
ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿ ಅನನ್ಯ ಜವಾಬ್ದಾರಿಗಳನ್ನು ನಿರ್ವಹಿಸಿ ಪ್ರಸಕ್ತ ಸಕ್ಷಮ ಜಿಲ್ಲಾ ಪ್ರಮುಖ್ ಜವಾಬ್ದಾರಿ ನಿರ್ವಹಿಸುತ್ತಿದ್ದ ಪಾಂಡುರಂಗ ಶಾನುಭಾಗ್ (65 ವರ್ಷ) ರವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವ ಸಿದ್ಧಾಂತಗಳ ಬದ್ಧತೆಯಿಂದ ಕಾರ್ಯಕರ್ತರಿಗೆ ಮಾದರಿಯಾಗಿದ್ದ ಪಾಂಡುರಂಗ ಶಾನುಭಾಗ್ ರವರು ಉಡುಪಿಯ ಸಿಂಡಿಕೇಟ್ ಬ್ಯಾಂಕಿನ ಕ್ಯಾಥೋಲಿಕ್ ಸೆಂಟರ್ ಶಾಖೆಯಲ್ಲಿ ಸಹಾಯಕ ಪ್ರಭಂಧಕರಾಗಿ 2018ರಲ್ಲಿ ನಿವೃತ್ತಿ ಹೊಂದಿದ್ದರು. ಸಂಘದ ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ ಶಿಬಿರಗಳಲ್ಲಿ ಪರಿಣಾಮಕಾರಿ ವಿಷಯ ಮಂಡನೆಯೊಂದಿಗೆ ಮಾರ್ಗದರ್ಶನ ನೀಡುತ್ತಿದ್ದ ಶಾನುಭಾಗ್ ರವರು ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲಿ ನಡೆದ ಸ್ಥಳೀಯ ಶ್ರೀ ರಾಮೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಶ್ರೀ ರಾಮ ಜನ್ಮ ಭೂಮಿ ಹೋರಾಟದ ಚಿತ್ರಣವನ್ನು ನೀಡಿದ್ದ ಶಾನುಭಾಗ್ ರವರು ಇಂದು ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನ ಪಡೆದ ಬಳಿಕ ಇಹಲೋಕವನ್ನು ತ್ಯಜಿಸಿರುವುದು ವಿಷಾಧನೀಯ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.