ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ : ಕೋಟ ತಿರುಗೇಟು





ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ನನ್ನ ಬಗ್ಗೆಯೂ ಉಲ್ಲೇಖ ಮಾಡುತ್ತಾ ಕುಚ್ಚಲಕ್ಕಿ ಕೊಡುವುದಾಗಿ ಕೋಟ ಸುಳ್ಳು ಹೇಳಿದ್ದಾರೆ ಎಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಪಾಲ ಪೂಜಾರಿಯವರನ್ನು ಸಜ್ಜನ ಮತ್ತು ಪ್ರಾಮಾಣಿಕ ಎಂದಿರುವುದು ಸುಳ್ಳಾದರೆ ಕ್ಷಮಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ವಾಸ್ತವಿಕವಾಗಿ ಕುಚ್ಚಲಕ್ಕಿ ಕೊಡುವ ಪ್ರಕ್ರಿಯೆ ಬರೇ ಒಂದೆರಡು ತಿಂಗಳಲ್ಲಿ ಮುಗಿಯುವ ಕೆಲಸವಲ್ಲ. ದ.ಕ. ಮತ್ತು ಉಡುಪಿ ಜಿಲ್ಲೆಗೆ ಸುಮಾರು 12 ಲಕ್ಷ ಕ್ವಿಂಟಾಲ್ ಕುಚ್ಚಿಗೆ ಅಕ್ಕಿಯ ಅವಶ್ಯಕತೆ ಇದ್ದು, 16 ಲಕ್ಷ ಕ್ವಿಂಟಾಲ್  ಕೆಂಪು ಅಕ್ಕಿ ನೀಡುವ ಭತ್ತದ ತಳಿಗಳನ್ನು ಖರೀದಿಸಬೇಕು. ಇದುವರೆಗೆ ಅಭಿಲಾಶ್, ಜಯ, ಎಂಒ4 ಮುಂತಾದ ತಳಿಗಳಿಗೆ ಬೆಂಬಲ ಬೆಲೆಯ ಮಾತೇ ಇರಲಿಲ್ಲ. ನನ್ನ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರದ ಅನುಮತಿ ಪಡೆದು ಬೆಂಬಲ ಬೆಲೆಯನ್ನು ನೀಡಿ ಖರೀದಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಿತ್ತು. ಬೆಂಬಲ ಬೆಲೆ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ.500ನ್ನು ಹೆಚ್ಚುವರಿಯಾಗಿ ರಾಜ್ಯ ಸರಕಾರ ಭರಿಸುವುದಾಗಿ ನಿರ್ದೇಶನ ನೀಡಿದ್ದರು.

ಈ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ವಿಳಂಬವಾದ ಹಿನ್ನೆಲೆಯಲ್ಲಿ ನಮ್ಮ ಸರಕಾರದ ಅವಧಿಯ ಕೊನೆಯ ದಿನಗಳು ಬಂದಿತ್ತು. ಮುಂದಿನ ವರ್ಷ, ಅಂದರೆ ಪ್ರಸಕ್ತ ಸಾಲಿನಲ್ಲಿ ಖರೀದಿಗೆ ಎಲ್ಲ ಅನುಕೂಲಗಳೂ ಇತ್ತು. ದುರಾದೃಷ್ಟವಶಾತ್ ನಮ್ಮ ಸರಕಾರ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಆ ಬತ್ತ ಖರೀದಿಯ ಪ್ರಕ್ರಿಯೆಗಳು ಮುಂದೂಡಲ್ಪಟ್ಟಿತು. ಇದು ಕುಚ್ಚಲಕ್ಕಿ ನೀಡಲು ಉದ್ಭವಿಸಿದ ತಡೆಯಾಗಿತ್ತು. ಈ ಎಲ್ಲ ವಿಚಾರಗಳು ಗೋಪಾಲ ಪೂಜಾರಿಯವರಿಗೆ ಗೊತ್ತಿತ್ತು. ಗೋಪಾಲ ಪೂಜಾರಿಯವರು ಚುನಾವಣಾ ಪ್ರಚಾರದಲ್ಲಿ ನಾನೆಲ್ಲೂ ಕೂಡಾ ಕುಚ್ಚಲಕ್ಕಿಯ ಬಗ್ಗೆ ಉಲ್ಲೇಖ ಮಾಡದಿದ್ದರೂ, ನನ್ನ ಸರಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಕುಚ್ಚಲಕ್ಕಿ ನೀಡುವುದಾಗಿ ಹೇಳಿರುವುದನ್ನು ಮರೆಯಲಾಗದು.

ಗೋಪಾಲ ಪೂಜಾರಿಯವರು ರಾಜಕಾರಣದ ಮಿತಿಯನ್ನು ಮೀರಿ ಮಾತನಾಡುತ್ತಿರುವುದು ಅರ್ಥವಾಗುತ್ತಿದೆ. ಒಟ್ಟಾರೆ ಇದು ಆರೋಗ್ಯಕರ ರಾಜಕಾರಣಕ್ಕೆ ಯೋಗ್ಯವಾದಂತಹ ಮಾತುಗಳಲ್ಲ. ಅಷ್ಟಾಗಿಯೂ ಕೂಡ ಗೋಪಾಲ ಪೂಜಾರಿಯವರು ಸಜ್ಜನ, ಪ್ರಾಮಾಣಿಕರು ಎಂದು ನನ್ನ ಬಳಿ ಬಂದಿರುವ ಅನೇಕ ಮಂದಿಯಲ್ಲಿ ಹೇಳುತ್ತಿದ್ದೆ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾಗ ಬೇಕಾದರೆ ಅವರು ಸಜ್ಜನ, ಪ್ರಾಮಾಣಿಕರು ಅಲ್ಲ ಎಂಬುದನ್ನು ಅವರೇ ಒಪ್ಪಿಕೊಂಡಂತಾಗುತ್ತದೆ. ಹಾಗೆ ಹೇಳಿದ್ದಕ್ಕಾಗಿ ಕ್ಷಮಿಸಿ ಎಂದು ಹೇಳಿದ್ದೇನೆ ಎಂದು ಕೋಟ ತಿರುಗೇಟು ನೀಡಿದ್ದಾರೆ.

