ಅಯೋಧ್ಯೆ ಶ್ರೀರಾಮ ಮಂದಿರದ ವಿರುದ್ಧ ಕಾಂಗ್ರೆಸ್ ನಾಯಕರ ವರ್ತನೆ ಕಾಂಗ್ರೆಸ್ಸನ್ನು ಪ್ರಪಾತಕ್ಕೆ ತಳ್ಳಲಿದೆ : ಕುಯಿಲಾಡಿ



ಉಡುಪಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ವಿಚಲಿತಗೊಂಡಿರುವ ಕಾಂಗ್ರೆಸ್ ನಾಯಕರ ಶ್ರೀ ರಾಮ ಮಂದಿರ ವಿರೋಧಿ ವರ್ತನೆ ಕಾಂಗ್ರೆಸ್ಸನ್ನು ಪ್ರಪಾತಕ್ಕೆ ತಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹಿಂದುತ್ವದ ವಿರುದ್ಧ ಸದಾ ಕೆಂಡ ಕಾರುವ ಕಾಂಗ್ರೆಸ್ಸಿನ ವಿವಾದಿತ ನಾಯಕ ಬಿ.ಕೆ. ಹರಿಪ್ರಸಾದ್ ಮೂಲೆಗುಂಪಾಗುವ ಭಯದಿಂದ ಆಗಾಗ ತನ್ನ ಹರಕು ನಾಲಗೆಯ ಪ್ರದರ್ಶನವನ್ನು ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಆದರೆ ಈ ಬಾರಿ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ಉದ್ದೇಶಿಸಿ, ಕರ್ನಾಟಕದಲ್ಲೂ ಗೋದ್ರಾ ಮಾದರಿಯ ಗಲಭೆ ನಡೆಯುವ ಸಾಧ್ಯತೆ ಇದೆ ಎಂದಿರುವುದು ಸ್ವತಃ ರಾಜ್ಯ ಕಾಂಗ್ರೆಸ್ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ಕೂಡಲೇ ಉನ್ನತ ತನಿಖೆಗೆ ಒಳಪಡಿಸಿ ವಿರೋಧಿಗಳ ಹುನ್ನಾರದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದು ಸಿ.ಎಂ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಹೊಣೆಯಾಗಿದೆ. ಈ ಕುರಿತು ಕೇಂದ್ರ ಸರಕಾರವೂ ಮಧ್ಯಪ್ರವೇಶಿಸಿ ಎನ್ಐಎ ಮೂಲಕ ಹರಿಪ್ರಸಾದ್ ರವರ ತೀವ್ರ ವಿಚಾರಣೆ ನಡೆಸುವುದು ಅತ್ಯವಶ್ಯಕವಾಗಿದೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುವುದನ್ನು ಸಹಿಸದೆ ಬಹಳಷ್ಟು ಹೋರಾಡಿ ವೈಫಲ್ಯದಿಂದ ಕಂಗೆಟ್ಟಿರುವ ಕಾಂಗ್ರೆಸ್ ಇಂದು ಹಿಂದೂ ಸಮಾಜದ ಶ್ರದ್ಧಾ ಕೇಂದ್ರ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಅಸಹನೆ ಮತ್ತು ದ್ವೇಷದಿಂದ ಉದ್ದೇಶಪೂರ್ವಕವಾಗಿ ರಾಮಭಕ್ತ ಕರಸೇವಕರನ್ನು ಬಂಧಿಸುವ ಮೂಲಕ ತೀವ್ರ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿರುವುದು ಖಂಡನೀಯ.

ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯವರನ್ನು 32 ವರ್ಷಗಳ ಹಿಂದಿನ ಪ್ರಕರಣದ ನೆಪದಲ್ಲಿ ಬಂಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಹಾಗೂ ಒಂದೇ ಕೋಮಿನ ಓಲೈಕೆಯೇ ಕಾರಣ ಎಂಬುದು ಅವರ ಗೊಂದಲದ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಶ್ರೀಕಾಂತ್ ಪೂಜಾರಿಯವರ ಮೇಲೆ 16 ಪ್ರಕರಣಗಳು ಬಾಕಿ ಇವೆ ಎಂದು ಡಂಗುರ ಸಾರಿದ್ದ ಸಿ.ಎಂ. ಸಿದ್ದರಾಮಯ್ಯ, ವಾಸ್ತವಿಕವಾಗಿ ಪೋಲಿಸ್ ದಾಖಲೆಯ ಪ್ರಕಾರ ಕೇವಲ 1 ಪ್ರಕರಣ ಮಾತ್ರ ಬಾಕಿ ಇರುವುದನ್ನು ಅರಿತು ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಸರಿಯಾದ ಮಾಹಿತಿಯನ್ನು ಪಡೆಯದೆ ತರಾತುರಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಧಮನಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಸಿ.ಎಂ. ಸಿದ್ದರಾಮಯ್ಯನವರಿಂದ ಹಿಂದೂ ವಿರೋಧಿ ನೀತಿಯನ್ನು ಬಳುವಳಿ ಪಡೆದುಕೊಂಡಿರುವ ಯತೀಂದ್ರ ಸಿದ್ದರಾಮಯ್ಯ ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದಂತೆ ದಿವಾಳಿಯಾಗುತ್ತದೆ ಎಂದಿರುವುದು ಹಾಸ್ಯಾಸ್ಪದವಾಗಿದೆ. ಭಾರತ ಎಲ್ಲಾ ಜಾತಿ-ಧರ್ಮಗಳನ್ನು ಒಳಗೊಂಡಿರುವ ಸನಾತನ ಸಂಸ್ಕೃತಿಯ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ಬಲಿಷ್ಠ ಹಿಂದೂ ರಾಷ್ಟ್ರ ಎಂಬುದನ್ನು ಕೇವಲ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿರುವ ಯತೀಂದ್ರ ಸಿದ್ದರಾಮಯ್ಯ ಅವರು ಮನದಟ್ಟುಮಾಡಿಕೊಳ್ಳುವುದು ಉತ್ತಮ.

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಬೊಬ್ಬಿರಿದ ಸಿ.ಎಂ. ಸಿದ್ದರಾಮಯ್ಯನವರು ಬರ ಪರಿಹಾರಕ್ಕೆ ಹಾಗೂ ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದಿರುವುದು ಶೋಚನೀಯ. ದೇಶದ್ರೋಹಿ ಪಿಎಫ್ಐ ಮತಾಂಧ ಸಂಘಟನೆಯ ಸದಸ್ಯರ ನೂರಾರು ಪ್ರಕರಣಗಳನ್ನು ಹಿಂಪಡೆದಿರುವ ಜೊತೆಗೆ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆಯ ಆರೋಪಿಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಸಿದ್ದರಾಮಯ್ಯ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲೇ ಕರಸೇವಕರನ್ನು ಬಂಧಿಸುವ ಕುತಂತ್ರಕ್ಕೆ ಮುಂದಾಗಿರುವುದು ಕಾಂಗ್ರೆಸ್ಸಿನ ಹಿಂದೂ ದ್ವೇಷಿ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಿಂದೂ ಸಮಾಜ ಇಂತಹ ಗೊಡ್ಡು ಬೆದರಿಕೆಗಳಿಗೆ ಎಂದೂ ಮಣಿಯಲಾರದು. ದೇಶದೆಲ್ಲೆಡೆ ತಿರಸ್ಕೃತಗೊಂಡಿರುವ ಕಾಂಗ್ರೆಸ್ ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಮರೆತಂತಿದೆ. ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ಹಿಂದೂ ಧಮನ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಶಾಸ್ತಿಯನ್ನು ಮಾಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಜ.6 ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ : ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಭಾಗಿ

ಉಡುಪಿ: ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ ನಾಳೆ ಜ.6 ಶನಿವಾರ ಬೆಳಿಗ್ಗೆ ಗಂಟೆ 11.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಬಾಗವಹಿಸಲಿದ್ದಾರೆ. ಮಧ್ಯಾಹ್ನ 3.00 ಗಂಟೆಗೆ ಸಿದ್ದಾಪುರ ಗ್ರಾಮ ಪಂಚಾಯತ್ ಬಳಿ ನಡೆಯಲಿರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಬಿ.ಸುಧಾಕರ್ ಶೆಟ್ಟಿ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂತಾಪ





ಉಡುಪಿ: ಜನಸಂಘದ ಕಾಲದಿಂದಲೂ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ಬಿಜೆಪಿ ಹಿರಿಯ ಮುಖಂಡ ಬಿ.ಸುಧಾಕರ್ ಶೆಟ್ಟಿ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಯಶಸ್ವೀ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡು ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ನ ಮಾಲಕರಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಿ.ಸುಧಾಕರ್ ಶೆಟ್ಟಿಯವರು ಉಡುಪಿ ನಗರಸಭೆಯ ಉಪಾಧ್ಯಕ್ಷರಾಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಮೂರು ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜನಮಾನಸದಲ್ಲಿ ಅಪಾರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಜನೆಯಿಂದ ಸನಾತನ ಸಂಸ್ಕೃತಿಯ ಗತ ವೈಭವ ಅನಾವರಣ : ಯಶ್ಪಾಲ್ ಎ. ಸುವರ್ಣ

ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ನೂತನ ಪದಾಧಿಕಾರಿಗಳ ಪದಗ್ರಹಣ





ಉಡುಪಿ: ಭಜನಾ ಮಂಡಳಿಗಳು ಮಾದರಿ ಸಂಘಟನೆಯ ಮೂಲಕ ಏಕತೆಯನ್ನು ಸಾರುವ ಶೃದ್ಧಾ ಕೇಂದ್ರಗಳಾಗಿವೆ. ಭಜನೆಯಲ್ಲಿ ವಿಭಜನೆ ಇಲ್ಲ. ಭಜನೆಯಿಂದ ಸನಾತನ ಸಂಸ್ಕೃತಿಯ ಗತ ವೈಭವ ಅನಾವರಣಗೊಂಡಂತಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಬಲಪಾಡಿ ‘ಪ್ರಗತಿ ಸೌಧ’ ಸಭಾಂಗಣದಲ್ಲಿ ನಡೆದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

ಇಂದು ಸಮಾಜದಲ್ಲಿ ನಡೆಯುವ ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಭಜನಾ ಮಂಡಳಿಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ತಾಲೂಕಿನ ಅನೇಕ ಪರಿಣಿತ ಭಜನಾ ತಂಡಗಳು ವಿಶಿಷ್ಟ ಸಾಧನೆಗೈದು ಉಡುಪಿಗೆ ಹೆಮ್ಮೆ ತಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿವಿಧ ಕಾರ್ಯ ಚಟುವಟಿಕೆಗಳೊಂದಿಗೆ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದೆ.

ನಮ್ಮೆಲ್ಲರ ಎಷ್ಟೋ ವರ್ಷಗಳ ಕನಸು ನನಸಾಗುವ ಶುಭ ದಿನ ಸನ್ನಿಹಿತವಾಗಿದೆ. ಜ.22ರಂದು ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆಯ ಪರ್ವಕಾಲದಲ್ಲಿ ಎಲ್ಲಾ ಭಜನಾ ಮಂದಿರಗಳಲ್ಲಿ ಭಜನಾ ಸೇವೆಯನ್ನು ಹಮ್ಮಿಕೊಳ್ಳುವ ಜೊತೆಗೆ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಪುಣ್ಯ ಕ್ಷಣಗಳನ್ನು ನೆನೆದು ಸಂಜೆ ಪ್ರತೀ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಣೆಯ ರೀತಿ ಸಂಭ್ರಮಿಸಿ ಅವಿಸ್ಮರಣೀಯಗೊಳಿಸಬೇಕು ಎಂಬ ಕೋರಿಕೆಯ ಸಹಿತ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹದಿಂದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಾರ್ಥಕ ಚಟುವಟಿಕೆಗಳೊಂದಿಗೆ ಯಶಸ್ಸಿನ ಪಥದಲ್ಲಿ ಮುನ್ನಡೆದು ಸರ್ವಾಂಗೀಣ ಅಭಿವೃದ್ಧಿ ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿಯವರು ನೂತನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿಯವರಿಗೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ರವರು ನೂತನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಯವರಿಗೆ ಅಧಿಕಾರ ಹಸ್ತಾoತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯ ಪದ್ಧತಿ ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ತಾಲೂಕು ಭಜನಾ ಪರಿಷತ್ತಿನ ನೂತನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ಎಲ್ಲರ ಸಂಘಟಿತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಲು ಸಾಧ್ಯ. ತಾಲೂಕು ಭಜನಾ ಪರಿಷತ್ತಿಗೆ ಎಲ್ಲಾ 8 ವಲಯಗಳ ವ್ಯಾಪ್ತಿಯ ಭಜನಾ ಮಂಡಳಿಗಳನ್ನು ಸೇರ್ಪಡೆಗೊಳಿಸುವ ಜೊತೆಗೆ ಭಜನಾ ಪರಿಷತ್ತನ್ನು ಇನ್ನಷ್ಟು ಸದೃಢವಾಗಿ ಕಟ್ಟಿ ಬೆಳೆಸಲು ಎಲ್ಲರ ಸಹಕಾರ ಅತೀ ಅಗತ್ಯ ಎಂದರು.

