ನ.14ರಂದು ಉಡುಪಿ ತಾಲೂಕಿನ ಭಜನಾ ಮಂಡಳಿಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ




ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿಯಲ್ಲಿ ನ.28ರಂದು ನಡೆಯುವ ‘ಲಕ್ಷ ಕಂಠ ಗೀತಾ ಪಾರಾಯಣ’ ಮತ್ತು ನ.30ರಂದು ನಡೆಯುವ ‘ಸಂತ ಸಂಗಮ’ ಮತ್ತು ‘ಭಜನೋತ್ಸವ’ದ ಪೂರ್ವಭಾವಿಯಾಗಿ ಉಡುಪಿ ತಾಲೂಕು ವ್ಯಾಪ್ತಿಯ ಸಮಸ್ತ ಭಜನಾ ಮಂಡಳಿಗಳ ಪ್ರತಿನಿಧಿಗಳ ಸಭೆಯು ನ.14 ಶುಕ್ರವಾರ ಸಂಜೆ ಗಂಟೆ 4.00ಕ್ಕೆ ಉಡುಪಿ ಶ್ರೀ ಕೃಷ್ಣ ಮಠದ ‘ಕನಕ ಮಂಟಪ’ದಲ್ಲಿ ನಡೆಯಲಿದೆ.



ಈ ಸಭೆಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್., ಮಠದ ಪ್ರಮುಖರಾದ ರಮೇಶ್ ಭಟ್, ವಿಕ್ರಮ್ ಕುಂಟಾರು ಸಹಿತ ಯೋಜನೆಯ ವಲಯಗಳ ಮೇಲ್ವಿಚಾರಕರು, ಭಜನಾ ಪರಿಷತ್ ತಾಲೂಕು ಪದಾಧಿಕಾರಿಗಳು ಮತ್ತು ವಲಯಗಳ ಸಂಯೋಜಕರು ಪಾಲ್ಗೊಳ್ಳಲಿದ್ದಾರೆ.



ಈ ಮಹತ್ವದ ಸಭೆಯಲ್ಲಿ ಉಡುಪಿ ತಾಲೂಕು ವ್ಯಾಪ್ತಿಯ ಸಮಸ್ತ ಭಜನಾ ಮಂಡಳಿಗಳ ಪ್ರತಿನಿಧಿಗಳು ಮತ್ತು ಭಜಕರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.28ರ ಪ್ರಧಾನಿ ನರೇಂದ್ರ ಮೋದಿ ಶ್ರೀ ಕೃಷ್ಣ ಮಠ ಬೇಟಿ ಕಾರ್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ





ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಬನ್ನಂಜೆಯ ಡಾ! ವಿ.ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಕಲ್ಸoಕ ಜಂಕ್ಷನ್ ವರೆಗೆ ರೋಡ್ ಶೋ ಮೂಲಕ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ‘ಲಕ್ಷ ಕಂಠ ಗೀತೋತ್ಸವ’ದ ಸಾಮೂಹಿಕ ಭಗವದ್ಗೀತಾ ಪಠಣದಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಮಹಾ ಜನತೆಯ ಸಹಿತ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಕಾರಿಡಾರ್ ಯೋಜನೆ ಸಹಿತ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಸಂಸದರು, ಶಾಸಕರು ಮತ್ತು ಪಕ್ಷದ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಪ್ರವಾಸದ ಹಿನ್ನೆಲೆಯಲ್ಲಿ ನ.19ರಂದು ಉಡುಪಿಗೆ ಬೇಟಿ ನೀಡಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ನ.16ರಿಂದ 23ರ ವರೆಗೆ ನಡೆಯುವ ತಾಲೂಕು ಮಟ್ಟದ ‘ಯುವ ಸಮ್ಮೇಳನ’ದಲ್ಲಿ ಯುವ ಸಮುದಾಯ ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಸಂಘಟಿತ ಪ್ರಯತ್ನದ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದರು.

