ಉಡುಪಿ: ಭಾರತದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅಲ್ಲಿನ ಹಿಂದೂಗಳ ಬದುಕನ್ನು ನರಕ ಸದೃಶ ಮಾಡಿದ್ದ 370ನೇ ವಿಧಿ ರದ್ದತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಐತಿಹಾಸಿಕ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಸುಪ್ರೀಂ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ. ನ್ಯಾಯ ಸಮ್ಮತ ತೀರ್ಪಿನಿಂದ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಒಡ್ಡಿದ್ದ ವಿಭಜನಕಾರಿ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ ಆದಂತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ದೇಶ ವಿಭಜನೆಯ ಕರಾಳ ಇತಿಹಾಸ ಸೃಷ್ಟಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಪುನಃ 370ನೇ ವಿಧಿಯನ್ನು ಜಾರಿಗೆ ತರುತ್ತೇವೆ ಎನ್ನುತ್ತಿರುವುದು ಕಾಂಗ್ರೆಸ್ಸಿನ ವಿಭಜನಕಾರಿ ಮನಸ್ಥಿತಿಗೆ ಜ್ವಲಂತ ಸಾಕ್ಷಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೆ ನಾಂದಿ ಹಾಡಿರುವ 370ನೇ ವಿಧಿ ರದ್ದತಿ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮಾನ್ಯತೆಯ ಮುದ್ರೆ ಒತ್ತಿರುವುದು ಮೋದಿ ಸರಕಾರದ ಅದ್ವಿತೀಯ ಸಾಧನೆಗೆ ಮತ್ತೊಂದು ಗರಿ ಇಟ್ಟಂತಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರದಿಂದ ಬಳಲಿರುವ ರೈತರ ಮೇಲೆ ಈ ಸರಕಾರ ಬರೆ ಎಳೆಯುತ್ತಿದೆ; ಬರಗಾಲ ನಿರ್ವಹಣೆಯಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.
ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಮೊದಲೇ ವಿದ್ಯುತ್ ಕೊರತೆ ಇದೆ. ನಾವು 7 ಗಂಟೆ ವಿದ್ಯುತ್ ಕೊಡುತ್ತಿದ್ದೆವು. ಈ ಸರಕಾರ 5 ಗಂಟೆಯಷ್ಟೂ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಹೊಸ ಬೋರ್‍ವೆಲ್ ಕೊರೆಸಿದಾಗ ವಿದ್ಯುತ್ ಸಂಪರ್ಕಕ್ಕೆ 2ರಿಂದ 3 ಲಕ್ಷ ಖರ್ಚಾಗುತ್ತದೆ. ಆ ಖರ್ಚನ್ನು ರೈತರೇ ಕೊಡಬೇಕೆಂದು ಸರಕಾರ ತಿಳಿಸಿದೆ ಎಂದು ಕಿಡಿಕಾರಿದರು.
ರೈತರು, ಬಡವರ ಮೇಲೆ ಬರೆ ಹಾಕುವ ಸರಕಾರ ಇದು ಎಂದು ಟೀಕಿಸಿದ ಅವರು, ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಕೃಷ್ಣಾ, ಕಳಸಾ ಬಂಡೂರಿ ಸೇರಿ ಉತ್ತರ ಕರ್ನಾಟಕದ ಯಾವುದೇ ನೀರಾವರಿ ಯೋಜನೆಗೆ ಒಂದು ನಯಾಪೈಸೆಯನ್ನೂ ಕೊಟ್ಟಿಲ್ಲ. ಆರು ತಿಂಗಳಾದರೂ ಒಂದು ಕಿಮೀ ರಸ್ತೆ ಮಾಡಿಲ್ಲ. ರೈತರು, ಉತ್ತರ ಕರ್ನಾಟಕದ ಬಗ್ಗೆ ಕಳಕಳಿರಹಿತ, ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಆರೋಪಿಸಿದರು.
ಈ ಎಲ್ಲ ವಿಷಯಗಳನ್ನು ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲು ಆಗ್ರಹಿಸಿ ಇದೇ 13ರಂದು ನಾವು ಬೆಳಗಾವಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ. 25 ಸಾವಿರಕ್ಕೂ ಹೆಚ್ಚು ರೈತರು, ಬಡವರು, ಯುವಕರು, ಮಹಿಳೆಯರು, ಕಾರ್ಮಿಕರು ಹೋರಾಟಕ್ಕೆ ಆಗಮಿಸಲಿದ್ದಾರೆ. ರಾಜ್ಯದ ರೈತ ನಾಯಕ, ಹಿರಿಯ ಮುಖಂಡ, ಮಾಜಿ ಸಿಎಂ ಯಡಿಯೂರಪ್ಪನವರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಈಶ್ವರಪ್ಪ, ಮಾಜಿ ಸಚಿವ ಶ್ರೀರಾಮುಲು ಮತ್ತಿತರ ಮುಖಂಡರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸ್ಥಳೀಯ ಸಂಸದರು, ಶಾಸಕರು ಭಾಗವಹಿಸುತ್ತಾರೆ. ಈ ಸರಕಾರಕ್ಕೆ ಬಾರುಕೋಲಿನ ಏಟು, ಛಡಿ ಏಟು ಕೊಡುವ ಆಂದೋಲನವನ್ನು ನಾವು 13ರಂದು ಮಾಡಲಿದ್ದೇವೆ ಎಂದು ವಿವರಿಸಿದರು.
ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಸರಕಾರ, ಎಸ್‍ಸಿ, ಎಸ್‍ಟಿ, ಒಬಿಸಿಗಳ ಸರಕಾರ. ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ 34 ಸಾವಿರ ಕೋಟಿ ಹಣದಲ್ಲಿ 11,500 ಕೋಟಿ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ. ದೇವರಾಜ ಅರಸು ನಿಗಮ, ಅಂಬೇಡ್ಕರ್ ನಿಗಮ, ಜಗಜೀವನ್ ರಾಂ ನಿಗಮ, ಅಂಬಿಗರ ಚೌಡಯ್ಯ ನಿಗಮ ಸೇರಿ ಅನೇಕ ಒಬಿಸಿ ನಿಗಮಗಳಿಗೆ ಒಂದು ಪೈಸೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರಕ್ಕೆ ಪ್ರಥಮ ಆದ್ಯತೆಯೇ ಅಲ್ಪಸಂಖ್ಯಾತರು ಎಂದು ಟೀಕಿಸಿದರು. ಇದನ್ನು ಪ್ರಶ್ನೆ ಮಾಡಿ ಭಾರೀ ದೊಡ್ಡ ಆಂದೋಲನ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಜಿರಲಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್, ಬೆಳಗಾವಿ ಮಹಾನಗರ ಅಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ್ ಬೆನಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿರಾದಾರ್, ಮುಖಂಡ ರವಿ ಪಾಟೀಲ್, ಜಿಲ್ಲಾ ಮಾಧ್ಯಮ ಸಂಚಾಲಕ ಶರದ್ ಪಾಟೀಲ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಉಡುಪಿ: ಮರಳು ಸಹಿತ ಉಡುಪಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂದಿನ 10 ದಿನಗಳೊಳಗೆ ಪರಿಹರಿಸದೇ ಇದ್ದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಜನತೆಗೆ ಮರಳು ಸಿಗುತ್ತಿಲ್ಲ, ಭೂ ಪರಿವರ್ತನೆ ಸಹಿತ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಂಗಲ್ ಲೇಔಟ್ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಹೊಸ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದ್ದು ಪರಿಷ್ಕರಣೆಗೂ ಅವಕಾಶ ನೀಡುತ್ತಿಲ್ಲ. ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸ್ಪಂದನೆ ದೊರಕುತ್ತಿಲ್ಲ. ಹೊಸ ಸರಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನತೆ ಭ್ರಮನಿರಸಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕರೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿ ಗುಲ್ಲೆಬ್ಬಿಸಿದ್ದಾರೆ. ಆದುದರಿಂದ ರಾಜ್ಯ ಸರಕಾರ ಅಭಿವೃದ್ಧಿ ಶೂನ್ಯ ಸರಕಾರವಾಗಿದೆ.
ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಯ ಜ್ವಲಂತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು, ಜಿಲ್ಲೆಯ ಜನತೆಗೆ ಸಮರ್ಪಕ ಮರಳು ನೀಡಬೇಕು, ರೇಷನ್ ಕಾರ್ಡ್ ಪರಿಷ್ಕರಣೆ ಸಹಿತ ಇಲಾಖೆಗಳ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು. ಈ ಎಲ್ಲ ಸಮಸ್ಯೆಗಳನ್ನು ಮುಂದಿನ 10 ದಿನಗಳೊಳಗೆ ಪರಿಹರಿಸದೇ ಇದ್ದಲ್ಲಿ ಜಿಲ್ಲೆಯ ಜನತೆಯ ಜೊತೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ, ಡಿ.7: ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಸಮಸ್ಯೆಗೆ ಪರಿಹಾರ ಕಾಣದೆ ಜಿಲ್ಲೆಯ ಸಾವಿರಾರು ಬಡ ಜನತೆಯ ನಿರ್ಮಾಣ ಹಂತದಲ್ಲಿರುವ ಮನೆಗಳು ಅತಂತ್ರ ಸ್ಥಿತಿಯಲ್ಲಿ ಸ್ಥಗಿತಗೊಂಡಿವೆ. ಇದರ ಜೊತೆಗೆ ಕಟ್ಟಡದ ನಿರ್ಮಾಣ ಕ್ಷೇತ್ರದಲ್ಲಿಯೂ ವಿಪರೀತ ತೊಂದರೆ ಉಂಟಾಗಿದೆ. ಸಾಮಾನ್ಯ ಜನರ ನಿತ್ಯ ಬವಣೆ ಅರಣ್ಯರೋಧನವಾಗಿದೆ. ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಕಾರ್ಮಿಕರು ಹಲವಾರು ಮನವಿಗಳನ್ನು ನೀಡಿದರೂ, ಮುಷ್ಕರಗಳನ್ನು ನಡೆಸಿದರೂ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಜನತೆಯ ಮರಳಿನ ಬೇಡಿಕೆಯನ್ನು ಪೂರೈಸುವಲ್ಲಿ ವಿಫಲವಾಗಿರುವ ಕಾರಣ ಉಡುಪಿ ಜಿಲ್ಲೆಯ 7 ಸದಸ್ಯರ ಮರಳು ಸಮಿತಿ (ಸಿ.ಆರ್.ಝಡ್)ಯ ಸದಸ್ಯತನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ ಎಂದು ಗುರುಪ್ರಸಾದ್ ಶೆಟ್ಟಿ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ ಎನ್ನಲು ಸಿದ್ಧರಾಮಯ್ಯನವರೇನು ದೇಶದ ಪ್ರಧಾನ ಮಂತ್ರಿಯೇ ಅಥವಾ ದೇಶದ ಸಂಪತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪಿತ್ರಾರ್ಜಿತ ಆಸ್ತಿಯೇ? ದೇಶದ ಸಂಪತ್ತನ್ನು ಒಂದೇ ಕೋಮಿಗೆ ಹಂಚಲು ಇವರಿಗೇನು ಹಕ್ಕಿದೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತದ ಮುಸ್ಲಿಂ ಗುರುಗಳ ಸಮಾವೇಶದಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಸಮುದಾಯವನ್ನು ಖುಷಿಪಡಿಸುವ ಸಲುವಾಗಿ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ದೇಶದ ಅತೀ ದೊಡ್ಡ ಕೋಮುವಾದಿ ಪಕ್ಷ ಎಂಬುದನ್ನು ಸಿ.ಎಂ. ಸಿದ್ಧರಾಮಯ್ಯ ಸಾಬೀತುಪಡಿಸಿದ್ದಾರೆ.
ಈ ಹಿಂದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಟಿಪ್ಪು ಜಯಂತಿ ಆಚರಣೆ, ಒಂದೇ ಕೋಮಿಗೆ ಶಾದಿ ಭಾಗ್ಯ, ಮಕ್ಕಳಿಗೆ ಪ್ರವಾಸ ಭಾಗ್ಯ, ಮತಾಂಧ ಜಿಹಾದಿ ಸಂಘಟನೆಗಳ ಕೇಸ್ ವಾಪಾಸು ಜೊತೆಗೆ ಆರೋಪಿಗಳಿಗೆ ಬಿಡುಗಡೆ ಭಾಗ್ಯ ನೀಡಿದ್ದ ಸಿದ್ಧರಾಮಯ್ಯ ಮಕ್ಮಲ್ ಟೋಪಿಗೆ ತಲೆಯೊಡ್ಡುತ್ತಾ, ಕೇಸರಿ ಕಂಡರೆ ಉರಿದು ಬೀಳುತ್ತಾ ತಾನು ಕೇವಲ ಒಂದೇ ಕೋಮಿಗೆ ಮುಖ್ಯಮಂತ್ರಿ ಎಂಬ ಭಾವನೆಯನ್ನು ಜನತೆಯಲ್ಲಿ ಜಾಗೃತಗೊಳಿಸುತ್ತಿರುವಂತೆ ಬಾಸವಾಗುತ್ತಿದೆ.
ಮತಾಂಧ ಟಿಪ್ಪುವಿನ ಕನಸನ್ನು ನನಸಾಗಿಸಲು ಹೊರಟಿರುವ ಸಿ.ಎಂ. ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10,000 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದು, ಜನತೆ ಹಿಂದುಗಳಿಗೆ ಏನಾದರೂ ಇದೆಯೇ ನಿಮ್ಮ ಸರ್ಕಾರದಲ್ಲಿ ಎಂದು ಪ್ರಶ್ನಿಸುವಂತಾಗಿದೆ. ನಕಲಿ ಗ್ಯಾರಂಟಿಗಳ ಹಿನ್ನೆಲೆಯಲ್ಲಿ ಬರ ಪರಿಹಾರ ಸಹಿತ ಕನಿಷ್ಠ ರಸ್ತೆ ರಿಪೇರಿ ಕಾಮಗಾರಿಗೂ ಹಣವಿಲ್ಲದೆ ಪರದಾಡುತ್ತಿರುವ ಸಿ.ಎಂ. ಸಿದ್ಧರಾಮಯ್ಯ ಖಜಾನೆಯನ್ನು ಬರಿದಾಗಿಸಿ, ಸಾವಿರಾರು ಕೋಟಿ ರೂಪಾಯಿ ನೀಡುವ ವಾಗ್ದಾನದ ಕನಸಿನ ಗೋಪುರವನ್ನು ಕಟ್ಟುತ್ತಿರುವುದು ವಿಷಾದನೀಯ.
