ರಾಜ್ಯದ ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ದೋಖಾ: ಛಲವಾದಿ ನಾರಾಯಣಸ್ವಾಮಿ ಟೀಕೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ದಲಿತರಿಗೆ ದೋಖಾ ಮಾಡುವ ಸರಕಾರ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಈ ಕುರಿತು ಪತ್ರಿಕಾಹೇಳಿಕೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿಯನ್ನು ಬಳಸುತ್ತಿರುವುದಾಗಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರು ಮತ್ತು ಸಮಾಜ ಕಲ್ಯಾಣ ಸಚಿವರು ಮಾಡುತ್ತಿರುವ ಮಹಾಮೋಸ ಎಂದು ಟೀಕಿಸಿದ್ದಾರೆ. ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಅದರ ವಿರುದ್ಧ ಬಿಜೆಪಿ ರಾಜ್ಯ ಎಸ್‍.ಸಿ. ಮೋರ್ಚಾ ವತಿಯಿಂದ ರಾಜ್ಯಾದ್ಯಂತ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರಕಾರವು 2014ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿ ವಿಶೇಷ ಯೋಜನೆಯನ್ನು ಚಾಲ್ತಿಗೆ ತಂದಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದರು. ಇಡೀ ದಲಿತ ಸಮುದಾಯವು ಕಾಂಗ್ರೆಸ್ ಸರಕಾರವು ಒಂದು ಉತ್ತಮ ಯೋಜನೆಯನ್ನು ಕೊಟ್ಟಿದೆ ಎಂದು ಖುಷಿ ಪಟ್ಟಿತ್ತು. ಆದರೆ, ಸಿದ್ದರಾಮಯ್ಯನವರು ಇಲ್ಲಿಯೂ ಕೂಡ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಲಿತರ ಹೆಸರಿನಲ್ಲಿ ಅವರ ಅಭಿವೃದ್ಧಿಗೆ 26 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದು ಹೇಳಿ ಅದರ ಅಡಿಯಲ್ಲಿ 7 ಡಿ ಕಾನೂನನ್ನೂ ಜೊತೆಯಲ್ಲೇ ಜಾರಿ ಮಾಡಿದ್ದರು. ಈ ಹಣ ಖರ್ಚಾಗದಿದ್ದರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡಬಹುದೆಂಬ ಅವಕಾಶವನ್ನು ಇದು ನೀಡಿತ್ತು ಎಂದು ವಿವರಿಸಿದ್ದಾರೆ.