ಆತ್ಮ ನಿರ್ಭರ ಭಾರತ ಅಭಿಯಾನ, ಸ್ವದೇಶಿ ಮೇಳ ಹಾಗೂ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ವಿಶೇಷ ಅರಿವು ಮೂಡಿಸಿ, ಜಿಲ್ಲೆಯಾದ್ಯಂತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ನ.30ರಂದು ನಡೆಯುವ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲೆಯ ಎಲ್ಲಾ 1,112 ಬೂತ್ ಗಳಲ್ಲಿ ವೀಕ್ಷಿಸಿ, ವೀಕ್ಷಣೆಯ ಫೋಟೋ ಮತ್ತು ವರದಿಯನ್ನು ‘ಸರಲ್ ಆಪ್’ನಲ್ಲಿ ಅಪ್ಲೋಡ್ ಮಾಡುವ ಮೂಲಕ ಜಿಲ್ಲೆಗೆ ರಾಜ್ಯದಲ್ಲಿರುವ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳುವಂತೆ ಕುತ್ಯಾರು ವಿನಂತಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಆತ್ಮ ನಿರ್ಭರ ಭಾರತ ಅಭಿಯಾನ, ಸ್ವದೇಶಿ ಮೇಳ ಹಾಗೂ ಯುವ ಸಮಾವೇಶಗಳ ಪೂರ್ವ ಸಿದ್ಧತೆಗಳ ಕುರಿತು ಮೋರ್ಚಾ ಮತ್ತು ಮಂಡಲವಾರು ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್ಐಆರ್) ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ವಿವಿಧ ಅಭಿಯಾನಗಳ ಸಂಚಾಲಕರು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಗಿರೀಶ್ ಎಮ್. ಅಂಚನ್ ವಂದಿಸಿದರು.

ಮಣಿಪಾಲದಲ್ಲಿ ನಡೆದ ಘಟನೆಯ ಬಗ್ಗೆ ಪೋಕ್ಸೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕ್ರಮ ಸ್ವಾಗತಾರ್ಹ : ಸಂಧ್ಯಾ ರಮೇಶ್

ಉಡುಪಿ: ಮಣಿಪಾಲದಲ್ಲಿ ನಡೆದ ಘಟನೆಯ ಬಗ್ಗೆ ಪೋಕ್ಸೊ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ತಿಳಿಸಿದ್ದಾರೆ.

ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜದಲ್ಲಿ ಹೆಚ್ಚುತ್ತಿರುವ ಇಂತಹ ಸಾಮಾಜಿಕ ಪಿಡುಗನ್ನು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.

ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನಾತ್ಮಕ ಕಟ್ಟುನಿಟ್ಟಿನ ಕ್ರಮಗಳನ್ನು ಜರಗಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆ ಅಭಿನಂದನಾರ್ಹ ಎಂದು ಅವರು ತಿಳಿಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಅನಗತ್ಯವಾಗಿ ರಾಜಕೀಯ ಪಕ್ಷದ ಹೆಸರನ್ನು ಅಪಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಮಾಜ ಕಂಟಕರ ಕೀಳು ಮನಸ್ಥಿತಿ ಖಂಡನೀಯ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯೊಂದಿಗೆ ಗೊಂದಲ ಸೃಷ್ಟಿಸುತ್ತಿರುವವರ ಬಗ್ಗೆಯೂ ಪೋಲಿಸ್ ಇಲಾಖೆ ಗಮನ ಹರಿಸುವುದು ಸೂಕ್ತ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಹಿತಾಸಕ್ತಿಗೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಸಮರ್ಪಣಾ ಭಾವದ ಸೇವೆ ಸದಾ ಸ್ಮರಣೀಯ : ಕೆ. ಉದಯ ಕುಮಾರ್ ಶೆಟ್ಟಿ

ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ‘ಏಕತಾ ನಡಿಗೆ’




