು ಪಡೆದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಜೂ.19 ಸೋಮವಾರ ಸಂಜೆ 4.00 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ, ಮಣಿಪಾಲದ ರಜತಾದ್ರಿಯ ಬಳಿ ನಡೆಯುವ ಬೃಹತ್ ಪ್ರತಿಭಟನೆಗೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಹಿಂಪಡೆತ- ರಾಜ್ಯ ಸರಕಾರದ ವಿರುಧ್ದ ವಿ ಎಚ್ ಪಿ ಬಜರಂಗದಳ ಪ್ರತಿಭಟನೆಗೆ ಸಂಪೂರ್ಣ ಬೆಂಬಲ – ಶ್ರೀಕಾಂತ ನಾಯಕ್

ಕಾಪು: ವಿಶ್ವಹಿಂದೂಪರಿಷತ್ ಬಜರಂಗದಳ ಉಡುಪಿ ಜಿಲ್ಲೆ ಇವರು ಇದೇ ಬರುವ ಸೋಮವಾರ ಜೂನ್ 19 ರಂದು ಸಂಜೆ 4.00 ಗಂಟೆಗೆ ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆದು ಹಿಂದೂ ವಿರೋಧಿ ನೀತಿ ಅನುಸರಿಸಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸುವ ಪ್ರತಿಭಟನೆಗೆ ಕಾಪು ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದೆ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ‌ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದು ರಾಜ್ಯ ಸರಕಾರದ ಹಿಂದೂ ವಿರೋಧೀ ದೋರಣೆಗೆ ನಮ್ಮ ಸ್ಪಷ್ಟ ವಿರೋಧವಿದ್ದು ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದಲೂ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಖಂಡನೀಯ: ವೀಣಾ ಎಸ್. ಶೆಟ್ಟಿ



ಉಡುಪಿ: ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಈ ಹಿಂದೆ ಬಿಜೆಪಿ ಸರಕಾರ ತಂದಿರುವ ತಿದ್ದುಪಡಿಯನ್ನು ವಾಪಾಸು ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಸಮಾಜದಲ್ಲಿ ಲವ್ ಜಿಹಾದ್ ಮತ್ತು ಆಮಿಷದ ಮುಖಾಂತರ ಮೋಸದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ವಾಪಾಸು ಪಡೆಯುವ ಮೂಲಕ ಮತಾಂತರವನ್ನೇ ಕಾಯಕವನ್ನಾಗಿಸಿಕೊಂಡಿರುವ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ಪುರುಷರಾದ ವೀರ ಸಾವರ್ಕರ್, ಹೆಡಗೇವಾರ್ ರವರ ಜೀವನಾದರ್ಶವನ್ನು ಸಾರುವ ಪಠ್ಯವನ್ನು ಕೈಬಿಟ್ಟಿರುವುದು ಒಂದೇ ವರ್ಗದ ಓಲೈಕೆಯ ರಾಜಕಾರಣವಾಗಿದೆ. ಆದರೂ ಈ ಪ್ರಕ್ರಿಯೆಯಿಂದ ಇಂತಹ ಮಹಾನ್ ಪುರುಷರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಅರಿತುಕೊಳ್ಳಲು ಮುಂದಾಗುವುದು ಖಂಡಿತ ಎಂದು ಅವರು ತಿಳಿಸಿದ್ದಾರೆ.

ನಕಲಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ರಾಜ್ಯದ ಜನತೆಯನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಜನ ವಿರೋಧಿ ಕಾಂಗ್ರೆಸ್ ಜನತೆಗೆ ನೀಡಿರುವ ಉಚಿತಗಳ ವಾಗ್ದಾನವನ್ನು ಪೂರೈಸದೆ ಪಂಗನಾಮ ಹಾಕಿದೆ. 200 ಯುನಿಟ್ ಉಚಿತ ವಿದ್ಯುತ್ ಎಂದು ಡಂಗುರ ಸಾರಿದ್ದ ಕಾಂಗ್ರೆಸ್ ಇದೀಗ ದಿಡೀರಾಗಿ ವಿದ್ಯುತ್ ದರವನ್ನು ಏರಿಸುವ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ. ಕೇಂದ್ರ ಸರಕಾರ ನೀಡುವ 5 ಕೆ.ಜಿ. ಉಚಿತ ಅಕ್ಕಿ ಸಹಿತ ಹೆಚ್ಚುವರಿ 10 ಕೆ.ಜಿ. ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಬೂಬು ಹೇಳುತ್ತಾ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಸರಕಾರಿ ಬಸ್ ಪ್ರಯಾಣದಿಂದ ಆಟೋ, ಟ್ಯಾಕ್ಸಿ ಚಾಲಕರ ಸಹಿತ ಖಾಸಗಿ ಬಸ್ ಮಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಮನೆ ಒಡತಿಗೆ 2,000 ಫ್ರೀ ಎಂದಿರುವ ಕಾಂಗ್ರೆಸ್ ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟು ಏನನ್ನೂ ಮಾಡದೆ ಕೈಚೆಲ್ಲಿ ಕುಳಿತಿದೆ. ನಿರುದ್ಯೋಗಿ ಪದವೀಧರಿಗೆ ಯುವಕರಿಗೆ 3,000 ಮಾಸಾಶನ ಉಚಿತ ಎಂದಿರುವ ಕಾಂಗ್ರೆಸ್ ಇದೀಗ ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾದ ಪದವೀದರರು ಮಾತ್ರ ಅರ್ಹರು ಎಂದು ರಾಗ ಬದಲಿಸಿದೆ.

ಈ ಎಲ್ಲಾ ವೈಫಲ್ಯಗಳ ಹಿನ್ನೆಲೆಯಲ್ಲಿ ಮಾತು ತಪ್ಪಿದ ಕಾಂಗ್ರೆಸ್ ಸರಕಾರ ಉಚಿತಗಳ ಗ್ಯಾರಂಟಿಗಳನ್ನೂ ಪೂರೈಸದೆ, ಅಭಿವೃದ್ಧಿಯ ಗೊಡವೆಗೂ ಹೋಗದೆ, ರಾಜ್ಯವನ್ನು ದಿವಾಳಿಯ ಅಂಚಿನತ್ತ ಕೊಂಡೊಯ್ಯುವುದು ನಿಶ್ಚಿತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಸ್ತ ಮೀನುಗಾರರ ವತಿಯಿಂದ ಸಚಿವ ಮಂಕಾಳ ಎಸ್. ವೈದ್ಯ ಅವರಿಗೆ ಅಭಿನಂದನೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ನೂತನ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ ಅವರಿಗೆ ಇಂದು ದಿನಾಂಕ 16-06-2023 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಸಮಸ್ತ ಮೀನುಗಾರರ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯಲ್ಲಿ ಶಾಸಕರು ಮಾತನಾಡಿ ಹೆಜಮಾಡಿ ಬಂದರಿನ 60 ಶೇಕಡಾ ಕಾಮಗಾರಿ ಪೂರ್ಣಗೊಂಡಿದ್ದು ಬಾಕಿ ಉಳಿದ ಕಾಮಗಾರಿಗೆ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಗೊಳಿಸುವಂತೆ ಮನವಿ ಮಾಡಿದ ಅವರು ಕಡಲ್ಕೊರೆತ ಪ್ರದೇಶಗಳ ಬಗ್ಗೆ ಪ್ರಸ್ತಾಪಿಸಿ ಕಡಲ್ಕೊರೆತ ಬಾದಿತ ಪ್ರದೇಶಗಳಲ್ಲಿ ತಡೆಗೋಡೆ ಹಾಗೂ ಪ್ರತಿಬಂಧಕಗಳನ್ನು ಅಳವಡಿಸುವ ಬಗ್ಗೆ ಮನವಿ ಮಾಡಿದರು.

