ದುಡಿಯುವವರ ಮೇಲೆ ಕೇಸ್ ದಾಖಲು, ಹೊಟ್ಟೆ ತುಂಬಿದವರ ಕೇಸ್ ವಾಪಸ್; ಇದು ಕಾಂಗ್ರೆಸ್ ಸರಕಾರದ ದ್ವಿಮುಖ ನೀತಿ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಕೂಳಿಗಾಗಿ ದುಡಿಯುವ ಕಾರ್ಮಿಕ ವರ್ಗದ ಮೇಲೆ ಕೇಸ್ ದಾಖಲು; ಹೊಟ್ಟೆ ತುಂಬಿದ ಕುಬೇರ ಮೇಲಿನ ಕೇಸ್ ವಾಪಸ್; ಇದು ರಾಜ್ಯ ಕಾಂಗ್ರೆಸ್ ಸರಕಾರದ ದ್ವಿಮುಖ ನೀತಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿ ಸಾಗಾಟದ ಹಳೇ ಲಾರಿಗಳ ಮಾಲಕ, ಚಾಲಕರ ಮೇಲೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಅತ್ತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಉಳ್ಳವರಿಗೊಂದು ನ್ಯಾಯ; ಇಲ್ಲದವರಿಗೊಂದು ನ್ಯಾಯ. ಇದು ಬಡವರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಬಡವರ ವಿರೋಧಿ ನೀತಿಯಾಗಿದೆ.

ಆಕ್ರಮ ಆದಾಯ ಗಳಿಕೆಯ ಬಗ್ಗೆ ಪ್ರಾಥಮಿಕ ವರದಿಯನ್ನು ಆಧರಿಸಿಯೇ ಈ ಹಿಂದಿನ ಬಿಜೆಪಿ ಸರಕಾರ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು, ಅದರಲ್ಲೇನಾದರೂ ಲೋಪವಿದ್ದಲ್ಲಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಅಂದೇ ಯಾಕೆ ಚಕಾರವೆತ್ತಿಲ್ಲ ಎಂಬುದು ಪ್ರಶ್ನಾರ್ಥಕವಾಗಿದೆ. ಇಂದು ಹಠಾತ್ತಾಗಿ ರಾಜ್ಯ ಸಚಿವ ಸಂಪುಟ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣವನ್ನು ವಾಪಾಸು ಪಡೆಯುವ ನಿರ್ಧಾರ ಕೈಗೊoಡಿರುವುದು ಯಾರ ಕಟ್ಟಪ್ಪಣೆಯ ಮೇರೆಗೆ ಎoಬುದನ್ನು ಸರಕಾರ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.

ಬ್ರಹ್ಮಾಂಡ ಭ್ರಷ್ಟಾಚಾರ, ಕಮಿಷನ್ ದಂಧೆ, ಪಂಚ ರಾಜ್ಯ ಚುನಾವಣೆಗಾಗಿ ರಾಜ್ಯ ಲೂಟಿ, ಸ್ವಜನ ಪಕ್ಷಪಾತ, ಗ್ಯಾರಂಟಿಗಳ ವೈಫಲ್ಯ, ಸಿಎಂ-ಡಿಸಿಎಂ ಪೈಪೋಟಿ, ಸಚಿವರ ಲಂಗು ಲಗಾಮಿಲ್ಲದ ಹೇಳಿಕೆಗಳು, ಅಭಿವೃದ್ಧಿ ಸ್ಥಗಿತ, ರಾಜಕೀಯ ಓಲೈಕೆಗಾಗಿ ತಮಿಳುನಾಡಿಗೆ ನೀರು, ರೈತ ವಿರೋಧಿ ನೀತಿ, ರೈತರ ಸರಣಿ ಆತ್ಮಹತ್ಯೆ, ಬರ ನಿರ್ವಹಣೆಯಲ್ಲಿ ವೈಫಲ್ಯ, ಶ್ಯಾಡೋ ಸಿಎಂ, ಹಿಂದೂ ಧಮನ ನೀತಿ, ಕತ್ತಲ ಭಾಗ್ಯ ಇವೇ ಮುಂತಾದ ನೂರಾರು ವೈಫಲ್ಯಗಳನ್ನು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ನಾಚಿಕೆ, ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿದೆ.