ಈ ಹಿಂದಿನ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದ ಸಿದ್ಧರಾಮಯ್ಯ, ಮುಸ್ಲಿಂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಉತ್ಸುಕತೆ ತೋರುತ್ತಾ, ಹಿಂದೂ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಯನ್ನು ಕಡೆಗಣಿಸಿರುವುದು ವಿಪರ್ಯಾಸ.
ಸಿ.ಎಂ. ಸಿದ್ಧರಾಮಯ್ಯ ದೇಶದಲ್ಲಿ ಕೋಮುವಾದ ಬಿತ್ತಲು ಶ್ರಮಿಸಿದರೆ, ಅತ್ತ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ ಇದೆ ಎಂದು ಪುಂಗಿ ಊದುತ್ತಾ ದೇಶ ವಿರೋಧಿ ಹೇಳಿಕೆ ನೀಡಿ ಜನಾಕ್ರೋಶಕ್ಕೀಡಾಗಿರುವುದು ಜಗಜ್ಜಾಹೀರಾಗಿದೆ.
ಟ್ರಿಪಲ್ ತಲಾಖ್ ರದ್ದತಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಂ ಮಹಿಳೆಯರ ಸ್ವಾಭಿಮಾನದ ಬದುಕಿಗೆ ನಾಂದಿ ಹಾಡಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಎಲ್ಲ ವರ್ಗಗಳ ಜನತೆಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ವಿಕಾಸಕ್ಕೆ ಉದಾತ್ತ ಯೋಜನೆಗಳನ್ನು ಜಾರಿಗೆ ತಂದಿರುವ ಕಾರಣದಿಂದಾಗಿ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದೆ.
ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಇಂತಹ ತುಷ್ಟೀಕರಣ ನೀತಿಗಳಿಂದಲೇ ಕೋಮುವಾದಿ ಕಾಂಗ್ರೆಸ್ ದೇಶದಾದ್ಯಂತ ಅಧಿಕಾರ ಕಳೆದುಕೊಂಡು ಕೇವಲ 4 ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪರ, ಅಭಿವೃದ್ದಿ ಪರ ಆಡಳಿತ ವೈಖರಿಯಿಂದ ಬಿಜೆಪಿ ಇಂದು 17 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿಚಿದ್ರಕಾರಿ, ವಿಭಜನಕಾರಿ ಮನಸ್ಥಿತಿಯ ಬಗ್ಗೆ ರಾಜ್ಯದ ಜನತೆ ಎಚ್ಚೆತ್ತುಕೊಂಡು ಮುಂದಿನ ಚುನಾವಣೆಗಳಲ್ಲಿ ಜನವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಉಡುಪಿ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ. ಈ ಚುನಾವಣಾ ಫಲಿತಾಂಶ ಮುಂಬರಲಿರುವ ಪಾರ್ಲಿಮೆಂಟ್ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಬಡವರ ಕಲ್ಯಾಣ ಯೋಜನೆಗಳು ಹಾಗೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಪರಿಕಲ್ಪನೆಯಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರವಯುತವಾಗಿ ಬಾಳುವ ಅವಕಾಶವನ್ನು ಕಲ್ಪಿಸಿರುವ ಜೊತೆಗೆ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ವರದಿ ಮತ್ತು ಆಯಾ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರ ಬಲಿಷ್ಠ ಸಂಘಟನೆ ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ.
ತೆಲಂಗಾಣದಲ್ಲೂ ಬಿಜೆಪಿ ಅದ್ಬುತ ಸಾಧನೆಗೈದಿದೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲೂ ಬಿಜೆಪಿ ಅಧಿಕಾರಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಸಾರಥ್ಯದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರವರ ಸಮರ್ಥ ನಾಯಕತ್ವದಿಂದ ಗೆಲುವಿನ ಯಾತ್ರೆ ಮುಂದುವರಿಯಲಿದ್ದು ಮಗದೊಮ್ಮೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ ದೇಶದಾದ್ಯಂತ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಸುಭದ್ರ ಅಭಿವೃದ್ಧಿ ಪರ ಆಡಳಿತ ನೀಡಲಿದೆ.
