ಎಸ್ಡಿಪಿಐ ಗೆಲುವಿನಿಂದ ಕಂಗೆಟ್ಟಿರುವ ಸೊರಕೆಗೆ ಸುಳ್ಳು ಆರೋಪ ಮಾಡುವುದೇ ನಿತ್ಯ ಕಾಯಕ: ಕುಯಿಲಾಡಿ ಲೇವಡಿ*
ಬಿಜೆಪಿ ಪಕ್ಷದ ನಾಯಕರು ಅಥವಾ ಶಾಸಕರು ದನಗಳ್ಳರನ್ನು ರಕ್ಷಿಸಿಲ್ಲ; ರಕ್ಷಿಸುವುದೂ ಇಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರೇ ಬಜರಂಗದಳ ಕಾರ್ಯಕರ್ತರ ಹೆಸರಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಮಾಜಿ ಸಚಿವ ಸೊರಕೆ ತನ್ನ ಜೀವಮಾನದಲ್ಲಿ ಯಾವತ್ತೂ ದನಗಳ್ಳರನ್ನು ಶಿಕ್ಷಿಸಿ ಎಂದು ಹೇಳಿದವರಲ್ಲ; ದನ ಕೊಂದವರನ್ನು ಬಂಧಿಸಿ ಎಂದೂ ಹೇಳಿದವರಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ದನಗಳ್ಳರನ್ನು ಬಿಜೆಪಿ ಶಾಸಕ ಲಾಲಾಜಿ ಮೆಂಡನ್ ರಕ್ಷಿಸಿದ್ದಾರೆ; ಶಾಸಕರೇ ಪೊಲೀಸ್ ಠಾಣೆಗೆ ಕರೆ ಮಾಡಿ ದನಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂಬ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಆರೋಪಕ್ಕೆ ಕುಯಿಲಾಡಿ ತಿರುಗೇಟು ನೀಡಿದರು.
ಚುನಾವಣೆ ಸನಿಹವಾಗುತ್ತಿರುವುದರಿಂದ ಯಾವುದೇ ವಿಷಯಗಳಿಲ್ಲದೆ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡುವುದೇ ಸೊರಕೆಯವರ ನಿತ್ಯ ಕಾಯಕವಾಗಿದೆ. ಗಲ್ಲಿ ಗಲ್ಲಿಯಲ್ಲಿ ನಿಂತು ಆರೋಪ ಮಾಡುತ್ತಾರೆ. ಕಾಪು ಪುರಸಭೆಯಲ್ಲಿ ಎಸ್ಡಿಪಿಐ ಮೂರು ಸ್ಥಾನ ಗೆದ್ದಿರುವುದು ಸೊರಕೆ ನಿದ್ದೆಗೆಡಿಸಿದೆ. ಬಿಜೆಪಿ ಎಸ್ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದಿರುವ ಸೊರಕೆ ಹೇಳಿಕೆ ಹಾಸ್ಯಾಸ್ಪದ. ವಾಸ್ತವದಲ್ಲಿ ಎಸ್ಡಿಪಿಐ ಸಿಎಎ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸೊರಕೆ ಹಾಗೂ ಎಸ್ಡಿಪಿಐ ನಡುವಿನ ಗಾಢ ಸಂಬಂಧವೇನು ಎಂಬುದನ್ನು ಉಡುಪಿ ಜಿಲ್ಲೆಯ ಜನತೆ ಚೆನ್ನಾಗಿಯೇ ಅರಿತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಕೇವಲ ರಾಜಕೀಯಕ್ಕೋಸ್ಕರವೇ ರಾಜಕೀಯ ಮಾಡಬೇಡಿ. ತಾನು ಕಾಪು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂದು ಸೊರಕೆಗೆ ಖಾತರಿಯಾಗಿದೆ. ಲಾಲಾಜಿ ಮೆಂಡನ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ ಅನ್ನುವುದಕ್ಕೆ ಸೊರಕೆ ಬಳಿ ದಾಖಲೆ ಇದೆಯೆ? ಪೊಲೀಸರ ಹೆಸರಲ್ಲಿ ಬೇಕಾದರೂ ಸೊರಕೆಯವರು ಫೋನ್ ಮಾಡಿಸುತ್ತಾರೆ. ಬಜರಂಗದಳ ಕಾರ್ಯಕರ್ತ ಅಂತ ಕಾಂಗ್ರೆಸ್ ನವರಿಂದಲೂ ಫೋನ್ ಮಾಡಿಸುತ್ತಾರೆ. ಅದಕ್ಕೆ ನಮ್ಮ ಬಳಿ ದಾಖಲೆಯೂ ಇದೆ. ಸೊರಕೆ ಸತ್ಯವಂತರಾಗಿದ್ದರೆ ಪುತ್ತೂರಿನಿಂದ ಕಾಪುವಿಗೆ ಬರಬೇಕಾಗಿರಲಿಲ್ಲ. ಹಿಂದುಗಳ ಓಟಿನ ಆಸೆಗೆ ನಾಟಕೀಯವಾಗಿ ಎಸ್ಡಿಪಿಐಯನ್ನು ದೂರುತ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ನೀವು ಯಾವ ನಿಲುವು ತೆಗೆದುಕೊಂಡಿದ್ದೀರಿ? ಹಿಜಾಬ್ ಬಗ್ಗೆ ಉಡುಪಿ ಕಾಂಗ್ರೆಸ್ಸಿಗೆ ಕನಿಷ್ಠ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕುಯಿಲಾಡಿ ತಿಳಿಸಿದರು.