ಪ್ರತೀಕಾರದ, ಪ್ರಗತಿಹೀನ ಬಜೆಟ್: ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಒಂದು ರೀತಿ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯ ಸರಕಾರದ್ದೇ ಆದರೂ ಕೇಂದ್ರ ಬಿಜೆಪಿ ಸರಕಾರವನ್ನು ಗುರಿ ಮಾಡಿರುವುದು ಕಂಡುಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.

ಇದೊಂದು ನಿರಾಶಾದಾಯಕ, ಪ್ರಗತಿಹೀನ ಬಜೆಟ್ ಎಂದಿರುವ ಅವರು, ಬಜೆಟ್ ಮಂಡಿಸುವ ವೇಳೆ ಕೇಂದ್ರ ಸರಕಾರ, ಮೋದಿಜಿ ಅವರನ್ನು ಟೀಕಿಸುವುದಕ್ಕಾಗಿಯೇ ಈ ಅವಕಾಶವನ್ನು ಉಪಯೋಗ ಮಾಡಿಕೊಂಡಿದ್ದಾರೆ. ರಾಜ್ಯಗಳ ಒಕ್ಕೂಟದ ಒಳಗಡೆ ಕೇಂದ್ರದ ಜೊತೆ ಸಂಘರ್ಷ, ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟನ್ನು ಬಳಸಿಕೊಂಡಿರುವುದು ಕಾಣಿಸಿದೆ. ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.

ಮುಂದಿನ ಕರ್ನಾಟಕ ನಿರ್ಮಾಣದ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿಯೂ ಸುಗಮವಾಗಿ ಕಂಡುಬರುವುದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಮಾಡಿ ತೋರಿಸಿದೆ. ಕೆಲವು ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶಗಳನ್ನು ಸೇರಿಸಿದ್ದಾರೆ. ದೊಡ್ಡ ರೀತಿಯ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಹಿಂದೊಮ್ಮೆ ಕೋವಿಡ್ ನಿರ್ವಹಣೆ ಸೇರಿ ಅಭಿವೃದ್ಧಿಗಾಗಿ ಹೂಡಿಕೆಗೆ ಸಾಲ ತೆಗೆದುಕೊಂಡದಿದ್ದಿದೆ. ಆದರೆ, ಇಲ್ಲಿ ಚುನಾವಣಾ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾಲ ಮಾಡುವಂಥ ದಯನೀಯ ಸ್ಥಿತಿಗೆ ಸರಕಾರ ತೆಗೆದುಕೊಂಡು ಹೋಗಿದೆ. ಇದರಡಿ ಅಭಿವೃದ್ಧಿಯ ಯಾವುದೇ ಮುನ್ನೋಟಗಳು ಕಾಣುತ್ತಿಲ್ಲ. ಭವಿಷ್ಯದ ಭಾರತ ನಿರ್ಮಾಣದ ಯಾವ ಭೂಮಿಕೆಯೂ ಈ ಬಜೆಟ್‍ನಲ್ಲಿ ಕಾಣುತ್ತಿಲ್ಲ. ಒಂದಷ್ಟು ಸಮುದಾಯಗಳ ಓಲೈಕೆ, ಒಂದು ಸಮುದಾಯವನ್ನು ಓಲೈಸಲು ಕೇಂದ್ರ ಸರಕಾರವನ್ನು ದೂಷಿಸುವುದು, ತನ್ಮೂಲಕ ರಾಜಕೀಯ ಬಂಡವಾಳ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯ ಲಾಭದತ್ತ ನೋಡುವುದು ಕಾಣಿಸುತ್ತಿದೆ ಎಂದು ವಿವರಿಸಿದ್ದಾರೆ.

