ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ನಿರ್ಣಯ ಮಂಡನೆ: ಕುಯಿಲಾಡಿ

ಉಡುಪಿ: ದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅನಪೇಕ್ಷಿತ ಘಟನೆಗಳ ಈ ಪರಿಪಕ್ವ ಕಾಲದಲ್ಲಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಮಾ.13ರಂದು ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಜಿಲ್ಲಾ ಪ್ರಶಿಕ್ಷಣ ವರ್ಗದ ಸಮಾರೋಪ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ವಿಸ್ತಾರಕ ಯೋಜನೆಯಡಿ ಈಗಾಗಲೇ ವಿಸ್ತಾರಕರಾಗಿ ನಿಯೋಜನೆಗೊಂಡಿರುವ ಪಕ್ಷದ ಪದಾಧಿಕಾರಿಗಳು ನಿಗದಿತ ಶಕ್ತಿಕೇಂದ್ರಗಳ ವ್ಯಾಪ್ತಿಯಲ್ಲಿ ಬೂತ್ ಸಶಕ್ತೀಕರಣದಂತಹ ಜವಾಬ್ದಾರಿಯನ್ನು ನಿರ್ವಹಿಸುವುದು, ಮಹಾ ಶಕ್ತಿಕೇಂದ್ರಗಳ ಪ್ರಭಾರಿಗಳು ತಮ್ಮ ಸಭೆಗಳನ್ನು ನಡೆಸುವುದು, ಸ್ಥಾನೀಯ ಮಟ್ಟದಲ್ಲಿ ಫಲಾನುಭವಿಗಳ ಸಭೆಗಳನ್ನು ಆಯೋಜಿಸುವುದು ಇವೇ ಮುಂತಾದ ಕಾರ್ಯ ಚಟುವಟಿಕೆಗಳ ಮೂಲಕ ಮುಂಬರಲಿರುವ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸರ್ವ ಸನ್ನದ್ಧರಾಗುವಂತೆ ಪಕ್ಷ ಸಂಘಟನೆಗೆ ವೇಗವನ್ನು ನೀಡಬೇಕು ಎಂದು ಕುಯಿಲಾಡಿ ತಿಳಿಸಿದರು.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯ ಮತ್ತು ಯುದ್ಧ ಪೀಡಿತ ರಾಷ್ಟ್ರ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿರುವ ಕೇಂದ್ರ ಸರಕಾರವನ್ನು ಅಭಿನಂದಿಸುವ ನಿರ್ಣಯವನ್ನು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪಕ್ಷದ ಮುಂದಿನ ಚಟುವಟಿಕೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಜಿಲ್ಲಾ ಪ್ರಶಿಕ್ಷಣ ವರ್ಗದ ಶಿಬಿರಾರ್ಥಿಗಳು ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಜಿಲ್ಲಾ ಪ್ರಶಿಕ್ಷಣ ವರ್ಗದ ಯಶಸ್ವೀ ಆಯೋಜನೆಗೆ ಕೈಜೋಡಿಸಿದ ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಮಾರ್ಗದರ್ಶನದ ಬಿಜೆಪಿ ಕುಂದಾಪುರ ಮಂಡಲಾಧ್ಯಕ್ಷ ಶಂಕರ ಅಂಕದಕಟ್ಟೆ ನೇತೃತ್ವದ ಪ್ರಭಂಧಕರ ತಂಡ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ಪದಾಧಿಕಾರಿಗಳ ತಂಡವನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಘುವೀರ್ ಶೆಣೈ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಜಿಲ್ಲಾ ಪ್ರಶಿಕ್ಷಣ ವರ್ಗದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಕ್ಷದ ವಿಶಿಷ್ಠ ಕಾರ್ಯಪದ್ಧತಿ, ಕಾರ್ಯಕರ್ತರ ಶ್ರಮ ಬಿಜೆಪಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವನ್ನಾಗಿಸಿದೆ : ಕುಯಿಲಾಡಿ ಸುರೇಶ್ ನಾಯಕ್