ಬಿಟ್ಟಿ ಭಾಗ್ಯಗಳಿಗಿಂತ ಅಭಿವೃದ್ಧಿ ಪರ, ಜನ ಪರ ಆಡಳಿತವೇ ಮುಖ್ಯ ಎಂಬುದನ್ನು ಜನತೆ ಈ ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆರೆ ಸಿಕ್ಕ ಉಗ್ರರನ್ನೆಲ್ಲ ಅಮಾಯಕರು, ಬ್ರದರ್ಸ್ ಎಂದು ಸದಾ ಜಿಹಾದಿಗಳ ಪರ ವಕಾಲತ್ತು ವಹಿಸುವ ಕಾಂಗ್ರೆಸ್ಸಿನ ಅತಿಯಾದ ಜಿಹಾದಿ ಓಲೈಕೆ ಇಂದು ಬೆಂಗಳೂರಿನ 60 ಶಾಲೆಗಳಿಗೆ ಉಗ್ರರ ಬಾಂಬ್ ಬೆದರಿಕೆಯ ಅಟ್ಟಹಾಸಕ್ಕೆ ನಾಂದಿ ಹಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಕುಕ್ಕರ್ ನಲ್ಲಿ ಬಾಂಬ್ ಇಟ್ಟರೂ, ಭಟ್ಕಳದಲ್ಲಿ ಶಾರೀಕ್ ಇದ್ದರೂ, ಮಂಗಳೂರು ಗಲಭೆ, ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆ, ಹುಬ್ಬಳ್ಳಿ ಗಲಭೆ ಎಲ್ಲದಕ್ಕೂ ಮೌನ ಸಮ್ಮತಿ ಕಾಂಗ್ರೆಸ್ ಸರಕಾರದ ನೀತಿಯಾಗಿದೆ. ಇದರಿಂದಾಗಿ ಕರ್ನಾಟಕ ಮುಂದಿನ ದಿನಗಳಲ್ಲಿ ಉಗ್ರರ ಅಡಗುದಾಣವಾಗಿ ಉಪಟಳಕ್ಕೆ ಈಡಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕುಕ್ಕರ್ ಬಾಂಬ್ ಸ್ಪೋಟದ ಉಗ್ರನನ್ನು ಅಮಾಯಕ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬಂಧನವಾದ ಜಿಹಾದಿಗಳನ್ನು ತನಿಖೆ ನಡೆಸದೆ ಭಯೋತ್ಪಾದಕರು ಎನ್ನಲಾಗದು ಎಂದಿರುವ ಗೃಹ ಸಚಿವ ಜಿ.ಪರಮೇಶ್ವರ್, ಸದಾ ಜಿಹಾದಿ ಮನಸ್ಥಿತಿಯ ಕೃತ್ಯಗಳನ್ನು ಹಗುರವಾಗಿ ಪರಿಗಣಿಸುವ ಸಿಎಂ ಸಿದ್ದರಾಮಯ್ಯ ಇವರ ಒಲೈಕೆ ರಾಜಕಾರಣದ ನಡೆಯಿಂದ ಕರ್ನಾಟಕ ಇನ್ನೊಂದು ಕೇರಳ, ಪ.ಬಂಗಾಳ, ಕಾಶ್ಮೀರ ಆಗಲು ಅವಕಾಶ ನೀಡದೇ ಸಮಾಜ ಘಾತುಕ ಶಕ್ತಿಗಳ ಜಾಲವನ್ನು ಪತ್ತೆ ಹಚ್ಚಿ ಜಿಹಾದಿ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಲು ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.
ಉಡುಪಿ, ನ.29: ಭಾರತದಾದ್ಯಂತ ನವೆಂಬರ್ 15ರಿಂದ ಜನವರಿ 26ರವರೆಗೆ ನಡೆಯುತ್ತಿರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಗೆ ಉಡುಪಿಯ ಅಂಬಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನ.30ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ.
ಅಂಬಲಪಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಬೆಳಿಗ್ಗೆ ಗಂಟೆ 9.30ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ನೇರಪ್ರಸಾರ ನಡೆಯಲಿದೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಜಿಲ್ಲೆಯ ಇತರ ಶಾಸಕರು ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು, ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ.
ಈ ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು.
ಆಯುಷ್ಮಾನ್ ಭಾರತ್, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜನಧನ್ ಯೋಜನಾ, ಸುರಕ್ಷಾ ಬಿಮಾ ಯೋಜನೆಗಳು ಸೇರಿದಂತೆ 17 ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುವುದಲ್ಲದೇ ಸ್ಥಳದಲ್ಲೇ ಆಯ್ದ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಾಗುವುದು.
