ಸೆ.17ರಿಂದ ಅ.2 : ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಸೇವಾ ಪಾಕ್ಷಿಕ ಅಭಿಯಾನ’



ಉಡುಪಿ: ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯಿಂದ ಮೊದಲ್ಗೊಂಡು ಅ.2 ಗಾಂಧಿ ಜಯಂತಿ ಆಚರಣೆಯ ವರೆಗೆ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಸೇವಾ ಪಾಕ್ಷಿಕ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ನಿಟ್ಟಿನಲ್ಲಿ ನಡೆಯುವ ನಡೆಯುವ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಅಭಿಯಾನ, ಆಯುಷ್ಮಾನ್ ಭವ ಕಾರ್ಯಕ್ರಮಗಳ ಸಹಿತ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ಸೆ.25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮದಿನ ಹಾಗೂ ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಪ್ರತೀ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಆಚರಿಸಲಾಗುವುದು ಎಂದರು.

ಸೆ.16ರ ಮಧ್ಯಾಹ್ನ 3.30ಕ್ಕೆ ಜಿಲ್ಲಾ ಕಛೇರಿಯಲ್ಲಿ ನಡೆಯುವ ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡ ಸಿ.ಟಿ. ರವಿ ಭಾಗವಹಿಸಲಿದ್ದಾರೆ. ಸೆ.17ರ ಸಂಜೆ 5.30ಕ್ಕೆ ಜಿಲ್ಲಾ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯ ಪ್ರದರ್ಶಿನಿ ಉದ್ಘಾಟನೆಗೊಳ್ಳಲಿದೆ. ಸೆ.26, 27 ಮತ್ತು 28ರಂದು ಜಿಲ್ಲೆಯ ಎಲ್ಲ 6 ಮಂಡಲಗಳ 265 ಶಕ್ತಿ ಕೇಂದ್ರಗಳಲ್ಲಿ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೂತ್ ಸಶಸ್ತೀಕರಣ ಸಭೆಗಳು ನಡೆಯಲಿವೆ. ಮತದಾರ ಪಟ್ಟಿ ಪರಿಷ್ಕರಣೆ, ಬಿಎಲ್ಎ-2 ನೇಮಕ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಪರಿಷ್ಕರಣೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ನನ್ನ ಮಣ್ಣು ನನ್ನ ದೇಶ ಮುಂತಾದ ಕಾರ್ಯಕ್ರಮಗಳ ಜೊತೆಗೆ ಸೇವಾ ಪಾಕ್ಷಿಕ ಅಭಿಯಾನವನ್ನು ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ವಿವಿಧ ಕಾರ್ಯಕ್ರಮಗಳ ಜವಾಬ್ದಾರಿ ನಿರ್ವಹಣೆಯ ತಂಡಗಳ ವಿವರಗಳನ್ನು ನೀಡಿ ಮಾತನಾಡಿ, ಕಳೆದ 8 ವರ್ಷಗಳಿಂದ ಸೇವಾ ಪಾಕ್ಷಿಕ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದು ಬಂದಿದೆ. ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕ್ರಾಂತಿಕಾರಿ ಹೆಜ್ಜೆಗಳೊಂದಿಗೆ ಹೆಚ್ಚಿನ ಒತ್ತನ್ನು ನೀಡಿದೆ. ನೂರಾರು ಜನಪರ ಯೋಜನೆಗಳ ಸಹಿತ ವಿಶ್ವ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹೆಚ್ಚಿಸಿರುವ ಪ್ರಧಾನಿ ಮೋದಿ ಆಡಳಿತ ವೈಖರಿ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ. ಈ ನಿಟ್ಟಿನಲ್ಲಿ ಸೆ.17ರಿಂದ ಅ.2ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಸವಿತಾ ಎಸ್. ಕೋಟ್ಯಾನ್, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸನಾತನ ಧರ್ಮದ ಬಗ್ಗೆ ಕೀಳಾಗಿ ವರ್ತಿಸುವ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ: ಕುಯಿಲಾಡಿ ಆಕ್ರೋಶ