ದಲಿತರಿಗೆ ಈ ಕಾಂಗ್ರೆಸ್ ಸರಕಾರವು ಅತಿ ಹೆಚ್ಚು ಹಣ ನೀಡಿ, ತೆರಿಗೆ ಹಣವನ್ನು ದಲಿತರಿಗೆ ಖರ್ಚು ಮಾಡುತ್ತಿದೆ ಎಂಬಂತೆ ಬೇರೆ ಬೇರೆ ಜಾತಿಯ ಸಾಮಾನ್ಯ ಜನರು ದಲಿತರ ಕುರಿತು ಸಿಟ್ಟಾಗುವಂತೆ ನಡೆದುಕೊಂಡಿತ್ತು. ಆದರೆ, ಸಿದ್ದರಾಮಯ್ಯನವರು ಮೆಟ್ರೊ, ಕೆರೆಗಳ ಹೂಳೆತ್ತಲು ಮತ್ತು ರಸ್ತೆ ಅಭಿವೃದ್ಧಿಗೆ ಪಿಡಬ್ಲ್ಯೂಡಿಗೆ ಸುಮಾರು 19 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಹಣವನ್ನು ಕೊಟ್ಟಿದ್ದರು. ಈ ಮೂಲಕ ದಲಿತರಿಗೆ ಸಿದ್ದರಾಮಯ್ಯರ ಸರಕಾರ ವಂಚನೆ ಮಾಡಿತ್ತು ಎಂದು ಅವರು ನೆನಪಿಸಿದ್ದಾರೆ.
ಆ ನಂತರ ಬಿಜೆಪಿ ಸರಕಾರವನ್ನು ಕೂಡ ಅವರು ಹಲವು ಸಂದರ್ಭದಲ್ಲಿ ‘ದಲಿತರಿಗೆ ನಾನು ವಿಶೇಷ ಯೋಜನೆ ಕೊಟ್ಟು ಬಹಳ ಸಹಾಯ ಮಾಡಿದ್ದೇನೆ. ಆದರೆ, ಬಿಜೆಪಿ ಅವರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ’ ಎಂದು ಆಪಾದನೆಯನ್ನೂ ಮಾಡುತ್ತಿದ್ದರು. ನಾವು ಕಾನೂನುಬದ್ಧವಾಗಿ ಕೊಡಬಹುದಾದ ಎಲ್ಲ ಹಣವನ್ನು ದಲಿತರಿಗೆ ಸರಿಯಾಗಿ ನೀಡಿದ್ದೇವೆ. ಅದು ದಲಿತರಿಗೇ ಸೇರುವಂತೆ ನೋಡಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ನಮ್ಮ ಕಾಲದಲ್ಲಿ ಅಂದರೆ, ಬಸವರಾಜ ಬೊಮ್ಮಾಯಿಯವರ ಸರಕಾರದ ಕಳೆದ ಬಜೆಟ್‍ನಲ್ಲಿ 30 ಸಾವಿರ ಕೋಟಿ ಮೊತ್ತವನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಗೆ ಮೀಸಲಿಟ್ಟಿದ್ದೆವು. ಇದನ್ನು ಕೂಡ ಟ್ವೀಟ್ ಮಾಡಿ ಸಿದ್ದರಾಮಯ್ಯನವರು ಅಣಕಿಸಿದ್ದರು. ಕೇವಲ 30 ಸಾವಿರ ಕೋಟಿ ನೀಡಿದ್ದಾರೆ. ಅವರಿಗೆ ಶೇ 24.5 ಹಣ ಮೀಸಲಿಟ್ಟರೆ 45 ಸಾವಿರ ಕೋಟಿ ಕೊಡಬೇಕಿತ್ತು. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈಗ ಅವರೇ ಬಜೆಟ್ ಮಂಡಿಸಿದಾಗ ನಾವು ನೀಡಿದ 30 ಸಾವಿರ ಕೋಟಿ ಬದಲಾಗಿ 34 ಸಾವಿರ ಕೋಟಿ ನೀಡಿದ್ದಾರೆ. ನಾವು ನಮ್ಮ ಬಜೆಟ್‍ನಡಿ ದಲಿತರ ಹಣ ಅವರ ಅಭಿವೃದ್ಧಿಗಾಗಿಯೇ ಮೀಸಲಾಗಬೇಕೆಂಬ ದೃಷ್ಟಿಯಿಂದ ಬೊಮ್ಮಾಯಿಯವರ 7 ಡಿ ರದ್ದು ಮಾಡುವುದಾಗಿ ಪ್ರಕಟಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನು ಕಂಡ ಸಿದ್ದರಾಮಯ್ಯನವರು ತಾವು ಕೂಡ 7ಡಿ ರದ್ದು ಮಾಡುವುದಾಗಿ ತಿಳಿಸಿದ್ದರು. ಆದರೆ, ಅವರು 24.5 ಹಣ ಮೀಸಲಿಟ್ಟಿರಲಿಲ್ಲ. ಕೇವಲ 4 ಸಾವಿರ ಕೋಟಿ ಹೆಚ್ಚಿಸಿದ್ದರು. ಈಗ 7 ಡಿಯನ್ನು ಹಾಗೇ ಇಟ್ಟು 11 ಸಾವಿರ ಕೋಟಿಯನ್ನು ಮತ್ತೆ ಗ್ಯಾರಂಟಿಗಳಿಗಾಗಿ ತೆಗೆಯಲಾಗಿದೆ. ಇದು ದಲಿತರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಅವರು ಮಾಡಿದ ಮಹಾಮೋಸ ಎಂದು ಟೀಕಿಸಿದ್ದಾರೆ.

