ಉಡುಪಿ: ಜಿಲ್ಲಾ ಬಿಜೆಪಿ ಕಛೇರಿಗೆ ಎ.4ರಂದು ಭೇಟಿ ನೀಡಿದ ಕರ್ನಾಟಕ ಸರಕಾರದ ಮಾನ್ಯ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಡಾ! ಮುರುಗೇಶ್ ನಿರಾಣಿ ಅವರನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಾಗೂ ಅಂಬೇಡ್ಕರ್ ಜಯಂತಿ ಯಶಸ್ವಿಗೊಳಿಸಿ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಎ.6ರಂದು ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಪಕ್ಷದ ಧ್ವಜಾರೋಹಣಗೈದು ಬಿಜೆಪಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಬೇಕು ಹಾಗೂ ಎ.14ರಂದು ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಸೇವಾ ಕಾರ್ಯಗಳ ಮೂಲಕ ಯಶಸ್ವಿಗೊಳಿಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ದೇಶನದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆಯಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಎ.6ರಂದು ತಮ್ಮ ಮನೆಯ ಮೇಲೆ ಪಕ್ಷದ ಧ್ವಜಾರೋಹಣವನ್ನು ನೆರವೇರಿಸಿ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು ಹಾಗೂ ಬೆಳಿಗ್ಗೆ 10.00 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಆಲಿಸಬೇಕು. ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಮತ್ತು ಸಂಚಾಲಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಎ.14ರಂದು ಅಂಬೇಡ್ಕರ್ ಜಯಂತಿಯ ಅಂಗವಾಗಿ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ರವರ ವ್ಯಕ್ತಿತ್ವ ಮತ್ತು ಕತೃತ್ವದ ಬಗ್ಗೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿರುವ ಪ್ರಮುಖ ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕೆಲಸ ಕಾರ್ಯಗಳ ಬಗ್ಗೆ ವಿಚಾರ ಗೋಷ್ಠಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಪಕ್ಷದ ವಿಸ್ತಾರಕ ಯೋಜನೆಯಡಿ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆ ವೇಗ ಪಡೆದಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಸಶಕ್ತ ಬೂತ್ ನಿರ್ಮಾಣದ ಗುರಿಯೊಂದಿಗೆ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಕಾರ್ಯಕರ್ತ ಬಂಧುಗಳು ಸರ್ವ ಸನ್ನದ್ಧರಾಗಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ಎಲ್ಲಾ ಚುನಾವಣೆಗಳನ್ನು ಸಂಘಟನಾ ಶಕ್ತಿಯಿಂದ ಎದುರಿಸಿ ದಾಖಲೆಯ ಗೆಲುವು ಸಾಧಿಸಿದೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ನಿರಂತರವಾಗಿದ್ದು ನಿಗದಿತ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಅಗತ್ಯ. ಎಲ್ಲಾ ಬೂತ್ ಗಳಲ್ಲಿಯೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿದಾಗ ಪಕ್ಷದ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಒಂದಾಗಿ ಸಮನ್ವಯತೆಯಿಂದ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ವೇಗ ನೀಡುವ ಜೊತೆಗೆ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಯಾತ್ರೆಯನ್ನು ಮುನ್ನಡೆಸಲು ಸನ್ನದ್ಧರಾಗಬೇಕು ಎಂದರು.