ಗೋಪಾಲ ಪೂಜಾರಿಯವರು ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ  ವಿದ್ಯಾರ್ಥಿ ವೇತನ ಕೊಟ್ಟಿಲ್ಲ ಎಂದಿರುವುದನ್ನು ಗಮನಿಸಿದ್ದೇನೆ. ವಾಸ್ತವಿಕವಾಗಿ ಅವರಿಗೆ ಏನೇನೂ ಗೊತ್ತಿಲ್ಲ. ನನ್ನ ಅವಧಿಯಲ್ಲಿ 97% ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿರುವುದೇ ಒಂದು ದಾಖಲೆ ಮತ್ತು ಪ.ಜಾ. ಮತ್ತು ಪ.ಪಂ. ದವರ ಎಲ್ಲಾ ಮಕ್ಕಳಿಗೂ ಮುಕ್ತವಾಗಿ ಹಾಸ್ಟೆಲಿಗೆ ಸೇರಿಸಿಕೊಳ್ಳಬೇಕು ಎನ್ನುವ ಆದೇಶವನ್ನು ನಾನೇ ಕೊಟ್ಟಿದ್ದೆ ಮತ್ತು ಅನುಷ್ಠಾನವನ್ನೂ ಮಾಡಿದ್ದೇನೆ. ಇಂದು ರಾಜ್ಯಾದ್ಯಂತ ಎಲ್ಲ ದಲಿತ ಮುಖಂಡರು ಕೂಡ ನಮ್ಮ ಇಲಾಖೆ ಅತ್ಯಂತ ಪಾರದರ್ಶಕವಾಗಿ ನಡೆದ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ ಎನ್ನುವುದು ಗೋಪಾಲ ಪೂಜಾರಿಯವರಿಗೆ ಹೇಳಿದರೂ ಅರ್ಥವಾಗುವುದಿಲ್ಲ ಎಂದು ಕೋಟ ತಿಳಿಸಿದ್ದಾರೆ.

ಹಿಂದುಳಿದ ವರ್ಗದ ಇಲಾಖೆಯಲ್ಲಿ ನಾನು ಮಂತ್ರಿಯಾಗುವವರೆಗೆ ಮಕ್ಕಳಿಗೆ ಹಾಸ್ಟೆಲ್ ಗಳ ಕೊರತೆ ಇತ್ತು. ಇತ್ತೀಚೆಗೆ 26,000 ಮಕ್ಕಳನ್ನು ಹಾಸ್ಟೆಲ್ ಗೆ ಒಂದೇ ದಿವಸ ಸೇರಿಸುವಂತಹ ಆದೇಶವನ್ನು ಮಾಡಿ ಅನುಷ್ಠಾನ ಮಾಡಿದ್ದೆ. ಇಂದು ಹಾಸ್ಟೆಲ್ ಇಲ್ಲದೆ ಮಕ್ಕಳು ಪರದಾಡುತ್ತಿರುವುದು ಗೋಪಾಲ್ ಪೂಜಾರಿ ಅವರಿಗೆ ಯಾಕೆ ಅರ್ಥವಾಗುತ್ತಿಲ್ಲವೋ ನನಗೆ ತಿಳಿದಿಲ್ಲ. ಅವರ ಸರಕಾರ ಎಂಬ ಕಾರಣಕ್ಕೆ ಹಾಸ್ಟೆಲ್ ನಲ್ಲಿ ಇರುವಂತಹ ಮಕ್ಕಳು ಇರಬಹುದು ಎನ್ನುವ ಏನಾದರೂ ಯೋಚನೆ ಇದ್ದರೆ ನಾನು ಪ್ರಶ್ನೆ ಮಾಡುತ್ತಿಲ್ಲ ಎಂದವರು ತಿಳಿಸಿದ್ದಾರೆ.

ಕೋಟಿ ಚೆನ್ನಯರ ಹೆಸರಲ್ಲಿ ಹಿಂದುಳಿದ ವರ್ಗದ ಮಕ್ಕಳಿಗೆ ಸೇನಾಪೂರ್ವ ತರಬೇತಿ ಸಂಸ್ಥೆಯನ್ನು ಮಾಡಿದ್ದೆ. ಗೋಪಾಲ ಪೂಜಾರಿಯವರು ಒಮ್ಮೆ ನೋಡಿಕೊಂಡು ಬರಬೇಕು. ಪರೀಕ್ಷೆಗೆ ಹಾಜರಾದ 40 ಮಂದಿ ಮಕ್ಕಳಲ್ಲಿ 36 ಮಂದಿ ಮಕ್ಕಳು ಪಾಸಾಗಿದ್ದಾರೆ. ಇದೆಲ್ಲವೂ ಗೋಪಾಲ ಪೂಜಾರಿಯವರಿಗೆ ಅರ್ಥವಾಗುತ್ತದೆ ಎಂದು ನನಗನಿಸುತ್ತಿಲ್ಲ ಎಂದಿದ್ದಾರೆ.

ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿದ್ದು ನಾನು ಎನ್ನುವುದಾಗಲಿ ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ಆರಂಭಿಸಿ ಬಡವರ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದು ನಾನು ಎನ್ನುವ ವಿಚಾರದಲ್ಲಾಗಲಿ ಗೋಪಾಲ ಪೂಜಾರಿಯವರಿಗೆ ಜಾಣ ಮರೆವು ಬರುತ್ತದೆ ಎಂದು ನನಗನಿಸುತ್ತದೆ. ಒಟ್ಟಾರೆ ರಾಜಕಾರಣದ ಕೆಸರಾಟದಲ್ಲಿ ಗೋಪಾಲ ಪೂಜಾರಿಯವರಂತವರು ವಿನಾಕಾರಣ ಗೊಂದಲ ಮಾತಾಡುತ್ತಿರುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ವಿನಂತಿ ಎಂದು ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಗೆಲುವಿನ ಅಂತರ ಹೆಚ್ಚಿಸಿ ಸದೃಢ ಪಕ್ಷ ಸಂಘಟನೆಗೆ ಶ್ರಮಿಸಲು ನಳಿನ್ ಕರೆ







ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಚುನಾವಣಾ ಗೆಲುವು ನಿಶ್ಚಿತವಾಗಿದ್ದು ಹೆಚ್ಚಿನ ಮತಗಳ ಅಂತರವನ್ನು ದಾಖಲಿಸುವ ಮೂಲಕ ಸದೃಢ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಲೋಕಸಭಾ ಚುನಾವಣೆಯ ಬಳಿಕ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ, ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ನಡೆಯಲಿದ್ದು ಪ್ರಸಕ್ತ ಲೋಕಸಭಾ ಚುನಾವಣೆಯ ಉತ್ತಮ ಫಲಿತಾಂಶ ಮುoದಿನ ಚುನಾವಣೆಗಳಿಗೆ ಸ್ಫೂರ್ತಿ ತುಂಬಲಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು, ಅನನ್ಯ ಜವಾಬ್ದಾರಿಗಳನ್ನು ಹೊಂದಿರುವ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉತ್ತಮ ಪೂರ್ವ ತಯಾರಿಯೊಂದಿಗೆ ಬದ್ಧತೆಯಿಂದ ತೊಡಗಿಸಿಕೊಂಡು ಲೋಕಸಭಾ ಚುನಾವಣೆಯನ್ನು ಎಚ್ಚರಿಕೆಯಿಂದ ಎದುರಿಸಬೇಕಾಗಿದೆ. ಪ್ರಧಾನಿ ಮೋದಿ ಕರೆಯoತೆ ಪ್ರತೀ ಬೂತ್ ಗಳಲ್ಲಿ ಹೆಚ್ಚಿನ ಮತ ಗಳಿಕೆಯೊಂದಿಗೆ ಬೂತ್ ಗೆಲ್ಲುವ ಮೂಲಕ ದೇಶ ಗೆಲ್ಲುವ ಸಂಕಲ್ಪದೊಂದಿಗೆ ಪಕ್ಷದ ಅಭ್ಯರ್ಥಿಯ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯು ವಿವಿಧ ನಿಗದಿತ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದೆ. ಏ.11 ಮತ್ತು 12ರಂದು ಬೂತ್ ಕಾರ್ಯ ಅಭಿಯಾನದ ಅಂಗವಾಗಿ ಎಲ್ಲ ಬೂತ್ ಗಳಲ್ಲಿ ಪೂರ್ವಸಿದ್ಧತಾ ಸಭೆಗಳು ನಡೆಯಲಿವೆ. ಏ.15ರಿಂದ 17ರ ವರೆಗೆ ಮೊದಲ ಸುತ್ತಿನ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದ್ದು, ಏ.20ರಿಂದ 22ರ ವರೆಗೆ ಚುನಾವಣಾ ಪ್ರಚಾರದ ಮಹಾ ಅಭಿಯಾನ ನಡೆಯಲಿದೆ. ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಎಲ್ಲ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷದ ಅಭ್ಯರ್ಥಿಯ ಪ್ರಚಂಡ ಗೆಲುವಿಗೆ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಚುನಾವಣಾ ಪ್ರಭಾರಿಗಳಾದ ನಯನಾ ಗಣೇಶ್, ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಕಿಣಿ, ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರೆ ಗೀತಾoಜಲಿ ಎಮ್. ಸುವರ್ಣ ಸಹಿತ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು, ಉಡುಪಿ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಬಿಜೆಪಿ ಗೆಲುವಿಗೆ ಮಹಿಳಾ ಕಾರ್ಯಕರ್ತರಿಂದ ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಹಾಗೂ ‘ಶಕ್ತಿ ಚೌಪಾಲ್’ ಅಭಿಯಾನ





‘ಸಬ್ ಕೇ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಎಲ್ಲ ವರ್ಗಗಳ ಕಲ್ಯಾಣಕ್ಕೆ ಕಂಕಣಬದ್ಧರಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಸ್ತ ಮಹಿಳೆಯರ ಭರವಸೆಯ ನಾಯಕರಾಗಿದ್ದಾರೆ.

ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಯೋಚನೆ-ಯೋಜನೆಗಳಿಂದ ‘ದೇಶಕ್ಕೆ ಮೋದಿಯೇ ಗ್ಯಾರಂಟಿ’ ಎನ್ನುವುದನ್ನು ಈಗಾಗಲೇ ಮಹಿಳಾ ಮತದಾರರು ಅರ್ಥೈಸಿಕೊಂಡಿದ್ದು ಮುoದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕ್ಷೇತ್ರದ ನಾರೀ ಶಕ್ತಿ ಮಹತ್ತರ ಕೊಡುಗೆ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಅವರು ತಿಳಿಸಿದರು.

ಅವರು ಬಿಜೆಪಿ ಜಿಲ್ಲಾ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ ನೇತೃತ್ವದ ಕೇoದ್ರ ಸರಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳ ಮಹಿಳೆಯರ ಅಗತ್ಯತೆಗಳಿಗೆ ತಕ್ಕಂತೆ ವಿನೂತನ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ.14 ಯುಗಾದಿಯ ಶುಭ ದಿನದಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಅಭಿಯಾನ ಆರಂಭಗೊಳ್ಳಲಿದ್ದು ಮಹಿಳಾ ಕಾರ್ಯಕರ್ತರು ಮನೆ ಮನೆ ಸಂಪರ್ಕ ನಡೆಸಿ ಮೋದಿ ಸರಕಾರದ ಸಾಧನೆಗಳನ್ನು ಮತ್ತು ದೇಶಕ್ಕೆ ಮೋದಿ ನಾಯಕತ್ವದ ಅಗತ್ಯತೆಯನ್ನು ಮಹಿಳಾ ಮತದಾರರಿಗೆ ಮನವರಿಕೆ ಮಾಡಲಿದ್ದಾರೆ ಎಂದರು.

