ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳ್ಳೂರು ಜನ ಜಾಗೃತಿ ವೇದಿಕೆಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಭಾನುವಾರ ಕೊಳಲಗಿರಿ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ್ಪೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ಪೂಜಾರಿ ಅವರು, ಮಹಿಳೆಯರು ಕೇವಲ ತಂಬಾಕನ್ನು ಮಾತ್ರ ವಿರೋಧಿಸುವುದಲ್ಲದೆ ಮೆಹೆಂದಿ ಕಾರ್ಯಕ್ರಮದಲ್ಲಿ ಕುಣಿತ ಮತ್ತು ಕುಡಿತಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ನಿಲ್ಲಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ನಂತರ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಧೂಮಪಾನದಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರಹಸನ ವೊಂದನ್ನು ಆಡಿ ಮಾಹಿತಿ ನೀಡಿದರು
ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಂ. ಡಾ.ಬಿಂದು ಭಟ್, ಶೈಲ ಶಾಮನೂರ್, ಮೇಲ್ವಿಚಾರಕರಾದ ರಮೇಶ್, ಮನೀಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತಾ, ಸೇವಾಪ್ರತಿನಿಧಿ ಶಶಿಕಲಾ, ಮಂಜುಳಾ ನಾಗೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬೇಕಾಬಿಟ್ಟಿಯಾಗಿ ಘೋಷಿಸಿರುವ 5 ಉಚಿತಗಳ ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಯಥಾಪ್ರಕಾರ 5 ವರ್ಷ ಪೂರ್ತಿ ಅನುಷ್ಠಾನಗೊಳಿಸಿದರೆ 2028 ಮೇ ತಿಂಗಳಲ್ಲಿ ತಲೆ ಬೋಳಿಸಿ ಕೆಪಿಸಿಸಿ ಕಛೇರಿಯ ಮುಂದೆ ಕುಳಿತುಕೊಳ್ಳುವ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಿರಂತರ ಸುಳ್ಳು ಹೇಳಿಕೆಗಳಲ್ಲಿ ನಿರತರಾಗಿರುವ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿರುವುದನ್ನು ಮೊದಲು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸವಾಲೆಸಿದಿದ್ದಾರೆ.
ಕಾಂಗ್ರೆಸ್ ಈ ಹಿಂದೆ ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಇದೇ ಮಾದರಿಯ ಉಚಿತ ಖಚಿತಗಳ ಘೋಷಣೆಗಳನ್ನು ಮಾಡಿ ಯಾವುದನ್ನೂ ಈಡೇರಿಸದೆ ಜನರಿಗೆ ಪಂಗನಾಮ ಹಾಕಿದೆ. ಉಚಿತ ಭಾಗ್ಯಗಳನ್ನು ನೀಡಿದ ಅನೇಕ ರಾಷ್ಟ್ರಗಳು ದಿವಾಳಿಹೊಂದಿರುವ ಉದಾಹರಣೆಗಳು ಕಣ್ಣ ಮುಂದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಉಚಿತ ಗ್ಯಾರಂಟಿಗಳನ್ನು 5 ವರ್ಷ ಪೂರ್ತಿ ಯಥಾವತ್ತಾಗಿ ಜಾರಿಗೊಳಿಸುವ ಸಾಧ್ಯತೆ ಇಲ್ಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಘೋಷಿಸಿರುವ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಕೊಟ್ಟ ಮಾತನ್ನು ತಪ್ಪಿದೆ. ಮಾತು ತಪ್ಪಿದ ಈ ಸರಕಾರ ಗ್ಯಾರಂಟಿಗಳಿಗೆ ಹೊಸ ಷರತ್ತುಗಳನ್ನು ಹಾಕುವ ಮೂಲಕ ತನ್ನ ಉಚಿತ ಖಚಿತ ಖಂಡಿತ ನಿಶ್ಚಿತಗಳ ಭರವಸೆಯನ್ನು ಮುರಿದಿದೆ. ಆದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಗ್ಯಾರಂಟಿ ಕಾರ್ಡಿನ ಎಲ್ಲಾ 5 ಭರವಸೆಗಳನ್ನು ಈಗಾಗಲೇ ನೆರವೇರಿಸಿದ ಹಾಗೆ ಪೌರುಷ ತೋರುವುದು ನಾಚಿಕೆಗೇಡು.
