
ಉಡುಪಿ: ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ, ಯಶಸ್ವಿ ಕೋವಿಡ್ ನಿರ್ವಹಣೆ, ಪಿಎಫ್ಐ ನಂತಹ ಮತಾಂಧ ದೇಶದ್ರೋಹಿ ಜಿಹಾದಿ ಸಂಘಟನೆಗಳ ನಿಷೇಧ, ಬೆಂಗಳೂರಿನಲ್ಲಿ ಎನ್ಐಎ ಸ್ಥಾಪನೆ ಸಹಿತ ಆಯುಷ್ಮಾನ್ ಭಾರತ್, ಕೃಷಿ ಸಮ್ಮಾನ್, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ ಮುಂತಾದ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರದ ಸಾಧನೆಯನ್ನು ಕಂಡು ಬೆಚ್ಚಿ ಬಿದ್ದಿರುವ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸ್ಸಿಗೆ ಚುನಾವಣಾ ಪಲಿತಾಂಶದಲ್ಲಿ ತೀವ್ರ ಮುಖಭಂಗ ಖಚಿತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಅವರು ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮಾರಬೆಟ್ಟು, ಬೈರಂಪಳ್ಳಿ, ಕುಕ್ಕೆಹಳ್ಳಿ ಮತ್ತು ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಅವಧಿಯಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ದಾಖಲೆ ಮಟ್ಟದ ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಜನಪರ ಯೋಜನೆಗಳು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಜನಾನುರಾಗಿ ವ್ಯಕ್ತಿತ್ವದ ಗುರ್ಮೆ ಸುರೇಶ್ ಶೆಟ್ಟಿಯವರ ಭರ್ಜರಿ ಗೆಲುವಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದರು.
ಸರಕಾರದ ಅವಧಿ ಮುಗಿಯುತ್ತಾ ಬಂದರೂ ರಾಜಸ್ಥಾನ, ಛತ್ತೀಸ್ಗಡ ಹಿಮಾಚಲಪ್ರದೇಶಗಳಲ್ಲಿ ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಯನ್ನು ನೆರವೇರಿಸದೇ ಇರುವ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಊಹಿಸಲೂ ಸಾಧ್ಯವಿಲ್ಲದ ಸುಳ್ಳು ಭರವಸೆಗಳ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸುತ್ತಿರುವುದು ಕಾಂಗ್ರೆಸ್ಸಿನ ಹತಾಶ ಮನೋಭಾವಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ವಾರಂಟಿಯೇ ಮುಗಿಯುತ್ತಾ ಬಂದಿರುವಾಗ ಅದರ ಯಾವುದೇ ಪೊಳ್ಳು ಗ್ಯಾರಂಟಿ ಕಾರ್ಡ್ ಗಳನ್ನು ನಂಬುವ ದಯನೀಯ ಸ್ಥಿತಿ ರಾಜ್ಯದ ಜನತೆಗೆ ಬಂದಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಹುದ್ದೆಯ ಬಗ್ಗೆ ತನಗೆ ಆಸೆ ಆಕಾಂಕ್ಷೆಗಳು ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳುವ ಮೂಲಕ ಹರಿಪ್ರಸಾದ್ ರವರು ಖಂಡಿತವಾಗಿಯೂ ರಾಜ್ಯ ಮತ್ತು ಕೇಂದ್ರದಲ್ಲಿ ಎಂದಿಗೂ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದರು.
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಎಂಬಂತೆ, ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿದಾಗ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ದೇಶವನ್ನು ಲೂಟಿಗೈದ ಮೊತ್ತ ರೂ.48,20,69,00,00,000 ಅಂದರೆ ಸುಮಾರು 5 ಟ್ರಿಲಿಯನ್ ಎಂಬ ಆಘಾತಕಾರಿ ವಿವರಗಳು ಸಿಗುತ್ತವೆ. ಕಾಂಗ್ರೆಸ್ಸಿನ ಪರಮೋಚ್ಚ ನಾಯಕರುಗಳೇ ವಿವಿಧ ಹಗರಣಗಳಲ್ಲಿ ತನಿಖೆ ಎದುರಿಸುತ್ತಾ ಬೇಲ್ ಮೇಲೆ ತಿರುಗಾಡುತ್ತಿರುವುದು ಕಾಂಗ್ರೆಸ್ಸಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.