ಈ ದೊಡ್ಡ ಪ್ರಮಾಣದ ಯೋಜನೇತರ ವೆಚ್ಚದ ಮೂಲಕ ಹಣದ ಸೋರಿಕೆ ಆಗಲಿದೆ. ಕರ್ನಾಟಕವನ್ನು ಎಟಿಎಂ ಮಾಡಲು ಬೇಕಾದ ಫಾರ್ಮುಲಾವನ್ನು ಈ ಗ್ಯಾರಂಟಿ ಮೂಲಕ ಮಾಡಿಕೊಂಡಿದ್ದಾರೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕಿದೆ; ದೂರದರ್ಶಿತ್ವದ ಯಾವುದೇ ಅಂಶಗಳು ಈ ಬಜೆಟ್‍ನಲ್ಲಿ ಕಾಣುತ್ತಿಲ್ಲ. ಕರ್ನಾಟಕದ ಬೆಳವಣಿಗೆಗೆ ಅತ್ಯಂತ ವಿಪುಲ ಅವಕಾಶಗಳಿದ್ದ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಬಂಡವಾಳ ಕರ್ನಾಟಕದಲ್ಲಿ ಹೂಡುವಂಥ ಕಾಲಘಟ್ಟದಲ್ಲಿ, ಪ್ರಗತಿ ವಿಚಾರದಲ್ಲಿ ರಾಜ್ಯವು ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಅವಧಿಯಲ್ಲಿ, ತಲಾದಾಯದಲ್ಲೂ (ಪರ್ ಕ್ಯಾಪಿಟ ಇನ್‍ಕಂ) ಮುಂದಿರುವ ಕಾಲಘಟ್ಟದಲ್ಲಿ ನಿರ್ವಹಣೆಯನ್ನು ನೋಡಿದಾಗ ಮುಂದೊಂದು ದಿನ, ಹಿಂದೆಲ್ಲ ಹಲವು ರಾಜ್ಯಗಳಿಗೆ ಬಿಮಾರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದರೋ ಆ ರಾಜ್ಯಗಳ ಸ್ಥಾನಕ್ಕೆ ನಮ್ಮ ರಾಜ್ಯ ಹೋಗುತ್ತದೇನೋ ಎಂಬ ಭಯ ಕಾಡುವಂತಾಗಿದೆ ಎಂದು ತಿಳಿಸಿದ್ದಾರೆ.

ಜಿಎಸ್‍ಟಿ, ಆಡಳಿತಾತ್ಮಕ ಸುಧಾರಣೆಗಳ ವಿಷಯದಲ್ಲಿ ಹಿಂದಿನ ಬಿಜೆಪಿ ಸರಕಾರ ಸಾಧನೆ ಮಾಡಿತ್ತು. ಅವೆಲ್ಲವೂ ದಾರಿ ತಪ್ಪಬಹುದೇನೋ ಎಂಬ ಭಯ ಕಾಡುತ್ತಿದೆ. ಬೇವಿನ ಗಿಡ ನೆಟ್ಟು ಮಾವಿನ ಫಲ ಹೇಗೆ ನಿರೀಕ್ಷಿಸಲು ಸಾಧ್ಯವಿಲ್ಲವೋ ಹಾಗೇ ದ್ವೇಷಪೂರಿತ ಸಂಘರ್ಷದ ಅಂಶವನ್ನು ರಾಜಕೀಯ ವ್ಯವಸ್ಥೆಯೊಳಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪ್ರಯೋಜನ ಲಭಿಸದು. ಪರಸ್ಪರ ಸಹಕಾರದ ಮೂಲಕವೇ ಜನಮಾನ್ಯತೆ ಪಡೆಯಲು ಸಾಧ್ಯವಿದೆ ಎಂದು ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಡಾ! ಮುಖರ್ಜಿ, ಡಾ! ಆಚಾರ್ಯ ತತ್ವಾದರ್ಶಗಳು ಕಾರ್ಯಕರ್ತರಿಗೆ



