ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ಪ್ರಾದೇಶಿಕ/ಜಿಲ್ಲಾ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಉಡುಪಿ ಪ್ರಗತಿ ಸೌಧದಲ್ಲಿರುವ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ(ರಿ.) ಇದರ ಉಡುಪಿ ಪ್ರಾದೇಶಿಕ ಹಾಗೂ ಜಿಲ್ಲಾ ಕಛೇರಿಯಲ್ಲಿ ಪ್ರಾದೇಶಿಕ ನಿರ್ದೇಶಕರು ಹಾಗೂ ಜಿಲ್ಲಾ ನಿರ್ದೇಶಕರ ಮಾರ್ಗದರ್ಶನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಎ.ಶಿವಕುಮಾರ್ ಅಂಬಲಪಾಡಿ ಧ್ವಜಾರೋಹಣವನ್ನು ನೆರವೇರಿಸಿ, ವೀರ ಯೋಧರು ಹಾಗೂ ಹುತಾತ್ಮರನ್ನು ನೆನೆಸಿಕೊಂಡು, ದೇಶ ನನಗಾಗಿ ಏನು ಕೊಟ್ಟಿದೆ ಎನ್ನುವುದರ ಬದಲು ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎನ್ನುವ ಚಿಂತನೆಯನ್ನು ಜಾಗೃತಗೊಳಿಸಿ ಯಾವುದಾದರೊಂದು ರೀತಿಯಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಷ್ಟ್ರಾಭಿಮಾನವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂಬ ಸಂದೇಶವನ್ನು ನೀಡಿ, ಸ್ವಾತಂತ್ರೋತ್ಸವದ ಶುಭಾಶಯವನ್ನು ತಿಳಿಸಿದರು.

ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ಶ್ರೀನಿವಾಸ ಪೂಜಾರಿ ಮಾತನಾಡಿ, 77ನೇ ಸ್ವಾತಂತ್ರೋತ್ಸವವನ್ನು ಯೋಧರ ಜೊತೆಗೆ ಆಚರಿಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಆರ್.ಎಫ್. ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ, ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿಗಳು, ಯೋಜನೆಯ ಪ್ರಾದೇಶಿಕ ಕಛೇರಿ, ಜಿಲ್ಲಾ ಕಛೇರಿ, ತಾಲೂಕು ಕಛೇರಿ, ತರಬೇತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಬಿಜೆಪಿ: 77ನೇ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ



ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಧ್ವಜಾರೋಹಣಗೈದು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹಿರಿಯರನ್ನು ಸ್ಮರಿಸಿದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಸಭೆಯನ್ನುದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಬಿ.ರವಿ ಅಮೀನ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಆತ್ರಾಡಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯರಾದ ಗಿರೀಶ್ ಎಮ್. ಅಂಚನ್, ರಜನಿ ಹೆಬ್ಬಾರ್, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಚಂದ್ರಶೇಖರ ಪ್ರಭು, ಅಕ್ಷಯ್ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಕಾರ್ಯದರ್ಶಿ ರಾಜೇಂದ್ರ ಪಂದುಬೆಟ್ಟು, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ದಿನಕರ ಪೂಜಾರಿ, ಜಯಪ್ರಕಾಶ್, ವಿನೋದ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2023-25ನೇ ಸಾಲಿನ ಅಧ್ಯಕ್ಷರಾಗಿ ಎ.ಶಿವಕುಮಾರ್ ಅಂಬಲಪಾಡಿ ಆಯ್ಕೆ


ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2023-25ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಎ.ಶಿವಕುಮಾರ್ ಅಂಬಲಪಾಡಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಉಪಾಧ್ಯಕ್ಷರಾಗಿ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್, ಕೋಶಾಧಿಕಾರಿಯಾಗಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾಗಿ ಮಹೇಂದ್ರ ಕೋಟ್ಯಾನ್ ಮತ್ತು ಅವಿನಾಶ್ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಆಡಳಿತ ಸಮಿತಿಯ ಸದಸ್ಯರಾಗಿ ಎ.ಮುದ್ದಣ್ಣ ಪೂಜಾರಿ, ಸುಧಾಕರ್ ಎ., ರಾಜೇಂದ್ರ ಪಂದುಬೆಟ್ಟು, ಭಾಸ್ಕರ ಅಂಚನ್, ಸತೀಶ್ ಪೂಜಾರಿ, ಗುರುರಾಜ್ ಪೂಜಾರಿ, ಭಾಸ್ಕರ ಕೋಟ್ಯಾನ್, ವಿನಯ್ ಕುಮಾರ್, ಚೆನ್ನಕೇಶವ, ನಿತಿನ್ ಕುಮಾರ್, ವಿನೋದ್ ಪೂಜಾರಿ, ಜನಾರ್ದನ ಪೂಜಾರಿ, ಗೋದಾವರಿ ಎಮ್. ಸುವರ್ಣ ಮತ್ತು ವಾಣಿಶ್ರೀ ಅರುಣ್ ಕುಮಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಘದ ಗೌರವ ಸದಸ್ಯರಾಗಿ ಎ.ಭಾಸ್ಕರ ಪೂಜಾರಿ, ಕೆ.ಮಂಜಪ್ಪ ಸುವರ್ಣ, ಎ.ಮಾಧವ ಪೂಜಾರಿ, ಮಹಾಬಲ ಪೂಜಾರಿ, ಎ.ಸಂಜೀವ ಪೂಜಾರಿ; ಭಜನಾ ಸಂಚಾಲಕರಾಗಿ ಕೆ.ಮಂಜಪ್ಪ ಸುವರ್ಣ, ಭಜನಾ ಸಹ ಸಂಚಾಲಕರಾಗಿ ಎ.ಮಾಧವ ಪೂಜಾರಿ ಮತ್ತು ಶಂಕರ ಪೂಜಾರಿ; ಅರ್ಚಕರಾಗಿ ಅವಿನಾಶ್ ಪೂಜಾರಿ, ಜೀವನ್ ಮತ್ತು ಅದಿತ್; ಗೌರವ ಲೆಕ್ಕ ಪರಿಶೋಧಕರಾಗಿ ಗಣೇಶ್ ಹೆಬ್ಬಾರ್ ಸಿ.ಎ., ಅಂಬಲಪಾಡಿ ಇವರು ಮರು ಆಯ್ಕೆಯಾಗಿದ್ದಾರೆ.

ಆ.13ರಂದು ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2023-25ನೇ ಸಾಲಿನ ನೂತನ ಆಡಳಿತ ಸಮಿತಿಯ ಆಯ್ಕೆ ನಡೆದಿದೆ.

ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕುಯಿಲಾಡಿ ಕರೆ


ಉಡುಪಿ: 2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಕ್ರಿಯೆ ದೇಶದಾದ್ಯಂತ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷ ನೀಡಿರುವ ಪ್ರಮುಖ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಮೂಲಕ ಮಗದೊಮ್ಮೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚಿನ ಅಂತರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಮಹತ್ಕಾರ್ಯ ಆಗಬೇಕಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯ ಚಿಂತನೆ ಇಲ್ಲದ ವಿಪಕ್ಷಗಳು ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲೇಬಾರದೆಂಬ ಒಂದೇ ಅಜೆಂಡಾವನ್ನು ಇಟ್ಟುಕೊಂಡು ಹತಾಶೆಯ ಹೋರಾಟವನ್ನು ನಡೆಸುತ್ತಿವೆ. ಪ್ರತಿಪಕ್ಷಗಳ ಈ ನಡೆಯನ್ನು ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ, ತಮ್ಮ ಬೂತ್, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಯಾವ ರೀತಿಯ ಸಂಘಟನಾತ್ಮಕ ಕ್ರಮಗಳನ್ನು ಕೈಗೊಂಡು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಬಹುದು ಎಂಬ ಬಗ್ಗೆ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗುವ ಮೂಲಕ ಮಗದೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ಅಳಿಲು ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸುವ ಮೂಲಕ ಮೀಸಲಾತಿಯಡಿ ಪಕ್ಷದ ಬೆಂಬಲಿತ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಆ.14ರಂದು ದೇಶ ವಿಭಜನೆಯಾದ ಕ್ಷಣವನ್ನು ಸ್ಮರಿಸಿಕೊಂಡು ಅದಕ್ಕಾಗಿ ಪ್ರಾಣತೆತ್ತವರನ್ನು ನೆನೆದು ಎಲ್ಲ ಮಂಡಲಗಳಲ್ಲಿ ದೇಶ ವಿಭಜನಾ ಕರಾಳ ದಿನವನ್ನು ಆಚರಿಸುವ ಜೊತೆಗೆ ಸಾಮಾಜಿಕ ಜಾಲತಾಣ ವಿಭಾಗ ಸಕ್ರಿಯಗೊಳಿಸುವ ಶಂಖನಾದ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಹಿತ ಸಾಮಾಜಿಕ ಜಾಲತಾಣ ಸಕ್ರಿಯಗೊಳಿಸುವ ಶಂಕನಾದ ಅಭಿಯಾನ, ವ್ಯಾಪಾರಿಗಳ/ಪ್ರಬುದ್ಧರ ಸಮ್ಮೇಳನ, ಹಿರಿಯ ಕಾರ್ಯಕರ್ತರ ಸಭೆ, ವೃತ್ತಿಪರರ ಸಮಾವೇಶ, ಮೋರ್ಚಾಗಳ ಸಂಯುಕ್ತ ಸಭೆ, ಕೀ ವೋಟರ್ಸ್ ಸಂಪರ್ಕ ಅಭಿಯಾನ, ಕಾರ್ಯಕರ್ತರ ಅನೌಪಚಾರಿಕ ಸಭೆ ಮತ್ತು ಮನೆ ಮನೆ ಬೇಟಿ ಮೂಲಕ ಕೇಂದ್ರ ಸರಕಾರದ ಸಾಧನೆಗಳ ಕರಪತ್ರ ವಿತರಣೆ ಇತ್ಯಾದಿ ಪ್ರಮುಖ ಕಾರ್ಯ ಚಟುವಟಿಕೆಗಳನ್ನು ಆದ್ಯತೆ ಮೇರೆಗೆ ಕಾರ್ಯಗತಗೊಳಿಸುವ ಮೂಲಕ ಮಗದೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಭರ್ಜರಿ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷ ನೀಡುವ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಸಮರ್ಪಕವಾಗಿ ಕಾರ್ಯಗತಗೊಳಿಸುವ ಹೆಗ್ಗಳಿಕೆಯ ಜೊತೆಗೆ ಕಳೆದ ಚುನಾವಣೆಯಲ್ಲಿ ಪ್ರತಿಶತ ನೂರರ ಸಾಧನೆಗೈದ ದಾಖಲೆ ಉಡುಪಿ ಜಿಲ್ಲೆಗಿದೆ. ದೊಡ್ಡ ಯೋಜನೆ ಹಾಕಿಕೊಂಡಾಗ ಒಂದೊಂದೇ ಹೆಜ್ಜೆ ಮೂಲಕ ಗುರಿ ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಮತ್ತು ಸಮಸ್ತ ಕಾರ್ಯಕರ್ತರ ಶ್ರಮ ಅಭಿನಂದನೀಯ. ಇದೇ ಹುಮ್ಮಸ್ಸಿನಿಂದ ಲೋಕಸಭೆ ಸಹಿತ ಎಲ್ಲ ಚುನಾವಣೆಗಳನ್ನು ಸಂಘಟನಾ ಸಾಮರ್ಥ್ಯದಿಂದ ಎದುರಿಸಿ, ಸಂಘಟಿತ ಪ್ರಯತ್ನದ ಮೂಲಕ ಗೆಲುವು ಸಾಧಿಸಲು ಎಲ್ಲರೂ ಸಜ್ಜಾಗೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಆ.13: ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ, ಬಿಲ್ಲವ ಮಹಿಳಾ ಘಟಕ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ‘ಆಟಿಡೊಂಜಿ ಕೂಟ’





ಉಡುಪಿ: ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ, ಬಿಲ್ಲವ ಮಹಿಳಾ ಘಟಕ ಅಂಬಲಪಾಡಿ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಇದರ ಸಹಯೋಗದಲ್ಲಿ ಆ.13 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ‘ಆಟಿಡೊಂಜಿ ಕೂಟ’ (ಆಟಿ ತಿಂಗಳ ವೈಶಿಷ್ಟ್ಯ ಮತ್ತು ಆಹಾರ ಪದ್ಧತಿಯ ಪ್ರಾತ್ಯಕ್ಷಿಕೆ) ಕಾರ್ಯಕ್ರಮವು ಸಂಘದ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಲಿದೆ.

