
ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಇದರ ಸರ್ವಿಸ್ ರಸ್ತೆಯ ಅಗಲೀಕರಣ ಮತ್ತು ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ಇದರ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ರಾ.ಹೆ.66 ಅಂಬಲಪಾಡಿ ಇದರ ಅಗಲ ಕಿರಿದಾಗಿರುವ ಸರ್ವಿಸ್ ರಸ್ತೆಯನ್ನು ಮಳೆ ನೀರು ಹರಿಯುವ ಚರಂಡಿ ಸಹಿತ ಅಗಲೀಕರಣಗೊಳಿಸುವಂತೆ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರವನ್ನು ಸಂಪರ್ಕಿಸುವ ಉಡುಪಿ ನಗರಸಭೆಯ ಸ್ವಾಧೀನದಲ್ಲಿರುವ ರಸ್ತೆಯನ್ನು ಅಂಡರ್ ಪಾಸ್ ದ್ವಾರಕ್ಕೆ ಸಮನಾಗಿ ರಾ.ಹೆ.66ರ ಪ್ಯಾಕೇಜ್ ರಸ್ತೆಯಾಗಿ ಅಗಲೀಕರಣಗೊಳಿಸುವ ಪ್ರಕ್ರಿಯೆಯನ್ನು ಪ್ರಸಕ್ತ ಪ್ರಗತಿಯಲ್ಲಿರುವ ಅಂಬಲಪಾಡಿ ರಾ.ಹೆ.66ರ ಕಾಮಗಾರಿಯ ಜೊತೆಗೆ ಕಾರ್ಯಗತಗೊಳಿಸುವಂತೆ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಜಂಕ್ಷನ್ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್ ಪಾಸ್ ಮಧ್ಯದಿಂದ 30 ಮೀಟರ್ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ವಿನ್ಯಾಸದಲ್ಲಿರುವಂತೆ ಫೂಟ್ ಪಾತ್ ನಲ್ಲಿ ಸುರಕ್ಷಿತ ಜನ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಮನವಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕೋಟ ಅವರು ಮನವಿಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅವರಿಗೆ ಸಲ್ಲಿಸಿ ಮನವಿಯಲ್ಲಿ ಉಲ್ಲೇಖಿಸಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಯ ಕುರಿತು ಸಂಸದರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ಅಂಬಲಪಾಡಿ ವಾರ್ಡ್ ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.