ಉಡುಪಿ: ಭಾರತೀಯ ಜನ ಸಂಘದ ಸಂಸ್ಥಾಪಕರು ಹಾಗೂ ಸ್ವತಂತ್ರ ಭಾರತದ ಪ್ರಥಮ ಕೈಗಾರಿಕಾ ಸಚಿವರಾಗಿದ್ದ ಡಾ! ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ದಕ್ಷಿಣ ಭಾರತದಲ್ಲಿ ಜನಸಂಘದ ಪ್ರಪ್ರಥಮ ಆಡಳಿತದ ಉಡುಪಿ ಪುರಸಭೆಯ ಅಧ್ಯಕ್ಷರು ಹಾಗೂ ರಾಜ್ಯ ಗೃಹ ಸಚಿವರು, ವೈದ್ಯಕೀಯ, ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ! ವಿ.ಎಸ್. ಆಚಾರ್ಯರವರ ತತ್ವಾದರ್ಶಗಳು ಬಿಜೆಪಿ ಕಾರ್ಯಕರ್ತರಿಗೆ ದಾರಿದೀಪ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಡಾ! ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಡಾ! ವಿ.ಎಸ್. ಆಚಾರ್ಯರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬ್ಯಾರಿಸ್ಟರ್ ಪದವೀದರ ಹಾಗೂ ಅತ್ಯಂತ ಮೇಧಾವಿಗಳಾಗಿದ್ದ ಡಾ! ಮುಖರ್ಜಿಯವರು ದೇಶದ ಅಖಂಡತೆಗಾಗಿ ತನ್ನ ಜೀವಿತಾವಧಿಯನ್ನು ಮುಡಿಪಾಗಿಟ್ಟು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ 370ನೇ ವಿಧಿಯನ್ನು ವಿರೋಧಿಸಿ, ನೆಹರೂ ಸಂಪುಟದಿಂದ ನಿರ್ಗಮಿಸಿ, ಕಾಶ್ಮೀರದ ವಿಮೋಚನೆಗೆ ಹೋರಾಟ ನಡೆಸಿ ಹುತಾತ್ಮರಾದರು. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ದಿಟ್ಟ ನಿರ್ಧಾರದಿಂದ ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದತಿಗೊಂಡಿರುವುದು ಡಾ! ಮುಖರ್ಜಿಯವರ ಅಂದಿನ ಹೋರಾಟಕ್ಕೆ ಸಂದ ಜಯವಾಗಿದೆ.

ಕಾಂಗ್ರೆಸ್ ದುರಾಡಳಿತದಿಂದ ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ 19 ತಿಂಗಳ ಸೆರೆಮನೆವಾಸ ಅನುಭವಿಸಿ, ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ, ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ಧಿ, ನವ ಉಡುಪಿಯ ನಿರ್ಮಾತೃ ಡಾ! ವಿ.ಎಸ್. ಆಚಾರ್ಯರವರ ದೂರದರ್ಶಿತ್ವದ ಚಿಂತನೆಗಳು ಇಂದು ಸಾಕಾರಗೊಳ್ಳುತ್ತಿವೆ.

ಈ ಮಹಾನ್ ಚೇತನಗಳ ತತ್ವ ಸಿದ್ಧಾಂತಗಳು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಕುಯಿಲಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿಗಳಾದ ರೇಶ್ಮಾ ಉದಯ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಮಾಲತಿ ನಾಯ್ಕ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿ ಅರುಣ್ ಕುಮಾರ್ ಬಾಣ, ಜಿಲ್ಲಾ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಗೋಪಾಲ್ ಕಾಂಚನ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಆಸಿಫ್ ಕಟಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಅಕ್ಷಯ್ ಶೆಟ್ಟಿ, ಚಂದ್ರಶೇಖರ ಪ್ರಭು, ಬೈಂದೂರು ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಕಾರ್ಕಳ ಮಂಡಲ ಪ್ರ.ಕಾರ್ಯದರ್ಶಿ ನವೀನ್ ನಾಯ್ಕ್, ಕಾಪು ಮಂಡಲ ಪ್ರ.ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಉಡುಪಿ ನಗರ ಮಂಡಲ ಪ್ರ.ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ಉಡುಪಿ ಗ್ರಾಮಾಂತರ ಮಂಡಲ ಪ್ರ. ಕಾರ್ಯದರ್ಶಿಗಳಾದ ಸಚಿನ್ ಪೂಜಾರಿ, ಗಣೇಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸತ್ಯಾನಂದ ನಾಯಕ್ ಆತ್ರಾಡಿ ಆಯ್ಕೆ



ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್(ರಿ ) ಇದರ ಕಾರ್ಯಕ್ಷೇತ್ರಕ್ಕೆ ಒಳಪಟ್ಟಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾ ವ್ಯಾಪ್ತಿಯ ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳನ್ನೊಳಗೊಂಡ ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತ್ಯಾನಂದ ನಾಯಕ್ ಆತ್ರಾಡಿ ಆಯ್ಕೆಯಾಗಿದ್ದಾರೆ.

ಸತ್ಯಾನಂದ ನಾಯಕ್ ರವರು ಕಳೆದ 20 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪರ್ಕದಲ್ಲಿದ್ದು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ, ತಾಲೂಕು ಸಮಿತಿ ಸದಸ್ಯರಾಗಿ, ಜಿಲ್ಲಾ ಸಮಿತಿ ಸದಸ್ಯರಾಗಿ ಯೋಜನೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿರುತ್ತಾರೆ.