ಈಗಾಗಲೇ ಪ್ರಯೋಜನ ಪಡೆದಿರುವ ಫಲಾನುಭವಿಗಳು ‘ಮೇರಾ ಕಹಾನಿ, ಮೇರಾ ಜುಬಾನಿ’ ಎನ್ನುವ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಉಡುಪಿ: ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಕೈಸುಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರ, ಇದೀಗ ಗಾಯದ ಮೇಲೆ ಬರೆ ಹಾಕಲು ಪ್ರಾರಂಭಿಸಿದೆ. ಪಹಣಿ ಪತ್ರದ ಶುಲ್ಕವನ್ನು ರೂ.10 ರಿಂದ ರೂ.25ಕ್ಕೆ ಏರಿಸಿರುವ ರಾಜ್ಯ ಸರಕಾರ ವಿಳಂಬಿತ ಜನನ ಮರಣ ದೃಢೀಕರಣ ಪತ್ರದ ಶುಲ್ಕವನ್ನು ರೂ.50 ರಿಂದ ರೂ.100ಕ್ಕೆ ಹೆಚ್ಚಿಸಿದೆ. ಉಚಿತ ಭಾಗ್ಯಗಳಿಗೆ ಮರುಳಾದ ಜನತೆ ಇಂದು ಬೆಲೆ ತೆರುವ ಸಮಯ ಸನ್ನಿಹಿತವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ಬೊಕ್ಕಸ ಬರಿದಾಗಿರುವ ಕಾರಣಕ್ಕೆ ತಾಂತ್ರಿಕ ನೆಪವೊಡ್ಡಿ ಹಲವಾರು ಅರ್ಜಿಗಳನ್ನು ತಡೆಹಿಡಿಯಲಾಗುತ್ತಿದೆ. ಅನ್ನ ಭಾಗ್ಯದಿಂದ ಗೃಹಲಕ್ಷ್ಮಿವರೆಗೆ ಎಲ್ಲಾ ಗ್ಯಾರಂಟಿಗಳಲ್ಲೂ ಕಾಂಗ್ರೆಸ್ ಸರಕಾರ ಜನರ ಕಣ್ಣಿಗೆ ಮಣ್ಣೆರಚಿ ಹಣ ಉಳಿಸುವ ತಂತ್ರಗಳನ್ನು ಅನುಸರಿಸುತ್ತಿದೆ. ಅಭಿವೃದ್ಧಿ ಯೋಜನೆಗಳನ್ನೆಲ್ಲಾ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಜೊತೆಗೆ ಕೊಟ್ಟ ಮಾತನ್ನು ಈಡೇರಿಸದ ರಾಜ್ಯ ಏಟಿಎಂ ಸರಕಾರ ಕೇವಲ ಕಮಿಷನ್ ದಂಧೆ, ರಾಜ್ಯ ಲೂಟಿ, ದುಂದುವೆಚ್ಚದೊಂದಿಗೆ ಕಾಲಹರಣ ಮಾಡುತ್ತಾ ಜನತೆಗೆ ನಂಬಿಕೆ ದ್ರೋಹ ಎಸಗುತ್ತಿದೆ.
‘ಬಡತನ ಮುಕ್ತ ಭಾರತ’ದ ಗ್ಯಾರಂಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 5 ವರ್ಷಗಳಲ್ಲಿ 13.5 ಕೋಟಿ ದೇಶವಾಸಿಗಳನ್ನು ಬಡತನದ ರೇಖೆಯಿಂದ ಮೇಲೆತ್ತಿದೆ. ಆದರೆ 10 ಕೆ.ಜಿ. ಉಚಿತ ಅಕ್ಕಿ ನೀಡುತ್ತೇವೆ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಕ್ಕಿಯನ್ನೂ ನೀಡದೆ, ಇದೀಗ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ 5 ಕೆ.ಜಿ.ಯಂತೆ ನೀಡುತ್ತಿರುವ ಉಚಿತ ಅಕ್ಕಿಗೂ ಕನ್ನ ಹಾಕಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಪ್ರತೀ ತಿಂಗಳು ಅಧಿಕಾರಿಗಳಿಗೆ ಲಂಚ ನೀಡಲು ಗೋದಾಮಿನಿಂದ ಸಾವಿರಾರು ಕ್ವಿoಟಾಲ್ ಅಕ್ಕಿ ಕದ್ದು ಮಾರಾಟ ಮಾಡಿರುವುದಾಗಿ ಚೆನ್ನಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಸಿಬ್ಬಂದಿ ಸ್ವತಃ ಬಾಯಿ ಬಿಟ್ಟಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ಉಚಿತಗಳ ಗ್ಯಾರಂಟಿಗಳು ಯಾವ ರೀತಿ ಹಳ್ಳ ಹಿಡಿದಿದೆ ಹಾಗೂ ಬಡವರ ಅನ್ನದಲ್ಲೂ ಕಾಂಗ್ರೆಸ್ ಸರಕಾರ ಹೇಗೆ ಡೋಂಗಿತನ ಪ್ರದರ್ಶಿಸಿದೆ ಎಂಬುದು ರುಜುವಾತಾಗಿದೆ.