ಭಜನಾ ಪರಿಷತ್ತಿನ ನೂತನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಶ್ರೀ ಕ್ಷೇತ್ರದಿಂದ ಹಲವಾರು ಭಜನಾ ಮಂದಿರಗಳು ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಬಹಳಷ್ಟು ಸಹಾಯಧನ ದೊರೆತಿದೆ. ಭಜನಾ ಪರಿಷತ್ತಿನ ಚೌಕಟ್ಟಿನೊಳಗೆ ಭಜನೆಯನ್ನು ಇನ್ನಷ್ಟು ಪ್ರಚಲಿತಗೊಳಿಸಲು ಗರಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಭಜನಾ ಪರಿಷತ್ತಾನ್ನಾಗಿ ರೂಪಿಸಲು ಎಲ್ಲ ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಸಹಕಾರ ಅತ್ಯವಶ್ಯಕ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್ ಮಾತನಾಡಿ, ತಾಲೂಕು ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಆಯ್ಕೆ ಪಾರದರ್ಶಕವಾಗಿ ನಡೆದಿದೆ. ಎಲ್ಲ ಪದಾಧಿಕಾರಿಗಳು ಮತ್ತು ವಲಯಗಳ ಸಂಯೋಜಕರು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಭಜನಾ ಮಂಡಳಿಗಳ ಸಹಕಾರದೊಂದಿಗೆ ಭಜನಾ ಪರಿಷತ್ತನ್ನು ಇನ್ನಷ್ಟು ಸಕ್ರಿಯಗೊಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ತಾಲೂಕು ಭಜನಾ ಪರಿಷತ್ತಿನ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಮತ್ತು ನೂತನ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ಶುಭ ಹಾರೈಸಿದರು.

ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ ನಿಕಟಪೂರ್ವ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಚೇರ್ಕಾಡಿ ಮಾತನಾಡಿ ಕಳೆದ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಭಜನಾ ಸಮಾವೇಶ, ಕಮ್ಮಟದಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ. ಮುಂದಿನ ಅವಧಿಯಲ್ಲಿ ಭಜನಾ ಮಂಡಳಿಗಳನ್ನು ಸಂಘಟಿಸುವ ಜೊತೆಗೆ ಗರಿಷ್ಠ ಕಾರ್ಯಕ್ರಮಗಳೊಂದಿಗೆ ಭಜನಾ ಪರಿಷತ್ತನ್ನು ಮಾದರಿಯಾಗಿ ಮುನ್ನಡೆಸುವಲ್ಲಿ ನೂತನ ಪದಾಧಿಕಾರಿಗಳ ತಂಡ ಯಶಸ್ವಿಯಾಗಲಿ ಎಂದರು .

ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಪರ್ವಕಾಲದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಜಂಟಿ ಆಶ್ರಯದಲ್ಲಿ ಜ.15ರಿಂದ ಜ.21 ರವರೆಗೆ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡಕದಲ್ಲಿ ಸಂಜೆ ಗಂಟೆ 5.00ರಿಂದ 7ರ ತನಕ ಹಿರಿಯ ವಿದ್ವಾಂಸ ಡಾ! ಶಾಂತರಾಮ ಪ್ರಭು ನಿಟ್ಟೂರು ಇವರಿಂದ ನಡೆಯುವ ‘ಶ್ರೀರಾಮ ಕಥಾ ಸಪ್ತಾಹ’ ಪ್ರವಚನದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ತಾಲೂಕು ಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ವಜ್ರಾಕ್ಷಿ ಪಿ. ದಾಸ್, ಸುಮಿತ್ರಾ ನಾಯ್ಕ್ ಪೆರಂಪಳ್ಳಿ , ಜೊತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೇದಾರ್, ವಲಯ ಸಂಯೋಜಕರಾದ ಯಶೋಧ ಹೇರೂರು, ಮಾಯಾ ಕಾಮತ್ ಮಣಿಪಾಲ, ಸಂಧ್ಯಾ ಕಾಮತ್ ಹಿರಿಯಡಕ ಹಾಗೂ ವಲಯಗಳ ಸಹ ಸಂಯೋಜಕರು, ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಮ ಎಮ್ ಸ್ವಾಗತಿಸಿದರು. ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಅಂಬಲಪಾಡಿ ಸ್ವಯಂ ಸೇವಕರಿಂದ ಸಾಮೂಹಿಕ ಪ್ರಾರ್ಥನೆ, ಮಂತ್ರಾಕ್ಷತೆ ವಿತರಣೆ



ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮ ಮಂದಿರದ ಉದ್ಘಾಟನೆಯ ಪ್ರಯುಕ್ತ ಅಂಬಲಪಾಡಿ ನಗರ ಮತ್ತು ಗ್ರಾಮಾಂತರ ಭಾಗದ ರಾಮ ಭಕ್ತ ಸ್ವಯಂ ಸೇವಕರಿಂದ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

9 ತಂಡಗಳ ನೇತೃತ್ವದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ 9 ತಂಡಗಳ ಪ್ರಮುಖರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ





ಅಜಾತಶತ್ರು ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆಯನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಬುದ್ಧರ ಪ್ರಕೋಷ್ಠದ ಸಂಚಾಲಕ ಪಾಂಡುರಂಗ ಲಾಗ್ವಂಕರ್, ಪ್ರಮುಖರಾದ ಸುಭಾಷಿತ್ ಕುಮಾರ್, ಚಿನ್ಮಯ್, ಶಾಂತಿ ಮನೋಜ್, ಶಶಿಕಲಾ, ಅಶ್ವಿನಿ ಶೆಟ್ಟಿ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿ.ಕೆ. ಹರಿಪ್ರಸಾದ್ ಹೇಳಿಕೆ ಅವರ ಹತಾಶ ಮಾನಸಿಕತೆಯ ಪ್ರತಿಬಿಂಬ: ಕೆ.ಉದಯಕುಮಾರ್ ಶೆಟ್ಟಿ





ಉಡುಪಿ:ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ಅವರ ಹತಾಶ ಮಾನಸಿಕತೆಯನ್ನು ಬಿಂಬಿಸುತ್ತದೆ. ಬ್ರಿಟಿಷರ ಬೂಟು ನೆಕ್ಕುವ ಸಂಸ್ಕೃತಿ ನಮ್ಮದಲ್ಲ. ಬಿಜೆಪಿ ದೇಶಕ್ಕಾಗಿ ಹೋರಾಟ ಮಾಡಿದ ಸ್ವಾತಂತ್ರ್ಯ ವೀರರ, ಗಡಿಯಲ್ಲಿ ನಮ್ಮನ್ನು ಕಾಯುವ ವೀರ ಯೋಧರ ಹಾಗೂ ಶೋಷಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೂಟು ಒರೆಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.

ನೀವು ಇಟಲಿ ಮಹಿಳೆಯ ಸೆರಗಿನ ಹಿಂದೆ ರಾಜಕೀಯ ಮಾಡುತ್ತಾ ಇನ್ನೂ ಅದೇ ಪಳಿಯುಳಿಕೆಗೆ ಜೋತು ಬಿದ್ದವರು. ನಿಮಗೆ ದೇಶಪ್ರೇಮಿಗಳು ದೇಶದ್ರೋಹಿಗಳಂತೆ ಹಾಗೂ ದೇಶದ್ರೋಹಿಗಳು ದೇಶಪ್ರೇಮಿಗಳಂತೆ ಕಾಣುವುದು ಸಹಜ ಎಂದಿದ್ದಾರೆ.

ಬಿ.ಕೆ. ಹರಿಪ್ರಸಾದ್ ಅವರ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿರುವ ನಡವಳಿಕೆಗಳು ಕಾಂಗ್ರೆಸ್ ಪಕ್ಷವನ್ನು ಮುಳುಗಿಸಲು ಸುಪಾರಿ ಪಡೆದಂತೆ ಬಾಸವಾಗುತ್ತಿದೆ ಎಂದು ಉದಯಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಜಾಬ್ ಆದೇಶ ಹಿಂಪಡೆತ – ಮುಸಲ್ಮಾನರ ತುಷ್ಠೀಕರಣವೇ ಸಿಧ್ದರಾಮಯ್ಯವರ ಏಕೈಕ ಅಜೆಂಡಾ – ಶ್ರೀಕಾಂತ ನಾಯಕ್