ಸಚಿವರ ದುರಹಂಕಾರದ ನಡೆ, ಸ್ಪೀಕರ್ ಸ್ಥಾನವನ್ನು ಧರ್ಮದ ದೃಷ್ಠಿಯಲ್ಲಿ ಕಂಡು ಹೀನಾಯ ಹೇಳಿಕೆ ನೀಡಿದ ಓರ್ವ ಸಚಿವನ ಮತಾಂಧತೆಯ ಪ್ರದರ್ಶನ, ಅಧಿಕಾರಕ್ಕಾಗಿ ಬಣ ರಾಜಕೀಯದಲ್ಲಿ ನಿರತರಾಗಿರುವ ಸಚಿವರು, ಶಾಸಕರ ಒಡ್ಡೋಲಗದ ನಡುವೆ ದೇಶದ ಶ್ರೀಮಂತ ರಾಜಕಾರಿಣಿ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ಸಿಬಿಐ ಪ್ರಕರಣದ ವಾಪಸ್ ಪ್ರಹಸನ ರಾಜ್ಯದ ಜನತೆಯ ನೆಮ್ಮದಿ ಭಂಗ ಮಾಡಿದೆ. ಈ ಕೆಟ್ಟ ಸರಕಾರ ಯಾವಾಗ ತೊಲಗುತ್ತದೆ ಎಂದು ಕಾತರದಿಂದ ಕಾಯುತ್ತಿರುವ ರಾಜ್ಯದ ಜನತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ‘ನುಡಿದಂತೆ ನಡೆಯದ, ಮಾತು ತಪ್ಪಿದ’ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಟ್ಟೆಪಾಡಿಗೆ ದುಡಿಯುವ ಲಾರಿ ಚಾಲಕ, ಕಾರ್ಮಿಕರ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಡೆ ಖಂಡನೀಯ : ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್


ಉಡುಪಿ: ನ.24ರಂದು ಮಣಿಪಾಲದ ರಜತಾದ್ರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ರವರು, ಕಟ್ಟಡ ಸಾಮಗ್ರಿ ಸಾಗಾಟದ ಲಾರಿ ಮಾಲಕರು, ಚಾಲಕರು ಮತ್ತು ಕಾರ್ಮಿಕರು ನಡೆಸಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನೋಟಿಸ್ ನೀಡಿರುವ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ಬಳಿ ಪ್ರಶ್ನಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ ಶಾಸಕರ ಮೇಲಿನ ದ್ವೇಷದಿಂದ ಈ ವಿಚಾರವನ್ನು ರಾಜಕೀಯಗೊಳಿಸಿ ಹೊಟ್ಟೆಪಾಡಿಗೆ ದುಡಿಯುವ ಲಾರಿ ಚಾಲಕ, ಕಾರ್ಮಿಕರ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮನಸ್ಥಿತಿ ಖಂಡನೀಯ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.

ಈ ಹಿಂದೆ ನಡೆದ ಭಾರತ್ ಬಂದ್ ಸಂದರ್ಭದಲ್ಲಿ ಕಾನೂನನ್ನು ಉಲ್ಲಂಘಿಸಿ ಉಡುಪಿಯಲ್ಲಿ ಬಲವಂತದ ಬಂದ್ ಮಾಡಲು ಪ್ರಯತ್ನಿಸಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಲಾಟಿ ಚಾರ್ಜ್ ರುಚಿ ಅನುಭವಿಸಿರುವ ರಮೇಶ್ ಕಾಂಚನ್ ರವರಿಗೆ ಕ್ರಿಯಾಶೀಲ ಶಾಸಕ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ರವರು ಕೆಡಿಪಿ ಸಭೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಪಾಠ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲಕ, ಚಾಲಕ, ಕಾರ್ಮಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೈಗೊಂಡ ಕ್ರಮವನ್ನು ಖಂಡಿಸಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಪೋಲಿಸ್ ಇಲಾಖೆ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಕಾರ್ಕಳ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಸ್ಪಷ್ಟತೆ ಕೇಳಿರುವುದು ತಪ್ಪು ಎಂದು ಬೊಬ್ಬೆ ಹೊಡೆಯುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಾಲಿಷ ವರ್ತನೆ ಹಾಸ್ಯಾಸ್ಪದವಾಗಿದೆ.