ಈ ಹಿಂದೆ ಲೋಕಾಯುಕ್ತಕ್ಕೇ ಎಳ್ಳು ನೀರು ಬಿಟ್ಟಿರುವ ಕುಖ್ಯಾತಿಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಹೆಚ್ಚಿನ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಜಗಜ್ಜಾಹೀರಾಗಿದೆ. ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದ ಬಳಿಕ ಎಚ್ಚೆತ್ತುಕೊಂಡು ಕೇವಲ ಪ್ರಚಾರಕ್ಕಾಗಿ ಬೂಟಾಟಿಕೆಯ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿದೆ. ಒಟ್ಟು ಸ್ವೀಕರಿಸಿದ 2,860 ಅರ್ಜಿಗಳಲ್ಲಿ 950 ಅರ್ಜಿಗಳನ್ನು ಮುಖ್ಯಮಂತ್ರಿಗಳು ನೇರವಾಗಿ ಸ್ವೀಕರಿಸಿದ್ದರೂ, ಸ್ಥಳದಲ್ಲಿ ಪರಿಹಾರ ದೊರೆತಿರುವುದು ಕೇವಲ 50 ಅರ್ಜಿಗಳಿಗೆ ಮಾತ್ರ ಎಂಬ ಅಂಶ ಬಯಲಾಗಿದೆ. ಇದು ಸರಕಾರದ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶವನ್ನು ತಣಿಸುವ ತಂತ್ರದ ಭಾಗವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಟ್ಟಡ ಸಾಮಗ್ರಿ ಸಾಗಾಟದ ಹಳೆಯ ಲಾರಿ, ಟೆಂಪೋಗಳ ಮಾಲಕರು ಪರವಾನಿಗೆ ನವೀಕರಿಸಿಯೇ ಸಾಗಾಟ ಪ್ರಕ್ರಿಯೆ ನಡೆಸಬೇಕೆಂಬ ಹೊಸ ಕಾನೂನನ್ನು ಪೊಲೀಸ್ ಇಲಾಖೆ ತುರ್ತಾಗಿ ಜಾರಿಗೆ ತಂದಿರುವುದು ಕೂಡ ರಾಜ್ಯ ಸರಕಾರ ವಸೂಲಿ ಮೂಲಕ ದುಡಿಯುವ ವರ್ಗಕ್ಕೆ ಬರೆ ಹಾಕುವ ಪ್ರಯತ್ನವಾಗಿದೆ. ಇದರ ಪರಿಣಾಮವಾಗಿ ನಡೆದ ನ್ಯಾಯಯುತ ಮುಷ್ಕರವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿರುವುದು ಹಾಗೂ ಈ ವಿಚಾರವನ್ನು ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದ ಶಾಸಕರ ನಡೆಯನ್ನು ಕಾಂಗ್ರೆಸಿಗರು ಹತಾಶ ಮನೋಭಾವದಿಂದ ವಿರೋಧಿಸುತ್ತಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓರ್ವ ಜನಪ್ರತಿನಿಧಿಯಾಗಿ ಶಾಸಕರು ಹಾಗೂ ಮಾಜಿ ಸಚಿವರ ಬಗ್ಗೆ ಮಾತನಾಡುವಾಗ ಯಾವ ರೀತಿಯ ಪದ ಬಳಕೆ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದ ಮತ್ತು ಈ ಹಿಂದೆ ಉಡುಪಿ ನಗರಸಭಾ ಅಧಿವೇಶನದಲ್ಲಿ ದಾರಿಯ ಸಮಸ್ಯೆಯೊಂದರ ಇತ್ಯರ್ಥದ ಸಂದರ್ಭದಲ್ಲಿ ನಾಗರಿಕರೊಬ್ಬರ ಮೇಲೆ ಹಾಗೂ ತಮ್ಮದೇ ಪಕ್ಷದ ಮಹಿಳಾ ನಗರಸಭಾ ಸದಸ್ಯೆಯ ಮೇಲೆ ಕೈಮಾಡಿ ನೂಕಾಟ ತಳ್ಳಾಟ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದ ನಗರಸಭಾ ಸದಸ್ಯ ರಮೇಶ್ ಕಾಂಚನ್ ಯಾವ ಸೀಮೆಯ ದೊಣ್ಣೆ ನಾಯಕ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಯಾವ ರೀತಿ ಸೌಜನ್ಯತೆಯಿಂದ ವರ್ತಿಸಬೇಕು ಎಂಬುದನ್ನು ಕೇವಲ ಪ್ರಚಾರದ ತೆವಲಿಗೆ ಅಸಂಬದ್ಧ ಹೇಳಿಕೆ ನೀಡುತ್ತಿರುವ ರಮೇಶ್ ಕಾಂಚನ್ ಮೊದಲು ಅರಿತುಕೊಳ್ಳುವುದು ಉತ್ತಮ. ಬಿಜೆಪಿ ಸದಾ ಶೋಷಿತ ವರ್ಗ ಹಾಗೂ ಬಡ ಜನತೆಯ ಪರ ನಿಲ್ಲುತ್ತದೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಲಾರಿ ಮಾಲಕರು, ಚಾಲಕರು ಹಾಗೂ ಕಾರ್ಮಿಕರು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಿದ್ದ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಿದೆ. ಮುಷ್ಕರವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಹಾಗೂ ಸರಕಾರದ ಜನ ವಿರೋಧಿ ನೀತಿಯನ್ನು