ಉಡುಪಿ: ‘ಸನಾತನ ಧರ್ಮ ನಿರ್ಮೂಲನೆಗಾಗಿಯೇ ಐಎನ್ಡಿಐಎ ಮೈತ್ರಿಕೂಟ’ ಎಂದಿರುವ ತಮಿಳುನಾಡು ಸಚಿವ ಪೊನ್ಮುಡಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ದಿನಕ್ಕೊಂದು ರೀತಿಯ ವಿಲಕ್ಷಣಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ. ಕಾಂಗ್ರೆಸ್ ಸಹಿತ ಐಎನ್ಡಿಐಎ ಮೈತ್ರಿಕೂಟಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ನಿರ್ದಿಷ್ಟ ದೂರದರ್ಶಿತ್ವದ ಚಿಂತನೆಗಳಿಲ್ಲದೆ, ಕೇವಲ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು 26 ವಿಪಕ್ಷಗಳು ರಚಿಸಿರುವ ಐಎನ್ಡಿಐಎ ಮೈತ್ರಿಕೂಟ, ಪ್ರಧಾನಿ ನರೇಂದ್ರ ಮೋದಿಯವರ ಅದ್ವಿತೀಯ ಸಾಧನೆಯನ್ನು ಕಂಡು ಅಸಹಾಯಕತೆಯಿಂದ ಮೈಪರಚಿಕೊಳ್ಳುತ್ತಾ, ಚೀರಾಡುತ್ತಿರುವ ದಯನೀಯ ಸ್ಥಿತಿಯಲ್ಲಿರುವ ಸನ್ನಿವೇಶದಲ್ಲಿ ಕೈಗೆ ಅಧಿಕಾರವೇನಾದರೂ ದೊರೆತಲ್ಲಿ ದೇಶದ ಸ್ಥಿತಿ ಎಂತಹ ಅಧೋಗತಿಗೆ ತಲುಪಬಹುದು ಎಂಬುದನ್ನು ಊಹಿಸಲೂ ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಸನಾತನ ಧರ್ಮವನ್ನು ವಿವಿಧ ಕಾಯಿಲೆಗಳಿಗೆ ಹೋಲಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ದೊಡ್ಡ ವಿವಾದಕ್ಕೆ ಗುರಿಯಾಗಿದ್ದು, ಹಿಂದೂಗಳು ಈತನ ಉದ್ಯಮದ ಉತ್ಪನ್ನಗಳನ್ನು ನಿಷೇಧಿಸುವ ಜೊತೆಗೆ ಈತನ ಚಿತ್ರವಿರುವ ಪೋಸ್ಟರ್ ಗಳನ್ನು ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹಗರಣಗಳ ದೊರೆ ಡಿಎಂಕೆ ಸಂಸದ ಎ.ರಾಜಾ ಸನಾತನ ಧರ್ಮವನ್ನು ಏಡ್ಸ್ ರೋಗಕ್ಕೆ ಹೋಲಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದು, ಇದೀಗ ತಮಿಳುನಾಡು ಶಿಕ್ಷಣ ಸಚಿವ ಪೊನ್ಮುಡಿ ಕೂಡಾ ಸನಾತನ ಧರ್ಮದ ಬಗ್ಗೆ ವಿಷ ಕಾರುವ ಮೂಲಕ ಐಎನ್ಡಿಐಎ ಮೈತ್ರಿಕೂಟದ ಅಧಃಪತನಕ್ಕೆ ನಾಂದಿ ಹಾಡಿರುವುದು ಹಾಸ್ಯಾಸ್ಪದವೆನಿಸಿದೆ.

ಇದರ ನಡುವೆ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ರವರು ಕೂಡಾ ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುವ ಮೂಲಕ ಅವರ ಪೂರ್ವಜರ ಧರ್ಮವನ್ನು ಅವಹೇಳನ ಮಾಡುವ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ.

‘ಹಿಂದೂ ಧರ್ಮದಷ್ಟು ಪರಿಪೂರ್ಣ, ವೈಜ್ಞಾನಿಕ, ದಾರ್ಶನಿಕ ಮತ್ತು ಆಧ್ಯಾತ್ಮಿಕದಂತಹ ಧರ್ಮ ಬೇರೊಂದಿಲ್ಲ. ಹಿಂದುತ್ವ ಇಲ್ಲದೆ ಭಾರತಕ್ಕೆ ಭವಿಷ್ಯವೇ ಇಲ್ಲ. ಹಿಂದುತ್ವ ಎಂಬ ಮಣ್ಣಿನಲ್ಲಿ ಭಾರತದ ಬೇರು ಆಳಕ್ಕೆ ಇಳಿದಿದೆ. ಹೀಗಿರುವಾಗ ಹಿಂದುತ್ವ ಮತ್ತು ಭಾರತ ಒಂದೇ’ ಎಂದಿರುವ ಪ್ರಖ್ಯಾತ ಅಧ್ಯಯನಗಾರ್ತಿ ಆನಿ ಬೆಸೆಂಟ್ ರವರ ನುಡಿಮುತ್ತುಗಳನ್ನು ಐಎನ್ಡಿಐಎ ಮೈತ್ರಿಕೂಟದ ನಾಯಕರು ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ.

‘ಸನಾತನ ಧರ್ಮ’ ಎಂಬುದು ಭಾರತದ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಹಾಗೂ ಈ ದೇಶದ ಜೀವಾಳ. ಸನಾತನ ಧರ್ಮ ಸೂರ್ಯ ಚಂದ್ರ ಇರುವ ವರೆಗೂ ವಿಜೃಂಭಿಸಲಿದೆ. ಸನಾತನ ಧರ್ಮದ ವೈಶಾಲ್ಯತೆ ಮತ್ತು ಅಗಾಧತೆಯನ್ನು ಅರಿಯದ ಕೆಲವು ಮೂರ್ಖರ ವರ್ತನೆ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತಿದೆ. ಈ ಎಲ್ಲಾ ಪ್ರಕ್ರಿಯೆಗಳು ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟದ ಅವನತಿಗೆ ಮುನ್ನುಡಿ ಬರೆಯಲಿರುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಿಂದ ಬಿಜೆಪಿ ಮುಖಂಡನ ಮೇಲೆ ಸುಳ್ಳು ದೂರು ದಾಖಲು, ಬ್ಲಾಕ್ಮೇಲ್ ತಂತ್ರ: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ



