ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದವರ ಮೇಲೆ ಪೊಲೀಸ್ ಕೇಸ್ ದಾಖಲಿಸಲು ತೋರಿದ ಆಸಕ್ತಿ ಉಡುಪಿ ಪ್ರಕರಣದ ತನಿಖೆಯ ಬಗ್ಗೆ ಯಾಕಿಲ್ಲ? : ಕುಯಿಲಾಡಿಶರಣ್ ಪಂಪ್ವೆಲ್, ದಿನೇಶ್ ಮೆಂಡನ್ ಮತ್ತು ವೀಣಾ ಎಸ್. ಶೆಟ್ಟಿ ಯವರ ಮೇಲೆ ಸುಮೋಟೋ ಕೇಸ್ ದಾಖಲು: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ



ಉಡುಪಿ: ದೇಶದಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿರುವ ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳನ್ನು ಉದ್ದೇಶಿಸಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಹಾಗೂ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿಯವರ ಮೇಲೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಕೇಸ್ ದಾಖಲಿಸಲು ಪೊಲೀಸರು ತೋರಿರುವ ಆಸಕ್ತಿಯನ್ನು ಉಡುಪಿಯ ಗಂಭೀರ ಪ್ರಕರಣದ ತನಿಖೆಯ ಬಗ್ಗೆ ಯಾಕೆ ತೋರಿಸುತ್ತಿಲ್ಲ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಉಡುಪಿಯ ವಿವಾದಿತ ವೀಡಿಯೋ ಪ್ರಕರಣ ನಡೆದ 8 ದಿನಗಳ ಬಳಿಕವಷ್ಟೇ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿದೆ. ಈ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಯಾವುದೇ ವಿಶ್ವಾಸವಿಲ್ಲ. ಈ ಸರಕಾರ ಒಂದೇ ವರ್ಗದ ಒಲೈಕೆಗೆಗಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿದೆ. ಆದರೆ ಹಿಂದೂ ಸಮುದಾಯದ ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಲು ಮೀನ ಮೇಷ ಎಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯ ವೀಡಿಯೋ ಪ್ರಕರಣದ ಹಿಂದೆ ಬ್ಲಾಕ್ಮೇಲ್ ಜಿಹಾದ್ ನಡೆಸುವ ಸಂಚು ಇರಬಹುದೆಂಬ ಶಂಕೆ ಇದೆ. ಪೊಲೀಸ್ ಇಲಾಖೆ ಇಂತಹ ಸಮಾಜ ಕಂಟಕ ಜಿಹಾದಿ ಮನಸ್ಥಿತಿಯ ವಿದ್ಯಾರ್ಥಿನಿಯರ ಕುಕೃತ್ಯವನ್ನು ಭೇದಿಸಲು ತಂತ್ರ ರೂಪಿಸುವ ಬದಲು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಮೇಲೆ ಸುಮೋಟೋ ಪ್ರಕರಣ ದಾಖಲಿಸುವ ಮೂಲಕ ತನಿಖೆಯ ದಾರಿ ತಪ್ಪಿಸುವ ಹುನ್ನಾರದಲ್ಲಿ ತೊಡಗಿರುವುದು ಖಂಡನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started