ಸಂವಿಧಾನಾತ್ಮಕವಾಗಿ ಜನಪರ ಪ್ರತಿಭಟನೆ ನಡೆಸಿದರೆ ಪೋಲಿಸ್ ಇಲಾಖೆ ನೋಟಿಸ್ ನೀಡುವುದಾದರೆ ಯಾವ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂಬ ಬಗ್ಗೆ ಮಾರ್ಗಸೂಚಿಯನ್ನು ನೀಡುವಂತೆ ಶಾಸಕರು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಆಗ್ರಹಿಸಿರುವುದು ನ್ಯಾಯ ಸಮ್ಮತವಾಗಿದ್ದು, ನೊಟೀಸ್ ಪಡೆದವರು ಜಿಲ್ಲಾ ನ್ಯಾಯಾಲಯ, ಹೈಕೋರ್ಟಿಗೆ ಹೋಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಡಾಫೆಯ ಮಾತನ್ನಾಡಿರುವುದು ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಪೊಲೀಸ್ ರಾಜ್ಯವನ್ನಾಗಿಸಲು ಹೊರಟಿದೆ ಎಂಬುದನ್ನು ಸಾಬೀತುಪಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಈ ಎಲ್ಲಾ ವಿದ್ಯಮಾನಗಳನ್ನು ಮೂಕ ಪ್ರೇಕ್ಷಕರಾಗಿ ವೀಕ್ಷಿಸಿರುವುದು ಅನುಮಾನಕ್ಕೆಡೆಮಾಡಿದೆ.

ಸಂಕಷ್ಟದಲ್ಲಿದ್ದ ಕಾರ್ಮಿಕರು ತಮ್ಮ ಅಳಿವು ಉಳಿವಿಗಾಗಿ ನಡೆಸಿದ ಹೋರಾಟದ ಪರ ವಹಿಸದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಡೆ ಖಂಡನೀಯ. ರಾಜ್ಯ ಕಾಂಗ್ರೆಸ್ ಸರಕಾರದ ಶಾಸಕರೇ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕೆಲವು ಸಚಿವರಂತೂ ಯಾವ ರೀತಿ ಎಲ್ಲೆ ಮೀರಿ ದುರಹಂಕಾರದಿಂದ ಮೆರೆಯುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆತ್ಮಾವಲೋಕನ ನಡೆಸಿ ಅಂತವರಿಗೆ ಮೊದಲು ಬುದ್ಧಿವಾದ ಹೇಳುವ ಸತ್ಕಾರ್ಯ ಮಾಡುವುದು ಉತ್ತಮ.

ನಕಲಿ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳ ವೈಫಲ್ಯ, ಬರ ನಿರ್ವಹಣೆಯಲ್ಲಿ ವೈಫಲ್ಯ, ರೈತರ ಆತ್ಮಹತ್ಯೆ, ವಿದ್ಯುತ್ ಕಣ್ಣು ಮುಚ್ಚಾಲೆ, ಆಂತರಿಕ ಕಚ್ಚಾಟ, ಕಮಿಷನ್ ದಂಧೆಯಲ್ಲಿ ಮುಳುಗಿ ರಾಜ್ಯದ ಹಿತವನ್ನು ಬಲಿಕೊಟ್ಟಿದೆ. ಅಸಹಾಯಕರು, ಬಡ ಜನತೆ ಹಾಗೂ ಕಾರ್ಮಿಕರ ಪರ ಕಾಳಜಿ ಇಲ್ಲದ ರಾಜ್ಯ ಕಾಂಗ್ರೆಸ್ ಸರಕಾರದ ದುರಹಂಕಾರದ ವರ್ತನೆಗೆ ಜನತೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಅಂಬಲಪಾಡಿ ವಲಯ ಕಛೇರಿಯಲ್ಲಿ ಧನಲಕ್ಷ್ಮೀ ಪೂಜೆ



ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಇದರ ಅಂಬಲಪಾಡಿ ವಲಯ ಕಛೇರಿಯಲ್ಲಿ ಧನಲಕ್ಷ್ಮೀ ಪೂಜೆಯು ಭಜನಾ ಸೇವೆಯೊಂದಿಗೆ ವಿಜೃಂಭಣೆಯಿoದ ನೆರವೇರಿತು.

