ಉಚಿತ ಗ್ಯಾರಂಟಿಗಳ ಬೆನ್ನು ಹತ್ತಿ ಸರಕಾರದ ಗ್ಯಾರಂಟಿ ಕಳೆದುಕೊಂಡ ಕಾಂಗ್ರೆಸ್ : ಕುಯಿಲಾಡಿ ಸುರೇಶ್ ನಾಯಕ್


ಉಡುಪಿ: ರಾಜ್ಯದಲ್ಲಿ ಅಧಿಕಾರಕ್ಕೆ ಏರಲೇಬೇಕೆಂಬ ಏಕೈಕ ಉದ್ದೇಶವನ್ನಿಟ್ಟುಕೊಂಡು ಬದ್ಧತೆ ಇಲ್ಲದ ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಜನಹಿತ ಮತ್ತು ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು, ಗ್ಯಾರಂಟಿಗಳ ವ್ಯವಸ್ಥಿತ ನಿರ್ವಹಣೆಯನ್ನೂ ಕಡೆಗಣಿಸಿ ಭ್ರಷ್ಟಾಚಾರ, ಕಮಿಷನ್ ದoಧೆ, ಬಣ ರಾಜಕೀಯ, ಆಡಳಿತ ವೈಫಲ್ಯದ ಜೊತೆಗೆ ಸರಕಾರದ ಅಸ್ತಿತ್ವದ ಗ್ಯಾರಂಟಿಯನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಉಚಿತ 5 ಕೆ.ಜಿ. ಅಕ್ಕಿ ವಿತರಣೆಯ ಸೌಲಭ್ಯವನ್ನು ದೇಶದಾದ್ಯಂತ ಮುಂದಿನ 5 ವರ್ಷಗಳ ಅವಧಿಗೆ ವಿಸ್ತರಿಸಿರುವುದು ರಾಜ್ಯದ ಫಲಾನುಭವಿಗಳಿಗೆ ವರದಾನವಾಗಿದೆ. ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಫ್ರೀ ಯಾಗಿ ನೀಡುತ್ತೇವೆ ಎಂದು ಬೊಬ್ಬಿರಿದಿದ್ಧ ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನುಡಿದಂತೆ ನಡೆಯದೆ, ಇದೀಗ ಕೇಂದ್ರ ಬಿಜೆಪಿ ಸರಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನೂ ಸಮರ್ಪಕವಾಗಿ ವಿತರಿಸದೆ ರಾಜ್ಯದ ಜನತೆಗೆ ದ್ರೋಹ ಎಸಗಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ ಸರ್ವರ್ ಗ್ರಹಣ ಹಿಡಿದರೆ, ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರ ಬವಣೆ ಕೇಳುವವರಿಲ್ಲದಂತಾಗಿದೆ. ಗೃಹ ಜ್ಯೋತಿ ಬದಲಿಗೆ ಪವರ್ ಕಟ್ ಭಾಗ್ಯ ನೀಡಿ ಕತ್ತಲ ಸಾಮ್ರಾಜ್ಯ ನಿರ್ಮಾಣವಾಗಿದ್ದರೆ, ಯುವನಿಧಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಕಾರಣವಾಗಿರುವ ಉಚಿತ, ಖಚಿತ, ಖಂಡಿತ, ನಿಶ್ಚಿತಗಳ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಜೊತೆಗೆ ಕಮಿಷನ್ ದಂಧೆ ಮೂಲಕ ಸಂಗ್ರಹಿಸಿದ ಅಕ್ರಮ ಹಣವನ್ನು ಪಂಚರಾಜ್ಯಗಳ ಚುನಾವಣೆಗೆ ಕಳುಹಿಸಿಕೊಡಲು ರಾಜ್ಯ ಎಟಿಎಂ ಸರಕಾರ ಹರಸಾಹಸಪಡುತ್ತಿರುವುದನ್ನು ಕಂಡು ರಾಜ್ಯದ ಜನತೆ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಚಿಕ್ಕಾಸೂ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರಕಾರ ಸಿಎಂ, ಡಿಸಿಎಂ ಮತ್ತು ಸಚಿವರ ಮನೆ, ಕಛೇರಿ ನವೀಕರಣ ಹಾಗೂ ಐಷಾರಾಮಿ ಕಾರು ಖರೀದಿಗೆ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿರುವುದು ವಿಪರ್ಯಾಸ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎoದಿರುವ ಸಿ.ಎಂ. ಸಿದ್ದರಾಮಯ್ಯನವರಿಗೆ ಬರ ಪೀಡಿತ ಪ್ರದೇಶಕ್ಕೆ ಅನುದಾನ ಘೋಷಿಸಲು, ರೈತರ ಬವಣೆ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಸಹಿತ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಬಿಡುವಿಲ್ಲದಿರುವುದು ರಾಜ್ಯದ ಜನತೆಯ ದೌರ್ಭಾಗ್ಯವೇ ಸರಿ.