ಪಕ್ಷದ ವಿಸ್ತಾರಕ ಅಭಿಯಾನದ ಮಂಡಲ ಶಹ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಉಡುಪಿ: ರಾಜ್ಯದ 58,000 ಬೂತ್ ಗಳಲ್ಲಿ ನಡೆಯುತ್ತಿರುವ ಬಿಜೆಪಿ ವಿಸ್ತಾರಕ ಅಭಿಯಾನವು ಪಕ್ಷದ ಸಂಘಟನಾತ್ಮಕ ವಿಚಾರದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ. ವಿಸ್ತಾರಕ ಅಭಿಯಾನವು ಸದೃಢ ಪಕ್ಷ ಸಂಘಟನೆಯ ಜೊತೆಗೆ ಸಶಕ್ತ ಬೂತ್ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆ. ವಿಸ್ತಾರಕ ಅಭಿಯಾನದಡಿ ಬೂತ್ ಸಮಿತಿ, ಪಂಚ ರತ್ನ, ಪೇಜ್ ಪ್ರಮುಖ್, ಪೇಜ್ ಸಮಿತಿ, ಫಲಾನುಭವಿಗಳ ವಿವರ ಹಾಗೂ ಇನ್ನಿತರ ನಿಗದಿತ ಮಾಹಿತಿ ಸಂಗ್ರಹದ ಜೊತೆಗೆ ಬೂತ್ ಮಟ್ಟದ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಿದೆ. ಸಮನ್ವಯತೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ವಿಸ್ತಾರಕ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯು ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳುವಂತಾಗಬೇಕು ಎಂದರು.
ಬಿಜೆಪಿ ವಿಶಿಷ್ಟ ಕಾರ್ಯ ಪದ್ಧತಿಯನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ಶೇಕಡಾವಾರು ಮತ ಗಳಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಸರಕಾರದ ಜನಪರ ಆಡಳಿತ, ಅಭಿವೃದ್ಧಿ ಯೋಜನೆಗಳು, ಉತ್ತಮ ವಾತಾವರಣ ಮತ್ತು ವಿರೋಧ ಪಕ್ಷದ ನಾಯಕರ ಹಿಂದೂ ವಿರೋಧಿ ಮನಸ್ಥಿತಿ ಬಿಜೆಪಿ ಗೆಲುವಿಗೆ ಪೂರಕವೆನಿಸಲಿದೆ ಎಂದು ಸುರಾನ ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಉಡುಪಿ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ. ಜಿಲ್ಲೆಯಾದ್ಯಂತ ಅನುಭವಿ ಕಾರ್ಯಕರ್ತರ ತಂಡವಿದೆ. ಈ ನಿಟ್ಟಿನಲ್ಲಿ ಪಕ್ಷದ ವಿಸ್ತಾರಕ ಯೋಜನೆಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಪಕ್ಷದ ಹಿರಿಯರು ಮತ್ತು ಎಲ್ಲಾ ಕಾರ್ಯಕರ್ತರ ಸಂಪೂರ್ಣ ಸಹಕಾರದೊಂದಿಗೆ ಪ್ರತೀ ಬೂತ್ ಗಳಿಂದ ನಿಗದಿತ ಮಾಹಿತಿಗಳನ್ನು ಕ್ರೋಢೀಕರಿಸಿ ಪಕ್ಷ ಸಂಘಟನೆಯಲ್ಲಿ ಜಿಲ್ಲೆಯ ಸ್ಥಾನವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಪ್ರಸ್ತುತ ನಾಡಿನಲ್ಲಿ ಹಿಂದು ಮುಸಲ್ಮಾನ್ ಸಮುದಾಯದ ನಡುವೆ ಉಂಟಾಗಿರುವ ಕಂದಕಕ್ಕೆ ಸಂಬಂಧಿಸಿ ಸಮಸ್ಯೆ ಪರಿಹಾರ ಗೊಳಿಸಬೇಕೆಂದು ಅಪೇಕ್ಷಿಸಿ ತಮ್ಮನ್ನು ಭೇಟಿಯಾದ ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒಳ್ಳೆಯ ತಿಳುವಳಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ .
ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ .ಅದಕ್ಕೆ ಕಾರಣ ಯಾರು ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳಿ . ನಿರಂತರ ಗೋ ಸಾಗಾಟ ಗೋಹತ್ಯೆ ಯಾಕೆ ನಿಂತಿಲ್ಲ ? . ಜೀವನೋಪಾಯಕ್ಕೆ ಗೋವುಗಳನ್ನು ಸಾಕಿಕೊಂಡು ಬದುಕುತ್ತಿರುವವರ ಮನೆಗೆ ನುಗ್ಗಿ ಬೆದರಿಸಿ ಗೋವುಗಳನ್ನು ಹೊತ್ತೊಯ್ತಾ ಇದ್ದೀರಿ . ಅಂಥಹ ಅನೇಕ ಕಾನೂನು ಬಾಹಿರವಾದ ಕೆಲಸಗಳಿಂದ ನೊಂದಿರುವ ಹಿಂದು ಸಾಮಾಜವನ್ನು ಬಿಟ್ಟು ಶಾಂತಿ ಸೌಹಾರ್ದದ ಮಾತುಕತೆ ಅಥವಾ ಪರಿಹಾರ ನನ್ನೊಬ್ಬನಿಂದ ಸಾಧ್ಯವಿಲ್ಲ .
ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ?? ಸಮಾಜದಲ್ಲಿ ಕಾನೂನು ಶಾಂತಿ ನೆಮ್ಮದಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರೀತಿಗಳ ಬಗ್ಗೆ ಆತ್ಮಾವಲೋಕನಮಾಡಿಕೊಂಡು ಬನ್ನಿ ; ಮತ್ತೆ ಮಾತಾಡೋಣ ಎಂದು ಶ್ರೀಗಳು ಮುಸ್ಲಿಂ ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ .
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ವಿಭಾಗದ ಸಭೆಯು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಮಾ.28ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಬಿಜೆಪಿ ರಾಜ್ಯ ಮಾಧ್ಯಮ ಪ್ರಕೋಷ್ಠದ ಸದಸ್ಯ ರಮೇಶ್ ರತನ್ ಪೂಜಾರಿಯವರು ಮಾತನಾಡಿ ಜಿಲ್ಲಾ ಮಾಧ್ಯಮ ವಿಭಾಗ ಮತ್ತು ಜಿಲ್ಲಾ ವಕ್ತಾರರು, ಸಹ ವಕ್ತಾರರ ಜವಾಬ್ದಾರಿ ಹಾಗೂ ಸಮನ್ವಯತೆಯ ಮಹತ್ವವನ್ನು ವಿವರಿಸಿ, ಮಂಡಲ ಮಾಧ್ಯಮ ವಿಭಾಗದ ಪರಿಣಾಮಕಾರಿ ನಿರ್ವಹಣೆಯ ಔಚಿತ್ಯದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಮಹತ್ವಪೂರ್ಣವಾಗಿದೆ. ಪಕ್ಷದ ಮಾಧ್ಯಮ ವಿಭಾಗ ಮತ್ತು ಪಕ್ಷದ ಮುಖವಾಣಿ ವಕ್ತಾರರು ಅತ್ಯಂತ ಕ್ರಿಯಾಶೀಲತೆಯಿಂದ ಸಮಯದ ಇತಿಮಿತಿಯೊಳಗೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ಜಿಲ್ಲಾ ಮಾಧ್ಯಮ ವಿಭಾಗದ ಜೊತೆಗೆ ಮಂಡಲಗಳ ಮಾಧ್ಯಮ ಸಮಿತಿಯು ಸಕ್ರಿಯವಾಗಿ ತೊಡಗಿಸಿಕೊಂಡಾಗ ಪಕ್ಷದ ಮಾಧ್ಯಮ ವಿಭಾಗವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ ಎಂದರು.