ಕಳೆದ ವಾರವೇ ಇದನ್ನು ನಾನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೆ. ಆಗ ಸರಕಾರವು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇವತ್ತು ಸಚಿವ ಮಹದೇವಪ್ಪ ಅವರು ಅದರ ಕುರಿತು ಮಾಹಿತಿ ನೀಡಿದ್ದಾರೆ. ಗ್ಯಾರಂಟಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಹಣವನ್ನು ಸರಕಾರ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಕೂಡದು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಣವನ್ನು ದಲಿತರ ಅಭಿವೃದ್ಧಿ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಕಾಂಗ್ರೆಸ್ ದಲಿತರಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.


ಉಡುಪಿಯ ಪ್ರಕರಣವನ್ನು ಮುಚ್ಚಿಹಾಕಲು ಜಿಲ್ಲಾ ಕಾಂಗ್ರೆಸ್ ಹುನ್ನಾರ : ಕುಯಿಲಾಡಿ



ಉಡುಪಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣದ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಉಡುಪಿ ಜಿಲ್ಲಾ ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಾರೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾ ಹಠಾತ್ ಮಣಿಪುರ ಘಟನೆಯ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಉಡುಪಿಯ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ.

ಉಡುಪಿಯ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ರಾಜ್ಯ ಗೃಹ ಸಚಿವರು ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರೂ, ತಮ್ಮದೇ ಕ್ಷೇತ್ರದ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಗೊಡವೆಗೆ ಹೋಗದ ಸೊರಕೆ ಸಹಿತ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಘಟನೆ ನಡೆದೇ ಇಲ್ಲ ಎನ್ನುತ್ತಾ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವ ಮರ್ಮವೇನು ಎಂದವರು ಪ್ರಶ್ನಿಸಿದ್ದಾರೆ.

ಪ್ರಕರಣದ ಕೂಲಂಕುಷ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಜಿಹಾದಿ ಮನಸ್ಥಿತಿಯ ಸಾಮಾಜಿಕ ಪಿಡುಗನ್ನು ಬೇರು ಸಹಿತ ಕಿತ್ತೊಗೆಯದೆ ಬಿಜೆಪಿ ವಿರಮಿಸದು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬೊಗಳೆ ಬಿಡುವ ಕಾಂಗ್ರೆಸ್ ಒಂದೇ ವರ್ಗವನ್ನು ಓಲೈಸುವ ಭರದಲ್ಲಿ ನೊಂದವರನ್ನು ಕಡೆಗಣಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಿಸಲು ಹೊರಟಿರುವುದು ವಿಷಾದನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾದೆಬೆಟ್ಟು ಭಾಗದ ನೆರೆ ಬಾಧಿತ ಪ್ರದೇಶಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಕಾಪು: ನಿರಂತರವಾಗಿ ಸುರಿದ ಮಳೆಗೆ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆಬೆಟ್ಟು ಧೂಮಾವತಿ ಸ್ಥಾನದ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಇಂದು ದಿನಾಂಕ 28-07-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರೆ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದಾ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂದೇಶ್ ಶೆಟ್ಟಿ, ಅಶೋಕ್, ಶೋಭಾ ಶೆಟ್ಟಿ, ಗೀತಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪಂಚಾಕ್ಷರಿ ಹಿರೇಮಠ, ಗ್ರಾಮ ಆಡಳಿತಾಧಿಕಾರಿಗಳಾದ ಮಥಾಯಿ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ರೆಕಾರ್ಡಿಂಗ್ ಪ್ರಕರಣದ ಪ್ರತಿಭಟನಾ ಸಭೆಗೆ ಕಾಪುವಿನಿಂದ ಒಂದು ಸಾವಿರ ಜನ



ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತ್ರತ್ವದಲ್ಲಿ ನಾಳೆ ಜು.28 ರಂದು ಶುಕ್ರವಾರ ನಡೆಯುವ ಪ್ರತಿಭಟನಾ ಸಭೆಯಲ್ಲಿ ಕಾಪುವಿನಿಂದ ಕನಿಷ್ಠ ಒಂದು ಸಾವಿರ ಜನ‌ ಭಾಗವಹಿಸಲಿರುವರು ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಉಡುಪಿಯ ಖಾಸಗಿ‌ ಕಾಲೇಜಿನಲ್ಲಿ ನಡೆದ ಈ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು ಅವರ ಜೆಹಾದಿ ಮಾನಸಿಕತೆಯಿಂದ ಮುಂದೆ ಪ್ರತಿಯೊಬ್ಬ ಮನೆಯವರೂ ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆ ವಿಡಿಯೋ‌ ಡಿಲಿಟ್ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದರೂ ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವರ್ಷದ ನಂತರ ವೈರಲ್ ಆಗಿ ಬಹಳಷ್ಟು ಕಷ್ಟ ನಷ್ಟ ಅನುಭವಿಸಿದ ಎಷ್ಟೋ ಉದಾಹಣೆಗಳಿವೆ. ಆದ್ದರಿಂದ ಈ ಘಟನೆಗೆ ಯಾವುದಾದರೂ ದೇಶದ್ರೋಹಿ ಸಂಘಟನೆಗಳ ಲಿಂಕ್ ಇದೆಯೇ ಎನ್ನುವುದನ್ನು ಸಮಗ್ರವಾಗಿ ತನಿಖೆ ನಡೆಸಿ ಇದರ ಸತ್ಯಾಸತ್ಯತೆಯನ್ನು ಅರಿಯಬೇಕು. ಆ ವಿದ್ಯಾರ್ಥಿಗಳನ್ನು ಅಮಾನತು ಮಾಡಿರಷ್ಟೇ ಸಾಲದು. ಸಮಗ್ರವಾಗಿ ಅವರ ವಿಚಾರಣೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಯಾವುದಧ ಘಟನೆ ಮರುಕಳಿಸದಂತೆ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕು. ಅದು ಬಿಟ್ಟು ತೇಪೆ ಹಚ್ಚು ಕೆಲಸ ಮಾಡಿ ಯಾರನ್ನೋ ಓಲೈಸಲು ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಇದರ ಪ್ರತಿಭಟನೆ ನಡೆಸಬೇಕೋ ಅದೇ ರೀತಿಯಲ್ಲಿ ಪ್ರತಿಭಟನೆ ಮಾಡಿ ಜನ ಜಾಗ್ರತಿ ಮಾಡಿಸುವ ಕೆಲಸ ಬಿಜೆಪಿ ಮಾಡಲಿದೆ.

ನಾಳೆಯ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಕಾರ್ಯಕರ್ತರು ಪ್ರತೀ ಬೂತ್ ಗಳಿಂದ ಭಾಗವವಹಿಸಲಿದ್ದು ಜಿಲ್ಲಾ ಬಿಜೆಪಿಯ ಹೋರಾಟಕ್ಕೆ ಶಕ್ತಿ ತುಂಬಲಿರುವೆವು ಎಂದು ಹೇಳಿರುವರು.

ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆಯಲು ಉತ್ಸುಕವಾಗಿರುವ ಗೃಹ ಇಲಾಖೆ ಉಡುಪಿಯ ಗಂಭೀರ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಯಾಕೆ ಮಹತ್ವ ನೀಡುತ್ತಿಲ್ಲ: ನಯನಾ ಗಣೇಶ್


ಉಡುಪಿ: ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕೇಸ್ ಗಳನ್ನು ಹಿಂಪಡೆಯುವ ಪ್ರಸ್ತಾಪದ ಬಗ್ಗೆ ಉತ್ಸುಕತೆ ತೋರುವ ರಾಜ್ಯ ಗೃಹ ಇಲಾಖೆ ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣದ ಪ್ರಕರಣದ ತನಿಖೆಯ ಬಗ್ಗೆ ಯಾಕೆ ಮಹತ್ವ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪ್ರಶ್ನಿಸಿದ್ದಾರೆ.