ಉಡುಪಿ: ಇತ್ತೀಚೆಗೆ ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ನಕಲಿ ಚಿನ್ನ ಅಡಮಾನ ಸಾಲದ ಪ್ರಕರಣದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದು ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಬ್ಲಾಕ್ಮೇಲ್ ತಂತ್ರ ಅನುಸರಿಸಿರುವ ಕೃತ್ಯ ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಪ್ರಕರಣ ನಡೆದ ಸಂದರ್ಭ ಸೆ.5ರಂದು ದಾವೂದ್ ಅಬೂಬಕರ್ ಉಡುಪಿಯಲ್ಲಿ ಇಲ್ಲದೇ ಇದ್ದರೂ ಅವರ ಹೆಸರನ್ನು ದುರುದ್ದೇಶದಿಂದ ಪೊಲೀಸ್ ದೂರಿನಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ದಾವೂದ್ ಅಬೂಬಕರ್ ನ ಹಳೆಯ ಕಾರನ್ನು ಖರೀದಿಸಲು ಆಸಕ್ತಿ ತೋರಿದ್ದ ನಕಲಿ ಚಿನ್ನ ಪ್ರಕರಣದ ಆರೋಪಿ ರಿಯಾಜ್ ನನ್ನು ಶಾಹೀರ್ ಎಂಬ ವಾಹನ ಮಾರಾಟದ ಮಧ್ಯವರ್ತಿ ತನಗೆ ಪರಿಚಯಿಸಿದ್ದು, ರಿಯಾಜ್ ತನ್ನ ಕಾರಿನ ಕೀಯನ್ನು ಮೊದಲೇ ಪಡೆದುಕೊಂಡು ಹೋಗಿದ್ದ ಎಂದು ದಾವೂದ್ ಅಬೂಬಕರ್ ತಿಳಿಸಿದ್ದಾರೆ.

ದಾವೂದ್ ಅಬೂಬಕರ್ ತನ್ನ ಮಗನನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸುವ ಸಲುವಾಗಿ ಸೆ.3ರಂದು ಬೆಂಗಳೂರಿಗೆ ತೆರಳಿದ್ದು, ಸೆ.5ರಂದು ಉಡುಪಿಗೆ ವಾಪಾಸು ಬರುವ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 2.45ಕ್ಕೆ ನೆಲಮಂಗಲ ಟೋಲ್ ಗೇಟ್ ದಾಟಿದ್ದು, ಸುಮಾರು 3.15ಕ್ಕೆ ಎಡಿಯೂರು – ಚೆನ್ನರಾಯಪಟ್ಟಣ ರಸ್ತೆಯ ನಡುವಿನ ದಾರಿಯಲ್ಲಿ ಎಂಪಾಯರ್ ಹೋಟೆಲ್ ನಲ್ಲಿ ಊಟ ಮುಗಿಸಿ, ತನ್ನ ಕಾರಿಗೆ ಪೆಟ್ರೋಲ್ ತುಂಬಿಸಿದ ಎಲ್ಲಾ ದಾಖಲೆಗಳು ತನ್ನ ಬಳಿ ಇದೆ ಎಂದಿರುವುದು, ಈ ಪ್ರಕರಣದಲ್ಲಿ ದಾವೂದ್ ಅಬೂಬಕರ್ ರವರನ್ನು ಉದ್ದೇಶಪೂರ್ವಕ ಫಿಕ್ಸ್ ಮಾಡಿ ಅವರ ಹಳೆಯ ಕಾರನ್ನು ಕೂಡಾ ವಾಪಾಸು ನೀಡದೇ ಇರುವುದು ಪೂರ್ವನಿಯೋಜಿತ ಷಡ್ಯಂತ್ರ ಎಂದು ಕಂಡು ಬರುತ್ತದೆ.

ಆದರ್ಶ ಸೊಸೈಟಿಯಲ್ಲಿ ಆರೋಪಿತ ವ್ಯಕ್ತಿ ರಿಯಾಜ್ ಈ ಹಿಂದೆಯೂ ನಕಲಿ ಚಿನ್ನವನ್ನು ಅಡಮಾನ ಇಟ್ಟು ಹಣ ಪಡೆದಿರುವಾಗ ಅದನ್ನು ಗಮನಿಸದೇ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿ ಅಥವಾ ಇತರ ಜವಾಬ್ದಾರಿಯುತ ವ್ಯಕ್ತಿಗಳು ಈ ಕೃತ್ಯದಲ್ಲಿ ಯಾಕೆ ಶಾಮೀಲಾಗಿರಬಾರದು ಎಂಬ ಶಂಕೆ ಮೂಡುವುದು ಸಹಜ. ಪೊಲೀಸ್ ಇಲಾಖೆಯೂ ಒತ್ತಡ ಮತ್ತು ವಶೀಲಿಗೆ ಒಳಗಾಗಿ ನೈಜ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ದಾವೂದ್ ಅಬೂಬಕರ್ ಮೇಲೆ ಆಧಾರ ರಹಿತ ಸುಳ್ಳು ಪ್ರಕರಣ ದಾಖಲಿಸಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾಂಗ್ರೆಸ್ ನಾಯಕರ ಈ ನಡೆ ಖಂಡನಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯವಸ್ಥಿತ ಕಾರ್ಯಾಲಯದ ಮೂಲಕ ಸದೃಢ ಪಕ್ಷ ಸಂಘಟನೆಗೆ ಒತ್ತು : ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಬಿಜೆಪಿ ಕೊಡಗು ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ




ಉಡುಪಿ: ಬಿಜೆಪಿ ಕೇಂದ್ರ ಸಮಿತಿಯ ನಿರ್ಣಯದಂತೆ, ರಾಜ್ಯಾದ್ಯಂತ ವ್ಯವಸ್ಥಿತ ಕಾರ್ಯಾಲಯವನ್ನು ಸಜ್ಜುಗೊಳಿಸಿ, ವ್ಯಾಪಕ ಜನಸಂಪರ್ಕದೊಂದಿಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡುವ ಕಾರ್ಯ ಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಬಿಜೆಪಿ ಕಾರ್ಯಾಲಯ ನಿರ್ವಹಣಾ ರಾಜ್ಯ ಸಮಿತಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಮಾದರಿ ಕಾರ್ಯಾಲಯ ಹೇಗಿರಬೇಕು, ಏನೆಲ್ಲಾ ಹೆಚ್ಚುವರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ರಾಜ್ಯದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಿ ಪರಿಪೂರ್ಣ ಜಿಲ್ಲಾ ಕಾರ್ಯಾಲಯದ ಮೂಲಕ ಪಕ್ಷದ ಕಾರ್ಯ ವಿಸ್ತಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಘಟಿತ ಪ್ರಯತ್ನದೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿ ಕಾಳಪ್ಪ, ಮಾದಪ್ಪ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಿದ್ದಿದೆ; ಸಿದ್ದು ಜನ್ಮ ಜಾತಕ ಜಾಲಾಡಿಸಿದ ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ : ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ‘ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆಯೊಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ಮಾರ್ಮಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಜಾತಕ ಜಾಲಾಡಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರವರಿಗೆ ಧನ್ಯವಾದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಸಿದ್ದರಾಮಯ್ಯ, ‘ಅಧಿಕಾರ ಸಿಕ್ಕಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಅಡ್ವಾಣಿಯವರನ್ನು ಬೇಟಿ ಮಾಡಿ ಬಿಜೆಪಿ ಸೇರಲು ಹೋಗಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಇದಕ್ಕೆ ಸಾಕ್ಷಿಯಾಗಿದ್ದಾರೆ’ ಎನ್ನುವ ಬಿ.ಕೆ. ಹರಿಪ್ರಸಾದ್ ರವರ ಮಾತಿನ ಮೂಲಕ ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಂದಂತಾಗಿದೆ.

ಗುರುವಿಗೇ ತಿರುಮಂತ್ರ ಹಾಕಿರುವ ಸಿದ್ಧರಾಮಯ್ಯ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಏನೆಲ್ಲಾ ಅವಾಂತರಗಳನ್ನು ಎಸಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಹರಿಪ್ರಸಾದ್ ರವರು ಉಲ್ಲೇಖಿಸಿರುವ ‘ದೇವರಾಜ ಅರಸು ಕಾರಿನಲ್ಲಿ ಕುಳಿತ ಮಾತ್ರಕ್ಕೆ ಅರಸು ಆಗಲು ಸಾಧ್ಯವಿಲ್ಲ; ಅರಸು ಅವರ ರೀತಿ ಸಣ್ಣ ಸಮುದಾಯಗಳ ಕೈ ಹಿಡಿಯುವ ಮೂಲಕ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂಬ ಮಾತು ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆ ಮತ್ತು ಕೆಲವೇ ವರ್ಗದ ಓಲೈಕೆ ರಾಜಕಾರಣಕ್ಕೆ ಚಾಟಿ ಬೀಸಿದಂತಿದೆ.

ರಾಜ್ಯದಲ್ಲಿ ಬೀಕರ ಬರವಿದ್ದರೂ ಮುಖ್ಯಮಂತ್ರಿ ಸಹಿತ ಸಚಿವರ ಕಛೇರಿ, ಮನೆ ದುರಸ್ತಿ ಹಾಗೂ ವಿಲಾಸೀ ಕಾರುಗಳ ಖರೀದಿಗೆ ಅಸ್ತು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ತನ್ನ ಸಮಾಜವಾದಿ ಮುಖವಾಡವನ್ನು ಕಳಚಿದೆ. ಚುನಾವಣೆಗೆ ಮೊದಲು ಹಿಂದುಳಿದವರು ಮತ್ತು ಅತಿ ಹಿಂದುಳಿದವರಿಗೆ ನೀಡಿದ ಭರವಸೆಯನ್ನು ಮರೆತವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಘಂಟಾಘೋಷವಾಗಿ ಹೇಳಿಕೆ ನೀಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ಜನದ್ರೋಹಿ ನೀತಿಯನ್ನು ಬಹಿರಂಗಪಡಿಸಿದೆ.

ಅಧಿಕಾರದ ದುರಾಸೆಯಿಂದ ನಕಲಿ ಗ್ಯಾರಂಟಿಗಳ ಆಮಿಷಗಳನ್ನು ಒಡ್ಡುವ ಮೂಲಕ ರಾಜ್ಯದ ಜನತೆಗೆ ಮಂಕು ಬೂದಿ ಎರಚಿ, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ಜೊತೆಗೆ ಅವನತಿಯತ್ತ ಸಾಗುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸ್ವಯಂಕೃತ ಜನವಿರೋಧಿ ನೀತಿಯಿಂದ ಕ್ರಮೇಣ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳು ಸ್ಪಷ್ಟಗೊಳ್ಳುತ್ತಿರುವುದು ಇಂದಿನ ವಾಸ್ತವಿಕತೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ; ರಾಜ್ಯ ತಂಡದಿಂದ ಪರಿಶೀಲನೆ



