ಅಲೆವೂರು ಪ್ರಗತಿನಗರದ ಶ್ರೀ ನಾಗರಾಜ ರಕ್ತೇಶ್ವರಿ ಸನ್ನಿಧಾನದಲ್ಲಿಖ್ಯಾತ ಗಾಯಕರೂ ದಾಸ ಸಿಂಚನ ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಬೆಂಗಳೂರಿನ ಎಮ್ ಎಸ್ ಗಿರಿಧರ್ ಹಾಗೂ ವಸುಧಾ ಜಿ ಇವರಿಗೆ ಪಂಚಗಾನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಯಾ ಕಾಮತ್, ಸಂಸ್ಥೆಯ ಅಧ್ಯಕ್ಷರಾದ ರಾಮ ನಾಯ್ಕ್, ಪ್ರಮುಖರಾದ ಶ್ರೀಕಾಂತ ನಾಯಕ್, ಸತೀಶ್, ನಾಗರಾಜ್ ಆಚಾರ್ಯ, ರಾಘವೇಂದ್ರ ಆಚಾರ್ಯ, ಸುಜಾತ, ಗೀತಾ, ಆಶಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮೂಡು ಅಲೆವೂರು ಕರ್ವಾಲು ಸರಕಾರಿ ಶಾಲಾ ಮಕ್ಕಳಿಗೆ ಕರ್ವಾಲಿನ ಶ್ರೀ ವಿಷ್ಣು ಸ್ನೇಹ ಬಳಗ ಎನ್ನು ಸಂಸ್ಥೆಯ ದತ್ತು ಸ್ವೀಕಾರ ಕಾರ್ಯಕ್ರಮದಡಿ, ಇವರ ಕೋರಿಕೆಯ ಮೇರೆಗೆ ಸಂಸ್ಥೆಯ ಹಿತೈಷಿಯಾದ ಶ್ರೀ ಹರಿಕ್ರಷ್ಣ ಭಟ್ ಮೂಡು ಅಲೆವೂರು ಕರ್ವಾಲು ಇವರು ಸುಮಾರು ರೂ.11500/- ಮೊತ್ತದ ನೋಟ್ ಪುಸ್ತಕ, ಪೆನ್ ಪೆನ್ಸಿಲ್ ಇತ್ಯಾದಿ ಮಕ್ಕಳಿಗೆ ಬೇಕಾಗುವ ಪರಿಕರಗಳನ್ನು ನೀಡಿರುವರು. ಅವರಿಗೆ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಕರ್ವಾಲು ಇವರು ಧನ್ಯವಾದಗಳನ್ನು ಅರ್ಪಿಸಿರುವರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ, ಪೋಷಕರಾದ ಹರೀಶ್ ನಾಯ್ಕ್, ಮಾನಸ ಮತ್ತಿತರರು ಉಪಸ್ಥಿತರಿದ್ದರು.