ಈ ಗಂಭೀರ ಪ್ರಕರಣವು ರಾಜ್ಯದೆಲ್ಲೆಡೆ ಕೋಲಾಹಲ ಸೃಷ್ಟಿಸಿದ್ದು, ಸದ್ರಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಮೂರು ಮಂದಿ ತಪ್ಪಿತಸ್ಥ ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ ತಪ್ಪೊಪ್ಪಿಗೆ ಮೂಲಕ ವೀಡಿಯೋವನ್ನು ಡಿಲೀಟ್ ಮಾಡಿರುವುದು ಕಾನೂನು ಬಾಹೀರವಾಗಿದೆ. ಸದ್ರಿ ವೀಡಿಯೋವನ್ನು ಯಾರಿಗಾದರೂ ಫಾರ್ವರ್ಡ್ ಮಾಡಲಾಗಿದೆಯೋ ಎಂಬ ಬಗ್ಗೆಯೂ ತನಿಖೆಯಾಗಬೇಕಿದೆ. ಸುಶಿಕ್ಷಿತ ಶಾಂತಿಪ್ರಿಯ ಜನತೆಯ ನಾಡು ಉಡುಪಿಯಲ್ಲಿ ಇಂತಹ ಅನಪೇಕ್ಷಿತ ಕುಕೃತ್ಯ ನಡೆದಿರುವುದು ಜಿಲ್ಲೆಯ ಇತಿಹಾಸದಲ್ಲೊಂದು ಕಪ್ಪು ಚುಕ್ಕೆಯಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಹಾದಿ ಮನಸ್ಥಿತಿಯ ಸಮಾಜಘಾತುಕ ಮತಾಂಧ ಶಕ್ತಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಜಿಲ್ಲೆಯಲ್ಲಿ ಇಂತಹ ಗಂಭೀರ ಪ್ರಕರಣ ದಾಖಲಾದರೂ ಜಿಲ್ಲೆಯ ಮಹಿಳಾ ಉಸ್ತುವಾರಿ ಸಚಿವರು ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ತುರ್ತು ಕ್ರಮ ಜರುಗಿಸಲು ಮುಂದಾಗದೇ ಇರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ತಕ್ಷಣ ಸ್ವಯಂ ಪ್ರೇರಿತ ದೂರು ದಾಖಲಿಸದ ಪೊಲೀಸರು, ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದ ರಶ್ಮಿ ಸಾಮಂತ್ ರವರ ಮನೆಗೆ ಹೋಗಿ ಅವರ ಬಗ್ಗೆ ವಿಚಾರಿಸಿರುವುದು ವಿಪರ್ಯಾಸ.

ಪ್ರಕರಣದ ತನಿಖೆಗೆ ಎಲ್ಲೆಡೆ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ, ಜು.18ರಂದು ನಡೆದ ಘಟನೆಯ ಬಗ್ಗೆ ಜು.26ರಂದು ಸ್ವಯಂಪ್ರೇರಿತ ದೂರು ದಾಖಲಿಸಿರುವ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ಸಮಗ್ರ ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ನಡೆಸುವ ಮೂಲಕ ಸಂತ್ರಸ್ತ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ನಯನಾ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಜುಲೈ 28 : ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜಿಹಾದಿ ಮನಸ್ಥಿತಿಯ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ‘ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ’: ಕುಯಿಲಾಡಿ



ಉಡುಪಿ: ಉಡುಪಿಯ ನಗರದ ಖಾಸಗಿ ಕಾಲೇಜಿನಲ್ಲಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ಜುಲೈ 28, ಶುಕ್ರವಾರ ಬೆಳಿಗ್ಗೆ ಗಂಟೆ 10.30ಕ್ಕೆ ‘ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ’ ನಡೆಯಲಿದೆ.

ಜುಲೈ 28, ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯ ಬಳಿಯಿಂದ ಹೊರಡಲಿರುವ ‘ಬೃಹತ್ ಪ್ರತಿಭಟನಾ ಮೆರವಣಿಗೆ’ಯು ಉಡುಪಿ ಸಿಟಿ ಬಸ್ ನಿಲ್ದಾಣದ ಮೂಲಕ ಬನ್ನಂಜೆ ಎಸ್.ಪಿ. ಕಚೇರಿಯ ಬಳಿ ಸಮಾಗಮಗೊಂಡು, ‘ಪ್ರತಿಭಟನಾ ಭಾಷಣ’ದ ಬಳಿಕ ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಮನವಿ’ ಸಲ್ಲಿಸುವ ಮೂಲಕ ಸಮಾಪನಗೊಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಈ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದು, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳು, ಎಲ್ಲಾ ಸ್ತರದ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜುಲೈ 27ರಂದು ಬೆಳಿಗ್ಗೆ 11.00 ಗಂಟೆಗೆ ಕಾಪು ಪೇಟೆಯಲ್ಲಿ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಬೃಹತ್ ಪ್ರತಿಭಟನೆ



ಉಡುಪಿ: ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಿಸಿರುವ ಘಟನೆಯನ್ನು ಖಂಡಿಸಿ, ಪೊಲೀಸ್ ಇಲಾಖೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನಾಳೆ ಜುಲೈ 27, ಗುರುವಾರ ಬೆಳಿಗ್ಗೆ 11.00 ಗಂಟೆಗೆ ಕಾಪು ಪೇಟೆಯ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ.