ಈ ಸಂದರ್ಭದಲ್ಲಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ, ತಾಲೂಕು ಸಮಿತಿ ಸದಸ್ಯರಾದ ಗಣೇಶ್ ಕುಮಾರ್ ಸಂಪಿಗೆನಗರ, ಪ್ರತಾಪ್ ಕುಮಾರ್ ಉದ್ಯಾವರ, ವಲಯ ಮೇಲ್ವಿಚಾರಕಿ ಪ್ರೇಮಾ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ನೇಜಾರು ಅಮಾನುಷ ಹತ್ಯೆ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ: ಕುಯಿಲಾಡಿ



ಉಡುಪಿ: ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ನೇಜಾರು ತೃಪ್ತಿ ಲೇಔಟ್ ನಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಮಂದಿಯ ಅಮಾನುಷ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಸಿಸಿ ಟಿವಿ ಹಾಗೂ ಇನ್ನಿತರ ಮೂಲಗಳ ಜಾಡು ಹಿಡಿದು ಕೊಲೆ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಆರೋಪಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸಿ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯ ಸುಶಿಕ್ಷಿತ ಜನತೆ ಕಾನೂನು ಸುವ್ಯವಸ್ಥೆಯೊಂದಿಗೆ ನಿರ್ಭೀತಿಯಿಂದ ಸಹಬಾಳ್ವೆಯನ್ನು ನಡೆಸುತ್ತಿದ್ದು, ಈ ಅಮಾನುಷ ಹತ್ಯೆ ಪ್ರಕರಣ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿಯನ್ನು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲು ತಂಡಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಿರುವುದನ್ನೂ ಖಚಿತಪಡಿಸಿದ್ದಾರೆ.

ಪೊಲೀಸರ ಪರಿಣಾಮಕಾರಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಭೀಭತ್ಸ ಘಟನೆಗಳು ಶಾoತಿ ಪ್ರಿಯರ ಜಿಲ್ಲೆ ಉಡುಪಿಯಲ್ಲಿ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ರೂಪಿಸುವುದು ಸೂಕ್ತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರ ಬoಕೇರಕಟ್ಟ ಅಂಬಲಪಾಡಿ : ಮಕ್ಕಳ ದಿನಾಚರಣೆ, ಸ್ಟೀಲ್ ಕವಾಟು ಕೊಡುಗೆ ಹಸ್ತಾಂತರ



ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ಬಂಕೇರಕಟ್ಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಪುಟಾಣಿಗಳಿಗೆ ಸಿಹಿ ತಿಂಡಿ ಹಂಚುವ ಮೂಲಕ ಆಚರಿಸಲಾಯಿತು.

ಸ್ಥಳೀಯ ಉದ್ಯಮಿ, ಶ್ರೀ ನಾಗರಾಜ ಸೇವಾ ಸಮಿತಿ ಬಂಕೇರಕಟ್ಟ ಇದರ ಗೌರವಾಧ್ಯಕ್ಷ ಎ.ವಿಶ್ವನಾಥ್ ಹೆಗ್ಡೆಯವರು ಕೊಡುಗೆ ನೀಡಿದ ಸ್ಟೀಲ್ ಕವಾಟನ್ನು ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸ್ಥಳೀಯ ವಾರ್ಡ್ ಸದಸ್ಯ ರಾಜೇಶ್ ಸುವರ್ಣ, ಮಾಜಿ ಅಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು, ಭಾರತಿ ಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ, ಸೋಮನಾಥ್ ಬಿ.ಕೆ., ಸ್ಥಳೀಯರಾದ ಗುರುರಾಜ್, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಸಹಾಯಕಿ ಶ್ರೀಲತಾ, ಬಾಲವಿಕಾಸ ಸಮಿತಿ ಸದಸ್ಯರು, ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಬಿಜೆಪಿ ಹಿರಿಯ ಕಾರ್ಯಕರ್ತ ಕರಾಮತ್ ಆಲಿ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ



ಉಡುಪಿ: ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಡಾ! ವಿ.ಎಸ್. ಆಚಾರ್ಯರವರ ನಿಕಟವರ್ತಿ, ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗ ನಿವಾಸಿ ಕರಾಮತ್ ಆಲಿ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಲ್ಪಸಂಖ್ಯಾತ ಮೋರ್ಚಾದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ಜೊತೆ ಜೋಡಿಸುವ ಜೊತೆಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿರುವ ಕರಾಮತ್ ಆಲಿ ಯವರ ನಿಧನದಿಂದ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ನೀಡಲಿ ಹಾಗೂ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾಮತ್ ಆಲಿಯವರ ನಿವಾಸಕ್ಕೆ ಪಕ್ಷದ ಪದಾಧಿಕಾರಿಗಳೊಂದಿಗೆ ಬೇಟಿ ನೀಡಿದ ಕುಯಿಲಾಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಪ್ರಮುಖರಾದ ರವಿ ಅಮೀನ್, ಪೂರ್ಣಿಮಾ ಸುರೇಶ್ ನಾಯಕ್, ವೀಣಾ ಎಸ್. ಶೆಟ್ಟಿ, ದಾವೂದ್ ಅಬೂಬಕ್ಕರ್, ಗಿರೀಶ್ ಎಮ್. ಅಂಚನ್, ದಿನಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕುಟುಂಬ ರಾಜಕಾರಣದಲ್ಲೇ ಸುದೀರ್ಘ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿಗೆ ಬಿಜೆಪಿ ರಾಜ್ಯ ನಾಯಕತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮಹೇಶ್ ಠಾಕೂರ್