ಪ್ರಬುದ್ಧ ರಾಜಕಾರಿಣಿ, ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿರುವ ಬಸವರಾಜ ಬೊಮ್ಮಾಯಿಯವರು ಇದೀಗ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತ ಪಡಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ರಾಜಕೀಯ ಮುತ್ಸದ್ಧಿ ಬಸವರಾಜ ಬೊಮ್ಮಾಯಿಯವರು ರಾಜ್ಯದ 30ನೇ ಮುಖ್ಯಮಂತ್ರಿಯಾಗಿರುವ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೊಮ್ಮಾಯಿಯವರು ಸಾರ್ಥಕ ಜನಪರ ಆಡಳಿತ ನೀಡುವ ಮೂಲಕ ರಾಜ್ಯದ ಮಾದರಿ ಮುಖ್ಯಮಂತ್ರಿಗಳಾಗಿ ಯಶಸ್ಸು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಾರು ಅಂತಾ ಎರಡು ದಿನಗಳಿಂದ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನು ಎರಡು ದಿನದಿಂದ ಸಿಎಂ ರೇಸ್ ನಲ್ಲಿ ಬೇರೆ ಬೇರೆ ಹೆಸರುಗಳು ಕೇಳಿ ಬಂದಿದ್ದವು. ಬಹುತೇಕ ಎಲ್ಲಾ ಬಿಜೆಪಿ ಶಾಸಕರ ಹೆಸರುಗಳು ಕೇಳಿ ಬಂದಿದ್ದವು ಅಂದರೆ ತಪ್ಪಲ್ಲ. ಆದರೆ ಈಗ ಆ ಎಲ್ಲಾ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ. ಬಸವ್ ರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಅವರು ಕೂಡ ಮುಖ್ಯಮಂತ್ರಿಯಾಗಿದ್ದರು. ಇದೀಗ ಮಗನೂ ಮುಖ್ಯಮಂತ್ರಿಯಾಗಿದ್ದಾರೆ. 1988 ರಿಂದ 1989 ರವರೆಗೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಇನ್ನು ನಾಳೆ ಬಸವರಾಜ್ ಬೊಮ್ಮಾಯಿಯವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಬಿಜೆಪಿ ಕಾರ್ಯಕರ್ತ ಆಧಾರಿತ ಅತೀ ದೊಡ್ಡ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷದ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳು ಸದೃಢವಾಗಿವೆ. ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ನಿತ್ಯ ನಿರಂತರ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಜು.26ರಂದು ಹಿರಿಯಡ್ಕದ ಓಂತಿಬೆಟ್ಟು ಆರ್.ಎಸ್.ಬಿ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾಪು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಇಂದು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಜನಪರ ಯೋಜನೆಗಳ ಮೂಲಕ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿವೆ. ಕೊರೋನಾ ಮಹಾಮಾರಿಯ ವ್ಯವಸ್ಥಿತ ನಿರ್ವಹಣೆಯ ಜೊತೆಗೆ ಕೃಷಿಕರು, ಕಾರ್ಮಿಕರು, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿರುವ ಸರಕಾರ ಎಲ್ಲಾ ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ.
ಆದರೆ ವಿರೋಧ ಪಕ್ಷಗಳು ಮಾತ್ರ ಸರಕಾರದ ಯಾವುದೇ ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡದೇ ಕೇವಲ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬಿಜೆಪಿ ಸರಕಾರದ ಯೋಜನೆ ಹಾಗೂ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್ ವಿಶೇಷ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಭೆಯಲ್ಲಿ ನಿರ್ಣಯಗಳ ಮಂಡನೆ, ಕಳೆದ ಮೂರು ತಿಂಗಳಲ್ಲಿ ನಡೆದ ಪಕ್ಷದ ಚಟುವಟಿಕೆಗಳು ಹಾಗೂ ಮುಂದಿನ ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸಬೇಕಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚಿಂತನ ಮಂಥನ ನಡೆಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಮಂಡಲ ಪ್ರಭಾರಿ ರವೀಂದ್ರ ಮಡಿವಾಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್ ಮತ್ತು ಸಭೆಯ ಅಪೇಕ್ಷಿತರು ಉಪಸ್ಥಿತರಿದ್ದರು.
ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಬಿಜೆಪಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಂಗಳೂರು ಸಮಾರೋಪ ಭಾಷಣಗೈದರು.
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಮೀರಾಬಾಯಿ ಚಾನು ದಾಖಲೆ ಬರೆದಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಮೀರಾಬಾಯಿ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಎತ್ತಿದರೆ, ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ ಎತ್ತಿದ್ದಾರೆ. ಇದರೊಂದಿಗೆ ಅವರು ಒಟ್ಟು 202 ಕೆ.ಜಿ.ಗಳನ್ನು ಎತ್ತಿದರು. ಚಾನುಗೆ ಮೊದಲು, ಸಿಡ್ನಿ ಒಲಿಂಪಿಕ್ಸ್ 2000ರಲ್ಲಿ ಕರ್ಣಂ ಮಲ್ಲೇಶ್ವರಿ, ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಸಮಯದಲ್ಲಿ ಕರ್ಣಂ ಮಲ್ಲೇಶ್ವರಿ ಒಟ್ಟು 240 ಕೆ.ಜಿ. ಎತ್ತಿದ್ದರು.
