ಭಗವಂತನಿಗೆ ಪ್ರಿಯವಾದ ಭಜನೆ ಮನೆ ಮನೆಗಳಲ್ಲಿ ಮೊಳಗಲಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ*ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ ಪರ್ಯಾಯೋತ್ಸವದ ಪ್ರಯುಕ್ತ ಭಜನಾ ಸೇವೆ





ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಆರಾಧ್ಯಮೂರ್ತಿ ನಾದ ಬ್ರಹ್ಮ ಪಾಂಡುರಂಗ ವಿಠಲನಿಗೆ ಅತ್ಯಂತ ಪ್ರಿಯವಾದ ಭಜನೆ ಸನ್ನಿದಾನದಲ್ಲಿ ನಿರಂತರವಾಗಿ ನಡೆಯುತ್ತಿದೆ. ಭಜನೆಯಿಂದ ಭಗವಂತನು ಸಂತುಷ್ಟನಾಗಿ ನಮ್ಮೆಲ್ಲರನ್ನು ಅನುಗ್ರಹಿಸಲಿ. ಇಂತಹ ಭಜನಾ ಕಾರ್ಯಕ್ರಮ ಎರಡು ವರ್ಷಗಳ ಸಮಯದಲ್ಲಿ ನಿರಂತರವಾಗಿ ನಡೆಯಲಿ. ಭಜನಾ ಸಂಘಗಳು ಬೆಳೆಯಲಿ. ಎಲ್ಲ ಮನೆಗಳಲ್ಲಿ ನಿರಂತರ ಭಜನೆ ಆಗುವಂತಾಗಲಿ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅವರು ಹೇಳಿದರು.

ಅವರು ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೇತೃತ್ವದಲ್ಲಿ ಪರ್ಯಾಯೋತ್ಸವದ ಪ್ರಯುಕ್ತ ಉಡುಪಿ ರಥ ಬೀದಿಯ ಆನಂದ ತೀರ್ಥ ಮಂಟಪದಲ್ಲಿ ನಡೆದ ಭಜನಾ ಸೇವೆಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಶುಭಾಶಂಸನೆಗೈದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಇದರ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಮಾತನಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೂತನ ಸಮಿತಿಯು ನಾಡ ಹಬ್ಬ ಪರ್ಯಾಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ರಥ ಬೀದಿಯಲ್ಲಿ ಭಜನಾ ಸೇವೆಯನ್ನು ಆಯೋಜಿಸಿರುವುದು ಸಕಾಲಿಕ ಮತ್ತು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಭಜನಾ ಕಾರ್ಯಕ್ರಮಗಳು ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಉಡುಪಿ ತಾಲೂಕು ಭಜನಾ ಪರಿಷತ್ ಮೂಲಕ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಪರ್ಯಾಯೋತ್ಸವ ಸ್ವಾಗತ ಸಮಿತಿಯ ಪ್ರಮುಖರಾದ ರವೀಂದ್ರ ಆಚಾರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷರಾದ ವಜ್ರಾಕ್ಷಿ ಪಿ. ದಾಸ್ ಕಡಿಯಾಳಿ, ಸುಮಿತ್ರಾ ನಾಯ್ಕ್ ಪೆರಂಪಳ್ಳಿ, ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ವಲಯಗಳ ಸಂಯೋಜಕರಾದ ಗೀತಾ ರವಿಚಂದ್ರ ಚಿಟ್ಪಾಡಿ, ಶಾಂಭವಿ ಕುಲಾಲ್ ಪೆರ್ಡೂರು, ಗೀತಾ ಪೆರಂಪಳ್ಳಿ, ಗಿರೀಶ್ ಅಮೀನ್ ಕಿದಿಯೂರು, ಯೋಜನೆಯ ವಿಮಾ ವಿಭಾಗದ ಅಧಿಕಾರಿ ರಮೇಶ್ ಹಾಗೂ ಉಡುಪಿ ತಾಲೂಕಿನ ವಿವಿಧ ವಲಯಗಳ ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started