ಈ ಪ್ರಮುಖ ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಬಿಡೆವು; ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಕರಣದ ಸಮಗ್ರ ತನಿಖೆಗೆ ಕುಯಿಲಾಡಿ ಆಗ್ರಹ



ಉಡುಪಿ: ಜಿಹಾದಿ ಮಾನಸಿಕತೆಯ ಕೆಲವು ವಿದ್ಯಾರ್ಥಿನಿಯರು ಉಡುಪಿ‌ಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಒಂದು ವರ್ಷದಿಂದ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ನಗರಿ ಉಡುಪಿಯ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನದ ಮೂಲಕ ‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಎಂದಿಗೂ ಅವಕಾಶ ನೀಡಲಾರೆವು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಈಗಾಗಲೇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಈ ಸಂಬಂಧವಾಗಿ ಮೂರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದು, ಇದರಿಂದ ಪ್ರಕರಣದ ನಿಖರತೆ ಸಾಬೀತಾಗಿದೆ. ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಕಳ್ಳತನದಿಂದ ಚಿತ್ರೀಕರಿಸಿ ಅವುಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡುವ ಕುಕೃತ್ಯದ ಯೋಜನೆಯ ಮೂಲಕ ಅವರ ಭವಿಷ್ಯವನ್ನು ಹಾಳುಗೆಡಹಲು ರೂಪಿಸಿರುವ ಈ ಹುನ್ನಾರ ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಪೊಲೀಸರ ಮೇಲೆ ಒತ್ತಡ ಹೇರಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಬಗ್ಗೆ ಗುಮಾನಿ ಇದೆ. ಮೂರು ಮಂದಿ ತಪ್ಪಿತಸ್ಥ ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಲಾಗಿದೆ ಹಾಗೂ ಸದ್ರಿ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಯುವಕರು ಕೂಡಾ ಶಾಮೀಲಾಗಿದ್ದಾರೆ ಎಂಬ ವಿಚಾರವನ್ನು ಸಂತ್ರಸ್ತ ವಿದ್ಯಾರ್ಥಿನಿಯರು ಬಹಿರಂಗಪಡಿಸಿರುವುದಾಗಿ ತಿಳಿದುಬಂದಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆಯ ದಾರಿ ತಪ್ಪಿಸುವ ಅಥವಾ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದರೆ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪ್ರಕರಣದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸೇರಿ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಸಲಿದೆ.

ಈ ಗಂಭೀರ ಪ್ರಕರಣವನ್ನು ರಾಜ್ಯ ಸರಕಾರ ಮತ್ತು ಗೃಹ ಇಲಾಖೆ ಲಘುವಾಗಿ ಪರಿಗಣಿಸಬಾರದು. ‘ದೆ ಆರ್ ಮೈ ಬ್ರದರ್ಸ್’ ಹಾಗೂ ‘ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ’ ಎನ್ನುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಈ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ಮಾಡಿದಲ್ಲಿ ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾದೀತು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಶೇಡಿಮನೆ : ತುಂಬಿ ಹರಿಯುತ್ತಿದ್ದ ನದಿಯ ಪ್ರವಾಹಕ್ಕೆ ಬಿದ್ದು ಮೃತಪಟ್ಟ ಬಾಲಕಿಯ ಮನೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬೇಟಿ, ಸಾಂತ್ವಾನ


