ಕಾಪು: ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ವಿಧಾನಪರಿಷತ್ ಚುನಾವಣೆಯ ಕುರಿತಾಗಿ ಇಂದು ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಯಾವ ರೀತಿಯಲ್ಲಿ ಪ್ರತೀ ವಾರ್ಡ್ ಮಟ್ಟದಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಪ್ರತೀ ಪಂಚಾಯತ್ ಗೆ ಉಸ್ತುವಾರಿಗಳನ್ನು ನೇಮಿಸಲಾಯಿತು. ಅವರು ಕೂಡಲೇ ಪ್ರತೀ ವಾರ್ಡ್ ಗೆ ಎರಡು- ಮೂರು ಜನರನ್ನು ಉಸ್ತುವಾರಿಯನ್ನು ಮಾಡಿ ಕೂಡಲೇ ಕಾರ್ಯಪ್ರವ್ರತ್ತರಾಗಲು ತಿಳಿಸಲಾಯಿತು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಮತದಾರರ ನೋಂದಣಿ ಮಾಡುವ ಬಗ್ಗೆ ಚರ್ಚಿಸಲಾಯಿತು
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿಯ ನಿಕಟಪೂರ್ವ ಶಾಸಕರಾದ ರಘುಪತಿ ಭಟ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಈ ಕಾರ್ಯಕ್ರಮದ ಜಿಲ್ಲಾ ಸಹಸಂಚಾಲಕರಾದ ಮುಳೀಧರ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ಈ ಮತದಾರರ ಪಟ್ಟಿಯ ನೋಂದಣಿಯ ಕಾಪು ಕ್ಷೇತ್ರ ಸಂಚಾಲಕರಾದ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಪ್ರಧಾನ ಸಹಸಂಚಾಲಕರಾದ ಪ್ರಸಾದ್ ಮಲ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಂಗಳೂರು: ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಸಕಾಲಿಕ ಮುನ್ನೆಚ್ಚರಿಕೆ (ವಿಭಿನ್ನ ಧ್ವನಿ ಮತ್ತು ಕಂಪನ) ನೀಡಲು ಮುಂದಾಗಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಅ. 12ರಂದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ.
ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಈಗಾಗಲೇ ಮೊಬೈಲ್ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ದದೊಂದಿಗೆ ಸಂದೇಶ ಫ್ಲಾಶ್ ಆಗಲಿದೆ. ಬಳಕೆದಾರರು ಸರಿ ಎಂದು ಒತ್ತುವವರೆಗೂ ಈ ಬೀಪ್ ಬರುತ್ತಲೇ ಇರುತ್ತದೆ. ಇದು ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷೆ ನಡೆಯಲಿದೆ.
ಸಂದೇಶದಲ್ಲಿ ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಿದ ಸ್ಯಾಂಪಲ್ ಪರೀಕ್ಷಾ ಸಂದೇಶವಾಗಿದ್ದು, ಇದನ್ನು ನಿರ್ಲಕ್ಷಿಸಿ. ನೀವು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವು ಜಾರಿಗೆ ತರುತ್ತಿರುವ ಪ್ಯಾನ್ – ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸುವ ಸಲುವಾಗಿ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ ಎನ್ನುವುದಾಗಿ ಉಲ್ಲೇಖವಾಗಲಿದೆ.
ಭೂಕಂಪ, ಸುನಾಮಿ, ಅಗ್ನಿ ದುರಂತ ಮತ್ತು ಹಠಾತ್ ಪ್ರವಾಹ, ಯುದ್ಧಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಸನ್ನದ್ಧರಾಗಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಸಹಕಾರ ನೀಡಲಿದೆ. ಮುಂದಿನ ದಿನದಲ್ಲಿ ವಿಕೋಪಗಳು ಸಂಭವಿಸಬಹುದಾದ ಸ್ಥಳಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಈ ಫ್ಲಾಶ್ ಸಂದೇಶದ ಮೂಲಕ ಎಚ್ಚರಿಸಲಾಗುತ್ತದೆ.
ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ಅ. 12ರಂದು ರಾಜ್ಯದಲ್ಲಿ ನಡೆಯಲಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಮುಂದಿನ ದಿನದಲ್ಲಿ ವಿಕೋಪವನ್ನು ಮುಂಚಿತವಾಗಿ ಗ್ರಹಿಸಿ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಪ್ರವಾಹಗಳಂತ ವಿಕೋಪ ಘಟಿಸುವ ಮುನ್ಸೂಚನೆ ನೀಡಲಿದೆ.
ಉಡುಪಿ: ಬೂತ್ ಸಶಸ್ತೀಕರಣದ ಸಭೆಗಳು ಎಲ್ಲ ಮಂಡಲಗಳಲ್ಲಿ ಯಶಸ್ವಿಯಾಗಿ ನಡೆದಿವೆ. ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಲು ಮಂಡಲ ಮಟ್ಟದ ಸಮಿತಿ ರಚನೆಯಾಗಿದೆ. ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಗೆಲುವಿನ ಗುರಿಯೊಂದಿಗೆ ಪ್ರತೀ ಮಂಡಲ ಮಟ್ಟದಲ್ಲಿ ಸುಸಜ್ಜಿತ ತಂಡವನ್ನು ರಚಿಸಿ, ಮಂಡಲವಾರು ಕನಿಷ್ಠ 20,000 ಮೇಲ್ಪಟ್ಟ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೊಂದಾವಣೆಗೊಳಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನದ ಮೂಲಕ ವಿಶ್ವಾಸದ ಗೆಲುವಿಗೆ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಅಭಿಯಾನದಡಿ ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರಗಳ ಸಹಿತ ಸ್ವಚ್ಛತಾ ಅಭಿಯಾನ ಹಾಗೂ ಬೂತ್ ಮಟ್ಟದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ದಿನ ಮತ್ತು ಗಾಂಧಿ ಜಯಂತಿ ಆಚರಣೆಯ ಜೊತೆಗೆ ಜಿಲ್ಲೆಯಾದ್ಯಂತ ಗರಿಷ್ಠ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ. ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಸರಲ್ ಆಪ್ ನ್ನು ಡೌನ್ಲೋಡ್ ಮಾಡುವ ಮೂಲಕ ಕಾರ್ಯಕ್ರಮಗಳ ವರದಿಗಳನ್ನು ಅಪ್ಲೋಡ್ ಮಾಡುವ ಜೊತೆಗೆ ಪಕ್ಷದ ಸಮಗ್ರ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಪಡೆಯಬಹುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಚುನಾವಣೆ ನಿರ್ವಹಣೆಯ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಮಾತನಾಡಿ, ನ.1, 2020ರೊಳಗೆ ಪದವಿ ಹೊಂದಿರುವ ಪದವೀಧರರನ್ನು ಪದವೀಧರ ಕ್ಷೇತ್ರದ ಮತ್ತು ಹೈಸ್ಕೂಲ್ ಮೇಲ್ಪಟ್ಟ ವಿದ್ಯಾ ಸಂಸ್ಥೆಗಳಲ್ಲಿ ಕನಿಷ್ಠ 6 ವರ್ಷಗಳ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ನ.6ರ ಮೊದಲು ಗರಿಷ್ಠ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲು ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೈಜೋಡಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಬಿಜೆಪಿ ಸಂಘಟನಾ ಸಾಮರ್ಥ್ಯದಿಂದ ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ. ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ, ಗರಿಷ್ಠ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ಪುನರಪಿ ಹೆಸರು ಸೇರ್ಪಡೆಗೊಳಿಸುವ ಜೊತೆಗೆ ಸಂಘಟಿತ ಪ್ರಯತ್ನದ ಮೂಲಕ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ, ಬಿಎಲ್ಎ-2 ನೇಮಕಾತಿ ಸಹಿತ ಪಕ್ಷದ ಮುಂದಿನ ಕಾರ್ಯ ಯೋಜನೆಗಳು ಮತ್ತು ಸಂಘಟನಾತ್ಮಕ ವಿಚಾರಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನನ್ನ ಮಣ್ಣು ನನ್ನ ದೇಶ ಅಭಿಯಾನದ ಜಿಲ್ಲಾ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅಭಿಯಾನದ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳಿಂದ ಸಂಗ್ರಹಿಸಿರುವ ಪವಿತ್ರ ಮಣ್ಣಿನ ಕಳಸಗಳನ್ನು ಅ.13 ರೊಳಗೆ ಮಂಡಲವಾರು ಬಿಜೆಪಿ ಜಿಲ್ಲಾ ಕಛೇರಿಗೆ ತಲುಪಿಸುವಂತೆ ಕೋರಿದರು.
ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಂಡಲ ವ್ಯಾಪ್ತಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾರರ ಪಟ್ಟಿಗೆ ವಿವಿಧ ಸಂಸ್ಥೆಗಳ ಸಿಬ್ಬಂದಿಗಳ ಸಹಿತ ಪ್ರತೀ ಬೂತ್ ಮಟ್ಟದಲ್ಲಿ ಕನಿಷ್ಠ 100 ರಂತೆ ಮಂಡಲ ವ್ಯಾಪ್ತಿಯಲ್ಲಿ 30,000 ಮೇಲ್ಪಟ್ಟು ಹೆಸರು ನೊಂದಾಯಿಸಲು ಕೈಗೊಂಡಿರುವ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ. ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಿಕಟಪೂರ್ವ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು ಹಾಗೂ ಅಭಿಯಾನದ ವಿಧಾನಸಭಾ ಕ್ಷೇತ್ರ ತಂಡದ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮತ್ತು ವೃದ್ಧಾಶ್ರಮಗಳು ಇವರ ಜಂಟಿ ಆಶ್ರಯದಲ್ಲಿ ಅ.1ರಂದು ಉಡುಪಿ-ಬನ್ನಂಜೆಯ ಶ್ರೀ ನಾರಾಯಣಗುರು ಅಡಿಟೋರಿಯಂನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಮಂಜಪ್ಪ ಸುವರ್ಣ ಅಂಬಲಪಾಡಿ ಹಾಗೂ ರುಕ್ಮಿಣಿ ಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು.
ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಂಜಪ್ಪ ಸುವರ್ಣರವರು 3 ವಿಭಾಗಗಳಲ್ಲಿ ವಿಜೇತರಾಗಿ ಬಹುಮಾನ ಪಡೆದರು.
ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಹಾಗೂ ಹೆಸರಾಂತ ತಬಲಾ ವಾದಕರಾಗಿರುವ ಇವರು ಬಿಲ್ಲವ ಸೇವಾ ಸಂಘ(ರಿ.), ಅಂಬಲಪಾಡಿ ಇದರ ಮಾಜಿ ಅಧ್ಯಕ್ಷರು ಹಾಗೂ ಪ್ರಸಕ್ತ ಭಜನಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ತಬಲಾ ತರಬೇತಿ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಡಾ! ಕೆ.ವಿದ್ಯಾ ಕುಮಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ, ಖ್ಯಾತ ಮನೋತಜ್ಞ ಡಾ! ಪಿ.ವಿ. ಭಂಡಾರಿ, ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಪಂಡಿತ್ ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಪ್ರಮುಖರಾದ ಸಿ.ಎಸ್. ರಾವ್, ವಾಸುದೇವ ರಾವ್, ಸದಾನಂದ ಹೆಗಡೆ, ಸರಳಾ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ದುಶ್ಚಟಗಳಿಗೆ ಬಲಿಯಾದವರನ್ನು ಅದರಿಂದ ಹೊರ ತರುವುದು ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರಗಳು ಬಹಳ ಮುಖ್ಯ ಕೆಲಸ ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ! ಕೆ. ವಿದ್ಯಾಕುಮಾರಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ, ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಹಾಗೂ ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ‘ಗಾಂಧಿ ಜಯಂತಿ’ ಪ್ರಯುಕ್ತ ಉಡುಪಿ ರಾಜಾಂಗಣದಲ್ಲಿ ಆಯೋಜಿಸಲಾದ ‘ದುಶ್ಚಟ ಮುಕ್ತ ಸಮಾಜ ನಿಮಾರ್ಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ’ದಲ್ಲಿ ಭಾಗವಹಿಸಿ, ಈ ಶ್ರಮ್ ಕಾರ್ಡ್ ಮತ್ತು ಪಿಎಂಜಿ ದಿಶಾ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಪರ್ಯಾಯ ಶ್ರೀ ಕೃಷ್ಣಾಪುರ ಮಠದ ದಿವಾನರಾದ ವಾದಿರಾಜ ಭಟ್ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಜನ ಜಾಗೃತಿ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ಸತ್ಯಾನಂದ ನಾಯಕ್ ಆತ್ರಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನವ ಜೀವನ ಸಮಿತಿ ಸದಸ್ಯರನ್ನು ಗೌರವಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸೇವಾ ಯೋಜನೆಗಳು ನಾಡಿಗೆ ಮಾದರಿ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹಕ್ಕೊತ್ತಾಯವನ್ನು ಸ್ವೀಕರಿಸಿ ಮಾತನಾಡಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣದತ್ತ ಜನ ಜಾಗೃತಿ ವೇದಿಕೆ ಹಮ್ಮಿಕೊಂಡಿರುವ ಜನಪರ ಕಾರ್ಯಕ್ರಮಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದಾತ್ತ ಸಮಾಜಮುಖಿ ಚಟುವಟಿಕೆಗಳು ಪ್ರಶಂಸನೀಯ ಎಂದರು.
ಆಶಯ ಭಾಷಣ ಮಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಟ್ರಸ್ಟಿ ಹಾಗೂ ಖ್ಯಾತ ಮನೋರೋಗ ತಜ್ಞ ಡಾ! ಪಿ.ವಿ. ಭಂಡಾರಿ ಮಾತನಾಡಿ, ಮದ್ಯಪಾನ ಸಹಿತ ವಿವಿಧ ದುಶ್ಚಟಗಳಿಗೆ ಬಲಿಯಾಗಲು ಪರಿಣಾಮ ಬೀರುವ ಅಂಶಗಳು ಮತ್ತು ದುಶ್ಚಟ ಮುಕ್ತ ಸುಖೀ ಜೀವನಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ನವ ಜೀವನ ಸಮಿತಿಯ ಸುಂದರ್ ಮೆಂಡನ್ ಹಿರಿಯಡ್ಕ ಮತ್ತು ಸೀಮಾ ರಾಜು ಪಾಣಾರ ಪಾನಮುಕ್ತ ಜೀವನದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ತಂಡದ ಸದಸ್ಯರಾದ ವಿನಯ್ ಕುಕ್ಕೆಹಳ್ಳಿ, ರಾಜು ಪಾಣಾರ ಮತ್ತು ಮoಜುನಾಥ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಜನ ಜಾಗೃತಿ ವೇದಿಕೆಯ ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಕ್ಕೊತ್ತಾಯವನ್ನು ಮಂಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟಪೂರ್ವ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಜನ ಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಉಡುಪಿ ವಿಭಾಗ ಸೂಕ್ಷ್ಮ ವಿಮಾ ಪ್ರಬಂಧಕ ದಿನೇಶ್ ಪ್ರಭು, ಉಡುಪಿ ನಗರಸಭಾ ಸದಸ್ಯೆ ಮಾನಸ ಸಿ. ಪೈ, ಉಡುಪಿ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಶಮಿತಾ ಪಿ. ಶೆಟ್ಟಿ , ಜನ ಜಾಗೃತಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯರಾದ ಶಿವಕುಮಾರ್ ಅಂಬಲಪಾಡಿ, ಅಚ್ಯುತ ಪೂಜಾರಿ, ಹರೀಶ್ ಶೆಟ್ಟಿ ಚೇರ್ಕಾಡಿ, ಹರೀಶ್ ಕೋಟ್ಯಾನ್, ರಾಜು ಪೂಜಾರಿ, ಶಂಕರ್ ಕುಂದರ್, ವಸಂತ ಶೆಟ್ಟಿ ಚೆನ್ನಿಬೆಟ್ಟು, ಕೃಷ್ಣ ಶೆಟ್ಟಿ, ಕಾಪು ಯೋಜನಾಧಿಕಾರಿ ಜಯಂತಿ, ಬ್ರಹ್ಮಾವರ ಯೋಜನಾಧಿಕಾರಿ ರಮೇಶ್, ಜನ ಜಾಗೃತಿ ತಾಲೂಕು ಸಮಿತಿ ಸದಸ್ಯರಾದ ಶಂಕರ್ ಕುಲಾಲ್, ಶ್ರೀನಿವಾಸ ವಡ್ಡರ್ಸೆ, ರಾಜು ಕುಲಾಲ್, ಸಂತೋಷ್ ಸುವರ್ಣ ಬೊಳ್ಜೆ, ಉಡುಪಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಎಮ್. ಶೆಟ್ಟಿ ಪೇತ್ರಿ ಹಾಗೂ ಯೋಜನೆಯ ಉಡುಪಿ, ಕಾಪು, ಬ್ರಹ್ಮಾವರ ತಾಲೂಕು ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ಘಟಕದ ಸದಸ್ಯರು, ಯೋಜನೆಯ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗ, ಸ್ವಸಹಾಯ ಸಂಘಗಳ ಮತ್ತು ಪ್ರಗತಿ ಬಂಧು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ವಂದಿಸಿದರು. ಜನ ಜಾಗೃತಿ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮತ್ತು ಬಾರ್ಕೂರು ವಲಯ ಮೇಲ್ವಿಚಾರಕ ರವೀಂದ್ರ ಎಸ್. ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದ ಪೂರ್ವಭಾವಿಯಾಗಿ ಉಡುಪಿಯ ಬೋರ್ಡ್ ಹೈಸ್ಕೂಲ್ ನಿಂದ ರಾಜಾಂಗಣದ ವರೆಗೆ ಬೃಹತ್ ‘ಜನ ಜಾಗೃತಿ ಜಾಥಾ’ ನಡೆಯಿತು.
ಉಡುಪಿ: ಜಿಲ್ಲೆಯಲ್ಲಿ ಸಿಆರ್ಜಡ್ ಸಮಸ್ಯೆ ಇದ್ದಾಗ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ನೆಲೆಯಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೂಡಾ ಅಂದಿನ ಬಿಜೆಪಿ ಸರಕಾರದ ಸಚಿವರಾಗಿದ್ದ ಡಾ! ವಿ.