* ರಾಜ್ಯ ಕಾಂಗ್ರೆಸ್ ಸರಕಾರ ಗೃಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ತನ್ನು ಯಥಾವತ್ತಾಗಿ ಉಚಿತವಾಗಿ ನೀಡದೇ ವಂಚಿಸಿರುವ ಜೊತೆಗೆ ಹಠಾತ್ತಾಗಿ ಪ್ರತೀ ಯುನಿಟ್ ಗೆ ರೂ.2 ರಂತೆ ವಿದ್ಯುತ್ ದರವನ್ನು ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿರುವುದು ಹೇಡಿತನದ ಸಂಕೇತವಾಗಿದೆ.
* ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿಯಡಿ ಸರಕಾರಿ ಬಸ್ ವ್ಯವಸ್ಥೆಗಳಿಲ್ಲದ ಹಲವಾರು ಜಿಲ್ಲೆಗಳ ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡದಿರುವುದು ವಿಪರ್ಯಾಸ.
* ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಗ್ಯಾರಂಟಿಯನ್ನು ಮುಂದೂಡಿ, ಮನೆಯೊಡತಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ಆನ್ ಲೈನ್ ಅರ್ಜಿ ಎಂಬ ಸಬೂಬು ನೀಡಿ ಕಾಲಹರಣ ಮಾಡುವ ಮೂಲಕ ಜನತೆಯನ್ನು ಸತಾಯಿಸುತ್ತಿರುವುದು ವಿಷಾದನೀಯ.
* ಅನ್ನಭಾಗ್ಯ ಗ್ಯಾರಂಟಿಯನ್ನು ಮುಂದೂಡಿರುವ ರಾಜ್ಯ ಕಾಂಗ್ರೆಸ್ ಸರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಪ್ರಸಕ್ತ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನೂ ಸೇರಿಸಿ, ಇನ್ನೂ ಹೆಚ್ಚುವರಿ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವಂತೆ ಕೇಂದ್ರ ಸರಕಾರದ ಮೊರೆ ಹೋಗಿರುವುದು ನಾಚಿಕೆಗೇಡು. ಕಾಂಗ್ರೆಸ್ ಅಕ್ಕಿ ಹಂಚಿಕೆಯಲ್ಲಿಯೂ ಮೋಸದ ತಂತ್ರ ಅನುಸರಿಸಿದೆ.
* ಯುವನಿಧಿ ಗ್ಯಾರಂಟಿಯಡಿ ಎಲ್ಲಾ ನಿರುದ್ಯೋಗಿ ಪದವೀಧರ ಯುವಕರಿಗೆ ಮಾಸಿಕ ಮಾಶಾಸನ ನೀಡುವುದಾಗಿ ಬೊಗಳೆಬಿಟ್ಟಿರುವ ಕಾಂಗ್ರೆಸ್ ಗ್ಯಾರಂಟಿ ಜಾರಿಯ ದಿನಾಂಕವನ್ನೂ ಪ್ರಕಟಿಸದೆ, ಈ ಸೌಲಭ್ಯ ಪ್ರಸಕ್ತ ಸಾಲಿನಲ್ಲಿ ತೇರ್ಗಡೆ ಹೊಂದಿರುವ ಪದವೀಧರರಿಗೆ ಮಾತ್ರ ಅನ್ವಯ ಎನ್ನುವ ಮೂಲಕ ಯುವ ಸಮುದಾಯಕ್ಕೆ ದ್ರೋಹ ಬಗೆದಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರದ ದುರಾಸೆಯಿಂದ ಉಚಿತ ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ರಾಜ್ಯವನ್ನು ದಿವಾಳಿತನಕ್ಕೆ ದೂಡಲು ಹರಸಾಹಸ ಪಡುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಆದಾಯದ ಮೂಲದ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸುವುದು ಅತ್ಯಗತ್ಯ.
ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ 24 ಗಂಟೆಗಳೊಳಗೆ ಜಾರಿಗೊಳಿಸಲು ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಈ ಎಲ್ಲಾ ಹುಳುಕುಗಳನ್ನು ಮುಚ್ಚಿಟ್ಟು ಸಾಚಾತನದ ಪೋಸ್ ನೀಡುತ್ತಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬರೇ ಪ್ರಚಾರದ ಗೀಳಿನಿಂದ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಇತರರನ್ನು ಗೇಲಿ ಮಾಡುವ ಬದಲು ಅಷ್ಟೊಂದು ತುರ್ತು ಇದ್ದಲ್ಲಿ ತಾವೇ ತಲೆ ಬೋಳಿಸಿಕೊಳ್ಳುವುದು ಉತ್ತಮ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ವಿಶ್ವದ ಅನೇಕ ರಾಷ್ಟ್ರಗಳು ದಿವಾಳಿತನದ ಅಂಚಿನಲ್ಲಿ ಸಾಗುತ್ತಿರುವ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ಪ್ರಸಕ್ತ ಸಾಲಿನಲ್ಲಿ ಶೇ.7.2 ಜಿಡಿಪಿ ದರದ ನಿರೀಕ್ಷೆಯೊಂದಿಗೆ ಸದೃಢವಾಗಿದ್ದು, ವಿಶ್ವದ ಅತ್ಯಂತ ವೇಗದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಕೇಂದ್ರ ಸರಕಾರದ ಸಾಂಖ್ಯಿಕ ಮತ್ತು ಯೋಜನೆಗಳ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ದತ್ತಾಂಶಗಳಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ಜನರ ದೃಢವಾದ ಬೆಂಬಲ ಮತ್ತು ಅರ್ಥ ವ್ಯವಸ್ಥೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯೇ ಇದಕ್ಕೆ ಕಾರಣ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವದ ಚಿಂತನೆ ಪ್ರಶಂಸನೀಯ.
ಕಳೆದ 9 ವರ್ಷಗಳ ಜನಪರ ಆಡಳಿತದಲ್ಲಿ ನೂರಾರು ವಿನೂತನ ಯೋಜನೆಗಳ ಸಹಿತ ಕೊರೋನದಂತಹ ದಿಟ್ಟ ಸವಾಲುಗಳನ್ನು ಮೆಟ್ಟಿ ನಿಂತು, ದೇಶದ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಜೊತೆಗೆ 2025ಕ್ಕೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಮಹತ್ತರವಾದ ಗುರಿಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಅಭಿನಂದನೀಯ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರ ಅಭಿನಂದನಾ ಸಭೆ ಪಡುಬಿದ್ರೆ ಮಹಾಶಕ್ತಿಕೇಂದ್ರ ವತಿಯಿಂದ ಪಡುಬಿದ್ರೆ ನಯತ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಮಂಡಲ ಪ್ರಧಾನಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಪಂಚಾಯತ್ ಅಧ್ಯಕ್ಷರುಗಳಾದ ರವಿ ಶೆಟ್ಟಿ, ಗಾಯತ್ರಿ ಪ್ರಭು, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರುಗಳಾದ ನೀತಾ ಗುರುರಾಜ್, ಕೇಶವ ಮೊಯ್ಲಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಬಾಲಕ್ರಷ್ಣ ದೇವಾಡಿಗ ಹಿರಿಯರಾದ ಗುಣಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಹಾಶಕ್ತಿಕೇಂದ್ರ ಮಟ್ಟದ ಎಲ್ಲ ಪದಾಧಿಕಾರಿಗಳು ಜನಪ್ರತಿನಿಧಿಗಳು, ಕಾರ್ಯಕರ್ತರು ಮತದಾರರು ಉಪಸ್ಥಿತರಿದ್ದರು. ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಇವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.
ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಹಿತ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆ ಸೇರಿದಂತೆ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದು, ಇದೀಗ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಉಚಿತ 10 ಕೆ.ಜಿ. ಅಕ್ಕಿ ವಿತರಣೆಯನ್ನು ಜಾರಿಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೊರೆ ಹೋಗಿರುವುದು ವಿಪರ್ಯಾಸ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ವಾಸ್ತವಿಕವಾಗಿ ಕೇಂದ್ರ ಸರಕಾರ ನೀಡುವ 5 ಕೆ.ಜಿ. ಉಚಿತ ಅಕ್ಕಿಯನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಸರಕಾರವೇ ಉಚಿತ ಗ್ಯಾರಂಟಿಯನ್ವಯ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿಯನ್ನು ನೀಡಬೇಕಾಗಿದೆ. ಈ ವಿಚಾರದಲ್ಲೂ ಕಾಂಗ್ರೆಸ್ ಮೋಸದ ತಂತ್ರವನ್ನು ಅನುಸರಿಸಿ ಜನತೆಯನ್ನು ಯಾಮಾರಿಸಲು ಸನ್ನದ್ಧವಾಗಿದೆ.
ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರ ಪಡೆಯಲೇಬೇಕೆಂಬ ಒತ್ತಾಸೆಯಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿ ಕಾರ್ಡುಗಳನ್ನು ಯಥೇಚ್ಛವಾಗಿ ಮನೆ ಮನೆಗಳಿಗೆ ಹಂಚಿ ಜನತೆಯ ದಾರಿ ತಪ್ಪಿಸಿರುವ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳನ್ನು ಪೂರೈಸಲು ಮೀನ ಮೇಷ ಎಣಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚವನ್ನು ಭರಿಸಿ ಕರ್ನಾಟಕ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಮಾಸಿಕ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದೀಗ ಕೇಂದ್ರ ಸರಕಾರ ಪ್ರತೀ ತಿಂಗಳು ಉಚಿತವಾಗಿ ನೀಡುತ್ತಿರುವ 5 ಕೆ.ಜಿ. ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಿ ಮಾಸಿಕ 10 ಕೆ.ಜಿ. ಯಂತೆ ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ರವರ ಹೇಳಿಕೆ ಹಾಸ್ಯಾಸ್ಪದವೆನಿಸಿದೆ.
ಈ ಹಿಂದೆ ಅನ್ನಭಾಗ್ಯ ಯೋಜನೆ ನಮ್ಮ ಸಾಧನೆ ಎಂದು ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ಸರಕಾರ, ಕೊನೆಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 5 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ವಿತರಿಸುತ್ತಿರುವುದನ್ನು ಒಪ್ಪಿಕೊಂಡಿದೆಯಾದರೂ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡುವ ಉಚಿತ ಅಕ್ಕಿ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಅಕ್ಕಿ ಹೇಗಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು 2014ರ ಚುನಾವಣಾ ಪ್ರಚಾರ ಭಾಷಣದಲ್ಲಿ, ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂಪಾಯಿ 15 ಲಕ್ಷ ಹಾಕುತ್ತೇನೆ ಎಂದಿದ್ದಾರೆ ಎಂಬ ಹಸಿ ಸುಳ್ಳನ್ನು ಪದೇ ಪದೇ ಹೇಳುತ್ತಿರುವ ಕಾಂಗ್ರೆಸ್ ನಾಯಕರು ಸಾಧ್ಯವಿದ್ದರೆ ಈ ಬಗ್ಗೆ ಸೂಕ್ತ ಪುರಾವೆಯನ್ನು ನೀಡಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ರವರಿಗೂ ಈ ರೀತಿಯ ವರ್ತನೆ ಶೋಭೆ ತರಲಾರದು.
ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತಾ ಸತ್ಯವನ್ನಾಗಿಸಲು ಹೊರಟಿರುವ ಕಾಂಗ್ರೆಸಿಗರ ಯತ್ನ ಎಂದೂ ಫಲಿಸದು. ಎಲ್ಲಾ ಸಮಯದಲ್ಲಿ ಎಲ್ಲರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸಿಗರು ಅರಿತುಕೊಳ್ಳಬೇಕಾಗಿದೆ.
ದೇಶದೆಲ್ಲೆಡೆ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಹತಾಶ ಮನೋಭಾವದಲ್ಲಿ ರಾಜ್ಯದಲ್ಲಿ 5 ಉಚಿತಗಳ ಗ್ಯಾರಂಟಿಗಳನ್ನು ಷರತ್ತು ರಹಿತವಾಗಿ ಘೋಷಿಸಿದ್ದರೂ, ಇದೀಗ ವಾಸ್ತವಿಕತೆಯ ಅರಿವಾಗುತ್ತಿದ್ದಂತೆ ದಿನಕ್ಕೊಂದು ಷರತ್ತು, ಮಾರ್ಗಸೂಚಿಗಳನ್ನು ಅಳವಡಿಸುತ್ತಾ ಕಾಲಹರಣ ಮಾಡುತ್ತಿದೆ. ಇತರ ಕೆಲವು ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಕೈ ಕೊಟ್ಟಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 5 ಉಚಿತಗಳ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದಿರುವ ಮಾತನ್ನು ತಪ್ಪಿದಂತಾಗಿದೆ. ಈ ಪ್ರಕ್ರಿಯೆ ರಾಜ್ಯದ ಜನತೆ ಕಾಂಗ್ರೆಸ್ಸಿನ ಮೇಲೆ ನಂಬಿಕೆ ಕಳೆದುಕೊಳ್ಳಲು ನಾಂದಿ ಹಾಡಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಮೋಸ ಜಾಲದ ಗ್ಯಾರಂಟಿ ಕಾರ್ಡ್ ಗಳನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹಂಚಿ ಮತದಾರರ ದಾರಿ ತಪ್ಪಿಸಿ, ಉಚಿತ ಖಚಿತ ಖಂಡಿತ ನಿಶ್ಚಿತ ಎಂದು ಬೊಬ್ಬಿರಿದ ಕಾಂಗ್ರೆಸ್ ಮುಖಂಡರು ಇದೀಗ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಲೇವಡಿ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡುತ್ತೇವೆ ಎಂದು ಪುಂಗಿ ಊದುತ್ತಾ ಬಂದಿರುವ ಕಾಂಗ್ರೆಸ್ ಮುಖಂಡರು ಇದೀಗ ಭಿನ್ನರಾಗ ಎಳೆಯುತ್ತಿರುವುದು ಸಂಶಯಕ್ಕೆಡೆಮಾಡಿದೆ.