ಶೇಡಿಮನೆ: ಜು.23ರಂದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇಡಿಮನೆ ಗ್ರಾಮದ ಗಂಗಾಡ ಬೈಲು ಪ್ರದೇಶದ ಬಡ ಕುಟುಂಬದ ಬಾಲಕಿ ರಚನಾ ಶೆಟ್ಟಿ (12 ವರ್ಷ) ತುಂಬಿ ಹರಿಯುತ್ತಿರುವ ನದಿಯ ಪ್ರವಾಹಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಜು.24ರಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿ ವರ್ಗದೊಂದಿಗೆ ಮೃತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ರೂ.5.00 ಲಕ್ಷಗಳ ಮೊತ್ತದ ಚೆಕ್ಕನ್ನು ಬಾಲಕಿಯ ತಾಯಿ ವಿಮಲ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹೆಬ್ರಿ ತಹಸೀಲ್ದಾರ ಪುರಂದರ ಹಾಗೂ ಅಧಿಕಾರಿ ವರ್ಗದವರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಪೂಜಾರಿ ಮತ್ತು ಬಿಜೆಪಿ ಮುಖಂಡ ಸೊರ್ಗೋಳಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ : ‘ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾ ಕೂಟ



ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ ಇದರ ನೇತೃತ್ವದಲ್ಲಿ ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಉಜ್ವಲ ಸಂಜೀವಿನಿ ಒಕ್ಕೂಟ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಆಟಿ ತಿಂಗಳ ಗ್ರಾಮೀಣ ಕ್ರೀಡಾ ಕೂಟ ‘ಕೆಸರ್ದ ಗೊಬ್ಬು-2023’ ಅಂಬಲಪಾಡಿಯ ಬಂಕೇರಕಟ್ಟ ಆಚಾರಿಗುಂಡಿ ದ್ವಾಲಮಾರ್ ಗದ್ದೆಯಲ್ಲಿ ಸಂಪನ್ನಗೊಂಡಿತು.

ಕೆಸರು ಗದ್ದೆ ಕ್ರೀಡಾ ಕೂಟ ಕೆಸರ್ದ ಗೊಬ್ಬು-2023ನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತೆಂಗಿನ ತೆನೆ ಅರಳಿಸಿ, ಗದ್ದೆಗೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಚಿಕ್ಕಂದಿನಲ್ಲಿ ಮನೆ ಮಂದಿಯೊಂದಿಗೆ ಗದ್ದೆಯಲ್ಲಿ ಕೃಷಿ ಚಟುವಟಿಕೆಗೆ ಓಡಾಡಿದ ನೆನಪು ಮುರುಕಳಿಸುತ್ತಿದೆ. ಇಂದು ಗ್ರಾಮೀಣ ಪ್ರದೇಶದಲ್ಲಿ ಬೇಸಾಯ ವೃತ್ತಿ ಕುಂಠಿತವಾಗಿರುವ ಹಂತದಲ್ಲಿ ಹಡಿಲು ಭೂಮಿ ಕೃಷಿಯಲ್ಲಿ ತೊಡಸಿಕೊಳ್ಳುವ ಜೊತೆಗೆ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ‘ಕೆಸರ್ದ ಗೊಬ್ಬು’ ಆಯೋಜಿಸಿರುವುದು ಪ್ರಶಂಸನೀಯ. ಇಂತಹ ಮಾದರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿರುವ ಸ್ವಾಮಿ ಫ್ರೆಂಡ್ಸ್ ತಂಡದ ಸರ್ವ ಸದಸ್ಯರು ಹಾಗೂ ಸಹರಿಸಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂಸ್ಥೆಯ ಮೂಲಕ ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯ ಚಟುವಟಿಕೆಗಳು ಮೂಡಿ ಬರುವಂತಾಗಲಿ ಎಂದು ಹಾರೈಸಿದರು.

