
ಉಡುಪಿ: ರಾಜ್ಯ ಸರಕಾರ ಸುಮಾರು ಹತ್ತು ಲಕ್ಷ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲು ಪ್ರಾರಂಭಮಾಡಿದ್ದು ಕಾಂಗ್ರೆಸ್ ಆಡಳಿತದ ದುಬಾರಿ ದುನಿಯಾದಲ್ಲಿ ಬಡವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ. ತನ್ನ ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ಪರಿಪಾಟಲು ಪಡುತ್ತಿರುವ ಸರಕಾರ ಎಲ್ಲದರ ದರ ಏರಿಸಿಯೂ ಸಾಕಾಗುತ್ತಿಲ್ಲ ಎನ್ನುವ ದ್ರಷ್ಟಿಯಿಂದ ಇದೀಗ ಬಡ ಹಾಗೂ ಮಧ್ಯಮ ವರ್ಗದ ಬಿಪಿಎಲ್ ಪಡಿತರ ಚೀಟಿಯ ಮೇಲೆ ಕಣ್ಣು ಹಾಯಿಸಿದೆ. ರಾಜ್ಯದ ಸುಮಾರು ಹತ್ತು ಲಕ್ಷ ಪಡಿತರ ಚೀಟಿ ರದ್ದುಗೊಳಿಸಿದರೆ ಒಂದಷ್ಟು ಗ್ಯಾರಂಟಿಯ ಹಣ ಉಳಿಯಬಹುದು ಎನ್ನುವ ಲೆಕ್ಕಾಚಾರ ಇರಬಹುದು. ಆದರೆ ಬಿಪಿಎಲ್ ರದ್ದುಗೊಳಿಸಿದರೆ ಎಷ್ಟೊಂದು ನಷ್ಟವಾಗುತ್ತದೆ ಎನ್ನುವ ಅರಿವು ಅವರಿಗಿದೆಯೇ? ಯಾವುದೇ ಸರಕಾರಿ ಸವಲತ್ತು ಪಡೆಯಲು ಇಂದು ಬಿಪಿಎಲ್ ಬೇಕು. ಪಡಿತರ ಚೀಟಿ ರದ್ದಾದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬಹುದು, ಅಕ್ಕಿ ಸಿಗಲಿಕ್ಕಿಲ್ಲ, ಮಕ್ಕಳಿಗೆ ಸ್ಕಾಲರ್ಶಿಪ್ ಇರಬಹುದು, ಆರೋಗ್ಯ ಸಂಬಂದಿತ ಆಯುಷ್ಮಾನ್ ಇತ್ಯಾದಿ ಉಚಿತ ಚಿಕಿತ್ಸೆ ಇಂತಹ ಹಲವಾರು ಯೋಜನೆಗಳನ್ನು ಪಡೆಯುವ ಅವಕಾಶ ಇರಿವುದಿಲ್ಲ. ಈಗಾಗಲೇ ಎಲ್ಲದರ ದರ ಏರಿಸಿ ಜನರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಗ್ಯಾರಂಟಿಗಳು ಯಾವ ತಿಂಗಳಲ್ಲಿ ಬರುತ್ತೋ ಬರಲ್ವೋ ದೇವರೇ ಬಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಡಿತರ ಚೀಟಿಯೂ ರದ್ದಾದರೆ ಬಡವರು ಜೀವನ ಕಟ್ಟಿಕೊಳ್ಳುವುದು ಹೇಗೆ? ತಾನು ಹಿಂದುಳಿದ, ಬಡವರ ಶೋಷಿತರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಇವರಿಗೆ ಹಿಂದುಳಿದವರ, ಬಡವರ, ಶೋಷಿತರ ಶಾಪ ತಟ್ಟದೆ ಇರದು. ಸರಕಾರಗಳು ಜನರ ಹಿತವನ್ನು ಬಯಸಬೇಕೇ ಹೊರತ ಸದಾ ಜನರಿಗೆ ತೊಂದರೆ ನೀಡುವುದಾದರೆ ಯಾವ ಪುರುಷಾರ್ಥಕ್ಕೆ ಈ ಸರಕಾರ ಬೇಕಿದೆ. ಜನಸಾಮಾನ್ಯರು ರಸ್ತೆಗಿಳಿದು ನಿಮಗೆ ಬುಧ್ಧಿ ಕಲಿಸುವ ದಿನಕ್ಕಾಗಿ ಕಾಯದೆ ಕೂಡಲೇ ಸರಕಾರದ ಈ ಆದೇಶ ಪುನರ್ಪರಿಶೀಲನೆ ಮಾಡಿ, ಗ್ಯಾರಂಟಿಗಾಗಿ ಕಾಸು ಉಳಿಸಲು ಪಡಿತರ ಚೀಟಿ ರದ್ದುಗೊಳಿಸುವ ಯೋಜನೆಯನ್ನು ಬಿಟ್ಟುಬಿಡಿ ಇಲ್ಲದಿದ್ದರೆ ನಾವೂ ಜನರೊಂದಿಗೆ ಸೇರಿ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾದೀತು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಆಗ್ರಹಿಸಿದ್ದಾರೆ.