ಕಾಂಗ್ರೆಸ್ ಪ್ರಾಯಶ: ತಾವು ಖಂಡಿತವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಮತದಾರರೇ ಕಾಂಗ್ರೆಸ್ ಪಕ್ಷದ ಉಚಿತಗಳ ಗ್ಯಾರಂಟಿ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರು ರಾಜ್ಯದಾದ್ಯಂತ ಜನತೆ ವಿದ್ಯುತ್ ಬಿಲ್ ಕಲೆಕ್ಟರ್, ಬಸ್ ಕಂಡೆಕ್ಟರ್ ಗಳನ್ನು ಉಚಿತಗಳ ಬಗ್ಗೆ ಯಾವ ರೀತಿ ಹಿಗ್ಗಾಮುಗ್ಗಾ ದಬಾಯಿಸಿ ಜಗಳವಾಡುತ್ತಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಈ ಪ್ರಕ್ರಿಯೆ ವಿಪರೀತ ಹಂತಕ್ಕೆ ತಲುಪುವ ಮೊದಲು ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ 5 ಉಚಿತ ಖಚಿತ ಖಂಡಿತಗಳ ಗ್ಯಾರಂಟಿಯನ್ನು ಶೀಘ್ರ ಜಾರಿಗೊಳಿಸುವುದು ಉತ್ತಮ.
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್. ಇದಕ್ಕೆ ಉದಾಹರಣೆ ಎಂಬಂತೆ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರೆಲ್ಲರೂ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಾ ಪ್ರಸ್ತುತ ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂಬುದು ಜಗಜ್ಜಾಹೀರಾಗಿದೆ.
ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶ ಲೂಟಿಗೈದ ಇತಿಹಾಸವಿರುವ ಕಾಂಗ್ರೆಸ್ಸಿಗೆ ಅಪಪ್ರಚಾರವೇ ಜೀವಾಳವಾಗಿದೆ. ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಮುಖಂಡರಿಗಿಲ್ಲ. ಪ್ರಧಾನಿ ಮೋದಿಯವರು ಕಪ್ಪು ಹಣವನ್ನು ವಾಪಾಸು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ‘ಈ ಕಳ್ಳರು, ಲೂಟಿಕೋರರು ವಿದೇಶಿ ಬ್ಯಾಂಕ್ ಗಳಲ್ಲಿ ಜಮಾ ಮಾಡಿರುವ ಹಣವನ್ನು ತಂದರೆ ಭಾರತದ ಒಂದೊಂದು ಬಡವರಿಗೂ ಹದಿನೈದು ಇಪ್ಪತ್ತು ಲಕ್ಷ ಹಂಚುವಷ್ಟಿದೆ’ ಎಂದಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವದ ಚಿಂತನೆಯಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳು ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ.