ಬರಗಾಲ, ಅನಿಯಮಿತ ಲೋಡ್ ಶೆಡ್ಡಿಂಗ್ ನಿoದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಿರುವ ರಾಜ್ಯ ಸರಕಾರ, ರೈತರು ಪಂಪ್ ಸೆಟ್ ಗಳಿಗೆ ವಿದ್ಯುತ್ ಕಂಬ, ತಂತಿ ಸಹಿತ ವಿದ್ಯುತ್ ಸಲಕರಣೆಗಳನ್ನು ಸ್ವತಃ ತಾವೇ ಖರೀದಿಸಬೇಕೆಂಬ ಆದೇಶ ಹೊರಡಿಸಿರುವುದು ಮಾತ್ರವಲ್ಲದೆ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾ ನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮುಂತಾದ ರೈತಪರ ಯೋಜನೆಗಳನ್ನು ಅನುದಾನದ ಕೊರತೆಯ ನೆಪವೊಡ್ಡಿ ರದ್ದುಗೊಳಿಸಿರುವುದು ಖಂಡನೀಯ.

ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಬೇಟಿ ನೀಡದ ಸಿ.ಎಂ., ಡಿಸಿಎಂ ಮತ್ತು ಸಚಿವರು ಪ್ರವಾಸ, ಮೋಜು ಮಸ್ತಿಯಲ್ಲಿ ತೊಡಗಿರುವುದು ಅಕ್ಷಮ್ಯವಾಗಿದೆ. ರೈತಪರ ಕಾಳಜಿ ಹೊಂದಿರುವ ಬಿಜೆಪಿ ರಾಜ್ಯ ಮುಖಂಡರು ವಿವಿಧ ತಂಡಗಳಲ್ಲಿ ರಾಜ್ಯಾದ್ಯಂತ ಬರ ಅಧ್ಯಯನ ಪ್ರವಾಸದಲ್ಲಿ ನಿರತರಾಗಿರುವುದು ಪ್ರಶಂಸನೀಯ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಜಾರಿಗೆ ಬಂದಿರುವ ನೂರಾರು ಜನಪರ ಯೋಜನೆಗಳು ಹಾಗೂ ಐತಿಹಾಸಿಕ ಅಭಿವೃದ್ಧಿ ಕೆಲಸ ಕಾರ್ಯಗಳು ಕಣ್ಣ ಮುಂದಿದ್ದರೂ ಸಿ.ಎಂ. ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ನಿರತರಾಗಿರುವುದು ಹಾಸ್ಯಾಸ್ಪದ.

ಈ ಹಿಂದೆ ಕುಕ್ಕರ್ ಬಾಂಬ್ ಸ್ಪೋಟದ ಭಯೋತ್ಪಾದಕನ ಪರ ವಹಿಸಿದ್ದ ಕಾಂಗ್ರೆಸ್ ಇದೀಗ ದಾಳಿಕೋರ ಹಿಮಾಸ್ ಉಗ್ರರು ಮತ್ತು ಪ್ಯಾಲೆಸ್ತೀನ್ ನನ್ನು ಬೆಂಬಲಿಸುವ ಮೂಲಕ ತುಷ್ಟೀಕರಣದ ಎಲ್ಲೆ ಮೀರಿದೆ. ಹಿಂದೂಗಳ ಹಬ್ಬ ಆಚರಣೆಗೆ ಮಾತ್ರ ಷರತ್ತು ವಿಧಿಸುತ್ತಿರುವ ಕಾಂಗ್ರೆಸ್ ಸರಕಾರ, ಇತರ ಸಮುದಾಯಗಳ ಹಬ್ಬ ಆಚರಣೆಯ ಸಂದರ್ಭದಲ್ಲಿ ಜಾಣ ಮೌನ ವಹಿಸುತ್ತಿದೆ. ಕೆಪಿಎಸ್ಸಿ ಪರೀಕ್ಷೆಯ ಸಂದರ್ಭದಲ್ಲಿ ಹಿಂದೂ ಮಹಿಳೆಯರ ಪವಿತ್ರ ಮಾಂಗಲ್ಯ ಮತ್ತು ಕಾಲುಂಗುರವನ್ನು ವಿನಾಕಾರಣ ಒತ್ತಾಯ ಪೂರ್ವಕವಾಗಿ ತೆಗೆಸಿದ ರಾಜ್ಯ ಕಾಂಗ್ರೆಸ್ ಸರಕಾರ ಇನ್ನೊಂದು ಕೋಮಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಹಿಂದೂ ಧಮನ ನೀತಿ ಮೆರೆದಿದೆ. ಯಾವುದೇ ದಿಕ್ಕು ದೆಸೆ ಇಲ್ಲದೆ ಘೋಷಿಸಿದ ಭೋಗಸ್ ಗ್ಯಾರಂಟಿಗಳ ಸಮೀಕ್ಷೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ಕೋಟ್ಯಾಂತರ ರೂಪಾಯಿ ನೀಡುವ ಮೂಲಕ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ನಡುವೆ ರಾಜ್ಯದ ಹಿತ ಮರೆತು ನಾನೇ ಸಿಎಂ, ಹೆಚ್ಚುವರಿ ಡಿಸಿಎಂ ಎಂದು ಕಚ್ಚಾಡುತ್ತಿರುವ ಸಚಿವರು ಮತ್ತು ಮುಖಂಡರ ಅಧಿಕಾರ ದಾಹದಿಂದ ರಾಜ್ಯ ಕಾಂಗ್ರೆಸ್ ಸರಕಾರ ಸ್ವಯಂ ಪತನದತ್ತ ಸಾಗುತ್ತಿರುವುದು ದಿನೇ ದಿನೇ ಸ್ಪಷ್ಟಗೊಳ್ಳುತ್ತಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started