ಇನ್ನೊಂದೆಡೆ ಟೋಕಿಯೊ ಒಲಿಂಪಿಕ್ಸ್ ನ ಎರಡನೇ ದಿನ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಿಲ್ಲುಗಾರಿಕೆಯ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ, ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಆನ್ ಸ್ಯಾನ್ ಮತ್ತು ಕಿಮ್ ಜೆ ಡಿಯೋಕ್ 6-2ರಿಂದ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.
ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾರೈಸಿದ್ದಾರೆ.
ಉಡುಪಿ : ಯಕ್ಷಗಾನ ಕಲಾರಂಗ ಕುಂದಾಪುರದ ವಿದ್ಯಾಪೋಷಕ್ ವಿದ್ಯಾರ್ಥಿನಿ ಶ್ರೀನಿಧಿ (I B.Sc) ಇವಳಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಮಾ ‘ಪಾವನಿ’ ಮನೆಯ ಉದ್ಘಾಟನೆ ಜುಲೈ 17ರಂದು ನೆರವೇರಿತು.
ಅಭ್ಯಾಗತರಾಗಿ ಮೈಸೂರು ಮರ್ಕಂಟೈಲ್ ಕಂ. ಲಿ. ನ ಆಡಳಿತ ನಿರ್ದೇಶಕರಾದ ಶ್ರೀ ಎಚ್. ಎಸ್. ಶೆಟ್ಟಿ, ಮಂಗಳೂರಿನ ಉದ್ಯಮಿ ಶ್ರೀ ಗೋಕುಲನಾಥ ಪ್ರಭು, ಬೆಂಗಳೂರಿನ ವೈದ್ಯ ವಿಜ್ಞಾನಿ ಡಾ. ರಾಜಾ ವಿಜಯ್ ಕುಮಾರ್, ಮಂಗಳೂರಿನ ವೈದ್ಯರಾದ ಡಾ. ಜೆ.ಎನ್ ಭಟ್, ಗೋವಾದ ಆನಂದ ಸಾಗರ್ ಗ್ರೂಪ್‍ನ ಮಾಲಕರಾದ ರಾಘವ ಎಂ. ಶೆಟ್ಟಿ ಹಾಗೂ ಉದ್ಯಮಿ ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು.
ಮನೆಯ ಪ್ರಾಯೋಜಕತ್ವ ವಹಿಸಿದ ಸಂಸ್ಥೆಯ ಅಧ್ಯಕ್ಷರೂ ಆದ ಎಂ. ಗಂಗಾಧರ ರಾವ್ ಹಾಗೂ ಶ್ರೀಮತಿ ಸರಸ್ವತಿ ಜಿ. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಎಚ್.ಎಸ್ ಶೆಟ್ಟಿಯವರು ಕಲಾರಂಗದ ಕಾರ್ಯವೈಖರಿಯನ್ನು ಮೆಚ್ಚಿ ತಾನು ಮುಂದಿನ ದಿನಗಳಲ್ಲಿ 5 ಮನೆಗಳ ಪ್ರಾಯೋಜಕತ್ವವಹಿಸುವ ಭರವಸೆ ನೀಡಿದರು. ಇದೇ ರೀತಿ ಜೆ.ಎನ್. ಭಟ್ ಹಾಗೂ ಡಾ. ರಾಜಾ ವಿಜಯ್ ಕುಮಾರ್ ತಲಾ ಒಂದೊಂದು ಮನೆಯ ಪ್ರಾಯೋಜಕತ್ವದ ಆಶ್ವಾಸನೆ ನೀಡಿದರು.