ಈ ಹಿಂದೆ ರಾಜಸ್ಥಾನ, ಛತ್ತೀಸ್ಗಡ, ಹಿಮಾಚಲ ಪ್ರದೇಶ, ಮಣಿಪುರ ಮುಂತಾದ ರಾಜ್ಯಗಳಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಯಾವುದನ್ನೂ ಸಮರ್ಪಕವಾಗಿ ನೆರವೇರಿಸದೇ ಪಂಗನಾಮ ಹಾಕಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಗೋಸುಂಬೆತನದ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಉಚಿತ ಗ್ಯಾರಂಟಿಗಳನ್ನು ಘೋಷಿಸಿದಂತೆಯೇ ಯಥಾವತ್ತಾಗಿ ಜಾರಿಗೊಳಿಸದೇ ಇದ್ದಲ್ಲಿ ತಕ್ಕ ಶಾಸ್ತಿ ಮಾಡುವುದಂತೂ ಗ್ಯಾರಂಟಿ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್. ಮತ್ತು ಭಜರಂಗ ದಳವನ್ನು ನಿಷೇಧಿಸುವ ಬಗ್ಗೆ ಮಾಡಿರುವ ಪ್ರಸ್ತಾಪವನ್ನು ಖಂಡಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಆಡು ಭಾಷೆಯಲ್ಲಿ ‘ನಾವೇನೂ ಬಳೆ ತೊಟ್ಟಿಲ್ಲ’ ಎಂದಿರುವ ಕ್ಷುಲ್ಲಕ ವಿಚಾರವನ್ನು ದೊಡ್ಡ ವಿವಾದವನ್ನಾಗಿಸಲು ಹೊರಟಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆಯವರ ನಡೆಯನ್ನು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತೀಕ್ಷ್ಣವಾಗಿ ಖಂಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ತಿರುಗೇಟು ನೀಡಿದ್ದಾರೆ.
ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಮೋಸದಿಂದ ಚುನಾವಣೆಯನ್ನು ಗೆದ್ದಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿ ಕಾರ್ಡಿನ ಭರವಸೆಗಳನ್ನು ಜಾರಿ ಮಾಡಲಾಗದೇ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಕ್ಷುಲ್ಲಕ ವಿಚಾರಗಳನ್ನು ಅನಾವಶ್ಯಕವಾಗಿ ಮುನ್ನೆಲೆಗೆ ತರುತ್ತಿದೆ.
ಹಿಂದೂ ಸಂಸ್ಕೃತಿಯ ಆಚಾರ ವಿಚಾರದಲ್ಲಿ ಮಹಿಳೆಯರಿಗೆ ಬಳೆಯ ಪ್ರಾಮುಖ್ಯತೆ ಏನು ಎಂಬುದನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಈ ಬಗ್ಗೆ ಪಾಠ ಮಾಡಲು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ಸಿಗೆ ಯಾವ ನೈತಿಕತೆಯೂ ಇಲ್ಲ.
ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಐದೂ ಕ್ಷೇತ್ರಗಳಲ್ಲಿ ಹೀನಾಯ ಸೋಲನ್ನು ಅನುಭವಿಸುವ ಮೂಲಕ ವಿಚಲಿತಗೊಂಡಿದೆ. ಇದರ ಪರಿಣಾಮವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಗೆ ಹತಾಶ ಭಾವದಿಂದ ಹಿಂದುತ್ವದ ನೆನಪಾಗಿದೆ.
ಮಹಿಳೆಯರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಈ ಹಿಂದೆ ಉಡುಪಿ ನಗರ ಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರು ಮಹಿಳಾ ಸದಸ್ಯೆಯನ್ನು ಯಾವ ರೀತಿ ಅವಮಾನಕರವಾಗಿ ನಡೆಸಿಕೊಂಡಿದ್ದಾರೆ ಎಂಬುದನ್ನು ಮೊದಲು ನೆನಪಿಸಿಕೊಳ್ಳುವುದು ಸೂಕ್ತ.