ಜಿಲ್ಲೆಯಾದ್ಯಂತ ಪ್ರತಿ ಬೂತ್ ಗಳಲ್ಲಿ ‘ಶಕ್ತಿ ಚೌಪಾಲ್’ ಅಭಿಯಾನದಡಿ ಮಹಿಳೆಯರ ಕಾರ್ನರ್ ಸಭೆಗಳು ಈಗಾಗಲೇ ಆರಂಭಗೊಂಡಿದ್ದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ 1,112 ಬೂತ್ ಗಳಲ್ಲಿ ಸುಮಾರು 3,500 ಕಾರ್ನರ್ ಸಭೆಗಳು ನಡೆಯಲಿವೆ ಎಂದರು.

ಮಂಡಲ ಶಹ ಮಹಿಳಾ ಸಮಾವೇಶಗಳು ಏ.18 ಮತ್ತು 19ರಂದು ನಡೆಯಲಿವೆ ಎಂದು ಅವರು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1,31,430 ಮಂದಿ ಮಹಿಳೆಯರು ಉಜ್ವಲ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ದೀನದಯಾಳ್ ಅಂತ್ಯೋದಯ ಯೋಜನೆಯಡಿ 1,73,387 ಮಂದಿ ಫಲಾನುಭವಿಗಳಿದ್ದು, ಜಲ್ ಜೀವನ್ ಮಿಷನ್ ಯೋಜನೆಯಡಿ 3,61,476 ಮಂದಿ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಹೊಂದಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 52,201 ಮನೆಗಳು ನಿರ್ಮಾಣಗೊಂಡಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 12,02,000 ಮಂದಿ ಫಲಾನುಭವಿಗಳು ಉಚಿತ ಅಕ್ಕಿಯನ್ನು ಪಡೆಯುತ್ತಿದ್ದು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸುಮಾರು 80,984 ಶೌಚಾಲಯಗಳು ನಿರ್ಮಾಣಗೊಂಡಿವೆ. 2024ರ ವರೆಗೆ ಕ್ಷೇತ್ರದಾದ್ಯoತ ಒಟ್ಟು 7,74,231 ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ 10 ವರ್ಷಗಳ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ ಸಂಪೂರ್ಣವಾಗಿ ದೇಶದ ಹಿತಕ್ಕಾಗಿ ತನ್ನನ್ನು ಮುಡಿಪಾಗಿಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಕಣ್ಮಣಿಯಾಗಿದ್ದಾರೆ.

ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪದೊಂದಿಗೆ ಜಿಲ್ಲೆಯ ನಾರೀ ಶಕ್ತಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗರಿಷ್ಠ ಅಂತರದ ಮತಗಳಿಂದ ಗೆಲ್ಲಿಸುವ ಪಣತೊಟ್ಟು ಬದ್ಧತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ರೇಷ್ಮಾ ಉದಯ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಶ್ಯಾಮಲಾ ಎಸ್. ಕುಂದರ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಪ್ರಿಯದರ್ಶಿನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್ ಉಪಸ್ಥಿತರಿದ್ದರು.

ಖ್ಯಾತ ತಬಲಾ ವಾದಕ, ತರಬೇತುದಾರ ಕೆ.ಮಂಜಪ್ಪ ಸುವರ್ಣರವರಿಗೆ ‘ನಿಡಂಬೂರು ಬೀಡು ಶ್ರೀ’ ಪ್ರಶಸ್ತಿ ಪ್ರಧಾನ





ನಿಡಂಬೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ, ಅಂಬಲಪಾಡಿ (ಮೂಡು ಪಾಲು) ಇದರ ವತಿಯಿಂದ ನಡೆದ ಶ್ರೀ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ರವರು ಖ್ಯಾತ ತಬಲಾ ವಾದಕ ಹಾಗೂ ಉಚಿತ ತಬಲಾ ತರಬೇತುದಾರ ಕೆ.ಮಂಜಪ್ಪ ಸುವರ್ಣ ಅಂಬಲಪಾಡಿ ಇವರಿಗೆ ದಿ! ನಿ.ಬೀ. ಅಣ್ಣಾಜಿ ಬಲ್ಲಾಳ್ ಸ್ಮರಣಾರ್ಥ ‘ನಿಡಂಬೂರು ಬೀಡು ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಂಜಪ್ಪ ಸುವರ್ಣರವರ ಧರ್ಮಪತ್ನಿ ಗೋಧಾವರಿ ಎಮ್. ಸುವರ್ಣ, ನೇಮೋತ್ಸವ ಸಮಿತಿಯ ಅಧ್ಯಕ್ಷ ಅವಿನಾಶ್ ಶೆಟ್ಟಿ, ಸಮಿತಿಯ ಪ್ರಮುಖರಾದ ವಿಶು ಶೆಟ್ಟಿ ಅಂಬಲಪಾಡಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ನ್ಯಾಯವಾದಿ ಎ.ಸಂಕಪ್ಪ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಸ್ಥಳೀಯರಾದ ಜಯಕರ ಶೆಟ್ಟಿ, ಶರತ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ನೇಮೋತ್ಸವ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ





ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಏ.3ರಂದು ಮಣಿಪಾಲದ ರಜತಾದ್ರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ವಿದ್ಯಾ ಕುಮಾರಿ ಅವರಿಗೆ ಚುನಾವಣಾ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ ಇವರು ಉಪಸ್ಥಿತರಿದ್ದರು.

*ಏ.3 : ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ, ಹಿಂದೂ ಫೈರ್ ಬ್ರಾಂಡ್ ಯತ್ನಾಳ್, ಸಿ.ಟಿ. ರವಿ, ಸುನಿಲ್ ಕುಮಾರ್ ಭಾಗಿ



ಉಡುಪಿ: ಏ.3ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಿಗ್ಗೆ ಗಂಟೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ.