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನೆ



ಉಡುಪಿ: ಪಕ್ಷದ ವಿಚಾರಧಾರೆಗಳನ್ನು ನೆನಪಿಸಿಕೊಳ್ಳುವ ಜೊತೆಗೆ ಹೊಸ ಆಯಾಮಗಳ ಬಗ್ಗೆ ಪಡೆಯುವ ಶಿಕ್ಷಣವೇ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗದ ಪ್ರಮುಖ ಉದ್ದೇಶವಾಗಿದೆ. ಪಕ್ಷದ ವಿಶಿಷ್ಟ ಕಾರ್ಯ ಪದ್ಧತಿ, ಕಾರ್ಯಕರ್ತರ ಶ್ರಮ ಬಿಜೆಪಿಯನ್ನು ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವನ್ನಾಗಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ನೇತೃತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ಮಾ.11ರಿಂದ 13ರ ವರೆಗೆ 15 ಅವಧಿಯಲ್ಲಿ ನಡೆಯಲಿರುವ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಜನಸಂಘ ಯಾಕಾಗಿ ಹುಟ್ಟಿಕೊಂಡಿತು. ಅಂದಿನಿಂದ ಇಂದಿನವರೆಗೆ, ಇತ್ತೀಚಿಗಿನ ಪಂಚರಾಜ್ಯ ಚುನಾವಣೆಯ ಉತ್ತಮ ಫಲಿತಾಂಶದ ವರೆಗೆ ಬಿಜೆಪಿ ಯಾವ ರೀತಿಯಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ಬೆಳೆದಿದೆ, ದೇಶದ ರಕ್ಷಣಾ ಸಾಮರ್ಥ್ಯ, ಆಂತರಿಕ ಭದ್ರತೆ ಸಹಿತ ಹತ್ತು ಹಲವು ವಿಚಾರಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸುವ ಮೂಲಕ ಕಾರ್ಯಕರ್ತರಿಗೆ ಹೆಚ್ಚಿನ ಹುರುಪು ತಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜನಪರ ಆಡಳಿತ, ಅಭಿವೃದ್ಧಿ ಹಾಗೂ ಹಿಂದುತ್ವದ ಪರ ಜನತೆ ಕೈಜೋಡಿಸಿದ್ದಾರೆ. ಪಂಚರಾಜ್ಯ ಚುನಾವಣೆಯ ಭರ್ಜರಿ ಗೆಲುವು ಕರ್ನಾಟಕ ರಾಜ್ಯದ ಮುಂದಿನ ಚುನಾವಣೆಯಲ್ಲಿಯೂ ಮರುಕಳಿಸಲು ಕಾರ್ಯಕರ್ತರು ಕಾರಣರಾಗಬೇಕು ಎಂದರು.

ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರು ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಏಕಾತ್ಮ ಮಾನವ ದರ್ಶನ ವಿಚಾರದಲ್ಲಿ ಸವಿಸ್ತಾರ ಮಾಹಿತಿ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ಡಾ! ಮಂಜುಳಾ ರಾವ್, ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಘುವೀರ್ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ಸಂಚಾಲಕರು, ಸಹ ಸಂಚಾಲಕರು, ಉಡುಪಿ ನಗರಸಭಾ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಮನವಿ

ಉಡುಪಿ: ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಉಡುಪಿ ಜಿಲ್ಲೆಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಮಾನ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಮಾ.9ರಂದು ಬಿಜೆಪಿ ಕರ್ನಾಟಕ ಕಛೇರಿಯಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಕಾಶನ ಪ್ರಕೋಷ್ಠದ ಸಹ ಸಂಚಾಲಕ ಅಜಿತ್ ಶೆಟ್ಟಿ ಹೆರಂಜೆ ಮತ್ತು ಉಡುಪಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಗಿರೀಶ್ ಎಮ್. ಅಂಚನ್ ಉಪಸ್ಥಿತರಿದ್ದರು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ದೇಶವಾಸಿಗಳ ನಿರೀಕ್ಷೆಯಂತೆಯೇ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ದಾಖಲಿಸಿದೆ. ಈ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎನಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಮಾ.10ರಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಪಂಚರಾಜ್ಯ ಚುನಾವಣಾ ಗೆಲುವಿನ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಚುನಾವಣೆಯಲ್ಲಿ ಜನತೆ ವಿರೋಧ ಪಕ್ಷಗಳ ಜಾತಿ ರಾಜಕಾರಣ ಮತ್ತು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ, ಅಭಿವೃದ್ಧಿ ಮತ್ತು ಹಿಂದುತ್ವದ ಪರ ಜನಾದೇಶವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಳೆದ 7 ವರ್ಷಗಳ ಅಭಿವೃದ್ಧಿ ಪರ ಆಡಳಿತ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ರವರ ಜನಪರ ಆಡಳಿತ ವೈಖರಿಯನ್ನು ಮೆಚ್ಚಿ ಜನತೆ ಬಿಜೆಪಿಗೆ ಆಶೀರ್ವದಿಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸಲಿದ್ದು, ಮಗದೊಮ್ಮೆ ದೇಶಾದ್ಯಂತ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಲಿದೆ ಎಂದರು.