ಉಡುಪಿ ತಾಲೂಕು ಪಂಚಾಯತ್ ಸದಸ್ಯರಾಗಿ, ಆತ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ ಇದರ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ, ಆತ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಶ್ರೀ ಭವಾನಿ ಶಂಕರ ದೇವಸ್ಥಾನ ಭೈರಂಜೆ ಇದರ ಗೌರವಾಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಸಂಪುಟ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸಕ್ತ ಆತ್ರಾಡಿ ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನಿರ್ಮಾಣ್ ವಿವಿದೋದ್ದೇಶ ಸಹಕಾರಿ ಸಂಘ ಉಡುಪಿ ಇದರ ನಿರ್ದೇಶಕರಾಗಿ, ವರ್ತಕರ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಸದಸ್ಯರಾಗಿ, ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜು ಇದರ ಅಭಿವೃದ್ಧಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ, ಅಮೋಘ(ರಿ.) ಹಿರಿಯಡ್ಕ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಉಡುಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ, ಶ್ರೀ ಭವಾನಿ ಶಂಕರ ದೇವಸ್ಥಾನ ಭೈರಂಜೆ ಇದರ ಆಡಳಿತ ಸಮಿತಿ ಸದಸ್ಯರಾಗಿ, ಆರ್.ಎಸ್.ಬಿ. ಸಂಘ ಮಣಿಪಾಲ ಇದರ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆ



ಉಡುಪಿ: ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.

ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಒಬಿಸಿ ಮೋರ್ಚಾ ಪ್ರಸಕ್ತ ಅವಧಿಯಲ್ಲಿ ಅತ್ಯುತ್ತಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿದೆ. ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಮತವು ನಿರ್ಣಾಯಕ ಪಾತ್ರ ವಹಿಸಿದೆ. ಚುನಾವಣಾ ಗೆಲುವಿಗೆ ಶ್ರಮಿಸಿದ ಒಬಿಸಿ ಮೋರ್ಚಾ ಹಾಗೂ ಭರ್ಜರಿ ಗೆಲುವಿಗೆ ಕೈಜೋಡಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ. ಮುಂಬರಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಎಲ್ಲರೂ ಸಂಘಟಿತ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮಾನ್ಯತೆ ದೊರೆತಿದೆ. ‘ಸಬ್ ಕೇ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ತತ್ವದಡಿ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಗೊಂಡಿದೆ. ಭಾರತ ಆರ್ಥಿಕತೆಯ ಪ್ರಗತಿಯ ವೇಗದಲ್ಲಿ ವಿಶ್ವದಲ್ಲೇ ಮೂಂಚೂಣಿ ಸ್ಥಾನವನ್ನು ಪಡೆದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಭರ್ಜರಿ ಬಹುಮತದಿಂದ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕರ್ತರು ಪಕ್ಷದ ಅತ್ಯಮೂಲ್ಯ ಆಸ್ತಿ. ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಫಲವಾಗಿ ಬಿಜೆಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿರುವುದು ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯವಾಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಇದೇ ರೀತಿಯ ಸ್ಫೂರ್ತಿ ಮತ್ತು ಕಾರ್ಯಬದ್ಧತೆಯೊಂದಿಗೆ ಪಕ್ಷದ ಗೆಲುವಿಗೆ ಕಟಿಬದ್ಧರಾಗಬೇಕು ಎಂದು ವಿನಂತಿಸಿದರು.

ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪ್ರಮುಖರು, ಒಬಿಸಿ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, ಒಬಿಸಿ ಮೋರ್ಚಾ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.

ಸಮಾನ ಮನಸ್ಕರ ತಂಡದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ



ಶಶಿಧರ ಪುರೋಹಿತ ಕಟಪಾಡಿ ಇವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಇಂದು ದಿನಾಂಕ 29-06-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.