ಮಾಜಿ ಕೇoದ್ರ ಸಚಿವ, ಹಿಂದೂ ಫೈರ್ ಬ್ರಾoಡ್ ಬಸವನಗೌಡ ಪಾಟೀಲ್ ಯತ್ನಾಳ್ ದಿಕ್ಸೂಚಿ ಭಾಷಣ ಮಾಡಲಿರುವರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಜಿಲ್ಲೆಯ ಶಾಸಕರುಗಳಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಸಹಿತ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.

ಪಕ್ಷದ ಪ್ರಮುಖರು, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾಶಕ್ತಿ ಕೇoದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಮಾ.30 ಮತ್ತು 31 ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ : ನೇಮೋತ್ಸವ, ಸಾಧಕರಿಗೆ ಸನ್ಮಾನ




ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ನೇಮೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಇಂದು ಮಾರ್ಚ್ 30 ಶನಿವಾರ ಮತ್ತು ಮಾರ್ಚ್ 31 ರವಿವಾರ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಬಳಿ ನಡೆಯಲಿದೆ.

ಇಂದು ಮಾ.30 ಶನಿವಾರ ಬೆಳಿಗ್ಗೆ ಗಂಟೆ 7.30ಕ್ಕೆ ಮಹಾ ಚಪ್ಪರದ ಗಜಕಂಬ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾ ಚಪ್ಪರದ ಆರೋಹಣ,12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 4.00ಕ್ಕೆ ದೈವಸ್ಥಾನದಲ್ಲಿ ಮಹಾಪೂಜೆ ಮತ್ತು ಶ್ರೀ ದೈವಗಳ ದರ್ಶನ, ಗಂಟೆ 5.00ಕ್ಕೆ ದೇವಸ್ಥಾನದಿಂದ ಮುಖ ಮೂರ್ತಿ ಭಂಡಾರಗಳನ್ನು ಮೆರವಣಿಗೆಯಲ್ಲಿ ಮಹಾಚಪ್ಪರಕ್ಕೆ ತರುವುದು.

ರಾತ್ರಿ ಗಂಟೆ 9.00ಕ್ಕೆ ‘ನಿಡಂಬೂರು ಬೀಡು ಶ್ರೀ’ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಮುಖ್ಯೋಪಾಧ್ಯಾಯ ಎ. ಜಯಕರ ಶೆಟ್ಟಿ, ಪಠೇಲರ ಮನೆ ಅಂಬಲಪಾಡಿ ಮತ್ತು ತಬಲಾ ವಾದಕ ಹಾಗೂ ತರಬೇತುದಾರ ಕೆ. ಮಂಜಪ್ಪ ಸುವರ್ಣ ಅಂಬಲಪಾಡಿ ಇವರಿಗೆ ನೇಮೋತ್ಸವ ಸಮಿತಿಯ ವತಿಯಿಂದ ಸಮಿತಿಯ ಗೌರವಾಧ್ಯಕ್ಷ ಹಾಗೂ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ರವರಿಂದ ಸನ್ಮಾನ ನಡೆಯಲಿದೆ.

ರಾತ್ರಿ ಗಂಟೆ 9.00ಕ್ಕೆ ಶ್ರೀ ಬಬ್ಬುಸ್ವಾಮಿಯ ನೇಮ, ರಾತ್ರಿ ಗಂಟೆ 12.00ಕ್ಕೆ ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.

ನಾಳೆ ಮಾ.31 ರವಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ, ಮಧ್ಯಾಹ್ನ ಗಂಟೆ 12.00 ರಿಂದ ಶ್ರೀ ಮಹಾ ಗುಳಿಗದ್ವಯ ದೈವಗಳ ನೇಮ, ಸಂಜೆ ಗಂಟೆ 4.00ರಿಂದ ಕೊರಗಜ್ಜ ದೈವದ ನೇಮ ನಡೆಯಲಿದೆ ಎಂದು ನೇಮೋತ್ಸವ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಕ್ಷಿತ್ ಕೋಟ್ಯಾನ್ ‘ಮಿಸ್ಟರ್ ಕರಾವಳಿ 2024’, ಧೀರಜ್ ಕುಮಾರ್ ‘ರನ್ನರ್ ಅಪ್’, ಝಾಕಿರ್ ಹುಲ್ಲೂರ್ ಗೆ ‘ಬೆಸ್ಟ್ ಪೋಸರ್’ ಪ್ರಶಸ್ತಿ

ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ವಿಜೇತರು




ಉಡುಪಿ: ಗೋವಾದಲ್ಲಿ ಏ.6 ಮತ್ತು 7ರಂದು ನಡೆಯಲಿರುವ ‘ಫೆಡರೇಶನ್ ಕಪ್’ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಪೂರ್ವಭಾವಿಯಾಗಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಚಾಂಪಿಯನ್ಶಿಪ್ ನ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಡಿಸ್ಟಿಕ್ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಸಹಯೋಗದೊಂದಿಗೆ ಕರ್ನಾಟಕ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಮಾರ್ಗದರ್ಶನದಲ್ಲಿ ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಶಿವಗಿರಿ ಸಭಾಂಗಣದಲ್ಲಿ ನಡೆಯಿತು.

ರಕ್ಷಿತ್ ಕೋಟ್ಯಾನ್ ಉಡುಪಿ *’ಮಿಸ್ಟರ್ ಕರಾವಳಿ ಕ್ಲಾಸಿಕ್ 2024’* ಪ್ರಶಸ್ತಿ ಪಡೆದರು. ಧೀರಜ್ ಕುಮಾರ್ ಉಡುಪಿ *’ರನ್ನರ್ ಅಪ್’* ಹಾಗೂ ಝಾಕಿರ್ ಹುಲ್ಲೂರ್ ಧಾರವಾಡ *’ಬೆಸ್ಟ್ ಪೋಸರ್’* ಪ್ರಶಸ್ತಿ ಪಡೆದರು.