ಮಂಡಲಗಳ ಮಾಧ್ಯಮ ಸಮಿತಿಯನ್ನು ಸಕ್ರಿಯಗೊಳಿಸಿ ಶೀಘ್ರದಲ್ಲಿ ಜಿಲ್ಲಾ ಮಾಧ್ಯಮ ವಿಭಾಗದ ಕಾರ್ಯಾಗಾರವನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಂಡಲಗಳ ಮಾಧ್ಯಮ ಸಂಚಾಲಕರು, ಸಹ ಸಂಚಾಲಕರು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಹಾಗೂ ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಇದೀಗ ಉಚ್ಛ ನ್ಯಾಯಾಲಯದ ನ್ಯಾಯಯುತ ತೀರ್ಪನ್ನು ಗೌರವಿಸದೆ ದಿಕ್ಕರಿಸಿರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಸಂವಿಧಾನ ಮತ್ತು ಈ ನೆಲದ ಕಾನೂನಿಗೆ ಗೌರವ ನೀಡದೆ ಕೋರ್ಟ್ ತೀರ್ಪಿನ ವಿರುದ್ಧ ಬಂದ್ ಆಚರಿಸುವುದು ಹಿಜಾಬ್ ವಿವಾದವನ್ನು ಇನ್ನಷ್ಟು ಜೀವಂತವಾಗಿರಿಸುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ನ್ಯಾಯಕ್ಕಾಗಿ ಹೈಕೋರ್ಟಿಗೆ ಮೊರೆ ಹೋದವರೇ ಇದೀಗ ಉಚ್ಛ ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡದೇ ಇರುವುದಾದರೆ ನ್ಯಾಯಾಲಯಕ್ಕೆ ಹೋಗುವ ಔಚಿತ್ಯವಾದರೂ ಏನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ವಿರೋಧಿಸಿ ಬಂದ್ ನಡೆಸಿರುವುದು ಮಾತ್ರವಲ್ಲದೆ, ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಕೆಲವೆಡೆ ಹಿಜಾಬ್ ಧರಿಸಿ ತರಗತಿಗೆ ಹೋಗುವ ಪ್ರಯತ್ನ ನಡೆಸಿರುವುದು ಕಂಡರೆ ಇದರ ಹಿಂದೆ ದೇಶ ವಿರೋಧಿ ಮನಸ್ಥಿತಿಯ ಸಿ.ಎಫ್.ಐ., ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ನಂತಹ ಮೂಲಭೂತವಾದಿ ಸಂಘಟನೆಗಳ ಸಂಚು ಇರುವುದು ಸ್ಪಷ್ಟವಾಗುತ್ತದೆ.
ಶಿಕ್ಷಣ ವಿದ್ಯಾರ್ಥಿ ಜೀವನದ ಬಹಳ ಪ್ರಮುಖ ಅಂಗವಾಗಿದೆ. ಶಿಕ್ಷಣ ಸಂಸ್ಥೆಗಳ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದೇ ಸಮವಸ್ತ್ರವನ್ನು ಪಾಲನೆ ಮಾಡುವ ಬಗ್ಗೆ ಉಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಸಾಮರಸ್ಯತೆಗೆ ಪೂರಕವಾಗಿದ್ದು ವಿದ್ಯಾರ್ಥಿ ಸಮುದಾಯ ಈ ಆದೇಶವನ್ನು ಗೌರವಿಸಿ ವಿದ್ಯಾರ್ಜನೆಗೆ ಅತ್ಯಂತ ಹೆಚ್ಚಿನ ಮಹತ್ವ ನೀಡುವುದು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸಮಾಜದಲ್ಲಿ ನಿರಂತರವಾಗಿ ಶಾಂತಿ ಕದಡುವ ಪ್ರಯತ್ನಗಳು ಕೆಲವು ಮತಾಂಧ ಸಮಾಜ ಘಾತುಕ ಸಂಘಟನೆಗಳಿಂದ ನಡೆಯುತ್ತಿದ್ದು, ಈ ಪ್ರಕ್ರಿಯೆಯಿಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರಾಗುವುದು ಉಚಿತವಲ್ಲ. ಸಿ.ಎಫ್.ಐ., ಪಿ.ಎಫ್.ಐ. ನಂತಹ ದೇಶ ವಿರೋಧಿ ಸಂಘಟನೆಗಳು ನೀಡುವ ಮತಾಂಧತೆಯ ಶಿಕ್ಷಣಕ್ಕೆ ಮಣೆ ಹಾಕದೆ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಪಡೆಯುವುದು ಅತ್ಯವಶ್ಯಕವಾಗಿದೆ. ಅಂತೆಯೇ ಮುಸ್ಲಿಂ ಸಮುದಾಯ ದೇಶದ ಐಕ್ಯತೆಯ ದೃಷ್ಠಿಯಿಂದ ತಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಮರಸ್ಯತೆಗೆ ಒತ್ತು ನೀಡಿ ಸೌಹಾರ್ದಮಯ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಹಿಜಾಬ್ ಗೂ ಶಿಕ್ಷಣಕ್ಕೂ ಹೊಂದಾಣಿಕೆ ಸಲ್ಲದು. ಉಚ್ಚ ನ್ಯಾಯಾಲಯ ಹಿಜಾಬ್ ಪ್ರಕರಣದಲ್ಲಿ ನೀಡಿದ ತೀರ್ಪು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಉತ್ತಮ ಮೌಲ್ಯಾಧಾರಿತ ತೀರ್ಪು ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.