ಉಡುಪಿ:ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿಧ್ಧರಾಮಯ್ಯರವರು ಹಿಂದಿನ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತಂತೆ ನೀಡಿದ ಆದೇಶ ಹಿಂಪಡೆಯುವ ಮಾತನ್ನಾಡಿ ತಮ್ಮ ಮುಸ್ಲಿಮರ ತುಷ್ಠೀಕರಣದ ಪರಮಾವಧಿ ತಲುಪುತ್ತಿದ್ದಾರೆ. ಸಿಧ್ಧರಾಮಯ್ಯರವರಿಗೆ ಹಿಂದೂಗಳೆಂದರೆ ಅಸಡ್ಡೆ. ಈ ಹಿಂದೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ, ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಇತ್ಯಾದಿ ಮಾತುಗಳಿಂದ ತನ್ನ ಮುಸ್ಲಿಂ ಪ್ರೀತಿಯನ್ನು ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಅವರ ಉಪಮುಖ್ಯಮಂತ್ರಿಗಳಾದ ಡಿಕೆಶಿಯವರು ದೆ ಆರ್ ಆಲ್ ಮೈ ಬ್ರದರ್ಸ್, ಅವರ ಮೇಲಿನ‌ ಕೋಮು ಗಲಭೆ ಕೇಸುಗಳನ್ನು ಹಿಂಪಡೆಯಿರಿ ಎಂದು ಪತ್ರ ಬರೆಯುತ್ತಾರೆ. ಅಲ್ಲದೆ ಹಿಂದೂಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದರೆ ಅವರ ಮಾಂಗಲ್ಯ, ಕಿವಿ ಓಲೆ, ಕಾಲ್ಗೆಜ್ಜೆ ಇತ್ಯಾದಿಗಳನ್ನು ಕಳಚಿದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಈ ಹಿಂದಿನ ಆಡಳಿತದಲ್ಲಿಯೂ ಟಿಪ್ಪು ಜಯಂತಿ, ಶಾದಿಭಾಗ್ಯ ಇತ್ಯಾದಿಗಳನ್ನು‌ ನೀಡಿ ತಾವು ಯಾರ ಪರ ಎಂದು ತೋರಿಸಿದ್ದಾರೆ. ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತಂದ ಸಚಿವ ಜಮೀರ ಅಹಮ್ಮದ್ ಖಾನ್ ರನ್ನು ಸಮರ್ಥಿಸಿ ಸಂವಿಧಾನಕ್ಕೆ ಅಪಚಾರವಾದರೂ ತಮ್ಮ ಮುಸ್ಲಿಂ ಬಂಧುಗಳಿಗೆ ಮಾತ್ರ ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಯಾವತ್ತೂ ಬೆಲೆ ಕೊಡದ ಇವರು ತಮ್ಮ ತುಷ್ಠೀಕರಣದ ಪರಮಾವಧಿಯಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಆಹಾರ ಬಟ್ಟೆ ಅವರವರಿಗೆ ಬಿಟ್ಟದ್ದು ಎಂದರೇನರ್ಥ. ಇಂತಹ ಮೂರ್ಖತನದ ಹೇಳಿಕೆಗಳನ್ನು ಮುಖ್ಯಮಂತ್ರಿಯಾದವರು, ಸರ್ವರನ್ನೂ ಸಮಾನವಾಗಿ‌ ಕಾಣಬೇಕಾದವರು ಶಾಲಾ ಕಾಲೇಜುಗಳಲ್ಲಿ ಸರ್ವರೂ ಸಮಾನವಾಗಿರಬೇಕೆಂದು ಹಿಂದಿನವರು ಮಾಡಿದಂತಹ ಸಮವಸ್ತ್ರಕ್ಕೆ ಇವರು ಒಪ್ಪದೇ ಶಾಲೆಗಳಲ್ಲಿಯೂ ತನ್ನ ಹೇಸಿಗೆ ರಾಜಕಾರಣದ ಹಸ್ತ ಚಾಚುತ್ತಿದ್ದಾರೆ.‌ ಇವರ ಹೇಳಿಕೆ ಗಮನಿಸಿದರೆ ಸಮವಸ್ತ್ರ ಅಗತ್ಯವೇ ಇಲ್ಲ ಇನ್ನು ಮುಂದೆ‌. ಅದು ಅವರವರ ಇಷ್ಟ. ನಾಳೆ ಹಿಂದೂಗಳು ಕೇಸರಿ ಪಂಚೆ ಶಾಲು ಇತ್ಯಾದಿ ಧರಿಸಿ ಬಂದರೂ ಕೇಳಲಿಕ್ಕಿಲ್ಲ. ಸಮಾಜದಲ್ಲಿ ಸದಾ ಅರಾಜಕತೆ ಬಯಸುವ ನಿಮ್ಮಂಥಹವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ವಿನಾಶಕಾಲೇ ವಿಪರೀತ ಬುಧ್ಧಿ ಎನ್ನುವಂತೆ ಇವರ ಸರಕಾರದ ಪತನದ ದಿನಗಳು ನಿನ್ನೆಯಿಂದಲೇ ಎಣಿಕೆಗೆ ಪ್ರಾರಂಭವಾಗಿದೆ. ಬಿಟ್ಟಿ ಭಾಗ್ಯ ಘೋಷಿಸಿ ಜನರನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದು ಇದೀಗ ಯಾವುದೇ ಅಭಿವ್ರಧ್ಧಿ ಕೆಲಸಗಳಿಗೆ ಅನುದಾನಗಳಿಲ್ಲದೆ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಮೂರ್ಖತನದ ಆದೇಶ ಮಾಡಿದರೆ ಜನ ನಿಮಗೆ ಮುಂದಿನ ಚುನಾವಣೆಗಳಲ್ಲಿ ಬುಧ್ಧಿ ಕಲಿಸದೇ ಇರರು. ಕೂಡಲೇ ನಿಮ್ಮ ಮಾತನ್ನು ಹಿಂಪಡೆಯಿರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಮಕ್ಕಳು ಶಾಂತಿ ಸೌಹಾರ್ದತೆಯಿಂದ ಧರ್ಮಾತೀತವಾಗಿ ಬೆಳೆಯಲು ಅವಕಾಶ ನೀಡಿ. ಇಲ್ಲದಿದ್ದಲ್ಲಿ ಪರಿಣಾಮ ವಿಪರೀತವಾದರೆ ನೀವೇ ಹೊಣೆಗಾರರಾಗುವಿರಿ ಎಂದು ಎಚ್ಚರಿಸುತ್ತಿದ್ದೇವೆ.