ಆಟಿ ತಿಂಗಳ ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿ, ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ ಹಾಗೂ ಆಟಿ ತಿಂಗಳ ವೈವಿಧ್ಯಮಯ ಖಾದ್ಯಗಳ ಪ್ರಾತ್ಯಕ್ಷಿಕೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ಜರಗಲಿವೆ ಎಂದು ಸಂಘದ ಪ್ರಭಾರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಜಿಲ್ಲಾ ಎಸ್ಸಿ ಮತ್ತು ಎಸ್ಟಿ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ



ಉಡುಪಿ: ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ಮತ್ತು ಎಸ್ಟಿ ಮೋರ್ಚಾ ವತಿಯಿಂದ ಉಡುಪಿ-ಅಜ್ಜರಕಾಡು ಸೈನಿಕರ ಹುತಾತ್ಮ ಭವನದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿಯ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರ ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಗ್ಯಾರಂಟಿಗಳಿಗೆ ವರ್ಗಾಯಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ರಾಜ್ಯ ಸರಕಾರ ತಕ್ಷಣ ನಿಗದಿತ 11,000 ಕೋಟಿ ರೂಪಾಯಿ ಮೊತ್ತವನ್ನು ದಲಿತ ಸಮುದಾಯದ ಅಭಿವೃದ್ಧಿಗಾಗಿ ಮರು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.

ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರಕಾರ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ. ಅಧಿಕಾರ ಪಡೆಯಲೇಬೇಕೆಂಬ ಗೀಳಿನಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಉಚಿತಗಳ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಸರಕಾರ ರಾಜ್ಯವನ್ನು ದಿವಾಳಿಯ ಅಂಚಿಗೆ ತಂದಿಡುವ ಜೊತೆಗೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಎಲ್ಲ ವರ್ಗಗಳ ಗ್ಯಾರಂಟಿ ಪೂರೈಕೆಗೆ ವಿನಿಯೋಗಿಸುವ ಹುನ್ನಾರದಲ್ಲಿ ತೊಡಗಿರುವುದು ಸಾಮಾಜಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ಆನಂದ ಮಟಪಾಡಿ, ನಾರಾಯಣ ಗುಜ್ಜಾಡಿ, ಪ್ರ.ಕಾರ್ಯದರ್ಶಿಗಳಾದ ಸದಾನಂದ ಕೈಪುಂಜಾಲು, ಕೃಷ್ಣಮೂರ್ತಿ ಡಿ.ಬಿ., ಜಿಲ್ಲಾ ಎಸ್ಟಿ ಮೋರ್ಚಾ ಪ್ರ.ಕಾರ್ಯದರ್ಶಿ ಪ್ರಭಾಕರ ವಿ., ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಒಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿ ಅರುಣ್ ಕುಮಾರ್ ಬಾಣ, ಜಿಲ್ಲಾ ಸಾಮಾಜಿಕ ಜಾಲತಾಣದ ಚಂದ್ರಶೇಖರ್ ಪ್ರಭು, ಬಿಜೆಪಿ ಕುಂದಾಪುರ ಮಂಡಲಾಧ್ಯಕ್ಷ ಶಂಕರ ಅಂಕದಕಟ್ಟೆ, ಕಾಪು ಮಂಡಲ ಪ್ರ.ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಉಡುಪಿ ಮಂಡಲ ಪ್ರ.ಕಾರ್ಯದರ್ಶಿ ದಿನೇಶ್ ಅಮೀನ್, ಎಸ್ಸಿ ಮೋರ್ಚಾ ಉಡುಪಿ ನಗರಾಧ್ಯಕ್ಷ ಕಿರಣ್, ಪ್ರ.ಕಾರ್ಯದರ್ಶಿ ರಾಜೇಂದ್ರ, ಬೈಂದೂರು ಅಧ್ಯಕ್ಷ ಚಂದ್ರ ಪಂಚವಟಿ, ಕಾರ್ಕಳ ಅಧ್ಯಕ್ಷ ಅಣ್ಣಿ, ಕಾಪು ಅಧ್ಯಕ್ಷ ನಾಗೇಂದ್ರ, ಪ್ರ.ಕಾರ್ಯದರ್ಶಿಗಳಾದ ಪಾರ್ಥಸಾರಥಿ, ಶ್ರೀನಿವಾಸ್ ಮಲ್ಲಾರ್, ಕುಂದಾಪುರ ಪ್ರ.ಕಾರ್ಯದರ್ಶಿ ಮಹೇಶ್ ಎಮ್.ಬಿ. ಹಾಗೂ ಎಸ್ಸಿ ಮೋರ್ಚಾ ಮತ್ತು ಎಸ್ಟಿ ಮೋರ್ಚಾ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಲೆವೂರು:ಅಗ್ನಿಪಥ್ ಮೂಲಕ ಸೈನ್ಯಕ್ಕೆ ಆಯ್ಕೆಯಾಗಿ ತರಬೇತಿ ಮುಗಿಸಿ ಬಂದ ಚಿದಾನಂದ್ ಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ

ಉಡುಪಿ: ಅಗ್ನಿಪಥ್ ಮೂಲಕ ಸೈನ್ಯಕ್ಕೆ ಸೇರ್ಪಡೆಯಾಗಿ ತಾಯಿ‌ ಭಾರತಿಯ‌ ಸೇವೆ ಮಾಡಲು ಅಣಿಯಾಗಿ‌ ತರಭೇತಿ ಮುಗಿಸಿ ಮುಂದೆ ಕಾಶ್ಮೀರಕ್ಕೆ ಕರ್ತವ್ಯ ನಿರ್ವಹಿಸಲಿರುವ ಅಲೆವೂರಿನ ಹೆಮ್ಮೆಯ ಕುವರ ಚಿದಾನಂದ ಇವರನ್ನು ಅತ್ಯಂತ ಗೌರವಯುತವಾಗಿ‌ ಸ್ವಾಗತಿಸಲಾಯಿತು. ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಹಾಗೂ‌ ಕೊರಂಗ್ರಪಾಡಿ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಸೇರಿಗಾರ್ ರವರು ಹಾರಾರ್ಪಣೆ ಮಾಡಿ ಚಾಲನೆ ಕೊಟ್ಟರೆ ಮಾತೆಯಂದಿರು ಆರತಿ ಬೆಳಗಿಸಿ ಶುಭಾಹಾರೈಸಿದರು. ಬಳಿಕ ತೆರೆದ ವಾಹನದಲ್ಲಿ ರಾಮಪುರದಿಂದ ಗುಡ್ಡೆಂಗಡಿ ಮೂಲಕ ರಾಮಪುರ ಬಂದು ದುರ್ಗಾನಗರದಲ್ಲಿ ಸಮಾರೋಪಗೈದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರುಗಳಾದ ಆಶಿಶ್ ಶೆಟ್ಟಿ, ಪುಷ್ಪಲತಾ ಮಾರ್ಪಳ್ಳಿ ಶಾಂತ ನಾಯ್ಕ್, ರಂಜಿತಾ‌ ಸುವರ್ಣ , ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೇಬಿ ರಾಜೇಶ್, ಸ್ಥಳೀಯ ಮುಖಂಡರುಗಳಾದ ರಾಜೇಶ್ ಸೇರಿಗಾರ್, ಸುನಿಲ್ ನಾಯ್ಕ್, ಶೇಖರ್ ನಾಯ್ಕ್, ಚೌಡಪ್ಪ, ಹನುಮಂತ ಡೊಳ್ಳಿನ್, ಹನುಮಂತ ಗೋಡಿ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಆಚಾರ್ಯ, ಅಮಿತ್ ಶೆಟ್ಟಿ ಹಾಗೂ ಶ್ರೀದೀಪ್ ಈ ಸುಂದರ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜಿಸಿದವರು.