ದೇಹ ತೂಕದ ಒಟ್ಟು 8 ವಿಭಾಗಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯ ಮೊದಲ 5 ಸ್ಥಾನಗಳ ವಿಜೇತರ ವಿವರ:

*55 ಕೆಜಿ ವಿಭಾಗ* : ಕೃಷ್ಣಪ್ರಸಾದ್ ಉಡುಪಿ, ಸಲ್ಮಾನ್ ಖಾನ್ ಶಿವಮೊಗ್ಗ, ಕೃಷ್ಣ ಹರಿಕಾಂತ್ರ ಉ.ಕ., ಪ್ರಜ್ವಲ್ ಉಡುಪಿ, ಆಕಾಶ್ ಜೊಗಾನಿ ಬೆಳಗಾವಿ
*60 ಕೆಜಿ ವಿಭಾಗ* : ಗಂಗಾಧರ ಸ್ವಾಮಿ ದಾವಣಗೆರೆ, ಝಾಕಿರ್ ಹುಲ್ಲೂರ್ ಧಾರವಾಡ, ರೊನಾಲ್ಡ್ ಡಿಸೋಜ ದ.ಕ., ರಾಕೇಶ್ ಬಳ್ಳಾರಿ, ವಿಕ್ಷಿತ್ ರಾಜ್ ಉಡುಪಿ
*65 ಕೆಜಿ ವಿಭಾಗ* : ಧೀರಜ್ ಕುಮಾರ್ ಉಡುಪಿ, ಸೂರಜ್ ಆಚಾರ್ಯ ದ.ಕ., ಆಶಿಶ್ ಉಡುಪಿ, ಮುಕೇಶ್ ಉಡುಪಿ, ಓಂಕಾರ್ ಪಾಟೀಲ್ ಬೆಳಗಾವಿ
*70 ಕೆಜಿ ವಿಭಾಗ* :
ರಕ್ಷಿತ್ ಕೋಟ್ಯಾನ್ ಉಡುಪಿ, ಸುನಿಲ್ ಭಟ್ಕಂಡೆ ಬೆಳಗಾವಿ, ಗಣೇಶ್ ಪಾಟೀಲ್ ಬೆಳಗಾವಿ, ಮಯೂರ್ ಮೆನ್ಸೆ ಬೆಳಗಾವಿ, ಸೋಮಶೇಖರ್ ಖಾರ್ವಿ ಉಡುಪಿ
*75 ಕೆಜಿ ವಿಭಾಗ* : ಪ್ರತಾಪ್ ಕಲ್ಕುಂಡ್ರಿಕರ್ ಬೆಳಗಾವಿ, ಸತ್ಯಾನಂದ ಭಟ್ ಮೈಸೂರು, ಚೇತನ್ ಕುಮಾರ್ ದ.ಕ., ಪವನ್ ರಾಜ್ ಉಡುಪಿ, ಸಾಹೇಬ್ ಲಾಲ್ ಬಿಜಾಪುರ್
*80 ಕೆಜಿ ವಿಭಾಗ* : ಕುಮಾರ್ ಉ.ಕ., ಶೈಲೇಶ್ ದ.ಕ., ರಾಜೇಶ್ ಉಡುಪಿ, ಶಿವಪ್ರಸಾದ್ ದ.ಕ.
*85 ಕೆಜಿ ವಿಭಾಗ* : ಚರಣ್ ರಾಜ್ ಉಡುಪಿ, ಮಹೇಶ್ ಗವಾಲಿ ಬೆಳಗಾವಿ, ಪ್ರಸಾದ್ ಬಚೇಕರ್ ಬೆಳಗಾವಿ, ಸಂದೀಪ್ ಉಡುಪಿ
*+85 ಕೆಜಿ ವಿಭಾಗ* : ಸ್ವರೂಪ್ ಬಂಗೇರ ಉಡುಪಿ, ಗೌತಮ್ ಉಡುಪಿ

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆಯನ್ನು ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೆ.ನೀಲಕಂಠ ಅಧ್ಯಕ್ಷತೆಯಲ್ಲಿ ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಜೇಸನ್ ಡಯಾಸ್ ಮತ್ತು ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದ ಪ್ರಧಾನ ಅರ್ಚಕ ದಯಾಕರ ಶಾಂತಿ ಉಪಸ್ಥಿತಿಯಲ್ಲಿ ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಪ್ರಶಸ್ತಿಯನ್ನು ಉದ್ಯಮಿ ಶಶಿಧರ್ ಕುಂದರ್ ಮಲ್ಪೆ ವಿತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಅಧ್ಯಕ್ಷ ಜೆ. ನೀಲಕಂಠ, ಉಪಾಧ್ಯಕ್ಷ ಗಂಗಾಧರ್ ಎಮ್., ಪ್ರಧಾನ ಕಾರ್ಯದರ್ಶಿ ಜಿ.ಡಿ. ಭಟ್, ಕೋಶಾಧಿಕಾರಿ ದಿಲೀಪ್ ಕುಮಾರ್, ಅಂತರಾಷ್ಟ್ರೀಯ ದೇಹದಾಢ್ಯ ಪಟು ಲವೀನ್ ಕೆ. ಮಂಗಳೂರು, ಚಾಂಪಿಯನ್ಶಿಪ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷ ಅಶೋಕ್ ಬಂಗೇರ, ಕೋಶಾಧಿಕಾರಿ ಮಾರುತಿ ಜಿ. ಬಂಗೇರ, ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ರಾಷ್ಟ್ರೀಯ ತೀರ್ಪುಗಾರ ಉಮಾ ಮಹೇಶ್, ರಾಜ್ಯ ತೀರ್ಪುಗಾರ ರತ್ನಾಕರ ಖಾರ್ವಿ, ರಾಷ್ಟ್ರೀಯ ದೇಹದಾಡ್ಯ ಪಟು ಬಾಬು ಪೂಜಾರಿ ಉಪ್ಪುಂದ, ಅಂತಾರಾಷ್ಟ್ರೀಯ ಕರಾಟೆ ಪಟು ಪ್ರವೀಣಾ ಸುವರ್ಣ ಪರ್ಕಳ, ಪ್ರಮುಖರಾದ ರಾಧಾಕೃಷ್ಣ ಮೆಂಡನ್, ಸಂತೋಷ್ ಸಾಲ್ಯಾನ್, ತ್ರಿವಿದ್ ಕಾಂಚನ್, ಶೋಧನ್, ನಯನಾ ನೀಲಕಂಠ, ಉಮೇಶ್ ಸಾಲ್ಯಾನ್, ರಮೇಶ್ ಪೂಜಾರಿ, ಪಲ್ಲವಿ ಸಾಲ್ಯಾನ್, ಸುಶೀಲ ಸಾಲ್ಯಾನ್, ಸುಜಾತ ಪೂಜಾರಿ, ಗಾಯತ್ರಿ ಪೂಜಾರಿ, ವ್ಯಯಾನ್ ಮುಂತಾದವರು ಉಪಸ್ಥಿತರಿದ್ದರು.

