
News By: ಜನತಾಲೋಕವಾಣಿನ್ಯೂಸ್
ಬೆಂಗಳೂರು: ರಾಜ್ಯದ 10 ಜಿಲ್ಲೆಗಳ ನೂತನ ಕಾರ್ಯಾಲಯ ಭವನಗಳ ಉದ್ಘಾಟನೆ ಮತ್ತು 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯು ಡಿಸೆಂಬರ್ 15ರಂದು ನಡೆಯಲಿದೆ ಎಂದು ಕಟ್ಟಡ ಸಮಿತಿ ರಾಜ್ಯ ಅಧ್ಯಕ್ಷ ಮತ್ತು ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷ ಮಾ. ನಾಗರಾಜ್ ಅವರು ತಿಳಿಸಿದ್ದಾರೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್, ವಿಜಯಪುರ, ಬಾಗಲಕೋಟೆ, ಕೋಲಾರ, ಚಾಮರಾಜನಗರ, ಹಾವೇರಿ ಮತ್ತು ಗದಗದಲ್ಲಿ ನಿರ್ಮಿಸಿದ ನೂತನ ಕಾರ್ಯಾಲಯಗಳನ್ನು ಕೊಪ್ಪಳದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉದ್ಘಾಟಿಸುವರು. ಅಲ್ಲದೆ ವಿಜಯನಗರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲಾ ಕಟ್ಟಡಗಳಿಗೆ ಅವರು ಶಿಲಾನ್ಯಾಸ ನೆರವೇರಿಸುವರು ಮತ್ತು ಅಂದು ಬೆಳಿಗ್ಗೆ ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಕಾರ್ಯಾಲಯದ ಶಿಲಾಫಲಕ ಅನಾವರಣ ಮಾಡುವ ಮೂಲಕ ಜಿಲ್ಲಾ ಕಾರ್ಯಾಲಯ ಭವನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಜ್ಯದ ಇತರೆ ಒಂಭತ್ತು ಜಿಲ್ಲೆಗಳ ಜಿಲ್ಲಾ ಕಾರ್ಯಾಲಯ ಭವನದ ಉದ್ಘಾಟನೆಯನ್ನು ವಚ್ರ್ಯುವಲ್ ಮಾಧ್ಯಮದ ಮೂಲಕ ಜೆ.ಪಿ.ನಡ್ಡಾ ಅವರು ನೆರವೇರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ನೂತನ ಕಟ್ಟಡದಲ್ಲಿ ಜಿಲ್ಲಾ ಅಧ್ಯಕ್ಷರ ಕೊಠಡಿ, ಗ್ರಂಥಾಲಯ, ಮಾಹಿತಿ ಕೇಂದ್ರ, ಮಾಧ್ಯಮ ಕೊಠಡಿ, ಸಂಸದರು, ಶಾಸಕರು, ಜನಪ್ರತಿನಿಧಿಗಳಿಗೆ ವಿ.ಐ.ಪಿ ಕೊಠಡಿ, ಉಗ್ರಾಣ, ಅಡುಗೆ ಮನೆ, ಊಟದ ಮನೆ, ಪ್ರಶಿಕ್ಷಣ ಮತ್ತು ಸಭೆಗಳಿಗಾಗಿ ಸಭಾಂಗಣ, ಬೋರ್ಡ್ ರೂಮ್/ಕೋರ್ ಕಮಿಟಿ ಸಭಾಂಗಣ, ವಸತಿ ಕೊಠಡಿಗಳು, ಸಾಮೂಹಿಕ ವಸತಿ, ಪಾರ್ಕಿಂಗ್, ಇತ್ಯಾದಿ ವ್ಯವಸ್ಥೆಗಳಿವೆ. ಹೈಸ್ಪೀಡ್ ಇಂಟರ್‍ನೆಟ್ ವ್ಯವಸ್ಥೆ, ವೈ-ಫೈ, ಲಿಫ್ಟ್, ಪವರ್ ಬ್ಯಾಕ್‍ಅಪ್, ಡಿಜಿಟಲ್ ಲೈಬ್ರರಿಗಾಗಿ ವ್ಯವಸ್ಥೆ, ಮಳೆ ನೀರು ಕೊಯ್ಲಿನ ವ್ಯವಸ್ಥೆ, ನೀರಿನ ವ್ಯವಸ್ಥೆಗಾಗಿ ಬೋರ್‍ವೆಲ್, ಪ್ರಾಕೃತಿಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗನುಗುಣವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.