ಸಿ.ಎಂ. ಹಿಜಾಬ್ ಹೇಳಿಕೆ ಅತಿರೇಕದ ಪರಮಾವಧಿ : ಕೆ.ಉದಯಕುಮಾರ್ ಶೆಟ್ಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಜಾಬ್ ನಿಷೇಧ ಹಿoಪಡೆಯುತ್ತೇನೆ ಎನ್ನುವ ಹೇಳಿಕೆ ಅತಿರೇಕದ ಪರಮಾವಧಿ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.

ಸಿದ್ದರಾಮಯ್ಯ ಹಿಂದಿನಿಂದಲೂ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದವರು. ಅದು ಶಾಲಾ ವಿದ್ಯಾರ್ಥಿಗಳ ಬಗ್ಗೆ ಇರಬಹುದು ಅಥವಾ ಧರ್ಮದ ಬಗ್ಗೆ ಇರಬಹುದು. ಇದು ಮುಸ್ಲಿಂ ಓಲೈಕೆಯ ಮುಂದುವರಿದ ಭಾಗವಾಗಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಗೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳಿಲ್ಲ.

ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಅಧ್ಯಾಯವನ್ನು ಬೇಕಂತಲೇ ಕೆದಕಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಹುನ್ನಾರಕ್ಕೆ ಸಿ.ಎಂ. ಮುಂದಾದಂತೆ ಕಾಣುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಈ ವಿಷಯ ಕಾಂಗ್ರೆಸ್ಸಿಗೆ ಮುಳುವಾಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ನಗರಸಭೆಯ ಮೂಡು ಪೆರಂಪಳ್ಳಿ ವಾರ್ಡ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾ ನಾಮಪತ್ರ ಸಲ್ಲಿಕೆ



ಉಡುಪಿ: ಉಡುಪಿ ನಗರಸಭೆಯ ಮೂಡು ಪೆರಂಪಳ್ಳಿ ವಾರ್ಡಿನ ಉಪ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾರವರು ಡಿ.15ರಂದು ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರೊಂದಿಗೆ ನಗರಸಭೆಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Design a site like this with WordPress.com
Get started