ಮಾ.23 : ಉಡುಪಿ-ಬನ್ನಂಜೆ ಶಿವಗಿರಿ ಸಭಾ ಭವನದಲ್ಲಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಮತ್ತು  ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆ





ಕರಾವಳಿ ಕರ್ನಾಟಕ ದೇಹದಾರ್ಢ್ಯ ಪಟುಗಳ ತವರೂರು. ವಿಶೇಷವಾಗಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರತಿಭಾನ್ವಿತ ದೇಹದಾರ್ಢ್ಯ ಪಟುಗಳ ತಾಣ ಎಂದು ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಈಗಾಗಲೇ  ಜಿಲ್ಲಾ, ಅಂತರ್ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ದೇಹದಾರ್ಢ್ಯ ಸ್ಪರ್ಧೆಗಳನ್ನು ಉಡುಪಿ ಪರಿಸರ ಹಾಗೂ ಜಿಲ್ಲೆಯಾದ್ಯoತ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.

ಪ್ರಸ್ತುತ ಕರ್ನಾಟಕ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಮಾರ್ಗದರ್ಶನದಲ್ಲಿ  ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ಸಂಚಾಲನಾ ಸಮಿತಿಯು ಪ್ರತಿಭಾನ್ವಿತ ಹಾಗೂ ಉದಯೋನ್ಮುಖ ದೇಹದಾರ್ಢ್ಯ ಪಟುಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾರ್ಚ್ 23, 2024ನೇ ಶನಿವಾರ ಉಡುಪಿ-ಬನ್ನಂಜೆ  ಶ್ರೀ ನಾರಾಯಣ ಗುರು ಮಂದಿರದ ‘ಶಿವಗಿರಿ ಸಭಾಭವನ’ದಲ್ಲಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಮತ್ತು ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆಗಳನ್ನು ಆಯೋಜಿಸಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ‘ಮಿ! ಇಂಡಿಯಾ’ ಗೋವರ್ಧನ ಎನ್. ಬಂಗೇರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಏಪ್ರಿಲ್ 6 ಮತ್ತು 7ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ‘ಫೆಡರೇಶನ್ ಕಪ್’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ದೇಹದಾರ್ಢ್ಯ ಪಟುಗಳ ಆಯ್ಕೆಗಾಗಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮಾ.23ರಂದು ಸಂಜೆ ಗಂಟೆ 6.00ರಿಂದ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಯಾವುದೇ ದೇಹದಾರ್ಢ್ಯ ಪಟುಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ದೇಹ ತೂಕದ 55, 60, 65, 70, 75, 80, 85 ಮತ್ತು 85 ಕೆಜಿ ಮೇಲ್ಪಟ್ಟು ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಟೈಟಲ್, ರನ್ನರ್ ಅಪ್ ಮತ್ತು ಬೆಸ್ಟ್ ಪೋಸರ್ ಸಹಿತ ಪ್ರತಿ ವಿಭಾಗಗಳಲ್ಲಿ 5 ಸ್ಥಾನಗಳ ವಿಜೇತರನ್ನು ಆಕರ್ಷಕ ನಗದು ಬಹುಮಾನ ಮತ್ತು ಮೆಡಲ್ ನೀಡಿ ಪುರಸ್ಕರಿಸಲಾಗುವುದು.

ಮಾ.23ರ ಬೆಳಿಗ್ಗೆ ಗಂಟೆ 10.30ರಿಂದ ಇಂಡಿಯನ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ  ದಿ! ಮಾಧವ ಪೂಜಾರಿ ಸ್ಮರಣಾರ್ಥ ಟ್ರೋಫಿಯ ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆಯು ‘ಸೀನಿಯರ್ಸ್ ಮತ್ತು ಮಾಸ್ಟರ್ಸ್’ ವಿಭಾಗದಲ್ಲಿ ನಡೆಯಲಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಬಿಲ್ಲವ ಸಮಾಜದ ದೇಹದಾರ್ಢ್ಯ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಸದವಕಾಶವನ್ನು ಕಲ್ಪಿಸಲಾಗಿದೆ. ಆಕರ್ಷಕ ನಗದು ಬಹುಮಾನ ದೊಂದಿಗೆ ಟೈಟಲ್ ಮತ್ತು ರನ್ನರ್ ಅಪ್ ಪ್ರಶಸ್ತಿ ನೀಡಲಾಗುವುದು.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಸ್ಪರ್ಧೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಇದರ ಪ್ರವರ್ತಕ ನಾಡೋಜ ಡಾ! ಜಿ.ಶಂಕರ್ ಉದ್ಘಾಟಿಸಲಿದ್ದು, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್(ರಿ.) ಇದರ ಅಧ್ಯಕ್ಷ ಜೆ.ನೀಲಕಂಠ ಅಧ್ಯಕ್ಷತೆ ವಹಿಸಲಿದ್ದಾರೆ.