ಉಚಿತ ಪುಸ್ತಕ ವಿತರಣೆ ಮಾಡಿದ ಶಾಸಕರು ಸಮಾನ ಮನಸ್ಕ ತಂಡಕ್ಕೆ ಮತ್ತು ಇದಕ್ಕೆ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಶಿಧರ ಪುರೋಹಿತ, ಸದಾಶಿವ ಆಚಾರ್ಯ, ಸಹನಾ ದೇವರಾಜ ಆಚಾರ್ಯ, ಅಚ್ಚುತ ಆಚಾರ್ಯ ಕಾಪು, ನಿವೃತ್ತ ತಹಶೀಲ್ದಾರರಾದ ಕೆ. ಮುರಳಿಧರ ಆಚಾರ್ಯ, ನಿವೃತ್ತ ಯೋಧ ವಾದಿರಾಜ ಆಚಾರ್ಯ, ಕಾಪು ಕಾಳಿಕಾಂಬ ದೇವಸ್ಥಾನ ಮೊಕ್ತೇಸರರಾದ ಶೇಖರ ಆಚಾರ್ಯ, ಗಣೇಶ್ ಆಚಾರ್ಯ ಉಚ್ಚಿಲ, ಭಾಸ್ಕರ ಆಚಾರ್ಯ, ಚಂದ್ರಶೇಖರ ಆಚಾರ್ಯ, ದಿವಾಕರ ಆಚಾರ್ಯ, ಕಾರ್ತಿಕ್ ಆಚಾರ್ಯ, ಬಿ.ಎ ಆಚಾರ್ಯ ಮಣಿಪಾಲ, ರವಿ ಪುರೋಹಿತ ಉಪಸ್ಥಿತರಿದ್ದರು.

’10 ಕೆ.ಜಿ. ಅಕ್ಕಿ ಫ್ರೀ’ ಗ್ಯಾರಂಟಿಗೆ ಕೇವಲ 5 ಕೆ.ಜಿ. ಅಕ್ಕಿಯ ಹಣವನ್ನು ನೀಡುವುದು ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಬಗೆದ ದ್ರೋಹ; ಉಚಿತ ಅಕ್ಕಿ ನೀಡುತ್ತಿರುವುದು ಕೇಂದ್ರ ಸರಕಾರ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ’10 ಕೆ.ಜಿ. ಅಕ್ಕಿ ಫ್ರೀ… ಬೇಕಾ ಬೇಡ್ವಾ…’ ಎಂದು ಘಂಟಾಘೋಷವಾಗಿ ಸಾರಿದ್ದ ಸಿ.ಎಂ. ಸಿದ್ದರಾಮಯ್ಯನವರು ಇದೀಗ ರಾಗ ಬದಲಿಸಿ, ಸಚಿವ ಸಂಪುಟ ಸಭೆಯ ತೀರ್ಮಾನದಂತೆ 10 ಕೆ.ಜಿ. ಅಕ್ಕಿಯ ಬದಲಿಗೆ ಕೇವಲ 5 ಕೆ.ಜಿ. ಅಕ್ಕಿಯ ಮೌಲ್ಯವನ್ನು ಪ್ರತೀ ಕೆ.ಜಿ.ಗೆ ರೂ.34ರಂತೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತೇವೆ ಎಂದಿರುವುದು ರಾಜ್ಯದ ಜನತೆಗೆ ಬಗೆದ ದ್ರೋಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಜನತೆಗೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಈ ಮೊದಲು ಘೋಷಿಸಿದಂತೆ ನಿಗದಿತ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ ಅಥವಾ ಪ್ರಸಕ್ತ ನಿರ್ಣಯದಂತೆ ಅದರ ಮೌಲ್ಯವನ್ನು ನೀಡಬೇಕಾಗಿದೆ. ಇದೀಗ ಉಚಿತ ಅಕ್ಕಿ ನೀಡುತ್ತಿರುವುದು ಕೇಂದ್ರ ಸರಕಾರ ಮಾತ್ರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಒತ್ತಾಸೆಯಿಂದ 5 ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಜನತೆಗೆ ನೀಡಿದ ವಾಗ್ದಾನದಂತೆ ಯಾವುದೇ ಗ್ಯಾರಂಟಿಗಳನ್ನು ಯಥಾವತ್ತಾಗಿ 24 ಗಂಟೆಗಳೊಳಗೆ ಜಾರಿಗೊಳಿಸದೆ ಇದೀಗ ವಿವಿಧ ಷರತ್ತುಗಳ ಸಹಿತ ಬಣ್ಣ ಬದಲಿಸಿ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ಈ ಸರಕಾರ ಮಾತು ತಪ್ಪಿದ ‘ವಚನ ಭ್ರಷ್ಟ ಸರಕಾರ’ ಎಂದು ಅವರು ತಿಳಿಸಿದ್ದಾರೆ.