ಹೌದು, ಬಿಜೆಪಿ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಘೋಷಿಸಿರುವ 5 ಉಚಿತಗಳ ಗ್ಯಾರಂಟಿಗಳನ್ನು 5 ವರ್ಷ ಪೂರ್ತಿ ಯಥಾವತ್ತಾಗಿ ಜಾರಿಗೊಳಿಸಿದರೆ ತಲೆ ಬೋಳಿಸಿ ಕೆಪಿಸಿಸಿ ಕಛೇರಿಯ ಎದುರು ಕುಳಿತುಕೊಳ್ಳುತ್ತೇನೆ ಅಂದಿದ್ದಾರೆ. ಆದರೆ ಅಂತಹ ಪ್ರಮೇಯ ಖಂಡಿತವಾಗಿ ಬರಲಾರದು. ಕಾಂಗ್ರೆಸ್ಸಿಗೆ ಇನ್ನೂ ಮೊದಲನೇ ವರ್ಷಕ್ಕೇ ಗ್ಯಾರಂಟಿಗಳ ಜಾರಿಗೆ ಮುಹೂರ್ತ ಸಿಕ್ಕಿಲ್ಲ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಈಡೇರಿಸುವ ಜೊತೆಗೆ ವಿನೂತನ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಕ್ಷುಲ್ಲಕ ವಿಚಾರಗಳನ್ನು ಕೆದಕುತ್ತಾ ಜನರ ದಾರಿ ತಪ್ಪಿಸುವ ಬದಲು ಕಾಂಗ್ರೆಸ್ ಜನತೆಗೆ ನೀಡಿರುವ 5 ಉಚಿತಗಳ ಗ್ಯಾರಂಟಿಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸಲು ಮುಂದಾಗುವುದು ಸೂಕ್ತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ 5 ಉಚಿತಗಳ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ ಎಂದು ಪುಂಗಿ ಊದಿದ್ದ ಕಾಂಗ್ರೆಸ್ ಮುಖಂಡರು ಇದೀಗ ಉಲ್ಟಾ ಹೊಡೆದು ಜನತೆಗೆ ನೀಡಿದ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವುದು ಹಾಸ್ಯಾಸ್ಪದ. ಜನರ ತೆರಿಗೆ ಹಣದಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿ ಘೋಷಿಸಿ, ಅಧಿಕಾರಕ್ಕೆ ಬಂದು, ಮಾತೆತ್ತಿದರೆ ಉಡಾಫೆ ಉತ್ತರ ನೀಡುವ ಕಾಂಗ್ರೆಸಿಗರಿಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಗರಿಷ್ಠ ಭರವಸೆಗಳನ್ನು ಈಡೇರಿಸುವ ಜೊತೆಗೆ ಹಲವಾರು ಜನಪ್ರಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಹೀನಾಯ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ಸಿನಿಂದ ಬಿಜೆಪಿಗೆ ನೈತಿಕತೆಯ ಪಾಠ ಅನಗತ್ಯ.
‘ವಿದೇಶಿ ಬ್ಯಾಂಕ್ ಗಳಲ್ಲಿ ಈ ಕಳ್ಳರು, ಲೂಟಿಕೋರರು ಜಮಾ ಮಾಡಿರುವ ಹಣವನ್ನು ತಂದರೆ, ಭಾರತದ ಒಂದೊಂದು ಬಡವರಿಗೂ ಹದಿನೈದು ಇಪ್ಪತ್ತು ಲಕ್ಷದಂತೆ ವಿತರಿಸುವಷ್ಟು ಹಣವಿದೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ತಿರುಚಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಆಡಿರುವ ಬಾಲಿಶ ಮಾತುಗಳು ಅರ್ಥಹೀನವಾಗಿದೆ.
ಪ್ರಧಾನಿ ಮೋದಿಯವರು ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ರೀತಿಯಲ್ಲಿ ಯಾರ ಖಾತೆಗೂ ಹಣ ಜಮಾ ಮಾಡುವ ಭರವಸೆಯನ್ನು ನೀಡಿಲ್ಲ. ಬದಲಾಗಿ ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ಉತ್ತಮ ಆಡಳಿತ ಹಾಗೂ ಸದೃಢ ಭಾರತದ ಪರಿಕಲ್ಪನೆಯೊಂದಿಗೆ ವಿಶ್ವ ಮಟ್ಟದಲ್ಲಿ ಭಾರತದ ಘನತೆ ಗೌರವ ಹೆಚ್ಚುವಂತೆ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಉಚಿತ ಖಚಿತ ಖಂಡಿತಗಳ ಗ್ಯಾರಂಟಿ ಕಾರ್ಡ್ ಗಳನ್ನು ಆರ್ಥಿಕ ಸಂಪನ್ಮೂಲದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಜಾರಿಗೆ ತರಲು ಪರದಾಡುತ್ತಿರುವ ಸ್ಥಿತಿಯಲ್ಲಿ ಹೊಸ ಷರತ್ತುಗಳನ್ನು ವಿಧಿಸುವ ಯೋಚನೆಯಲ್ಲಿದ್ದು, ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ವಿಭಿನ್ನ, ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ. ಈ ಎಲ್ಲಾ ವಿಚಾರಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ.