ಶಿಕ್ಷಣವು ವಿದ್ಯಾರ್ಥಿಗಳ ಜೀವನದ ದಾರಿದೀಪ. ತಮ್ಮ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಒಂದು ಸುಗಮ ಮಾರ್ಗ. ಸಂವಿಧಾನಾತ್ಮಕ, ದೇಶದ ರಾಷ್ಟ್ರೀಯತೆ ಮತ್ತು ಏಕತೆಯ ಪ್ರತೀಕವಾಗಿರುವ ಶಿಕ್ಷಣವನ್ನು ವಿದ್ಯಾರ್ಥಿ ಸಮುದಾಯ ಹಾಗೂ ದೇಶವಾಸಿಗಳು ಅತೀ ಧನ್ಯತೆಯಿಂದ ಗೌರವಿಸಬೇಕಾಗಿದೆ.
ಹಿಜಾಬ್ ಪ್ರಕರಣ ಉಡುಪಿಯಲ್ಲಿ ನಡೆದ ವಸ್ತ್ರ ಸಂಹಿತೆಯ ಒಂದು ಸರಳವಾದ ವಿಷಯವಾಗಿತ್ತು. ಆದರೆ ಕಾಣದ ಕೈಗಳಿಂದ ಈ ವಿಚಾರ ಇಡೀ ದೇಶ ಹಾಗೂ ಹೊರ ದೇಶಗಳಲ್ಲಿ ಗೊಂದಲವನ್ನು ಸೃಷ್ಠಿಸಿ, ನ್ಯಾಯಾಲಯದ ಮೆಟ್ಟಲೇರಿ ಇದೀಗ ಉಚ್ಛ ನ್ಯಾಯಾಲಯದ ತೀರ್ಪಿನಿಂದ ಸುಖಾಂತ್ಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಸಮಾನತೆ ಮತ್ತು ಸಮನ್ವಯತೆಯನ್ನು ಸಾಧಿಸುವ ಒಂದು ಸಾಧನವಾಗಿದೆ. ಜೀವನದ ಮೌಲ್ಯಾಧಾರಿತ ಘಟ್ಟಗಳನ್ನು ಹಾದು ಭವಿಷ್ಯದ ಗುರಿಯನ್ನು ತಲುಪುವಲ್ಲಿ ಶಿಕ್ಷಣದ ಪಾತ್ರ ಬಹಳ ಹಿರಿದಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಚ್ಚಾಶಕ್ತಿಯಿಂದ ತೊಡಗಿಸಿಕೊಳ್ಳುವಂತಹ ಸಂದರ್ಭದಲ್ಲಿ ಇಂತಹ ಅನಪೇಕ್ಷಿತ ಘಟನೆಗಳು ಅದಕ್ಕೆ ಅಡ್ಡಿಯಾಗಬಾರದು.