ಉಚಿತ ಅಕ್ಕಿ ಗ್ಯಾರಂಟಿಯನ್ನು ಉದ್ದೇಶಪೂರ್ವಕವಾಗಿಯೇ ರಾಜಕೀಯಗೊಳಿಸಿರುವ ಕಾಂಗ್ರೆಸ್, ಕೇಂದ್ರ ಸರಕಾರವನ್ನು ಅನಾವಶ್ಯಕವಾಗಿ ಈ ವಿಚಾರದಲ್ಲಿ ಎಳೆದುತಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್ಸಿನ ಷಡ್ಯoತ್ರದ ಭಾಗವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅನ್ನ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೋನ ಸಂಕಷ್ಟದ ಕಾಲದಿಂದ ದೇಶದ 80 ಕೋಟಿ ಜನತೆಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಿಕೊಂಡು ಬಂದಿದೆ. ಪ್ರಸಕ್ತ ಕೇಂದ್ರ ಸರಕಾರ ರಾಜ್ಯದ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆ.ಜಿ. ಉಚಿತ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ತಲಾ 35 ಕೆ.ಜಿ. ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ವಿತರಿಸುತ್ತಿದ್ದು, ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ತಿಂಗಳು ತಲಾ 5 ಕೆ.ಜಿ. ಅಕ್ಕಿಯನ್ನು ರಾಜ್ಯದಲ್ಲಿ ಉಚಿತವಾಗಿ ವಿತರಿಸುತ್ತಿರುವುದನ್ನು ಒಪ್ಪಿಕೊಂಡಿರುವುದು ಜಗಜ್ಜಾಹೀರಾಗಿದೆ.

ಎಲ್ಲಿಂದಾದರೂ ಅಕ್ಕಿಯನ್ನು ಖರೀದಿಸಿ, ಉಚಿತ ಅಕ್ಕಿ ವಿತರಣೆ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ ಎಂದು ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಗಿದೆ. ಆದರೂ ರಾಜ್ಯ ಬಿಜೆಪಿಯ ಸಲಹೆ ಮತ್ತು ಹೋರಾಟದ ಎಚ್ಚರಿಕೆಯನ್ನು ಪರಿಗಣಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಅಕ್ಕಿಯ ಬದಲಿಗೆ ನಗದು ನೀಡಲು ನಿರ್ಧರಿಸಿದರೂ, ಪ್ರಸಕ್ತ ಕೇವಲ ತಲಾ 5 ಕೆ.ಜಿ. ಅಕ್ಕಿಯ ಮೌಲ್ಯ ರೂ.170ರಂತೆ ನೀಡಲು ಮುಂದಾಗಿರುವುದು ವಿಪರ್ಯಾಸ. ಕಾಂಗ್ರೆಸ್ ಗ್ಯಾರಂಟಿ ಕಾರ್ಡಿನಲ್ಲಿ ಘೋಷಿಸಿದಂತೆ, ರಾಜ್ಯ ಸರಕಾರ ತಲಾ 10 ಕೆ.ಜಿ. ಅಕ್ಕಿಯ ಮೌಲ್ಯ ರೂ.340ನ್ನು ವಿತರಿಸುವುದು ನ್ಯಾಯಸಮ್ಮತವಾಗಿದೆ. ವಾಸ್ತವಿಕವಾಗಿ ಜನತೆ ತಮಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಪ್ರತೀ 1 ಕೆ.ಜಿ.ಗೆ ಪ್ರಚಲಿತ ದರ ರೂ.50ರಂತೆ ಪಾವತಿಸಿ ಮಾರುಕಟ್ಟೆಯಿಂದ ಖರೀದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.34ರಂತೆ ನೀಡುವ ರಾಜ್ಯ ಸರಕಾರದ ನಿರ್ಣಯದಿಂದ ಜನತೆಗೆ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.16ರಂತೆ ನಷ್ಟವೆನಿಸುವುದು ವಾಸ್ತವ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚವನ್ನು ಭರಿಸಿ ರಾಜ್ಯಕ್ಕೆ ವಿತರಿಸಿದಾಗ, ಕೇವಲ ರೂ.3ನ್ನು ಭರಿಸಿ, ಕೇಂದ್ರದ ಪಾಲಿನ ವಿಚಾರವನ್ನು ತಿಳಿಸದೆ, ಅನ್ನಭಾಗ್ಯದ ಬಗ್ಗೆ ಭರ್ಜರಿ ಪುಕ್ಕಟೆ ಪ್ರಚಾರ ಪಡೆದಿದ್ದ ಸಿ.ಎಂ. ಸಿದ್ದರಾಮಯ್ಯನವರು, ಅದೇ ಮಾದರಿಯನ್ನು ಮುಂದುವರಿಸುವ ಇರಾದೆಯಿಂದ ಪೂರ್ವಾಪರ ಆಲೋಚಿಸದೆ, ಕೇಂದ್ರದ ಸಲಹೆಯನ್ನೂ ಪಡೆಯದೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆಯ ಗ್ಯಾರಂಟಿಯನ್ನು ಘೋಷಿಸಿರುವುದೇ ಈ ಎಲ್ಲಾ ಆವಾಂತರಗಳಿಗೆ ಮೂಲ ಕಾರಣವಾಗಿದೆ.