ಎಸ್. ಆಚಾರ್ಯರವರು ಮರಳು ತೆಗೆಯುವ ವ್ಯವಸ್ಥೆ ಮಾಡಿದ್ದರು. ಕಾಂಗ್ರೆಸ್ಸಿಗೆ ಇಂತಹ ಯಾವುದೇ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲ. ಜಿಲ್ಲೆಯ ಲಾರಿ-ಟೆಂಪೋ ಮಾಲಕ ಚಾಲಕರ ಪ್ರಸಕ್ತ ಸಮಸ್ಯೆಗೆ ಕಾಂಗ್ರೆಸ್ಸಿನ ಆಡಳಿತ ವೈಫಲ್ಯವೇ ನೇರ ಕಾರಣ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ರವರ ಹತಾಶೆಯ ಹೇಳಿಕೆಯನ್ನು ನೋಡುವಾಗ ಅಯ್ಯೋ ಪಾಪ ಎನಿಸುತ್ತದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಯಾವುದೇ ನೀತಿ ಧೋರಣೆಗಳಿಲ್ಲ. ಸರಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮನೆ, ಕಟ್ಟಡ ನಿರ್ಮಾಣಕ್ಕೆ ಕಲ್ಲು, ಮಣ್ಣು, ಹೊಯ್ಗೆ, ಜಲ್ಲಿ ಇತ್ಯಾದಿ ಸಾಮಗ್ರಿಗಳು ದೊರಕುತ್ತಿಲ್ಲ. ಆಸ್ತಿ ನೋಂದಣಿ ದರವನ್ನು ಶೇಕಡಾ 30ರಷ್ಟು ಏರಿಸಿ, ಸರಕಾರದ ಖಜಾನೆ ತುಂಬಿಸುವ ಯೋಜನೆ ಮಧ್ಯಮ ವರ್ಗದ ಜನತೆಯ ಆಸ್ತಿ ಖರೀದಿ ಮತ್ತು ಮನೆ ನಿರ್ಮಾಣದ ಕನಸಿಗೆ ತಣ್ಣೀರೆರಚಿದೆ. ಹೊಸ ರೇಷನ್ ಕಾರ್ಡು ನೋಂದಾವಣೆ ಆಗುತ್ತಿಲ್ಲ. ಸರಕಾರ ಸರ್ವರ್ ಡೌನ್ ಎಂಬ ನೆಪವೊಡ್ಡಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಅವಕಾಶವಂಚಿತರನ್ನಾಗಿಸಿದೆ. ಎಲ್ಲ ಸಮಸ್ಯೆಗಳಿಗೂ ಕುಂಟು ನೆಪ ಹೇಳುವ ಬೊಗಳೆ ಸರಕಾರ ಇದಾಗಿದೆ. ಬರದ ಬಗ್ಗೆ ಯಾವುದೇ ಚಿಂತೆ ಇಲ್ಲ. ಸರಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳೊಳಗೆ ಪಕ್ಷ ಮತ್ತು ಸರಕಾರದ ನಡುವಿನ ಆಂತರಿಕ ಕಚ್ಚಾಟ ಮುಗಿಲು ಮುಟ್ಟಿದೆ. ಸಮಸ್ಯೆಗಳ ಕೂಪದಂತಿರುವ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನತೆ ಹಿಡಿ ಶಾಪ ಹಾಕುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರದ ಹುಳುಕುಗಳನ್ನು ಮುಚ್ಚಿಡಲು ಕಾಂಗ್ರೆಸಿಗರು ಬಿಜೆಪಿ ಹಾಗೂ ಜಿಲ್ಲೆಯ ಕ್ರಿಯಾಶೀಲ ಶಾಸಕರುಗಳ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ನಿರತರಾಗಿರುವುದು ಹಾಸ್ಯಾಸ್ಪದ. ರಾಜ್ಯ ಸರಕಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಸೂಕ್ತ ನೀತಿ ನಿಯಮಗಳನ್ನು ರೂಪಿಸದೆ, ಕೇವಲ ಪೊಲೀಸರ ಕೈಗೆ ಅಧಿಕಾರವನ್ನು ನೀಡಿ ಕೈಕಟ್ಟಿ ಕುಳಿತಿರುವುದನ್ನು ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರ ಬೇಜವಾಬ್ದಾರಿ ಹೇಳಿಕೆಗಳು ರಾಜ್ಯ ಸರಕಾರದ ಅಸಹಾಯಕತೆಯನ್ನು ಪ್ರತಿಬಿಂಬಿಸುವಂತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಪ್ರಮಾಣದ ಯಾವುದೇ ಗೊಂದಲಗಳು ಇರಲಿಲ್ಲ. ಲಾರಿ ಟೆಂಪೋ ಮಾಲಕರು ಬೀದಿಗೆ ಬಂದು ಸರಣಿ ಮುಷ್ಕರದಲ್ಲಿ ನಿರತರಾಗಿದ್ದರೂ ಸರಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದರೆ ಸರಕಾರದ ಜನವಿರೋಧಿ ನೀತಿಯ ಅಗಾಧತೆಯನ್ನು ಜನತೆ ಪ್ರಶ್ನಿಸುವಂತಾಗಿದೆ.
ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ: ಪ್ರಸಕ್ತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ 100 ದಿನ ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳದೆ, ಅನುದಾನವನ್ನೂ ಬಿಡುಗಡೆ ಮಾಡದೇ, ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಸ್ತಬ್ಧವಾಗಿದ್ದು, ಕೇವಲ ಒಂದೇ ವರ್ಗದ ತುಷ್ಟೀಕರಣ ಮತ್ತು ಹಿಂದೂ ವಿರೋಧಿ ಹಾಗೂ ಜನವಿರೋಧಿ ನೀತಿಯಲ್ಲಿ ಮಾತ್ರ ಸಕ್ರಿಯವಾಗಿದೆ ಎಂದರೆ ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ ಎಂಬ ಮಾತು ಸ್ಪಷ್ಟವೆನಿಸುತ್ತಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ನಯವಂಚಕತನವನ್ನು ಚೆನ್ನಾಗಿಯೇ ಅರಿತುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತಮ ಸಂಘಟಕರಾಗಿ ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಬಿಜೆಪಿ ಉಡುಪಿ ನಗರ ಮಂಡಲಾಧ್ಯಕ್ಷ ಮಹೇಶ್ ಠಾಕೂರ್ ರವರು ಪ್ರಸಕ್ತ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಕ್ರೀಡಾ ಕೂಟಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಠಾಕೂರ್ ರವರು ಇದೀಗ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಪದೋನ್ನತಿ ಹೊಂದಿರುವುದು ಅಭಿನಂದನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ 3 ಜಿಲ್ಲೆಗಳ ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿಯಾಗಿ, ರಾಜ್ಯ ಮಟ್ಟದ ಹಿರಿಯರ ಕ್ರೀಡಾ ಕೂಟದ ಕಾರ್ಯದರ್ಶಿಯಾಗಿ, ರಾಜ್ಯ ಮಟ್ಟದ ಕಿರಿಯರ ಕ್ರೀಡಾ ಕೂಟ, ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾ ಕೂಟ, 23ರ ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಕ್ರೀಡಾ ಕೂಟ ಹಾಗೂ 20 ಮತ್ತು 23ರ ವಯೋಮಿತಿಯ ಅಥ್ಲೆಟಿಕ್ ಚಾಂಪಿಯನ್ಶಿಪ್ ನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿರುವ ಮಹೇಶ್ ಠಾಕೂರ್ ರವರ ಮುಂದಿನ ಕಾರ್ಯ ಯೋಜನೆಗಳು ಫಲಪ್ರದವಾಗುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಅತ್ಯಮೂಲ್ಯ ಸೇವೆ ದೊರಕುವಂತಾಗಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಏಕಾತ್ಮ ಮಾನವತಾ ವಾದದ ಪ್ರತಿಪಾದಕರು, ಅಂತ್ಯೋದಯ ಪರಿಕಲ್ಪನೆಯನ್ನು ನಾಡಿಗೆ ನೀಡಿದ ಮಹಾನ್ ಚೇತನ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮ ದಿನಾಚರಣೆಯನ್ನು ಬಿಜೆಪಿ ಅಂಬಲಪಾಡಿ ಬೂತ್ 178ರ ವತಿಯಿಂದ ಬೂತ್ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿಯವರ ನಿವಾಸದಲ್ಲಿ ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ತತ್ವಾದರ್ಶಗಳು ಮತ್ತು ಜೀವನ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿ, ಪಂಡಿತ್ ಜೀ ಯವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಬೂತ್ ಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಗೆ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಯೋಗೀಶ್ ಶೆಟ್ಟಿ, ಪ್ರಮುಖರಾದ ಶರತ್ ಶೆಟ್ಟಿ, ಅನಿಲ್ ರಾಜ್ ಅಂಚನ್, ವಿನೋದ್ ಪೂಜಾರಿ, ನಿತಿನ್ ಕುಮಾರ್, ಪ್ರವೀಣ್ ಶೆಟ್ಟಿ ಅಂಬಲಪಾಡಿ ಮುಂತಾದವರು ಉಪಸ್ಥಿತರಿದ್ದರು.
ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಉಡುಪಿ: ವಿಧ್ಯಾರ್ಥಿಗಳು ತಮ್ಮ ಪ್ರೌಢಾವಸ್ಥೆಯಲ್ಲೇ ಕೆಡುಕು ಒಳಿತುಗಳ ಪರಾಮರ್ಶೆ ನಡೆಸಿ, ದುರಾಭ್ಯಾಸಗಳಿಂದ ದೂರವಿರುವ ಜೊತೆಗೆ ಸುಸಂಸ್ಕೃತಿ, ಸನ್ನಡೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಜನೆಗೆ ಹೆಚ್ಚಿನ ಒಲವು ತೋರುವುದು ಅತ್ಯಗತ್ಯ. ಶಿಸ್ತುಬದ್ಧ ಜೀವನ ಕ್ರಮದಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ-ದೊಡ್ಡಣಗುಡ್ಡೆ ಡಾ! ಎ.ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ತಜ್ಞೆ ಡಾ! ಸೌಜನ್ಯಾ ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಬಲಪಾಡಿ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ವತಿಯಿಂದ ಆದಿಉಡುಪಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾದಕ ವಸ್ತುಗಳ ನಿಗ್ರಹ ಮತ್ತು ವ್ಯಸನಮುಕ್ತ ಜೀವನದ ಕುರಿತು ಸಮಗ್ರ ಮಾಹಿತಿ ನೀಡಿದರು.
ಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆದಿಉಡುಪಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮಾಹಿತಿಯ ಬಳಿಕ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ನಡೆಸಿ, ಸಿಹಿ ತಿಂಡಿ ವಿತರಿಸಲಾಯಿತು.
ಆದಿಉಡುಪಿ ಪ್ರಕೃತಿ ಒಕ್ಕೂಟದ ಪದಾಧಿಕಾರಿ ದಿನೇಶ್, ಸೇವಾ ಪ್ರತಿನಿಧಿ ಶ್ವೇತಾ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಗೀತಾ ವಂದಿಸಿದರು.
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರ ಉಪಸ್ಥಿತಿಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆೆ ನಯನಾ ಗಣೇಶ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಮುಖಂಡರುಗಳಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆೆ, ದಿನಕರ ಬಾಬು, ಶ್ಯಾಮಲಾ ಎಸ್. ಕುಂದರ್, ಅಂಡಾರು ದೇವಿಪ್ರಸಾದ್ ಶೆಟ್ಟಿ, ಕಿರಣ್ ಕುಮಾರ್, ವೀಣಾ ಎಸ್. ಶೆಟ್ಟಿ, ಸತ್ಯಾನಂದ ನಾಯಕ್, ಗುರುಪ್ರಸಾದ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ರಾಘವೇಂದ್ರ ಉಪ್ಪೂರು, ರಾಜು ಕುಲಾಲ್, ಶ್ರೀನಿಧಿ ಹೆಗ್ಡೆೆ, ಸುದೀಪ್ ಶೆಟ್ಟಿ ನಿಟ್ಟೆೆ, ದಾವೂದ್ ಅಬೂಬಕರ್, ಪ್ರವೀಣ್ ಕುಮಾರ್ ಗುರ್ಮೆ, ಆಲ್ವಿನ್ ಡಿ’ಸೋಜಾ, ದೀಪಕ್ ಕುಮಾರ್ ಶೆಟ್ಟಿ, ಶಂಕರ ಅಂಕದಕಟ್ಟೆ, ಮಹಾವೀರ ಹೆಗ್ಡೆ, ಶ್ರೀಕಾಂತ್ ನಾಯಕ್, ದಿನೇಶ್ ಅಮೀನ್, ನವೀನ್ ನಾಯಕ್, ಗೋಪಾಲಕೃಷ್ಣ ರಾವ್, ಸಚಿನ್ ಪೂಜಾರಿ, ಸುಮಾ ಶೆಟ್ಟಿ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ಉಡುಪಿ ನಗರಸಭಾ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.