
ಉಡುಪಿ: ರಾಜ್ಯದಲ್ಲಿ ಸರಕಾರ ಸರಕಾರ ಅಸ್ಥಿತ್ವದಲ್ಲಿ ಇದೆಯೋ ಅಥವಾ ಸತ್ತು ಹೋಗಿದೆಯೋ ಎನ್ನುವ ಅನುಮಾನ ರಾಜ್ಯದ ಜನರನ್ನು ಕಾಡುತ್ತಿದೆ. ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಈ ಮಧ್ಯೆ ಕಳೆದ ನಾಲ್ಕೈದು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿಯ ಮುಷ್ಕರದಿಂದಾಗಿ ಗ್ರಾಮೀಣ ಪ್ರದೇಶದ ಜನ ದಿನ ನಿತ್ಯದ ಕೆಲಸಗಳಿಗೆ ಪಂಚಾಯತ್ ಗೆ ಹೋಗಿ ಅಲೆದಾಡಿ ಸರಕಾರಕ್ಕೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ. ಅದಲ್ಲದೆ ಇದೇ ತಿಂಗಳ ನಾಲ್ಕನೇ ತಾರೀಕಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗಲಿದೆ. ಏಕ ಕಾಲದಲ್ಲಿ ಇವರಿಬ್ಬರ ಮುಷ್ಕರ ನಡೆದರೆ ಆಡಳಿತ ಯಂತ್ರ ಸಂಪೂರ್ಣ ಕುಸಿದಂತಾಗುತ್ತದೆ. ಹೀಗಾದರೆ ಜನರೇ ದಂಗೆ ಎದ್ದು ಪಂಚಾಯತ್ ಎದುರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದೀತು. ಈಗಾಗಲೇ ಈ ಸರಕಾರದಿಂದಾಗಿ ಗ್ರಾಮೀಣ ಪ್ರದೇಶದ ಜನರ ಜೀವನ ಹದಗಟ್ಟು ಹೋಗಿದೆ. ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದಾರೆ. ವಿದ್ಯುತ್ ಫ್ರೀ ಎನ್ನುವ ಕಾಲದಿಂದ ಇಂದು ಮತ್ತೆ ಅಧಿಕ ಬಿಲ್ ಕಟ್ಟುವ ಕಾಲಕ್ಕೆ ಬಂದಾಗಿದೆ. ಗ್ರಾಮೀಣ ರೈತಾಪಿ ವರ್ಗದ ಜನರ ಹಾಲಿನ ಸಬ್ಸಿಡಿ ಕೊಡದೆ ಅದೆಷ್ಟು ತಿಂಗಳುಗಳಾದವೋ. ಈಚೆ ಪ್ಯಾಕೇಟ್ ಹಾಲಿನ ದರ ಮಾತ್ರ ನಿರಂತರ ಹೆಚ್ಚುತ್ತಿದೆ. ಗ್ರಹಲಕ್ಷ್ಮಿಗೆ ಗರಬಡಿದಿದೆ. ನಿರುದ್ಯೋಗ ಭತ್ಯೆಗೆ ಗ್ರಹಣ ಹಿಡಿದಿದೆ. ಯಾವುದೇ ಸಬ್ಸಿಡಿಗಳು ಬರುತ್ತಿಲ್ಲ. ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನವಿಲ್ಲ. ಈ ಮಧ್ಯೆ ಬಡವರ ಬಿಪಿಎಲ್ ಪಡಿತರ ಚೀಟಿ ರದ್ಧತಿ, ಇಷ್ಟೆಲ್ಲ ಆದರೂ ರಾಜ್ಯ ಸರಕಾರ ದೊಂಬರಾಟ ಆಡುತ್ತಾ ಕಾಲಹರಣ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಯಾವುದೇ ಒಬ್ಬ ಸಚಿವರೂ ಸಮಯ ಕೊಡುತ್ತಿಲ್ಲ. ಕೂಡಲೇ ಸರಕಾರ ಮುಷ್ಕರ ನಡೆಸುವ ಅಧಿಕಾರಿಗಳೊಂದಿಗೆ ಮಾತನಾಡಿ ಅವರ ಪ್ರಾಮಾಣಿಕ ಬೇಡಿಕೆಗಳಿದ್ದರೆ ಅದನ್ನು ಪೂರೈಸಿ ಆಡಳಿತ ಯಂತ್ರ ಸಾಂಗವಾಗಿ ನಡೆಸುವಂತಾಗಬೇಕು. ಪಿಡಿಒ ಗಳೂ ಮುಷ್ಕರ ನಡೆಸುವ ಮೊದಲು ಸರಕಾರ ಎಚ್ಚೆತ್ತುಕೊಂಡರೆ ಅವರಿಗೇ ಒಳಿತು. ಇಲ್ಲದಿದ್ದರೆ ಜನ ಖಂಡಿತವಾಗಿಯೂ ಪಂಚಾಯತ್ ಮುಂದೆ ತಮ್ಮ ಕೆಲಸಗಳಿಗಾಗಿ ಪ್ರತಿಭಟನೆ ಮಾಡುವ ಅನಿವಾರ್ಯ ಬಂದೀತು. ಆಡಳಿತ ಮಾಡಲು ಬರದಿದ್ದರೆ ಅಧಿಕಾರ ಬಿಟ್ಟು ತೊಲಗಿ ಜನಸಾಮಾನ್ಯರಿಗೆ ತೊಂದರೆ ನೀಡಬೇಡಿ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಚರೂ ಆದ ಶ್ರೀಕಾಂತ ನಾಯಕ್ ಹೇಳಿಕೆ ನೀಡಿರುವರು.