ಬಡವರ ಮೇಲಿನ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದಿಂದ ರಾಜ್ಯದ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ತಲಾ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯಕ್ಕೆ ನೀಡುತ್ತಿದ್ದು, ಕೇವಲ ಅಧಿಕಾರದ ಲಾಲಸೆಯಿಂದ ದೂರದರ್ಶಿತ್ವದ ನಿರ್ದಿಷ್ಟ ಯೋಜನೆಗಳಿಲ್ಲದೆ ಬೇಕಾಬಿಟ್ಟಿಯಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ಯಾವುದನ್ನೂ ಯಥಾವತ್ತಾಗಿ ಜಾರಿಗೊಳಿಸದೆ ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ರಾಜ್ಯದ ಜನತೆಯ ಬವಣೆಗೆ ಕಾರಣವಾಗಿದೆ. ಕೇವಲ ಉಚಿತ ಗ್ಯಾರಂಟಿಗಳ ಗೊಂದಲದಲ್ಲೇ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಬಣ್ಣ ಬದಲಿಸುವ ಗೋಸುಂಬೆತನದ ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಛೇರಿಯಲ್ಲಿ, “ಮೇರಾ ಬೂತ್ ಸಬ್ಸೇ ಮಜ್ಬೂತ್” ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿಯವರ ಸಂವಾದದ ನೇರ ಪ್ರಸಾರ ವೀಕ್ಷಣೆ



ಉಡುಪಿ: “ಮೇರಾ ಬೂತ್ ಸಬ್ಸೇ ಮಜ್ಬೂತ್” (ನನ್ನ ಬೂತ್ ಎಲ್ಲಕ್ಕಿಂತಲೂ ಬಲಿಷ್ಠ) ಅಭಿಯಾನದಡಿ ಜೂ.27ರಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಲ್ಲ ರಾಜ್ಯಗಳ ಬಿಜೆಪಿ ಕಾರ್ಯಕರ್ತ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ‘ಕಾರ್ಯಕರ್ತರೊಂದಿಗೆ ಸಂವಾದ’ದ ನೇರ ಪ್ರಸಾರವನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಕೋಶಾಧಿಕಾರಿ ಸಂತೋಷ್ ಆಚಾರ್ಯ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಪ್ರಮುಖರಾದ ಪ್ರದೀಪ್ ರಾವ್ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿಯ ನೂತನ ಶಾಸಕ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣರವರಿಗೆ ಜಿಲ್ಲಾ ಒಬಿಸಿ ಮೋರ್ಚಾ ವತಿಯಿಂದ ಸನ್ಮಾನ