ಉಡುಪಿ: ವ್ಯವಸ್ಥಿತ ಕಾರ್ಯಾಲಯದ ಮೂಲಕ ಕಾರ್ಯ ವಿಸ್ತಾರ ಮಾಡುವ ಬಿಜೆಪಿ ಕೇಂದ್ರ ಸಮಿತಿಯ ನಿರ್ಣಯದಂತೆ, ಉಡುಪಿ ಜಿಲ್ಲಾ ಬಿಜೆಪಿ ಸ್ಥಿರಾಸ್ತಿಯನ್ನು ಖರೀದಿಸಿದ್ದು, ನೂತನ ಕಟ್ಟಡ ನಿರ್ಮಾಣದೊಂದಿಗೆ ಸುಸಜ್ಜಿತ ಕಾರ್ಯಾಲಯವನ್ನು ಹೊಂದಲಿದೆ. ಈ ನೆಲೆಯಲ್ಲಿ ಜಿಲ್ಲಾ ಕಾರ್ಯಾಲಯದ ಸುವ್ಯವಸ್ಥೆಗಳ ಅವಲೋಕನ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ತಂಡದ ಜೊತೆಗೆ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಕಾರ್ಯಾಲಯ ನಿರ್ವಹಣೆ ರಾಜ್ಯ ತಂಡದ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ರಾಜ್ಯ ತಂಡದ ಸದಸ್ಯ ಹಾಗೂ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಮ್.ಜಿ. ಮಹೇಶ್ ಮಾತನಾಡಿ, ಬಿಜೆಪಿ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ. ಸಂಘಟನಾತ್ಮಕ ವಿಚಾರ ಬಂದಾಗ ಪಕ್ಷದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ, ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿರುವ ಉಡುಪಿ ಜಿಲ್ಲೆ ರಾಜ್ಯಕ್ಕೇ ಮಾದರಿ. ದೇಶದ ಅಮೃತ ಕಾಲ ಘಟ್ಟದಲ್ಲಿ ಜಿಲ್ಲಾ ಕಾರ್ಯಾಲಯ ಹೇಗಿರಬೇಕು ಹಾಗೂ ಸುವ್ಯವಸ್ಥೆಗೆ ಏನೆಲ್ಲಾ ಬೇಕು ಎಂಬ ಅವಲೋಕನದ ಜೊತೆಗೆ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ಈ ಸಭೆಯ ಉದ್ದೇಶ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ ಮಾತನಾಡಿ, ಮಾದರಿ ಜಿಲ್ಲೆ ಉಡುಪಿ ಜಿಲ್ಲಾ ಕಾರ್ಯಾಲಯವನ್ನು ಇನ್ನಷ್ಟು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ, ರಾಜ್ಯದ ಸೂಚನೆಯಂತೆ 32 ವಿಭಾಗಗಳಲ್ಲಿ ಪರಿಶೀಲನೆ ನಡೆಸುವ ಜೊತೆಗೆ ಸ್ವಚ್ಛತೆ ಸಹಿತ ಎಲ್ಲ ನಿಗದಿತ ಮೂಲಭೂತ ಅಗತ್ಯತೆಗಳನ್ನು ಅಳವಡಿಸಿಕೊಳ್ಳಲು ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಎಲ್ಲರ ಸಹಕಾರದೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಸಭೆಯಲ್ಲಿ ರಾಜ್ಯದ ಮಾದರಿಯಂತೆ ವಿವಿಧ ವಿಭಾಗಗಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ತಂಡದ ಸದಸ್ಯ ಪ್ರೇಮ್ ಕುಮಾರ್ ಚಿಕ್ಕಮಗಳೂರು, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ, ಕಿಶೋರ್ ಕುಮಾರ್ ಕುಂದಾಪುರ, ಪೆರ್ಣಂಕಿಲ ಶ್ರೀಶ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯಕುಮಾರ್ ಉದ್ಯಾವರ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ರಾಮಚಂದ್ರ ಕಾಮತ್, ಜಿಲ್ಲಾ ಸಹಕಾರ ಪ್ರಕೋಷ್ಠದ ಸಂಚಾಲಕ ಮುರಳೀಧರ ಪೈ, ಜಿಲ್ಲಾ ಕಾರ್ಯಾಲಯ ಸಿಬ್ಬಂದಿಗಳಾದ ಶಿವರಾಮ್ ಕಾಡಿಮಾರ್ ಮತ್ತು ಚಂದ್ರಶೇಖರ್ ಪ್ರಭು ಹಾಗೂ ದಿನಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಗೆ ‘ಇಂಡಿಯಾ’ದ ಮೇಲಿರುವ ಮೋಹ ‘ಭಾರತ’ದ ಮೇಲೆ ಯಾಕಿಲ್ಲಾ : ಕುಯಿಲಾಡಿ ಪ್ರಶ್ನೆ



ಉಡುಪಿ: ಸನಾತನ ಸಂಸ್ಕೃತಿ ಹಾಗೂ ವೇದ ಪುರಾಣಗಳ ಕಾಲದಿಂದಲೇ ‘ಭರತ ಖಂಡ’ ‘ಭರತವರ್ಷ’ ಎಂದು ಕರೆಯಲ್ಪಟ್ಟಿರುವ ‘ಪುಣ್ಯ ಭೂಮಿ’, ‘ದೇವ ಭೂಮಿ’ ಭಾರತ. ದೇಶದ ಸಂವಿಧಾನದ ಪರಿಚ್ಛೇದ 1ರಲ್ಲಿ ಉಲ್ಲೇಖಗೊಂಡಿರುವ ನಮ್ಮ ದೇಶದ ಮೂಲ ಹೆಸರು ಭಾರತ. ಆದರೆ ಕಾಂಗ್ರೆಸ್ಸಿಗೆ ಮಾತ್ರ ‘ಭಾರತ’ದ ಮೇಲೆ ದ್ವೇಷ; ‘ಇಂಡಿಯಾ’ದ ಮೇಲೆ ಅತೀವ ಮೋಹ ಯಾಕೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗ ಸಮ್ಮೇಳನದ ನಿಯೋಗಕ್ಕೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಔತಣ ಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ ಪ್ರೆಸಿಡೆಂಟ್ ಆಫ್ ಭಾರತ್ ‘ ಎಂದು ನಮೂದಿಸಿರುವುದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಸಹಿತ ವಿಪಕ್ಷಗಳ ಐಎನ್ಡಿಐಎ ಒಕ್ಕೂಟಕ್ಕೆ ತಳಮಳ ಉಂಟಾಗಿರುವುದು ಜಗಜ್ಜಾಹೀರಾಗಿದೆ.