ಉಡುಪಿ: ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಜನತೆ ಸದಾ ನೆನಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಒಂದು ದೇಶ ಎಂಬ ಪರಿಕಲ್ಪನೆಯಡಿ ರಾಷ್ಟ್ರೀಯ ಏಕೀಕರಣದ ರೂವಾರಿಯಾಗಿ ದೇಶದ ಸಮಗ್ರತೆಗೆ ಸಮರ್ಪಣಾ ಭಾವದ ಸೇವೆ ಸಲ್ಲಿಸಿರುವ ಧೀಮಂತ ನಾಯಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನಾದರ್ಶ ಸದಾ ಸ್ಮರಣೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರದ ಸಹಯೋಗದೊಂದಿಗೆ ದೇಶದ ಮೊದಲ ಉಪ ಪ್ರಧಾನಿ, ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಕಲ್ಸಂಕದಿಂದ ಬಿಜೆಪಿ ಜಿಲ್ಲಾ ಕಛೇರಿಯ ವರೆಗೆ ನಡೆದ ‘ಏಕತಾ ನಡಿಗೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ದೇಶದ ನೂರಾರು ಕಡೆಗಳಲ್ಲಿ ರಾಜರ ಆಡಳಿತವಿದ್ದ ಸಂಸ್ಥಾನಗಳನ್ನು ದೇಶದೊಂದಿಗೆ ವಿಲೀನಗೊಳಿಸಿ ದೇಶದ ಅಖಂಡತೆ ಮತ್ತು ಏಕತೆಗೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಕೊಡುಗೆ ಅನನ್ಯ. ಅವರ ಉದಾತ್ತ ಚಿಂತನೆಗಳು ಪಕ್ಷದ ಕಾರ್ಯಕರ್ತರಿಗೆ ಪ್ರೇರಣಾದಾಯಕ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಮಹಾವೀರ ಹೆಗ್ಡೆ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲ್ಲೇಶ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ರಾಜ್ಯ ನೇಕಾರ ಪ್ರಕೋಷ್ಠ ಸಮಿತಿ ಸದಸ್ಯ ರತ್ನಾಕರ ಇಂದ್ರಾಳಿ, ರಾಜ್ಯ ಕಾರ್ಮಿಕ ಪ್ರಕೋಷ್ಠ ಸಮಿತಿ ಸದಸ್ಯ ಶೈಲೇoದ್ರ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೇನಿಸ್ ಮಾಸ್ಕರೇನಸ್, ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಾ ನಾಯ್ಕ್, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ ರಾವ್ ಹಾಗೂ ಪಕ್ಷದ ಪ್ರಮುಖರು, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಅ.31ರಂದು ಸರ್ದಾರ್ ವಲ್ಲಭಬಾಯಿ ಪಠೇಲ್ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ‘ಏಕತಾ ನಡಿಗೆ’




ಉಡುಪಿ: ಭಾರತದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವ, ರಾಷ್ಟ್ರೀಯ ಏಕೀಕರಣದ ರೂವಾರಿ, ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಬಾಯಿ ಪಠೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಉಡುಪಿ ನಗರದ ಸಹಯೋಗದೊಂದಿಗೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಏಕತಾ ನಡಿಗೆ’ಯು ಅ.31 ಶುಕ್ರವಾರ ಬೆಳಿಗ್ಗೆ ಗಂಟೆ 7.30ಕ್ಕೆ ಉಡುಪಿ ಕಲ್ಸಂಕ ರಾಜಾಂಗಣ ಪಾರ್ಕಿಂಗ್ ರಸ್ತೆಯ ಬಳಿಯಿಂದ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಛೇರಿಯ ವರೆಗೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಏಕತಾ ನಡಿಗೆ’ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದು, ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ದಾರ್ ಪಠೇಲ್ ಅವರ ಗೌರವಾರ್ಥ ನಡೆಯುವ ‘ಏಕತಾ ನಡಿಗೆ’ಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗಿರೀಶ್ ಎಮ್. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಅ.16 : ‘ಜಿಎಸ್ಟಿ ಸುಧಾರಣೆಗಳು’ ವಿಚಾರ ಸಂಕಿರಣ

ಉಡುಪಿ: ಬಿಜೆಪಿ ಉಡುಪಿ ಜಿಲ್ಲೆ, ಜಿಲ್ಲಾ ಆರ್ಥಿಕ ಪ್ರಕೋಷ್ಠ ಹಾಗೂ ಬಿಜೆಪಿ ಉಡುಪಿ ವಿಧಾನಸಭಾ ಕ್ಷೇತ್ರದ ಸಹಯೋಗದೊಂದಿಗೆ ‘ಮುಂದಿನ ಪೀಳಿಗೆಯ ಜಿಎಸ್ಟಿ 2.0’ (ಜಿಎಸ್ಟಿ ಸುಧಾರಣೆಗಳು ಮತ್ತು ಗ್ರಾಹಕರಿಗೆ ಲಾಭಗಳು) ವಿಷಯದಲ್ಲಿ ವಿಚಾರ ಸಂಕಿರಣವು ಅ.16, ಗುರುವಾರ ಬೆಳಿಗ್ಗೆ ಗಂಟೆ 10.00ಕ್ಕೆ ಉಡುಪಿ ಅಜ್ಜರಕಾಡು ಹೋಟೆಲ್ ಡಯಾನ ಸಭಾಂಗಣದಲ್ಲಿ ನಡೆಯಲಿದೆ.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರ ಸಂಕಿರಣವನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಭಾಗವಹಿಸಲಿದ್ದಾರೆ.

