ನ.30 : ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’, ಜೋಡುಕಟ್ಟೆಯಿಂದ ‘ಕುಣಿತ ಭಜನೋತ್ಸವ’


ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಗೀತಾ ಮಾಸೋತ್ಸವ’ದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಸಮಿತಿಯ ಸಹಯೋಗದೊಂದಿಗೆ ನ.30 ರವಿವಾರ ಬೆಳಿಗ್ಗೆ ಗಂಟೆ 9.30ರಿಂದ ಉಡುಪಿ ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’ ಹಾಗೂ ಮಧ್ಯಾಹ್ನ ಗಂಟೆ 2.30ರಿಂದ ಜೋಡುಕಟ್ಟೆಯಿಂದ ರಾಜಾoಗಣದ ವರೆಗೆ ‘ಕುಣಿತದ ಭಜನೋತ್ಸವ’ ನಡೆಯಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.

ನ.30ರ ಬೆಳಿಗ್ಗೆ ಗಂಟೆ 9.00ರಿಂದ ರಾಜಾoಗಣದಲ್ಲಿ ‘ಸಾಮೂಹಿಕ ಗೀತಾ ಪಾರಾಯಣ’ ನಡೆಯಲಿದೆ. ಬೆಳಿಗ್ಗೆ ಗಂಟೆ 10.00ಕ್ಕೆ ಪರ್ಯಾಯ ಶೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇoದ್ರ ತೀರ್ಥ ಶ್ರೀಪಾದರು ‘ಗೀತಾ ಭಜನೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ.

ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದರೆ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಮಧ್ಯಾಹ್ನ ಗಂಟೆ 2.00ರಿಂದ ರಾಜಾoಗಣದಲ್ಲಿ ‘ಸಾಮೂಹಿಕ ಭಜನೆ’ಯ ಮೂಲಕ ‘ಗೀತಾ ಭಜನೋತ್ಸವ’ ನಡೆಯಲಿದೆ.

ಮಧ್ಯಾಹ್ನ ಗಂಟೆ 2.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ಸುಮಾರು 3,000 ಮಂದಿ ಭಜಕರ ಪಾಲ್ಗೊಳ್ಳುವಿಕೆಯಿಂದ ಪ್ರಾರಂಭಗೊಳ್ಳುವ ಬೃಹತ್ ‘ಕುಣಿತದ ಭಜನೋತ್ಸವ’ಕ್ಕೆ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಚಾಲನೆ ನೀಡಲಿದ್ದಾರೆ.

‘ಕುಣಿತದ ಭಜನೋತ್ಸವ’ದ ಮೆರವಣಿಗೆಯು ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್ ಮಾರ್ಗವಾಗಿ ಸಂಸ್ಕೃತ ಕಾಲೇಜ್ ಬಳಿಯಿಂದ ರಥ ಬೀದಿ ಮೂಲಕ ರಾಜಾoಗಣದಲ್ಲಿ ಸಮಾಪನಗೊಳ್ಳಲಿದೆ.

ಸಂಜೆ ಗಂಟೆ 4.30ಕ್ಕೆ ರಾಜಾoಗಣದಲ್ಲಿ ಸಂತರು ಮತ್ತು ಗಣ್ಯರ ಸಮಾಗಮದೊಂದಿಗೆ ‘ಗೀತಾ ಭಜನೋತ್ಸವ’ದ ಸಮಾರೋಪ ನಡೆಯಲಿದೆ ಎಂದು ನಾಗರಾಜ ಆಚಾರ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started