ಅಷ್ಟಕ್ಕೂ ದೇಶಕ್ಕೆ ಹೊಸ ಹೆಸರನ್ನೇನೂ ಇಡುತ್ತಿಲ್ಲವಾದರೂ, ದೇಶ ಲೂಟಿಗೈಯಲು ಬಂದು, ಸ್ವಾತಂತ್ರ್ಯಹರಣ ಮಾಡಿರುವ ವಿದೇಶೀಯರು ಇಟ್ಟ ‘ಇಂಡಿಯಾ’ ಎಂಬ ಹೆಸರು ಗುಲಾಮಿ ಸಂಸ್ಕೃತಿಯನ್ನು ಮೇಳೈಸುವ ಪದವೆಂಬುದು ನಿರ್ವಿವಾದ. ಈ ದೇಶದ ಮೂಲ ಹೆಸರನ್ನು ಒಪ್ಪಲು ಹಿಂಜರಿಯುವ ಕಾಂಗ್ರೆಸ್ಸಿನ ನಡೆ ಅದರ ಸನಾತನ ವಿರೋಧಿ ಹಾಗೂ ದೇಶ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 1949 ಆಗಸ್ಟ್ 28ರಂದು ದೇಶದ ಹೆಸರಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಾಗ, ‘ಭಾರತ’ ಎಂಬ ಹೆಸರಿಗೆ ಒಕ್ಕೊರಲ ಸಹಮತ ವ್ಯಕ್ತವಾಗಿರುವುದು ಇತಿಹಾಸ. ‘ಭಾರತ’ ಎಂಬ ಹೆಸರಿನ ಸಾರ್ವತ್ರಿಕ ಬಳಕೆ ಸನಾತನ ಧರ್ಮದ ಪ್ರತೀಕವಾಗುತ್ತದೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಮತ್ತು ವಿಪಕ್ಷಗಳ ಐಎನ್ಡಿಐಎ ಒಕ್ಕೂಟಕ್ಕೆ ಕೇವಲ ಚುನಾವಣೆ ಮಾತ್ರ ಪ್ರಮುಖ ವಿಚಾರವಾಗಿದ್ದು, ದೇಶದ ಹಿತ, ಸ್ವಾಭಿಮಾನ ಮುಖ್ಯವಲ್ಲ ಎಂಬುದು ಜನಜನಿತವಾಗಿದೆ.

ಇಂದು ಭಾರತೀಯರು ‘ಭಾರತ’ ಎಂಬ ಪವಿತ್ರ ಹೆಸರಿನಲ್ಲಿ ದೇಶ ಜಗದ್ಗುರುವಾಗುವುದನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ‘ಭಾರತ್ ಜೋಡೋ ಯಾತ್ರೆ’ಗೆ ಹೊರಟಿದ್ದ ಕಾಂಗ್ರೆಸ್, ಇದೀಗ ‘ಭಾರತ’ ಎಂಬ ಹೆಸರಿಗೇ ವಿರೋಧ ವ್ಯಕ್ತಪಡಿಸುತ್ತಾ, ಗುಲಾಮಿ ಸಂಕೇತದ ‘ಇಂಡಿಯಾ’ ಹೆಸರಿಗೆ ಜೋತು ಬಿದ್ದಿರುವುದು ಮಾತ್ರ ವಿಪರ್ಯಾಸ. ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ ಮತ್ತು ಐಎನ್ಡಿಐಎ ಒಕ್ಕೂಟದ ದೇಶ ವಿರೋಧಿ, ದೇಶದ ಸನಾತನ ಸಂಸ್ಕೃತಿ ವಿರೋಧಿ ಮನಸ್ಥಿತಿಯನ್ನು ಚೆನ್ನಾಗಿಯೇ ಅರಿತಿದ್ದು, ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಅಭಿಯಾನಗಳ ಜೊತೆಗೆ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಲು ಕುಯಿಲಾಡಿ ಕರೆಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆ



ಉಡುಪಿ: ರಾಜ್ಯ ಬಿಜೆಪಿ ಸೂಚನೆಯಂತೆ ಪ್ರಮುಖ 5 ಅಭಿಯಾನಗಳಾದ ಶಂಖನಾದ, ನನ್ನ ಮಣ್ಣು ನನ್ನ ದೇಶ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ, ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಸಿದ್ಧತೆ ಹಾಗೂ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ ಇದರ ಯಶಸ್ವೀ ನಿರ್ವಹಣೆಯ ಜೊತೆಗೆ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬರಲಿರುವ 2024ರ ಲೋಕಸಭಾ ಚುನಾವಣೆ ಹಾಗೂ ಸಾಮಾಜಿಕ ಜಾಲತಾಣದ ಸಾಮರ್ಥ್ಯ ಮತ್ತು ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ‘ಶಂಖನಾದ’ ಸೆ.14ರಂದು ಮಧ್ಯಾಹ್ನ 3.30ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.

‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಪ್ರತೀ ಗ್ರಾಮದಿಂದ ಮಣ್ಣನ್ನು ಸಂಗ್ರಹಿಸಿ, 75 ಸಸಿಗಳನ್ನು ನೆಡುವ ಮೂಲಕ ಅಮೃತ ಉದ್ಯಾನವನವನ್ನು ನಿರ್ಮಾಣ ಮಾಡುವ ಜೊತೆಗೆ ಐದು ಪ್ರತಿಜ್ಞೆಗಳ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜಿಸುವುದು.

‘ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ’ ಸಭೆಯು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ರಾಜ್ಯ ತಂಡದ ಉಪಸ್ಥಿತಿಯಲ್ಲಿ ಸೆ.8ರಂದು ಬೆಳಿಗ್ಗೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ. ಬಿಜೆಪಿ ಉಡುಪಿ ಜಿಲ್ಲಾ ನೂತನ ಕಛೇರಿಯ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಿರಾಸ್ತಿಯನ್ನು ಖರೀದಿಸಲಾಗಿದ್ದು, ಸದ್ಯದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ.

ಜೂನ್ 2024ರಲ್ಲಿ ನಡೆಯುವ ‘ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ’ಯ ಪೂರ್ವಸಿದ್ಧತೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವುದು.

ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ‘ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ’ಯನ್ನು ಸಮನ್ವಯಗೊಳಿಸಿ, ಫಲಾನುಭವಿಗಳನ್ನು ಗುರುತಿಸುವುದು.

ಈ ಎಲ್ಲಾ 5 ಅಭಿಯಾನಗಳ ಕಾರ್ಯ ಚಟುವಟಿಕೆಗಳ ಯಶಸ್ವೀ ಅನುಷ್ಠಾನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲರ ಸಂಘಟಿತ ಪ್ರಯತ್ನದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕುಯಿಲಾಡಿ ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಬಿಜೆಪಿ ಕೆಲವೇ ತಿಂಗಳುಗಳಲ್ಲಿ ಸುಸಜ್ಜಿತ ನೂತನ ಕಟ್ಟಡದಲ್ಲಿ ಕಾರ್ಯಾರಂಭಿಸಲಿದೆ. ಸೆ.8ರಂದು ಬಿಜೆಪಿ ರಾಜ್ಯ ತಂಡದ ಉಪಸ್ಥಿತಿಯಲ್ಲಿ ನಡೆಯುವ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯಲ್ಲಿ, ಜಿಲ್ಲಾ ನಿರ್ವಹಣಾ ಸಮಿತಿ ಹಾಗೂ ಸಿಬ್ಬಂದಿಗಳ ಸಭೆ, ಸ್ವಚ್ಛತೆ ಮತ್ತು ಕಾರ್ಯಾಲಯ ನಿವಾಸಿಗಳ ಸಭೆ ಹಾಗೂ ಕಾರ್ಯಾಲಯಕ್ಕೆ ನಿರಂತರ ಬೇಟಿ ನೀಡುವ ಸ್ಥಳೀಯ ಕಾರ್ಯಕರ್ತರ ಸಭೆಯನ್ನು ನಡೆಸುವ ಮೂಲಕ ಪ್ರತೀ ವಿಭಾಗದ ಅವಲೋಕನ ನಡೆಸಲಾಗುವುದು ಎಂದರು.

ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಬಂಧುಗಳು ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆ ಹಾಗೂ ಜಿ.ಪಂ., ತಾ.ಪಂ. ಚುನಾವಣೆಗೆ ಸರ್ವ ಸನ್ನಾದ್ದರಾಗುವ ಮೂಲಕ ಮಗದೊಮ್ಮೆ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ರೇಶ್ಮಾ ಉದಯ ಶೆಟ್ಟಿ, ಅನಿತಾ ಶ್ರೀಧರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಪ್ರ.ಕಾರ್ಯದರ್ಶಿ ಧೀರಜ್ ಕೆ.ಎಸ್., ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಜಿಲ್ಲಾ ಒಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿ ಅರುಣ್ ಕುಮಾರ್ ಬಾಣ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಅಲ್ವಿನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.

ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಪಕ್ಷಗಳ ಐಎನ್ಡಿಐಎ ಒಕ್ಕೂಟದ ಹಿಂದೂ ವಿರೋಧಿ ಮನಸ್ಥಿತಿಯನ್ನು ಸಾಬೀತುಪಡಿಸಿದೆ : ಕುಯಿಲಾಡಿ ಸುರೇಶ್ ನಾಯಕ್





ಉಡುಪಿ: ಕಾಂಗ್ರೆಸ್ ಸಹಿತ ವಿಪಕ್ಷಗಳು ಸೇರಿ ರಚಿಸುತ್ತಿರುವ ಐಎನ್ಡಿಐಎ ಒಕ್ಕೂಟ ಕೇವಲ ಪ್ರಧಾನಿ ಮೋದಿ ವಿರುದ್ಧ ಮಾತ್ರವಲ್ಲದೆ, ಭಾರತದ ಆತ್ಮದಂತಿರುವ ಸನಾತನ ಹಿಂದೂ ಧರ್ಮದ ವಿರುದ್ಧವಾಗಿದೆ. ಇದಕ್ಕೆ ಪೂರಕವಾಗಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆ ಐಎನ್ಡಿಐಎ ಒಕ್ಕೂಟ ಅಕ್ಷರಶಃ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