ಬೆಂಗಳೂರಿನ ಖ್ಯಾತ ಅರ್ಥ ಶಾಸ್ತ್ರಜ್ಞ ವಿಶ್ವನಾಥ ಭಟ್ ಅವರು ವಿಚಾರ ಸಂಕಿರಣವನ್ನು ನಡೆಸಿಕೊಡಲಿದ್ದಾರೆ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಆಸಕ್ತ ಸಾರ್ವಜನಿಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ಕೆ., ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆರ್.ಎಸ್.ಎಸ್. ಹೆಸರನ್ನು ಜಪಿಸುತ್ತಿರುವ ಪ್ರಿಯಾಂಕ್ ಖರ್ಗೆ ವರ್ತನೆ ಹಾಸ್ಯಾಸ್ಪದ: ಕುತ್ಯಾರು ನವೀನ್ ಶೆಟ್ಟಿ




ಉಡುಪಿ: ವಿಶ್ವದ ಅತಿ ದೊಡ್ಡ ಸೇವಾ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಪದೇ ಪದೇ ಜಪಿಸುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪ್ರಿಯಾಂಕ ಖರ್ಗೆ ವರ್ತನೆ ಹಾಸ್ಯಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ರಾಷ್ಟ್ರ ಭಕ್ತಿಯ ಚಿಂತನೆಯೊಂದಿಗೆ ವ್ಯಕ್ತಿತ್ವ ನಿರ್ಮಾಣದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಮೂಲ್ಯ ಸೇವಾ ಕಾರ್ಯಗಳ ಕುರಿತು ಎಳ್ಳಷ್ಟೂ ಪರಿಜ್ಞಾನವಿಲ್ಲದ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್. ಚಟುವಟಿಕೆಗಳ ಮೇಲೆ ನಿಷೇಧ ಹೇರಲು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ.

ಓರ್ವ ಜವಾಬ್ದಾರಿಯುತ ಸಚಿವನಾಗಿ ತನ್ನ  ಖಾತೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಅಸಮರ್ಥನಾಗಿರುವ ಪ್ರಿಯಾಂಕ್ ಖರ್ಗೆ ತನ್ನ ಹಾಗೂ ಸರಕಾರದ ವೈಫಲ್ಯವನ್ನು ಮರೆಮಾಚಲು ಪದೇ ಪದೇ ಆರ್.ಎಸ್.ಎಸ್. ಬಗ್ಗೆ ಮಾತನಾಡುತ್ತಿರುವುದು ಖೇದಕರ.

ಸಾರ್ಥಕ ಸೇವಾ ಚಟುವಟಿಕೆಗಳೊಂದಿಗೆ ರಾಷ್ಟ್ರ ನಿರ್ಮಾಣದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿರುವ ಸುಸಂದರ್ಭದಲ್ಲಿ ದೇಶದಾದ್ಯoತ ಲಕ್ಷಾಂತರ ಕಾರ್ಯಕ್ರಮಗಳು ನಡೆಯಲಿರುವುದು ಪ್ರಿಯಾಂಕ್ ಖರ್ಗೆಯವರಂತಹ ಸಂಕುಚಿತ ಮನೋಭಾವದ ಹಲವು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.

ಆರ್.ಎಸ್.ಎಸ್. ನಿಷೇಧ ಯಾರಿಂದಲೂ ಸಾಧ್ಯವಾಗದ ಮಾತು. ಈ ಹಿಂದೆ ಆರ್.ಎಸ್.ಎಸ್. ನಿಷೇಧಕ್ಕೆ ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷದ ಘಟಾನುಗಟಿ ಪ್ರಧಾನಿಗಳು ವಿಫಲರಾಗಿ ಮುಖಭಂಗ ಎದುರಿಸಿರುವುದು ಗತ ಇತಿಹಾಸ. ಈ ನೆಲೆಯಲ್ಲಿ ಪ್ರಿಯಾಂಕ್ ಖರ್ಗೆಯವರಿಗೆ ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಉಳಿದಿಲ್ಲ.