ರಾಜ್ಯವನ್ನು ದಿವಾಳಿಯಂಚಿಗೆ ದೂಡಲು ಹೊರಟ ನಕಲಿ ಗ್ಯಾರಂಟಿಗಳ ಭ್ರಷ್ಟ ಕಾಂಗ್ರೆಸ್ ಸರಕಾರದ ಲಂಚಕೋರ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ನೀಡಲಿ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಕಾಂಗ್ರೆಸ್ ಪಕ್ಷದ ನಕಲಿ ಗ್ಯಾರಂಟಿಗಳ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸಿ, ರಾಜ್ಯವನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯಲು ಹರಸಾಹಸ ಪಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಲಂಚಾವತಾರ ಮೇಳೈಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸರಕಾರ ತಕ್ಷಣ ಲಂಚಕೋರ ಕೃಷಿ ಸಚಿವ ಚೆಲುವರಾಯಸ್ವಾಮಿಯವರ ರಾಜೀನಾಮೆಯನ್ನು ಪಡೆದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ತುಂಬಿದ್ದ ಬೊಕ್ಕಸದ ಹಣದ ಜೊತೆಗೆ ದಲಿತರ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ರೂ.11,000 ಕೋಟಿ ಮೊತ್ತವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಹಣ ಇಲ್ಲ ಎನ್ನುವ ಮೂಲಕ ರಾಜ್ಯವನ್ನು ಪರೋಕ್ಷವಾಗಿ ದಿವಾಳಿಯ ಅಂಚಿಗೆ ದೂಡಿರುವ ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಅಡ್ದ ದಾರಿ ಹಿಡಿದಿರುವಂತೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ವರ್ಗಾವಣೆ ಕಮಿಷನ್ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಪ್ರಾಯಶಃ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪತ್ರಿಕಾ ಜಾಹೀರಾತಿನಲ್ಲಿ ನೀಡಿದ್ದ ಸ್ವಯಂ ಘೋಷಿತ ಕಮಿಷನ್ ದರದ ಪಟ್ಟಿಗೆ ರಾಜ್ಯ ಸರಕಾರ ಇದೀಗ ಚಾಲನೆ ನೀಡಿದಂತಿದೆ. ಇದಕ್ಕೆ ಪೂರಕವಾಗಿ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದ ಕೃಷಿ ಸಚಿವ ಚೆಲುವರಾಯಸ್ವಾಮಿ 6ರಿಂದ 8 ಲಕ್ಷ ರೂಪಾಯಿಗಳ ಲಂಚದ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ 7 ಮಂದಿ ಜಂಟಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದು ರಾಜ್ಯ ಕಾಂಗ್ರೆಸ್ ಸರಕಾರ ರಾಜಾರೋಷವಾಗಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಲಂಚದ ಅನಿಷ್ಠ ಪದ್ಧತಿಯನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕುಟುಂಬದೊಂದಿಗೆ ವಿಷ ಕುಡಿಯುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸದ್ರಿ ಲಂಚ ಪ್ರಕರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದು ಸ್ವಾಗತಾರ್ಹ.

ನಯ ವಂಚಕ ಭ್ರಷ್ಟ ಕಾಂಗ್ರೆಸ್ ಪಕ್ಷದ ಗೋಲ್ ಮಾಲ್ ಗ್ಯಾರಂಟಿಗಳನ್ನು ತಾಕತ್ತಿದ್ದರೆ ಕೇಂದ್ರ ಸರಕಾರ ದೇಶದಾದ್ಯಂತ ಜಾರಿ ಮಾಡಲಿ ಎಂದು ಬೊಗಳೆ ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೇ ಲಂಚಾವತಾರದಲ್ಲಿ ಮುಳುಗಿರುವುದು ಕಾಣದೇ ಇರುವುದು ವಿಪರ್ಯಾಸ. ಮುಖ್ಯಮಂತ್ರಿಗಳು ತಾಕತ್ತಿದ್ದರೆ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ದೈರ್ಯ ತೋರಲಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.

ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ : ಕೃಷಿ ಮತ್ತು ಹೈನುಗಾರಿಕೆ ಮಾಹಿತಿ ಕಾರ್ಯಾಗಾರ



ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ಮಟ್ಟದ ಉಜ್ವಲ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾಹಿತಿ ಕಾರ್ಯಗಾರವು ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿತು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಮತ್ತು ಆತ್ಮ ಅನುಷ್ಠಾನ ಸಮಿತಿಯ ತಾಲೂಕು ಸಂಯೋಜಕಿ ಸಂಜನಾ ಶೆಟ್ಟಿಯವರು ಹಡಿಲು ಭೂಮಿ ಕೃಷಿ ಹಾಗೂ ಕೃಷಿ ಇಲಾಖೆಯಿಂದ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಉದಯ ಶೆಟ್ಟಿಯವರು ಹೈನುಗಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಪ್ರಭಾರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕೃಷಿ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ನೀಡಿರುವ ಉಪಯುಕ್ತ ಮಾಹಿತಿಯನ್ನು ಒಕ್ಕೂಟದ ಇತರ ಸದಸ್ಯರೊಂದಿಗೆ ಹಂಚಿಕೊಂಡು, ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆಯಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾ.ಪಂ. ಮಟ್ಟದ ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಹಾಗೂ ಕೃಷಿ ಸಖಿ ಸವಿತಾ ಸಂತೋಷ್, ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಉಜ್ವಲ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಗೀತಾ ಹರೀಶ್ ಪಾಲನ್, ಎಮ್ಬಿಕೆ ಸುಪ್ರಿಯಾ, ಎಲ್ಸಿಆರ್ಪಿ ಇಂದಿರಾ, ಪುಷ್ಪಲತಾ, ಶಮಿತಾ, ಕೃಷಿ ಉದ್ಯೋಗ ಸಖಿ ವಾಣಿಶ್ರೀ ಅರುಣ್, ಪಶು ಸಖಿ ಪ್ರಮೀಳಾ ಶಶಿಕಾಂತ್ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದವರ ಮೇಲೆ ಪೊಲೀಸ್ ಕೇಸ್ ದಾಖಲಿಸಲು ತೋರಿದ ಆಸಕ್ತಿ ಉಡುಪಿ ಪ್ರಕರಣದ ತನಿಖೆಯ ಬಗ್ಗೆ ಯಾಕಿಲ್ಲ? : ಕುಯಿಲಾಡಿಶರಣ್ ಪಂಪ್ವೆಲ್, ದಿನೇಶ್ ಮೆಂಡನ್ ಮತ್ತು ವೀಣಾ ಎಸ್. ಶೆಟ್ಟಿ ಯವರ ಮೇಲೆ ಸುಮೋಟೋ ಕೇಸ್ ದಾಖಲು: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ



ಉಡುಪಿ: ದೇಶದಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿರುವ ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳನ್ನು ಉದ್ದೇಶಿಸಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಹಾಗೂ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿಯವರ ಮೇಲೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಕೇಸ್ ದಾಖಲಿಸಲು ಪೊಲೀಸರು ತೋರಿರುವ ಆಸಕ್ತಿಯನ್ನು ಉಡುಪಿಯ ಗಂಭೀರ ಪ್ರಕರಣದ ತನಿಖೆಯ ಬಗ್ಗೆ ಯಾಕೆ ತೋರಿಸುತ್ತಿಲ್ಲ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಉಡುಪಿಯ ವಿವಾದಿತ ವೀಡಿಯೋ ಪ್ರಕರಣ ನಡೆದ 8 ದಿನಗಳ ಬಳಿಕವಷ್ಟೇ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿದೆ. ಈ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಯಾವುದೇ ವಿಶ್ವಾಸವಿಲ್ಲ. ಈ ಸರಕಾರ ಒಂದೇ ವರ್ಗದ ಒಲೈಕೆಗೆಗಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿದೆ. ಆದರೆ ಹಿಂದೂ ಸಮುದಾಯದ ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಲು ಮೀನ ಮೇಷ ಎಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯ ವೀಡಿಯೋ ಪ್ರಕರಣದ ಹಿಂದೆ ಬ್ಲಾಕ್ಮೇಲ್ ಜಿಹಾದ್ ನಡೆಸುವ ಸಂಚು ಇರಬಹುದೆಂಬ ಶಂಕೆ ಇದೆ. ಪೊಲೀಸ್ ಇಲಾಖೆ ಇಂತಹ ಸಮಾಜ ಕಂಟಕ ಜಿಹಾದಿ ಮನಸ್ಥಿತಿಯ ವಿದ್ಯಾರ್ಥಿನಿಯರ ಕುಕೃತ್ಯವನ್ನು ಭೇದಿಸಲು ತಂತ್ರ ರೂಪಿಸುವ ಬದಲು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಮೇಲೆ ಸುಮೋಟೋ ಪ್ರಕರಣ ದಾಖಲಿಸುವ ಮೂಲಕ ತನಿಖೆಯ ದಾರಿ ತಪ್ಪಿಸುವ ಹುನ್ನಾರದಲ್ಲಿ ತೊಡಗಿರುವುದು ಖಂಡನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started