ಉಡುಪಿ: ಸ್ವಾತಂತ್ರ್ಯಾನಂತರ ನಕಲಿ ಗಾಂಧಿ ಪರಿವಾರದ ಸುಪರ್ದಿಯಲ್ಲೇ ಸುಧೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಕುಟುಂಬ ರಾಜಕಾರಣದ ಪಿತಾಮಹ ಎಂಬುದು ಜಗಜ್ಜಾಹೀರಾಗಿದೆ. ಜೀವನ ಪರ್ಯಂತ ಒಂದೇ ಕುಟುಂಬಕ್ಕೆ ಬಹು ಪರಾಕ್ ಹೇಳುವ ಕಾಂಗ್ರೆಸಿಗರಿಗೆ ಬಿಜೆಪಿ ರಾಜ್ಯ ನಾಯಕತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರ ಕುಟುಂಬ ರಾಜಕಾರಣದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ, ಕಾರ್ಯಕರ್ತರೇ ಪಕ್ಷದ ಜೀವಾಳ. ಈ ಹಿನ್ನೆಲೆಯಲ್ಲಿ ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತ, ಸಂಘಟನಾ ಚತುರ, ಯುವ ನಾಯಕ ಬಿ.ವೈ. ವಿಜಯೇಂದ್ರರವರನ್ನು ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಮಯೋಚಿತವಾಗಿದೆ. ಯುವ ನಾಯಕತ್ವದಿಂದ ಯುವ ಶಕ್ತಿಗೆ ಹೊಸ ಚೈತನ್ಯ ತುಂಬಿರುವ ಜೊತೆಗೆ ಬಿಜೆಪಿ ರಾಜ್ಯಾದ್ಯಂತ ಇನ್ನಷ್ಟು ಬಲಿಷ್ಠವಾಗಿ ಬೆಳೆದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ವಿಜಯ ದಾಖಲಿಸುವುದು ನಿಶ್ಚಿತ. ಬಿ.ವೈ. ವಿಜಯೇಂದ್ರರವರು ಮಾಸ್ ಲೀಡರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಪುತ್ರ ಎಂಬುದು ಹೆಮ್ಮೆಯ ವಿಚಾರ. ಆದರೆ ಕಾಂಗ್ರೆಸಿಗರು ಸಿ.ಎಂ. ಸಿದ್ಧರಾಮಯ್ಯ ಹಾಗೂ ಇನ್ನಿತರ ಘಟಾನುಘಟಿ ಕಾಂಗ್ರೆಸ್ ನಾಯಕರ ಕುಟುಂಬ ರಾಜಕಾರಣದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆಯ ಸಹಿತ ಕಳೆದ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ರೂವಾರಿಯಾಗಿದ್ದ ಬಿ.ವೈ. ವಿಜಯೇಂದ್ರರವರ ರಾಜ್ಯ ನಾಯಕತ್ವದ ಆಯ್ಕೆಯಿಂದ ಕಾಂಗ್ರೆಸ್ ಪಾಳಯದಲ್ಲಿ ನಡುಕ ಉಂಟಾಗಿರುವುದು ವಾಸ್ತವ. ಭ್ರಷ್ಟಾಚಾರ, ಕುಸಿದ ಆಡಳಿತ ಯಂತ್ರ, ಬಣ ರಾಜಕೀಯ, ಬರ ನಿರ್ವಹಣೆಯಲ್ಲಿ ವೈಫಲ್ಯ, ಹಳ್ಳ ಹಿಡಿದಿರುವ ಗ್ಯಾರಂಟಿ ಯೋಜನೆಗಳು, ಸಾಲು ಸಾಲು ಹಗರಣಗಳು, ಸರಣಿ ಪ್ರತಿಭಟನೆಗಳು, ಸಿ.ಎಂ. ಡಿ.ಸಿ.ಎಂ. ಸ್ಥಾನಕ್ಕೆ ಪೈಪೋಟಿ, ಹಳಿ ತಪ್ಪಿದ ಆರ್ಥಿಕತೆ, ಅಭಿವೃದ್ಧಿ ಸ್ಥಗಿತ, ಆಡಳಿತ ವಿರೋಧಿ ಅಲೆ ಇವೇ ಮುoತಾದ ಜ್ವಲಂತ ಸಮಸ್ಯೆಗಳಿಂದ ಸೊರಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಅಸ್ತಿತ್ವದ ಗ್ಯಾರಂಟಿಯನ್ನೇ ಕಳೆದುಕೊಂಡಿರುವುದು ಜನಜನಿತವಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಇಲ್ಲಸಲ್ಲದ ವಿಚಾರಗಳನ್ನು ಮುನ್ನೆಲೆಗೆ ತಂದು ಮುಖಭಂಗ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.

ತತ್ವ ಸಿದ್ಧಾಂತಗಳ ಬಗ್ಗೆ ಬೊಗಳೆ ಬಿಡುತ್ತಿರುವ ಕಾಂಗ್ರೆಸ್ ಈ ಹಿಂದೆ ಅಧಿಕಾರ ದಾಹದಿಂದ ಜೆಡಿಎಸ್ ಜೊತೆಗೆ ಮೈತ್ರಿ ಸರಕಾರ ರಚಿಸಿರುವುದನ್ನು ಮರೆತು ಇಬ್ಬಗೆ ನೀತಿ ಪ್ರದರ್ಶಿಸುತ್ತಿರುವುದು ವಿಪರ್ಯಾಸ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಹಿಂದೆಂದೂ ಕಂಡರಿಯದ ಅದ್ಭುತ ಪ್ರಗತಿ ಸಾಧಿಸಿದೆ. ನೂತನ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಿ.ವೈ. ವಿಜಯೇಂದ್ರರವರು ಬೂತ್ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸುವ ಪಣತೊಟ್ಟು ಬೂತ್ ಅಧ್ಯಕ್ಷರ ಬೇಟಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಸದ್ಯದಲ್ಲೇ ಪಕ್ಷದ ಶಾಸಕಾಂಗ ಸಭೆ ನಡೆದು ವಿರೋಧ ಪಕ್ಷದ ನಾಯಕನ ಆಯ್ಕೆಯೂ ನಡೆಯಲಿದೆ. ಲೋಕಸಭೆ ಸಹಿತ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ಆದರೆ ತಮ್ಮ ಹುಳುಕನ್ನು ಮುಚ್ಚಿಟ್ಟು ಇತರ ಪಕ್ಷಗಳತ್ತ ಬೆರಳು ತೋರುವ ಕಾಂಗ್ರೆಸ್ ಚಾಳಿಗೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ನಾಂದಿ : ಕೆ.ಉದಯಕುಮಾರ್ ಶೆಟ್ಟಿ



ಉಡುಪಿ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆಯನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಸ್ವಾಗತಿಸಿದ್ದಾರೆ.