ದೇಶದ ಸ್ವಾತಂತ್ರ್ಯ ನಂತರ ಅಂದಿನ ಕಾಂಗ್ರೆಸ್ಸನ್ನು ಬರ್ಕಾಸ್ತುಗೊಳಿಸಬೇಕು ಎಂದು ಮಹಾತ್ಮ ಗಾಂಧಿ ತಿಳಿಸಿದ್ದರು. ಅಂದಿನ ಕಾಂಗ್ರೆಸ್ ನಾಯಕರು ಗಾಂಧೀಜಿ ಮಾತನ್ನು ಕಡೆಗಣಿಸಿದ್ದರೂ, ಇದೀಗ ದೇಶಭಕ್ತ ಸೇವಾ ಸಂಘಟನೆ ಆರ್.ಎಸ್.ಎಸ್. ಚಟುವಟಿಕೆಗಳ ನಿಷೇಧದ ಬಗ್ಗೆ  ಪ್ರಿಯಾಂಕ್ ಖರ್ಗೆ ಅವರ ಉದ್ದಟತನದ ಮಾತುಗಳಿಂದ ಜನತೆಯೇ ಕಾಂಗ್ರೆಸ್ಸನ್ನು ನಿರ್ಮೂಲನೆ ಮಾಡಲು ಮುಂದಾಗುವುದು ನಿಶ್ಚಿತ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.3 : ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯ ನೂತನ ಕಟ್ಟಡದ ‘ಭೂಮಿ ಪೂಜೆ’, ‘ಶಿಲಾನ್ಯಾಸ’ ಸಮಾರಂಭ ಮತ್ತು ‘ಕಾರ್ಯಕರ್ತರ ಸಮಾವೇಶ’




ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯ ನೂತನ ಕಟ್ಟಡದ ‘ಭೂಮಿ ಪೂಜೆ’, ‘ಶಿಲಾನ್ಯಾಸ’ ಸಮಾರಂಭ ಮತ್ತು ‘ಕಾರ್ಯಕರ್ತರ ಸಮಾವೇಶ’ವು ಅ.3 ಶುಕ್ರವಾರ ಬೆಳಿಗ್ಗೆ ಗಂಟೆ 10.30ಕ್ಕೆ ಉಡುಪಿ ಗುಂಡಿಬೈಲು-ಅಂಬಾಗಿಲು ರಸ್ತೆ, ಟಾಟಾ ಮೋಟರ್ಸ್ ಬಳಿ ಇರುವ ನಿವೇಶನದಲ್ಲಿ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಜಿಲ್ಲೆಯ ಸಂಸದರು, ಶಾಸಕರು ಮತ್ತು ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.

ಈ ಎರಡೂ ಕಾರ್ಯಕ್ರಮಗಳಲ್ಲಿ ಪಕ್ಷದ ಹಿರಿಯರು, ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಅಗತ್ಯವಾಗಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಕಸಿತ ಭಾರತಕ್ಕೆ ಜಿಎಸ್ಟಿ ಸುಧಾರಣೆಯ ಗರಿ’ – ಜಿಲ್ಲೆಯಾದ್ಯಂತ ಬಿಜೆಪಿ ಸಂಭ್ರಮಾಚರಣೆ : ಕುತ್ಯಾರು ನವೀನ್ ಶೆಟ್ಟಿ




ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಂಡ ಜಿಎಸ್ಟಿ ಸುಧಾರಣೆಯ ನಿರ್ಣಯ ವಿಶ್ವದಲ್ಲೇ ಅತ್ಯಂತ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಪ್ರಗತಿಗೆ ಇನ್ನಷ್ಟು ವೇಗ ನೀಡುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಭಾರತದ ಅಭಿವೃದ್ಧಿಯ ನಾಗಾಲೋಟವನ್ನು ಸಹಿಸದೆ ಭಾರತಕ್ಜೆ ಗರಿಷ್ಠ 50% ತೆರಿಗೆಯನ್ನು ವಿಧಿಸುವ ಮೂಲಕ ದೇಶದ ಅಭಿವೃದ್ಧಿಯ ವೇಗವನ್ನು ತಡೆಯಲು ಯತ್ನಿಸಿದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅದಕ್ಕೆ ತಕ್ಕುದಾದ ಸಕಾಲಿಕ ನಿರ್ಣಯವನ್ನು ತೆಗೆದುಕೊಂಡಿದೆ. ಆ ಮುಖೇನ ದೇಶದ ರೈತರ, ಯುವ ಜನರ ಮತ್ತು ಸಣ್ಣ ಉದ್ದಿಮೆದಾರರ ಹಿತ ರಕ್ಷಣೆಗೆ ಮುಂದಾಗಿದೆ. ಜಿಎಸ್ಟಿ ದರ ಕಡಿತ ಗೊಳಿಸುವ ಮೂಲಕ ಸಾಮಾನ್ಯ ಜನರ, ಬಡವರ ಮತ್ತು ಮಧ್ಯಮ ವರ್ಗದವರ ಕೈಯಲ್ಲಿ ಹಣ ಉಳಿಯುವಂತೆ ಮಾಡಿ ಹೆಚ್ಚಿನ ಖರೀದಿಗೆ ಪ್ರೋತ್ಸಾಹಿಸಿ, ವಿಕಸಿತ ಭಾರತಕ್ಕೆ ಮುನ್ನುಡಿ ಬರೆದಿದೆ.

ಸುಮಾರು 390ಕ್ಕಿಂತಲೂ ಹೆಚ್ಚಿನ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿ ಗರಿಷ್ಠ ವಿನಾಯಿತಿಯನ್ನು ನೀಡಿರುವ ಕೇಂದ್ರ ಸರಕಾರದ ಈ ಐತಿಹಾಸಿಕ ನಿರ್ಣಯವನ್ನು ಉಡುಪಿ ಜಿಲ್ಲಾ ಬಿಜೆಪಿ ಸಂಭ್ರಮದಿಂದ ಸ್ವಾಗತಿಸುತ್ತದೆ.

ಜಿಎಸ್ಟಿ ದರ ಕಡಿತ ದೇಶವಾಸಿಗಳಿಗೆ ನವರಾತ್ರಿ, ದೀಪಾವಳಿ ಸಹಿತ ಇತರ ಹಬ್ಬಗಳನ್ನು ಸಂಭ್ರಮಿಸಲು ದೊರೆತ ಬೋನಸ್ ನಂತಿದೆ ಎಂದು ಕುತ್ಯಾರು ತಿಳಿಸಿದ್ದಾರೆ.

ಈ ಪ್ರಕ್ರಿಯೆ ಯಶಸ್ವಿಯಾಗಲು ಜನತೆ ಈ ರೀತಿ ಸಹಕಾರ ನೀಡಬೇಕಾಗಿದೆ:

1. ತಯಾರಕರು ಜಿಎಸ್ಟಿ ದರ ಕಡಿತಗೊಳಿಸಿದ ವಸ್ತುವಿಗೆ ಹೊಸ ಕಡಿತ ದರ ಪ್ರಿಂಟ್ ಮಾಡುವುದು. ಈಗಾಗಲೇ ತಯಾರಾದ ವಸ್ತುವಿಗೆ ಹೊಸ ದರ ಸ್ಟಿಕ್ಕರ್ ಅಂಟಿಸುವುದು.

2. ವ್ಯಾಪಾರಿಗಳು ಕಡಿತಗೊಂಡ ಬೆಲೆಯಲ್ಲಿಯೇ ಮಾರುವುದು. ಮೊದಲೇ ಖರೀದಿಸಿದ MRP ಬೆಲೆ ಇದ್ದರೂ ಕಡಿತ ದರದ ಹೊಸ ಸ್ಟಿಕ್ಕರ್ ಅಂಟಿಸುವುದು.

3. ಗ್ರಾಹಕರು ನಿಗದಿತ ವಸ್ತುಗಳನ್ನು ಖರೀದಿಸುವಾಗ ಕಡಿತಗೊಳಿಸಿದ ಬೆಲೆಯಲ್ಲಿಯೇ ಕೇಳಿ ಪಡೆಯುವುದು.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ದೇಶೀಯ ವಸ್ತುಗಳನ್ನು ಖರೀದಿಸಿ ಆತ್ಮ ನಿರ್ಭರತೆಗೆ ಪ್ರೋತ್ಸಾಹ ನೀಡಬೇಕು.