ಉಡುಪಿ: ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸಕ್ತ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಜೊತೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹೆಚ್ಚಿನ ಅಂತರದ ಮತಗಳಿಂದ ಗೆಲುವು ಸಾಧಿಸಿರುವ ಯಶ್ಪಾಲ್ ಎ. ಸುವರ್ಣರವರನ್ನು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಕಡಿಯಾಳಿ, ಅರುಣ್ ಕುಮಾರ್ ಬಾಣ, ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ಕುಮಾರ್ ಸಂಪಿಗೆನಗರ, ಲೀಲಾ ಆರ್. ಅಮೀನ್, ಮನೋಜ್ ಕರ್ಕೇರಾ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಅರ್. ನಾಯಕ್, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ರಾಕೇಶ್ ಜೋಗಿ, ಜ್ಯೋತಿ ಹರೀಶ್, ಆನಂದ ಕುಲಾಲ್, ಕೋಶಾಧಿಕಾರಿ ಸತೀಶ್ ಪೂಜಾರಿ, ಕಾರ್ಯಕಾರಿಣಿ ಸದಸ್ಯರಾದ ಸಹನಾ ವಿಶ್ವನಾಥ್ ಸಂತೋಷ್ ಭಂಡಾರಿ, ಶ್ರೀಧರ ಅಮೀನ್, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಉಡುಪಿಯ ವಿನಯ್ ಕುಮಾರ್ ಕಲ್ಮಾಡಿ, ಕಾರ್ಕಳದ ರಮಾನಂದ ಪೂಜಾರಿ, ಕುಂದಾಪುರದ ಸತೀಶ್ ಭಾರಿಕೆರೆ ಹಾಗೂ ಪಕ್ಷದ ಪ್ರಮುಖರು, ಒಬಿಸಿ ಮೋರ್ಚಾ ಮಂಡಲಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿಗೆ ನೇತೃತ್ವ ವಹಿಸಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರಿಗೆ ಜಿಲ್ಲಾ ಒಬಿಸಿ ಮೋರ್ಚಾ ವತಿಯಿಂದ ಸನ್ಮಾನ



ಉಡುಪಿ: ಕಳೆದ ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನಾತ್ಮಕವಾಗಿ ಸದೃಢಗೊಳಿಸುವ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತ ಪ್ರಯತ್ನದ ಮೂಲಕ ಬಿಜೆಪಿ ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯ ನೇತೃತ್ವ ವಹಿಸಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರನ್ನು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್, ಅರುಣ್ ಕುಮಾರ್ ಬಾಣ ಹಾಗೂ ಪಕ್ಷದ ಪ್ರಮುಖರು, ಜಿಲ್ಲಾ ಒಬಿಸಿ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು, ಒಬಿಸಿ ಮೋರ್ಚಾ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಶ್ಯಾಮಪ್ರಸಾದ್ ಮುಖರ್ಜಿ ಜೀವನಾದರ್ಶ ಕಾರ್ಯಕರ್ತರಿಗೆ ಪ್ರೇರಣಾದಾಯಕ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಅಖಂಡ ಭಾರತದ ಸಾರ್ವಭೌಮತೆಗೆ ವಿಶೇಷ ಒತ್ತು ನೀಡುವ ಜೊತೆಗೆ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ವಿರೋಧಿಸುತ್ತಾ ತನ್ನ ಜೀವಿತಾವಧಿಯನ್ನು ದೇಶದ ಸಮಗ್ರತೆ ಮತ್ತು ಅಖಂಡತೆಗಾಗಿ ಸಮರ್ಪಿಸಿದ ಭಾರತೀಯ ಜನಸಂಘದ ಸಂಸ್ಥಾಪಕಲ್ಲೊಬ್ಬರಾದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನಾದರ್ಶ ಬಿಜೆಪಿ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಜೂ.23ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದ ಮುಖರ್ಜಿಯವರು ಸ್ವತಂತ್ರ ಭಾರತದ ಪ್ರಥಮ ಕೈಗಾರಿಕಾ ಮಂತ್ರಿಯಾಗಿದ್ದರು. ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಿದ ಮುಖರ್ಜಿಯವರು ‘ಒಂದು ದೇಶದಲ್ಲಿ 2 ಪ್ರಧಾನಿ, 2 ಸಂವಿಧಾನ ಮತ್ತು 2 ಧ್ವಜ ಇರಲು ಸಾಧ್ಯವಿಲ್ಲ’ ಎಂಬ ತತ್ವದಡಿ ಕಾಶ್ಮೀರದ ವಿಮೋಚನೆಗೆ ಹೋರಾಡುತ್ತಾ ಹುತಾತ್ಮರಾದರು. ಅವರ ಸಂಶಯಾಸ್ಪದ ಸಾವು ಇಂದಿಗೂ ನಿಗೂಢವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸುಗೊಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಿ. ಶೆಟ್ಟಿ, ಪ್ರಮೀಳಾ ಹರೀಶ್, ಬಿಜೆಪಿ ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷೆ ವೀಣಾ ನಾಯ್ಕ್, ಪಕ್ಷದ ಪ್ರಮುಖರು ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Design a site like this with WordPress.com
Get started