*ಸಚಿವರು ಮಾತನಾಡಿ ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.*

*ಈ ಸಂದರ್ಭದಲ್ಲಿ ನಾಡೋಜ ಡಾll. ಜಿ. ಶಂಕರ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಗಣ್ಯರಾದ ಆನಂದ ಸಿ ಕುಂದರ್ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.*

ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಾಪಸ್; ಕಾಂಗ್ರೆಸ್ಸಿನಿಂದ ಮತ ಬ್ಯಾಂಕ್ ಭದ್ರಪಡಿಸುವ ಹುನ್ನಾರ: ಕುಯಿಲಾಡಿ

ಉಡುಪಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಿಂಗಳೊಳಗೆ ಕಾಂಗ್ರೆಸ್ ನೇತೃತ್ವದ ರಿವರ್ಸ್ ಗೇರ್ ಸರಕಾರ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದು ಒಂದೆರಡು ವರ್ಗಗಳ ಓಲೈಕೆಯ ಸಹಿತ ಮತ ಬ್ಯಾಂಕ್ ಭದ್ರಪಡಿಸುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಬಲವಂತದ ಮತಾಂತರ, ಆಮಿಷದ ಮತಾಂತರ ಇತ್ಯಾದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಕಳೆದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಇದರನ್ವಯ ಬಲವಂತದ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಜೊತೆಗೆ 3 ರಿಂದ 10 ವರ್ಷಗಳ ಶಿಕ್ಷೆಗೆ ಅವಕಾಶ ಹಾಗೂ ಇನ್ನಿತರ ಹಲವಾರು ಪೂರಕ ನಿಯಮಗಳನ್ನು ರೂಪಿಸಿದೆ.

ಕಾಂಗ್ರೆಸ್ ಸರಕಾರ ಈ ಜನ ವಿರೋಧಿ ನಿರ್ಣಯದ ಮೂಲಕ ಲವ್ ಜಿಹಾದ್ ಪಿಡುಗು ಹಾಗೂ ಇತರ ಮಾರ್ಗಗಳ ಮೂಲಕ ನಡೆಯುತ್ತಿರುವ ಮೋಸದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬಹುದಾದ ಬಲವಂತದ ಮತಾಂತರ ಪ್ರಕರಣಗಳಿಗೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆ ನಿರ್ಣಯದ ಮೂಲಕ ವಿದ್ಯಾರ್ಥಿಗಳು ವೀರ ಸಾವರ್ಕರ್, ಹೆಡಗೇವಾರ್ ರವರಂತಹ ಮಹಾನ್ ಪುರುಷರ ಜೀವನ ಮೌಲ್ಯಗಳನ್ನು ಅರಿಯುವ ನಿಟ್ಟಿನಲ್ಲಿ ಅವಕಾಶ ವಂಚಿತರನ್ನಾಗಿಸಿದೆ. ಸರಕಾರದ ಈ ನಡೆ ಮತಾಂಧ ಶಕ್ತಿಗಳ ಅಜೆಂಡಾವನ್ನು ಜಾರಿಗೆ ತರುವ ಸೇಡಿನ ರಾಜಕಾರಣವಾಗಿದೆ.

ನಕಲಿ ಗ್ಯಾರಂಟಿಗಳ ಮೂಲಕ ಮೋಸದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೊಟ್ಟ ಮಾತನ್ನು ನೆರವೇರಿಸಲಾಗದೆ ಮುಖಭಂಗ ಎದುರಿಸುತ್ತಿದ್ದು, ಜನತೆಯ ಗಮನವನ್ನು ಬೇರೆಡೆಗೊಯ್ಯಲು ಜನ ವಿರೋಧಿ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಸರಕಾರದ ಮೋಸದ ತಂತ್ರವನ್ನರಿತು ಅಲ್ಲಲ್ಲಿ ಬೀದಿಗಿಳಿದು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನತೆ ವಚನಭ್ರಷ್ಟ ಕಾಂಗ್ರೆಸ್ಸಿನ ಜನ ವಿರೋಧಿ ನಡೆಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started