ಇತ್ತೀಚೆಗೆ ಯುದ್ಧ ಪೀಡಿತ ದೇಶ ಉಕ್ರೇನ್ ನಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಹಾಗೂ ಸಂಬಂಧಪಟ್ಟ ದೇಶಗಳು ಸಕಾರಾತ್ಮಕವಾಗಿ ಸ್ಪಂದಿಸಿದ ರೀತಿ ವಿಶ್ವ ಮಟ್ಟದಲ್ಲಿ ಭಾರತ ಮತ್ತು ಪ್ರಧಾನಿಯ ವಿಶ್ವ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಯಶಸ್ವೀ ಆಡಳಿತವೂ ಚುನಾವಣಾ ಫಲಿತಾಂಶಕ್ಕೆ ಪೂರಕವಾಗಿದೆ. ಪಂಚರಾಜ್ಯ ಚುನಾವಣಾ ಫಲಿತಾಂಶವು ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮಗದೊಮ್ಮೆ ಕರ್ನಾಟಕದಲ್ಲಿ ಅಭಿವೃದ್ಧಿ ಪರ ಸರಕಾರವನ್ನು ರಚಿಸಲಿದೆ ಎಂದು ಕುಯಿಲಾಡಿ ಹೇಳಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರು ಹಾಗೂ ಜಿಲ್ಲಾ ಮೋರ್ಚಾ ಮಂಡಲ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾ.10-11: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವ

ಉಡುಪಿ: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 14ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವವು ಮಾ.10 ಮತ್ತು 11ರಂದು ನಡೆಯಲಿದೆ.

ಮಾ.10ರಂದು ಬೆಳಿಗ್ಗೆ 10.00ಕ್ಕೆ ಹಸಿರುವಾಣಿ ಗರೋಡಿ ಪ್ರವೇಶ ಹಾಗೂ ರಾತ್ರಿ 8.00ಕ್ಕೆ ಅಗೇಲ್ ಸೇವೆ ನಡೆಯಲಿದೆ. ಮಾ.11ರಂದು ಬೆಳಿಗ್ಗೆ 6.00ಕ್ಕೆ ಶ್ರೀ ಬೈದೇರುಗಳ ಮತ್ತು ಪರಿವಾರ ದೈವಗಳ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 6.15ಕ್ಕೆ ಶ್ರೀ ಬೈದೇರುಗಳ ನೇಮೋತ್ಸವವು ಜರಗಲಿದ್ದು, ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 11.30ಕ್ಕೆ ಶ್ರೀ ಬೈದೇರುಗಳ ದರುಶನ ಸೇವೆ ನಡೆಯಲಿದೆ ಎಂದು ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಮಹಿಳಾ ಆರೋಗ್ಯ ತಪಾಸಣಾ ಶಿಬಿರ, ಸಾಧಕಿಯರಿಗೆ ಸನ್ಮಾನ

ಉಡುಪಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹಯೋಗದೊಂದಿಗೆ ನುರಿತ ಸ್ತ್ರೀ ರೋಗ ತಜ್ಞ ವೈದ್ಯರಿಂದ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರವು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾ.8ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.