ಜನರ ತೆರಿಗೆ ಹಣದಿಂದ ಜಾರಿಗೊಳಿಸಲು ಘೋಷಿಸಿರುವ ಕಾಂಗ್ರೆಸ್ಸಿನ ಉಚಿತ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಒತ್ತಾಯಿಸಲು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ಜಾರಿಯಲ್ಲಿ ವಿಳಂಬ ಧೋರಣೆ ಅಥವಾ ಮೋಸದ ತಂತ್ರ ಅನುಸರಿಸಿದಲ್ಲಿ ಬಿಜೆಪಿ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜನಪರ ಹೋರಾಟಕ್ಕೆ ಸದಾ ಸಿದ್ಧವಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ರಾಜ್ಯದಲ್ಲೇ ಮೂಂಚೂಣಿ ಸ್ಥಾನವನ್ನು ಪಡೆದಿದೆ. ಈ ಭರ್ಜರಿ ವಿಜಯದ ಹಿನ್ನೆಲೆಯಲ್ಲಿ ಪ್ರತೀ ಮಂಡಲ ಮತ್ತು ಜಿಲ್ಲೆಯ 1,111 ಬೂತ್ ಗಳಲ್ಲಿ ಆತ್ಮಾವಲೋಕನ ಸಭೆಗಳನ್ನು ನಡೆಸುವ ಜೊತೆಗೆ ಸದೃಢ ಪಕ್ಷ ಸಂಘಟನೆ ಮೂಲಕ ಮುಂಬರಲಿರುವ ಲೋಕಸಭೆ, ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಲು ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಉಚಿತಗಳ ಗ್ಯಾರಂಟಿ ಕಾರ್ಡ್ ಗಳ ಆಮಿಷ ತೋರಿಸಿ ಮೋಸದಿಂದ ವಿಧಾನಸಭಾ ಚುನಾವಣೆಯನ್ನು ಗೆದ್ದಿದೆ. ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದಿರುವ ಕಾಂಗ್ರೆಸ್ ಮುಖಂಡರು ಮಾತು ತಪ್ಪಿದ್ದಾರೆ. ಉಚಿತ ಖಚಿತಗಳ ಗ್ಯಾರಂಟಿಗಳನ್ನು ತಕ್ಷಣ ಜಾರಿಗೊಳಿಸದೇ ಇದ್ದಲ್ಲಿ ಬಿಜೆಪಿ ಜನತೆಯ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.
ಅಪಪ್ರಚಾರವೇ ಕಾಂಗ್ರೆಸ್ ಜೀವಾಳವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಮಂಡಲ ಮತ್ತು ಬೂತ್ ಮಟ್ಟದ ಸಭೆಗಳಲ್ಲಿ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ಗಳ ಮೋಸ ಜಾಲದ ಬಗ್ಗೆ ವಿಚಾರ ವಿನಿಮಯ ನಡೆಸುವ ಜೊತೆಗೆ ಜನತೆಯಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.
ಮೇ 30ರಂದು 4.00ಕ್ಕೆ ಬೈಂದೂರು, ಜೂನ್ 2ರಂದು 4.00ಕ್ಕೆ ಕುಂದಾಪುರ, ಜೂನ್ 3ರಂದು 10.30ಕ್ಕೆ ಕಾಪು, 4.00ಕ್ಕೆ ಕಾರ್ಕಳ ಮತ್ತು 5.30ಕ್ಕೆ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲಗಳ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ, ಮೋರ್ಚಾ ಮತ್ತು ಮಂಡಲ ಪದಾಧಿಕಾರಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ವಂದಿಸಿದರು.
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ಪಾಲ್ ಎ. ಸುವರ್ಣ ಉಡುಪಿ, ಗುರ್ಮೆ ಸುರೇಶ್ ಶೆಟ್ಟಿ ಕಾಪು, ಕಿರಣ್ ಕುಮಾರ್ ಕೊಡ್ಗಿ ಕುಂದಾಪುರ ಮತ್ತು ಗುರುರಾಜ್ ಶೆಟ್ಟಿ ಗಂಟಿಹೊಳಿ ಇವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿಯ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಗಣೇಶ್ ಹೊಸಬೆಟ್ಟು, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯಕುಮಾರ್ ಉದ್ಯಾವರ, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವಿಜಯ ಕೊಡವೂರು, ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ರಾಘವೇಂದ್ರ ಕುತ್ಪಾಡಿ, ಚಂದ್ರಶೇಖರ್ ಪ್ರಭು, ಪ್ರಮುಖರಾದ ಶ್ಯಾಮಲಾ ಎಸ್. ಕುಂದರ್, ಶಿಲ್ಪಾ ಜಿ. ಸುವರ್ಣ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ರೋಷನ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.