ಬಯಲು ಮಾಡಿರುವ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಕಾರ್ಯವೈಖರಿ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದೆ. ಈ ಕಾರಣಕ್ಕಾಗಿ ಜಿಲ್ಲೆಯ ಓರ್ವ ಕ್ರಿಯಾಶೀಲ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ರವರನ್ನು ‘ದೊಣ್ಣೆ ನಾಯಕ’ ಎಂಬ ಪದ ಬಳಸಿ ಅವಮಾನಿಸಿರುವುದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಹೋರಾಟಗಳ ಮೂಲಕವೇ ಸೋಲನ್ನು ಗೆಲುವಾಗಿಸಿಕೊಂಡಿರುವ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ. ಒಂದು ಕಾಲದಲ್ಲಿ ಸುಧೀರ್ಘ ಅವಧಿಗೆ ಸರ್ವಾಧಿಕಾರದ ಮೂಲಕ ದುರಾಡಳಿತ ನಡೆಸಿದ್ದ ಕಾಂಗ್ರೆಸ್ ಇಂದು ಜನರಿಂದ ತಿರಸ್ಕೃತಗೊಂಡು ಕೇಂದ್ರದಲ್ಲಿ ಎರಡಂಕೆಗಿಳಿದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದೆ ಮೂಲೆ ಗುಂಪಾಗಿರುವುದನ್ನು ರಮೇಶ್ ಕಾಂಚನ್ ನೆನಪಿಸಿಕೊಳ್ಳುವುದರ ಜೊತೆಗೆ ಈ ಹಿಂದೆ ಬಿಜೆಪಿ ಬೆಂಬಲಿತ ತಾಲೂಕು ಪಂಚಾಯತ್ ಸದಸ್ಯನಾಗಿ ಅಧಿಕಾರ ಅನುಭವಿಸಿದ ಬಳಿಕ ಪಕ್ಷಾಂತರ ಮಾಡಿರುವ ತನ್ನ ರಾಜಕೀಯ ಹಿನ್ನೆಲೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಈ ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಮೇಶ್ ಕಾಂಚನ್ ಲಾಟಿ ಚಾರ್ಜ್ ರುಚಿ ಅನುಭವಿಸಿರುವುದು ತನ್ನ ಗೂಂಡಾ ವರ್ತನೆಗಾಗಿಯೇ ಹೊರತು ಯಾವುದೇ ಜನಪರ ಹೋರಾಟಕ್ಕಾಗಿ ಅಲ್ಲ ಎಂದು ಅವರು ಕುಟುಕಿದ್ದಾರೆ.
ನಕಲಿ ಗ್ಯಾರಂಟಿಗಳ ಮೂಲಕ ಜನತೆಯನ್ನು ಯಾಮಾರಿಸಿ, ರಾಜ್ಯದ ಹಿತವನ್ನೇ ಮರೆತು, ಖಜಾನೆಯನ್ನು ಬರಿದಾಗಿಸುವ ಜೊತೆಗೆ ಪಂಚರಾಜ್ಯ ಚುನಾವಣೆಗಾಗಿ ರಾಜ್ಯವನ್ನು ಲೂಟಿಗೈಯುತ್ತಿರುವ ವಚನ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ ಸರ್ವ ಸನ್ನದ್ಧರಾಗಿದ್ದಾರೆ. ಬುದ್ಧಿವಂತರ ಜಿಲ್ಲೆ, ಕಾಂಗ್ರೆಸ್ ಮುಕ್ತ ಉಡುಪಿಯಲ್ಲಿ ನಯವoಚಕರ ಆಟ ನಡೆಯದು ಎಂಬ ಅರಿವಿದ್ದರೂ, ‘ಯಥಾ ರಾಜಾ ತಥಾ ಪ್ರಜಾ’ ಎಂಬoತೆ ವರ್ತಿಸುತ್ತಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವರ್ತನೆ ಹಾಸ್ಯಾಸ್ಪದವಾಗಿದೆ.
‘ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್’ ಎಂಬಂತೆ ಹಲವರಿಗೆ ರಾಜಕೀಯವೇ ಉದ್ಯೋಗ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠರಿಬ್ಬರೂ ಬೇಲ್ ಮೇಲೆ ಹೊರಗಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ತನಿಖೆ ಎದುರಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಹಿoಪಡೆವ ನಿರ್ಣಯ ಕೈಗೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ಸಾಚಾತನ ಏನೆಂಬುದನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು, ಕೇವಲ ಅಧಿಕಾರ ದಾಹದಿಂದ ಪೊಳ್ಳು ಪ್ರಚಾರದ ಮೂಲಕ ಜನತೆಯನ್ನು ಯಾಮಾರಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ಸಿಗೆ ಜನತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹೇಶ್ ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.