ನವಮಾಸ ವುಮನ್ಸ್ ಸ್ಪೆಷಾಲಿಟಿ ಕ್ಲಿನಿಕ್ ಕೋಟೇಶ್ವರ ಇದರ ವೈದ್ಯಾಧಿಕಾರಿ ಹಾಗೂ ಸ್ತ್ರೀರೋಗ ತಜ್ಞೆ ಡಾ! ಪ್ರಿಯಾಂಕ ಜೋಗಿ, ಸುನಾಗ್ ಹಾಸ್ಪಿಟಲ್ ಉಡುಪಿ ಇದರ ವೈದ್ಯಾಧಿಕಾರಿ ಹಾಗೂ ಅರವಳಿಕೆ ತಜ್ಞೆ ಡಾ! ವೀಣಾ ನರೇಂದ್ರ ಮತ್ತು ಶಿಲ್ಪಾ ರಘುಪತಿ ಭಟ್ ರವರು ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ವೈದ್ಯಾಧಿಕಾರಿಗಳು ಮಹಿಳೆಯರ ಆರೋಗ್ಯ ಸಂರಕ್ಷಣೆ ಮತ್ತು ಆರೋಗ್ಯ ತಪಾಸಣೆಯ ಔಚಿತ್ಯದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯವಂತ ಮಹಿಳೆಯಿಂದ ಸದೃಢ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಯಾವುದೇ ಜವಾಬ್ದಾರಿಯನ್ನು ಮಹಿಳೆ ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಾಳೆ ಎಂಬುದಕ್ಕೆ ಜಿಲ್ಲಾ ಮಹಿಳಾ ಮೋರ್ಚಾದ ಅನುಕರಣೀಯ ಮಾದರಿ ಕಾರ್ಯ ಚಟುವಟಿಕೆಗಳೇ ಸಾಕ್ಷಿ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ವಿಶ್ವದಾದ್ಯಂತ ಮಹಿಳೆಯರು ಸಮಾಜದ ವಿವಿಧ ರಂಗಗಳ ಮುಂಚೂಣಿಯಲ್ಲಿ ಯಶಸ್ವೀ ನಾಯಕಿಯರಾಗಿ ವಿಶಿಷ್ಠ ಸಾಧನೆಗೈಯುತ್ತಿದ್ದಾರೆ. ಸಾಮಾಜಿಕ ಹಾಗೂ ಕೌಟುಂಬಿಕವಾಗಿಯೂ ಸಹನೆ ಮತ್ತು ಸಹಬಾಳ್ವೆಯ ಯಶಸ್ವೀ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಡಾ! ವಿಜಯೇಂದ್ರ ರಾವ್ ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದರು.

ವಿವಿಧ ರಂಗಗಳಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾ ಸರಸ್ವತಿ ಉಡುಪಿ, ವೈದ್ಯಕೀಯ ಸಹಾಯಕಿಯಾಗಿ ವಿಶಿಷ್ಟ ಸಾಧನೆಗೈದಿರುವ ಉಜ್ವಲ ಕಿರಣ್ ಉಡುಪಿ ಮತ್ತು ಅಂತಾರಾಷ್ಟ್ರೀಯ ಈಜು ಪಟು ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿದ್ಯಾ ಪೈ ಕಾರ್ಕಳ ಇವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ! ವಿದ್ಯಾಧರ್ ಶೆಟ್ಟಿ, ಡಾ! ಶಿಲ್ಪಾ ಕುಂದಾಪುರ, ಜಿಲ್ಲಾ ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಮಧುಸೂದನ್ ಹೇರೂರು, ಮಹಿಳಾ ಮೋರ್ಚಾ ಕಾಪು ಮಂಡಲ ಅಧ್ಯಕ್ಷೆ ಸುಮಾ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಉಡುಪಿ ನಗರ ಕಾರ್ಯದರ್ಶಿ ದಯಾಶಿನಿ, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಸುಜಾಲ ಸತೀಶ್, ಸುಧಾ ಪೈ ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗಳು, ಮಹಿಳಾ ಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು, ಉಡುಪಿ ನಗರಸಭಾ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಸುಮಾರು 150ಕ್ಕೂ ಮಿಕ್ಕಿ ಮಹಿಳಾ ಶಿಬಿರಾರ್ಥಿಗಳು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೇಸರಿ ಯುವರಾಜ್ ವಂದಿಸಿದರು.