ಶ್ರೀ ನಾಗರಾಜ ಸೇವಾ ಸಮಿತಿ ಬಂಕೇರ್ಕಟ್ಟ ಇದರ ಗೌರವಾಧ್ಯಕ್ಷ ವಿಶ್ವನಾಥ್ ಹೆಗ್ಡೆ, ಹಡಿಲು ಭೂಮಿ ಕೃಷಿಕ ರಿಕೇಶ್ ಪಾಲನ್ ಕಡೆಕಾರು, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಭಾರತಿ ಭಾಸ್ಕರ್ ಮಾತನಾಡಿ, ಮಾಜಿ ಶಾಸಕ ಕೆ.ರಘುಪತಿ ಭಟ್ ರವರ ಕ್ರಾಂತಿಕಾರಿ ಹಡಿಲು ಭೂಮಿ ಕೃಷಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಯುವಜನತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿದೆ. ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವ ಜೊತೆಗೆ ಯುವ ಜನತೆ ಹಡಿಲು ಭೂಮಿ ಕೃಷಿ ಸಹಿತ ತಮ್ಮ ಮನೆಯ ತೋಟಗಳಲ್ಲಿ ತರಕಾರಿ ಬೆಳೆಯ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅಗತ್ಯತೆ. ಈ ನಿಟ್ಟಿನಲ್ಲಿ ಸ್ವಾಮಿ ಫ್ರೆಂಡ್ಸ್ ತಂಡದ ಪ್ರಯತ್ನ ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಪ್ರಭಾರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಒಂದು ದಿನ ಪೂರ್ತಿ ಗ್ರಾಮಸ್ಥರೆಲ್ಲ ಒಂದಾಗಿ ಪ್ರಕೃತಿಯ ಮಡಿಲ ಕೆಸರು ಗದ್ದೆಯ ಆಟೋಟಗಳಲ್ಲಿ ಸ್ವೇಚ್ಛೆಯಿಂದ ಪಾಲ್ಗೊಳ್ಳುವ ಸದವಕಾಶವನ್ನು ಸ್ವಾಮಿ ಫ್ರೆಂಡ್ಸ್ ತಂಡ ಒದಗಿಸಿದೆ. ಗ್ರಾಮೀಣ ಭಾಗದ ಭವ್ಯ ಪರಂಪರೆ, ಸಾಂಸ್ಕೃತಿಕ ವೈಭವವನ್ನು ಮೆಲುಕು ಹಾಕುವ ಕ್ಷಣ ಇದಾಗಿದೆ. ಇದರ ಜೊತೆಗೆ ಯುವ ಜನತೆ ಹಾಗೂ ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮಾಜಿ ಶಾಸಕ ಕೆ.ರಘುಪತಿ ಭಟ್ ರವರ ಉದಾತ್ತ ಯೋಜನೆ ಹಡಿಲು ಭೂಮಿ ಕೃಷಿಯಲ್ಲಿಯೂ ತೊಡಗಿಸಿಕೊಳ್ಳುವ ಹುಮ್ಮಸ್ಸು ಇಮ್ಮಡಿಯಾಗಿದೆ. ಈ ಮಾದರಿ ಕಾರ್ಯಕ್ರಮವನ್ನು ಆಯೋಜಿಸುವ ಜೊತೆಗೆ ಹಿರಿಯ ಕೃಷಿಕ ಮಹಿಳೆಯರನ್ನು ಗೌರವಿಸಿ ಪ್ರೋತ್ಸಾಹಿಸಿದ ಸ್ವಾಮಿ ಫ್ರೆಂಡ್ಸ್ ತಂಡದ ಸರ್ವ ಸದಸ್ಯರಿಗೆ ಹಾಗೂ ‘ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾ ಕೂಟದ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ, ಸ್ಥಳೀಯ ಕೃಷಿಕ ಪಟೇಲರ ಮನೆ ಶರತ್ ಶೆಟ್ಟಿ, ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್, ಸ್ಥಳೀಯರಾದ ಭುವನೇಂದ್ರ ಮೈಂದನ್, ಕಾರ್ಯಕ್ರಮದ ಸಂಯೋಜಕರಾದ ಸ್ವಾಮಿ ಫ್ರೆಂಡ್ಸ್ ತಂಡದ ವಿನೋದ್ ಪೂಜಾರಿ, ಸಂದೇಶ್ ಹಾಗೂ ಸಂಸ್ಥೆಯ ಸರ್ವ ಸದಸ್ಯರು, ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವ ಜನತೆ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಬಾಲಕೃಷ್ಣ ಶೆಟ್ಟಿ ನಿಟ್ಟೂರು ಕ್ರೀಡಾ ಕೂಟಕ್ಕೆ ಆಗಮಿಸಿ ಶುಭ ಹಾರೈಸಿದರು.

ಶಿವಾನಂದ ಕಟ್ಟೆಗುಡ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Design a site like this with WordPress.com
Get started