ತನ್ನ ವಿರುದ್ಧ ದಾಖಲಾಗಿದ್ದ 50ಕ್ಕೂ ಮಿಕ್ಕಿ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತಕ್ಕೆ ಎಳ್ಳು ನೀರು ಬಿಟ್ಟಿರುವ ಜೊತೆಗೆ ದೇಶ ವಿರೋಧಿ ಜಿಹಾದಿ ಸಂಘಟನೆಗಳಾದ ಪಿಎಫ್ಐ, ಎಸ್ಡಿಪಿಐಗೆ ಸಂಬಂಧಿಸಿದ 175 ಪ್ರಕರಣಗಳನ್ನು ಹಿಂಪಡೆದು ಅವರ ಸಾವಿರಾರು ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆಯಾದರೆ, ಭ್ರಷ್ಟಾಚಾರದಲ್ಲಿ ಎತ್ತಿದ ಕೈ ಎನಿಸಿಕೊಂಡು ಪದೇ ಪದೇ ಹಗರಣಗಳ ತನಿಖೆಯನ್ನು ಎದುರಿಸುತ್ತಿರುವ ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಭಯೋತ್ಪಾದಕನನ್ನು ಬೆಂಬಲಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇನ್ನೊಂದೆಡೆ, ಚುನಾವಣಾ ಫಲಿತಾಂಶದ ಬಗ್ಗೆ ಆಲೋಚಿಸದೆ ಮುಖ್ಯಮಂತ್ರಿ ಸ್ಥಾನದ ತಿರುಕನ ಕನಸು ಕಾಣುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿಯವರು ಇಂಗ್ಲೆಂಡಿನ ವಿ.ವಿ.ಯಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಮಾನಕರ ಮಾತುಗಳನ್ನಾಡಿರುವುದು ಕಾಂಗ್ರೆಸ್ಸಿನ ದೇಶ ವಿರೋಧಿ ಸಂಸ್ಕೃತಿಗೆ ಜ್ವಲಂತ ಉದಾಹರಣೆಯಾಗಿದೆ.
70 ವರ್ಷಗಳ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಜನ ವಿರೋಧಿ ನೀತಿಯಿಂದಾಗಿ ಪ್ರಸಕ್ತ ದೇಶದಾದ್ಯಂತ ಜನತೆಯ ವಿಶ್ವಾಸ ಕಳೆದುಕೊಂಡು ಕೇವಲ 3 ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತಗೊಂಡಿರುವುದು ಕಾಂಗ್ರೆಸ್ ಅವನತಿಯತ್ತ ಸಾಗುತ್ತಿರುವ ಸ್ಪಷ್ಟ ಚಿತ್ರಣಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದರು.
ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ಹಾಗೂ ಅಲ್ಪಸಂಖ್ಯಾತರ ಓಲೈಕೆಗೆ ಮುಡಿಪಾಗಿರುವ ಕಾಂಗ್ರೆಸ್ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ದೇಶ ವಿರೋಧಿ ಕೃತ್ಯಗಳಿಂದಾಗಿ ಜನತೆಯಿಂದ ತಿರಸ್ಕೃತಗೊಂಡಿರುವುದು ಇಂದಿನ ವಾಸ್ತವಿಕತೆಯಾಗಿದೆ ಎಂದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಮಾರಣ ಹೋಮ, ಒಂದೇ ವರ್ಗದ ಅತಿಯಾದ ಓಲೈಕೆ ಹಾಗೂ ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದ ಸನ್ನಿವೇಶದಲ್ಲಿ ‘ಸಬ್ ಕೇ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ತತ್ವದಡಿ ಪಾರದರ್ಶಕ, ಜನಪರ, ಅಭಿವೃದ್ಧಿಪರ ಆಡಳಿತ ನೀಡುವ ಮೂಲಕ ‘ಬಿಜೆಪಿಯೊಂದೇ ಭರವಸೆ’ ಎಂಬಂತೆ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಜನತೆಯ ವಿಶ್ವಾಸ ಗಳಿಸುವಲ್ಲಿ ಸಫಲವಾಗಿದೆ. ಜನತೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳು, ಜನಪರ ಯೋಜನೆಗಳು ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಈ ಎಲ್ಲಾ ಪ್ರಮುಖ ವಿಚಾರಗಳ ಸಹಿತ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷದ ಅಭ್ಯರ್ಥಿಯ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಯಾವುದೇ ಅಭಿವೃದ್ಧಿ ಕಾರ್ಯಗಳ ಅಜೆಂಡಾವಿಲ್ಲದೆ, ಕೇವಲ ಅಪಪ್ರಚಾರದಲ್ಲಿ ತೊಡಗಿಸಿಕೊಂಡು, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ಸಿಗೆ ಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿಯಾದ ದೆಹಲಿ ಬಿಜೆಪಿ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ, ಕಾಪು ವಿಸ್ತಾರಕ ದಿನಕರ ಪೂಜಾರಿ, ಪ್ರಮುಖರಾದ ಜಿಯಾನಂದ ಹೆಗ್ಡೆ, ಗಂಗಾಧರ ಸುವರ್ಣ ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.