ಉಕ್ರೇನ್ ನಿಂದ ಭಾರತೀಯರ ರಕ್ಷಣೆಗೆ ಮೋದಿ ಸರಕಾರದ ದಿಟ್ಟ ಕ್ರಮ ಶ್ಲಾಘನೀಯ: ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ: ಯುದ್ದ ಪೀಡಿತ ದೇಶ ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳ ಸಹಿತ ಭಾರತೀಯ ನಾಗರಿಕರರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ದಿಟ್ಟ ಕ್ರಮ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ವಿಶ್ವದ ಮಹಾನ್ ರಾಷ್ಟ್ರಗಳು ಉಕ್ರೇನ್ ನಲ್ಲಿ ಸಿಲುಕಿರುವ ತಮ್ಮ ನಾಗರಿಕರನ್ನು ರಕ್ಷಿಸಲಾಗದೇ ಪರದಾಡುತ್ತಿದ್ದ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರುವ ನಿಟ್ಟಿನಲ್ಲಿ ರಷ್ಯಾ ಜೊತೆ ನಡೆಸಿರುವ ಮಾತುಕತೆಯ ಫಲವಾಗಿ ಕೆಲವು ಗಂಟೆಗಳ ಕಾಲ ಯುದ್ಧವೇ ಸ್ಥಗಿತಗೊಂಡ ಪ್ರಕ್ರಿಯೆ ಹಾಗೂ ಭಾರತೀಯ ರಾಯಭಾರಿ ಕಛೇರಿಯ ತ್ವರಿತ ಸೇವೆಯ ಜೊತೆಗೆ ನಾಲ್ಕು ಪ್ರಭಾವಿ ಕೇಂದ್ರ ಸಚಿವರನ್ನು ನಿಯೋಜಿಸಿ, ಸಶಕ್ತ ತಂಡದೊಂದಿಗೆ ಭಾರತೀಯ ವಿದ್ಯಾರ್ಥಿಗಳ ಹಾಗೂ ನಾಗರಿಕರ ರಕ್ಷಣಾ ಕಾರ್ಯದಲ್ಲಿ ಸಮರೋಪಾದಿಯಲ್ಲಿ ತೊಡಗಿರುವುದು ದೇಶವಾಸಿಗಳಿಗೆ ಹೆಮ್ಮೆ ತಂದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಉಕ್ರೇನ್ ನ ನೆರೆಹೊರೆಯ ದೇಶಗಳಿಂದ ಇದುವರೆಗೆ ಸುಮಾರು 15,000 ಮಂದಿ ಭಾರತೀಯರನ್ನು ಅಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಜ್ವಲಂತ ನಿದರ್ಶನವಾಗಿದೆ. ಯುದ್ಧ ಪೀಡಿತ ದೇಶ ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮುಂದಕ್ಕೆ ಭಾರತದಲ್ಲೇ ಇಂಟರ್ನ್ಶಿಪ್ ಮಾಡಬಹುದು ಎಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿದೆ.

ಈ ನಡುವೆ ತಮ್ಮ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ವಯಂ ನಿರ್ಧಾರವನ್ನು ಕೈಗೊಂಡು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿ, ಯುದ್ಧದ ಸಂದರ್ಭದಲ್ಲಿ ಸಿಲುಕಿಕೊಂಡು ಸರಕಾರದ ಸಹಾಯದಿಂದ ಭಾರತಕ್ಕೆ ಮರಳಿರುವ ಬೆರಳೆಣಿಕೆಯ ಕೆಲವು ವಿದ್ಯಾರ್ಥಿಗಳು ದೇಶದ ವಿರುದ್ಧವೇ ಅವಹೇಳನಕಾರಿ ಹೇಳಿಕೆ ನೀಡಿರುವುದು ಅರ್ಥಹೀನವಾಗಿದೆ. ಇದರ ಜೊತೆಗೆ ಆಡಳಿತ ಪಕ್ಷವನ್ನು ದೂಷಿಸಲೆಂದೇ ಕಾದು ಕುಳಿತಿರುವ ವಿರೋಧ ಪಕ್ಷಗಳ ನಾಯಕರ ಸಂಕುಚಿತ ಮನಸ್ಥಿತಿಯೂ ಕೈಲಾಗದವನು ಮೈ ಪರಚಿಕೊಂಡಂತೆ ಎಂಬಂತಾಗಿದೆ.