‘ಮಿಸ್ಟರ್ ಬಿಲ್ಲವ 2024’ ಸ್ಪರ್ಧೆಯನ್ನು ಬಿಲ್ಲವರ ಸೇವಾ ಸಂಘ(ರಿ.) ಮಲ್ಪೆ ಇದರ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್(ರಿ.) ಇದರ ಗೌರವಾಧ್ಯಕ್ಷ ‘ಮಿ! ಇಂಡಿಯಾ’ ಗೋವರ್ಧನ ಎನ್. ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಮಾಜಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದೇಹದಾರ್ಢ್ಯ ಪಟುಗಳು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿದರು.

ರಾಷ್ಟ್ರೀಯ ತೀರ್ಪುಗಾರ ಹಾಗೂ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್(ರಿ.) ಉಪಾಧ್ಯಕ್ಷ ಗಂಗಾಧರ್ ಎಮ್., ರಾಷ್ಟ್ರೀಯ ತೀರ್ಪುಗಾರ ಹಾಗೂ ಸಂಚಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಸಂಚಾಲನಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ರಾಷ್ಟ್ರೀಯ ತೀರ್ಪುಗಾರ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಧಾನ ಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ಬಗ್ಗೆ ನಿಮ್ಮ ನಿಲುವೇನು? ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಶ್ನೆ





ಉಡುಪಿ: ರಾಜ್ಯ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನ ನಾಸೀರ್ ಹುಸೇನ್‌ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಬೆಂಬಲಿಗರು ವಿಧಾನ ಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಬಗ್ಗೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಮಾತನಾಡಿದ್ದ ಎಂ.ಜಿ‌. ಹೆಗ್ಡೆ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕ್ರಮವನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರಿಗೆ ವಿಧಾನ ಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ಬಗ್ಗೆ ನಿಮ್ಮ ನಿಲುವೇನು? ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಶ್ನಿಸಿದ್ದಾರೆ.

ಎಂ. ಜಿ. ಹೆಗ್ಡೆಯವರು ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಸಮರ್ಥಿಸುವ ಭರದಲ್ಲಿ ‘ಈ ವಿಷಯ ಎಫ್.ಎಸ್.ಎಲ್. ವರದಿಯಲ್ಲಿ ಸುಳ್ಳು ಎಂದು ದೃಢವಾಗುತ್ತದೆ. ಆಗ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎನ್ನುವ ವಿಚಾರವನ್ನು ಮಾಧ್ಯಮದಲ್ಲಿ ವರದಿ ಮಾಡಿ ಪ್ರಶ್ನಿಸಿದ್ದ ನಿರೂಪಕರ ಮುಖಕ್ಕೆ ಉಗಿಯಬೇಕು’ ಎನ್ನುವ ಅತಿ ಬುದ್ಧಿವಂತಿಕೆಯ ಮಾತನ್ನು ಉಲ್ಲೇಖಿಸಿದ್ದರು.

ಬಳಿಕ ಎಫ್.ಎಸ್.ಎಲ್. ವರದಿಯಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿರುವುದು ದೃಢವಾಗಿರುವ ಕುರಿತು ವರದಿ ಬಂದಿರುವುದರಿಂದ ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಪರವಾಗಿ ನಿಂತ ಎಂ.ಜಿ. ಹೆಗ್ಡೆ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ‘ಮುಖಕ್ಕೆ ಉಗಿಯುವ’ ಅಭಿಯಾನದ ಕುರಿತು ಕರೆ ನೀಡಿದ್ದ ಎಂ.ಜಿ. ಹೆಗ್ಡೆಯವರಿಗೆ ಉಡುಪಿಯಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ ತಕ್ಕ ಶಾಸ್ತಿಯಾಗಿದೆ ಎಂದು ಅಮೀನ್ ಪ್ರತಿಕ್ರಯಿಸಿದ್ದಾರೆ.

ತಮ್ಮ ಪಕ್ಷದ ಅಸಮರ್ಪಕ ನಕಲಿ ಗ್ಯಾರಂಟಿಗಳಿಗೆ ಹಾಗೂ ಒಂದೇ ವರ್ಗದ ಓಲೈಕೆಗಾಗಿ ರಾಜ್ಯದ ಜನತೆಯ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಿ ರಾಜ್ಯವನ್ನು ದಿವಾಳಿಯ ಅಂಚಿಗೆ
ದೂಡಿರುವ ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ಶಾಸಕರ ಅನುದಾನದ ಚಿಕ್ಕಸನ್ನೂ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಪ್ರಶ್ನಿಸುವ ಬದಲು ಉಡುಪಿಯ ಕ್ರಿಯಾಶೀಲ ಶಾಸಕರ ಕಾರ್ಯವೈಖರಿಯ ಬಗ್ಗೆ ಲಘುವಾಗಿ ಮಾತನಾಡುವ ರಮೇಶ್  ಕಾಂಚನ್ ನಡೆ ಹಾಸ್ಯಾಸ್ಪದವಾಗಿದೆ.

ಸದಾ ದೇಶ ವಿರೋಧಿಗಳ, ದೇಶ ದ್ರೋಹಿಗಳ ಮತ್ತು ಭಯೋತ್ಪಾದಕರ ಪರ ನಿಲ್ಲುವ ಕಾಂಗ್ರೆಸ್ ಪಕ್ಷ ದೇಶದ ಸಮಗ್ರತೆ, ಅಖಂಡತೆ ಮತ್ತು ಏಕತೆಯ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ತಾವು ಈ ಹಿಂದೆ ಯಾವ ಮಾದರಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದೀರಿ, ಅದರ ಪರಿಣಾಮ ಏನಾಗಿದೆ ಎಂಬುದನ್ನು ಮರೆತು ಉಡುಪಿ ಶಾಸಕರಿಗೆ ಬುದ್ಧಿವಾದ ಹೇಳಲು ಹೊರಟಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ದೇಶದ್ರೋಹಿಗಳ ಬಗ್ಗೆ ತಮ್ಮ ಹಾಗೂ ತಮ್ಮ ಪಕ್ಷದ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸುವುದು ಉತ್ತಮ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started