ಕೋವಿಡ್ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಪಂದನೆ ಅಭಿನಂದನೀಯ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ರಾಜ್ಯದಾದ್ಯಂತ ಕೋವಿಡ್-19 2ನೇ ಅಲೆಯ ಸಂಕಷ್ಟಕ್ಕೆ ಒಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು ಹಾಗೂ ಹಲವು ವೃತ್ತಿ ನಿರತ ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದಿಂದ ರೂ.1,250 ಕೋಟಿಗೂ ಹೆಚ್ಚಿನ ಮೌಲ್ಯದ ಆರ್ಥಿಕ ಪರಿಹಾರ ಘೋಷಣೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದ್ದಾರೆ.

ಕೋವಿಡ್ ಸಂಕಷ್ಟದ ನಡುವೆ ರಾಜ್ಯ ಸರಕಾರದ ಈ ಆರ್ಥಿಕ ನೆರವಿನ ಪ್ಯಾಕೇಜ್‍ನಿಂದ ರೈತರು ಮತ್ತು ಅಸಂಘಟಿತ ವಲಯಗಳ ಶ್ರಮಿಕರಿಗೆ ಪ್ರಯೋಜನವಾಗಲಿದೆ. ಇದರ ಜೊತೆಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ದಾನ್ಯ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಕಂತಿನ ಮೊತ್ತ ಜಮಾ ಇತ್ಯಾದಿ ಕ್ರಮಗಳು ಜನತೆಯಲ್ಲಿ ಭರವಸೆ ಮೂಡಿಸಿವೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್-19 2ನೇ ಅಲೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ನಿರತವಾಗಿದೆ. ಕೋವಿಡ್-19 ಲಸಿಕೆಯ ವ್ಯವಸ್ಥಿತ ಪೂರೈಕೆಗೆ ಕ್ರಮ, ಆಕ್ಸಿಜನ್ ಮತ್ತು ವೆಂಟಿಲೇಟರ್, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹೆಚ್ಚಳ, ರೆಮ್ಡಿಸಿವಿರ್ ಇಂಜೆಕ್ಷನ್‍ಗಳ ಫೂರೈಕೆ ಇತ್ಯಾದಿ ತುರ್ತು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದು ಜನತೆ ಪರಿಸ್ಥಿತಿಯ ನೈಜತೆಯನ್ನು ಅರಿತುಕೊಂಡು ಆಡಳಿತ ವ್ಯವಸ್ಥೆಯ ಜೊತೆ ಕೈಜೋಡಿಸುವ ಅಗತ್ಯತೆ ಇದೆ ಎಂದು ಕುಯಿಲಾಡಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಸೂಚನೆಯಂತೆ ಉಡುಪಿ ಜಿಲ್ಲಾ ಬಿಜೆಪಿ ‘ಸೇವಾ ಹೀ ಸಂಘಟನ್’ ತತ್ವದಡಿಯಲ್ಲಿ ಜಿಲ್ಲಾ ಕೇಂದ್ರ ಮತ್ತು ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾಪು, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಮಂಡಲಗಳ ವ್ಯಾಪ್ತಿಯಲ್ಲಿ ತೆರೆದಿರುವ ಕೋವಿಡ್-19 2ನೇ ಅಲೆಯ ‘ಸಹಾಯವಾಣಿ’ ಯಶಸ್ವೀ ನಿರ್ವಹಣೆಯೊಂದಿಗೆ ಸಾರ್ಥಕ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ.

ಕೋವಿಡ್-19 ಸಹಾಯವಾಣಿಯ ಮೂಲಕ ಕೋವಿಡ್ ಲಸಿಕೆ ವಿತರಣಾ ಮಾಹಿತಿ, ಆಸ್ಪತ್ರೆ ಮತ್ತು ವೆಂಟಿಲೇಟರ್, ಅಂಬುಲೆನ್ಸ್ ಮತ್ತು ಬೆಡ್, ಐಸೋಲೇಶನ್ ಕೇಂದ್ರ, ಆಯುಷ್ಮಾನ್ ಭಾರತ್ ಯೋಜನೆ, ಆಹಾರ ಮತ್ತು ಔಷಧಿ ಪೂರೈಕೆ, ಕೋವಿಡ್ ನಿಬಂಧನೆಗಳು, ರಕ್ತದಾನ, ಅಂತ್ಯ ಸಂಸಾರ ಮುಂತಾದ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಜಿಲ್ಲೆಯಾದ್ಯಂತ ಒದಗಿಸಲಾಗುತ್ತಿದೆ. ಸಕಾಲಿಕ ವರ್ಚುವಲ್ ಸಭೆಗಳ ಮೂಲಕ ಎಲ್ಲಾ ಮಂಡಲಗಳ ಸಹಾಯವಾಣಿಯ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ವೃಥಾ ಅಪಪ್ರಚಾರದಲ್ಲಿ ಮುಳುಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

Leave a comment

Design a site like this with WordPress.com
Get started