ಹಿಜಾಬ್ ಪ್ರಕರಣದಂತಹ ಘಟನೆಗಳಿಂದ ಯಾವುದೇ ಒಂದು ಧರ್ಮ, ಪಂಥಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ ಅದರಿಂದ ದೇಶದ ಆರೋಗ್ಯಕರ ವಾತಾವರಣಕ್ಕೆ ಧಕ್ಕೆಯುಂಟಾಗುವುದು ಸಹಜ. ಆದುದರಿಂದ ಹಿಜಾಬ್ ಹಾಗೂ ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯ ನೀಡಿರುವ ನ್ಯಾಯಯುತ ತೀರ್ಪನ್ನು ಎಲ್ಲರೂ ಸ್ವಾಗತಿಸಿ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡುವುದು ಇಂದಿನ ಅಗತ್ಯತೆಯಾಗಿದೆ.
ನಡೆದ ಎಲ್ಲಾ ಅನಪೇಕ್ಷಿತ ಘಟನೆಗಳನ್ನು ಮರೆತು, ಯಾವುದೇ ಬಾಹ್ಯ ಸಂಘಟನೆಗಳ ಅಥವಾ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೇ ವಿದ್ಯಾರ್ಥಿಗಳು ಯಥಾವತ್ತಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಉತ್ತಮ ಶಿಕ್ಷಣವನ್ನು ಪಡೆದು ತಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ರಾಜ್ಯಾದ್ಯಂತ ವಿವಾದ ಸೃಷ್ಠಿಸಿದ್ದ ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಸ್ವಾಗತಾರ್ಹ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಸರಕಾರದ ವಸ್ತ್ರ ಸಂಹಿತೆಯ ಆದೇಶವನ್ನು ಎತ್ತಿಹಿಡಿದ ಉಚ್ಛ ನ್ಯಾಯಾಲಯ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆಯ ಪರವಾಗಿ ನೀಡಿರುವ ತೀರ್ಪು ಸಂವಿಧಾನಕ್ಕೆ ದೊರೆತ ಜಯವಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಹಿಜಾಬ್ ಇಸ್ಲಾಂ ಅತ್ಯಗತ್ಯ ಭಾಗವಲ್ಲ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂಬುದಾಗಿ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು ಐತಿಹಾಸಿಕ ತೀರ್ಪು ನೀಡಿ, ಹಿಜಾಬ್ ಧರಿಸಲು ಅನುಮತಿ ಕೋರಿದ್ದಂತಹ ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ.
ಇಂದು ಫೆಬ್ರವರಿ 25ರಿಂದ 11 ದಿನಗಳ ವಾದ-ಪ್ರತಿವಾದ ಆಲಿಸಿದ್ದಂತ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು, ತನ್ನ ತೀರ್ಪನ್ನು ಪ್ರಕಟಿಸಿದೆ. ಸತತ 11 ದಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್, ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠ, ಫೆಬ್ರವರಿ 25ರಂದು ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದ್ದಂತ ತೀರ್ಪನ್ನು, ಇಂದು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂ ಅತ್ಯಗತ್ಯಭಾಗವಲ್ಲ ಎಂಬುದಾಗಿ ಹೇಳುವ ಮೂಲಕ, ಹಿಜಾಬ್ ಕೋರಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಉಡುಪಿ ಕಾಲೇಜಿಗೆ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನ್ಯಾಯವಾದಿ ಮನೋಹರ್ ಎಸ್. ಕಲ್ಮಾಡಿಯವರಿಗೆ ಬಿಜೆಪಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಮಾ.14ರಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ ಹಾಗೂ ಪ್ರಾಧಿಕಾರದ ಸದಸ್ಯರಾದ ಕಿಶೋರ್ ಕುಮಾರ್ ಕರಂಬಳ್ಳಿ, ಸುಮಾ ನಾಯ್ಕ್ , ಮಾಲತಿ ನಾಯಕ್, ಯೋಗೀಶ್ ಚಂದ್ರಾಧರ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಭಾಕರ್ ಪೂಜಾರಿ ಇವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಅರ್. ನಾಯಕ್, ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲ, ಪ್ರಕೋಷ್ಠಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.