ಉಡುಪಿ ಜಿಲ್ಲಾ ಬಿಜೆಪಿ ಈ ಬಗ್ಗೆ ಜನತೆಗೆ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಕಾರ್ಯಾಗಾರ, ಅಲ್ಲಲ್ಲಿ ಜಾಹೀರಾತುಗಳು ಮತ್ತು ಗ್ರಾಹಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸಂಭ್ರಮಾಚರಣೆಯನ್ನು ನಡೆಸಿ ಜಿಎಸ್ಟಿ ಸುಧಾರಣೆಯ ಲಾಭ ಜನರಿಗೆ ತಲುಪುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.01 ರ ‘ಧರ್ಮಸ್ಥಳ ಚಲೋ’ ಅಭಿಯಾನಕ್ಕೆ ಉಡುಪಿ ಜಿಲ್ಲೆಯಿಂದ 15,000 ಮಂದಿ ಭಾಗಿ: ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ



ಉಡುಪಿ:  ಅಸಂಖ್ಯಾತ ಭಕ್ತರ ಧಾರ್ಮಿಕ ಶೃದ್ದಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯವಸ್ಥಿತ ಷಡ್ಯಂತ್ರವನ್ನು ಖಂಡಿಸಿ, ಪ್ರಕರಣದ ತನಿಖೆಯನ್ನು ಎನ್.ಐ.ಎ. ಗೆ ವಹಿಸಬೇಕು ಎಂಬ ಆಗ್ರಹದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ನಡೆಯಲಿರುವ ರಾಜ್ಯ ಮಟ್ಟದ ‘ಧರ್ಮಸ್ಥಳ ಚಲೋ’ ಅಭಿಯಾನದಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 15,000ಕ್ಕೂ ಮಿಕ್ಕಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಭಕ್ತಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ ಮತ್ತು ಮಂಡಲಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆ.28ರಂದು ಬಿಜೆಪಿ ದ.ಕ. ಜಿಲ್ಲಾ ಕಛೇರಿಯಲ್ಲಿ ನಡೆದ ಅವಿಭಜಿತ ದ.ಕ. ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಧರ್ಮ ರಕ್ಷಣೆಗಾಗಿ ‘ಧರ್ಮಸ್ಥಳ ಚಲೋ’ ಅಭಿಯಾನದ ರಾಜ್ಯ ಸಂಚಾಲಕ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಸಹ ಸಂಚಾಲಕರಾದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅಭಿಯಾನದ ರೂಪುರೇಷೆಗಳ ಬಗ್ಗೆ ವಿಸ್ತ್ರತ ಮಾಹಿತಿಯನ್ನು ನೀಡಿದ್ದಾರೆ. ಉಭಯ ಜಿಲ್ಲೆಗಳಿಂದ ಗರಿಷ್ಠ ಸಂಖ್ಯೆಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಭಕ್ತಾಭಿಮಾನಿಗಳು ‘ಧರ್ಮಸ್ಥಳ ಚಲೋ’ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಜ್ಜುಗೊಳಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ ಮತ್ತು ಮಂಡಲಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಜೊತೆಗೆ ಶಾಸಕರುಗಳ ನೇತೃತ್ವದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರವಾರು ಅಭಿಯಾನದ ಪೂರ್ವ ಸಿದ್ಧತಾ ಸಭೆಗಳು ನಡೆದಿವೆ. ಎಲ್ಲರೂ ಸೆ.1 ಸೋಮವಾರ ಮಧ್ಯಾಹ್ನ ಗಂಟೆ 12.30ರೊಳಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಪಸ್ಥಿತರಿದ್ದು, ಮಧ್ಯಾಹ್ನ ಗಂಟೆ 2.00ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ‘ಬೃಹತ್ ಸಮಾವೇಶ’ದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಈ ಹಿಂದೆ ಶಬರಿಮಲೆ, ತಿರುಪತಿ, ಇಶಾ ಫೌಂಡೇಶನ್ ಬಳಿಕ ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಿತ ಇತರ ಪ್ರಮುಖ ದೇವಸ್ಥಾನಗಳ ವಿರುದ್ಧ ಸಂಚು ರೂಪಿಸಿ, ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿಯನ್ನುoಟುಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜೊತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವ ನಿಟ್ಟಿನಲ್ಲಿ ‘ಧರ್ಮಸ್ಥಳ ಚಲೋ’ ಅಭಿಯಾನವನ್ನು ಎಲ್ಲರೂ ಸೇರಿ ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Design a site like this with WordPress.com
Get started