ಫಲಾನುಭವಿ ವಿದ್ಯಾರ್ಥಿ ಶ್ರೀನಿಧಿ ಮಾತನಾಡಿ ಕಷ್ಟದ ಸಂದರ್ಭದಲ್ಲಿ ನನಗೆ ಮನೆ ನಿರ್ಮಿಸಿಕೊಟ್ಟು ನೆರವಾದ ವಿದ್ಯಾಪೋಷಕ್ ಸಂಸ್ಥೆಗೆ ಹಾಗೂ ನನ್ನ ದಾನಿಗಳಿಗೆ ಚಿರಋಣಿಯಾಗಿದ್ದೇನೆ. ಮುಂದೆ ಉದ್ಯೋಗ ದೊರೆತಬಳಿಕ ನನ್ನಂತೆ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗುತ್ತೇನೆ ಎಂದು ಧನ್ಯತೆಯ ಮಾತುಗಳನ್ನಾಡಿದಳು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ವಿ ಭಟ್, ವಿ.ಜಿ ಶೆಟ್ಟಿ, ಕೆ. ಮನೋಹರ್, ಪ್ರೊ. ಸದಾಶಿವ ರಾವ್, ಎಚ್.ಎನ್ ಶೃಂಗೇಶ್ವರ ಹಾಗೂ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.
ಇದು ಸಂಸ್ಥೆ ನಿರ್ಮಿಸಿ ಹಸ್ತಾಂತರಿಸುತ್ತಿರುವ 20ನೇ ಮನೆಯಾಗಿದೆ.
ಮೈಸೂರು ಮರ್ಕಂಟೈಲ್ ಕಂ. ಲಿ. ನ ಆಡಳಿತ ನಿರ್ದೇಶಕರಾದ ಶ್ರೀ ಎಚ್. ಎಸ್. ಶೆಟ್ಟಿಯವರು ಕಲಾರಂಗಕ್ಕೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ವೈದ್ಯವಿಜ್ಞಾನಿ ಡಾ! ರಾಜಾ ವಿಜಯ್ ಕುಮಾರ್ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಶಾಲು-ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಇದಕ್ಕೂ ಮೊದಲು ಉಭಯರು ಸಂಸ್ಥೆಯ ಸಾಧನೆಯನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು. ಸಂಸ್ಥೆಯ ವ್ಯಾಪಕವಾದ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿ ಸಾಮಾಜಿಮುಖಿಯಾಗಿ ಮಾಡುತ್ತಿರುವ ಕೆಲಸಗಳನ್ನು ಅಭಿನಂದಿಸಿದರು. ಸಂಸ್ಥೆಯ ಪ್ರಕಟಣೆಯ ಹೊತ್ತಗೆಗಳನ್ನು ನೀಡಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಕೆ. ಗಣೇಶ್ ರಾವ್, ಉದ್ಯಮಿ ಯು. ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಮನೋಹರ ಕೆ., ಕೆ. ಸದಾಶಿವ ರಾವ್, ಎಚ್. ಎನ್. ಶೃಂಗೇಶ್ವರ ಹಾಗೂ ಸಂಸ್ಥೆಯ ಸದಸ್ಯರಾದ ಬಿ.ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಕೆ. ಅಜಿತ್ ಕುಮಾರ್, ಅಶೋಕ್ ಎಮ್. ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಭಕ್ತಿ-ಶ್ರದ್ಧಾ ಪೀಠವಾಗಿರುವ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಪರ್ತಗಾಳಿ ಮಠದ 23ನೇ ಯತಿವರ್ಯರಾದ ಶ್ರೀ ವಿದ್ಯಾಧಿರಾಜತೀರ್ಥ ವಡೇರ ಸ್ವಾಮೀಜಿಯವರು ಹರಿಪಾದ ಸೇರಿದ ಬಗ್ಗೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದರಿಂದ ಸಮಾಜವು ಓರ್ವ ಶ್ರೇಷ್ಠ ದಾರ್ಶನಿಕರನ್ನು ಕಳೆದುಕೊಂಡಂತಾಗಿದೆ. ಭಗವಂತನು ಸ್ವಾಮೀಜಿಯವರ ಶಿಷ್ಯ ವರ್ಗ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.