ಉಕ್ರೇನ್ ಯುದ್ಧ ಪೀಡಿತ ಪ್ರದೇಶದಿಂದ ವಿವಿಧ ಮಾರ್ಗಗಳಲ್ಲಿ ನಿಗದಿತ ತಾಣವನ್ನು ತಲುಪಿರುವ ಭಾರತೀಯ ವಿಧ್ಯಾರ್ಥಿಗಳು ಮತ್ತು ನಾಗರಿಕರನ್ನು ಭಾರತಕ್ಕೆ ಕರೆ ತರುತ್ತಿರುವ ಕೇಂದ್ರ ಸರಕಾರದ ಪ್ರಕ್ರಿಯೆಗೆ ಸ್ವತಃ ಉಚ್ಛ ನ್ಯಾಯಾಲಯವೇ ಪ್ರಶಂಸೆ ವ್ಯಕ್ತಪಡಿಸಿದೆ. ಭಾರತದ ರಾಷ್ಟ್ರ ಧ್ವಜದ ಅಸರೆಯಿಂದ ಸಾಗಿಬಂದು ಸರಕಾರದ ಸಹಾಯದಿಂದ ಸುರಕ್ಷಿತವಾಗಿ ತಾಯ್ನಾಡನ್ನು ತಲುಪಿರುವ ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಛೇರಿ, ವ್ಯವಸ್ಥೆಗಳು ಮತ್ತು ಭಾರತದ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದು ಶ್ಲಾಘನೀಯ. ಉಕ್ರೇನ್ ನಲ್ಲಿ ಯುದ್ಧದ ವಿಷಮ ಪರಿಸ್ಥಿತಿಯ ನಡುವೆಯೂ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತರುವಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಇಡೀ ತಂಡದ ಅವಿರತ ಸೇವೆ ಅಭಿನಂದನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಬಜೆಟ್: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಈ ಬಾರಿಯ ಬಜೆಟ್ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಬಜೆಟ್ ನಲ್ಲಿ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹೊರಿಸದೆ ಇದ್ದುದರಲ್ಲೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ.

ಆಡಳಿತ ಸುಧಾರಣೆಗೆ ಹೆಚ್ಚಿನ ವೆಚ್ಚ, ಕಾಶಿ ಯಾತ್ರೆಗೆ ಸಬ್ಸಿಡಿ, ಪವಿತ್ರ ಯಾತ್ರೆ ಯೋಜನೆ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಯೋಜನೆ, ನೀಟ್ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಲ, ಕರ್ನಾಟಕ ಕಲಾ ಗ್ರಾಮ ಯೋಜನೆ, ನಮ್ಮ ಕ್ಲಿನಿಕ್ ಯೋಜನೆ, ಉಡುಪಿ ಮತ್ತು ದ.ಕ. ಜಿಲ್ಲೆಗೆ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಯೋಜನೆ, ಕಾರ್ಮಿಕ ಕ್ಷೇಮಾಭಿವೃದ್ಧಿ ಯೋಜನೆ, ನೀರಾವರಿಗೆ ಆದ್ಯತೆ, ಕುರಿ ಮತ್ತು ಮೇಕೆಗಳಿಗೆ ಪರಿಹಾರ ಧನ ನೀಡುವ ಅನುಗ್ರಹ ಯೋಜನೆ, ಗೋ ಸಂತತಿಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪುಣ್ಯಕೋಟಿ ದತ್ತು ಯೋಜನೆ ಮುಂತಾದ ಅಭಿವೃದ್ಧಿ ಪರ ಯೋಜನೆಗಳೊಂದಿಗೆ ಜನ ಮಾನಸದಲ್ಲಿ ಭರವಸೆ ಮೂಡಿಸಿರುವ ಪ್ರಗತಿಪರ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವ ಕೋಟ ಅವರಿಂದ ಅಹವಾಲು ಸ್ವೀಕಾರ

ಉಡುಪಿ: ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಫೆ.2ರಂದು ಉಡುಪಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಸಚಿವ ಕೋಟ ಭಾಗಿ



ಉಡುಪಿ: ಮಾ.2ರಂದು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿ ಸದೃಢ ಪಕ್ಷ ಸಂಘಟನೆ ಮತ್ತು ಮುಂಬರಲಿರುವ ಚುನಾವಣಾ ದೃಷ್ಠಿಯಿಂದ ಯುವ ಮೋರ್ಚಾ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಯುವ ಕಾರ್ಯಕರ್ತರು ಬದ್ಧತೆಯಿಂದ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ವಿಚಾರ ವಿನಿಮಯ ನಡೆಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಶ್ವೇತ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಕುಂದಾಪುರ ಹಾಗೂ ಯುವ ಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Design a site like this with WordPress.com
Get started