ಬಿ.ವೈ. ವಿಜಯೇಂದ್ರರವರ ಆಯ್ಕೆ ಪಕ್ಷದ ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಯುವ ನಾಯಕರಾಗಿ, ನೀಡಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಉತ್ತಮ ಫಲಿತಾಂಶ ದಾಖಲಿಸಿದ ಹಿರಿಮೆ ಬಿ.ವೈ. ರಾಘವೇಂದ್ರ ಅವರಿಗಿದೆ. ಅವರ ನಾಯಕತ್ವದಲ್ಲಿ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಲು ನಾಂದಿ ಹಾಡಿದಂತಾಗಿದೆ. ಬಿ.ವೈ. ವಿಜಯೇಂದ್ರ ರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೆ.ಉದಯ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ, ಪರಿಸರ ಪ್ರೇಮಿ ಶಶಿಧರ್ ಹೆಮ್ಮಣ್ಣ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ



ಉಡುಪಿ: ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಜಿಲ್ಲೆಯ ಹಿರಿಯ ಪತ್ರಕರ್ತ, ಪರಿಸರ ಪ್ರೇಮಿ ಶಶಿಧರ್ ಹೆಮ್ಮಣ್ಣ ರವರ ಅಕಾಲಿಕ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹೆಮ್ಮಣ್ಣ ರವರು ಕ್ಷಿತಿಜ ಎಂಬ ವಾರ ಪತ್ರಿಕೆ ಆರಂಭಿಸಿ, ಈಟಿವಿ ಕನ್ನಡ, ಡಿಡಿ ನ್ಯೂಸ್ ವರದಿಗಾರರಾಗಿ, ಕನೆಕ್ಟ್ ಮೀಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ, ಪರಿಣಾಮಕಾರಿ ಕೃಷಿ ಸಂಬಂಧಿತ ಲೇಖನಗಳ ಸಹಿತ ನೆಲ, ಜಲ, ಪರಿಸರ ಸಂರಕ್ಷಣೆಯ ಕಾಳಜಿಯಿಂದ ಕರಾವಳಿಯಲ್ಲಿ ಕಾಂಡ್ಲಾ ವನ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅವರ ಪರಿಸರ ಪ್ರೇಮಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆಗೆ ಉಡುಪಿ ಜಿಲ್ಲಾ ಬಿಜೆಪಿ ಹರ್ಷ



ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಸಂಘಟನಾ ಚತುರ, ಶಿಕಾರಿಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರರವರ ಆಯ್ಕೆಗೆ ಉಡುಪಿ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾದ್ಯಂತ ಸದೃಢವಾಗಿ ಬೆಳೆದು ಇನ್ನಷ್ಟು ಎತ್ತರಕ್ಕೇರಿ ಮುಂದಿನ ಲೋಕಸಭಾ ಚುನಾವಣೆ ಸಹಿತ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ವಿಜಯ ದಾಖಲಿಸುವುದು ನಿಶ್ಚಿತ.

ನೂತನ ರಾಜ್ಯಾಧ್ಯಕ್ಷ ಜವಾಬ್ದಾರಿ ವಹಿಸಿಕೊಂಡಿರುವ ಬಿ.ವೈ. ವಿಜಯೇಂದ್ರರವರಿಗೆ ಹಾರ್ದಿಕ ಅಭಿನಂದನೆಯನ್ನು ಸಲ್ಲಿಸುವ ಜೊತೆಗೆ ಯುವ ನಾಯಕತ್ವದೊಂದಿಗೆ ಯುವ ಶಕ್ತಿಗೆ ಹೊಸ ಚೈತನ್ಯ ತುಂಬಿದ ಪಕ್ಷದ ವರಿಷ್ಠರ ನಿರ್ಧಾರ ಸ್ವಾಗತಾರ್ಹ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started