‘ಸನಾತನ ಹಿಂದೂ ಧರ್ಮವು ಡೆಂಗ್ಯೂ, ಮಲೇರಿಯಾ, ಕೊರೊನಾ ವೈರಸ್ ಇದ್ದಂತೆ, ಅದನ್ನು ವಿರೋಧಿಸುವುದಲ್ಲ; ನಿರ್ಮೂಲನ ಮಾಡಬೇಕು’ ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಬೇಜವಾಬ್ದಾರಿ ಹೇಳಿಕೆ ಅತ್ಯಂತ ಖಂಡನೀಯ. ಸನಾತನ ಹಿಂದೂ ಧರ್ಮದ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ, ಐಎನ್ಡಿಐಎ ಒಕ್ಕೂಟದ ಭಾಗವಾಗಿರುವ ಉದಯನಿಧಿ ಸ್ಟಾಲಿನ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಒಂದೆರಡು ವರ್ಗಗಳ ಓಲೈಕೆಯ ದುರುದ್ದೇಶದಿಂದ ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಸನಾತನ ಧರ್ಮದ ಮೇಲೆ ಎಳ್ಳಷ್ಟೂ ಪ್ರಭಾವ ಬೀರದು. ಸನಾತನ ಹಿಂದೂ ಧರ್ಮವು ಇಂತಹ ಅನೇಕ ದಾಳಿಗಳು ಮತ್ತು ಕ್ಲಿಷ್ಟಕರ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಿ, ಪರ್ವತದಂತೆ ಮೆಟ್ಟಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ.

ಚಂದ್ರಯಾನ-3ರ ಅದ್ಭುತ ಯಶಸ್ಸು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳಿಗೆ ರೂ.200/- ಇಳಿಕೆ, ದೇಶದ ಜಿಡಿಪಿ ದರದಲ್ಲಿ ಪ್ರಗತಿ, ಅಭಿವೃದ್ಧಿ ಪರ ಆಡಳಿತದ ಯಶಸ್ಸಿನ ಸಹಿತ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ವೃದ್ಧಿಯಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳ ಐಎನ್ಡಿಐಎ ಒಕ್ಕೂಟ, ಚುನಾವಣೆಯನ್ನು ಎದುರಿಸಲು ಯಾವುದೇ ಪ್ರಮುಖ ವಿಚಾರಗಳಿಲ್ಲದೆ, ಮೋದಿಯವರನ್ನು ನೇರವಾಗಿ ಎದುರಿಸಲು ಅಸಮರ್ಥವಾಗಿ ವಾಮಮಾರ್ಗದಲ್ಲಿ ಸನಾತನ ಹಿಂದೂ ಧರ್ಮದ ವಿರುದ್ಧ ಸಂಚು ನಡೆಸುತ್ತಿರುವುದು ವಿಷಾದನೀಯ.

ಐಎನ್ಡಿಐಎ ಒಕ್ಕೂಟದ ಪ್ರಮುಖ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಈ ವಿಚಾರದಲ್ಲಿ ಗಾಢ ಮೌನ ವಹಿಸಿರುವುದು ಸಂಶಯಕ್ಕೆಡೆಮಾಡಿದೆ. ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಹಾಗೂ ಐಎನ್ಡಿಐಎ ಒಕ್ಕೂಟಕ್ಕೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ


ಉಡುಪಿ: ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆಯನ್ನು ಭಜನಾ ಸೇವೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಮಹಾ ಪೂಜೆ ಮತ್ತು ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಶ್ರೀ ಗುರು ಜಯಂತಿ ಆಚರಣೆ ಪ್ರಯುಕ್ತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ವ್ಯಾಸಂಗ ಮಾಡುತ್ತಿರುವ ಸಂಘದ ವ್ಯಾಪ್ತಿಯ ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷ ಶಿವದಾಸ್ ಪಿ., ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಯೋಗೀಶ್ ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಉಡುಪಿ ಕ್ರಿಶ್ಚಿಯನ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಮಹಿಳಾ ಘಟಕದ ಸಂಚಾಲಕಿ ಗೋದಾವರಿ ಎಮ್. ಸುವರ್ಣ, ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಭಜನಾ ಸಂಚಾಲಕರಾದ ಕೆ.ಮಂಜಪ್ಪ ಸುವರ್ಣ, ಸಹ ಸಂಚಾಲಕರಾದ ಎ.ಮಾಧವ ಪೂಜಾರಿ, ಶಂಕರ ಪೂಜಾರಿ, ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಎ.ಮುದ್ದಣ್ಣ ಪೂಜಾರಿ, ಭಾಸ್ಕರ ಅಂಚನ್, ಸತೀಶ್ ಪೂಜಾರಿ, ವಿನಯ್ ಕುಮಾರ್, ಭಾಸ್ಕರ ಕೋಟ್ಯಾನ್, ನಿತಿನ್ ಕುಮಾರ್, ಚೆನ್ನಕೇಶವ, ಜನಾರ್ದನ ಪೂಜಾರಿ, ಮಹಿಳಾ ಘಟಕದ ಸಹ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್, ಜಯಂತಿ ಹರೀಶ್ ಪೂಜಾರಿ, ಕಾರ್ಯದರ್ಶಿ ವಾಣಿಶ್ರೀ ಅರುಣ್, ಜತೆ ಕಾರ್ಯದರ್ಶಿ ಅಶ್ವಿನಿ, ಗ್ರಾ.ಪಂ. ಸದಸ್ಯ ರಾಜೇಶ್ ಸುವರ್ಣ, ಪ್ರಮುಖರಾದ ರಮೇಶ್ ಕೋಟ್ಯಾನ್, ಕುಶಲ್ ಕುಮಾರ್, ಶಶಿಕಾಂತ್ ಹಾಗೂ ಸಂಘದ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Design a site like this with WordPress.com
Get started